samachara
www.samachara.com
31,000 ಕೋಟಿ ರೂ. DHFL ಹಗರಣ; ಲೂಟಿ ಹಣದಲ್ಲಿ ಬಿಜೆಪಿಗೆ ದೇಣಿಗೆ: ಕೋಬ್ರಾಪೋಸ್ಟ್‌ ತನಿಖೆ 
COVER STORY

31,000 ಕೋಟಿ ರೂ. DHFL ಹಗರಣ; ಲೂಟಿ ಹಣದಲ್ಲಿ ಬಿಜೆಪಿಗೆ ದೇಣಿಗೆ: ಕೋಬ್ರಾಪೋಸ್ಟ್‌ ತನಿಖೆ 

2015ರಿಂದ 2018ರ ನಡುವೆ ಈ ಹಗರಣ ನಡೆದಿದ್ದು ಕಂಪನಿಯ ಪ್ರವರ್ತಕರು ಮೂರು ಕಂಪನಿಗಳ ಮೂಲಕ ಬಿಜೆಪಿ ಪಕ್ಷಕ್ಕೆ 19.5 ಕೋಟಿ ರೂಪಾಯಿ ರಾಜಕೀಯ ದೇಣಿಗೆ ನೀಡಿದ್ದಾರೆ.

Team Samachara

ದೇಶದ ಬ್ಯಾಂಕಿಂಗ್‌ ಕ್ಷೇತ್ರದ ಅತೀ ದೊಡ್ಡ ಹಗರಣವನ್ನು ದಾಖಲೆ ಸಮೇತ ಬಯಲಿಗೆಳೆದಿರುವುದಾಗಿ ತನಿಖಾ ವೆಬ್‌ಸೈಟ್‌ ‘ಕೋಬ್ರಾಪೋಸ್ಟ್‌’ ಹೇಳಿಕೊಂಡಿದೆ. ಮತ್ತು ಈ ಕುರಿತು ಸುದೀರ್ಘ ವರದಿ ಪ್ರಕಟಿಸಿದೆ.

2015 ರಿಂದ 2018ರ ನಡುವೆ ದಿವಾನ್‌ ಹೌಸಿಂಗ್‌ ಫೈನಾನ್ಸ್‌ ಕಾರ್ಪೊರೇಷನ್ (ಡಿಎಚ್ಎಫ್‌ಎಲ್‌) ಬರೋಬ್ಬರಿ 31,000 ಕೋಟಿ ರೂಪಾಯಿ ಸಾರ್ವಜನಿಕರ ಹಣವನ್ನು ಲೂಟಿ ಮಾಡಿದೆ ಎಂದು ಕೋಬ್ರಾಪೋಸ್ಟ್‌ ಹೇಳಿದೆ.

ಭದ್ರತೆ ಇರುವ ಮತ್ತು ಭದ್ರತೆ ಇಲ್ಲದ ಸಾಲಗಳನ್ನು ಪಡೆದುಕೊಂಡು, ಅವುಗಳನ್ನು ಶೆಲ್‌ ಕಂಪನಿಗಳಿಗೆ ವರ್ಗಾಯಿಸುವುದು, ಅಕ್ರಮ ಹಣ ವರ್ಗಾವಣೆ, ತೆರಿಗೆ ತಪ್ಪಿಸುವಿಕೆ, ಆಂತರಿಕ ವ್ಯಾಪಾರ ಮೊದಲಾದ ರೀತಿಯಲ್ಲಿ ಈ ಕಳ್ಳ ವ್ಯವಹಾರಗಳು ನಡೆದಿವೆ ಎಂದು ಕೋಬ್ರಾಪೋಸ್ಟ್‌ ಪ್ರತಿಪಾದಿಸಿದೆ. ಕಂಪನಿಯ ಪ್ರವರ್ತಕರು 21,477 ಕೋಟಿ ರೂಪಾಯಿಗಳನ್ನು ಹಲವು ಶೆಲ್ ಕಂಪನಿಗಳಿಗೆ ಸಾಲ ಮತ್ತು ಹೂಡಿಕೆ ರೂಪದಲ್ಲಿ ನೀಡಿದ್ದಾರೆ. ಆದರೆ ಈ ಬಗ್ಗೆ ವಾಣಿಜ್ಯ ವ್ಯವಹಾರ ಇಲಾಖೆಗೆ ಯಾವುದೇ ಮಾಹಿತಿ ನೀಡಿಲ್ಲ.

ವಿಚಿತ್ರವೆಂದರೆ ಈ ಶೆಲ್‌ ಕಂಪನಿಗಳೆಲ್ಲವೂ ಡಿಎಚ್‌ಎಫ್‌ಎಲ್‌ ಪ್ರವರ್ತಕರಾದ ವಾಧವನ್ಸ್‌ ಕುಟುಂಬಸ್ಥರಿಗೆ ಸೇರಿದೆ ಅಥವಾ ಅವರ ಜತೆ ಸಂಪರ್ಕ ಹೊಂದಿವೆ ಎಂದು ಕೋಬ್ರಾಪೋಸ್ಟ್‌ ತಿಳಿಸಿದೆ. ಅಂದರೆ ಡಿಎಚ್‌ಎಫ್‌ಎಲ್‌ ಹೆಸರಿನಲ್ಲಿ ಬ್ಯಾಂಕ್‌ಗಳಿಂದ ಸಾಲ ಪಡೆದು ಅದನ್ನು ತಮ್ಮ ಸ್ವಂತ ಸಂಸ್ಥೆಗಳಿಗೆ ಅಥವಾ ತಮಗೆ ಬೇಕಾದ ಇತರ ಕಂಪನಿಗಳಿಗೆ ವಾಧವನ್ಸ್‌ ವರ್ಗಾವಣೆ ಮಾಡಿದ್ದಾರೆ.

ಡಿಎಚ್‌ಎಫ್‌ಎಲ್‌ನ ಪ್ರಾಥಮಿಕ ಶೇರುದಾರರಾದ ಕಪಿಲ್‌ ವಾಧವನ್‌, ಅರುಣಾ ವಾಧವನ್‌ ಮತ್ತು ಧೀರಜ್‌ ವಾಧವನ್‌ ತಮ್ಮ ಸಹವರ್ತಿಗಳ ಮೂಲಕ ತಮ್ಮ ನಿಯಂತ್ರಣದಲ್ಲಿರುವ ಕಂಪನಿಗಳಿಗೆ ಹಣವನ್ನು ವರ್ಗಾವಣೆ ಮಾಡಿದ್ದಾರೆ. ಭದ್ರತೆ ಪಡೆದು ಅಥವಾ ಪಡೆಯದೇ ಸಾಲದ ರೂಪದಲ್ಲಿ ದೊಡ್ಡ ಮೊತ್ತದ ಹಣವನ್ನು ಶೆಲ್‌ ಕಂಪನಿಗಳಿಗೆ ವರ್ಗಾವಣೆ ಮಾಡಿರುವುದರಿಂದ ಈ ಹಗರಣ ಬೆಳಕಿಗೆ ಬಂದಿರಲಿಲ್ಲ ಎಂದು ತನಿಖಾ ವರದಿ ಅಭಿಪ್ರಾಯಪಟ್ಟಿದೆ.

ಶೆಲ್‌ ಕಂಪನಿಗಳಿಗೆ ವರ್ಗಾವಣೆ ಮಾಡಿದ ಹಣವನ್ನು ಶೇರುಗಳಲ್ಲಿ, ಖಾಸಗಿ ಆಸ್ತಿಗಳಲ್ಲಿ ಹೂಡಿಕೆ ಮಾಡಲು ಬಳಸಲಾಗಿದೆ. ಭಾರತ ಮಾತ್ರವಲ್ಲದೆ, ಬ್ರಿಟನ್‌, ಯುಎಇ, ಶ್ರೀಲಂಕಾ ಮತ್ತು ಮಾರಿಷಸ್‌ಗಳಲ್ಲಿ ಈ ರೀತಿ ಹೂಡಿಕೆಗಳನ್ನು ಮಾಡಲಾಗಿದೆ.

ಶೆಲ್‌ ಕಂಪನಿಗಳಲ್ಲಿ ಉದಾಹರಣೆಗೆ, ಆರ್‌ಕೆಡಬ್ಲ್ಯೂ ಡೆವಲಪರ್ಸ್‌ ಪ್ರೈವೇಟ್‌ ಲಿ, ಸ್ಕಿಲ್‌ ರಿಯಾಲ್ಟರ್ಸ್‌ ಪ್ರೈವೇಟ್‌ ಲಿ. ಮತ್ತು ದರ್ಶನ್‌ ಡೆವಲಪರ್ಸ್‌ ಪ್ರೈವೇಟ್‌ ಲಿ. ಕಂಪನಿಗಳು ಕಪಿಲ್‌ ವಾಧವನ್‌ ಮತ್ತು ಧೀರಜ್‌ ವಾಧವನ್‌ ಗೆ ಸೇರಿದ್ದಾಗಿದೆ.

ಈ ಶೆಲ್‌ ಕಂಪನಿಗಳಿಗೆ ಸಾಲ ನೀಡಲಾಗಿದ್ದು, ಇವುಗಳಿಗೆ ಸಾಲ ನೀಡಲು ಡಿಎಚ್‌ಎಫ್‌ಎಲ್‌ ಭಾರತದ ಕನಿಷ್ಠ 32 ಬ್ಯಾಂಕ್‌ಗಳಿಂದ ಬರೋಬ್ಬರಿ 50,000 ಸಾವಿರ ಕೋಟಿ ರೂಪಾಯಿ ಸಾಲ ಪಡೆದಿದೆ. ಇದರಲ್ಲಿ ಸರಕಾರಿ ಸ್ವಾಮ್ಯದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಒಂದೇ 11,500 ಕೋಟಿ ರೂಪಾಯಿಗಳ ಸಾಲ ನೀಡಿದೆ. ಕಂಪನಿ ಭಾರತದ ಬ್ಯಾಂಕ್‌ಗಳು ಮಾತ್ರವಲ್ಲದೆ ವಿದೇಶಿ ಬ್ಯಾಂಕ್‌ಗಳನ್ನೂ ಬಿಟ್ಟಿಲ್ಲ. ಬರ್ಕ್ಲೇಸ್‌ ಬ್ಯಾಂಕ್ ಮತ್ತು ಅಬುಧಾಬಿ ಕಮರ್ಷಿಯಲ್‌ ಬ್ಯಾಂಕ್‌ಗಳಿಂದಲೂ ಸಾಲ ಪಡೆದಿದ್ದು, ಸುಮಾರು 105 ಮಿಲಿಯನ್‌ ಡಾಲರ್‌ ಅಂದರೆ 747 ಕೋಟಿ ರೂಪಾಯಿಗಳ ಸಾಲ ಮೊತ್ತವನ್ನು ಪಾವತಿಸಿದೆ.

ಸಾರ್ವಜನಿಕವಾಗಿ ಲಭ್ಯವಿರುವ ಬ್ಯಾಂಕ್‌ನ ದಾಖಲೆಗಳನ್ನು ಪರಿಶೀಲನೆ ನಡೆಸಿದಾಗ ಈ ಹಗರಣ ಹೊರ ಬಂದಿದೆ ಎಂದು ಕೋಬ್ರಾಪೋಸ್ಟ್‌ ಹೇಳಿಕೊಂಡಿದೆ. ಈ ದಾಖಲೆಗಳ ಪ್ರಕಾರ ಡಿಎಚ್‌ಎಫ್‌ಎಲ್‌, ಕಂಪನಿ ಕಾಯ್ದೆ, ಆದಾಯ ತೆರಿಗೆ ಕಾಯ್ದೆ ಮತ್ತು ವಿದೇಶಿ ವಿನಿಮಯ ಕಾಯ್ದೆಯನ್ನು ಉಲ್ಲಂಘಿಸಿದೆ. ಇಷ್ಟಲ್ಲದೆ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ, ಭಾರತೀಯ ಭದ್ರತೆ ಮತ್ತು ವಿನಿಮಯ ಮಂಡಳಿ, ಹಣಕಾಸು ಇಲಾಖೆ, ಆದಾಯ ತೆರಿಗೆ ಇಲಾಖೆ ನಿಯಮಾವಳಿಗಳನ್ನೂ ಸಂಸ್ಥೆ ಗಾಳಿಗೆ ತೂರಿದೆ ಎಂದು ವರದಿ ಆರೋಪಿಸಿದೆ.

2015ರಿಂದ 2018ರ ನಡುವೆ ಈ ಹಗರಣ ನಡೆದಿದ್ದು ಕಂಪನಿಯ ಪ್ರವರ್ತಕರು ಮೇಲೆ ಉದಾಹರಣೆ ರೂಪದಲ್ಲಿ ಉಲ್ಲೇಖಿಸಿದ ಮೂರು ಕಂಪನಿಗಳ ಮೂಲಕ ಬಿಜೆಪಿ ಪಕ್ಷಕ್ಕೆ 19.5 ಕೋಟಿ ರೂಪಾಯಿ ರಾಜಕೀಯ ದೇಣಿಗೆಯನ್ನೂ ನೀಡಿದ್ದಾರೆ ಎಂದು ಕೋಬ್ರಾ ಪೋಸ್ಟ್‌ ಗಂಭೀರ ಆರೋಪ ಮಾಡಿದೆ.

ಒಟ್ಟಾರೆ ಡಿಎಚ್‌ಎಫ್‌ಎಲ್‌ ಚಟುವಟಿಕೆಯಲ್ಲೇ ಗಂಭೀರ ಪ್ರಶ್ನೆಗಳು ಎದ್ದಿದೆ. ವಿವರವಾಗಿ ಹೇಳುವುದಾದರೆ ಕಂಪನಿಯ ಮೌಲ್ಯ ಕೇವಲ 8,795 ಕೋಟಿ ರೂಪಾಯಿ ಇದ್ದರೆ, ಅದೇ ಕಂಪನಿ ಬರೋಬ್ಬರಿ 96,880 ಕೋಟಿ ರೂಪಾಯಿಗಳನ್ನು ಸಾಲವಾಗಿ ಪಡೆದುಕೊಂಡಿದೆ. ಇದರಲ್ಲಿ 84,982 ಕೋಟಿ ರೂಪಾಯಿಗಳನ್ನು ಕಂಪನಿ ಇತರ ಕಂಪನಿಗಳಿಗೆ ಮರು ಸಾಲವಾಗಿ ನೀಡಿದೆ.

ಗುಜರಾತ್‌ ವಿಧಾನಸಭೆ ಚುನಾವಣೆಗೂ ಮುನ್ನ 1,160 ಕೋಟಿ ರೂಪಾಯಿಗಳ ಸಾಲವನ್ನು ಅಲ್ಲಿನ ಐದು ಕಂಪನಿಗಳಿಗೆ ಕೆಲವು ಯೋಜನೆಗಳಿಗಾಗಿ ನೀಡಲಾಗಿತ್ತು. ಈ ಎಲ್ಲಾ ಯೋಜನೆಗಳು ಒಂದೋ ರದ್ದುಗೊಂಡಿವೆ ಅಥವಾ ಅನಾದಿ ಕಾಲದಿಂದ ಅರ್ಧದಲ್ಲೇ ನಿಂತಿವೆ. ಹೀಗಾಗಿ ಈ ಸಾಲದ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿವೆ.

ಕೋಬ್ರಾಪೋಸ್ಟ್‌ ವರದಿಯಿಂದ ಬೆಚ್ಚಿ ಬಿದ್ದಿರುವ ಡಿಎಚ್‌ಎಫ್‌ಎಲ್‌, ಇದು ಕಂಪನಿಯ ಬಗೆಗಿನ ಸದಾಭಿಪ್ರಾಯಕ್ಕೆ ಹಾನಿಗೊಳಿಸುವ ಯತ್ನ ಎಂದು ಕರೆದಿದೆ. ಆದರೆ ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಮಾಜಿ ಹಣಕಾಸು ಸಚಿವ ಯಶವಂತ್‌ ಸಿನ್ಹಾ ಆಗ್ರಹಿಸಿದ್ದಾರೆ.

ಒಂದೊಮ್ಮೆ ಸರಕಾರ ರಾಜಕೀಯ ದೇಣಿಗೆಯೂ ಸೇರಿದಂತೆ ಎಲ್ಲದರ ಕುರಿತು ತುರ್ತು ತನಿಖೆಗೆ ಆದೇಶ ನೀಡದಿದ್ದಲ್ಲಿ, ಅದರ ನಡೆ ಅನುಮಾನ ಹುಟ್ಟಿಸುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಹೀಗಾಗಿ ನ್ಯಾಯಾಲಯದ ನಿರ್ದೇಶನದಲ್ಲಿ ವಿಶೇಷ ತನಿಖಾ ತಂಡದಿಂದ ಈ ಹಗರಣದ ತನಿಖೆಯಾಗಬೇಕು ಎಂದು ಅವರು ಬೇಡಿಕೆ ಇಟ್ಟಿದ್ದಾರೆ.

ಇಷ್ಟಲ್ಲದೆ ಶೆಲ್‌ ಕಂಪನಿಗಳನ್ನು ನಿರ್ನಾಮ ಮಾಡುವುದಾಗಿ ಹೇಳಿದ್ದ ಸರಕಾರದ ವಾದದ ಬಗ್ಗೆಯೂ ಅನುಮಾನಗಳು ಎದ್ದಿವೆ ಎಂದು ಅವರು ಹೇಳಿದ್ದಾರೆ. ಸರಕಾರಿ ಸಂಸ್ಥಗಳು ಈ ಡೀಲ್‌ ಬೆನ್ನತ್ತುವಲ್ಲಿ ವಿಫಲವಾಗಿವೆ ಎಂದೂ ಅವರು ವಾಗ್ದಾಳಿ ನಡೆಸಿದ್ದಾರೆ. ಇದು ವಿಫಲತೆಯೋ ಅಥವಾ ದೇಣಿಗೆ ಸ್ವೀಕರಿಸಿ ಕಣ್ಣು ಮುಚ್ಚಿ ಕುಳಿತುಕೊಂಡ ಬಿಜೆಪಿ ಸರಕಾರದ ತಂತ್ರವೋ ಎಂಬುದನ್ನು ಮುಂದಿನ ದಿನಗಳ ತನಿಖೆಗಳು ಹೇಳಬೇಕಾಗಿವೆ.

ಚಿತ್ರಕೃಪೆ: ನ್ಯೂಸ್‌ ಲಾಂಡ್ರಿ