samachara
www.samachara.com
18=1; ಮನೆ ಮನೆ ಕೇಬಲ್‌ಗೆ ‘TRAI’ ಕೊರೆದ ರಿಲಯನ್ಸ್‌; ಪರಿಣಾಮ & ಭವಿಷ್ಯ: ಭಾಗ- 2
COVER STORY

18=1; ಮನೆ ಮನೆ ಕೇಬಲ್‌ಗೆ ‘TRAI’ ಕೊರೆದ ರಿಲಯನ್ಸ್‌; ಪರಿಣಾಮ & ಭವಿಷ್ಯ: ಭಾಗ- 2

“ಮುಖೇಶ್‌ ಅಂಬಾನಿ ಎಲೆಕ್ಟ್ರಾನಿಕ್‌ ಮೀಡಿಯಾವನ್ನು ಸಂಪೂರ್ಣ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲಿದ್ದಾರೆ,” ಎನ್ನುತ್ತಾರೆ ಪ್ಯಾಟ್ರಿಕ್‌ ರಾಜು. ಹೇಗೆ? ಸ್ಟೋರಿ ಓದಿ.

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

...ಹೇಗೆ?

ಟಿವಿ ವಾಹಿನಿಗಳ ಉದ್ಯಮದಲ್ಲಿ ಈಗಾಗಲೇ ಜಾಹೀರಾತು, ಟಿವಿ ವಾಹಿನಿಗಳ ಖರೀದಿ, ಅಂತರಾಷ್ಟ್ರೀಯ ವಿಷಯ-ವಸ್ತುಗಳ ಮೇಲಿನ ಹಕ್ಕುಗಳನ್ನು ಪಡೆದುಕೊಂಡು ಈಗಾಗಲೇ ಒಂದು ಹಂತದ ನಿಯಂತ್ರಣವನ್ನು ಮುಖೇಶ್‌ ಅಂಬಾನಿ ಸಾಧಿಸಿದ್ದಾರೆ. ಇನ್ನು ಬಾಕಿ ಉಳಿದಿರುವುದು ಕೇಬಲ್‌ ಅಥವಾ ಮನೆ ಮನೆಗೆ ಟಿವಿ ತಲುಪಿಸುವ ಜಾಲ ಮಾತ್ರ.

ಜಿಯೋ ನಂತರ ಮನೆ ಮನೆಗೆ ಗಿಗಾ ಬೈಟ್‌ ವೇಗದಲ್ಲಿ ಬ್ರಾಂಡ್‌ಬ್ಯಾಂಡ್‌ ನೀಡುವುದಾಗಿ, ಜತೆಗೆ ಕೇಬಲ್‌ ಟಿವಿ ಸೇವೆಗಳನ್ನು ನೀಡುವುದಾಗಿ ಮುಖೇಶ್‌ ಅಂಬಾನಿ ಘೋಷಿಸಿದ್ದರು.

ಆದರೆ ಉಳಿದೆಲ್ಲಾ ಉದ್ಯಮಗಳಿಗೆ ಹೋಲಿಸಿದರೆ ಕೇಬಲ್‌ ಉದ್ಯಮ ಸ್ಥಳೀಯ ಶಕ್ತಿಗಳ ಬಿಗಿ ಹಿಡಿತದಲ್ಲಿದೆ. ಹಾಗಾಗಿ ಮನೆ ಮನೆಗೆ ಬ್ರಾಡ್‌ಬ್ಯಾಂಡ್‌, ಕೇಬಲ್‌ ಸಂಪರ್ಕ ನೀಡುತ್ತೇವೆ ಎಂದು ಮುಖೇಶ್‌ ಅಂಬಾನಿ ಹೊರಡುತ್ತಿದ್ದಂತೆ, ಅದಾಗಲೇ ಮಾರುಕಟ್ಟೆ ಮೇಲೆ ನಿಯಂತ್ರಣ ಸಾಧಿಸಿದವರು ಕೇಬಲ್‌ ಕಟ್‌ ಮಾಡಿದರು. ಮಹಾರಾಷ್ಟ್ರದಲ್ಲಿ ಶಿವಸೇನೆ ಕಡೆಯಿಂದ ತೀವ್ರ ವಿರೋಧ ಕೇಳಿ ಬಂತು. ಹೀಗಾಗಿ, “ತಮ್ಮ ಕೇಬಲ್‌ ಜಾಲ ಸ್ಥಾಪಿಸುವ ಅಂಬಾನಿ ಕನಸು ನನಸಾಗಲಿಲ್ಲ,” ಎನ್ನುತ್ತಾರೆ ಕರ್ನಾಟಕ ರಾಜ್ಯ ಕೇಬಲ್‌ ಆಪರೇಟರ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ಪ್ಯಾಟ್ರಿಕ್‌ ರಾಜು.

ಆಗ ಅಂಬಾನಿಗೆ ಕಾಣಿಸಿಕೊಂಡಿದ್ದೇ ಡೆನ್‌ ಮತ್ತು ಹಾಥ್‌ವೇ ಎಂಬ ಅದಾಗಲೇ ಸ್ಥಾಪಿತವಾಗಿ ಮಾರುಕಟ್ಟೆ ಮೇಲೆ ಅಧಿಪತ್ಯ ಸ್ಥಾಪಿಸಿದ್ದ ಕಂಪನಿಗಳು. ಎರಡೂ ಕಂಪನಿಗಳ ಖರೀದಿಗೆ ಮುಂದಾದ ಅಂಬಾನಿಗೆ ಸ್ಪರ್ಧಾತ್ಮಕ ಆಯೋಗ ಅಡ್ಡಿಯಾಗಿ ನಿಂತಿತು. ಇದೀಗ ಎರಡು ದಿನಗಳ ಹಿಂದೆ ‘ಡೆನ್‌ ನೆಟ್ವರ್ಕ್‌’ ಮತ್ತು ‘ಹಾಥ್‌ ವೇ ಕೇಬಲ್‌ & ಡಾಟಾಕಾಂ’ನಲ್ಲಿ 5,230 ಕೋಟಿ ರೂಪಾಯಿ ಹೂಡಿಕೆ ಮಾಡಲು ಸ್ಪರ್ಧಾತ್ಮಕ ಆಯೋಗ ಒಪ್ಪಿಗೆ ನೀಡಿದೆ. ಈ ಮೂಲಕ 750 ನಗರಗಳ 2.4 ಕೋಟಿ ಗ್ರಾಹಕರನ್ನು ಅವರು ರಾತ್ರಿ ಬೆಳಗಾಗುವ ಮೊದಲು ತಲುಪಿದ್ದಾರೆ.

ಡೆನ್‌, ಹಾಥ್‌ ವೇ ಎಂಬ ಕೇಬಲ್‌ ಟಿವಿ ಜಾಲದ ಪ್ರಮುಖ ಕಂಪನಿಗಳೆರಡು ಇವತ್ತು ರಿಲಯನ್ಸ್‌ ಪಾಲಾಗಿವೆ.
ಡೆನ್‌, ಹಾಥ್‌ ವೇ ಎಂಬ ಕೇಬಲ್‌ ಟಿವಿ ಜಾಲದ ಪ್ರಮುಖ ಕಂಪನಿಗಳೆರಡು ಇವತ್ತು ರಿಲಯನ್ಸ್‌ ಪಾಲಾಗಿವೆ.
/ಟೆಲಿವಿಷನ್‌ ಪೋಸ್ಟ್‌

ಅಲ್ಲಿಗೆ ಜಾಹಿರಾತು, ಟಿವಿ ವಾಹಿನಿಗಳ ಸಮೂಹ ಮತ್ತು ಇದೀಗ ಕೇಬಲ್‌ ಜಾಲದ ಮೂಲಕ ಗ್ರಾಹಕರ ಮೇಲೆ ಹಿಡಿತ ಸಾಧಿಸಿದ ಅಂಬಾನಿ ಇದೀಗ ಮನೆಯಲ್ಲಿ ಕುಳಿತು ಟಿವಿ ನೋಡುವ ಜನರಿಂದ ಹಣ ವಸೂಲಿಗೂ ಮುಂದಾಗಿದ್ದಾರೆ ಎನ್ನುತ್ತಾರೆ ಪ್ಯಾಟ್ರಿಕ್‌ ರಾಜು. ಅದಕ್ಕೆ ಪೂರಕವಾಗಿ ನಡೆಯುತ್ತಿರುವ ಬೆಳವಣಿಗೆಯೇ ನೂತನ ಕೇಬಲ್‌ ಮತ್ತು ಡಿಟಿಎಚ್‌ ದರ ನಿಯಮ.

ಅಂಬಾನಿ ಮಹತ್ವಾಕಾಂಕ್ಷೆಗೆ ಟ್ರಾಯ್‌ ನೀರು-ಗೊಬ್ಬರ:

ಸದ್ಯ ದೇಶದಲ್ಲಿ ನಡೆಯುತ್ತಿರುವ ಬಹುದೊಡ್ಡ ಚರ್ಚೆ ಫೆಬ್ರವರಿ 1ರಿಂದ ಜಾರಿಯಾಗಲಿರುವ ನೂತನ ಕೇಬಲ್‌ ಮತ್ತು ಡಿಟಿಎಚ್‌ ದರ ನಿಯಮ. ಇದನ್ನು ಜಾರಿಗೆ ತರುತ್ತಿರುವುದು, ಟ್ರಾಯ್‌ ಎಂದು ಸಂಕ್ಷಿಪ್ತವಾಗಿ ಕರೆಯಲ್ಪಡುತ್ತಿರುವ ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ; ಹೆಸರೇ ಹೇಳುವಂತೆ ಟ್ರಾಯ್‌ ನಿಯಂತ್ರಣ ಪ್ರಾಧಿಕಾರ. ಆದರೆ ಈ ಟ್ರಾಯ್‌ ನಿಯಂತ್ರಕನ ಪಾತ್ರ ಬಿಟ್ಟು, ಸುಲಿಗೆಗೆ ಅವಕಾಶ ನೀಡಲು ಹೊರಟಿದೆ ಎಂಬುದು ಕೇಬಲ್‌ ಆಪರೇಟರ್ಸ್‌ ವಾದ.

2011ಕ್ಕೂ ಮೊದಲು ಕೇಬಲ್‌ ಮೂಲಕ 80-100 ಚಾಲನ್‌ಗಳನ್ನು ಕೇಬಲ್‌ ಆಪರೇಟರ್‌ಗಳು ಮನೆಗಳಿಗೆ ನೀಡುತ್ತಿದ್ದರು. ಅನಲಾಗ್‌ ವ್ಯವಸ್ಥೆ ಮೂಲಕ ಈ ಪ್ರಕ್ರಿಯೆ ನಡೆಯುತ್ತಿತ್ತು. ಮುಂದೆ ಡಿಜಿಟಲೀಕರಣ ಎಂಬ ಮಂತ್ರ ಪಠಿಸಿದ ಕೇಂದ್ರ ಸರಕಾರ, ಸೆಟ್‌ಟಾಪ್‌ ಬಾಕ್ಸ್‌ ಅಳವಡಿಸುವುದನ್ನು ಕಡ್ಡಾಯಗೊಳಿಸಿತು. ಇದಕ್ಕೆ ಟ್ರಾಯ್‌ ಕೂಡ ಬೆಂಬಲ ನೀಡಿತು.

“ಟ್ರಾಯ್‌ ಹೇಳಿದಂತೆ ಗ್ರಾಹಕರ ಜೇಬಿಗೆ 1200-1500 ರೂಪಾಯಿ ಹೊರೆ ಹಾಕಿ ಸೆಟ್‌ ಟಾಪ್‌ ಬಾಕ್ಸ್‌ ಅಳವಡಿಸಿದೆವು. ಕೇಳಿದರೆ ಹೆಚ್ಚಿನ ಚಾನಲ್‌ ಬರುತ್ತದೆ ಎಂದು ಹೇಳಿದರು,” ಎನ್ನುತ್ತಾರೆ ರಾಜು.

"ಅಳವಡಿಕೆಯಾದ ಹೊಸ ತಂತ್ರಜ್ಞಾನದಲ್ಲಿ ನಾವು ತಿಂಗಳಿಗೆ 250-300 ರೂಪಾಯಿ ಪಡೆದುಕೊಂಡು 400-450 ಚಾನಲ್‌ಗಳನ್ನು ನೀಡುತ್ತಿದ್ದೆವು. ಈಗ ಕೇಳಿದರೆ, ಗ್ರಾಹಕರಿಗೆ ಹತ್ತಿಪ್ಪತ್ತು ಚಾನಲ್‌ಗಳು ಸಾಲುತ್ತವೆ. ಅನಗತ್ಯ ಚಾನಲ್‌ಗಳನ್ನು ನೀಡುತ್ತಿದ್ದೀರಿ ಎಂದು ನಮ್ಮ ಮೇಲೆಯೇ ಗೂಬೆ ಕೂರಿಸುತ್ತಿದ್ದಾರೆ,” ಎನ್ನುತ್ತಾರೆ ಅವರು.

“ಗ್ರಾಹಕರಿಗೆ ಅಷ್ಟೊಂದು ಚಾನಲ್‌ಗಳು ಬೇಡ ಅಂದ ಮೇಲೆ, 3,000ದವರೆಗೆ ಚಾನಲ್‌ಗಳು ಬರುತ್ತವೆ ಎಂದು ಹೇಳಿ ಸೆಟ್‌ ಟಾಪ್‌ ಬಾಕ್ಸ್‌ ಅಳವಡಿಕೆ ಮಾಡಿಸಿದ್ದು ಯಾಕೆ?,” ಎಂದು ಪ್ರಶ್ನಿಸುತ್ತಾರೆ ಅವರು.

ಆದರೆ ಟ್ರಾಯ್‌ ಮಾತ್ರ, ‘ಕೇಬಲ್‌ ಟಿವಿ ನೆಟ್ವರ್ಕ್‌ಗಳಲ್ಲಿ ಪಾರದರ್ಶಕತೆ ಬೇಕಿದೆ. ಗ್ರಾಹಕರಿಗೆ ಅವರ ಆಯ್ಕೆಯ ಚಾನಲ್‌ಗಳನ್ನು ವೀಕ್ಷಿಸುವ ಅವುಗಳಿಗೆ ಮಾತ್ರ ಪಾವತಿಸುವ ಸ್ವಾತಂತ್ರ್ಯ ಬೇಕು. ಹೊಸ ನೀತಿಯಲ್ಲಿ ಗ್ರಾಹಕನೇ ದೊರೆ’ ಎನ್ನುತ್ತಿದೆ.

ಆದರೆ ಇದೆಲ್ಲಾ ಸುಳ್ಳು ಎನ್ನುತ್ತಿದ್ದಾರೆ ಪ್ಯಾಟ್ರಿಕ್‌ ರಾಜು. ದೊರೆ ಗ್ರಾಹಕನಲ್ಲ, ಅಂಬಾನಿ ಎಂದು ನೇರ ವಾಗ್ದಾಳಿ ನಡೆಸುತ್ತಾರೆ ಅವರು. ಜತೆಗೆ ಉದ್ಯಮದ ಒಳ ಹೊರಗನ್ನು ಇಂಚಿಂಚಾಗಿ ವಿವರಿಸುತ್ತಾರೆ.

ಗ್ರಾಹಕನಲ್ಲ; ಅಂಬಾನಿ ದೊರೆ!

ಭಾರತದಲ್ಲಿ ಟಿವಿಗಳಿಗೆ ರೇಟಿಂಗ್‌ ನೀಡುವ ‘ಬಾರ್ಕ್‌’ನ ‘ಬ್ರಾಡ್‌ಕಾಸ್ಟ್‌ ಇಂಡಿಯಾ ಸರ್ವೇ-2018’ರ ಪ್ರಕಾರ 2018ರ ಮಾರ್ಚ್‌ಗೆ ದೇಶದಲ್ಲಿರುವ ಟಿವಿಗಳ ಸಂಖ್ಯೆ ಬರೋಬ್ಬರಿ 19.7 ಕೋಟಿ. ನೋಡುಗರ ಸಂಖ್ಯೆ 83.5 ಕೋಟಿ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
/ಈಸ್ಟ್‌ವೆಸ್ಟ್‌ ಡಾಟ್‌ ಆರ್ಗ್

ಇದರಲ್ಲಿ ಕೇಬಲ್‌ ಜಾಲದ್ದೇ ಸಿಂಹ ಪಾಲು. ನಂತರದ ಸ್ಥಾನದಲ್ಲಿ ನೇರವಾಗಿ ಮನೆಗಳಿಗೆ ಚಾನಲ್‌ಗಳನ್ನು ತಲುಪಿಸುವ ಡಿಟಿಎಚ್‌ ಇದೆ. ಈ ಕೇಬಲ್‌ ನೆಟ್ವರ್ಕ್‌ ಮೂರು ಹಂತದಲ್ಲಿ ಕೆಲಸ ಮಾಡುತ್ತದೆ. ಟಿವಿ ವಾಹಿನಿಯವರು ಕಾರ್ಯಕ್ರಮಗಳನ್ನು ರೆಕಾರ್ಡ್‌ ಮಾಡಿ ಅವುಗಳನ್ನು ಗೂಢಲಿಪೀಕರಿಸಿ (ಎನ್‌ಕ್ರಿಪ್ಟ್) ಉಪಗ್ರಹಗಳಿಗೆ ಕಳುಹಿಸುತ್ತಾರೆ.

ಅಲ್ಲಿಂದ ‘ಎಂಎಸ್‌ಒ’ ಎಂದು ಕರೆಯಲ್ಪಡುವ ‘ಮಲ್ಟಿ ಸಿಸ್ಟಂ ಆಪರೇಟರ್‌’ಗಳು ಅದನ್ನು ಡೌನ್ಲೋಡ್‌ ಮಾಡುತ್ತಾರೆ. ಈ ಡೆನ್‌, ಹಾಥ್‌ವೇಗಳೆಲ್ಲಾ ಎಂಎಸ್‌ಓಗಳ ಪಟ್ಟಿಯಲ್ಲಿ ಬರುತ್ತವೆ. ಅಲ್ಲಿಂದ ಅವುಗಳನ್ನು ಸ್ಥಳೀಯ ಕೇಬಲ್‌ಗಳಿಗೆ ಹಸ್ತಾಂತರಿಸುತ್ತಾರೆ. ಅವುಗಳನ್ನು ಈ ಸ್ಥಳೀಯ ಕೇಬಲ್‌ ಆಪರೇಟರ್‌ಗಳು ಮನೆ ಮನೆಗೆ ಹಂಚಿ, ಗ್ರಾಹಕರಿಂದ ಹಣ ಸಂಗ್ರಹಿಸುವ ಕೆಲಸ ಮಾಡುತ್ತಾರೆ.

ಇದೀಗ ಮುಖೇಶ್‌ ಅಂಬಾನಿ ಈ ಜಾಲದ ಮೇಲೆಯೇ ಪ್ರಭುತ್ವ ಸಾಧಿಸಲು ಹೊರಟಿದ್ದಾರೆ; ಆ ಮೂಲಕ ಭಾರತದ ಟಿವಿ ಮಾರುಕಟ್ಟೆಯನ್ನೇ ತಮ್ಮ ಅಂಕೆಯಲ್ಲಿಟ್ಟುಕೊಳ್ಳಲು ಹೊರಟಿದ್ದಾರೆ ಎಂಬುದು ಪ್ಯಾಟ್ರಿಕ್‌ ರಾಜು ಆರೋಪ.

ಹಾಲಿ ವ್ಯವಸ್ಥೆ ಪ್ರಕಾರ, “ನಾವು ಗ್ರಾಹಕರಿಂದ ತಿಂಗಳಿಗೆ 250- 300 ರೂಪಾಯಿ ವಸೂಲಿ ಮಾಡಿದರೆ ಅದರಲ್ಲಿ 100 ರಿಂದ 150 ರೂಪಾಯಿಗಳನ್ನು ನಾವು ಇಟ್ಟುಕೊಂಡು, ಉಳಿದಿದ್ದನ್ನು ಎಂಎಸ್‌ಒಗಳಿಗೆ ನೀಡುತ್ತಿದ್ದೆವು. ಅವರು 40-50 ರೂಪಾಯಿ ಉಳಿಸಿಕೊಂಡು ಉಳಿದಿದ್ದನ್ನು ವಾಹಿನಿಗಳಿಗೆ ಅಂದರೆ ಬ್ರಾಡ್‌ಕಾಸ್ಟರ್‌ಗಳಿಗೆ (ಪೇ ಚಾನಲ್‌ಗಳಿಗೆ ಮಾತ್ರ) ಹಸ್ತಾಂತರಿಸುತ್ತಿದ್ದೆವು. ಆದರೆ ಈಗ ಟ್ರಾಯ್‌ ನಿಯಮಗಳನ್ನು ಬದಲಾಯಿಸಿದೆ. ಮನೆಗಳಿಗೆ ಕೇಬಲ್‌ ಅಥವಾ ಡಿಟಿಎಚ್‌ ಮೂಲಕ ಚಾನಲ್‌ಗಳನ್ನು ಪ್ರಸಾರ ಮಾಡಲು ಆಪರೇಟರ್‌ಗಳಿಗೆ 130 ರೂಪಾಯಿ ಕನಿಷ್ಠ ದರವನ್ನು ನಿಗದಿ ಪಡಿಸಿದೆ. ಶೇಕಡಾ 18 ಜಿಎಸ್‌ಟಿ ಸೇರಿ ಇದು 153 ರೂಪಾಯಿಗಳಾಗುತ್ತವೆ. 153 ರೂಪಾಯಿಗೆ 100 ವಾಹಿನಿಗಳನ್ನು ಗ್ರಾಹಕರು ಪಡೆದುಕೊಳ್ಳಬಹುದು. ಇದರಲ್ಲಿ 25 ವಾಹಿನಿಗಳ ಆಯ್ಕೆ ನಿಮಗಿಲ್ಲ. ಇದರಲ್ಲಿ ಕಡ್ಡಾಯವಾಗಿ ದೂರದರ್ಶನದ ವಾಹಿನಿಗಳನ್ನು ಪ್ರಸಾರ ಮಾಡಬೇಕು. ಉಳಿಯುವುದು 75 ವಾಹಿನಿಗಳು ಮಾತ್ರ,’’ ಎಂದು ಲೆಕ್ಕಾಚಾರಗಳನ್ನು ಅವರು ಮುಂದಿಡುತ್ತಾರೆ.

ಒಂದೊಮ್ಮೆ ಇದರಲ್ಲಿ ಗ್ರಾಹಕ ಉಚಿತವಾಗಿರುವ (ಹೆಚ್ಚಿನವು ಸುದ್ದಿ ವಾಹಿನಿಗಳು ಮಾತ್ರ) ವಾಹಿನಿಗಳನ್ನು ಆಯ್ಕೆ ಮಾಡಿಕೊಂಡರೆ 153 ರೂಪಾಯಿಗೆ 100 ವಾಹಿನಿಗಳನ್ನು ಪಡೆದುಕೊಳ್ಳಬಹುದು. ಒಂದೊಮ್ಮೆ ನೀವು 100ಕ್ಕಿಂತ ಹೆಚ್ಚು ಉಚಿತವಾಗಿರುವ ವಾಹಿನಿಗಳನ್ನು ಆಯ್ಕೆ ಮಾಡಿಕೊಂಡರೂ 20 ರೂ. ಹೆಚ್ಚುವರಿ ಎನ್‌ಸಿಎಫ್‌ (ನೆಟ್ವರ್ಕ್‌ ಕ್ಯಾಪಸಿಟಿ ಫೀ) ಪಾವತಿ ಮಾಡಬೇಕು. ನೆನಪಿಡಿ ಇಲ್ಲಿ ಯಾವುದೇ ಪಾವತಿ ಮಾಡಿ ವೀಕ್ಷಿಸುವ ಚಾನಲ್‌ಗಳನ್ನು ಪ್ರಸ್ತಾಪಿಸಿಲ್ಲ.

ಪಾವತಿ ಮಾಡಿ ವೀಕ್ಷಿಸುವ ಚಾನಲ್‌ಗಳ ವಿಚಾರಕ್ಕೆ ಬಂದಾಗ (ಹೆಚ್ಚು ಕಡಿಮೆ ಎಲ್ಲಾ ಮನರಂಜನಾ ವಾಹಿನಿಗಳು, ಜನಪ್ರಿಯ ವಾಹಿನಿಗಳು ಇದರ ಅಡಿಯಲ್ಲಿ ಬರುತ್ತವೆ) ನೀವು ಅವುಗಳಿಗೆ ಪ್ರತ್ಯೇಕ ಹಣವನ್ನು ನೀಡಬೇಕಾಗುತ್ತದೆ.

ಇಲ್ಲಿ ಗ್ರಾಹಕರಿಗೆ ಎರಡು ಆಯ್ಕೆಗಳಿವೆ. ಒಂದು ಸೇವೆ ನೀಡುವ ಕಂಪನಿಗಳು ನೀಡುವ ಪ್ಯಾಕೇಜ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಎರಡನೆಯದ್ದು ಬೊಕ್ಕೆ (ವಾಹಿನಿಗಳ ಗುಚ್ಛ) ಅಥವಾ ಅಲಾ ಕಾರ್ಟ್ (ಪ್ರತ್ಯೇಕ ಚಾನಲ್‌ಗಳು) ನಿಂದ ನಿಮ್ಮ ಆಯ್ಕೆಯ ವಾಹಿನಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು.

ಪ್ಯಾಕೇಜ್‌ನಲ್ಲಿ ಕೆಲವು ಕಂಪನಿಗಳು ಮಾತ್ರ ಕಡಿಮೆ ದರ ವಿಧಿಸಿವೆ. ಉಳಿದೆಲ್ಲಾ ಕಂಪನಿಗಳಲ್ಲಿ ತಿಂಗಳ ಕನಿಷ್ಟ ದರವೇ 300 ರೂಪಾಯಿಗಿಂತ ಹೆಚ್ಚಿದೆ. ಹೀಗಿದ್ದೂ ಗ್ರಾಹಕರಿಗೆ ಸಿಗುವುದು ಕನಿಷ್ಠ ವಾಹಿನಿಗಳಷ್ಟೇ. ವಾಹಿನಿಗಳ ಗುಚ್ಛದಲ್ಲಿ ಹೆಚ್ಚು ಕಡಿಮೆ ಅನಗತ್ಯ ವಾಹಿನಿಗಳೇ ತುಂಬಿಕೊಂಡಿದ್ದು, ಸಬ್‌ಸ್ಕ್ರೈಬ್‌ ಆದರೆ ಕತ್ತರಿ ಖಚಿತ. ಇನ್ನು ಅಲಾ ಕಾರ್ಟ್‌ಗೆ ಹೋದರೆ ಬರೋಬ್ಬರಿ ದರಗಳು ಕಾಣಸಿಗುತ್ತವೆ.

ಕೇವಲ ಕನ್ನಡ ಚಾನಲ್‌ಗಳಿಗೆ ನೀಡಬೇಕಾದ ಹಣ 316 ರೂ.
ಕೇವಲ ಕನ್ನಡ ಚಾನಲ್‌ಗಳಿಗೆ ನೀಡಬೇಕಾದ ಹಣ 316 ರೂ.
/ಟ್ರಾಯ್

ಕೇವಲ ಕನ್ನಡ ಭಾಷೆಯ ವಾಹಿನಿಗಳನ್ನು ಮಾತ್ರ ಪಡೆಯಬೇಕೆಂದರೂ ಕನಿಷ್ಠ 316 ರೂಪಾಯಿ ಹಣ ತೆರಬೇಕು ಎಂದು ಟ್ರಾಯ್‌ ವೆಬ್‌ಸೈಟ್‌ ಹೇಳುತ್ತಿದೆ. ಇಲ್ಲಿ ದರಗಳ ಸಹಿತ ಚಾನಲ್‌ಗಳ ಆಯ್ಕೆಗಳನ್ನು ನೀಡಲಾಗಿದ್ದು ನಿಮಗೆ ಬೇಕಾದ ಚಾನಲ್‌ಗಳನ್ನು ಆಯ್ಕೆ ಮಾಡಿ, ದರ ಎಷ್ಟಾಗುತ್ತದೆ ಎಂಬುದನ್ನು ಲೆಕ್ಕ ಹಾಕಬಹುದಾಗಿದೆ.

ಕನ್ನಡದ ಎಸ್‌ಡಿ ಚಾನಲ್‌ಗಳ ದರ ಪಟ್ಟಿ. ಮನರಂಜನಾ ವಾಹಿನಿಗಳಿಗೆ ಗರಿಷ್ಠ ದರವಿರುವುದನ್ನು ಗಮನಿಸಬಹುದು.
ಕನ್ನಡದ ಎಸ್‌ಡಿ ಚಾನಲ್‌ಗಳ ದರ ಪಟ್ಟಿ. ಮನರಂಜನಾ ವಾಹಿನಿಗಳಿಗೆ ಗರಿಷ್ಠ ದರವಿರುವುದನ್ನು ಗಮನಿಸಬಹುದು.
/ಟ್ರಾಯ್

“ಹೀಗೊಂದು ವ್ಯವಸ್ಥೆಯಲ್ಲಿ ನಮಗೆ ಏನೂ ಸಿಗುವುದಿಲ್ಲ; ಗ್ರಾಹಕರಿಗೂ ಲಾಭವಿಲ್ಲ,” ಎನ್ನುತ್ತಾರೆ ಪ್ಯಾಟ್ರಿಕ್‌ ರಾಜು. ಮತ್ತಿದು ಇಡೀ ಟಿವಿ ವಾಹಿನಿಗಳ ಉದ್ಯಮಕ್ಕೇ ಗಂಡಾಂತರ ಎನ್ನುವುದು ಅವರ ವಾದ. ಅದಕ್ಕೆ ಕಾರಣಗಳೂ ಇವೆ.

ಈ ಹಿಂದೆ ಪೇ ಚಾನಲ್‌ಗಳಲ್ಲಿ ಶೇಕಡಾ 35 ಆಪರೇಟರ್‌ಗಳಿಗೆ, ಶೇಕಡಾ 35 ಎಂಎಸ್‌ಒಗಳಿಗೆ ಮತ್ತು ಉಳಿದ ಶೇಕಡಾ 30 ವಾಹಿನಿಗಳಿಗೆ ಎಂಬ ನಿಯಮ ಇತ್ತು. “ಹೊಸ ವ್ಯವಸ್ಥೆ ಪ್ರಕಾರ ನಮಗೆ ಏನೂ ಗಿಟ್ಟುವುದಿಲ್ಲ. ಮೂಲ ಬೆಲೆಯಲ್ಲಿ ತೆರಿಗೆ ಬಿಟ್ಟು 130 ರೂಪಾಯಿ ಇದ್ದು ಇದರಲ್ಲಿ ನಮಗೆ (ಕೇಬಲ್‌ ಆಪರೇಟರ್‌ಗಳಿಗೆ) ಶೇಕಡಾ 45, ಎಂಎಸ್‌ಒಗಳಿಗೆ ಶೇಕಡಾ 55 ಎಂದು ದರ ನಿಗದಿಯಾಗಿದೆ. ನಮಗೆ 50ರ ಆಸುಪಾಸಿನಲ್ಲಿ ಹಣ ಸಿಗುತ್ತದೆ ಅಷ್ಟೇ. ದರ ಹೆಚ್ಚಿರುವುದರಿಂದ ಜನರೂ ಹೆಚ್ಚಿನ ಪೇ ಚಾನಲ್‌ಗಳನ್ನು ಹಾಕಿಸಿಕೊಳ್ಳುವುದಿಲ್ಲ. ಒಂದೊಮ್ಮೆ ಪೇ ಚಾನಲ್‌ ಹಾಕಿಸಿಕೊಂಡರೂ ಅದರಲ್ಲಿ ಶೇಕಡಾ 10 ಎಂಎಸ್‌ಒ ಮತ್ತು ಶೇಕಡಾ 10 ನಮಗೆ ಸಿಗುತ್ತದೆ. ಉಳಿದ ಶೇಕಡಾ 80ರಷ್ಟು ಹಣ ನೇರ ಚಾನಲ್‌ಗಳಿಗೆ ಹೋಗಿ ಸೇರುತ್ತದೆ,” ಎನ್ನುತ್ತಾರೆ ಅವರು.

ಸಮಸ್ಯೆ ಇರುವುದು ಮತ್ತು ಅಂಬಾನಿಯ ನಿಜವಾದ ಆಟ ಇರುವುದು ಇಲ್ಲಿಯೇ. ಈ ಹೊಸ ವ್ಯವಸ್ಥೆ ಕೇಂದ್ರ ಸರ್ಕಾರ, ಟ್ರಾಯ್‌ ಅನ್ನು ಇಟ್ಟುಕೊಂಡು ಮುಖೇಶ್‌ ಅಂಬಾನಿ ಜಾರಿಗೆ ತರುತ್ತಿರುವ ಸ್ಕೀಂ ಎನ್ನುತ್ತಾರೆ ಪ್ಯಾಟ್ರಿಕ್‌ ರಾಜು. ಟ್ರಾಯ್‌ ವ್ಯವಸ್ಥಿತವಾಗಿ ಕಾರ್ಪೊರೇಟ್‌ ಕಂಪನಿಗಳಿಗೆ, ಪೇ ಚಾನಲ್‌ಗಳಿಗೆ ದುಡ್ಡು ಮಾಡಿಕೊಳ್ಳಲು ಏನೇನು ಬೇಕು ಅದನ್ನೆಲ್ಲಾ ಮಾಡಿಕೊಟ್ಟಿದೆ ಎನ್ನುತ್ತಾರೆ ಅವರು.

“ಹೊಸ ವ್ಯವಸ್ಥೆ ಬಗ್ಗೆ ಕೇಬಲ್‌ ಆಪರೇಟರ್‌, ಡಿಟಿಎಚ್‌ನವರಿಗೆಲ್ಲಾ ತೀವ್ರ ಅಸಮಧಾನವಿದೆ. ಆದರೆ ಯಾವುದೇ ಮಾಧ್ಯಮಗಳು ಅದರ ಬಗ್ಗೆ ವರದಿ ಮಾಡುತ್ತಿಲ್ಲ. ತನ್ನದೇ ಸಂದರ್ಶನವನ್ನು ರಿಪಬ್ಲಿಕ್‌ ಟಿವಿಯವರು ಮಾಡಿಕೊಂಡು ಹೋಗಿದ್ದರು. ಆದರೆ ಅದು ಎಲ್ಲೂ ಪ್ರಸಾರವಾಗಿಲ್ಲ. ಈ ಹೊಸ ವ್ಯವಸ್ಥೆಗೆ ಈ ರೀತಿಯ ಕಾರ್ಪೊರೇಟ್‌ ಸಂಸ್ಥೆಗಳ ಪೂರ್ಣ ಬೆಂಬಲವಿದೆ,” ಎನ್ನುವುದು ರಾಜು ಆರೋಪಗಳು.

ಇದರಿಂದ ಸಣ್ಣ ಪುಟ್ಟ ವಾಹಿನಿಗಳು ಮುಚ್ಚಿಕೊಳ್ಳುವ ಅಪಾಯವೂ ಇದೆ. ಪ್ರಮುಖ ವಾಹಿನಿಗಳಿಗೆ ಮಾತ್ರ ಗ್ರಾಹಕರು ಚಂದಾದಾರರಾದಾಗ ಉಳಿದ ವಾಹಿನಿಗಳು ವೀಕ್ಷಕರಿಲ್ಲದೆ ಸೊರಗುತ್ತವೆ. ಇದೇ ಜಾಹೀರಾತುದಾರರ ಕೈಯಲ್ಲಿರುವ ಬಾರ್ಕ್‌ ಕಡಿಮೆ ರೇಟಿಂಗ್‌ ನೀಡುತ್ತದೆ. ಅತ್ತ ವಾಹಿನಿಗಳು ವೀಕ್ಷಕರೂ ಇಲ್ಲದೆ, ಜಾಹೀರಾತೂ ಇಲ್ಲದೆ ಕೊನೆಗೊಂದು ದಿನ ಬಾಗಿಲೆಳೆದುಕೊಳ್ಳಬೇಕಾಗುತ್ತದೆ. ಇಂಥಹ ಸಂದರ್ಭದಲ್ಲಿ ಭಾರತದ ಬೃಹತ್‌ ಮಾಧ್ಯಮ ಸಂಸ್ಥೆಗಳಾದ ನೆಟ್ವರ್ಕ್‌ 18, ಝೀ, ಸೋನಿ ಮೊದಲಾದವುಗಳು ಮಾತ್ರ ಉಳಿದುಕೊಳ್ಳುವ ಅಪಾಯವಿದೆ.

“ಇದೀಗ ಡೆನ್‌, ಹಾಥ್‌ ವೇ ಖರೀದಿ ಮೂಲಕ ಆಪರೇಟರ್ಸ್‌ಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಲಾಭ ಇಲ್ಲದಿದ್ದಾಗ ಆಪರೇಟರ್‌ಗಳು ಇದರಿಂದ ಹೊರಗೆ ಹೋಗುತ್ತಾರೆ. ಆಗ ಆ ಜಾಗಕ್ಕೂ ರಿಲಯನ್ಸ್‌ ಬಂದು, ಮನೆ ಮನೆಯ ಟಿವಿ ವೀಕ್ಷಣೆ ಮೇಲೆ ರಿಲಯನ್ಸ್‌ ತನ್ನ ನಿಯಂತ್ರಣ ಹೊಂದುತ್ತದೆ. ಈ ಮೂಲಕ ಜಾಹೀರಾತು, ಟಿವಿ ವಾಹಿನಿಗಳು, ಅದನ್ನು ಪ್ರಸಾರ ಮಾಡುವ ಜಾಲ ಎಲ್ಲವನ್ನೂ ವಶಕ್ಕೆಪಡೆದುಕೊಂಡು ಅಂಬಾನಿ, ಎಲೆಕ್ಟ್ರಾನಿಕ್‌ ಮೀಡಿಯಾವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲಿದ್ದಾರೆ. “ಒಮ್ಮೆ ಮಾಧ್ಯಮ ಕೈಗೆ ಬಂದರೆ ಮುಂದಿನ ಚುನಾವಣೆಗಳಲ್ಲಿ ಉದ್ಯಮಿ ಏನು ಹೇಳುತ್ತಾರೋ ಅದು ನಡೆಯುತ್ತದೆ,” ಎಂದು ಭವಿಷ್ಯದ ದಿನಗಳ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾರೆ ರಾಜು.

ಸುದ್ದಿ ವಾಹಿನಿಗಳ ಟಿಆರ್‌ಪಿ ಸಮರ ಗೆದ್ದವರ ಸಂಭ್ರಮಿಸುತ್ತಿರುವುದು ಹೀಗೆ.
ಸುದ್ದಿ ವಾಹಿನಿಗಳ ಟಿಆರ್‌ಪಿ ಸಮರ ಗೆದ್ದವರ ಸಂಭ್ರಮಿಸುತ್ತಿರುವುದು ಹೀಗೆ.
/ಟೈಮ್ಸ್‌ ಆಫ್‌ ಇಂಡಿಯಾ

ವಿರೋಧದ ದನಿ ಹತ್ತಿಕ್ಕುವ ಯತ್ನ:

ಸುಮ್ಮನೆ ಊಹಿಸಿಕೊಳ್ಳಿ ದೇಶದ 19.7 ಕೋಟಿ ಟಿವಿ ಗ್ರಾಹಕರಲ್ಲಿ 15 ಕೋಟಿ ಜನರು ಈ ಕೇಬಲ್‌, ಡಿಟಿಎಚ್‌ ಜಾಲದಲ್ಲಿದ್ದಾರೆ. ಅವರಿಂದ ತಿಂಗಳಿಗೆ ಒಂದಷ್ಟು ಹಣ ನೇರ ಅಂಬಾನಿ ಕೈಗೆ ಸೇರಿದರೆ ಅದರ ಮೊತ್ತ ಎಷ್ಟಾಗಬಹುದು? ಜತೆಗೆ ಪ್ರಭಾವ ಬೀರುವ ಶಕ್ತಿಯೂ ಉದ್ಯಮಿ ಕೈಗೆ ಬಂದರೆ ಪ್ರಜಾಪ್ರಭುತ್ವದ ಲಕ್ಷಣ ಹೇಗಾಗಬಹುದು?

ಇದನ್ನೆಲ್ಲಾ ಊಹಿಸಿಯೇ, “ಕೇಬಲ್‌ ಆಪರೇಟರ್‌ಗಳು ನಾವು ಕಳೆದ ಆರು ತಿಂಗಳಿಂದ ಹೋರಾಟ ಮಾಡಿದೆವು. ಆದರೆ ಏನೂ ಆಗದಿದ್ದಾಗ ಕಳೆದ ಜನವರಿ 24ರಂದು ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ಕೇಬಲ್‌ ಬಂದ್‌ ಮಾಡಿ ಪ್ರತಿಭಟನೆ ಮಾಡಿದೆವು. ಅದಕ್ಕೂ ಟ್ರಾಯ್‌ ಏಜೆಂಟ್‌ ಸೋಮಶೇಖರ್‌ ಎಂಬಾತ ನನ್ನ ಮೇಲೆ ದೂರು ನೀಡಿದ್ದಾನೆ,” ಎನ್ನುತ್ತಾರೆ ಪ್ಯಾಟ್ರಿಕ್‌ ರಾಜು.

ಒಂದು ಕಾಲದಲ್ಲಿ ಮಾಫಿಯಾ ರೀತಿಯಲ್ಲಿ ಏರಿಯಾಗಳನ್ನು ಕೈಗೆ ತೆಗೆದುಕೊಂಡಿದ್ದ ಕೇಬಲ್ ಆಪರೇಟರ್ಸ್‌ ಕಥೆಯೇ ಹೀಗಾದರೆ ಅಂಬಾನಿ ವಿರುದ್ಧ ಸಾಮಾನ್ಯರು ಹೋರಾಟ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. “ಕೇಬಲ್‌ ಬಂದ್ ಮಾಡಿದಾಗಲೂ ರಾಜಕಾರಣಿ ಬಂದು ನಿಮ್ಮ ಸಮಸ್ಯೆ ಏನು ಎಂದು ಕೇಳಿಲ್ಲ. ಈಗ ಅನಿರ್ಧಿಷ್ಟಾವಧಿ ಬಂದ್‌ಗೆ ಯೋಚನೆ ಮಾಡುತ್ತಿದ್ದೇವೆ. ಇದಕ್ಕೆ ಜನರು ಕೈ ಜೋಡಿಸಬೇಕು. ಆದರೆ ಜನರು ಬರದಿದ್ದರೆ ಏನು ಮಾಡುವುದು?,” ಅಸಹಾಯಕತೆ ವ್ಯಕ್ತಪಡಿಸುತ್ತಾರೆ ರಾಜು. ಆದರೆ ರಾಜು ರೀತಿಯ ಅಸಹಾಯಕ ಸ್ಥಿತಿಯನ್ನು ಟಿವಿ ಗ್ರಾಹಕ ಎದುರಿಸಲು ಇನ್ನೂ ಒಂದಷ್ಟು ಸಮಯ ಬೇಕಿದೆ. ಅಲ್ಲೀವರೆಗೂ ಅವರು ಮನೆಗಳಿಂದ ಹೊರಬೀಳುವ ಸಾಧ್ಯತೆಗಳು ಕಡಿಮೆ ಇವೆ.

Also read: ಜಿಯೋ ಕ್ರಾಂತಿಯ ಅಸಲಿ ಕತೆ: ಭಾರತದ ‘***’ ಆಗಲು ಹೊರಟ ಮುಖೇಶ್ ಅಂಬಾನಿ- ಭಾಗ 1