samachara
www.samachara.com
‘ರಾಜರ ವೇಷದಲ್ಲಿ ರಾಷ್ಟ್ರೀಯ ಪಕ್ಷಗಳು’: ಸ್ವತಂತ್ರ ಅಭ್ಯರ್ಥಿ ಪ್ರಕಾಶ್ ರಾಜ್ ಸಂದರ್ಶನ
COVER STORY

‘ರಾಜರ ವೇಷದಲ್ಲಿ ರಾಷ್ಟ್ರೀಯ ಪಕ್ಷಗಳು’: ಸ್ವತಂತ್ರ ಅಭ್ಯರ್ಥಿ ಪ್ರಕಾಶ್ ರಾಜ್ ಸಂದರ್ಶನ

ಲೋಕಸಭಾ ಚುನಾವಣೆಗೆ ರಾಷ್ಟ್ರೀಯ ಪಕ್ಷಗಳು ಅಭ್ಯರ್ಥಿಗಳನ್ನು ಘೋಷಿಸುವ ಮುನ್ನವೇ ಕಣಕ್ಕಿಳಿದಿರುವ ನಟ ಪ್ರಕಾಶ್ ರಾಜ್, ಪರ್ಯಾಯ ರಾಜಕಾರಣದ ಹೊಸ ಅಂಶಗಳನ್ನು ಮುನ್ನೆಲೆ ತರುವ ಪ್ರಯತ್ನದಲ್ಲಿರುವಂತೆ ಕಾಣಿಸುತ್ತಿದೆ.

ಪ್ರಶಾಂತ್ ಹುಲ್ಕೋಡು

ಪ್ರಶಾಂತ್ ಹುಲ್ಕೋಡು

'ಇವತ್ತಿನ ರಾಜರು ರಾಷ್ಟ್ರೀಯ ಪಕ್ಷಗಳ ರೂಪದಲ್ಲಿದ್ದಾರೆ...'

ಹೀಗೊಂದು ಸ್ವತಂತ್ರ ಆಲೋಚನೆಯನ್ನು ಹರಿಬಿಟ್ಟರು ಪ್ರಕಾಶ್ ರಾಜ್. ಬಹುಭಾಷಾ ನಟ, ಇತ್ತೀಚೆಗೆ ಸಾಮಾಜಿಕ ಹೋರಾಟಗಳಿಗೆ ತಾರಾ ಮೆರಗು ತುಂಬಿದ್ದ ಇವರು ಸದ್ಯ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ.

ಬೆಂಗಳೂರಿನ ಯುಬಿ ಸಿಟಿ ಎದುರಿನ ಅಪಾರ್ಟ್‌ಮೆಂಟ್‌ ಒಂದರಲ್ಲಿ ಕ್ರೀಯಾಶೀಲ ತಂಡವನ್ನು ಕಟ್ಟಿಕೊಂಡು ಅಧಿಕಾರ ರಾಜಕೀಯದ ಕಣಕ್ಕೆ ಇಳಿದಿದ್ದಾರೆ. ಸಾಮಾನ್ಯವಾಗಿ ಸ್ವತಂತ್ರ ಅಭ್ಯರ್ಥಿಗಳು ಸ್ಪರ್ಧೆಗೆ ಇಳಿದಾಗ ಗಮನ ಸೆಳೆಯಲು ಹರಸಾಹಸ ಪಡಬೇಕಾಗುತ್ತದೆ. ಆದರೆ ಇಂತಹದೊಂದು ಮಿತಿ ಪ್ರಕಾಶ್ ರಾಜ್ ಅವರಿಗಿಲ್ಲ.

ಅವರು ಬೀದಿಗೆ ಇಳಿದರೆ ಸಾಕು ಜನ ಮುತ್ತಿಕೊಳ್ಳುತ್ತಿದ್ದಾರೆ. ಬೆಳ್ಳಿ ಪರದೆ, ಟಿವಿಗಳಲ್ಲಿ ಕಂಡ ಮುಖವನ್ನು ಎದುರಿಗೆ ಕಂಡಾಗ ಸಹಜವಾಗಿಯೇ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. 'ನಿಮ್ಮ ಸಮಸ್ಯೆ ಹೇಳಿ' ಎಂದಾಗ ಮನಸ್ಸು ಬಿಚ್ಚಿ ಮಾತನಾಡುತ್ತಿದ್ದಾರೆ. ಅವೆಲ್ಲವನ್ನೂ ಅವರು ವೃತ್ತಿಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ. ಹೆಚ್ಚು ಕಡಿಮೆ ಫಿಲ್ಮಿ ಶೈಲಿಯ ರಾಜನೀತಿಗೆ ಬೆಂಗಳೂರು, ಕರ್ನಾಟಕ ಸಾಕ್ಷಿಯಾಗುತ್ತಿದೆ.

ಲೋಕಸಭಾ ಚುನಾವಣೆಗೆ ರಾಷ್ಟ್ರೀಯ ಪಕ್ಷಗಳು ಅಭ್ಯರ್ಥಿಗಳನ್ನು ಘೋಷಿಸುವ ಮುನ್ನವೇ ಕಣಕ್ಕಿಳಿದಿರುವ ನಟ ಪ್ರಕಾಶ್ ರಾಜ್, ಪರ್ಯಾಯ ರಾಜಕಾರಣದ ಹೊಸ ಅಂಶಗಳನ್ನು ಮುನ್ನೆಲೆಗೆ ತರುವ ಪ್ರಯತ್ನದಲ್ಲಿರುವಂತೆ ಕಾಣಿಸುತ್ತಿದೆ. ಅವರ ಎಲ್ಲಾ ಮಾತುಗಳು ಪಕ್ಷ ರಾಜಕಾರಣ, ಅದಕ್ಕಿರುವ ಮಿತಿಗಳು ಹಾಗೂ ಜನಪ್ರತಿನಿಧಿಗಳ ಮೂಲಭೂತ ಕರ್ತವ್ಯಗಳ ಸುತ್ತಲೇ ಸುತ್ತುತ್ತಿವೆ.

ಅವರೊಳಗೆ ಹುಟ್ಟಿರುವ ಪ್ರಶ್ನೆಗಳಿಗೆ ಉತ್ತರವನ್ನೂ ಶಾಸನ ಸಭೆಯಲ್ಲಿ ಕಂಡುಕೊಂಡಂತೆ ಕಾಣಿಸುತ್ತಿದೆ. ಸರಕಾರದ ಯೋಜನೆಗಳ ಅನುಷ್ಠಾನದ ಅಗತ್ಯತೆಯನ್ನು ಒತ್ತಿ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ. ಜತೆಗೆ, ಪಕ್ಷ ರಾಜಕಾರಣದ ಅಪಾಯಗಳೇ ಇವತ್ತಿನ ಜನದ್ರೋಹಿ ರಾಜಕೀಯ ಪರಿಸ್ಥಿತಿಗೆ ಕಾರಣ ಎಂದು ಪ್ರತಿಪಾದಿಸುತ್ತಿದ್ದಾರೆ. ರಾಷ್ಟ್ರ ರಾಜಕಾರಣದ ಭವಿಷ್ಯದ ಮಾದರಿ ಹೇಗಿರಬೇಕು ಎಂಬುದರ ಪರಿಕಲ್ಪನೆಯನ್ನೂ ಮುಂದಿಡುತ್ತಿದ್ದಾರೆ.

ಸಾಮಾಜಿಕ ಧ್ವನಿಯಾಗಲು ಬಂದು ತಾನೇಕೆ ಜನಪ್ರತಿನಿಧಿಯಾಗುವ ನಿರ್ಧಾರಕ್ಕೆ ಬಂದೆ ಎಂಬುದರಿಂದ ಹಿಡಿದು ರಾಜ್ಯ ರಾಜಕಾರಣದ ಇವತ್ತಿನ ಪರಿಸ್ಥಿತಿ ಬಗೆಗೆ ಅವರು ಅಲೋಚನೆಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಸೋಮವಾರ ಸಂಜೆ ವೇಳೆಗೆ ‘ಸಮಾಚಾರ’ ಪ್ರಕಾಶ್ ರಾಜ್ ಜತೆ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಬೆಂಗಳೂರಿನ ಸಿವಿ ರಾಮನ್‌ ನಗರದಲ್ಲಿ ಪ್ರಚಾರದ ವೇಳೆ ಪ್ರಕಾಶ್ ರಾಜ್. 
ಬೆಂಗಳೂರಿನ ಸಿವಿ ರಾಮನ್‌ ನಗರದಲ್ಲಿ ಪ್ರಚಾರದ ವೇಳೆ ಪ್ರಕಾಶ್ ರಾಜ್. 
@prakashraaj-twitter.

ಸಮಾಚಾರ: ಕಳೆದ ಬಾರಿ ಸಿಕ್ಕಾಗಿ ನೀವು #ಜಸ್ಟ್‌ಆಸ್ಕಿಂಗ್‌ ಅಭಿಯಾನ ನಡೆಸುತ್ತಿದ್ದಿರಿ. ಅವತ್ತು ನಿಮಗೆ ಒಂದು ನೇರ ಪ್ರಶ್ನೆ ಕೇಳಿದ್ದೆವು. ಇವೆಲ್ಲಾ ಯಾಕೆ, ಮುಂದೊಂದು ದಿನ ರಾಜಕೀಯಕ್ಕೆ ದಾರಿ ಮಾಡ್ಕೊತಿದೀರಾ ಅಂತ. ಆದರೆ ನೀವು 'ಇಲ್ಲ ನಾನು ರಾಜಕೀಯಕ್ಕೆ ಬರಲ್ಲ, ಜನರ ದನಿಯಾಗಿ ಇರುತ್ತೇನೆ' ಅಂದಿದ್ರಿ. ಈಗ ಚುನಾವಣೆ ಕಣದಲ್ಲಿದ್ದೀರಾ. ಯಾಕೆ ಇಂತಹದೊಂದು ನಿರ್ಧಾರ ತೆಗೆದುಕೊಂಡಿರಿ?

ಪ್ರಕಾಶ್ ರಾಜ್: ತುಂಬಾ ಪ್ರಾಮಾಣಿಕವಾದ ಸತ್ಯ ಹೇಳಬೇಕು ಅಂದ್ರೆ ನನಗೆ ಸಕ್ರಿಯ ರಾಜಕಾರಣ ಬೇಕು ಅಂತ ಅನ್ನಿಸಲಿಲ್ಲ. ಕರ್ನಾಟಕ ಚುನಾವಣೆಗಾಗಿ ನಾನು ಬಂದವನಲ್ಲ. ನಟನಾಗಿ ನನ್ನ ಸೂಕ್ಷ್ಮ ಮನಸ್ಸಿಗೆ ಅನ್ನಿಸಿದ್ದು, ಇವು ಆತಂಕ ದಿನಗಳು ಅಂತ. ಆ ನಿಟ್ಟಿನಲ್ಲಿ ನಾನು ಮಾತನಾಡಲು ಶುರುಮಾಡಿದೆ, ಪ್ರಶ್ನೆ ಮಾಡಲು ಶುರುಮಾಡಿದೆ.

ಎಲ್ಲರೂ ಒಂದು ಹಿನ್ನೆಲೆ ಮಾಡಿಕೊಂಡು, ವೇದಿಕೆ ಮಾಡಿಕೊಂಡು, ನೆಲೆ ಕಂಡುಕೊಂಡು ಮುನ್ನೆಲೆಗೆ ಬರುತ್ತಾರೆ. ಆದರೆ ಆಳದಲ್ಲಿ ಒಂದು (ರಾಜಕೀಯ) ಇಂಗಿತ ಹೊಂದಿರುತ್ತಾರೆ. ಇಂತಹ ಅನುಮಾನಗಳು ಹಲವರ ವಿಚಾರದಲ್ಲಿ ಸತ್ಯ ಕೂಡ. ಆದರೆ ನನ್ನ ವಿಚಾರದಲ್ಲಿ ಹಾಗಲ್ಲ. ನಾನು ರಾಜಕೀಯಕ್ಕೆ ಬರುತ್ತೇನೆ ಅಂದುಕೊಂಡಿರಲಿಲ್ಲ.

ನಾನು ಪ್ರಶ್ನೆ ಮಾಡುತ್ತಾ, ಮಾಡುತ್ತಾ ಹೋದಂತೆ ಹೇಗೆ ನನ್ನನ್ನು ಕಟ್ಟಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂಬುದು ಅರಿವಿಗೆ ಬಂತು.

ನಮ್ಮ ದೇಶದಲ್ಲಿ ರಾಜಕೀಯ ಪ್ರಜ್ಞೆ ಎಲ್ಲೊ ಮಿಸ್ ಆಗುತ್ತಿದೆ. ನಮಗೆ ಗೊತ್ತಿಲ್ಲದೆ ರಾಜರು ಬೇರೆ ರೂಪದಲ್ಲಿ ಇದ್ದಾರೆ. ರಾಷ್ಟ್ರೀಯ ಪಕ್ಷಗಳ ವೇಷದಲ್ಲಿದ್ದಾರೆ. ಬರುತ್ತಾ ಬರುತ್ತಾ ಸಂವಿಧಾನ ಏನು ಹೇಳಿತು ಎಂಬುದನ್ನು ಮರೆತು ಹೋಗುತ್ತಿದ್ದೇವೆ. ಮೂಲಭೂತವಾಗಿ ಸಂವಿಧಾನದಲ್ಲಿ ಪಕ್ಷ ಎಂಬ ಪರಿಕಲ್ಪನೆಯೇ ಇಲ್ಲ. ಯಾಕಿಲ್ಲ ಎಂದು ಹುಡುಕಿಕೊಂಡು ಹೊರಟರೆ ಈ ಪಕ್ಷ ರಾಜಕಾರಣದಿಂದ ಆಗುವ ಅನಾಹುತ ಗೊತ್ತಿತ್ತು.

ಜನರಿಂದ ಆಯ್ಕೆಯಾದ ಪ್ರತಿನಿಧಿಗಳು ಒಂದು ಗುಂಪಾಗಿ ಆಡಳಿತ ನಡೆಸಬೇಕು ಎಂದು ಸಂವಿಧಾನ ಹೇಳುತ್ತದೆ. ಆದರೆ ಇವತ್ತು ಹಾಗೆ ನಡೆಯುತ್ತಿಲ್ಲ. ಹಾಗಂತ ಯಾವ ರಾಜಕೀಯ ಪಕ್ಷಗಳು ಬಹುಮತ ಪಡೆದುಕೊಳ್ಳುತ್ತಿಲ್ಲ. ಕಳೆದ 70 ವರ್ಷಗಳಲ್ಲಿ ಪಕ್ಷ ರಾಜಕಾರಣ ಬೆಳೆದು ಬಂತು. ಮತ್ತಿವತ್ತು ಅದನ್ನು ನಿರಾಕರಿಸುವ ಮನಸ್ಥಿತಿಯಲ್ಲಿದ್ದೇವೆ.

ಹೀಗಿದ್ದೂ ಇವತ್ತು ರಾಜಕೀಯ ಎಂದರೆ ಹಣ, ಜಾತಿ ನೆಲೆಗೆ ಬಂದು ನಿಂತಿದೆ. ಅದು ಬಿಜೆಪಿ ಇರಲಿ, ಕಾಂಗ್ರೆಸ್ ಇರಲಿ. ಇಂತಹ ಪರಿಸ್ಥಿತಿಯನ್ನು ಗೆಳೆಯರ ನಡುವೆ ಕುಳಿತು ಮಾತುಕತೆ ಮಾಡುತ್ತಿದ್ದಾಗ ಜನರ ನಡುವೆ ಇರುವುದು ಅಂದರೆ ಅವರ ಧ್ವನಿಯಾಗುವುದು ಅಂತ ಸಲಹೆ ಬಂತು. ನನಗೂ ಕೂಡ ಪ್ರಾಕ್ಟಿಕಲ್ ಆಗೋಣ ಅನ್ನಿಸಿತು. ಎಲ್ಲಾ ಜಾತಿ, ಭಾಷಾವಾರು ಸಮುದಾಯ ನನ್ನನ್ನು ಬೆಳೆಸಿದೆ. ಅವರಿಗಾಗಿ ನಾನು ಹೆಚ್ಚು ಹೊಣೆಗಾರಿಕೆ ತೆಗೆದುಕೊಳ್ಳಬೇಕು ಅನ್ನಿಸಿತು.

ಕಳೆದ ನವೆಂಬರ್- ಡಿಸೆಂಬರ್‌ನಲ್ಲಿ ರಾಜಕೀಯ ಸ್ಪರ್ಧೆಗೆ ತೆರೆದುಕೊಂಡೆ. ಇದೀಗ ಇಡೀ ಭಾರತ ದೇಶ ತಿರುಗಿ ನೋಡುವ ಕ್ಷೇತ್ರವಾಗಿದೆ.

‘ಪ್ರಜಾ ಪ್ರಣಾಳಿಕೆ’ ಹೆಸರಿನಲ್ಲಿ ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಚುನಾವಣೆಗೆ ಭರವಸೆಗಳನ್ನು ಸಿದ್ದಪಡಿಸುವ ಕೆಲಸದಲ್ಲಿದ್ದಾರೆ ಪ್ರಕಾಶ್‌ ರಾಜ್. 
‘ಪ್ರಜಾ ಪ್ರಣಾಳಿಕೆ’ ಹೆಸರಿನಲ್ಲಿ ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಚುನಾವಣೆಗೆ ಭರವಸೆಗಳನ್ನು ಸಿದ್ದಪಡಿಸುವ ಕೆಲಸದಲ್ಲಿದ್ದಾರೆ ಪ್ರಕಾಶ್‌ ರಾಜ್. 
@prakashraaj-twitter.

ಸಮಾಚಾರ: ಸಾಮಾಜಿಕ ಹೋರಾಟಗಳ ಮೂಲಕ ಜನರ ಧ್ವನಿಯಾದ ಚಳುವಳಿಗಳನ್ನು ಇಲ್ಲೇ ಕರ್ನಾಟಕದಲ್ಲಿ ನಾವು ನೋಡಿದ್ದೆವು. ಕೊನೆಗವು ರಾಜಕೀಯ ಪ್ರಯೋಗಕ್ಕೆ ಹೋಗಿ ಅಂತರ್ಧಾನಗೊಂಡವು. ಹೀಗಿರುವಾಗ ನೀವು ಪ್ರಾಕ್ಟಿಕಲ್ ಆದೆ, ಚುನಾವಣೆ ತೀರ್ಮಾನ ತೆಗೆದುಕೊಂಡೆ ಅನ್ನುತ್ತಿದ್ದೀರ. ನಿಮ್ಮ ಪ್ರಕಾರ, ಪ್ರಾಕ್ಟಿಕಲ್ ಆಗೋದು ಅಂದರೆ ಈ ಕಾಲಘಟ್ಟದ ಎಲ್ಲಾ ಸಾಮಾಜಿಕ ಹೋರಾಟಗಳು, ವ್ಯಕ್ತಿಗಳು ಅಧಿಕಾರ ರಾಜಕಾರಣಕ್ಕೆ ಇಳಿಯಬೇಕು ಅಂತನಾ?

ಪ್ರಕಾಶ್ ರಾಜ್: ಅಲ್ಲ, ದಲಿತ ಸಂಘರ್ಷ ಸಮಿತಿ ಇರಲಿ, ರೈತ ಸಂಘಟನೆಗಳಿರಲಿ ಕೊನೆಗೆ ಐದಾರು ಗುಂಪುಗಳಾಗಿ ಹೋದವು. ಅವು ಪಕ್ಷಗಳನ್ನು ಓಲೈಸಲು ಹೋಗಿ ದಾರಿ ತಪ್ಪಿದವು. ನಾಯಕರು ತೆಗೆದುಕೊಂಡ ತೀರ್ಮಾನದಿಂದ ಕಾರ್ಯಕರ್ತರು ದಿಕ್ಕು ತೋಚದಂತಾದರು. ಎರಡನೇ ಹಂತದ ನಾಯಕರ ಬೆಳವಣಿಗೆಯನ್ನು ಈ ಸಂಘಟನೆಗಳು ಕಾಣಲಿಲ್ಲ. ನಾನೀಗ ಹೇಳುತ್ತಿರುುದು ಪಕ್ಷ ರಾಜಕಾರಣ ಅಲ್ಲ, ಸ್ವತಂತ್ರ ರಾಜಕಾರಣ.

ನೀವು ಯಾವುದೇ ನೀತಿ ನಿರ್ಧಾರಗಳನ್ನು ನೋಡಿ, ಅದರಲ್ಲಿ ಯಾವುದೋ ಒಂದು ಪಕ್ಷದ ಹಿತ ಕಾಯುವ ಕೆಲಸ ಆಗಿರುತ್ತಯೇ ಹೊರತು, ಪ್ರಜೆಗಳ ಹಿತದೃಷ್ಟಿಯಿಂದ ಅದನ್ನು ಪ್ರಶ್ನೆ ಮಾಡುವ ನಾಯಕರು ಇಲ್ಲ. ಅಂತಹವುಗಳನ್ನು ಯಾರು ಪ್ರಶ್ನಿಸಬೇಕು. ಅದಕ್ಕಾಗಿ ಸಂಸತ್‌ ಒಳಗೇ ಹೋಗಬೇಕು. ನಾನು ಕೂಡ ಇನ್ನೊಂದು ಪಕ್ಷಕ್ಕೆ ಮಾರಿಕೊಳ್ಳಬಾರದು ಎಂಬುದು ಈ ಹಂತದಲ್ಲಿ ಮುಖ್ಯವಾಗಿರುವ ಪ್ರಕ್ರಿಯೆ. ಬಹುಶಃ ಇದು ಈ ಹೊತ್ತಿನ ರಾಜಕೀಯ ಅಗತ್ಯತೆ ಕೂಡ.

ಸಮಾಚಾರ: ಅಂದರೆ, ಇದು ಗೆಲುವಿಗಾಗಿ ನಡೆಸುತ್ತಿರುವ ಸ್ಪರ್ಧೆನಾ?

ಪ್ರಕಾಶ್ ರಾಜ್: ಖಂಡಿತಾ ಅಲ್ಲ. ಗೆಲುವು ಎಂದರೇನು? ಇದು ಯಾರ ವಿರುದ್ಧದ ಸ್ಪರ್ಧೆಯೂ ಅಲ್ಲ. ಇದು ಕ್ರಿಕೆಟ್ ಮ್ಯಾಚ್ ಅಲ್ಲ. ಒಂದು ವೇಳೆ ಗೆದ್ದರೆ ಇದು ಪ್ರಕಾಶ್ ರಾಜ್ ಎಂಬ ನಟನ ಗೆಲುವು ಅಲ್ಲ. ಆ ಭ್ರಮೆ ನನಗೆ ಇಲ್ಲ. ಬಹುಶಃ ಕೆಲವು ವರ್ಷಗಳಿಂದ ನಾನು ಆಡುತ್ತಿರುವ ಮಾತುಗಳು ಗಳಿಸಿರುವ ನಂಬಿಕೆಯ ಗೆಲುವಾಗುತ್ತದೆ. ಇದು ಹೊಸ ಸಾಧ್ಯತೆಗಳಿಗೆ ನಾಂದಿ ಹಾಡುತ್ತೆ. ಇನ್ನೊಂದಿಷ್ಟು ಸ್ವತಂತ್ರ ಅಭ್ಯರ್ಥಿಗಳು ಕಣಕ್ಕಿಳಿಯಬಹುದು.

ಇವತ್ತಿನ ರಾಜಕೀಯಕ್ಕೆ ಒಂದು ಫಾರ್ಮೆಟ್ (ಸಿದ್ಧ ಮಾದರಿ ಸೂತ್ರಗಳು) ಮಾಡಿ ಬಿಟ್ಟಿದ್ದಾರೆ. ಒಂದು ಸ್ಕ್ಯಾಮ್‌ ರೀತಿ ನಡೆಸುತ್ತಿದ್ದಾರೆ. ರಾಷ್ಟ್ರೀಯ ಪಕ್ಷಗಳು ಇಲ್ಲದೆ ಗೆಲುವು ಕಷ್ಟ ಅನ್ನುತ್ತಾರೆ. ಬೂತ್ ಮ್ಯಾನೆಜ್‌ಮೆಂಟ್ ಮಾಡಬೇಕು ಅನ್ನುತ್ತಿದ್ದಾರೆ. ರಾತ್ರೋ ರಾತ್ರಿ ದುಡ್ಡು ಹಂಚದೆ ಜನ ಮತ ಹಾಕಲ್ಲ ಅನ್ನುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಎಷ್ಟು ದಿನ ಇದನ್ನು ಸಹಿಸಿಕೊಂಡು ಇರೋಣ ಹೇಳಿ.

ನಾವು ಅಂದುಕೊಂಡಿದ್ದೇವೆ, ನಮಗೆಲ್ಲಾ ರಾಜಕೀಯ ಗೊತ್ತು ಅಂತ. ಬೆಂಗಳೂರು ಸೆಂಟ್ರಲ್ ತರಹದ ಕ್ಷೇತ್ರದಲ್ಲಿ ಜನರಿಗೆ ಎಂಪಿ ಯಾರು ಎಂದು ಗೊತ್ತಿಲ್ಲ. ಇವತ್ತಿಗೂ ಕೊಳಗೇರಿಗೆ ಹೋದರೆ ನೀರಿನ ಸಮಸ್ಯೆ ಇದೆ. ರಸ್ತೆ ರಿಪೇರಿ, ಶಾಲೆ ಸರಿ ಮಾಡಿಸಿ ಅನ್ನುತ್ತಿದ್ದಾರೆ. 70 ವರ್ಷಗಳ ನಂತರವೂ ಯಾಕೆ ಜನ ಇನ್ನೂ ಇಂತಹ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಕೋರುತ್ತಾರೆ? ಇವೆಲ್ಲಕ್ಕೂ ಒಂದು ಪರ್ಯಾಯ ಬೇಕು ಅಂತ ಅನ್ನಿಸುವುದಿಲ್ಲವಾ?.

ಒಂದು ವೇಳೆ ಇಂತಹ ಮಾತುಗಳನ್ನು ಜನ ಅರ್ಥ ಮಾಡಿಕೊಂಡು ಮತ ಹಾಕಿದರೆ ಅದು ಬದಲಾವಣೆ. ಈವರೆಗೆ ಸಾಕಷ್ಟು ಜನ ಭಾಷಣ ಮಾಡಿದ್ದಾರೆ. ಜನ ನಂಬಲು ಬೇಕಿರುವ ಎನರ್ಜಿಯನ್ನೇ ಕಳೆದುಕೊಂಡಿದ್ದಾರೆ. ಇಂತಹ ಸಮಯದಲ್ಲಿ ಪರ್ಯಾಯ ರಾಜಕಾರಣದ ಮಾದರಿ ಗೆದ್ದರೆ ಆಶಯ ಇನ್ನೊಂದಿಷ್ಟು ಗಟ್ಟಿಯಾಗುತ್ತದೆ.

ಜನವರಿ ಮೊದಲ ವಾರದಲ್ಲಿ ದಿಲ್ಲಿಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಪ್ರಕಾಶ್ ರಾಜ್ ಭೇಟಿಯ ಒಂದು ಚಿತ್ರ. 
ಜನವರಿ ಮೊದಲ ವಾರದಲ್ಲಿ ದಿಲ್ಲಿಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಪ್ರಕಾಶ್ ರಾಜ್ ಭೇಟಿಯ ಒಂದು ಚಿತ್ರ. 

ಸಮಾಚಾರ: ದಿಲ್ಲಿಗೆ ಹೋಗಿದ್ರಿ, ಕೇಜ್ರಿವಾಲ್ ಭೇಟಿ ಮಾಡಿದ್ರಿ. ಪರ್ಯಾಯ ರಾಜಕಾರಣದ ಹೊಳವುಗಳು ಏನಾದರೂ ಸಿಕ್ಕವಾ?

ಪ್ರಕಾಶ್ ರಾಜ್: ನಾನು ಕರ್ನಾಟಕದಲ್ಲಿ ಶಾಲೆಯೊಂದನ್ನು ಅಭಿವೃದ್ಧಿಪಡಿಸಲು ಕೈಗೆತ್ತಿಕೊಂಡೆ. ನಾನಾ ಸಂಸ್ಥೆಗಳು ಜತೆಯಾದವು. ಇವತ್ತು ಶಾಂತಿನಗರದಂತಹ ಕೊಳೆಗೇರಿಗಳಲ್ಲಿ ಶಾಲೆಗಳ ಪರಿಸ್ಥಿತಿ ಹೇಗಿದೆ ನೋಡಬೇಕು. ಅಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಇಂತಹ ಸಮಯದಲ್ಲಿ ದಿಲ್ಲಿಯಲ್ಲಿ ಮನೀಶ್ ಸಿಸೋಡಿಯಾ ಸರಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿದ ಮಾದರಿ ಇಷ್ಟ ಆಯ್ತು. ಅವರು ಇಲ್ಲಿಗೆ ಬಂದಾಗ ಆರೋಗ್ಯ ಮತ್ತು ಸರಕಾರಿ ಶಾಲೆಗಳ ವಿಚಾರದಲ್ಲಿ ನಿಮ್ಮ ತಜ್ಞರನ್ನು ಕೊಡಿ ಅಂತ ಕೇಳಿದ್ದೆ. ನಂತರ ನಾನು ದಿಲ್ಲಿಗೆ ಹೋದಾಗ ಕೇಜ್ರಿವಾಲ್ ಭೇಟಿ ಆದೆ.

ನನ್ನ ಸ್ಪರ್ಧೆಗೆ ಬೆಂಬಲ ಸೂಚಿಸಿದರು. ನಾವು ಅಭ್ಯರ್ಥಿ ಹಾಕುವುದಿಲ್ಲ, ನಿಮಗೆ ಬೆಂಬಲ ಕೊಡುತ್ತೀವಿ ಅಂದರು. ಅವರೂ ಕೂಡ ಪ್ರಚಾರಕ್ಕೆ ಬರುತ್ತೀನಿ ಅಂದಿದ್ದಾರೆ.

ಸಮಾಚಾರ: ಕಳೆದ 6 ತಿಂಗಳುಗಳಿಂದ ನೀವು ತುಂಬಾನೆ ಪ್ರಶ್ನೆ ಮಾಡುತ್ತಿದ್ದೀರಾ. ಇವುಗಳಿಗೆಲ್ಲಾ ಶಾಸನ ಸಭೆಗಳಲ್ಲಿ ಉತ್ತರ ಹುಡುಕಲು ಈಗ ಹೊರಟಿದ್ದೀರಾ. ಅದು ಸಾಧ್ಯ ಅಂತ ಅನ್ನಿಸುತ್ತಾ?

ಪ್ರಕಾಶ್ ರಾಜ್: ದೇಶದಲ್ಲಿ ಇರುವ ಹಲವು ಯೋಜನೆಗಳು ಸಮಸ್ಯೆಗಳಿಗೆ ಪರಿಹಾರ ನೀಡುತ್ತವೆ. ಎಷ್ಟೋ ಯೋಜನೆಗಳ ಹಣ ಬಳಕೆಯಾಗದೆ ವಾಪಾಸ್ ಹೋಗುತ್ತಿವೆ. ಪ್ರತಿಯೊಬ್ಬ ಎಂಪಿಗೂ ಅಭಿವೃದ್ಧಿಗೆ ಹಣ ಬರುತ್ತದೆ. ಆದರೆ ಆ ಹಣ ಹೇಗೆ ಖರ್ಚಾಗುತ್ತಿದೆ?

ಸಮಸ್ಯೆಗಳಿಗೆ ಪರಿಹಾರವೂ ಇದೆ. ಆದರೆ ಅದಕ್ಕೆ ಜನರಿಂದ ಆಯ್ಕೆಯಾದವರು ಹೊಣೆಗಾರಿಕೆ ಪ್ರದರ್ಶಿಸಬೇಕು. ಯಾಕೆ ಒಬ್ಬ ಎಂಪಿ ಇದರ ಬಗ್ಗೆ ಮಾತನಾಡುತ್ತಿಲ್ಲ. ಯಾವ ಮಾಧ್ಯಮಗಳಲ್ಲೂ ಒಬ್ಬ ಜನಪ್ರತಿನಿಧಿ ಜನರ ಸಮಸ್ಯೆಗಳ ಬಗ್ಗೆ, ಅವುಗಳಿಗೆ ಇರುವ ಪರಿಹಾರಗಳ ಬಗ್ಗೆ ಮುಕ್ತವಾಗಿ ಮಾತನಾಡುತ್ತಿಲ್ಲ.

ನಮ್ಮ ಸಮಯವನ್ನು ಪೋಸ್ಟರ್‌ಗಳಲ್ಲಿ, ದೊಡ್ಡ ಸಮಾರಂಭಗಳಲ್ಲಿ ಕಳೆಯಲು ನನಗೆ ಇಷ್ಟ ಇಲ್ಲ. ನಮ್ಮ ಕ್ಷೇತ್ರದ ಎಲ್ಲಾ ಅಭ್ಯರ್ಥಿಗಳು ಒಂದೆಡೆ ಸೇರಿ ಸಮಸ್ಯೆ- ಪರಿಹಾರಗಳ ಬಗ್ಗೆ ಚರ್ಚೆ ಮಾಡೋಣ. ಇಲ್ಲಿಗೆ ರಾಹುಲ್ ಗಾಂಧಿ ಬರಬೇಕಿಲ್ಲ, ನರೇಂದ್ರ ಮೋದಿ ಬರಬೇಕಿಲ್ಲ. ಅವರಾರೂ ಈ ಕ್ಷೇತ್ರದ ಸಂಸದರಲ್ಲ. ನೀನು ಈ ಕ್ಷೇತ್ರದ ಪ್ರತಿನಿಧಿ, ನಾನು ಈ ಕ್ಷೇತ್ರದ ಮತದಾರ. ಇಬ್ಬರ ನಡುವೆ ಚರ್ಚೆ ನಡೆಯಲಿ. ಅಂತಿಮವಾಗಿ ಜನ ಇಂತಹ ವಿಚಾರಗಳ ಕಾರಣಕ್ಕೆ ಅವರ ಪ್ರತಿನಿಧಿಗಳನ್ನು ಆಯ್ಕೆ ಮಾಡಲಿ.

ಸಮಾಚಾರ: ಮೊನ್ನೆ ಶಾಂತಿನಗರ ಕ್ಷೇತ್ರದಲ್ಲಿ ನಿಮ್ಮ ಪ್ರಚಾರಕ್ಕೆ ಅಡ್ಡಿ ಪಡಿಸಲಾಯಿತು. ಯಾರು ಈ ಕೆಲಸ ಮಾಡಿದ್ದು?

ಪ್ರಕಾಶ್ ರಾಜ್: ಅದು ಎಲ್ಲರಿಗೂ ಗೊತ್ತಿರುವ ಓಪನ್ ಸೀಕ್ರೆಟ್. ನಾನು ಸ್ವತಂತ್ರ ಅಭ್ಯರ್ಥಿ. ಈ ಕ್ಷೇತ್ರದ ಪೊಲೀಸ್ ಅಧಿಕಾರಿ ಯಾರ ಮಾತು ಕೇಳುತ್ತಾನೆ ಹೇಳಿ? ನಾನು ಮನೆಯಿಂದ ಮನೆಗೆ ಜನರ ಪ್ರಣಾಳಿಕೆ ಎಂದು ಹೋಗುತ್ತಿದ್ದೇನೆ. ಸಾವಿರಾರು ಜನರನ್ನು ಕಟ್ಟಿಕೊಂಡು ಓಡಾಡುತ್ತಿಲ್ಲ. ನನ್ನ ಜತೆ ಬರುವ ಹುಡುಗರನ್ನು ಕೇಸಾಕ್ತೀವಿ ಎಂದು ಹೆದರಿಸುತ್ತಿದ್ದಾರೆ. ಅನುಮತಿ ನೀಡಲು ಸಾಧ್ಯ ಇಲ್ಲ ಅನ್ನುತ್ತಿದ್ದಾರೆ.

ನನಗೆ ಜಗಳ ಮಾಡಲು ಇಷ್ಟ ಇಲ್ಲ. ತೊಡೆ ತಟ್ಟಿಕೊಂಡು ನಿಲ್ಲಲು ಇಷ್ಟ ಇಲ್ಲ. ನನ್ನ ಜತೆ ಇರುವವರನ್ನು ರೌಡಿ ಶೀಟರ್‌ಗಳಾನ್ನಾಗಿ ಮಾಡುವ ಕೆಲಸ ಮಾಡಲ್ಲ. ನೇರವಾಗಿ ಕಮಿಷನರ್ ಹತ್ತಿರ ಮಾತನಾಡಿದೆ. ಕಾನೂನಾತ್ಮಕವಾಗಿ ಸಮಸ್ಯೆ ಏನಿದೆ ಹೇಳಿ ಅಂದೆ. ಹೇಗೆ ಒಬ್ಬ ಇನ್ಸ್‌ಪೆಕ್ಟರ್‌ ಅನುಮತಿ ಕೊಡಲು ಸಾಧ್ಯ ಇಲ್ಲ ಅಂತಾರೆ ಅಂತ ಕೇಳಿದೆ. ಯಾರಾದರೂ ಕಾನೂನು ಇಟ್ಟುಕೊಂಡು ದಬ್ಬಾಳಿಕೆ ಮಾಡಲು ಹೋದರೆ, ಅದೇ ಕಾನೂನು ನನಗೆ ಸಹಾಯಕ್ಕೆ ಬರುತ್ತದೆ ಎಂಬ ಅರಿವು ನನಗೆ ಇದೆ.

ನಮ್ಮ ದೇಶದಲ್ಲಿ ನಾಯಕರು ರಾಜಕಾರಣ ಮಾಡುತ್ತ ಒಂದಷ್ಟು ಯುವಕರನ್ನು ಐದು ವರ್ಷದ ಬಿಜಿನೆಸ್‌ಗೆ ಬಳಸುತ್ತಿದ್ದಾರೆ. ಪೊಲೀಸ್‌ ಸ್ಟೇಷನ್‌ಗೆ ಹೋದರೆ ಕಾಪಾಡ್ತೀವಿ ಎನ್ನುತ್ತಿದ್ದಾರೆ. ನನ್ನ ಯುವಕರು ಪೊಲೀಸ್‌ ಸ್ಟೇಷನ್‌ಗೆ ಹೋಗಬೇಕಾ, ಕೆಲಸಕ್ಕೆ ಹೋಗಬೇಕಾ? ಮುಂದಿನ ದಿನಗಳಲ್ಲಿ ಇಂತಹ ನಾನ್‌ಸೆನ್ಸ್‌ಗಳನ್ನು ನೋಡುತ್ತೀವಿ. ಬರಲಿ, ಎದುರಿಸೋಣ.

ಸಮಾಚಾರ: ಇಷ್ಟೆಲ್ಲದರ ಜತೆಗೆ ಭವಿಷ್ಯವನ್ನು ಹೇಗೆ ನೋಡುತ್ತೀರಿ?

ಪ್ರಕಾಶ್ ರಾಜ್‌: ನನಗೆ 2019ಕ್ಕೆ ಯಾರೋ ಒಬ್ಬರು ಬಹುಮತ ಪಡೆದು ಅಧಿಕಾರಕ್ಕೆ ಬರುತ್ತಾರೆ ಅನ್ನಿಸುತ್ತಿಲ್ಲ. ಮಹಾಘಟ್‌ಬಂಧನ್, ಫೆಡರಲ್‌ ಫ್ರಂಟ್‌ ಹೀಗೆ ಒಂದಷ್ಟು ಚಟುವಟಿಕೆಗಳು ನಡೆಯುತ್ತಿವೆ. ಈ ಬಾರಿ ದೇಶ ಹಲವು ನಾಯಕರ ಸಮಾಗಮದ ರಾಜಕೀಯವನ್ನು ನೋಡಲಿದೆ. ಇದು ನಮ್ಮಂತಹ ವೈವಿಧ್ಯತೆ ಹೊಂದಿರುವ ದೇಶದ ಭವಿಷ್ಯದ ರಾಜಕಾರಣ ಕೂಡ.

ಇದರ ಜತೆಗೆ ಒಂದಷ್ಟು ಹೊಸ ವಿಚಾರಗಳ ಕುರಿತು ನಾವು ಸ್ಪಷ್ಟತೆಗೆ ಬರಬೇಕಿದೆ. ಯಾವುದು ರಾಜ್ಯದ ವಿಚಾರಗಳು, ಯಾವುದು ಕೇಂದ್ರದ ವಿಚಾರಗಳು ಎಂಬುದನ್ನು ನಾವು ವಿಭಾಗಿಸಿಕೊಳ್ಳಬೇಕಿದೆ. ನನ್ನ ಪ್ರಕಾರ, ಕೃಷಿ, ಶಿಕ್ಷಣ, ಆರೋಗ್ಯ ರಾಜ್ಯದ ವಿಚಾರಗಳು. ಕಾವೇರಿಯಂತಹ ವಿಚಾರಗಳನ್ನು ನಾವು ಇಲ್ಲಿಯೇ ಪರಿಹರಿಸಿಕೊಳ್ಳಬೇಕು. ರೈತರ ಸಮಸ್ಯೆಗಳಿಗೆ ನಾವೇ ಉತ್ತರ ಕಂಡುಕೊಳ್ಳಬೇಕು. ಹೀಗಾಗಿ ರಾಜ್ಯಗಳಿಗೆ ಹೆಚ್ಚಿನ ಅಧಿಕಾರ ಬೇಕಾಗಿದೆ.

ಈ ನಿಟ್ಟಿನಲ್ಲಿ ಸಂಸದರು ಯೋಚನೆ ಮಾಡದೆ ಹೋದರೆ ಮುಂದಿನ ದಿನಗಳಲ್ಲಿ ನಾವು ಒಂದು ದೇಶವಾಗಿ ವಿಫಲವಾಗುತ್ತೇವೆ. ಹೀಗಾಗಿ ನಾವು ದೇಶಕ್ಕೋಸ್ಕರ ಸಾಕಷ್ಟು ನಾಯಕರು ಕುಳಿತುಕೊಂಡು ಆಲೋಚನೆ ಮಾಡುವ ಭಾರತ ಸರಕಾರವನ್ನು ಎದುರು ನೋಡಬೇಕಿದೆ.

ಪ್ರಕಾಶ್ ರಾಜ್. 
ಪ್ರಕಾಶ್ ರಾಜ್. 
/biographia

ಸಮಾಚಾರ: ಕೊನೆಯ ಪ್ರಶ್ನೆ. ಕರ್ನಾಟಕದ ಇವತ್ತಿನ ಸಮ್ಮಿಶ್ರ ರಾಜಕಾರಣ ನೋಡುತ್ತಿದ್ದರೆ ಏನನ್ನಿಸುತ್ತೆ? ಸರಕಾರದ ನಡೆಗಳ ಬಗ್ಗೆ ತೃಪ್ತಿ ಇದೆಯಾ?

ಪ್ರಕಾಶ್ ರಾಜ್: ಇಲ್ಲ. ನೋಡಿ ಇಲ್ಲಿ ಮೂಲಭೂತವಾಗಿ ಒಂದು ವೃತ್ತಿಪರತೆ, ಶಿಸ್ತು, ಅಪ್ಪಿಕೊಳ್ಳುವ ಗುಣವೇ ಇಲ್ಲ. ಕುಮಾರಸ್ವಾಮಿ ಸಿಎಂ ಆಗಿದ್ದಾರೆ. ಆಗಲಿ ಬಿಡಿ. ಬಿಜೆಪಿ ವಿರೋಧ ಪಕ್ಷದಲ್ಲಿದೆ. ವಿರೋಧ ಪಕ್ಷವಾಗಿ ಯಾಕೆ ಕೆಲಸ ಮಾಡುತ್ತಿಲ್ಲ. ಒಂದು ವೇಳೆ ಬಿಜೆಪಿ ಅಧಿಕಾರದಲ್ಲಿದ್ದರೆ ಇವರು ಇಂತಹದ್ದೇ ನಾಟಕ ಆಡಬೇಕಾ?

ಇದರ ಜತೆಗೆ ಒಂದಷ್ಟು ಅತೃಪ್ತರಂತೆ. ಅವರ ಸಮಸ್ಯೆ ಏನು ಅಂದರೆ ಮಂತ್ರಿ ಸ್ಥಾನ ಸಿಕ್ಕಿಲ್ಲ ಅಂತಾರೆ. ಕೆಲವರನ್ನು ಕೇಳಿದರೆ- ಅವರ ಹೆಸರನ್ನು ಹೇಳುವುದಿಲ್ಲ- ನಿಮಗೇನು ಗೊತ್ತು ನಮ್ಮ ಕಷ್ಟ, ನೀವು ಎಲೆಕ್ಷನ್‌ಗೆ ನಿಂತಿದ್ರೆ ಗೊತ್ತಾಗುತ್ತಿತ್ತು ಅಂತಾರೆ. ಏನ್ರಪ್ಪಾ ಅಂದ್ರೆ, ಚುನಾವಣೆಗಾಗಿ ಮನೆ ಮಠ ಮಾರಿಕೊಂಡಿದ್ದೀವಿ ಅಂತಾರೆ. ದುಡ್ಡಿನ ರಾಜಕೀಯ ಮಾಡೋಕೆ ಹೋಗಿ ಹೀಗೆ ಸಿಕ್ಕಾಕೊಂಡಿದ್ದಾರೆ. ಇವರು ದೇಶ ಮಾರಲು ತಯಾರಿದ್ದಾರೆ. ಇವರೆಲ್ಲಾ 'ಬಂಚ್ ಆಫ್‌ ಜೋಕರ್ಸ್‌' ಅಷ್ಟೆ.

ನಾನು ಈಗ ರಾಷ್ಟ್ರೀಯ ರಾಜಕಾರಣದತ್ತ ನೋಡುತ್ತಿದ್ದೇನೆ. ಒಂದು ವೇಳೆ ನಾಳೆ ಅದು ರಾಜ್ಯದ ಮೇಲೆ ಪರಿಣಾಮ ಬೀರಬಹುದು. ಇದರಿಂದ ಒಂದಷ್ಟು ಹೊಸ ಯುವಕರು ಇಲ್ಲಿ ಶಾಸಕರಾಗಿ ಬರಲಿ. ಚೇಲಾಗಿರಿ ಮಾಡಿಕೊಂಡು ನಾಯಕರಾಗುವುದಕ್ಕಿಂತ ಕೆಲಸ ಮಾಡಿ ನಾಯಕರಾಗಲಿ.

ಕೆಲವರು ಇದನ್ನು ಐಡಿಯಲಿಸ್ಟಿಕ್ ಅಂತಾರೆ. ಮುಂದಿನ ಆರೇಳು ತಿಂಗಳು ಇದೊಂದು ಪ್ರಯೋಗ. ಇದರಿಂದ ನಾನು ಕಳೆದುಕೊಳ್ಳುವುದೇನೂ ಇಲ್ಲ. ಒಂದು ವೇಳೆ ಗೆದ್ದರೆ ಇನ್ನೊಂದಿಷ್ಟು ಕೆಲಸ ಮಾಡಬಹುದು. ಚುನಾವಣೆಗೆ ಸ್ಪರ್ಧಿಸಿದ ಕಾರಣ ಕನಿಷ್ಠ ಇವೆಲ್ಲವನ್ನು ಮಾತನಾಡಲು ಅವಕಾಶ ಸಿಕ್ಕಿದೆ. ನಾಲ್ಕಾರು ಭಾಷೆಗಳಲ್ಲಿ ಜನ ಕೇಳಿಕೊಳ್ಳುತ್ತಿದ್ದಾರೆ. ನಮ್ಮ ಕ್ಷೇತ್ರದ ಮತದಾರ ಮಾತ್ರ ಅಲ್ಲ, ಆಯಾ ರಾಜ್ಯಗಳಲ್ಲೂ ಅವರು ಯೋಚನೆ ಮಾಡಲಿ ಬಿಡಿ. ಅದು ಮುಖ್ಯ.