samachara
www.samachara.com
ಕೊಪ್ಪಳದಲ್ಲಿ ಅಸ್ಪೃಶ್ಯತೆ; ಒಂದು ವರದಿ, ಎಚ್ಚೆತ್ತ ಜಿಲ್ಲಾಡಳಿತ, ದಿಕ್ಕು ತಪ್ಪಿದ ‘ಕನ್ನಡ ಪ್ರಭ’ & ಭವಿಷ್ಯ
COVER STORY

ಕೊಪ್ಪಳದಲ್ಲಿ ಅಸ್ಪೃಶ್ಯತೆ; ಒಂದು ವರದಿ, ಎಚ್ಚೆತ್ತ ಜಿಲ್ಲಾಡಳಿತ, ದಿಕ್ಕು ತಪ್ಪಿದ ‘ಕನ್ನಡ ಪ್ರಭ’ & ಭವಿಷ್ಯ

ಒಬ್ಬ ಬಾಯಾರಿದ ದಲಿತ ವ್ಯಕ್ತಿಗೆ ಬೊಗಸೆಯಲ್ಲಿ ನೀರುಡಿಸುವ ‘ಪುಣ್ಯದ ಕೆಲಸ’ ಇಲ್ಲಿನ್ನೂ ಜಾರಿಯಲ್ಲಿದೆ. ಅದರ ದೃಶ್ಯಾವಳಿಗಳು ಸಿಕ್ಕ ಮೇಲೂ ವರದಿ ಮಾಡದೆ ಸುಮ್ಮನೆ ಉಳಿಯಲು ಸಾಧ್ಯವಾಗಲಿಲ್ಲ.

Team Samachara

"ಅಸ್ಪೃಶ್ಯತೆ ಎಂಬುದು ಇವತ್ತಿಗೆ ಕ್ಲೀಷೆ ಆಗಿದೆ. ಅಲ್ಲಿ ಇಲ್ಲಿ ಮಾತ್ರವಲ್ಲ, ಪೂರ್ತಿ ದೇಶಾದ್ಯಂತ ಆಚರಣೆಯಲ್ಲಿದೆ. ಇದರ ಬಗ್ಗೆ ಎಷ್ಟು ಬರೆದರೂ ಅಷ್ಟೆ...”

ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ‘ಸಮಾಚಾರ’ ಅಸ್ಪೃಶ್ಯತೆ ಕುರಿತು ವರದಿಯೊಂದಕ್ಕೆ ಯೋಜನೆ ರೂಪಿಸುತ್ತಿದ್ದಾಗ ವ್ಯಕ್ತವಾದ ಪ್ರತಿಕ್ರಿಯೆಗಳು ಇವು. ಅಸ್ಪೃಶ್ಯತೆ ಕ್ಲೀಷೆ ಮಾತ್ರ ಅಲ್ಲ, ನಮಗೆ ಗೊತ್ತಿದ್ದೂ, ಗೊತ್ತಿಲ್ಲದ್ದಂತೆ ಬದುಕಿನ ಭಾಗವಾಗಿ ಹೋಗಿದೆ. ಎಲ್ಲಾ ಕಡೆಗಳಲ್ಲಿ ಇರುವಂತೆ, ನಮ್ಮ ತಂಡದ ಸದಸ್ಯರುಗಳ ಮನೆಗಳಲ್ಲಿಯೂ ಇದು ಆಚರಣೆಯಲ್ಲಿದೆ. ಹಾಗಾದರೆ ಇಂತಹದೊಂದು ಅನಿಷ್ಟವನ್ನು ಮೀರುವುದು ಹೇಗೆ?

ಇಂತಹ ಪ್ರಶ್ನೆಗಳನ್ನು ಎದುರಿಗೆ ಇಟ್ಟುಕೊಂಡಾಗ ಲಭ್ಯವಾಗಿದ್ದು ಕೊಪ್ಪಳ ಜಿಲ್ಲೆಯ ಮಾಹಿತಿ. ಇಲ್ಲಿ ಅಸ್ಪೃಶ್ಯತೆ ಆಚರಣೆಯಲ್ಲಿರುವುದು ಮಾತ್ರವಲ್ಲ, ಅದರ ಪರಾಕಾಷ್ಠೆಯನ್ನೂ ಇನ್ನೂ ಉಳಿಸಿಕೊಂಡಿದೆ ಎಂಬುದು. ಒಬ್ಬ ಬಾಯಾರಿದ ದಲಿತ ವ್ಯಕ್ತಿಗೆ ಬೊಗಸೆಯಲ್ಲಿ ನೀರುಡಿಸುವ ‘ಪುಣ್ಯದ ಕೆಲಸ’ ಇಲ್ಲಿನ್ನೂ ಜಾರಿಯಲ್ಲಿದೆ. ಅದರ ದೃಶ್ಯಾವಳಿಗಳು ಸಿಕ್ಕ ಮೇಲೂ ವರದಿ ಮಾಡದೆ ಸುಮ್ಮನೆ ಉಳಿಯಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಹುಟ್ಟಿದ್ದು ‘ಕೊಪ್ಪಳ ಎಂಬ ಅಸ್ಪೃಶ್ಯತೆ ಕೂಪದಲ್ಲಿ ಗಣತಂತ್ರದ ಅಣಕ; ದಲಿತರ ಪಾಲಿಗಿದು ನಿತ್ಯ ನರಕ’.

ವರದಿ ಬೆನ್ನಿಗೆ ಜ. 27ರಂದು ಬಹುತೇಕ ಸುದ್ದಿ ವಾಹಿನಿಗಳು ವರದಿಯನ್ನು ಪ್ರಸಾರ ಮಾಡಿದವು. ದಿಗ್ವಿಜಯ, ಟಿವಿ 5, ನ್ಯೂಸ್ 18, ಸುವರ್ಣ ನ್ಯೂಸ್, ಟಿವಿ 9ಗಳಲ್ಲಿ ಕೊಪ್ಪಳ ಜಿಲ್ಲೆಯ ಅಸ್ಪೃಶ್ಯತೆ ಆಚರಣೆಯನ್ನು ಬಿತ್ತರಿಸಿದವು. ಇದು ಸ್ವಾಗತಾರ್ಹ ಮತ್ತು ಅಗತ್ಯವಾಗಿದ್ದ ನಡೆ.

ಪರಿಣಾಮ, ಕೊಪ್ಪಳ ಜಿಲ್ಲಾಡಳಿತ ಕಣ್ಣು ತೆರೆಯಿತು. ಡಿವೈಎಸ್ಪಿ ಎಸ್. ಎಂ. ಸಂದಿಗವಾಡ, ತಹಶೀಲ್ದಾರ್ ಜೆ. ಬಿ. ಮಜ್ಜಿಗಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಟರಾಜ್‌ರನ್ನು ಬಹದ್ದೂರು ಬಂಡಿ ಹೊಸೂರಿಗೆ ಕಳುಹಿಸಿತು. ಸದ್ಯ ಜಿಲ್ಲಾಧಿಕಾರಿಗಳು ಹಳ್ಳಿಯಲ್ಲಿ ಅಸ್ಪೃಶ್ಯತೆಯ ಕುರಿತು ಸಮಗ್ರ ವರದಿ ನೀಡುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದೆ ಎಂಬ ಮಾಹಿತಿ ಇದೆ. ಇವಿಷ್ಟು ವರದಿಯೊಂದು ಪ್ರಕಟವಾದ ನಂತರ ಬೆಳವಣಿಗೆ.

ಮಾದ್ಯಮಗಳ ವರದಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕನಿಷ್ಟ ಮಟ್ಟದ ಜೀವಂತಿಕೆ ತೋರಿಸಿದ್ದ ಸ್ವಾಗತಾರ್ಹವೇ. ಆದರೆ ಇದರಲ್ಲೂ ನಮ್ಮ ಆಳುವವರ ಜಾಣ ಕುರುಡು ಮತ್ತು ಕಿವುಡು ಎದ್ದು ಕಾಣಿಸುತ್ತಿದೆ. ‘ಸಮಾಚಾರ’ದ ವರದಿ ಒಂದು ಹಳ್ಳಿಯಲ್ಲಿನ ಅಸ್ಪೃಶ್ಯತೆ ಆಚರಣೆಯನ್ನು ಸಾಕ್ಷಿ ಸಮೇತ ಮುಂದಿಟ್ಟಿತ್ತು. ಜತೆಗೆ, ಇಡೀ ಜಿಲ್ಲೆಯ ನಾನಾ ಹಳ್ಳಿಗಳ ಪರಿಸ್ಥಿತಿಯನ್ನು ವಸ್ತುನಿಷ್ಟವಾಗಿ ತೆರೆದಿಟ್ಟಿತ್ತು. ಹೀಗಿದ್ದರೂ, ಒಂದು ಹಳ್ಳಿಗೆ ಸೀಮಿತವಾಗಿ ಜಿಲ್ಲಾಡಳಿತ ವರದಿ ತಯಾರಿಸುವುದು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಕ್ರಮ ಅಷ್ಟೆ. ಜತೆಗೆ, ಅನಿಷ್ಟ ಪದ್ಧತಿಯೊಂದನ್ನು ಮುಗಿಸಲು ಇಚ್ಚಾಶಕ್ತಿಯನ್ನು ಪ್ರದರ್ಶಿಸಲು ಅದು ತಯಾರಿಲ್ಲ ಎಂಬುದರ ಸಂಕೇತ.

ಅಧಿಕಾರಿಗಳ ಭೇಟಿ ಎಂಬ ನಾಟಕ

ಭಾನುವಾರ (ಜ.27) ಕೊಪ್ಪಳದ ಬಹದ್ದೂರ್ ಬಂಡಿ ಹೊಸಳ್ಳಿ ಎಂಬ ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳು ದಲಿತರು ಹಾಗೂ ಮೇಲ್ಜಾತಿ ಜನರ ಶಾಂತಿ ಸಭೆ ನಡೆಸಿದ್ದಾರೆ. ‘ಗ್ರಾಮದಲ್ಲಿ ಅಸ್ಪೃಶ್ಯತೆ ಇದೆಯೇ..? ನಿಮ್ಮನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆಯೇ..? ಹಾಗಿದ್ದರೆ ಪೊಲೀಸರಿಗೆ ದೂರು ನೀಡಿ’ ಎಂದು ದಲಿತರ ಬಳಿ ಮಾತನಾಡಿದ್ದಾರೆ. ಆದರೆ ಯಾರೂ ಸಹ ದೂರು ನೀಡಲು ಮುಂದಾಗಿಲ್ಲ. ಕೊನೆಗೆ ಸವರ್ಣೀಯರನ್ನು ಎಚ್ಚರಿಸಿ, ಸಂಧಾನ ಸಭೆ ಮುಗಿಸಿದ್ದಾರೆ.

ಕೊಪ್ಪಳದಲ್ಲಿ ದಲಿತರು ಈಗಲೂ ಜೀವ ಭಯದಲ್ಲೇ ಬದುಕು ನಡೆಸುವ ಪರಿಸ್ಥಿತಿ ಇದೆ. ಎಲ್ಲಾ ಗ್ರಾಮಗಳಲ್ಲೂ ಸವರ್ಣೀಯರ ಸಂಖ್ಯೆ ಅಧಿಕ. ಅಲ್ಪ ಸಂಖ್ಯಾತರಾಗಿರುವ ದಲಿತರು ಅಸ್ಪೃಶ್ಯತೆ ವಿರುದ್ಧ ಮಾತನಾಡುವುದಿರಲಿ ಸ್ವತಂತ್ರ್ಯವಾಗಿ ಉಸಿರಾಡುವುದು ಸಹ ಕಷ್ಟವಿದೆ.

"ಅಸ್ಪೃಶ್ಯತೆ ವಿರುದ್ಧ, ಸವರ್ಣೀಯರ ದಬ್ಬಾಳಿಕೆ ವಿರುದ್ಧ ದ್ವನಿ ಎತ್ತಿದರೆ ದಲಿತರನ್ನು ಹೆದರಿಸಿ ಬೆದರಿಸಿ ಊರನ್ನೇ ಬಿಡಿಸುತ್ತಾರೆ. ಹೀಗೆ ಕೊಪ್ಪಳದಿಂದ ಊರು ಬಿಟ್ಟ ದಲಿತರ ಕುಟುಂಬಗಳ ದೊಡ್ಡ ಪಟ್ಟಿಯೇ ಇದೆ," ಎನ್ನುತ್ತಾರೆ ದಲಿತ ಮುಖಂಡ ಹುಸೇನಪ್ಪ ಮಾದಿಗ.

ಜಾತಿ ಹೆಸರಿನಲ್ಲಿ ನಿಂದನೆ ಮಾಡುವವರ, ದಬ್ಬಾಳಿಕೆ ನಡೆಸುವವರ ವಿರುದ್ಧ ಕೊಪ್ಪಳದಲ್ಲಿ ಈವರೆಗೆ ದಲಿತರು ದಾಖಲಿಸಿರುವ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಕೇವಲ ಶೇ.1ರಷ್ಟು. ಅಂದರೆ ಕೊಪ್ಪಳ ಭಾಗದಲ್ಲಿ ಪ್ರಸ್ತುತ ದಲಿತರ ಪರಿಸ್ಥಿತಿಯನ್ನು ನೀವೆ ಊಹಿಸಿಕೊಳ್ಳಿ. ಇಂತಹ ಹಿನ್ನೆಲೆ ಇರುವ ಕೊಪ್ಪಳ ಗ್ರಾಮಗಳ ಸವರ್ಣೀಯರ ವಿರುದ್ಧ ದಲಿತರು ದೂರು ನೀಡುವುದು ವಾಸ್ತವದಲ್ಲಿ ಸಾಧ್ಯವೇ?

ಕೊಪ್ಪಳ ಜಿಲ್ಲೆ ಬಹದ್ದೂರ್ ಬಂಡಿ ಹೊಸೂರು ಗ್ರಾಮದಲ್ಲಿ ಅಸ್ಪೃಶ್ಯತೆ ವರದಿಗಳ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಸವರ್ಣೀಯರ ಸಭೆ. 
ಕೊಪ್ಪಳ ಜಿಲ್ಲೆ ಬಹದ್ದೂರ್ ಬಂಡಿ ಹೊಸೂರು ಗ್ರಾಮದಲ್ಲಿ ಅಸ್ಪೃಶ್ಯತೆ ವರದಿಗಳ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಸವರ್ಣೀಯರ ಸಭೆ. 
ದಲಿತರು ದೂರು ನೀಡಲು ಮುಂದಾಗುತ್ತಿಲ್ಲ. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಾರ್ಗದರ್ಶನದಲ್ಲಿ ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆ, ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆ ಒಟ್ಟಾಗಿ ಸಮಾಲೋಚನೆ ನಡೆಸಿ ಆ ನಂತರ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು.
ಎಸ್. ಎಂ. ಸಂದಿಗವಾಡ, ಡಿವೈಎಸ್‌ಪಿ ಕೊಪ್ಪಳ

ಕಾನೂನಿನ ಮಾಹಿತಿ:

ಭಾರತದ ಗ್ರಾಮೀಣ ಭಾಗಗಳಲ್ಲಿ ದಲಿತರು ಸವರ್ಣೀಯರ ವಿರುದ್ಧ ದೂರು ದಾಖಲಿಸುವುದು ಅಸಾಧ್ಯ ಎಂಬ ಕಾರಣಕ್ಕಾಗಿಯೇ 1986ರಲ್ಲಿ ಭಾರತ ಸರಕಾರ ಅಸ್ಪೃಶ್ಯತಾ ನಿವಾರಣಾ ಕಾಯ್ದೆಯನ್ನು ಜಾರಿ ಮಾಡಿತ್ತು. ಈ ಕಾಯ್ದೆಗೆ 2015ರಲ್ಲಿ ಮತ್ತೊಮ್ಮೆ ತಿದ್ದುಪಡಿ ತರಲಾಗಿದೆ.

ಈ ಕಾಯ್ದೆಯ ಪ್ರಕಾರ ಯಾವುದೇ ಗ್ರಾಮಗಳಲ್ಲಿ ಅಸ್ಪೃಶ್ಯತೆ ಅಥವಾ ಜಾತಿ ಹೆಸರಿನಲ್ಲಿ ದಲಿತರನ್ನು ನಿಂದಿಸುವುದು ಅಪಮಾನಿಸುವುದು ಕಾನೂನುಬಾಹಿರ. ಇಂತಹ ಪ್ರಕರಣಗಳು ಕಂಡುಬಂದರೆ ಜಿಲ್ಲಾಡಳಿತ ಅಥವಾ ನ್ಯಾಯಾಲಯಗಳು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳುವ ಅಧಿಕಾರ ನೀಡಲಾಗಿದೆ. ಇಂತಹ ಪ್ರಕರಣಗಳಿಗಾಗಿಯೇ ವಿಶೇಷ ವಕೀಲರನ್ನೂ ನೇಮಿಸಲಾಗಿದ್ದು, ಪ್ರಕರಣವನ್ನು ಎರಡು ತಿಂಗಳಲ್ಲಿ ಮುಗಿಸುವ ಗಡುವು ನೀಡಲಾಗಿದೆ.

ದಲಿತರಿಗೆ ಈ ಕಾನೂನಿನ ಮಾಹಿತಿ ಇಲ್ಲ. ಸವರ್ಣೀಯರ ವಿರುದ್ಧ ದೂರು ದಾಖಲಿಸುವ ಧೈರ್ಯವೂ ಇಲ್ಲ. ಆದರೆ ಕಾನೂನಿನ ಅರಿವಿರುವ ಅಧಿಕಾರಿಗಳು ಸಹ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲು ಮುಂದಾಗುತ್ತಿಲ್ಲ. ಮಾಧ್ಯಮದಲ್ಲಿ ಇಂತಹ ವರದಿಗಳಾದಾಗ ಮಾತ್ರ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವರದಿ ನೀಡಿ ಜಾರಿಕೊಂಡರೆ ಸಮಸ್ಯೆ ನಿವಾರಣೆಯಾಗುತ್ತಾ?

ಈ ಕುರಿತು ‘ಸಮಾಚಾರ’ ಕೊಪ್ಪಳದ ತಹಶೀಲ್ದಾರ್ ಜೆ. ಬಿ. ಮಜ್ಜಿಗಿ ಅವರನ್ನು ಸಂಪರ್ಕಿಸಿದಾಗ, “ಸಮಾಜ ಕಲ್ಯಾಣ ಇಲಾಖೆಯವರಿಗೆ ಅಸ್ಪೃಶ್ಯತೆ ಕುರಿತು ವರದಿ ನೀಡುವಂತೆ ಜಿಲ್ಲಾಡಳಿತ ಆದೇಶಿಸಿದೆ. ವರದಿಯ ನಂತರ ಕ್ರಮ ಜರುಗಿಸುತ್ತೇವೆ,” ಎಂಬ ಹಾರಿಕೆಯ ಉತ್ತರ ನೀಡುತ್ತಾರೆ. ಇನ್ನೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಬಿ.ಕಲ್ಲೇಶ್ ಹಾಗೂ ನಟರಾಜ್ ಕರೆ ಸ್ವೀಕರಿಸುತ್ತಿಲ್ಲ.

'ಕನ್ನಡ ಪ್ರಭಏನಿದು?:

ಕನ್ನಡ ಪ್ರಭ ವರದಿ. 
ಕನ್ನಡ ಪ್ರಭ ವರದಿ. 

ಈ ನಡುವೆ, ಕೊಪ್ಪಳ ಜಿಲ್ಲೆಯಲ್ಲಿ 2016ರ ವಿಡಿಯೋ ಒಂದು ವೈರಲ್ ಆಗಿದೆ ಎಂದು ‘ಕನ್ನಡ ಪ್ರಭ’ ವರದಿ ಮಾಡಿದೆ. ಕನಿಷ್ಟ ವೃತ್ತಿ ಬದ್ಧತೆ ಪ್ರದರ್ಶನ ಕಾಣದ ಈ ವರದಿಯಲ್ಲಿ, ವಾಸ್ತವವನ್ನು ತಿರುಚುವ ಪ್ರಯತ್ನವೂ ಕಾಣಿಸುತ್ತಿದೆ.

2016ರ ದೃಶ್ಯಾವಳಿಯೊಂದನ್ನು ಆಧಾರವಾಗಿಟ್ಟುಕೊಂಡೇ ‘ಸಮಾಚಾರ’ 2019ರಲ್ಲಿ ಜಿಲ್ಲೆಗೆ ಭೇಟಿ ಕೊಟ್ಟಿತ್ತು. ಅಸಹ್ಯಕರ ವಿಚಾರ ಏನೆಂದರೆ, ಮೂರು ವರ್ಷಗಳ ಹಿಂದೆ ಇದ್ದ ದೃಶ್ಯಗಳೇ 2019ರಲ್ಲೂ ಕ್ಯಾಮೆರಾ ಮುಂದೆ ಪುನರಾವರ್ತನೆಯಾಗಿವೆ. ಅನಿಷ್ಟ ಪದ್ಧತಿ ಇವತ್ತಿಗೂ ಆಚರಣೆಯಲ್ಲಿದೆ. ಇದಕ್ಕೆ ಪೂರಕವಾಗಿರುವ ಸಾಕ್ಷಿಗಳನ್ನು ಈಗಾಗಲೇ ಕೊಪ್ಪಳ ಜಿಲ್ಲಾಡಳಿತಕ್ಕೆ, ಪೊಲೀಸ್ ಅಧಿಕಾರಿಗಳ ಜತೆ ಹಂಚಿಕೊಳ್ಳಲಾಗಿದೆ.

ಆದರೆ, ಇದನ್ನು ಪರಿಶೀಲನೆಗೂ ಒಳಪಡಿಸದೆ ಒಟ್ಟಾರೆ ಬೆಳವಣಿಗೆಯನ್ನು ದಿಕ್ಕು ತಪ್ಪಿಸುವ ಪ್ರಯತ್ನ ‘ಕನ್ನಡ ಪ್ರಭ’ದ ಸ್ಥಳೀಯ ವರದಿ ಮಾಡಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಜಿಲ್ಲಾಡಳಿತಕ್ಕೆ ಸಲ್ಲಿಸುವ ವರದಿಯನ್ನು ತಿರುಚುವ ಪ್ರಯತ್ನವೊಂದನ್ನು ವ್ಯವಸ್ಥಿತವಾಗಿ ಆರಂಭವಾಗಿದೆ ಎಂಬ ಮಾಹಿತಿ ಇದೆ.

ಮುಂದೇನು?:

ಶತಮಾನಗಳಿಂದ ಆಚರಣೆಯಲ್ಲಿರುವ ಯಾವ ಅನಿಷ್ಟ ಆಚರಣೆಯೂ ಒಂದೇ ಏಟಿಗೆ ಕಿತ್ತೊಗೆಯಲು ಸಾಧ್ಯವಾಗದು. ಆದರೆ ನಿರಂತರ ಜಾಗೃತಿ, ಹೋರಾಟಗಳು ಮಾತ್ರವೇ ಕಾಲಕಾಲಕ್ಕೆ ಜನರಲ್ಲಿ ಸೂಕ್ಷ್ಮತೆಗಳನ್ನು ಬೆಳೆಸಲು ಸಾಧ್ಯವಾಗುತ್ತದೆ.

ಕೊಪ್ಪಳ ಜಿಲ್ಲೆಯಲ್ಲಿ ಜಾರಿಯಲ್ಲಿರುವ ಅಸ್ಪೃಶ್ಯತೆ ಆಚರಣೆ ಕುರಿತು ಈಗ ನಿಧಾನವಾಗಿ ಸರಕಾರದ ಕ್ರಮಗಳು ಶುರುವಾಗಿವೆ. ಸ್ಥಳೀಯರು ಈ ಕುರಿತು ಜಾಗೃತಿ ಹಾಗೂ ಹೋರಾಟಕ್ಕೆ ಇಳಿಯುವ ತೀರ್ಮಾನ ಮಾಡಿದ್ದಾರೆ. ಜತೆಗೆ, ಅಧಿಕಾರಿಗಳಿಂದ ವಸ್ತುನಿಷ್ಠ ವರದಿಯೊಂದನ್ನು ನಿರೀಕ್ಷಸಬೇಕಿದೆ.

ಮುಂದಿನ ದಿನಗಳಲ್ಲಿ ಕರ್ನಾಟಕದ ಇತರೆ ಜಿಲ್ಲೆಗಳಲ್ಲಿ ಇರುವ ಇಂತಹ ಆಚರಣೆಗಳನ್ನು ಸಾಕ್ಷಿ ಸಮೇತ ಮುಂದಿಡುವ ಕೆಲಸ ‘ಸಮಾಚಾರ’ವೂ ಮಾಡಲಿದೆ. ಈ ಮೂಲಕ ಇದೊಂದು ಸುದೀರ್ಘ ಅಭಿಯಾನದ ಆರಂಭ ಅಷ್ಟೆ ಎಂಬುದನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇವೆ.