samachara
www.samachara.com
‘ಕಾಂಗ್ರೆಸ್ ಜುಮ್ಲಾ’: ನಿರುದ್ಯೋಗ ಭತ್ಯೆ ಎಂಬ ಹಳೇ ಬಾಟಲಿಯಲ್ಲಿ ‘ಕನಿಷ್ಠ ಆದಾಯ’ ಎಂಬ ಹೊಸ ಮದ್ಯ
COVER STORY

‘ಕಾಂಗ್ರೆಸ್ ಜುಮ್ಲಾ’: ನಿರುದ್ಯೋಗ ಭತ್ಯೆ ಎಂಬ ಹಳೇ ಬಾಟಲಿಯಲ್ಲಿ ‘ಕನಿಷ್ಠ ಆದಾಯ’ ಎಂಬ ಹೊಸ ಮದ್ಯ

ನಿರುದ್ಯೋಗ ಭತ್ಯೆಯ ಭರವಸೆಯನ್ನೇ ಪಕ್ಷಗಳು ಈಗ ಹೊಸ ಹೆಸರಿನೊಂದಿಗೆ ಹಬ್ಬಲು ಮುಂದಾಗಿವೆ. ಕಾಂಗ್ರೆಸ್‌ ಇಂತಹದೊಂದು ಪ್ರಯತ್ನದಲ್ಲಿ ಒಂದು ಹೆಜ್ಜೆ ಮುಂದಿಟ್ಟಿದೆ. 

ದಯಾನಂದ

ದಯಾನಂದ

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಮುಖ ರಾಜಕೀಯ ಪಕ್ಷಗಳ ಬಣ್ಣಬಣ್ಣದ ಭರವಸೆಗಳು ಹೊರಬರುತ್ತಿವೆ. ಬಡತನ ಹೋಗಲಾಡಿಸುವ ಕಾರ್ಯಕ್ರಮವನ್ನು ಚುನಾವಣಾ ವಿಷಯವಾಗಿಸಿಕೊಂಡಿರುವ ಕಾಂಗ್ರೆಸ್‌ ತಾನು ಅಧಿಕಾರಕ್ಕೆ ಬಂದರೆ 'ಕನಿಷ್ಠ ಆದಾಯ' ಕಾರ್ಯಕ್ರಮ ಜಾರಿಗೆ ತರುವುದಾಗಿ ಘೋಷಿಸಿದೆ.

ಚುನಾವಣಾ ಪೂರ್ವದಲ್ಲಿ ಬಿಜೆಪಿ ಘೋಷಿಸಬೇಕೆಂದು ಲೆಕ್ಕಾಚಾರ ಹಾಕಿದ್ದ 'ಎಲ್ಲರಿಗೂ ಕನಿಷ್ಠ ಆದಾಯ' (Univerasal Basic Income /UBI) ಕಾರ್ಯಕ್ರಮವನ್ನು ಮತ್ತೊಂದು ಪರಿಭಾಷೆಯಲ್ಲಿ ಕಾಂಗ್ರೆಸ್‌ ಚುನಾವಣೆ ದಿನಾಂಕ ನಿಗದಿಯಾಗುವ ಮೊದಲೇ ಘೋಷಿಸಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಕನಿಷ್ಠ ಆದಾಯ ಕಾರ್ಯಕ್ರಮ ಜಾರಿಗೆ ತರುವುದಾಗಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ.

ಅಧಿಕಾರಕ್ಕೆ ಬಂದರೆ ಕೆಲವು ಬದಲಾವಣೆಗಳೊಂದಿಗೆ ಈ ಕಾರ್ಯಕ್ರಮವನ್ನು ಭಾರತದಲ್ಲಿ ಅಳವಡಿಸಿಕೊಳ್ಳಲು ಕಾಂಗ್ರೆಸ್‌ ಮುಂದಾಗಿದೆ. “ಕಳೆದ ಎರಡು ವರ್ಷಗಳಿಂದ ಯುಬಿಐ ಕಾರ್ಯಕ್ರಮದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಕಾರ್ಯಕ್ರಮದ ಮೂಲತತ್ವಗಳನ್ನು ಬಡತನ ನಿರ್ಮೂಲನೆಗಾಗಿ ಭಾರತದಲ್ಲಿ ಅಳವಡಿಸಿಕೊಳ್ಳುವ ಸಮಯ ಈಗ ಬಂದಿದೆ. ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಈ ಬಗ್ಗೆ ವಿವರಗಳನ್ನು ನೀಡಲಿದ್ದೇವೆ” ಎಂದು ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಹೇಳಿದ್ದಾರೆ.

ಛತ್ತೀಸ್‌ಗಢದಲ್ಲಿ ಸೋಮವಾರ ನಡೆದ ರೈತರ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್‌ ಗಾಂಧಿ, “ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ದೇಶದಲ್ಲಿರುವ ಪ್ರತಿಯೊಬ್ಬ ಬಡವನಿಗೂ ಕನಿಷ್ಠ ಆದಾಯ ಸಿಗಬೇಕೆಂದು ನಾವು ನಿರ್ಧರಿಸಿದ್ದೇವೆ. ದೇಶದಲ್ಲಿ ಯಾರೂ ಹಸಿದುಕೊಂಡಿರಬಾರದು, ಯಾರೂ ಬಡವರಾಗಿರಬಾರದು” ಎಂದಿದ್ದಾರೆ.

ಇದೊಂದು ಪ್ರಗತಿಪರ ಕಾರ್ಯಕ್ರಮ ಎಂದಿರುವ ಕಾಂಗ್ರೆಸ್‌ ಮುಖಂಡ ಪ್ರವೀಣ್‌ ಚಕ್ರವರ್ತಿ, "ಎಲ್ಲಾ ಬಡವರಿಗೂ ಒಂದೇ ರೀತಿಯ ಮೊತ್ತ ನೀಡುವುದಿಲ್ಲ. ಬಡತನದ ಪ್ರಮಾಣಕ್ಕೆ ಅನುಗುಣವಾಗಿ ಕನಿಷ್ಠ ಆದಾಯ ವಿತರಣೆ ಮಾಡುವ ಉದ್ದೇಶವಿದೆ" ಎಂದಿದ್ದಾರೆ.

ದೇಶದ ಕೃಷಿ ಬಿಕ್ಕಟ್ಟು ಹಾಗೂ ಬಡತನ ಈ ಬಾರಿಯ ಲೋಕಸಭೆಯ ಚುನಾವಣಾ ವಿಷಯಗಳಾಗಲಿವೆ ಎಂಬುದು ಈಗಾಗಲೇ ನಿಚ್ಚಳವಾಗಿದೆ. ಭಾರತದ ಜನಸಂಖ್ಯೆಯ ಸುಮಾರು ಅರ್ಧದಷ್ಟು ಜನ ಕೃಷಿಕರು ಹಾಗೂ ಕೃಷಿ ಕೂಲಿಕಾರ್ಮಿಕರಾಗಿದ್ದಾರೆ. ಕೃಷಿ ಬಿಕ್ಕಟ್ಟುಗಳು ಈ ವರ್ಗದ ಮೇಲೆ ನೇರ ಪರಿಣಾಮ ಬೀರುತ್ತಿವೆ. ಕೃಷಿ ಬಿಕ್ಕಟ್ಟಿನ ವಿಷಯ ಬಿಟ್ಟು ಮತಬ್ಯಾಂಕ್‌ ಭದ್ರ ಪಡಿಸಿಕೊಳ್ಳುವುದು ಸದ್ಯಕ್ಕೆ ಸಾಧ್ಯವಿಲ್ಲ ಎಂಬುದು ಈಗ ಎಲ್ಲಾ ಪಕ್ಷಗಳಿಗೂ ಗೊತ್ತಾಗಿದೆ.

ಇಷ್ಟು ದಿನ ಬಡತನ ನಿರ್ಮೂಲನೆ ಮಾಡುತ್ತೇವೆ ಎಂದೇ ಹೇಳಿಕೊಂಡು ಬಂದ ಪಕ್ಷಗಳು ಹೇಗೆ ಹಾಗೂ ಯಾವ ಮಾದರಿಯಲ್ಲಿ ಬಡತನ ನಿರ್ಮೂಲನೆ ಮಾಡಲು ಸಾಧ್ಯ ಎಂಬ ಬಗ್ಗೆ ಸೊಲ್ಲೆತ್ತುತ್ತಿರಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಬಡತನ ಹೋಗಲಾಡಿಸಲು ಜಾಗತಿಕ ಮಟ್ಟದಲ್ಲಿ ಬೇರೆಬೇರೆ ದೇಶಗಳು ಅನುಸರಿಸುತ್ತಿರುವ ಮಾದರಿಗಳನ್ನು ಭಾರತದಲ್ಲಿ ಪ್ರಯೋಗಿಸಲು ಪಕ್ಷಗಳು ಚಿಂತನೆ ನಡೆಸಿವೆ.

ಕಾಂಗ್ರೆಸ್‌ ಈ ಘೋಷಣೆ ಮಾಡುವ ಬಹಳಷ್ಟು ದಿನಗಳ ಮೊದಲೇ ಈ ಕಾರ್ಯಕ್ರಮ ಕೇಂದ್ರ ಸರಕಾರದಲ್ಲಿ ಚರ್ಚೆಗೆ ಬಂದಿತ್ತು. ಕೇಂದ್ರ ಸರಕಾರದ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ್‌ ಸುಬ್ರಮಣಿಯನ್‌ ಎಲ್ಲರಿಗೂ ಕನಿಷ್ಠ ಆದಾಯ ಕಾರ್ಯಕ್ರಮದ ಬಗ್ಗೆ ಪ್ರಸ್ತಾಪಿಸಿದ್ದರು. ಆದರೆ, ಭಾರತದಲ್ಲಿ ಇದೀಗ ಬಿಸಿ ಬಿಸಿ ಚರ್ಚೆಗೆ ಬಂದಿರುವ ಈ ಕಾರ್ಯಕ್ರಮ ಒಂದು ವಿಫಲ ಮಾದರಿ.

‘ಕಾಂಗ್ರೆಸ್ ಜುಮ್ಲಾ’: ನಿರುದ್ಯೋಗ ಭತ್ಯೆ ಎಂಬ ಹಳೇ ಬಾಟಲಿಯಲ್ಲಿ ‘ಕನಿಷ್ಠ ಆದಾಯ’ ಎಂಬ ಹೊಸ ಮದ್ಯ

ವಿಫಲಗೊಂಡಿರುವ ಮಾದರಿ:

ಎಲ್ಲರಿಗೂ ಕನಿಷ್ಠ ಆದಾಯ ಕಾರ್ಯಕ್ರಮವನ್ನು ಹಲವು ರಾಷ್ಟ್ರಗಳು ನಿರುದ್ಯೋಗ ಹಾಗೂ ಬಡತನ ನಿವಾರಣೆಗಾಗಿ ಪ್ರಾಯೋಗಿಕವಾಗಿ ಜಾರಿಗೆ ತಂದಿವೆ. ಫಿನ್‌ಲೆಂಡ್‌ 2017ರ ಜನವರಿಯಿಂದ ಎರಡು ವರ್ಷಕ್ಕೆ ಪ್ರಾಯೋಗಿಕವಾಗಿ ಈ ಕಾರ್ಯಕ್ರಮವನ್ನು ಜಾರಿಗೊಳಿಸಿತ್ತು. 25ರಿಂದ 50 ವರ್ಷದೊಳಗಿನ ಸುಮಾರು ಎರಡು ಸಾವಿರ ಜನರಿಗೆ ಪ್ರತಿ ತಿಂಗಳು 560 ಯೂರೋ (ಸುಮಾರು 45 ಸಾವಿರ ಭಾರತೀಯ ರೂಪಾಯಿ) ನೀಡಲಾಗುತ್ತಿತ್ತು.

ಯಾವುದೇ ಸಾಮಾಜಿಕ ಹಾಗೂ ಆರ್ಥಿಕ ಮಾನದಂಡಗಳಿಲ್ಲದೆ ಎಲ್ಲಾ ನಿರುದ್ಯೋಗಿಗಳಿಗೂ ಪ್ರೋತ್ಸಾಹಕವಾಗಿ ಈ ಹಣ ನೀಡಲಾಗುತ್ತಿತ್ತು. ಈ ಹಣ ಪಡೆಯುತ್ತಿರುವವರು ಮುಂದಿನ ಎರಡು ವರ್ಷಗಳೊಳಗೆ ಉದ್ಯೋಗ ಹುಡುಕಿಕೊಳ್ಳಬೇಕಿತ್ತು. ಈ ಹಣ ಪಡೆಯುತ್ತಿರುವ ಮಧ್ಯದಲ್ಲಿ ಕೆಲಸ ಸಿಕ್ಕಿದವರೂ ಈ ಹಣ ಪಡೆದುಕೊಳ್ಳಬಹುದಾಗಿತ್ತು. ಎರಡು ವರ್ಷ ಈ ಕಾರ್ಯಕ್ರಮ ನಡೆಸಿದ ಫಿನ್‌ಲೆಂಡ್‌ ಸರಕಾರ ಕೊನೆಗೆ ಆರ್ಥಿಕ ಹೊರೆಯ ಕಾರಣಕ್ಕೆ, ‘ಹಣ ಬೇಕಿದ್ದರೆ ದಯವಿಟ್ಟು ಕೆಲಸ ಮಾಡಿ’ ಎಂದು ನಿರುದ್ಯೋಗಿಗಳಿಗೆ ಹೇಳಿ ಈ ಕಾರ್ಯಕ್ರಮವನ್ನು ಪ್ರಾಯೋಗಿಕ ಅವಧಿಯಾದ ಎರಡು ವರ್ಷಕ್ಕೇ ನಿಲ್ಲಿಸಿತ್ತು.

ಫಿನ್‌ಲೆಂಡ್‌ನ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 250 ಯೂರೋ (20,000 ಭಾರತೀಯ ರೂಪಾಯಿ) ಶಿಕ್ಷಣ ಭತ್ಯೆಯಾಗಿ ಸಿಗುತ್ತಿದೆ. ಅಲ್ಲದೆ ಫಿನ್‌ಲೆಂಡ್‌ನಲ್ಲಿ ಕಲಿಕೆಗೆ ಯಾವುದೇ ವ್ಯಾಸಂಗ ಶುಲ್ಕಗಳಿಲ್ಲ. ಕಡಿಮೆ ಆದಾಯವಿರುವ ಕುಟುಂಬಗಳಿಗೆ ಸರಕಾರದಿಂದ ಮನೆ ನಿರ್ವಹಣೆ ಭತ್ಯೆಯೂ ಸಿಗುತ್ತಿದೆ.

ಇಂಥ ಸಮಾಜ ಕಲ್ಯಾಣ ಕಾರ್ಯಕ್ರಮಗಳ ಜತೆಗೆ ಕನಿಷ್ಠ ಆದಾಯ ಕಾರ್ಯಕ್ರಮವನ್ನೂ ಜಾರಿಗೆ ತಂದಿದ್ದು ಅಲ್ಲಿನ ಸರಕಾರಕ್ಕೆ ಆರ್ಥಿಕ ಹೊರೆಯಾಗಿತ್ತು. ಹೀಗಾಗಿ ಈ ಕಾರ್ಯಕ್ರಮವನ್ನು ಮುಂದುವರಿಸದಿರಲು ನಿರ್ಧರಿಸಿದ ಅಲ್ಲಿನ ಸರಕಾರ, ಜನರಿಗೆ ನೇರವಾಗಿ ಹಣ ಕೊಡುವ ಬದಲಿಗೆ ಬಡ ವರ್ಗಕ್ಕೆ ಅನುಕೂಲವಾಗುವಂಥ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತರಲು ಮುಂದಾಗಿದೆ.

ಇನ್ನು ಇಟಲಿಯಲ್ಲಿ 2013ರಲ್ಲೇ ಈ ಕಾರ್ಯಕ್ರಮ ಜಾರಿಗೆ ತರುವುದಾಗಿ ಅಲ್ಲಿನ ಸರಕಾರ ಭರವಸೆ ಕೊಟ್ಟಿತ್ತು. ಆದರೆ, ಇನ್ನೂ ಈ ಕಾರ್ಯಕ್ರಮವನ್ನು ಸಮರ್ಪಕವಾಗಿ ಜಾರಿಗೆ ತರಲು ಸಾಧ್ಯವಾಗಿಲ್ಲ. ನೀಡಿದ್ದ ಭರವಸೆಯಂತೆ ಕನಿಷ್ಠ ಆದಾಯ ಕಾರ್ಯಕ್ರಮ ಜಾರಿಯಲ್ಲಿ ವಿಫಲವಾಗಿರುವ ಸರಕಾರದ ವಿರುದ್ಧ ಅಲ್ಲಿನ ಯುವ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದೂ ಆಗಿದೆ.

ಕೆನಡಾದ ಒಂಟಾರಿಯೊದಲ್ಲಿ ಆರ್ಥಿಕವಾಗಿ ಹಿಂದುಳಿದ 4000 ಜನರಿಗೆ ಕನಿಷ್ಠ ಆದಾಯ ಮೊತ್ತ ಪಾವತಿಸುವ ಕಾರ್ಯಕ್ರಮವನ್ನು 2017ರ ಏಪ್ರಿಲ್‌ನಲ್ಲಿ ಜಾರಿಗೆ ತರಲಾಗಿತ್ತು. ಅಲ್ಲಿನ ಜನಸಂಖ್ಯೆಯ ಐದನೇ ಒಬ್ಬರಿಗೆ ನೇರವಾಗಿ ಹಣ ಪಾವತಿಸುವ ಗುರಿಯೊಂದಿಗೆ ಮುಂದಿನ ಮೂರು ವರ್ಷಕ್ಕೆಂದು ಈ ಕಾರ್ಯಕ್ರಮವನ್ನು ಜಾರಿಗೆ ತರಲಾಗಿತ್ತು. ನಿರುದ್ಯೋಗಿ ಅಥವಾ ವಾರ್ಷಿಕ ಆದಾಯ 34,000 ಕೆನಡಿಯನ್‌ ಡಾಲರ್‌ಗಿಂತ ಕಡಿಮೆ ಇರುವವರು ವಾರ್ಷಿಕ 17,000 ಕೆನಡಿಯನ್‌ ಡಾಲರ್‌ ಕನಿಷ್ಠ ಆದಾಯ ಪಡೆಯಬಹುದಾಗಿತ್ತು.

ಆದರೆ, ಕೆನಡಾದಲ್ಲಿ ಕೂಡಾ ಈ ಕಾರ್ಯಕ್ರಮ ಯಶಸ್ವಿಯಾಗಲಿಲ್ಲ. ಸೂಕ್ತ ಕೌಶಲ ಇರುವವರಿಗೆ ಸೂಕ್ತ ಉದ್ಯೋಗ ಒದಗಿಸುವ ಯೋಜನೆಗಳನ್ನು ರೂಪಿಸದೆ ನೇರವಾಗಿ ಹಣ ಕೊಡುವುದರಿಂದ ಬಡತನ ನಿರ್ಮೂಲನೆ ಸಾಧ್ಯವಿಲ್ಲ ಎಂಬ ಕಾರಣಕ್ಕೆ 2018ರ ಆಗಸ್ಟ್‌ನಲ್ಲಿ ಅಲ್ಲಿನ ಹೊಸ ಸರಕಾರ ಈ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿ, ಉದ್ಯೋಗ ಹೆಚ್ಚಿಸುವ ಹೊಸ ಯೋಜನೆಗಳನ್ನು ಆರಂಭಿಸಿತ್ತು.

‘ಕಾಂಗ್ರೆಸ್ ಜುಮ್ಲಾ’: ನಿರುದ್ಯೋಗ ಭತ್ಯೆ ಎಂಬ ಹಳೇ ಬಾಟಲಿಯಲ್ಲಿ ‘ಕನಿಷ್ಠ ಆದಾಯ’ ಎಂಬ ಹೊಸ ಮದ್ಯ

ಎರಡು ಶತಮಾನದ ಹಳೆಯ ಥಿಯರಿ:

ಇಂಗ್ಲೆಂಡ್‌ ಮೂಲದ ಅಮೆರಿಕನ್‌ ರಾಜಕೀಯ ವಿಶ್ಲೇಷಕ ಥಾಮಸ್‌ ಪೈನ್‌ 1797ರಲ್ಲಿ ತನ್ನ ಪ್ರಬಂಧದಲ್ಲಿ ಉಲ್ಲೇಖಿಸಿದ್ದ ಕನಿಷ್ಠ ಆದಾಯ ಪರಿಕಲ್ಪನೆಯೇ ಮುಂದೆ ಹಲವು ಮಾದರಿಗಳನ್ನು ಒಳಗೊಂಡು ಸದ್ಯ 'ಎಲ್ಲರಿಗೂ ಕನಿಷ್ಠ ಆದಾಯ' ಕಾರ್ಯಕ್ರಮದ ಸ್ವರೂಪ ಪಡೆದಿದೆ. ಸಮಾಜದಲ್ಲಿ ಜನರ ಆದಾಯದ ಅಂತರ ಹೆಚ್ಚಾಗಿರಬಾರದು ಎಂಬುದು ಈ ಪರಿಕಲ್ಪನೆಯ ಉದ್ದೇಶ. ಅಲ್ಲದೆ, ಹಲವರಿಂದ ಹಣ ಪಾವತಿಸಿಕೊಂಡು ನಷ್ಟವಾದ ಕೆಲವರಿಗೆ ನಷ್ಟ ಭರಿಸುವ ವಿಮಾ ಸಿದ್ಧಾಂತವೂ ಕನಿಷ್ಠ ಆದಾಯ ಪರಿಕಲ್ಪನೆಯ ಹಿಂದಿದೆ.

ಬಡತನ ನಿರ್ಮೂಲನೆಗಾಗಿ ಸರಕಾರಗಳು ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತವೆ. ಆದರೆ, ಸರಕಾರದ ಹಣ ಫಲಾನುಭವಿಗಳಿಗೆ ಸರಿಯಾಗಿ ತಲುವುದು ಕಷ್ಟ. ಹೀಗಾಗಿ ಸಮಾಜದ ಬಡವರಿಗೇ ನೇರವಾಗಿ ಸರಕಾರದ ನೆರವು ತಲುಪಿಸುವ ಉದ್ದೇಶ ಈ ಸಿದ್ಧಾಂತದ ಹಿಂದಿದೆ. ಆದರೆ, ದೇಶದ ಎಲ್ಲಾ ಜನರಿಗೂ ಕನಿಷ್ಠ ಆದಾಯ ವಿತರಣೆ ಮಾಡುವುದು ಸರಕಾರಗಳಿಗೆ ಹೊರೆಯಾಗುತ್ತದೆ. ಹೀಗಾಗಿ ಆಯ್ದ ಕೆಲವರಿಗೆ ಬಡತನ, ನಿರುದ್ಯೋಗ ಭತ್ಯೆ ನೀಡುವುದೇ ಈ ಕಾರ್ಯಕ್ರಮದ ಮೂಲ ಪರಿಕಲ್ಪನೆ.

ಭಾರತದಲ್ಲಿ ಕೂಡಾ ಈ ಕಾರ್ಯಕ್ರಮದ ಚರ್ಚೆ ಕಳೆದ ವರ್ಷದಿಂದ ಶುರುವಾಗಿದೆ. ಕಳೆದ ವರ್ಷದ ಗಾಂಧಿ ಜಯಂತಿಯಂದು ಈ ಕಾರ್ಯಕ್ರಮ ಉಲ್ಲೇಖಿಸಿದ್ದ ಅರವಿಂದ್‌ ಸುಬ್ರಮಣಿಯನ್‌, "ಬಡತನ ನಿರ್ಮೂಲನೆಗಾಗಿ ಕೇಂದ್ರ ಸರಕಾರದ ಸಾವಿರಾರು ಯೋಜನೆಗಳಿವೆ. ಆದರೆ, ಸರಕಾರದ ಈ ಕಾರ್ಯಕ್ರಮಗಳ ಹಣ ಎಷ್ಟರ ಮಟ್ಟಿಗೆ ಬಡವರನ್ನು ತಲುಪುತ್ತದೆಯೋ ಗೊತ್ತಿಲ್ಲ. ಹೀಗಾಗಿ ಎಲ್ಲರಿಗೂ ಕನಿಷ್ಠ ಆದಾಯ ಕಾರ್ಯಕ್ರಮದಡಿ ಬಡವರನ್ನು ಗುರುತಿಸಿ ಅವರಿಗೆ ನೇರವಾಗಿ ಹಣ ನೀಡಿದರೆ ಬಡತನದ ಪ್ರಮಾಣ ಕಡಿಮೆಯಾಗಬಹುದು" ಎಂದಿದ್ದರು.

"ಕೇವಲ ಸಾಮಾಜಿಕವಾಗಿ ಹಿಂದುಳಿದವರನ್ನು ಗುರಿಯಾಗಿಸಿಕೊಂಡು ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದರೆ ಸಾಲದು. ಇಂದು ಬರ, ಅತಿವೃಷ್ಟಿ ಕೂಡಾ ಕೃಷಿಕರನ್ನು ಆರ್ಥಿಕವಾಗಿ ಕುಗ್ಗಿಸಿವೆ. ಹೀಗಾಗಿ ದೊಡ್ಡ ದೊಡ್ಡ ಕಲ್ಯಾಣ ಯೋಜನೆಗಳ ಬದಲು ಬಡವರಾಗಿರುವ ಎಲ್ಲರನ್ನೂ ಗುರಿಯಾಗಿಟ್ಟುಕೊಂಡು ಕನಿಷ್ಠ ಆದಾಯ ಕಾರ್ಯಕ್ರಮ ಜಾರಿಗೆ ತಂದರೆ ಬಡತನ ಪ್ರಮಾಣವನ್ನು ಹಂತ ಹಂತವಾಗಿ ಕಡಿಮೆ ಮಾಡಲು ಸಾಧ್ಯ" ಎಂದು ಹೇಳಿದ್ದರು.

Also read: ಸಂಪೂರ್ಣವಾಗಿ ಬಡತನ ನಿರ್ಮೂಲನೆ ಸಾಧ್ಯವೇ?

ಬಡತನ ರೇಖೆಗಿಂತ ಕೆಳಗಿರುವ ಎಲ್ಲರನ್ನೂ ಈ ಕಾರ್ಯಕ್ರಮದಡಿ ಗುರುತಿಸಿ, ಅವರಿಗೆ ನೇರವಾಗಿ ಹಣ ಪಾವತಿಸಬೇಕೆಂಬುದು ಸದ್ಯ ಭಾರತದಲ್ಲಿ ಈ ಕಾರ್ಯಕ್ರಮ ಜಾರಿಗೆ ತರಲು ಮುಂದಾಗಿರುವವರ ಉದ್ದೇಶ. ಆದರೆ, ಇತ್ತೀಚೆಗೆ ಕೇಂದ್ರ ಸರಕಾರ 10% ಮೀಸಲಾತಿಯಲ್ಲಿ ಬಡತನ ರೇಖೆಯ ವ್ಯಾಖ್ಯೆಯನ್ನೇ ಬದಲಿಸಿರುವುದರಿಂದ ನಿಜಕ್ಕೂ ಬಡತನ ರೇಖೆಯ ಕೆಳಗಿರುವವರು ಯಾರು ಎಂಬುದನ್ನು ಗುರುತಿಸುವುದೇ ಕಷ್ಟವಾಗಲಿದೆ.

ಇಷ್ಟು ದಿನ ನಿರುದ್ಯೋಗ ಭತ್ಯೆ ಎಂದು ಹೇಳುತ್ತಿದ್ದ ಪಕ್ಷಗಳು ಅದೇ ಭರವಸೆಯನ್ನು ಹೊಸ ಹೆಸರಿನಲ್ಲಿ ನೀಡುತ್ತಿವೆ. ಈ ಹಿಂದೆ ಪಕ್ಷಗಳು ನೀಡಿದ್ದ ನಿರುದ್ಯೋಗ ಭತ್ಯೆಯ ಭರವಸೆಗಳು ಎಷ್ಟರ ಮಟ್ಟಿಗೆ ಜಾರಿಯಾಗಿವೆ, ಇದರಿಂದ ಎಷ್ಟರ ಮಟ್ಟಿಗೆ ದೇಶದ ಬಡತನ ಪ್ರಮಾಣ ಕಡಿಮೆಯಾಗಿದೆ ಎಂಬುದನ್ನು ದೇಶದ ಜನ ಕಣ್ಣಾರೆ ನೋಡುತ್ತಿದ್ದಾರೆ. ಇಂಥ ಹೊತ್ತಿನಲ್ಲಿ ಕನಿಷ್ಠ ಆದಾಯ ಕಾರ್ಯಕ್ರಮವನ್ನು ಬಿಜೆಪಿ ಚುನಾವಣೆಗೆ ಬಳಸಿಕೊಳ್ಳುವ ಮೊದಲೇ ಕಾಂಗ್ರೆಸ್‌ ಅದನ್ನು ಘೋಷಣೆ ಮಾಡಿದೆ.

ನಾಲ್ಕೂವರೆ ವರ್ಷಗಳ ಹಿಂದೆ ದೇಶದ ಜನರ ಬ್ಯಾಂಕ್‌ ಖಾತೆಗೆ ನೇರವಾಗಿ 15 ಲಕ್ಷದ ಜುಮ್ಲಾ ಒಂದನ್ನು ಬಿಜೆಪಿ ಹರಿಯಬಿಟ್ಟಿತ್ತು. ಇದೀಗ ಕಾಂಗ್ರೆಸ್ ಕೂಡ ಚುನಾವಣೆ ಪೂರ್ವದಲ್ಲಿ ಇಂತಯದ್ದೇ ಒಂದು ಸುಳ್ಳನ್ನು ಹರಿಯಬಿಡಲು ಹೊರಟಿದೆ. ಈ ಮೂಲಕ ಕಾಂಗ್ರೆಸ್- ಬಿಜೆಪಿ ನಡುವೆ ಹೆಚ್ಚಿನ ವ್ಯತ್ಯಾಸಗಳು ಇರುವುದಿಲ್ಲ ಎಂಬುದನ್ನು ಸಾರಿ ಹೇಳುತ್ತಿದೆ.

ಚಿತ್ರಕೃಪೆ: ಜಿಫೈಲ್ಸ್‌, ನ್ಯೂರ್ಯಾಕ್‌ ಟೈಮ್ಸ್‌/ಎಪಿ, ಪಿಕ್ಸ್‌ ವಿ