samachara
www.samachara.com
ಜಿಯೋ ಕ್ರಾಂತಿಯ ಅಸಲಿ ಕತೆ: ಭಾರತದ ‘***’ ಆಗಲು ಹೊರಟ ಮುಖೇಶ್ ಅಂಬಾನಿ- ಭಾಗ 1
COVER STORY

ಜಿಯೋ ಕ್ರಾಂತಿಯ ಅಸಲಿ ಕತೆ: ಭಾರತದ ‘***’ ಆಗಲು ಹೊರಟ ಮುಖೇಶ್ ಅಂಬಾನಿ- ಭಾಗ 1

ಮಾಧ್ಯಮಗಳ ಮೇಲೆ ಅಧಿಪತ್ಯ ಸ್ಥಾಪಿಸುವ ರಿಲಯನ್ಸ್‌ ಎಂಬ ಒಂದು ಖಾಸಗಿ ಕಂಪನಿಯ ಯತ್ನ ಆರಂಭವಾಗಿದ್ದು ಇಂದು ನಿನ್ನೆಯಲ್ಲ.

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಅನುಮಾನಗಳು ಕೊನೆಗೂ ನಿಜವಾಗಿವೆ. ಭಾರತದ ಉದ್ಯಮ ದೈತ್ಯ ಮುಖೇಶ್‌ ಅಂಬಾನಿ ದೇಶದ ಮಾಧ್ಯಮ ವಲಯವನ್ನು ತಮ್ಮ ಹಿಡಿತಕ್ಕೆ ತಗೆದುಕೊಳ್ಳಲು ಹೊರಟಿದ್ದಾರೆ. ಈ ಮೂಲಕ ಭಾರತದ ರುಪರ್ಟ್ ಮುರ್ಡೋಕ್‌ ಅಥವಾ ಅದಕ್ಕಿಂತಲೂ ಒಂದು ಹೆಜ್ಜೆ ಮುಂದಿರುವ ಈ ಕಾಲಘಟ್ಟದ ಉದ್ಯಮಿಯೊಬ್ಬನ ಲಕ್ಷಣಗಳು ಅವರಲ್ಲಿ ಕಾಣಿಸುತ್ತಿವೆ. ಇದಕ್ಕೆ ಸಾಕ್ಷಿಯಾಗಿ ಭಾರತದ ಟಿವಿ ಮಾಧ್ಯಮ ವಲಯದಲ್ಲಿ ಕಳೆದ ಕೆಲವು ದಿನಗಳಿಂದ ಮಿಂಚಿನ ಬೆಳವಣಿಗೆಗಳು ನಡೆಯುತ್ತಿವೆ.

ಮಾಧ್ಯಮಗಳ ಮೇಲೆ ಅಧಿಪತ್ಯ ಸ್ಥಾಪಿಸುವ ರಿಲಯನ್ಸ್‌ ಎಂಬ ಒಂದು ಖಾಸಗಿ ಕಂಪನಿಯ ಯತ್ನ ಆರಂಭವಾಗಿದ್ದು ಇಂದು ನಿನ್ನೆಯಲ್ಲ. ಧೀರೂಭಾಯಿ ಅಂಬಾನಿ ರಿಲಯನ್ಸ್‌ ಸಂಸ್ಥೆ ಸ್ಥಾಪಿಸಿದ್ದ ದಿನಗಳಲ್ಲೇ ಪತ್ರಿಕೆಗಳ ಮೇಲೆ ಪ್ರಭಾವ ಬೀರುತ್ತಿದ್ದರು. ಪತ್ರಿಕೆಗಳ ಜಾಹೀರಾತುಗಳ ಮೇಲೆ ಧೀರೂಭಾಯಿ ಅಂಬಾನಿ ಸ್ಥಾಪಿಸಿದ್ದ ಕಂಪನಿಯ ಹಿಡಿತ ಯಾವ ಮಟ್ಟಕ್ಕೆ ಇತ್ತು ಎಂಬುದನ್ನು ಅಜಿತ್‌ ಪಿಳ್ಳೈ ತಮ್ಮ ‘ಆಫ್‌ ದಿ ರೆಕಾರ್ಡ್‌’ ಬುಕ್‌ನಲ್ಲಿ ವಿವರಿಸಿದ್ದಾರೆ. ಇದೇ ರಿಲಯನ್ಸ್‌ನ ಒಂದು ದೊಡ್ಡ ತುಣುಕು ಈಗ ಮುಖೇಶ್‌ ಅಂಬಾನಿ ನೇತೃತ್ವದ ‘ರಿಲಯನ್ಸ್ ಇಂಡಸ್ಟ್ರೀಸ್‌ ಲಿ. (ಆರ್‌ಐಎಲ್‌)‘.

2014ರ ಹೊತ್ತಿಗೆ ಆರ್‌ಐಎಲ್‌ ಹಲವು ವಾಹಿನಿಗಳನ್ನು ಖರೀದಿಸಿತು. ‘ನೆಟ್ವರ್ಕ್‌ 18 ಗ್ರೂಪ್‌’ನಲ್ಲಿ ಹೂಡಿಕೆ ಮಾಡಿದ ಅಂಬಾನಿ, ಅದೇ ಗ್ರೂಪ್‌ ಮೂಲಕ ದಕ್ಷಿಣ ಭಾರತದ ಪ್ರಮುಖ ಟಿವಿ ಸಮೂಹ ‘ಈ ಟಿವಿ’ ಖರೀದಿಸಿದರು. ಈ ಮೂಲಕ ದೇಶದಲ್ಲೇ ಅತೀ ದೊಡ್ಡ ಟಿವಿ ವಾಹಿನಿಗಳ ಸಮೂಹದ ಒಡೆಯರಾಗಿ ಮೂಡಿ ಬಂದಿದ್ದರು. ಅದಾದ ನಂತರ ಅವರು ‘ರಿಲಯನ್ಸ್‌ ಜಿಯೋ’ ಹೆಸರಿನಲ್ಲಿ ಮೊಬೈಲ್‌ ಸೇವಾ ವಲಯದಲ್ಲಿ ಕಂಪನ ಮೂಡಿಸಿದ್ದರು. ಇದು ಅವರ ಮಾಧ್ಯಮಗಳ ಮೇಲೆ ನಿಯಂತ್ರಣ ಹೊಂದುವುದರ ಇನ್ನೊಂದು ಹಂತ. ಈ ಸಮಯದಲ್ಲಿ ತಮ್ಮ ಕೈಲಿರುವ ಮಾಧ್ಯಮಗಳ ಪ್ರಭಾವ ಎಂತದ್ದು ಎಂಬುದನ್ನು ಅವರೇ ಖುದ್ದಾಗಿ ದೇಶದ ಜನರ ಮುಂದೆ ಹೇಳಿಕೊಂಡರು ಕೂಡ.

Also read: ದೇಶದ ನಂ. 1 ಶ್ರೀಮಂತ ಬಿಚ್ಚಿಟ್ಟ ಮಾಧ್ಯಮ ವಹಿವಾಟಿನ ವಿವರ ಮತ್ತು 'ರಿಲಯನ್ಸ್ ಜಿಯೋ'!

ಇದೆಲ್ಲಾ ನಡೆದಿದ್ದು ಹೀಗೆ...

ಜಿಯೋ ಲಾಂಚ್ ಆಗಿದ್ದೇ ಒಂದು ಕುತೂಹಲಕಾರಿ ಕಥೆ. ಅದು 2010; ಸರಕಾರದ ರೇಡಿಯೋ ಸ್ಪೆಕ್ಟ್ರಂ ಹರಾಜಿನಲ್ಲಿ ಡಾಟಾಕ್ಕೆ ಮಾತ್ರ ಸೀಮಿತವಾಗಿದ್ದ ತರಂಗವನ್ನು ‘ಇನ್ಫೋಟೆಲ್‌ ಬ್ರಾಡ್‌ಬ್ಯಾಂಡ್‌ ಸರ್ವೀಸಸ್‌’ ಎಂಬ ಕಂಪನಿ ಖರೀದಿಸಿತ್ತು. ಅವತ್ತಿಗೆ ಕೇವಲ ಡಾಟಾ (ಇಂಟರ್‌ನೆಟ್‌) ಸೇವೆ ನೀಡುವ ಕಲ್ಪನೆಯೇ ಇರದಿದ್ದ ದಿನಗಳು. ಹಾಗಿರುವಾಗ ಹೆಸರೇ ಕೇಳದಿದ್ದ ಕಂಪನಿಯೊಂದು ಡಾಟಾಕ್ಕೆ ಮಾತ್ರ ಮೀಸಲಾದ ತರಂಗಗುಚ್ಛವನ್ನು ಖರೀದಿಸಿದ್ದು ಅಚ್ಚರಿ ಹುಟ್ಟಿಸಿತ್ತು. ಆದರೆ ಅದಕ್ಕೆಲ್ಲ ಕೆಲವೇ ಕ್ಷಣದಲ್ಲಿ ಉತ್ತರ ದೊರೆತಿತ್ತು.

ಹರಾಜು ಮುಗಿದ ಕೆಲವೇ ಗಂಟೆಗಳಲ್ಲಿ ಇನ್ಫೋಟೆಲ್‌ ಬ್ರಾಡ್‌ಬ್ಯಾಂಡ್‌ ಸಂಸ್ಥೆ ರಿಲಯನ್ಸ್‌ ತೆಕ್ಕೆಯಲ್ಲಿತ್ತು. ಇಡೀ ಕಂಪನಿಯನ್ನೇ ಮುಖೇಶ್‌ ಅಂಬಾನಿ ಖರೀದಿಸಿದ್ದರು. ಹೀಗಿದ್ದೂ ದೂರವಾಣಿ ಕರೆ ಸೇವೆಗಳನ್ನು ನೀಡಲಾಗದ ಕಂಪನಿ ಏನು ಮಾಡಲು ಸಾಧ್ಯ ಎಂದು ಅದಾಗಲೇ ಸ್ಥಾಪಿತವಾಗಿದ್ದ ಕಂಪನಿಗಳು ಸುಮ್ಮನಾಗಿದ್ದವು. ಆದರೆ ಅಂಬಾನಿ ಸುಮ್ಮನಾಗಿರಲಿಲ್ಲ. ಇನ್ಫೋಟೆಲ್‌ ಖರೀದಿಸಿದ ಅಂಬಾನಿ ಹೊಸ ತಂತ್ರಜ್ಞಾನದೊಂದಿಗೆ 2013ರಲ್ಲಿ ಪ್ರತ್ಯಕ್ಷವಾದರು. ಪರಿಣಾಮ ಸೃಷ್ಟಿಯಾಗಿದ್ದೇ ರಿಲಯನ್ಸ್‌ ಜಿಯೋ!

ರಿಲಯನ್ಸ್‌ ಜಿಯೋದ ಕಾರ್ಯಕ್ರಮವೊಂದರಲ್ಲಿ ಮುಖೇಶ್‌ ಅಂಬಾನಿ.
ರಿಲಯನ್ಸ್‌ ಜಿಯೋದ ಕಾರ್ಯಕ್ರಮವೊಂದರಲ್ಲಿ ಮುಖೇಶ್‌ ಅಂಬಾನಿ.

'ವಿಒಐಪಿ' (voip -Voice over Internet Protocol) ಎಂದು ಕರೆಯಲ್ಪಡುವ ಡಾಟಾ ಮೂಲಕವೇ ಕರೆ ಸೌಲಭ್ಯ ನೀಡುವ ತಂತ್ರಜ್ಞಾನದೊಂದಿಗೆ ಬಂದ ಅಂಬಾನಿಗೆ ನಿಯಮಗಳು ಅಡ್ಡಿಯಾಗಿತ್ತು. ಅದಕ್ಕಾಗಿ ರಿಲಯನ್ಸ್‌ ಸರಕಾರದ ಮುಂದೆ ಕುಳಿತು ನಿಯಮ ಬದಲಾವಣೆಗೆ ಯತ್ನಿಸಿತು. ಸರಕಾರ ನಿಯಂತ್ರಕರಿಗೆ ನಿಯಮ ಬದಲಾವಣೆಗೆ ಸೂಚಿಸಿದ್ದರಿಂದ ಡಾಟಾ ತರಂಗಗುಚ್ಛಗಳಲ್ಲೇ ಕರೆಗಳ ಸೇವೆ ನೀಡುವುದು ಸಾಧ್ಯವಾಯಿತು. ಹೀಗೆ 2016ರಲ್ಲಿ ಜಿಯೋಗೆ ಚಾಲನೆ ನೀಡಿದರು ಭಾರತ ದೊಡ್ಡ ಶ್ರೀಮಂತ ಉದ್ಯಮಿ ಮುಖೇಶ್‌ ಅಂಬಾನಿ.

Also read: ‘ದಿ ಪ್ರೈಮ್ ಮಿನಿಸ್ಟರ್ಸ್ ಆಫ್ ರಿಲಯನ್ಸ್ ಇಂಡಿಯಾ’: ಇಂದಿರಾ ಗಾಂಧಿಯಿಂದ ಮೋದಿವರೆಗೆ...!

ಕರೆ ಸೇವೆಗೆ ಬೇಕಾದ ತರಂಗಗುಚ್ಛವನ್ನೇ ಹೊಂದಿರದಿದ್ದ ಜಿಯೋ ಅನಿಯಮಿತ ಕರೆ ಸೇವೆಗಳನ್ನು ನೀಡಿ ಕೇವಲ ಡೇಟಾಕ್ಕೆ ಹಣ ಪಡೆಯುವ ಪ್ರಕ್ರಿಯೆ ಆರಂಭಿಸಿತು. ಈ ಸಂದರ್ಭದಲ್ಲಿ ಸ್ಮಾರ್ಟ್‌ ಫೋನ್‌ ಕೊಳ್ಳಲು ಸಾಧ್ಯವಿಲ್ಲದವರಿಗೆ ತಮ್ಮದೇ ಮೊಬೈಲ್‌ ಫೋನ್‌ಗಳನ್ನೂ ಅಂಬಾನಿ ಬಿಡುಗಡೆ ಮಾಡಿದರು. ನೋಡ ನೋಡುತ್ತಿದ್ದಂತೆ ಎಲ್ಲರನ್ನೂ ಹಿಂದಿಕ್ಕಿ ಮಾರುಕಟ್ಟೆ ಮೇಲೆ ಜಿಯೋ ಏಕಾಏಕಿ ಪ್ರಭುತ್ವ ಸ್ಥಾಪಿಸಿತು.

ಪರಿಣಾಮ ಮೂರು ವರ್ಷಗಳ ಹಿಂದೆ ಭಾರತದಲ್ಲಿ 12.5 ಕೋಟಿ ಇದ್ದ ಇಂಟರ್‌ನೆಟ್‌ ಸಂಪರ್ಕಗಳಿವತ್ತು 51.2 ಕೋಟಿ ತಲುಪಿದೆ. ಮತ್ತು ಪ್ರತಿ ತಿಂಗಳು 1.6 ಕೋಟಿ ಹೆಚ್ಚುವರಿ ಗ್ರಾಹಕರು ಅಂತರ್ಜಾಲಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಇದಕ್ಕೆಲ್ಲಾ ಕಾರಣವಾದ ಜಿಯೋ ಭಾರತದ ಸಣ್ಣ ಪುಟ್ಟ ನೆಟ್ವರ್ಕ್‌ಗಳನ್ನು ಅರಗಿಸಿಕೊಂಡು ಇವತ್ತಿಗೆ 25 ಕೋಟಿ ಗ್ರಾಹಕರನ್ನು ಸಂಪಾದಿಸಿಕೊಂಡಿದೆ.

ಸೀಮಿತ ಆದಾಯದ ನಿರೀಕ್ಷೆ ಇದ್ದಾಗಲೂ ಅಂಬಾನಿ ಜಿಯೋ ಮೇಲೆ ಬರೋಬ್ಬರಿ 2.28 ಲಕ್ಷ ಕೋಟಿ ಹೂಡಿಕೆ ಮಾಡಿದ್ದರಿಂದ ಉಳಿದ ಕಂಪನಿಗಳು ಆತಂಕದಲ್ಲಿವೆ. ಒಂದು ಕಾಲದಲ್ಲಿ ಭಾರತದ ಮೊಬೈಲ್‌ ಮಾರುಕಟ್ಟೆ ಆಳುತ್ತಿದ್ದ ಭಾರ್ತಿ ಏರ್ಟೆಲ್‌, ಜಿಯೋ ಪ್ರವೇಶದ ನಂತರ ಗ್ರಾಹರನ್ನೇನೋ ಹೆಚ್ಚಿಸಿಕೊಂಡಿದೆ. ಆದರೆ ಹಿಂದಿನ ಆದಾಯ ಮತ್ತು ಮಾರುಕಟ್ಟೆ ಶಕ್ತಿಯಾಗಿ ಉಳಿದುಕೊಂಡಿಲ್ಲ. ವೊಡಾಫೋನ್‌- ಐಡಿಯಾ ಜತೆ ವಿಲೀನಗೊಂಡು ತನ್ನನ್ನು ತಾನು ರಕ್ಷಿಸಿಕೊಂಡಿದೆ. ಈ ಹಂತದಲ್ಲಿ ಹೂಡಿಕೆಗೆ ಹಣವಿಲ್ಲದೆ ತನ್ನ ಆಸ್ತಿಗಳನ್ನು ಮಾರಾಟ ಮಾಡುತ್ತಿದೆ.

ಇದೇ ಅವಧಿಯಲ್ಲಿ ಮುಖೇಶ್‌ ತಮ್ಮ ಅನಿಲ್‌ ಅಂಬಾನಿಗೆ ಸೇರಿದ ರಿಲಯನ್ಸ್‌ ಬಾಗಿಲೆಳೆದುಕೊಂಡಿದೆ, ಟಾಟಾ ಇಂಡಿಕಾಂ ಮೊದಲಾದ ಇನ್ನಿತರ ಸಣ್ಣಪುಟ್ಟ ಕಂಪನಿಗಳು ಅಸ್ಥಿತ್ವ ಕಳೆದುಕೊಂಡಿದೆ. ಬಿಎಸ್‌ಎನ್‌ಎಲ್‌ ತೀವ್ರ ನಷ್ಟದಲ್ಲಿದೆ. ಜಿಯೋ ಕಾಲಿಟ್ಟ ನಂತರ ಬಳಕೆದಾರರ ಸಂಖ್ಯೆ ಗಣನೀಯವಾಗಿ ಜಾಸ್ತಿಯಾದರೂ ಮೊಬೈಲ್‌ ಸೇವಾ ವಲಯದಲ್ಲಿ ಹಣದ ಹರಿವು ಕಡಿಮೆಯಾದ ವಿಚಿತ್ರ ವಿದ್ಯಮಾನ ನಡೆದಿದೆ.

ಹೀಗಿರುವಾಗ ಭಾರತದ ಟೆಲಿಕಾಂ ವಲಯ ಮತ್ತೆ ಲಾಭಕ್ಕೆ ಮರಳಬೇಕಿದ್ದರೆ ಶೇಕಡಾ 50-70ರಷ್ಟು ದರ ಏರಿಕೆ ಅನಿವಾರ್ಯ ಎನ್ನುತ್ತದೆ ‘ದಿ ಎಕನಾಮಿಸ್ಟ್‌’ನ ಈ ವರದಿ. ಅಂದರೆ ಕ್ಷಣಿಕ ಉಚಿತ ಸೇವೆಗಳ ಲಾಭದಲ್ಲಿ ತೇಲುತ್ತಿರುವ ಗ್ರಾಹಕರು ಮುಂದಿನ ದಿನಗಳಲ್ಲಿ ಅದರ ಅಸಲು ಬಡ್ಡಿ ತೆರಲು ಸಿದ್ಧವಾಗಬೇಕಿದೆ.

ಮುಖೇಶ್‌ ಅಂಬಾನಿ: ಹೂಡಿಕೆ, ಸಾಲ ಮತ್ತು ಅಪರಿಮಿತ ವೇಗ...

2018ರ ಅಂತ್ಯಕ್ಕೆ ವರ್ಷವೊಂದಕ್ಕೆ ರಿಲಯನ್ಸ್ ಜಿಯೋ ಹೂಡಿಕೆ 70,000 ಕೋಟಿ ರೂಪಾಯಿಗಳಿಗೆ ತಲುಪಿದ್ದರೆ, ಅಂಬಾನಿಯ ಸಾಲ ಪ್ರಮಾಣ 3 ಲಕ್ಷ ಕೋಟಿ ರೂಪಾಯಿ ತಲುಪಿದೆ. ಇವತ್ತಿಗೆ ಅಂಬಾನಿ ವೇಗ ನೋಡುತ್ತಿದ್ದರೆ ಆತ ಭಾರತದ ಜೆಫ್‌ ಬೆಜೋಸ್‌ ಅಥವಾ ಜಾಕ್‌ ಮಾ ಆಗಲು ಹೊರಟಿದ್ದಾರೆ ಎನ್ನುತ್ತದೆ ದಿ ಎಕನಾಮಿಸ್ಟ್‌. ಇಂತಹ ಅಂತಾರಾಷ್ಟ್ರೀಯ ವಿಶ್ಲೇಷಣೆಗಳ ಆಳದಲ್ಲಿ ಭಾರತದ ಉದ್ಯಮ ಪ್ರಪಂಚ ಬದಲಾಗುತ್ತಿರುವ ಸುಳಿವುಗಳಿವೆ.

ಇದರ ಆರಂಭಿಕ ಬೆಳವಣಿಗೆಯಲ್ಲಿ ಅವರು ವೈರ್‌ಗಳ ಮೂಲಕ ಇಂಟರ್‌ನೆಟ್‌ ಸೇವೆ ನೀಡುವ ಬ್ರಾಡ್‌ಬ್ಯಾಂಡ್‌ ಮತ್ತು ಟವರ್‌ಗಳನ್ನು ಕಳೆದ ಡಿಸೆಂಬರ್‌ನಲ್ಲಿ ಜಿಯೋದಿಂದ ಪ್ರತ್ಯೇಕಿಸಿದ್ದಾರೆ. ಜತೆಗೆ ಇಂಟರ್‌ನೆಟ್‌ ಕ್ಷೇತ್ರದ ನಂತರ ‘ವೆಬ್‌ ಹೋಸ್ಟಿಂಗ್‌’ ಸೇವೆಗೂ ಅವರು ಇಳಿಯಲಿದ್ದಾರೆ. ಇದಲ್ಲದೆ ಕ್ರಿಕೆಟ್‌ ಪಂದ್ಯ ಮತ್ತು ಡಿಸ್ನಿ ಸಿನಿಮಾಗಳ ಹಕ್ಕುಗಳನ್ನು ಖರೀದಿಸಿ ‘ಜಿಯೋ ಟಿವಿ’ ಮೂಲಕ ನೇರ ಪ್ರಸಾರಕ್ಕೆ ಇಳಿದಿದ್ದಾರೆ.

ಫ್ಲಿಪ್‌ಕಾರ್ಟ್‌, ಅಮೆಜಾನ್‌ ಇ-ಕಾಮರ್ಸ್‌ ಏಕಸ್ವಾಮ್ಯಕ್ಕೆ ಅಂತ್ಯ ಹಾಡಲು ಮುಖೇಶ್‌ ಅಂಬಾನಿ ಸಿದ್ಧತೆ ಮಾಡಿಕೊಂಡಿದ್ದಾರೆ.
ಫ್ಲಿಪ್‌ಕಾರ್ಟ್‌, ಅಮೆಜಾನ್‌ ಇ-ಕಾಮರ್ಸ್‌ ಏಕಸ್ವಾಮ್ಯಕ್ಕೆ ಅಂತ್ಯ ಹಾಡಲು ಮುಖೇಶ್‌ ಅಂಬಾನಿ ಸಿದ್ಧತೆ ಮಾಡಿಕೊಂಡಿದ್ದಾರೆ.
/ಡಿಎನ್‌ಎ

ಇದರ ನಡುವೆ ಇ-ಕಾಮರ್ಸ್‌ ವಲಯಕ್ಕೂ ಕಾಲಿಡಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ವಾಲ್‌ಮಾರ್ಟ್‌ ಪ್ರಾಯೋಜಿತ ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್‌ಗೆ ಸಡ್ಡು ಹೊಡೆಯಲು ಅಂಬಾನಿ ಸಜ್ಜಾಗಿದ್ದು ಇದಕ್ಕೆ ಭಾರತ ಸರಕಾರವೇ ನೀರೆರಯಲಿದೆ ಎಂಬ ಭಯ ವಿದೇಶಿ ಕಂಪನಿಗಳನ್ನು ಕಾಡುತ್ತಿದೆ.

Also read: ‘ರಿಲಯನ್ಸ್‌ ರಿಟೇಲ್‌’ಗೆ ರತ್ನಗಂಬಳಿ; ಮೋದಿ ಸರಕಾರದ ಹೊಸ ‘ಇ-ಕಾಮರ್ಸ್‌ ಪಾಲಿಸಿ’

ಇದಕ್ಕೆ ಪುಷ್ಟಿ ನೀಡುವ ಬೆಳವಣಿಗೆಗಳೂ ನಡೆಯುತ್ತಿವೆ. ಡಿಸೆಂಬರ್‌ನಲ್ಲಿ ಭಾರತ ಸರಕಾರ ಅಮೆಜಾನ್‌, ಫ್ಲಿಪ್‌ಕಾರ್ಟ್‌ನಂತ ವಿದೇಶಿ ಇ-ಕಾಮರ್ಸ್‌ ಜಾಲತಾಣಗಳ ಮೇಲೆ ಒಂದಷ್ಟು ನಿಯಂತ್ರಣ ಕ್ರಮಗಳನ್ನು ಹೇರಿತ್ತು. ಇದು ರಿಲಯನ್ಸ್‌ಗೆ ಲಾಭ ತಂದುಕೊಡಲಿದೆ ಎಂಬ ಅನುಮಾನಗಳು ಇ-ಕಾಮರ್ಸ್‌ ವಲಯದಲ್ಲಿದೆ. ಇದರ ನಡುವೆ ಜನವರಿ 18ರಂದು ಮಾತನಾಡಿದ್ದ ಅಂಬಾನಿ, 'ಡಾಟಾ ವಸಾಹತುಶಾಹಿಯನ್ನು ಭಾರತ ಸರಕಾರ ತಡೆಯಬೇಕು. ಭಾರತೀಯರ ಮಾಹಿತಿಗಳನ್ನು ಜಾಗತಿಕ ಸಂಸ್ಥೆಗಳು ನಿಯಂತ್ರಿಸುವಂತಾಗಬಾರದು’ ಎಂದಿದ್ದಾರೆ. ಇವು ಇನ್ನಷ್ಟು ನಿಯಂತ್ರಣ ಕ್ರಮಗಳನ್ನು ಹೇರುವುದರ ಸೂಚನೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಹೀಗೆ ಮುಖೇಶ್‌ ಅಂಬಾನಿ ಎಂಬ ಪ್ರಧಾನಿ ನರೇಂದ್ರ ಮೋದಿ ಆಪ್ತ, ಭಾರತದ ನಂಬರ್‌ 1 ಶ್ರೀಮಂತ ಅಂತರಾಷ್ಟ್ರೀಯ ದೈತ್ಯ ಕಂಪನಿಗಳಾ ಗೂಗಲ್‌, ಅಮೆಜಾನ್‌, ವಾಲ್‌ಮಾರ್ಟ್‌ಗಳನ್ನು ಎದುರಿಸಲು ಹೊರಟಿದ್ದಾರೆ. ಆದರೆ ಇದಿಲ್ಲಿಗೆ ನಿಂತಿಲ್ಲ.

ಮೊಬೈಲ್‌ ಸೇವಾ ವಲಯವನ್ನು ಅನಿಶ್ಚಿತತೆಗೆ ತಳ್ಳಿ ಅತ್ತ ಇ-ಕಾಮರ್ಸ್‌ ಜಾಲತಾಣಗಳಿಗೆ ಮೂಗುದಾರ ಹಾಕಲು ಹೊರಟ ದಿಗ್ಗಜ ಉದ್ಯಮಿ ಇದೀಗ ಕೇಬಲ್‌ ಟಿವಿ ಮಾರುಕಟ್ಟೆಗೂ ಕಾಲಿಟ್ಟಿದ್ದಾರೆ. ಇದರೊಂದಿಗೆ ಬಿಜೋಸ್‌, ಜಾಕ್‌ ಮಾ ಮಾತ್ರವಲ್ಲ ಟಿವಿ ಮಾಧ್ಯಮ ಲೋಕದಲ್ಲಿ ಅವರ ಹೂಡಿಕೆಗಳನ್ನು ನೋಡುತ್ತಿದ್ದರೆ ಭಾರತದ ರೂಪರ್ಟ್‌ ಮುರ್ಡೋಕ್‌ ಆಗಲು ಹೊರಟವರಂತೆ ಕಾಣಿಸುತ್ತಿದ್ದಾರೆ.

ಹೇಗೆ?

(ನಾಳೆಗೆ)