samachara
www.samachara.com
ಇಂದಿರಾ ಕಾಲದ ‘ಅರ್ಬನ್ ನಕ್ಸಲೈಟ್’ ಜಾರ್ಜ್‌ ಫೆರ್ನಾಂಡಿಸ್: ಬದುಕು- ಹೋರಾಟ- ಅಧಿಕಾರ- ಅಂತ್ಯ... 
COVER STORY

ಇಂದಿರಾ ಕಾಲದ ‘ಅರ್ಬನ್ ನಕ್ಸಲೈಟ್’ ಜಾರ್ಜ್‌ ಫೆರ್ನಾಂಡಿಸ್: ಬದುಕು- ಹೋರಾಟ- ಅಧಿಕಾರ- ಅಂತ್ಯ... 

ಇದಿಷ್ಟೇ ಹೇಳಿದರೆ ಜಾರ್ಜ್ ಫೆರ್ನಾಂಡಿಸ್‌ ಎಂಬ ಮೋಹಕ ವ್ಯಕ್ತಿತ್ವದ ಎಳೆಯನ್ನೂ ಹೇಳಿದಂತಾಗುವುದಿಲ್ಲ. ಅವರೊಬ್ಬರು ಸಮಾಜವಾದಿ, ಕಾರ್ಮಿಕ ನಾಯಕ, ಮೇಲಾಗಿ ಹುಟ್ಟು ಹೋರಾಟಗಾರ. ಅದಕ್ಕೆ ಈ ಕೆಳಗಿನ ಬಿಡಿ ಬಿಡಿ ಘಟನೆಗಳೇ ಸಾಕ್ಷಿ.

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಭಾರತದ ರಾಜಕಾರಣದ ವಿಶಿಷ್ಟ ರಾಜಕಾರಣಿ ಜಾರ್ಜ್‌ ಫೆರ್ನಾಂಡಿಸ್‌ ತಮ್ಮ 88ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅಲ್ಜಮೈರ್‌ ಮತ್ತು ಪಾರ್ಕಿನ್ಸನ್‌ ಖಾಯಿಲೆಯಿಂದ ಬಳಲುತ್ತಿದ್ದ ಅವರು ಕಳೆದ ಹಲವು ವರ್ಷಗಳಿಂದ ಹಾಸಿಗೆ ಹಿಡಿದಿದ್ದರು.

70ರ ದಶಕದ ಭಾರತದ ಸಮಾಜವಾದಿ ಚಳವಳಿಯ ಪ್ರಮುಖ ನೇತಾರರಾಗಿದ್ದ ಜಾರ್ಜ್‌ ಫೆರ್ನಾಂಡಿಸ್‌ ದೇಶದ ಚರಿತ್ರೆಯ ಪುಟಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದವರು. ಅಟಲ್ ಬಿಹಾರಿ ವಾಜಪೇಯಿ ಸರಕಾರದಲ್ಲಿ 1998ರಿಂದ 2004ರವರೆಗೆ ರಕ್ಷಣಾ ಸಚಿವರಾಗಿ ಉನ್ನತ ಹುದ್ದೆಗೇರಿದ್ದರು. ಅದಕ್ಕೂ ಮೊದಲು ದೂರ ಸಂಪರ್ಕ, ಕೈಗಾರಿಕೆ ಮತ್ತು ರೈಲ್ವೇ ಸಚಿವರಾಗಿ ಅವರು ನಡೆದುಕೊಂಡ ರೀತಿ, ತೆಗೆದುಕೊಂಡ ಕ್ರಮಗಳು ಇವತ್ತಿಗೂ ಮೆಲುಕು ಹಾಕಲು ಯೋಗ್ಯವಾದ ನಿರ್ಧಾರಗಳು.

ಆದರೆ ಇದಿಷ್ಟೇ ಹೇಳಿದರೆ ಜಾರ್ಜ್ ಫೆರ್ನಾಂಡಿಸ್‌ ಎಂಬ ಮೋಹಕ ವ್ಯಕ್ತಿತ್ವದ ಎಳೆಯನ್ನೂ ಹೇಳಿದಂತಾಗುವುದಿಲ್ಲ. ಅವರೊಬ್ಬರು ಸಮಾಜವಾದಿ, ಕಾರ್ಮಿಕ ನಾಯಕ, ಮೇಲಾಗಿ ಹುಟ್ಟು ಹೋರಾಟಗಾರ. ಅದಕ್ಕೆ ಈ ಕೆಳಗಿನ ಬಿಡಿ ಬಿಡಿ ಘಟನೆಗಳೇ ಸಾಕ್ಷಿ. ಇವುಗಳ ಒಟ್ಟು ಸಾರವೇ ಜಾರ್ಜ್‌ ಫೆರ್ನಾಂಡಿಸ್‌ ಎಂಬ ಅಪ್ರತಿಮ ರಾಜಕಾರಣಿ.

1930, ಜೂನ್‌ 3

ಕರ್ನಾಟಕದ ಕಡಲ ತಡಿಯ ಊರು ಮಂಗಳೂರಿನಲ್ಲಿ ಜಾನ್‌ ಜೋಸೆಫ್‌ ಫೆರ್ನಾಂಡಿಸ್‌ ಮತ್ತು ಅಲಿಸ್‌ ಮಾರ್ಥಾ ಫೆರ್ನಾಂಡಿಸ್‌ ಮೊದಲ ಪುತ್ರರಾಗಿ ಜನಿಸಿದವರು ಜಾರ್ಜ್‌ ಫೆರ್ನಾಂಡಿಸ್‌. ಅವರಿಗೆ ಒಟ್ಟು 5 ಜನ ಸಹೋದರ, ಸಹೋದರಿಯರು.

ಮಂಗಳೂರಿಗೆ ಸೈಂಟ್‌ ಅಲೋಶಿಯಸ್‌ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮುಗಿಸಿದ ಜಾರ್ಜ್‌ ಮತ್ತಷ್ಟು ಓದಿ ವಕೀಲರಾಗಬೇಕೆಂಬುದು ತಂದೆಯ ಬಯಕೆಯಾಗಿತ್ತು. ಅದಕ್ಕೆ ಮಂಗಳೂರು ಹೊರ ವಲಯದಲ್ಲಿದ್ದ ತಂದೆಯ ಜಮೀನು ವಿವಾದವೂ ಪರೋಕ್ಷ ಕಾರಣವಾಗಿತ್ತು. ಆದರೆ ಜಾರ್ಜ್‌ಗೆ ತಾನೊಬ್ಬ ರೋಮನ್‌ ಕ್ಯಾಥೋಲಿಕ್‌ ಧರ್ಮಗುರುವಾಗಬೇಕು ಎಂಬ ಬಯಕೆ. ಹೀಗಾಗಿ 16ನೇ ವಯಸ್ಸಿಗೆ ಬೆಂಗಳೂರು ಬಸ್ಸು ಹತ್ತಿ ಹೊರಡುತ್ತಾರೆ.

ಬೆಂಗಳೂರಿಗೆ 1946ರಲ್ಲಿ ಬಂದ ಜಾರ್ಜ್‌ ಸೈಂಟ್‌ ಪೀಟರ್‌ ಸೆಮಿನರಿ ಸೇರಿಕೊಂಡರು. ಆದರೆ ಚರ್ಚ್‌ನಲ್ಲಿದ್ದ ತಾರತಮ್ಯ ಅವರನ್ನು ಕೆರಳಿಸಿದ್ದರಿಂದ 1948ರಲ್ಲಿ ಎರಡೂವರೆ ವರ್ಷಗಳ ತತ್ವಶಾಸ್ತ್ರ ಅಧ್ಯಯನವನ್ನು ಕೊನೆಗೊಳಿಸಿ ಮಂಗಳೂರಿಗೆ ವಾಪಸಾದರು.

ತನ್ನ 19ನೇ ವಯಸ್ಸಿಗೆ ಮಂಗಳೂರಿನಲ್ಲಿ ಕೆಲಸ ಆರಂಭಿಸಿದ ಜಾರ್ಜ್‌ ಕಣ್ಣಿಗೆ ರಸ್ತೆ ಕಾರ್ಮಿಕರು, ಇಲ್ಲಿನ ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ದುಡಿಯುವ ಕಾರ್ಮಿಕರ ಸಂಕಷ್ಟಗಳು ಕಾಣಿಸುತ್ತವೆ. ಈ ಸಂದರ್ಭದಲ್ಲಿ ಕಾರ್ಮಿಕ ಹಕ್ಕುಗಳಿಗಾಗಿ ಅವರನ್ನು ಸಂಘಟಿಸುವ ಕೆಲಸಕ್ಕೆ ಕೈ ಹಾಕಿದರು. ಆದರೆ ಜಾರ್ಜ್‌ಗೆ ಮಾಡಲೊಂದು ಸರಿಯಾದ ಕೆಲಸವಿರಲಿಲ್ಲ. ಹೀಗಾಗಿ ಈ ಸಂಘಟನೆ ಎಲ್ಲಾ ಬಿಟ್ಟು ಬದುಕಿನ ಬಂಡಿ ಏರಿ ಅಂದಿನ ಬಾಂಬೆ ಮಹಾನಗರದತ್ತ ಹೊರಡಬೇಕಾಯಿತು.

1949

ಉದ್ಯೋಗ ಅರಸಿ ಬಾಂಬೆಗೆ ಬಂದ ಜಾರ್ಜ್‌ಗೆ ಯಾವ ಕೆಲಸವೂ ಸಿಗುವುದಿಲ್ಲ. ರಸ್ತೆಗಳಲ್ಲೇ ಮಲಗೇಳುತ್ತಿದ್ದವರಿಗೆ ಕೊನೆಗೊಂದು ದಿನ ಪತ್ರಿಕೆಯೊಂದರಲ್ಲಿ ನಕಲು ತಿದ್ದುವ ಕೆಲಸ ಸಿಕ್ಕಿತು. ಹೀಗೆ ಜಾರ್ಜ್‌ ಫೆರ್ನಾಂಡಿಸ್‌ ಎಂಬ ವ್ಯಕ್ತಿಯ ಬಾಂಬೆ ವೃತ್ತಿ ಜೀವನ ಆರಂಭಗೊಳ್ಳುತ್ತದೆ.

ಕಾರ್ಮಿಕ ಹೋರಾಟದ ವೇಳೆ ಮುಂಬೈನಲ್ಲಿ ಬಂಧಿತನಾದ ಯುವಕ ಜಾರ್ಜ್‌ ಫೆರ್ನಾಂಡಿಸ್‌
ಕಾರ್ಮಿಕ ಹೋರಾಟದ ವೇಳೆ ಮುಂಬೈನಲ್ಲಿ ಬಂಧಿತನಾದ ಯುವಕ ಜಾರ್ಜ್‌ ಫೆರ್ನಾಂಡಿಸ್‌
/Defying silence

ಬಾಂಬೆಗೆ ಬಂದ ಜಾರ್ಜ್‌ ಕಾರ್ಮಿಕ ನಾಯಕ ಪ್ಲೆಸಿಡ್‌ ಡಿ'ಮೆಲ್ಲೋ ಮತ್ತು ಸಮಾಜವಾದಿ ನಾಯಕ ರಾಮಮನೋಹರ್‌ ಲೋಹಿಯಾ ಸೆಳೆತಕ್ಕೆ ಸಿಲುಕಿ ಸಮಾಜವಾದಿ ಕಾರ್ಮಿಕ ಚಳವಳಿಗೆ ಧುಮುಕುತ್ತಾರೆ. ಮುಂದಿನದು ಮುಂಬೈ ಕಾರ್ಮಿಕ ಚಳವಳಿಗಳ ಸುವರ್ಣ ಯುಗ. 1950, 60ರ ದಶಕದಲ್ಲಿ ಮುಂಬೈನ ಎಲ್ಲಾ ಕಾರ್ಮಿಕ ಚಳವಳಿಗಳ ಕೇಂದ್ರದಲ್ಲಿ ಇದ್ದವರು ಇದೇ ಜಾರ್ಜ್‌ ಫೆರ್ನಾಂಡಿಸ್‌. ಹಲವು ಮುಂಬೈ ಬಂದ್‌ಗಳಿಗೆ ಮುನ್ನುಡಿ ಬರೆಯುತ್ತಾ, ಆಗಾಗ ಜೈಲು ಪಾಲಾಗುತ್ತಾ 1961ರಲ್ಲಿ ಮುಂಬೈ ಕಾರ್ಪೊರೇಟರ್‌ ಆದವರು; ಕೊನೆಗೊಂದು ದಿನ ಸಂಸದರಾಗುವ ದಿನವೂ ಅವರ ಪಾಲಿಗೆ ಒದಗಿ ಬಂತು.

1967

ಅವತ್ತು ಮುಂಬೈ ಕಾರ್ಮಿಕ ಸಂಘಟನೆಗಳಲ್ಲಿ ಮಿಂಚಿನ ಸಂಚಾರ ಉಂಟು ಮಾಡಿದ್ದ ಚಾರ್ಜ್‌ ಫೆರ್ನಾಂಡಿಸ್‌ರನ್ನು ಸಂಯುಕ್ತ ಸಮಾಜವಾದಿ ಪಕ್ಷ ಚುನಾವಣಾ ಕಣಕ್ಕಿಳಿಸುವ ತೀರ್ಮಾನ ತೆಗೆದುಕೊಂಡಿತ್ತು. ದಕ್ಷಿಣ ಬಾಂಬೆಯಿಂದ ಜಾರ್ಜ್‌ ಕಣಕ್ಕಿಳಿಯುವುದು ಎಂದು ತೀರ್ಮಾನವಾಯಿತು. ಆದರೆ ಹಚ್ಚಿನ ನಿರೀಕ್ಷೆಯೇನೂ ಇರಲಿಲ್ಲ.

ಅವತ್ತಿಗೆ ದಕ್ಷಿಣ ಬಾಂಬೆಯ ಸಂಸದರಾಗಿದ್ದವರು ಕಾಂಗ್ರೆಸ್‌ ಹಿರಿಯ ನಾಯಕ ಎಸ್‌. ಕೆ. ಪಾಟೀಲ್‌. ಎರಡು ದಶಕಗಳಿಂದ ರಾಜಕಾರಣದಲ್ಲಿ ಇದ್ದ ಪಾಟೀಲರನ್ನು ಯಾರೂ ಸೋಲಿಸಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ಇತ್ತು. ಆದರೆ ಕೇವಲ 37ನೇ ವಯಸ್ಸಿನ ಜಾರ್ಜ್‌ ಫೆರ್ನಾಂಡಿಸ್ ಎಲ್ಲರನ್ನೂ ಅಚ್ಚರಿಯಲ್ಲಿ ಕೆಡವಿದರು.

ಕಾರ್ಮಿಕರನ್ನು ಅದ್ಭುತವಾಗಿ ಸಂಘಟಿಸಿದ್ದ ಜಾರ್ಜ್ ಅದೇ ಅಲೆಯಲ್ಲಿ ಲೋಕಸಭೆ ಚುನಾವಣೆ ಗೆದ್ದು ಸಂಸತ್‌ ಪ್ರವೇಶಿಸಿದ್ದರು. ಅವತ್ತು ಅವರಿಗೆ ‘ಜಾರ್ಜ್‌ ದಿ ಜಯಂಟ್‌ಕಿಲ್ಲರ್‌ (ದೈತ್ಯ ಸಂಹಾರಿ)‘ ಎಂಬ ಬಿರುದು ಅಂಟಿಕೊಂಡಿತು. ಜಾರ್ಜ್‌ ಜಯಶಾಲಿಯಾಗಿದ್ದು ಅಂದಿಗೆ ಇಡೀ ಭಾರತದಲ್ಲಿ ಸುದ್ದಿಯಾಗಿತ್ತು. ಮುಂದೆ ಬೆಳೆಯುತ್ತಾ ಹೋಗಿ 1973ರಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷರಾದರು.

1974-75

ರೈಲ್ವೇ ಮುಷ್ಕರದ ಸಂದರ್ಭದಲ್ಲಿ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡುತ್ತಿರುವ ಜಾರ್ಜ್‌.
ರೈಲ್ವೇ ಮುಷ್ಕರದ ಸಂದರ್ಭದಲ್ಲಿ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡುತ್ತಿರುವ ಜಾರ್ಜ್‌.
/ಔಟ್‌ಲುಕ್‌

ಮುಂಬೈ ಚುನಾವಣೆ ಗೆದ್ದ ಜಾರ್ಜ್ ಅಬ್ಬರ ಜೋರಾಗಿತ್ತು. ‘ಆಲ್‌ ಇಂಡಿಯಾ ರೈಲ್ವೇಮೆನ್‌ ಫೆಡರೇಷನ್‌ ಅಧ್ಯಕ್ಷ’ರಾಗಿದ್ದ ಜಾರ್ಜ್‌ 1974ರಲ್ಲಿ ತಮ್ಮ ಶಕ್ತಿ, ಸಾಮಾರ್ಥ್ಯ ಏನೆಂಬುದನ್ನು ತೆರೆದಿಟ್ಟರು. ಯಾರೂ ಊಹೆ ಮಾಡಲು ಸಾಧ್ಯವಿಲ್ಲ, ದೇಶವ್ಯಾಪಿ ಅನಿರ್ಧಿಷ್ಟಾವಧಿ ರೈಲ್ವೇ ಮುಷ್ಕರಕ್ಕೆ ಜಾರ್ಜ್‌ ಕರೆ ನೀಡಿದರು. ಬೆನ್ನಿಗೆ ಮೇ 8, 1974ರಂದು ದೇಶದ ಸಂಪರ್ಕ ಜಾಲವಾಗಿದ್ದ ರೈಲ್ವೇ ವ್ಯವಸ್ಥೆ ತಟಸ್ಥಗೊಂಡಿತು.

ವಿಶ್ವದ ಅತೀ ದೊಡ್ಡ ಸಂಪರ್ಕ ಜಾಲವೊಂದು ಸ್ಥಗಿತಗೊಂಡ ಅತ್ಯಪರೂಪದ ಕ್ಷಣ ಅದಾಗಿತ್ತು. ಜಾರ್ಜ್‌ ಆರ್ಭಟಕ್ಕೆ ಇಡೀ ದೇಶವೇ ಸ್ತಬ್ಧವಾಯಿತು. ಅವತ್ತಿನ ದಿನ 10 ಸಾವಿರ ರೈಲ್ವೇ ಕಾರ್ಮಿಕರು ಮದ್ರಾಸ್‌ ರೈಲ್ವೇ ನಿಲ್ದಾಣದ ಮುಂದೆ ಪ್ರತಿಭಟನೆ ಕುಳಿತಿದ್ದರು. ದೇಶಾದ್ಯಂತ 30 ಸಾವಿರ ರೈಲ್ವೇ ಕಾರ್ಮಿಕರು ಬಂಧಿತರಾಗಿದ್ದರು. ಬರೋಬ್ಬರಿ 21 ದಿನಗಳ ಕಾಲ ನಡೆದ ಈ ಮುಷ್ಕರ ಮೇ 27 ರಂದು ಕೆಲವು ಅಹಿತಕರ ಘಟನೆಗಳೊಂದಿಗೆ ಕೊನೆಯಾಯಿತು. ಅಂದು ಇಡೀ ದೇಶವೇ ಒಮ್ಮೆ ಉಸಿರೆಳೆದುಕೊಂಡಿತ್ತು.

ರೈಲ್ವೇ ಮುಷ್ಕರದ ಕೊನೆಯಾದ ನಂತರ ದೆಹಲಿಯ ವಿಠಲ್‌ಬಾಯಿ ಅರಮನೆಯಲ್ಲಿ ಪತ್ನಿ ಲೈಲಾ ಜೊತೆ ಜಾರ್ಜ್‌ ಕಾಣಿಸಿಕೊಂಡಿದ್ದು ಹೀಗೆ (1974 ಮೇ 28).
ರೈಲ್ವೇ ಮುಷ್ಕರದ ಕೊನೆಯಾದ ನಂತರ ದೆಹಲಿಯ ವಿಠಲ್‌ಬಾಯಿ ಅರಮನೆಯಲ್ಲಿ ಪತ್ನಿ ಲೈಲಾ ಜೊತೆ ಜಾರ್ಜ್‌ ಕಾಣಿಸಿಕೊಂಡಿದ್ದು ಹೀಗೆ (1974 ಮೇ 28).
/ಬಿಸಿಸಿಎಲ್‌

ರೈಲ್ವೇ ಮುಷ್ಕರದಿಂದ ನಡುಗಿ ಹೋದ ಇಂದಿರಾ ಗಾಂಧಿ ಸರಕಾರ ಮುಂದೆ 1975ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿತು. ಮತ್ತೆ ಜಾರ್ಜ್‌ ಎದ್ದು ಕುಳಿತರು. ಸರಕಾರದ ಕ್ರಮವನ್ನು ಖಂಡಿಸಿ ಪೂರ್ಣ ಪ್ರಮಾಣದಲ್ಲಿ ಹೋರಾಟಕ್ಕೆ ಇಳಿದರು. ಅವರನ್ನು ಬಂಧಿಸಬೇಕು ಎನ್ನುವುದು ಇಂದಿರಾ ಗಾಂಧಿ ಸರಕಾರದ ಮಹಾಭಿಲಾಷೆಯಾಗಿತ್ತು. ಆದರೆ ಜಾರ್ಜ್‌ ಮಹಾ ಚಾಣಾಕ್ಷ; ತಲೆ ಮರೆಸಿಕೊಂಡುಬಿಟ್ಟರು. ಅವರು ಸಿಗದಾದಾಗ ಅವರ ತಮ್ಮ ಲಾರೆನ್ಸ್‌ ಫೆರ್ನಾಂಡಿಸ್‌ ಮತ್ತು ಮೈಖಲ್‌ ಫೆರ್ನಾಂಡಿಸ್‌ರನ್ನು ಬೆಂಗಳೂರಿನ ಜೈಲಿಗಟ್ಟಿ ಸರಕಾರ ಚಿತ್ರ ಹಿಂಸೆ ನೀಡಿತು (ಇವರಲ್ಲಿ ಲಾರೆನ್ಸ್‌ ಮುಂದೆ ಬೆಂಗಳೂರು ಮೇಯರ್‌ ಆದರೆ ಮೈಖಲ್‌ ಎರಡು ಬಾರಿ ಶಾಸಕರಾದರು). ಅವರ ಜತೆ ಸಂಪರ್ಕವಿದ್ದ ಚಿತ್ರನಟಿ ಸ್ನೇಹಲತಾ ರೆಡ್ಡಿಯನ್ನು ಬಂಧಿಸಲಾಯಿತು. ಆಕೆಗೂ ಯಾವ ಮಟ್ಟಕ್ಕೆ ಹಿಂಸೆ ನೀಡಿದ್ದರೆಂದರೆ ಬಿಡುಗಡೆಯಾದ ಐದೇ ದಿನಕ್ಕೆ ಸಾವನ್ನಪ್ಪಿದರು.

ಹೀಗೊಂದು ಕ್ರೂರ ನಡೆ ಇಡಲು ಕಾರಣವೂ ಇತ್ತು. ಇಂದಿರಾ ಗಾಂಧಿ ಸರಕಾರವನ್ನು ಕಿತ್ತೊಗೆಯಲು ಜಾರ್ಜ್‌ ಪಣತೊಟ್ಟಿದ್ದರು. ಯಾವ ಮಟ್ಟಕ್ಕೆ ಎಂದರೆ ಫ್ರೆಂಚ್‌ ಸರಕಾರದ ನೆರವಿಗೆ ಕೈಚಾಚಿದ್ದರು. ಒಂದು ಹಂತದಲ್ಲಿ ಅಮೆರಿಕಾದ ಗುಪ್ತಚರ ಇಲಾಖೆ ಸಿಐಎ ಸಹಾಯಕ್ಕೂ ಕೈ ಒಡ್ಡಿದ್ದರು ಎಂಬುದು ಮುಂದೆ ತಿಳಿದು ಬಂದಿತ್ತು.

ಸರಕಾರದ ವಿರುದ್ಧ ಸಮರ ಸಾರಿದ್ದ ಜಾರ್ಜ್‌ 1975ರ ಜುಲೈನಲ್ಲಿ ವಿಕ್ಷಿಪ್ತ ಯೋಜನೆಯೊಂದಿಗೆ ಬರೋಡದಲ್ಲಿ ಪ್ರತ್ಯಕ್ಷರಾಗಿದ್ದರು. ಅಲ್ಲಿ ಸರಕಾರಿ ವಿರೋಧಿ ಪತ್ರಕರ್ತರ ಜತೆ ಸೇರಿ, ಉದ್ಯಮಿಯೊಬ್ಬರ ಸಂಪರ್ಕ ಬೆಳೆಸಿ ಸಮೀಪದಲ್ಲೇ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆಯ ಡೈನಮೈಟ್‌ಗಳನ್ನು ಸಂಪಾದಿಸಿಕೊಂಡಿದ್ದರು.

ಅವುಗಳ ಮೂಲಕ ಸರಕಾರಿ ಕಚೇರಿಗಳನ್ನು ಮತ್ತು ರೈಲ್ವೇ ಹಳಿಗಳನ್ನು ಸ್ಪೋಟಿಸುವುದು ಜಾರ್ಜ್‌ ಯೋಜನೆಯಾಗಿತ್ತು. ಸರಕಾರಿ ಕಚೇರಿಗಳ ಶೌಚಾಲಯ, ಇಂದಿರಾ ಗಾಂಧಿ ಭಾಗವಹಿಸಲಿದ್ದ ರ್ಯಾಲಿಗಳಲ್ಲಿ ಡೈನಮೈಟ್‌ ಸ್ಪೋಟಿಸಿ, ಯಾರಿಗೂ ತೊಂದರೆಯಾಗದ ಹಾಗೆ ಭಯ ಬಿತ್ತಲು ಅವರು ಹೊರಟಿದ್ದರು. ಅದರಂತೆ ಇಂದಿರಾ ಗಾಂಧಿ ಭಾಷಣ ಮಾಡಲಿದ್ದ ವಾರಣಾಸಿಯ ವೇದಿಕೆಯನ್ನು ಕಾರ್ಯಕ್ರಮ ಆರಂಭವಾಗುವುದಕ್ಕೆ ನಾಲ್ಕು ಗಂಟೆ ಮೊದಲು ಅವರ ತಂಡ ಧ್ವಂಸಗೊಳಿಸಿತ್ತು. ಇದು ಮುಂದೆ ‘ಬರೋಡ ಡೈನಮೈಟ್‌ ಕೇಸ್‌’ ಎಂದು ಜನಪ್ರಿಯವಾಯಿತು.

ಇದರ ಜತೆಗೆ ಪುಣೆ ಸಮೀಪದ ಪಿಂಪ್ರಿಯಿಂದ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುತ್ತಿದ್ದ ರೈಲ್ವೇ ದರೋಡೆಗೂ ಜಾರ್ಜ್ ಸ್ಕೆಚ್‌ ಹಾಕಿದ್ದರು. ಆದರೆ ಅದು ಕೈಗೂಡಿರಲಿಲ್ಲ. ಈ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡು ಸರಕಾರಿ ಕಚೇರಿ ಧ್ವಂಸ ಮಾಡುವುದು ಅವರ ದೂರಾಲೋಚನೆಯಾಗಿತ್ತು.

ತುರ್ತು ಪರಿಸ್ಥಿತಿಯಲ್ಲಿ ಬಂಧಿತರಾದ ಜಾರ್ಜ್‌ ಫೆರ್ನಾಂಡಿಸ್‌.
ತುರ್ತು ಪರಿಸ್ಥಿತಿಯಲ್ಲಿ ಬಂಧಿತರಾದ ಜಾರ್ಜ್‌ ಫೆರ್ನಾಂಡಿಸ್‌.
/ಇಂಡಿಯಾ ಟುಡೇ

ಆ ಯತ್ನ ಕೈಗೂಡುವ ಮುನ್ನವೇ ಜೂನ್‌ 10, 1976ರಲ್ಲಿ ಕೊಲ್ಕತ್ತಾದಲ್ಲಿ ಜಾರ್ಜ್‌ ಫೆರ್ನಾಂಡಿಸ್‌ರನ್ನು ಬಂಧಿಸಲಾಯಿತು. ಅಂದು ಇಂದಿರಾ ಸರಕಾರ ಜಾರ್ಜ್‌ ಜೀವಕ್ಕೆ ಅಪಾಯ ಒಡ್ಡುವ ಎಲ್ಲಾ ಲಕ್ಷಣಗಳಿತ್ತು. ಹೀಗಾಗಿ ಅವರ ರಕ್ಷಣೆಗೆ ಅಂತರಾಷ್ಟ್ರೀಯ ಮಾನವ ಹಕ್ಕು ಹೋರಾಟಗಾರರು ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಹೆಸರಿನಲ್ಲಿ ಧಾವಿಸಿ ಬಂದರು. ಇಂದಿರಾ ಸರಕಾರಕ್ಕೆ ಪ್ರತ್ಯೇಕ ಪತ್ರಗಳನ್ನು ಬರೆದು ದೈಹಿಕ ರಕ್ಷಣೆ ನೀಡುವಂತೆ ಕೋರಿಕೊಂಡರು.

1977

ಜೈಲಿಗೆ ಹೋದರೂ ಜಾರ್ಜ್‌ ಫೆರ್ನಾಂಡಿಸ್‌ ಆರ್ಭಟ ಕಡಿಮೆಯಾಗಿರಲಿಲ್ಲ. ಅವರ ನಾಗಾಲೋಟ ಯಾವ ಮಟ್ಟಕ್ಕೆ ಇತ್ತು ಎಂದು ಎಂದರೆ ಜೈಲಿನಿಂದಲೇ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದರು. 1977ರ ಚುನಾವಣೆಯಲ್ಲಿ ಬಾಂಬೆಯಿಂದ ಬಹು ದೂರದ ಬಿಹಾರದ ಮುಝಾಫುರ್‌ಪುರದಲ್ಲಿ ಚುನಾವಣೆಗೆ ನಿಂತು, ಒಂದೇ ಒಂದು ದಿನ ಪ್ರಚಾರಕ್ಕೂ ತೆರಳದೆ ಬರೋಬ್ಬರಿ 3 ಲಕ್ಷ ಮತಗಳ ಅಂತರದಿಂದ ಗೆದ್ದು ಬೀಗಿದರು.

ಅಂದು ಡೈನಮೈಟ್‌ ಸಂಚು, ಇಂದಿರಾ ಮೇಲಿನ ಹಗೆತನ, ಜೈಲಿನಿಂದಲೇ ಚುನಾವಣೆ ಗೆದ್ದ ನಾಟಕೀಯ ಬೆಳವಣಿಗೆಗಳ ಮೂಲಕ ತುರ್ತು ಪರಿಸ್ಥಿತಿಯ ಹೀರೋ ಆಗಿ ಮೂಡಿ ಬಂದಿದ್ದರು ಜಾರ್ಜ್ ಫೆರ್ನಾಂಡಿಸ್‌. ಮುಂದೆ 1977ರಲ್ಲಿ ಮೊರಾರ್ಜಿ ದೇಸಾಯಿ ನೇತೃತ್ವದಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬಂದಾಗ ಅವರನ್ನು ಕೈಗಾರಿಕಾ ಸಚಿವರನ್ನಾಗಿ ನೇಮಕ ಮಾಡಲಾಯಿತು.

1977ರಲ್ಲಿ ಜಾರ್ಜ್‌ ಫೆರ್ನಾಂಡಿಸ್‌, ಮೊರಾರ್ಜಿ ದೇಸಾಯಿ ಮತ್ತು ಬಿಜು ಪಟ್ನಾಯಕ್.
1977ರಲ್ಲಿ ಜಾರ್ಜ್‌ ಫೆರ್ನಾಂಡಿಸ್‌, ಮೊರಾರ್ಜಿ ದೇಸಾಯಿ ಮತ್ತು ಬಿಜು ಪಟ್ನಾಯಕ್.
/ದಿ ವೈರ್

ಕೋಕಾ-ಕೋಲಾ, ಐಬಿಎಂ ಬ್ಯಾನ್!

ಜಾರ್ಜ್‌ ಫೆರ್ನಾಂಡಿಸ್‌ ಎಂದರೇನೇ ಹಾಗೆ. ಸುಮ್ಮನೆ ಕೂರುವ ಜಾಯಮಾನದವರೇ ಅಲ್ಲ. ಕೈಗಾರಿಕಾ ಸಚಿವರಾಗಿದ್ದೇ ತಡ ಬಹುರಾಷ್ಟ್ರೀಯ ಕಂಪನಿಗಳಾದ ಕೋಕಾ ಕೋಲಾ ಮತ್ತು ಐಬಿಎಂ ವಿರುದ್ಧ ಸಮರ ಸಾರಿದರು. ಹೂಡಿಕೆ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆಪಾದಿಸಿ ಎರಡೂ ಕಂಪನಿಗಳನ್ನು ದೇಶದಿಂದ ಹೊರಗಟ್ಟಿದ್ದರು.

ಈ ಸಂದರ್ಭದಲ್ಲಿ ಕೋಕಾ ಕೋಲಾ ಕಂಪನಿಯಲ್ಲಿದ್ದ ಸಿಬ್ಬಂದಿಗಳು ನಿರುದ್ಯೋಗಿಗಳಾದರು. ಇವರಿಗೆ ಉದ್ಯೋಗ ನೀಡಲೆಂದು ಸರಕಾರದ ಕಡೆಯಿಂದಲೇ ‘ಡಬಲ್‌ ಸೆವೆನ್‌’ ಎಂಬ ಪಾನೀಯದ ಬ್ರ್ಯಾಂಡ್‌ ಆರಂಭಿಸಿದ್ದರು. ಇದಕ್ಕೆ ಪಾನೀಯದ ಸೂತ್ರವನ್ನು ಮೈಸೂರಿನಲ್ಲಿರುವ ‘ಸಿಎಫ್‌ಟಿಆರ್‌ಐ’ ತಯಾರಿಸಿ ಕೊಟ್ಟಿತ್ತು. ಆರಂಭದಲ್ಲಿ ಇದು ಚೆನ್ನಾಗಿಯೇ ನಡೆಯಿತು. ಆದರೆ ಮುಂದೆ 1980ರಲ್ಲಿ ಜಾರ್ಜ್‌ ಅಧಿಕಾರದಿಂದ ಇಳಿಯುತ್ತಿದ್ದಂತೆ ಕಂಪನಿಯೇ ಮುಚ್ಚಿಕೊಂಡಿತು.

ಜಾರ್ಜ್ ಫೆರ್ನಾಂಡಿಸ್‌ ಕೋಕಾ ಕೋಲಾ ಕಂಪನಿ ಕಾರ್ಮಿಕರಿಗಾಗಿ ಆರಂಭಿಸಿದ 77 (ಡಬಲ್‌ ಸೆವೆನ್‌) ಬ್ರ್ಯಾಂಡ್
ಜಾರ್ಜ್ ಫೆರ್ನಾಂಡಿಸ್‌ ಕೋಕಾ ಕೋಲಾ ಕಂಪನಿ ಕಾರ್ಮಿಕರಿಗಾಗಿ ಆರಂಭಿಸಿದ 77 (ಡಬಲ್‌ ಸೆವೆನ್‌) ಬ್ರ್ಯಾಂಡ್

ದೂರದರ್ಶನ ಕೇಂದ್ರದ ಆರಂಭ, ಕಾಂತಿ ಉಷ್ಣ ವಿದ್ಯುತ್‌ ಸ್ಥಾವರ ಸ್ಥಾಪನೆ (ಮುಂದೆ ಇದಕ್ಕೆ ಜಾರ್ಜ್‌ ಫೆರ್ನಾಂಡಿಸ್‌ ಹೆಸರಿಡಲಾಯಿತು). ಉದ್ಯೋಗ ಸೃಷ್ಟಿಯ ಕನಸು ಹೊತ್ತು ಮುಝಾಪುರ್‌ಪುರದಲ್ಲಿ ಆರಂಭಿಸಿದ್ದ ಹಪ್ಪಳ ಫ್ಯಾಕ್ಟರಿ ಇಂದಿಗೂ ಜಾರ್ಜ್‌ ಕೈಗಾರಿಕಾ ಸಚಿವರಾಗಿದ್ದ ಅವಧಿಯ ಕೊಡುಗೆಗಳು.

ಇದೇ ಜಾರ್ಜ್‌ ಮೊರಾರ್ಜಿ ದೇಸಾಯಿ ಸರಕಾರ ಬೀಳಲು ಪರೋಕ್ಷ ಕಾರಣವೂ ಆಗಿದ್ದರು. ಸಂಪುಟದಲ್ಲಿದ್ದ ವಾಜಪೇಯಿ ಮತ್ತು ಎಲ್‌. ಕೆ. ಅಡ್ವಾಣಿ ಮೊದಲಾದವರು ಆರ್‌ಎಸ್‌ಎಸ್‌ ಜತೆ ಸಂಪರ್ಕ ಬೆಳೆಸಬಾರದು ಎಂದು ಅವರು ಪಟ್ಟು ಹಿಡಿದು ಕುಳಿತಿದ್ದರು. ಆದರೆ ನಂಟು ಬಿಡಲು ಅವರು ಸಿದ್ಧರಿರಲಿಲ್ಲ. ಕೊನೆಗೆ ಮೊರಾರ್ಜಿ ಸರಕಾರವೇ ಪತನವಾಗಬೇಕಾಯಿತು.

1980-90

ಸರಕಾರ ಪತನವಾದರೂ 1980ರಲ್ಲಿ ಮುಝಾಪುರ್‌ಪುರದಿಂದ ಗೆದ್ದು ಮತ್ತೆ ಅವರು ಸಂಸದರಾದರು. ಆದರೆ 84ರಲ್ಲಿ ಬೆಂಗಳೂರು ಉತ್ತರದಿಂದ ಸಿ. ಕೆ. ಜಾಫರ್‌ ಶರೀಫ್‌ ವಿರುದ್ಧ ಸ್ಪರ್ಧಿಸಿ 40 ಸಾವಿರ ಮತಗಳಿಂದ ಸೋಲಬೇಕಾಯಿತು. ಮುಂದೆ ಮತ್ತೆ 89ರಲ್ಲಿ ಮುಝಪುರ್‌ಪುರಕ್ಕೆ ಮರಳಿದರು. 1988ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಯಾದ ಜನತಾ ದಳದಿಂದ ಅವರು ಈ ಬಾರಿ ಚುನಾವಣೆಗೆ ನಿಂತಿದ್ದರು.

ಗೆದ್ದವರು ವಿ. ಪಿ. ಸಿಂಗ್‌ ಸರಕಾರದಲ್ಲಿ ಕೇಂದ್ರ ರೈಲ್ವೇ ಸಚಿವರಾದರು. 1989ರಿಂದ 90ರ ಸಣ್ಣ ಅವಧಿಗೆ ಹೊಣೆ ಹೊತ್ತರೂ ಮಂಗಳೂರನ್ನು ಮುಂಬೈ ಜತೆ ಸಂಪರ್ಕಿಸುವ ಮಹತ್ವದ ಕೊಂಕಣ್‌ ರೈಲ್ವೇಗೆ ಅಡಿಪಾಯ ಹಾಕಿ ಇತಿಹಾಸದಲ್ಲಿ ಚಿರಸ್ಥಾಯಿಯಾದರು. ಜಾರ್ಜ್‌ ಆರಂಭಿಸಿದ್ದ ಈ ಯೋಜನೆ ಸ್ವತಂತ್ರ ಭಾರತದ ಪ್ರಪ್ರಥಮ ಬೃಹತ್‌ ರೈಲ್ವೇ ಯೋಜನೆಯಾಗಿತ್ತು.

1994

ಸಮತಾ ಪಕ್ಷವನ್ನು ಹುಟ್ಟು ಹಾಕಿದ ಜಾರ್ಜ್‌ ಫೆರ್ನಾಂಡಿಸ್‌ ರ್ಯಾಲಿಯೊಂದರಲ್ಲಿ ಭಾಗವಹಿಸಿದ ಕ್ಷಣ (1995).
ಸಮತಾ ಪಕ್ಷವನ್ನು ಹುಟ್ಟು ಹಾಕಿದ ಜಾರ್ಜ್‌ ಫೆರ್ನಾಂಡಿಸ್‌ ರ್ಯಾಲಿಯೊಂದರಲ್ಲಿ ಭಾಗವಹಿಸಿದ ಕ್ಷಣ (1995).
/ಇಂಡಿಯನ್‌ ಎಕ್ಸ್‌ಪ್ರೆಸ್‌

ಅಷ್ಟೊತ್ತಿಗಾಗಲೇ ಅವರಿಗೆ ಜನತಾ ದಳದ ಜತೆ ಮುನಿಸು ಹುಟ್ಟಿಕೊಂಡಿತ್ತು. ಆಗ ಅವರು ಇಂದಿನ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಜತೆ ಸೇರಿ ‘ಸಮತಾ ಪಕ್ಷ’ ಹುಟ್ಟುಹಾಕಿದ್ದರು. ಮೊದಲ ಚುನಾವಣೆಯಲ್ಲಿ ಸಮತಾ ಪಕ್ಷ 8 ಲೋಕಸಭಾ ಸ್ಥಾನಗಳಲ್ಲಿ ಗೆಲುವು ಸಾಧಿಸಿತು. ಮುಂದೆ 1998ರ ಚುನಾವಣೆಯಲ್ಲಿ 12 ಸ್ಥಾನಗಳಲ್ಲಿ ಗೆಲುವು ಸಾಧಿಸಿದ ಪಕ್ಷ ವಾಜಪೇಯಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಭಾಗವಾಗಿ ಅಧಿಕಾರಕ್ಕೇರಿತು. ಜಾರ್ಜ್‌ ರಕ್ಷಣಾ ಸಚಿವರಾದರು.

1998-2004: ಪೋಖ್ರಾಣ್‌, ಕಾರ್ಗಿಲ್‌

ಅಟಲ್‌ ಬಿಹಾರಿ ವಾಜಪೇಯಿ ಸಂಪುಟದಲ್ಲಿ ರಕ್ಷಣಾ ಸಚಿವರಾದ ಅವರು ಹುದ್ದೆ ವಹಿಸಿಕೊಂಡ ಆರೇ ವಾರದಲ್ಲಿ ‘ಚೀನಾ ನಮ್ಮ ನಂಬರ್‌ ವನ್‌ ಶತ್ರು’ ಎಂಬ ಹೇಳಿಕೆ ನೀಡಿ ಜಾಗತಿಕ ಸುದ್ದಿಯಾಗಿದ್ದರು; ಜತೆಗೆ ವಾಜಪೇಯಿಯನ್ನು ತೀವ್ರ ಇರುಸು ಮುರುಸಿಗೆ ತಳ್ಳಿದರು. ಜತೆಗೆ ಅಣ್ವಸ್ತ್ರ ದೇಶ ಎಂದು ಸ್ವಘೋಷಣೆ ಮಾಡಿಕೊಳ್ಳುವ ಸಮಯ ಬಂದಿದೆ ಎಂದು ಬಿಟ್ಟರು. ಇದಾಗಿ ಎರಡೇ ವಾರದಲ್ಲೇ ಜಾರ್ಜ್‌ ಉಸ್ತುವಾರಿಯಲ್ಲಿ ಐತಿಹಾಸಿಕ 1998ರ ಪೋಖ್ರಾಣ್‌ ಅಣ್ವಸ್ತ್ರ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಯಿತು.

ಪೋಖ್ರಾಣ್‌ ಅಣ್ವಸ್ತ್ರ ಪರೀಕ್ಷೆಯ ಸ್ಥಳದಲ್ಲಿ ಅಟಲ್‌ ಬಿಹಾರಿ ವಾಜಪೇಯಿ, ಜಾರ್ಜ್‌ ಫೆರ್ನಾಂಡಿಸ್‌ ಮತ್ತು ಅಬ್ದುಲ್‌ ಕಲಾಂ.
ಪೋಖ್ರಾಣ್‌ ಅಣ್ವಸ್ತ್ರ ಪರೀಕ್ಷೆಯ ಸ್ಥಳದಲ್ಲಿ ಅಟಲ್‌ ಬಿಹಾರಿ ವಾಜಪೇಯಿ, ಜಾರ್ಜ್‌ ಫೆರ್ನಾಂಡಿಸ್‌ ಮತ್ತು ಅಬ್ದುಲ್‌ ಕಲಾಂ.
/ರೆಡಿಫ್‌

ಕಾರ್ಗಿಲ್‌ ಯುದ್ಧ, ದುಪ್ಪಟ್ಟಾದ ರಕ್ಷಣಾ ಬಜೆಟ್‌, ಸಿಯಾಚಿನ್‌ನಂತ ಅತ್ಯಂತ ಎತ್ತರದ ದುರ್ಗಮ ಯುದ್ಧಭೂಮಿಗೆ 16 ಬಾರಿ ಭೇಟಿ ನೀಡಿದ್ದು, ಸುಕೋಯ್ ಯುದ್ಧ ವಿಮಾನ ಹಾರಿಸಿದ್ದು... ಹೀಗೆ ಸರಣಿ ನಡವಳಿಕೆಗಳ ಮೂಲಕ ಭಾರತೀಯ ಸೇನೆಯಲ್ಲಿ ಹೊಸ ಹುರುಪು ತುಂಬಿದರು ಜಾರ್ಜ್‌.

ಆದರೆ ಅದೇ ಜಾರ್ಜ್‌ ವ್ಯಕ್ತಿತ್ವಕ್ಕೆ ರಕ್ಷಣಾ ಖಾತೆಯೇ ಇನ್ನಿಲ್ಲದ ಮಸಿ ಬಳೆಯಿತು. 2001ರಲ್ಲಿ ತೆಹೆಲ್ಕಾ ಹೊರತಂದ ತನಿಖಾ ವರದಿ ‘ಆಪರೇಷನ್‌ ವೆಸ್ಟ್ಎಂಡ್‌’ ಜಾರ್ಜ್‌ ಜತೆಗಾತಿ ಜಯಾ ಜೇಟ್ಲಿವರೆಗೆ ಬಂದು ತಲುಪಿತು. ಪರಿಣಾಮ ಬಿಜೆಪಿ ಅಧ್ಯಕ್ಷರಾಗಿದ್ದ ಬಂಗಾರು ಲಕ್ಷ್ಮಣ್‌ರಿಂದ ಹಿಡಿದು ಹಲವು ಅಧಿಕಾರಿಗಳು ರಾಜೀನಾಮೆ ನೀಡಬೇಕಾಯಿತು. ಕೆಲವು ಅವಧಿಗೆ ಜಾರ್ಜ್ ಕೂಡ ರಾಜೀನಾಮೆ ನೀಡಿ ಸಂಪುಟದಿಂದ ಹೊರಗೆ ಇರಬೇಕಾಯಿತು.

ಇದೇ ತನಿಖಾ ವರದಿ ಮುಂದೆ ‘ಬರಾಕ್‌ ಮಿಸೈಲ್‌ ಸ್ಕಾಂಡಲ್‌’ಗೂ ನಾಂದಿಯಾಯಿತು. ಇಸ್ರೇಲ್‌ನಿಂದ ಭಾರತ ಖರೀದಿಸಲು ಹೊರಟಿದ್ದ ಬರಾಕ್‌ ಕ್ಷಿಪಣಿಗಳನ್ನು ಸೇನೆಗೆ ಜಮಾವಣೆ ಮಾಡಿಕೊಳ್ಳುವ ಯತ್ನದಲ್ಲಿ ಹಗರಣ ನಡೆದಿದೆ ಎಂಬ ಆರೋಪ ಕೇಳಿ ಬಂತು. ಈ ಸಂದರ್ಭದಲ್ಲಿ ಸಿಬಿಐ ದಾಖಲಿಸಿದ ಎಫ್‌ಐಆರ್‌ನಲ್ಲಿ ಜಾರ್ಜ್‌ ಕೂಡ ಓರ್ವ ಆರೋಪಿಯಾಗಬೇಕಾಯಿತು. ಮುಂದೆ 2013ರಲ್ಲಿ ಈ ಹಗರಣ ಬಿದ್ದು ಹೋಯಿತು ಎಂಬುದು ಬೇರೆ ಮಾತು. ಆದರೆ ಜಾರ್ಜ್‌ ವ್ಯಕ್ತಿತ್ವಕ್ಕೆ ಕಳಂಕ ಮೆತ್ತಿಕೊಂಡಾಗಿತ್ತು.

‘ಶವ ಪೆಟ್ಟಿಗೆ ಹಗರಣ’ವಂತೂ ಅವರನ್ನು ಇನ್ನಿಲ್ಲದಂತೆ ಕಾಡಿತು. 2002ರಲ್ಲಿ ಕಾರ್ಗಿಲ್‌ ಯುದ್ಧದಲ್ಲಿ ಮಡಿದವರ ಹೆಣಗಳನ್ನು ಮನೆಗೆ ತಲುಪಿಸಲು ಅಮೆರಿಕಾದಿಂದ ಖರೀದಿಸಿದ ಶವಪೆಟ್ಟಿಗೆಗಳಿಗೆ 13 ಪಟ್ಟು ಹೆಚ್ಚು ಹಣ ನೀಡಲಾಗಿದೆ ಎಂಬುದು ಆರೋಪವಾಗಿತ್ತು. ಇದರಲ್ಲೂ 2009ರಲ್ಲಿ ಸಿಬಿಐ ಚಾರ್ಜ್‌ ಶೀಟ್‌ ಸಲ್ಲಿಕೆ ಮಾಡಿದಾಗ ಜಾರ್ಜ್‌ ನಿರಪರಾಧಿಯಾಗಿದ್ದರು. ಆದರೆ ಅಷ್ಟೊತ್ತಿಗಾಗಲೇ ಜಾರ್ಜ್‌ ಯುಗ ಮುಗಿದಿತ್ತು.

2009

1994ರಲ್ಲಿ ತಾವೇ ಹುಟ್ಟು ಹಾಕಿದ್ದ ಸಮತಾ ಪಕ್ಷ 2003ರಲ್ಲಿ ಅನಧಿಕೃತವಾಗಿ ಸಂಯುಕ್ತ ಜನತಾ ದಳ (ಜೆಡಿಯು)ನಲ್ಲಿ ವಿಲೀನಗೊಂಡಿತ್ತು. ಈಗ ತಾವೇ ಬೆಳೆಸಿದ ನಿತೀಶ್‌ ಕುಮಾರ್‌ ಎಂಬ ಹಿಂದುಳಿದ ನಾಯಕ ಜೆಡಿಯು ನಾಯಕರಾಗಿದ್ದರು.

ಪತ್ರಿಕಾಗೋಷ್ಠಿಯೊಂದರಲ್ಲಿ ಸಮತಾ ಪಕ್ಷದ ನಾಯಕರಾದ ಜಾರ್ಜ್‌ ಮತ್ತು ನಿತೀಶ್‌ ಕುಮಾರ್‌.
ಪತ್ರಿಕಾಗೋಷ್ಠಿಯೊಂದರಲ್ಲಿ ಸಮತಾ ಪಕ್ಷದ ನಾಯಕರಾದ ಜಾರ್ಜ್‌ ಮತ್ತು ನಿತೀಶ್‌ ಕುಮಾರ್‌.
/ಜೆಟ್ಟಿ

ಈ ಸಂದರ್ಭದಲ್ಲಿ ಜಾರ್ಜ್‌ ಫೆರ್ನಾಂಡಿಸ್‌ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಅನಾರೋಗ್ಯದ ಕಾರಣ ಮುಂದಿಟ್ಟು ಟಿಕೆಟ್‌ ನೀಡಲು ಸಾಧ್ಯವಿಲ್ಲ ಎಂದು ಬಿಟ್ಟರು ನಿತೀಶ್‌. ಇದು ಜಾರ್ಜ್‌ರನ್ನು ಕೆರಳಿಸಿತು. ರೊಚ್ಚಿಗೆದ್ದ ಅವರು, ‘ನಾನು ಸರಿಯಾಗಿದ್ದೇನೆ’ ಎಂದು ಹೇಳಿ ಮುಝಾಪುರ್‌ಪುರದಿಂದ-ಚುನಾವಣಾ ಆಯೋಗದ ನಿಯಮಗಳ ಕಾರಣಕ್ಕೆ ಉಸಿರು ಉಳಿಸಿಕೊಂಡಿದ್ದ - ಸಮತಾ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಈ ವೇಳೆ ಜೆಡಿಯು ರಾಜ್ಯಸಭೆಗೆ ಕಳುಹಿಸುವ ಆಹ್ವಾನ ನೀಡಿತ್ತಾದರೂ ಅದನ್ನು ತಿರಸ್ಕರಿಸಿ, ‘ನಿಜವಾದ ಸಮಾಜವಾದಿಗಳು ರಾಜ್ಯಸಭೆಯನ್ನು ಇಷ್ಟಪಡುವುದಿಲ್ಲ’ ಎಂದು ಖಾರವಾಗಿಯೇ ಹೇಳಿದ್ದರು.

ಹೀಗಿದ್ದೂ ಕೊನೆಯ ಬಾರಿಗೆ 2009ರಿಂದ 2010ರವರೆಗೆ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಅದೇ ಕೊನೆ ಅವರೆಂದೂ ಮತ್ತೆ ಸಂಸತ್‌ನತ್ತ ಮುಖ ಹಾಕಲಿಲ್ಲ.

ಪತ್ರಕರ್ತ ಜಾರ್ಜ್‌

ಈ ಎಲ್ಲಾ ರಾಜಕೀಯ ಜಂಜಾಟದ ನಡುವೆ ಜಾರ್ಜ್‌ ಫೆರ್ನಾಂಡಿಸ್‌ಗೆ ಬರವಣಿಗೆ ಮೇಲೂ ಒಲವಿತ್ತು. ‘ಕೊಂಕಣಿ ಯುವಕ್‌’ ಎಂಬ ಮಾಸಿಕ, ‘ರೈತವಾಣಿ’ ಎಂಬ ವಾರಪತ್ರಿಕೆಗೆ ಅವರು 1949ರಲ್ಲಿ ಸಂಪಾದಕರಾಗಿದ್ದರು. ಸಮಾಜವಾದಿ ಚಳವಳಿಯ ಹಲವು ಪುಸ್ತಕಗಳಿಗೂ ಅವರು ಲೇಖನಿ ಹಿಡಿದಿದ್ದರು. ಇಂಗ್ಲೀಷ್‌ ಮತ್ತು ಹಿಂದಿಯ ಪತ್ರಿಕೆಗಳ ಸಂಪಾದಕೀಯ ಮಂಡಳಿಯಲ್ಲಿದ್ದ ಜಾರ್ಜ್‌ 10 ಭಾಷೆಗಳನ್ನು ಬಲ್ಲವರಾಗಿದ್ದರು. ಅದರಲ್ಲೂ ಇಂಗ್ಲಿಷ್‌ ಮತ್ತು ಹಿಂದಿ ಮೇಲೆ ಅವರಿಗೆ ಅಪಾರ ಹಿಡಿತವಿತ್ತು.

ಅಮ್ನೆಸ್ಟಿ ಇಂಟರ್ನ್ಯಾಷನಲ್‌, ಪೀಪಲ್ಸ್‌ ಯೂನಿಯನ್‌ ಫಾರ್‌ ಸಿವಿಲ್‌ ಲಿಬರ್ಟೀಸ್‌, ಪ್ರೆಸ್‌ ಕೌನ್ಸಿಲ್‌ ಆಫ್‌ ಇಂಡಿಯಾದ ಸದಸ್ಯರಾಗಿದ್ದರು. ರಾಜಕಾರಣಿ, ಲೇಖಕ ಮತ್ತು ಪತ್ರಕರ್ತರಾಗಿದ್ದ ನೈಜ ಹೋರಾಟಗಾರ ಜಾರ್ಜ್‌ ಹಲವು ಬಾರಿ ವಿವಾದಕ್ಕೂ ಗುರಿಯಾಗಿದ್ದರು. ಅದರಲ್ಲೊಂದು ಎಲ್‌ಟಿಟಿಇ.

ಎಲ್‌ಟಿಟಿಇ ಬೆಂಬಲಿಗ:

ಉತ್ತರ ಮತ್ತು ಪೂರ್ವ ಶ್ರೀಲಂಕಾದಲ್ಲಿ ಸ್ವತಂತ್ರ ದೇಶಕ್ಕಾಗಿ ಹೋರಾಟ ನಡೆಸುತ್ತಿದ್ದ ವೇಲುಪಿಳ್ಳೈ ಪ್ರಭಾಕರನ್‌ ನೇತೃತ್ವದ ಎಲ್‌ಟಿಟಿಇಯ ದೀರ್ಘ ಕಾಲದ ಬೆಂಬಲಿಗರಲ್ಲಿ ಜಾರ್ಜ್‌ ಕೂಡ ಒಬ್ಬರಾಗಿದ್ದರು. 1977ಕ್ಕೂ ಮೊದಲು ಅವರೊಮ್ಮೆ ದೆಹಲಿಯಲ್ಲಿ ಎಲ್‌ಟಿಟಿಇ ಬೆಂಬಲಿತರ ಸಾರ್ವಜನಿಕ ಸಭೆಯನ್ನೂ ನಡೆಸಿದ್ದರು.

ವರದಿಗಳ ಪ್ರಕಾರ 1998ರಲ್ಲಿ ರಕ್ಷಣಾ ಸಚಿವರಾಗಿದ್ದಾಗ ಎಲ್‌ಟಿಟಿಇಗೆ ಶಸ್ತ್ರಾಸ್ತ್ರ ಹೊತ್ತೊಯ್ಯುತ್ತಿದ್ದ ಹಡಗಿನತ್ತ ತೆರಳದಂತೆ ನೌಕಾ ದಳವನ್ನು ಅವರು ತಡೆದಿದ್ದರು. ಎಲ್‌ಟಿಟಿಇಗೆ ಬೇಕಾದ ಹಣವನ್ನು ಒಟ್ಟುಗೂಡಿಸುತ್ತಿದ್ದ ಸಮಿತಿಯ ಪೋಷಕರಾಗಿಯೂ ಜಾರ್ಜ್‌ ಗುರುತಿಸಿಕೊಂಡಿದ್ದರು.

ಟಿಬೇಟ್‌ ಸ್ವಾತಂತ್ರ್ಯ ಹೋರಾಟದ ಬೆಂಬಲಿಗ ಜಾರ್ಜ್‌ಗೆ ದಲೈ ಲಾಮಾ ಸನ್ಮಾನ.
ಟಿಬೇಟ್‌ ಸ್ವಾತಂತ್ರ್ಯ ಹೋರಾಟದ ಬೆಂಬಲಿಗ ಜಾರ್ಜ್‌ಗೆ ದಲೈ ಲಾಮಾ ಸನ್ಮಾನ.
/ಟಿಬೇಟ್ ಟಾಟ್‌ ನೆಟ್

ಇದಿಷ್ಟೇ ಅಲ್ಲ. ಅಸ್ಮಿತೆಯ ಹಕ್ಕುಗಳಿಗಾಗಿ ಹೋರಾಡುವವರ ಪರ ಜಾರ್ಜ್‌ ಯಾವತ್ತೂ ನಿಂತಿರುತ್ತಿದ್ದರು. ಚೀನಾದಿಂದ ಸ್ವಾತಂತ್ರ್ಯ ಬಯಸಿದ್ದ ಟಿಬೆಟ್‌ನವರಿಗೆ ಅವರು ಬೆಂಬಲ ನೀಡುತ್ತಿದ್ದರು. ಪ್ರಜಾಪ್ರಭುತ್ವವಾದಿ ಮಯನ್ಮಾರ್‌ ಬಂಡುಕೋರ ಗುಂಪುಗಳಿಗೂ ಅವರ ಬೆಂಬಲವಿತ್ತು. ಈ ಗುಂಪಿನ ನಾಯಕರನ್ನೊಮ್ಮೆ ಭಾರತ ಸರಕಾರ ಬಂಧಿಸಿದಾಗ ಅವರ ಬಿಡುಗಡೆಗೆ ಸಹಾಯ ಮಾಡಿದ್ದರು.

2010

ಹೀಗೆ ಜೀವನದುದ್ದಕ್ಕೂ ಹೋರಾಟಗಳ ಅಗ್ನಿಕುಂಡದಲ್ಲಿ ಮಿಂದೆದ್ದವರಂತೆ ಬದುಕಿದ ಜಾರ್ಜ್‌ ಕೊನೆಯ ದಿನಗಳು ಮಾತ್ರ ಚೆನ್ನಾಗಿರಲಿಲ್ಲ. 2010ರ ಹೊತ್ತಿಗೆ ಜಾರ್ಜ್‌ ಹಾಸಿಗೆ ಹಿಡಿಯುತ್ತಿದ್ದಂತೆ ಮೊದಲ ಪತ್ನಿ ಲೈಲಾ ಕಬೀರ್‌ ಜಾರ್ಜ್‌ ಬದುಕಿಗೆ ವಾಪಾಸಾದರು. ಈ ಸಂದರ್ಭದಲ್ಲಿ ಕಬೀರ್‌ ಮತ್ತು ಜಾರ್ಜ್‌ ಜತೆಗಾರ್ತಿಯಾಗಿದ್ದ ಜಯಾ ಜೇಟ್ಲಿ ಮುನಿಸು ಉತ್ತುಂಗಕ್ಕೇರಿತ್ತು. ಅಷ್ಟೊತ್ತಿಗಾಗಲೇ ಅವರು ಜಯಾ ಜೇಟ್ಲಿ ಜತೆ ಸಂಸಾರ ಆರಂಭಿಸಿ 26 ವರ್ಷ ಕಳೆದಿತ್ತು.

ಅದೊಂದು ದಿನ ರಾತ್ರಿ 2 ಗಂಟೆ ಸುಮಾರಿಗೆ ನವದೆಹಲಿಯ 3-ಕೃಷ್ಣ ಮೆನನ್‌ ಮಾರ್ಗದಲ್ಲಿದ್ದ ಜಾರ್ಜ್‌ ಅಧಿಕೃತ ನಿವಾಸಕ್ಕೆ ತಮ್ಮ ಸಂಬಂಧಿಗಳ ಜತೆ ಲೈಲಾ ಕಬೀರ್‌ ದಾಗುಂಡಿ ಇಟ್ಟಿದ್ದರು. ‘ಇದು ಜಾರ್ಜ್‌ ಆಸ್ತಿ ವಶಕ್ಕೆ ಪಡೆದುಕೊಳ್ಳುವ ಯತ್ನ’ ಎಂಬುದಾಗಿ ಆಗ ಜಯಾ ಮೊದಲಾದವರ ಆರೋಪಿಸಿದ್ದರು.

ಸಮಾತಾ ಪಕ್ಷದ ಅಧ್ಯಕ್ಷೆಯೂ ಆಗಿದ್ದ ಎರಡನೇ ಪತ್ನಿ ಜಯಾ ಜೇಟ್ಲಿ ಜತೆ ಜಾರ್ಜ್.
ಸಮಾತಾ ಪಕ್ಷದ ಅಧ್ಯಕ್ಷೆಯೂ ಆಗಿದ್ದ ಎರಡನೇ ಪತ್ನಿ ಜಯಾ ಜೇಟ್ಲಿ ಜತೆ ಜಾರ್ಜ್.
/ಔಟ್‌ಲುಕ್

ಅಷ್ಟೊತ್ತಿಗಾಗಲೇ ಜಾರ್ಜ್‌ ಜಯಾ ಮತ್ತು ಅವರನ್ನು ನೋಡಿಕೊಳ್ಳುತ್ತಿದ್ದ ಫೆಡರಿಕ್‌ ಡಿ'ಸಾಗೆ ತಮ್ಮ ಆಸ್ತಿಯನ್ನು ಬರೆದುಕೊಟ್ಟಿದ್ದರು. ಜಾರ್ಜ್‌ ಫೆರ್ನಾಂಡಿಸ್‌ಗೆ ನೆಲಮಂಗಲದಲ್ಲಿ 10 ಎಕರೆ ಜಮೀನು, ಮಂಗಳೂರಿನಲ್ಲೊಂದು ಜಮೀನಿತ್ತು. ಅದನ್ನು ಮಾರಿ ಬಂದ ಹಣ ಹಾಗೂ ಇನ್ನೊಂದಷ್ಟು ಆಸ್ತಿಗಳನ್ನು ಇವರ ಹೆಸರಿಗೆ ವರ್ಗಾಯಿಸಿದ್ದರು. ಅದನ್ನು ವಶಕ್ಕೆ ಪಡೆಯಲು ಇಬ್ಬರು ಮಹಿಳೆಯರು ಹೋರಾಟ ಆರಂಭಿಸಿದರು.

ಲೈಲಾ ಕಬೀರ್‌ ಮಧ್ಯ ರಾತ್ರಿ ಮನೆಗೆ ಬಂದು ತೆರಳಿದ ನಂತರ ಅವರ ಪೋಷಕರಾಗಿ ಗುರುತಿಸಿಕೊಂಡರು. ಆಗ ಮತ್ತೆ ಜೂನ್‌ 30, 2010ರಂದು ಜಾರ್ಜ್‌ ಮನೆಗೆ ಅವರ ಸಹೋದರರಾದ ರಿಚರ್ಡ್‌ ಮತ್ತು ಮೈಖಲ್‌, ಜಾರ್ಜ್‌ ಎರಡನೇ ಪತ್ನಿ ಜಯಾ ಜೇಟ್ಲಿ ಜತೆ ನವದೆಹಲಿಯ ಮನೆಗೆ ಬಂದಿದ್ದರು. ಆದರೆ ಅವರನ್ನು ಅಧಿಕೃತ ನಿವಾಸದೊಳಕ್ಕೆ ಬಿಟ್ಟಿರಲಿಲ್ಲ. ಅವತ್ತು 3-ಕೃಷ್ಣ ಮೆನನ್‌ ಮಾರ್ಗದಲ್ಲಿದ್ದ ಜಾರ್ಜ್‌ ಮನೆ ಮುಂದೆ ರಂಪ ರಾಮಾಯಣ ನಡೆದಿತ್ತು. ಅವತ್ತು ಹಾಸಿಗೆಯಲ್ಲಿ ಜಾರ್ಜ್‌ ಜೀವ ಉಳಿಸಿಕೊಳ್ಳಲು ಹೋರಾಡುತ್ತಿದ್ದರೆ ಪತ್ನಿಯರು ಆಸ್ತಿಗಾಗಿ ಬೀದಿ ಕಾಳಗಕ್ಕೆ ಇಳಿದಿದ್ದರು. ಅವರನ್ನೂ ನಾವು ನೋಡಿಕೊಳ್ಳುತ್ತೇವೆ ಎಂದು ಆಸ್ತಿಯ ಆಸೆ ಮೇಲೆ ಪತ್ನಿಯರು ನ್ಯಾಯಾಲಯದ ಮೆಟ್ಟಿಲನ್ನೂ ಏರಿದ್ದರು.

ನ್ಯಾಯಾಲಯದಲ್ಲಿ ಈ ವಿಚಾರ ಏನಾಯಿತು ಎಂಬುದರ ಬಗ್ಗೆ ದೇಶ ಗಮನ ನೀಡಲಿಲ್ಲ. ಹಾಗೆಯೇ ಅನಾರೋಗ್ಯದಲ್ಲಿ ಹಾಸಿಗೆ ಹಿಡಿದಿದ್ದ ಜಾರ್ಜ್‌ ಫೆರ್ನಾಂಡೀಸ್ ಬಗೆಗೂ ಕೂಡ. ಇವತ್ತು ಅವರು ಸತ್ತ ಸುದ್ದಿ ಹೊರಬಿದ್ದಿದೆ. ಹೀಗಾಗಿ ಹಳೆಯ ನೆನಪುಗಳನ್ನು ಮೆಲುಕು ಹಾಕಲು ನೆಪವೊಂದು ಸಿಕ್ಕಂತಾಗಿದೆ.

ಫೀಷರ್‌ ಫೋಟೋ: ಆರ್ಕೊ ದತ್ತಾ/ ಜೆಟ್ಟಿ ಇಮೇಜಸ್