samachara
www.samachara.com
ಜನಪ್ರಿಯತೆಯ ಹಳಿಗಳ ಮೇಲೆ ಚುನಾವಣಾ ಬಜೆಟ್‌
COVER STORY

ಜನಪ್ರಿಯತೆಯ ಹಳಿಗಳ ಮೇಲೆ ಚುನಾವಣಾ ಬಜೆಟ್‌

ಚುನಾವಣಾ ಪೂರ್ವದಲ್ಲಿ ಪೂರ್ಣಾವಧಿಯ ಬಜೆಟ್‌ ಮಂಡಿಸುತ್ತಿರುವ ಕೇಂದ್ರ ಸರಕಾರ ಜನಪ್ರಿಯ ಘೋಷಣೆಗಳ ಕಡೆಗೆ ಒತ್ತು ಕೊಡುವ ನಿರೀಕ್ಷೆ ಇದೆ.

Team Samachara

ಅಧಿಕಾರದಿಂದ ನಿರ್ಗಮಿಸುವ ಹೊಸ್ತಿಲಲ್ಲಿರುವ ಕೇಂದ್ರದ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಫೆಬ್ರುವರಿ 1ರಂದು ಮಂಡಿಸಲು ಮುಂದಾಗಿರುವ ಪ್ರಸಕ್ತ ಸಾಲಿನ ಪೂರ್ಣ ಬಜೆಟ್ ವಿವಾದಕ್ಕೆ ಕಾರಣವಾಗಿದೆ. ಹಣಕಾಸು ಸಚಿವ ಅರುಣ್‌ ಜೇಟ್ಲಿ ಅನಾರೋಗ್ಯದ ಕಾರಣ ರೈಲ್ವೆ ಖಾತೆಯನ್ನು ಹೊಂದಿರುವ ಆರ್‍ಎಸ್‍ಎಸ್‍ನ ನೀಲಿಕಂಗಳ ಮತ್ತೊರ್ವ 'ನಿಷ್ಟಾವಂತ' ಪಿಯೂಶ್‍ ಗೋಯಲ್ ಮೊದಲ ಬಾರಿ ಹಾಗೂ ಈ ಸರಕಾರದ ಕೊನೆಯ ಬಜೆಟ್ ಮಂಡಿಸುತ್ತಿದ್ದಾರೆ.

ಮೋದಿ ಸರಕಾರ ಈ ಅವಧಿಯ ಕೊನೆಯ ಬಜೆಟ್ ಇದಾಗಿದ್ದು, ಈ ಬಜೆಟ್‌ ಮೇಲೆ ಭಾರಿ ನಿರೀಕ್ಷೆಗಳಿವೆ. ಚುನಾವಣೆಗೆ ಎರಡು ತಿಂಗಳು ಮೊದಲು ಮಂಡಿಸಲಾಗುತ್ತಿರುವ ಈ ಬಜೆಟ್‍ನಲ್ಲಿ ಭಾರಿ ಜನಪ್ರಿಯ ಯೋಜನೆಗಳು ಇರಲಿವೆ ಎಂದು ನಿರೀಕ್ಷಿಸಲಾಗಿದೆ. ಈ ಬಾರಿಯ ಬಜೆಟ್‍ ಜನಪ್ರಿಯತೆಯ ಹಳಿಯ ಮೇಲೆ ಸಾಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ದೇಶದ ಸಾಮಾನ್ಯ ವರ್ಗದವರು, ಹಿಂದುಳಿದವರು, ದಲಿತರು ಹಾಗೂ ರೈತರ ಆಕ್ರೋಶಕ್ಕೆ ತುತ್ತಾಗಿರುವ ನರೇಂದ್ರ ಮೋದಿ ಸರಕಾರ ಮತಬ್ಯಾಂಕ್‍ಗೆ ಕೈ ಹಾಕಲು ಬಜೆಟ್‍ನಲ್ಲಿ ಜನರ ಮೂಗಿಗೆ ತುಪ್ಪ ಸವರುವ ನಿರೀಕ್ಷೆ ಇದೆ. ಹೀಗಾಗಿ ಕೇಂದ್ರದ ಬಜೆಟ್ ಬಗ್ಗೆ ಯಾರೊಬ್ಬರಲ್ಲೂ ಅಂತಹ ಕುತೂಹಲಗಳೇನು ಇಲ್ಲ.

ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ, ಮೂರು ರಾಜ್ಯಗಳಲ್ಲಿ ಅಧಿಕಾರ ಹಿಡಿದ ಕಾಂಗ್ರೆಸ್ ಪ್ರಾಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ, ರೈತರ ಸಾಲಮನ್ನಾ ಮಾಡಿರುವುದು, ಕೇಂದ್ರದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ, ಬಡತನ ರೇಖೆಗಳಿಗಿಂತ ಕೆಳಗಿರುವ ಕುಟುಂಬಕ್ಕೆ 'ಕನಿಷ್ಠ ಆದಾಯ' ನೀಡುವ ಕಾರ್ಯಕ್ರಮ ಘೋಷಿಸಿರುವುದು ಕಾಂಗ್ರೆಸ್‌ ಬಗ್ಗೆ ದೇಶದ ಜನರಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ. ಇದು ಬಿಜೆಪಿಯ ನಿದ್ದೆಗೆಡಿಸಿದೆ.

ಇತ್ತ ಶುಕ್ರವಾರ ಪಿಯೂಶ್‌ ಗೋಯಲ್ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಮಾಡಲು ಮುಂದಾಗಿರುವುದಕ್ಕೆ ಅವರೇದ ಪಕ್ಷದ ಹಿರಿಯ ನಾಯಕ ಹಾಗೂ 'ಮೋದಿ ಹಠಾವೋ ಚಳುವಳಿ'ಯಲ್ಲಿ ಮುಂಚೂಣಿಯಲ್ಲಿರುವ ಹಿರಿಯ ನಾಯಕ ಯಶವಂತ್ ಸಿನ್ಹಾ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಜೆಟ್ ಅನ್ನು ಫೆಬ್ರವರಿಯಲ್ಲಿ ಮಂಡಿಸಲಾದರೂ ಸಹ ಸಾರ್ವತ್ರಿಕ ಚುನಾವಣೆ ನಂತರ ಬರುವ ಸರ್ಕಾರವೇ ಅದಕ್ಕೆ ಅನುಮೋದನೆ ನೀಡಬೇಕಾಗುತ್ತದೆ.

ಸಾಮಾನ್ಯವಾಗಿ ಚುನಾವಣಾ ವರ್ಷದಲ್ಲಿ ಯಾವುದೇ ಸರ್ಕಾರ ಪೂರ್ಣ ಬಜೆಟ್ ಮಂಡಿಸದೆ, ಕೇವಲ ಲೇಖನುದಾನ ಮಂಡಿಸುವುದು ವಾಡಿಕೆ. ಒಂದು ಫಲಿತಾಂಶ ಬಂದ ಬಳಿಕ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಮಾಡಿಕೊಳ್ಳಬಹುದು. ಆದರೆ, ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ಮೋದಿ ಹೊಸ ಸಂಪ್ರಾದಾಯಕ್ಕೆ ಕೈ ಹಾಕಿದೆ.

ಸರಕಾರದ ಈ ನಡೆಗೆ ಕೇಂದ್ರ ಹಣಕಾಸು ಖಾತೆಯ ಮಾಜಿ ಸಚಿವ ಯಶವಂತ್ ಸಿನ್ಹಾ, ಕೇಂದ್ರದಲ್ಲಿ ಎನ್‌ಡಿಎ ಸರಕಾರದ ಅಧಿಕಾರಾವಧಿ ಕಡಿಮೆ ಇದೆ. ಹೀಗಾಗಿ ಆರ್ಥಿಕ ಸಮೀಕ್ಷೆ, ಆರ್ಥಿಕ ಮಸೂದೆ ತರುವಂತಿಲ್ಲ ಅಥವಾ ಹೊಸ ಸೇವೆಗಳನ್ನು ಮಧ್ಯಂತರ ಬಜೆಟ್‌ನಲ್ಲಿ ಘೋಷಿಸುವಂತಿಲ್ಲ. ಹಾಗೊಂದು ವೇಳೆ ಮಾಡಿದರೆ ಅದು ಅಸಾಂವಿಧಾನಿಕ ಎಂದಿದ್ದಾರೆ.

ಆದರೆ, ಯುಪಿಎ ಸೇರಿದಂತೆ ಹಲವು ಸರಕಾರಗಳು ಮಧ್ಯಂತರ ಬಜೆಟ್‌ನಲ್ಲೂ ಹೊಸನೀತಿಗಳ ಘೋಷಣೆಗ ಮಾಡಿವೆ. ಪೂರ್ಣ ಪ್ರಮಾಣದ ಬಜೆಟ್ ಮಾಡುವಂತಿಲ್ಲ ಎಂಬ ನಿಯಮವೇನೂ ಇಲ್ಲ ಎನ್ನುವಂಥವರಿಗೆ, ನಾವೇಕೆ ಸಂವಿಧಾನದಲ್ಲಿ ಪರಿಚ್ಛೇದ 116 ಹೊಂದಿದ್ದೇವೆ? ಎಂದು ಪ್ರಶ್ನಿಸಿದ್ದಾರೆ ಯಶವಂತ್ ಸಿನ್ಹಾ.

ಬಜೆಟ್ ಅನ್ನು ಮಂಡಿಸುವುದು ಹನ್ನೆರಡು ತಿಂಗಳ ಅವಧಿಗೆ. ಅಧಿಕಾರದಲ್ಲಿರುವ ಪಕ್ಷದ ಅವಧಿಯೂ ಹನ್ನೆರಡು ತಿಂಗಳಾಗಿರಬೇಕು. ಮೂರು ತಿಂಗಳು ಅಧಿಕಾರಾವಧಿ ಹಾಗೂ ಬಜೆಟ್ನ ಅವಧಿ ಒಂದು ವರ್ಷ. ಇದು ತೀರಾ ವಿಚಿತ್ರ ಹಾಗೂ ಒಪ್ಪಲು ಸಾಧ್ಯವಿಲ್ಲದಂಥದ್ದು. ಫೆಬ್ರವರಿ 1ನೇ ತಾರೀಕು ಮಂಡಿಸಲಿರುವ ಕೇಂದ್ರದ ಮಧ್ಯಂತರ ಬಜೆಟ್ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ರೂಪಿಸುವುದಿಲ್ಲ.

"ಆರ್ಥಿಕತೆ ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಬೇಕಿದೆ. ಅದರಲ್ಲೂ ಕೃಷಿ ವಲಯದ ಸಮಸ್ಯೆಗಳನ್ನು ನಿವಾರಣೆ ಮಾಡಬೇಕಿದೆ. ಚುನಾವಣೆ ವರ್ಷದಲ್ಲಿ ಮಂಡಿಸುವುದಾದ್ದರಿಂದ ಇದು ಮಧ್ಯಂತರ ಬಜೆಟ್. ದೇಶದ ಹಿತಾಸಕ್ತಿಯಿಂದ ಏನೆಲ್ಲ ಒಳಗೊಂಡಿರಬೇಕೋ ಅವೆಲ್ಲವನ್ನೂ ಈ ಮಧ್ಯಂತರ ಬಜೆಟ್ ಒಳಗೊಂಡಿರುತ್ತದೆ" ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಸದ್ಯಕ್ಕೆ ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ಎನ್‌ಡಿಎ ಸಂಪ್ರದಾಯವನ್ನು ಮುರಿದು, ಮಧ್ಯಂತರ ಬಜೆಟ್ ಬದಲು ಪೂರ್ಣ ಪ್ರಮಾಣದಲ್ಲಿ ಬಜೆಟ್ ಮಂಡಿಸಲು ಸಿದ್ಧತೆ ನಡೆಸಿದೆ. ಒಂದು ವೇಳೆ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದರೆ ಸದನದಲ್ಲಿ ವಿರೋಧ ವ್ಯಕ್ತಪಡಿಸುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

ಪ್ರತಿ ಬಾರಿ ಫೆಬ್ರವರಿ ಕೊನೆಯ ವಾರದಲ್ಲಿ ಮುಂದಿನ ಸಾಲಿನ ಬಜೆಟ್ ಮಂಡಿಸಲಾಗುತ್ತಿತ್ತು. ಅದು ಪೂರ್ಣ ಬಜೆಟ್ ಆಗಿರುತ್ತಿತ್ತು. ಇದು ಚುನಾವಣಾ ವರ್ಷ ಆಗಿರುವ ಕಾರಣ ಈಗ ಮಂಧ್ಯಂತರ ಬಜೆಟ್ ಅಥವಾ 'ವೋಟ್ ಆನ್ ಅಕೌಂಟ್' ಮಂಡಿಸಿ ಮುಂದೆ ಬರುವ ಸರಕಾರದ ಒಪ್ಪಿಗೆ ಪಡೆದುಕೊಳ್ಳಲಾಗುತ್ತಿದೆ.

"ಮೋದಿ ಸರಕಾರದ ಅವಧಿಯು ಏಪ್ರಿಲ್‍ಗೆ ಮುಗಿಯಲಿದೆ. ಆ ನಂತರ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ. ಹಾಗಾಗಿ ಕೇಂದ್ರವು ಮಧ್ಯಂತರ ಬಜೆಟ್ ಮಂಡಿಸುತ್ತಿದೆ. ಚುನಾವಣೆಗೆ ಕೆಲವೇ ತಿಂಗಳು ಇರುವಾಗ ಜನರ ಓಲೈಕೆಗೆ ಹತಾಶೆಯಿಂದ ದೊಡ್ಡ ಕೊಡುಗೆ ಘೋಷಿಸಲು ಸರಕಾರ ಮುಂದಾಗಿದೆ" ಎಂದು ಕಾಂಗ್ರೆಸ್ ಮುಖಂಡ ಆನಂದ ಶರ್ಮಾ ಆರೋಪಿಸಿದ್ದಾರೆ.

ಚುನಾವಣೆಗೆ ಕೆಲ ತಿಂಗಳ ಮುಂಚೆ ಮಾಮೂಲಿನಂತೆ ಪೂರ್ಣಾವಧಿ ಬಜೆಟ್ ಮಂಡಿಸುವುದು ಸಂಸದೀಯ ಪದ್ಧತಿಯಲ್ಲಿ ರೂಢಿಯಲ್ಲಿರುವ ನಿಯಮವನ್ನು ಮುರಿದಂತೆ. ಸರಕಾರದ ಅವಧಿ ಐದು ವರ್ಷ. ಐದು ಪೂರ್ಣ ಬಜೆಟ್ ಮಂಡಿಸಲು ಮಾತ್ರ ಸಾಧ್ಯ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯ.

ಜನಪ್ರಿಯತೆಯ ಹಳಿಗಳ ಮೇಲೆ ಚುನಾವಣಾ ಬಜೆಟ್‌

ಸಂಗ್ರಹವಾಗದ ತೆರಿಗೆ

ಕೇಂದ್ರ ಸರ್ಕಾರವು ದೇಶದ ಆರ್ಥಿಕ ಅಭಿವೃದ್ಧಿಯನ್ನು ಮಂದಗತಿ ಬೆಳವಣಿಗೆಯಿಂದ ಹೊರತಂದು ಹಣಕಾಸು ಪರಿಸ್ಥಿತಿಯ ಸಮರ್ಥ ನಿರ್ವಹಣೆಗೆ ವಿತ್ತೀಯ ಕೊರತೆಯನ್ನು ಶೇ 3.2ಕ್ಕೆ ತಗ್ಗಿಸುವ ಕಾರ್ಯಕ್ಕೆ ತೆರಿಗೆ ಸಂಗ್ರಹ ಜಟಿಲ ಸವಾಲಾಗಲಿದೆ ಎಂದು ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜಿಎಸ್‍ಟಿ ಮುಖೇನ ಪ್ರತಿ ತಿಂಗಳು ತಲಾ 1.12 ಲಕ್ಷ ಕೋಟಿ ತೆರಿಗೆ ಸಂಗ್ರಹಿಸುವ ಗುರಿ ಇರಿಸಿಕೊಂಡು ವಿತ್ತೀಯ ಕೊರತೆ ಸರಿದೂಗಿಸುವ ಲೆಕ್ಕಾಚಾರ ಇಟ್ಟುಕೊಂಡಿತ್ತು ಕೇಂದ್ರ ಸರಕಾರ. ಆದರೆ, ಈ ಅವಧಿಯ ಏಪ್ರಿಲ್ ಮತ್ತು ಅಕ್ಟೋಬರ್ ತಿಂಗಳು ಮಾತ್ರವೇ ಉದ್ದೇಶಿತ ಗುರಿ ತಲುಪಿದೆ. ಒಟ್ಟು 13.48 ಕೋಟಿ ತೆರಿಗೆ ಸಂಗ್ರಹ ಕಾರ್ಯದಲ್ಲಿ ತಿಂಗಳಿಗೆ ಸರಾಸರಿ 97,000 ಕೋಟಿಯಷ್ಟು ಮಾತ್ರವೇ ಖಜಾನೆ ಸೇರಿದೆ.

ಆರ್ಥಿಕ ವರ್ಷ ಮಾರ್ಚ್‍ಗೆ ಅಂತ್ಯವಾಗುವುದರಿಂದ ಏಪ್ರಿಲ್‍ನಲ್ಲಿ 1,03,000 ಕೋಟಿ ತೆರಿಗೆ ಹರಿದು ಬಂದಿದೆ. ಜಿಎಸ್‍ಟಿ ಸಂಗ್ರಹವು ಅಕ್ಟೋಬರ್‌ನಲ್ಲಿ 1,00,710 ಕೋಟಿ ಬೊಕ್ಕಸಕ್ಕೆ ಬಂದಿದ್ದರೂ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಕ್ರಮವಾಗಿ 97,637 ಕೋಟಿ ಮತ್ತು 94,726 ಕೋಟಿಗೆ ಕುಸಿಯಿತು. ಇತ್ತೀಚಿನ ಮಾಹಿತಿಗಳ ಪ್ರಕಾರ ಜನವರಿಯ ಜಿಎಸ್‍ಟಿ ಸಂಗ್ರಹವು ಡಿಸೆಂಬರ್‌ನಲ್ಲಿದ್ದಂತೆಯೇ ಇರಲಿದ್ದು, ಸುಮಾರು 96 ಸಾವಿರ ಕೋಟಿ ಬರಬಹುದೆಂದು ಅಂದಾಜಿಸಲಾಗಿದೆ.

ಈ ಹಿಂದಿನ ಆರ್ಥಿಕ ವರ್ಷದಲ್ಲಿ ಪ್ರತಿ ತಿಂಗಳ ಸರಾಸರಿ 89,700 ಕೋಟಿಯಷ್ಟು ಸಂಗ್ರಹಿಸಿ, 2018-19ನೇ ಸಾಲಿಗೆ 96,800ಗೆ ಹೆಚ್ಚಿಸಿಕೊಂಡು ಉದ್ದೇಶಿತ ಮಟ್ಟ ತಲುಪಿಲ್ಲ. ಜಿಎಸ್‍ಟಿ, ಕೇಂದ್ರ ಜಿಎಸ್‍ಟಿ, ರಾಜ್ಯಗಳ ಜಿಎಸ್‌ಟಿ, ಅಂತಾರಾಜ್ಯ ಜಿಎಸ್‍ಟಿ ಮತ್ತು ಸೆಸ್ ಮೇಲಿನ ಸುಂಕದಿಂದ 1.78 ಲಕ್ಷ ಕೋಟೆಯಷ್ಟು ಅಭಾವವಾಗಿದೆ. ಇದುವೇ ವಿತ್ತೀಯ ಕೊರತೆಗೆ ನೇರ ಪರಿಣಾಮ ಬೀರಲಿದೆ. ಪ್ರತಿ ತಿಂಗಳು 96,800 ಕೋಟಿ ತೆರಿಗೆ ಸಂಗ್ರಹವಾದರೆ ವಾರ್ಷಿಕ 11,61,600 ಕೋಟಿಗೆ ತಲುಪಿದಂತ್ತಾಗುತ್ತದೆ. ಉದ್ದೇಶಿತ 13.48 ಕೋಟಿ ಜಿಎಸ್‌ಟಿ ಕ್ರೋಢೀಕರಣಕ್ಕೆ 1.78 ಲಕ್ಷ ಕೋಟಿ ತುಟ್ಟಿಯಾಗಲಿದೆ.

ಕೃಷಿಗೆ ವಿಶೇಷ ಪ್ಯಾಕೇಜ್?

ಫೆಬ್ರವರಿ 1ರಂದು ಮಂಡನೆಯಾಗುವ ಮಧ್ಯಂತರ ಬಜೆಟ್‍ನಲ್ಲಿ ಕೃಷಿ ವಲಯದ ಬಿಕ್ಕಟ್ಟುಗಳಿಗೆ ಸುಮಾರು 2 ಲಕ್ಷ ಕೋಟಿ ವಿಶೇಷ ಪ್ಯಾಕೇಜ್, ಆದಾಯ ತೆರಿಗೆ ವಿನಾಯತಿ ಮಿತಿ ಹೆಚ್ಚಳ, ಎಲ್ಲರಿಗೂ ಕನಿಷ್ಠ ಆದಾಯ (ಯುಬಿಐ), ಉದ್ಯಮಿಗಳಿಗೆ ವಿಮಾ ಯೋಜನೆ ಹಾಗೂ ಅಗ್ಗದ ಬಡ್ಡಿ ದರದಲ್ಲಿ ಸಾಲ ನೀಡಿಕೆ, ಆಹಾರ ಸಬ್ಸಿಡಿಗೆ ಗರಿಷ್ಠ ಮೊತ್ತ 1.80 ಲಕ್ಷ ಕೋಟಿಗೆ ಏರಿಕೆಯಂತಹ ಜನಪ್ರಿಯ ಯೋಜನೆಗಳನ್ನು ಘೋಷಿಸುವುದಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಈ ಹಿಂದೆ ಸುಳಿವು ಬಿಟ್ಟುಕೊಟ್ಟಿದ್ದಾರೆ.

2018-19ರ ಸಾಲಿನ ಒಟ್ಟು ಬಜೆಟ್ ಸಾಮರ್ಥ್ಯ 24.42 ಲಕ್ಷ ಕೋಟಿಯಷ್ಟು ಇತ್ತು. ಈ ಬಾರಿ ಚುನಾವಣೆ ವರ್ಷದ ಆಯವ್ಯಯ ಆಗಿರುವುದರಿಂದ ಮತಬೇಟೆಗೆ ಈ ಹಿಂದಿನ ಬಜೆಟ್‌ಗಳಿಗಿಂತ ಹೆಚ್ಚಿನದನ್ನೇ ಘೋಷಿಸುವ ನಿರೀಕ್ಷೆ ಇದೆ. ಈ ಹಿಂದೆ ಇದ್ದ ಸರ್ಕಾರಗಳು ಇದನ್ನೇ ರೂಢಿಸಿಕೊಂಡು ಬಂದಿವೆ. ಹೀಗಾಗಿ, ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಜನ ಮೆಚ್ಚಿಗೆ ಬಜೆಟ್ ಹೊರಬಿದ್ದರೇ ಮುಂಬರುವ ಆಡಳಿತರೂಢ ಪಕ್ಷಕ್ಕೆ ಆರ್ಥಿಕ ಹೊರೆ ಬೀಳಲಿದೆ. ಜೊತೆಗೆ ಉದ್ದೇಶಿತ ವಿತ್ತೀಯ ಕೊರತೆ ಶೇ.3.2ಕ್ಕೆ ತಗ್ಗಿಸುವುದರಲ್ಲಿ ಸಫಲತೆ ಕಾಣುವುದಿಲ್ಲ ಎಂಬುದು ಆರ್ಥಿಕ ಕ್ಷೇತ್ರದಲ್ಲಿನ ಪರಿಣಿತರ ವಾದ.

ಜಿಡಿಪಿಗೆ ಕೃಷಿ ವಲಯದ ಕೊಡುಗೆ ಐದನೇ ಒಂದು ಭಾಗಕ್ಕಿಂತ ಕಡಿಮೆ ಇದೆ. ಕೃಷಿ ವಲಯಕ್ಕೆ ಸೂಕ್ತ ಪ್ರೋತ್ಸಾಹ ನೀಡುವ ಘೋಷಣೆಗಳನ್ನು ಸರಕಾರವು ಈ ಬಾರಿ ಬಜೆಟ್‌ನಲ್ಲಿ ಮಾಡಬೇಕಿದೆ. ಮಧ್ಯಮ ವರ್ಗದವರ ಓಲೈಕೆಗಾಗಿ ವೇತನ ಪಡೆಯುವ ವರ್ಗದವರಿಗೆ ಆದಾಯ ತೆರಿಗೆ ಮಿತಿ ಹೆಚ್ಚಳ ಮಾಡಬಹುದು ಎಂಬ ಸುದ್ದಿ ಕೂಡಾ ಇದೆ. ಆದರೆ, ಆರ್ಥಿಕ ಸ್ಥಿರತೆಗೆ ನಾವು ಕಟಿ ಬದ್ಧರಾಗಿದ್ದೇವೆ ಎಂದು ಅರುಣ್ ಜೇಟ್ಲಿ ಸ್ಪಷ್ಟಪಡಿಸಿದ್ದಾರೆ.

ಈ ಮಧ್ಯೆ ರಾಷ್ಟ್ರಮಟ್ಟದಲ್ಲಿ ಕೃಷಿ ಸಾಲ ಮನ್ನಾ ಘೋಷಣೆ ಮಾಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಆ ಬೇಡಿಕೆಗೆ ಈವರೆಗೆ ನರೇಂದ್ರ ಮೋದಿ ಸರಕಾರ ಒಪ್ಪಿಲ್ಲ. ಪ್ರಗತಿ ದರವನ್ನು ಎಂಟು ಪರ್ಸೆಂಟ್‌ಗೆ ಹೆಚ್ಚಿಸಬೇಕು ಎಂಬ ನಿರೀಕ್ಷೆ ಬಗ್ಗೆ ಮಾತನಾಡಿರುವ ಅವರು, "ನಕಾರಾತ್ಮಕ ರಾಜಕಾರಣದಿಂದ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ನಕಾರಾತ್ಮಕತೆಯ ನವಾಬರೆಲ್ಲ ಒಟ್ಟಿಗೆ ಬಂದರೂ ಜತೆಯಾಗಿರಲು ಸಾಧ್ಯವಿಲ್ಲ ಅಥವಾ ಅವರು ವಿಶ್ವಾಸಾರ್ಹತೆ ಹೊಂದಿಲ್ಲ" ಎಂದಿದ್ದಾರೆ. ಒಟ್ಟಾರೆ ಈ ಬಾರಿಯ ಚುನಾವಣಾ ಪೂರ್ವ ಬಜೆಟ್‌ ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ.

ಚಿತ್ರಕೃಪೆ: ದಿ ಇಂಡಿಯನ್‌ ಎಕ್ಸ್‌ಪ್ರೆಸ್‌, ಬಿಸ್‌ನೆಸ್‌ ಲೈವ್