samachara
www.samachara.com
ಕೈಕೊಟ್ಟ ಮಳೆ, ವ್ಯಾಪಾರಿಗಳಿಂದ ಸುಲಿಗೆ: ಸಣ್ಣ ಬೆಳೆಗಾರರ ಸಮಸ್ಯೆಗೆ ಕುರುಡಾದ ಕಾಫಿ ಬೋರ್ಡ್
COVER STORY

ಕೈಕೊಟ್ಟ ಮಳೆ, ವ್ಯಾಪಾರಿಗಳಿಂದ ಸುಲಿಗೆ: ಸಣ್ಣ ಬೆಳೆಗಾರರ ಸಮಸ್ಯೆಗೆ ಕುರುಡಾದ ಕಾಫಿ ಬೋರ್ಡ್

ಒಂದು ಏಕರೆಯಲ್ಲಿ ಕಾಫಿ ಬೆಳೆಯಲು 1.25 ಲಕ್ಷ ಖರ್ಚಾಗುತ್ತದೆ. ಆದರೆ, ಬರುವ ಆದಾಯ ಕೇವಲ 50 ಸಾವಿರ ಮಾತ್ರ. ಕಾಫಿ ಬೆಳೆಗಾರರಿಗೆ ಏಕರೆ ಒಂದಕ್ಕೆ ಸುಮಾರು 75 ಸಾವಿರ ನಷ್ಟ ಉಂಟಾಗುತ್ತಿದೆ ಎನ್ನುತ್ತಾರೆ ಚಿಕ್ಕಮಗಳೂರಿನ ಕಾಫಿ ಬೆಳೆಗಾರರಾದ ರಮೇಶ್.

ಅಶೋಕ್ ಎಂ ಭದ್ರಾವತಿ

ಅಶೋಕ್ ಎಂ ಭದ್ರಾವತಿ

ರಾಷ್ಟ್ರದಲ್ಲೇ ಅತಿಹೆಚ್ಚು ಕಾಫಿ ಬೀಜಗಳನ್ನು ಉತ್ಪಾದಿಸುವ ರಾಜ್ಯ ಕರ್ನಾಟಕ. ಕರ್ನಾಟಕದಲ್ಲಿ ಬೆಳೆಯಲಾಗುವ ಕಾಫಿ ಬೀಜಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲ ದೊಡ್ಡ ಬೇಡಿಕೆ ಇದೆ. ಆ ಕಾರಣಕ್ಕೆ ಇಲ್ಲಿ ಬೆಳೆಯಲಾಗುವ ಕಾಫಿ ಬೀಜಗಳ ಪೈಕಿ ಶೇ.80ರಷ್ಟು ವಿದೇಶಕ್ಕೆ ರಫ್ತಾಗುತ್ತದೆ. ಒಂದು ಕಾಲದಲ್ಲಿ ಕಾಫಿ ಬೆಳೆ ಕೋಟ್ಯಾಂತರ ರೂಪಾಯಿಗಳ ವ್ಯವಹಾರವಾಗಿತ್ತು. ‘ಚಿನ್ನದ ಫಸಲು’ ಎಂದೇ ಕರೆಸಿಕೊಂಡಿತ್ತು. ಕಾಫಿ ಬೆಳಗಾರ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು.

ಇದೆಲ್ಲಾ ಕೆಲವು ವರ್ಷಗಳ ಹಿಂದಿನ ಕತೆ. ಇವತ್ತು ಪರಿಸ್ಥಿತಿಯಲ್ಲಿ ಒಂದಷ್ಟು ಬದಲಾವಣೆಗಳಾಗಿವೆ. ಇವತ್ತಿಗೂ ಕಾಫಿ ಲಾಭದಾಯಕ ವಾಣಿಜ್ಯ ಬೆಳೆ. ಆದರೆ ಲಾಭ ಮಾತ್ರ ಬೆಳೆಯುವ ರೈತರಿಗೆ ಸಿಗುತ್ತಿಲ್ಲ. ಕಾಫಿ ಬೆಳೆ ಹಾಗೂ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಈ ಹೊಸ ಲಾಭ- ನಷ್ಟಗಳ ಲೆಕ್ಕಾಚಾರಗಳನ್ನು ವಿವರವಾಗಿ ಮುಂದಿಡುತ್ತಿದೆ ‘ಸಮಾಚಾರ’ದ ಈ ವರದಿ.

ಇಳಿಮುಖದತ್ತ ಕಾಫಿ ಇಳುವರಿ:

ದೇಶದ ಒಟ್ಟಾರೆ ಕಾಫಿ ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಶೇ.71. ಇಲ್ಲಿನ ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕಾಫಿ ಬೆಳೆಯಲಾಗುತ್ತದೆ. ಈ ಪೈಕಿ ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ ಶೇ.50 ಕ್ಕೂ ಹೆಚ್ಚು ಪ್ರಮಾಣ ಕಾಫಿ ಉತ್ಪಾದನೆಯಾಗುತ್ತಿದೆ.

ಉತ್ಕೃಷ್ಟ ಗುಣಮಟ್ಟದ ಕಾಫಿ ತಳಿಗಳಾದ ಅರೇಬಿಕಾ ಹಾಗೂ ರೊಬುಸ್ಟಾ ತಳಿಗಳಿಗೆ ಕರ್ನಾಟಕ ಹೆಸರುವಾಸಿ. ಅದರಲ್ಲೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯನ್ನು ಉಳಿಸಿಕೊಂಡಿರುವ ಅರೇಬಿಕಾ ತಳಿಯ ಇಳುವರಿಯಲ್ಲಿ ಚಿಕ್ಕಮಗಳೂರು ಮುಂದಿದೆ. ರಾಜ್ಯದ ಕಾಫಿ ಇಂಗ್ಲೆಂಡ್, ಜರ್ಮನ್ ಸೇರಿದಂತೆ ಯುರೋಪ್ ಹಾಗೂ ಆಫ್ರಿಕಾ ಖಂಡದ ಹತ್ತಾರು ದೇಶಗಳಿಗೆ ರಫ್ತಾಗುತ್ತದೆ.

ಆದರೆ ಕಳೆದ ಎರಡು ವರ್ಷದಲ್ಲಿ ಯಾವ ಜಿಲ್ಲೆಯಲ್ಲೂ ನಿರೀಕ್ಷಿತ ಪ್ರಮಾಣದಲ್ಲಿ ಕಾಫಿ ಬೆಳೆ ಉತ್ಪಾದನೆಯಾಗುತ್ತಿಲ್ಲ. 2017-2018ರ ಸಾಲಿನಲ್ಲಿ ರಾಜ್ಯದಲ್ಲಿ 3,16,000 ಮೆಟ್ರಿಕ್ ಟನ್ ಕಾಫಿ ಬೆಳೆ ನಿರೀಕ್ಷೆ ಮಾಡಲಾಗಿತ್ತು. ಆದರೆ ನಿರೀಕ್ಷೆಗಿಂತ ಶೇ.15.92 ರಷ್ಟು ಬೆಳೆ ಕುಂಠಿತವಾಗಿತ್ತು.

ಇನ್ನೂ 2018-19ರ ಮಾನ್ಸೂನ್ ಮಳೆಗೆ ಮುಂಚಿತವಾಗಿ 3.19 ಲಕ್ಷ ಮೆಟ್ರಿಕ್ ಟನ್ ಬೆಳೆ ನಿರೀಕ್ಷೆ ಮಾಡಲಾಗಿತ್ತು. ಆದರೆ ಕೈಸೇರಿದ್ದು ಮಾತ್ರ 2.55 ಲಕ್ಷ ಮೆಟ್ರಿಕ್ ಟನ್. ವರ್ಷದಿಂದ ವರ್ಷಕ್ಕೆ ಕಾಫಿ ಉತ್ಪಾದನೆಯಲ್ಲಿ ಇಳಿಮುಖವಾಗುತ್ತಲೇ ಇದೆ. ಇದಕ್ಕೆ ಕಾರಣಗಳೂ ಇಲ್ಲದೆ ಏನಿಲ್ಲ.

ಅರೇಬಿಕಾ ತಳಿಯ ಕಾಫಿ ಬೀಜ.
ಅರೇಬಿಕಾ ತಳಿಯ ಕಾಫಿ ಬೀಜ.

ರಾಜ್ಯದಲ್ಲಿ ಕಳೆದ ಎರಡು ವರ್ಷದಿಂದ ಸರಿಯಾದ ಮಳೆ ಇಲ್ಲ. ಉತ್ತಮ ಗುಣಮಟ್ಟದ ಕಾಫಿ ಬೆಳೆ ತೆಗೆಯಬೇಕು ಎಂದರೆ ಕನಿಷ್ಟ 70 ಇಂಚು ಮಳೆಯಾಗಬೇಕು. ಆದರೆ ಅರೆ ಮಲೆನಾಡು ಪ್ರದೇಶವಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ನಿರೀಕ್ಷಿತ ಮಳೆಯಾಗಿಲ್ಲ. ಇನ್ನೂ ಕೊಡಗಿನಲ್ಲಿ ಮಳೆ ಸೃಷ್ಟಿಸಿದ ಅನಾಹುತಕ್ಕೆ ಇಡೀ ಜಿಲ್ಲೆಯ ಕಾಫಿ ಬೆಳೆ ನಕ್ಷೆಯೇ ಬದಲಾಗಿದೆ.

ಮಳೆಯ ಆಟ ಒಂದೆಡೆಯಾದರೆ, ಬೆಳೆಗಳಿಗೆ ವಕ್ಕರಿಸಿರುವ ಕೀಟಗಳ ಭಾದೆ ಮತ್ತೊಂದೆಡೆ. ಈ ವರ್ಷ ಬಹುಪಾಲು ಕಾಫಿ ಬೀಜಗಳು ‘ಬೊರೇಕ’ ಎಂಬ ಕೀಟ ಭಾದೆಗೆ ಒಳಗಾಗಿ ಅರ್ಥದಷ್ಟೂ ಬೆಳೆ ಕೈಗೆ ಬರದಂತಾಗಿದೆ.

ಇನ್ನೂ ಚಿಕ್ಕಮಗಳೂರಿನ ಹಲವಾರು ಕಡೆಗಳಲ್ಲಿ ಕಾಫಿ ಎಲೆಗಳನ್ನು ಪೀಡಿಸುವ ಶೀಲಿಂಧ್ರ ಜಾತಿಯ ‘ಎಂಡೋಫೈಟಸ್ ಹಾಗೂ ಹೆಮಿಲಿಯಾ ವಿಶಾಟಾಟ್ರಿಕ್ಸ್’ ಎಂಬ ಖಾಯಿಲೆ ಭಾದಿಸಿದ್ದು ಬೀಜ ಬಿಡುವ ಮುನ್ನವೇ ಎಲೆಗಳು ಉದುರುತ್ತಿವೆ. ಇದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಕಾಫಿ ಬೆಳೆ ತೆಗೆಯುವುದು ಸಾಧ್ಯವಾಗುತ್ತಿಲ್ಲ.

ಸಂಕಷ್ಟದಲ್ಲಿ ಕಾಫಿ ಬೆಳೆಗಾರರು:

ರಾಜ್ಯದಲ್ಲಿ 2 ಲಕ್ಷಕ್ಕೂ ಅಧಿಕ ಕಾಫಿ ಬೆಳಗಾರರಿದ್ದಾರೆ. 2.9 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಕಾಫಿ ಬೆಳೆಯಲಾಗುತ್ತಿದೆ. ಈ ಪೈಕಿ ಶೇ.98 ರಷ್ಟು ಜನ ಸಣ್ಣ ಮಟ್ಟದ ಕಾಫಿ ಬೆಳೆಗಾರರು.

ಒಂದು ಏಕರೆ ಭೂಮಿಯಲ್ಲಿ ಕಾಫಿ ಬೆಳೆ ತೆಗೆಯಲು ಕೀಟ ನಾಶಕ, ಗೊಬ್ಬರ ಹಾಗೂ ಕಾರ್ಮಿಕರ ಕೂಲಿ ಸೇರಿದಂತೆ ಸುಮಾರು 1.25 ಲಕ್ಷ ಖರ್ಚಾಗುತ್ತದೆ. ಇಷ್ಟು ಖರ್ಚು ಮಾಡಿದರೆ ಏಕರೆಗೆ 250 ರಿಂದ 300 ಕೆ.ಜಿ ಕೆಲವೆಡೆ 400 ಕೆ. ಜಿವರೆಗೆ ಗುಣಮಟ್ಟದ ಕಾಫಿ ಬೆಳೆ ತೆಗೆಯಬಹುದು.

“ಎರಡು ವರ್ಷದ ಹಿಂದೆ ಒಂದು ಟನ್ ಕಾಫಿ ಬೆಳೆಗೆ 2.5 ರಿಂದ 3 ಲಕ್ಷ ಬೆಲೆ ಇತ್ತು. ಆದರೆ ಇಂದು ಟನ್‌ಗೆ 1 ಲಕ್ಷವೂ ದಾಟುತ್ತಿಲ್ಲ. ಹೇಗೆ ಲೆಕ್ಕ ಹಾಕಿದರು ಕಾಫಿ ಬೆಳೆಗಾರರಿಗೆ ಕಳೆದ ಎರಡು ವರ್ಷದಿಂದ ಏಕರೆ ಒಂದಕ್ಕೆ ಸುಮಾರು 75 ಸಾವಿರ ನಷ್ಟ ಉಂಟಾಗಿದೆ,” ಎನ್ನುತ್ತಾರೆ ಚಿಕ್ಕಮಗಳೂರಿನ ಕಾಫಿ ಬೆಳೆಗಾರರಾದ ರಮೇಶ್.

"ಗೊಬ್ಬರ ಹಾಗೂ ಕೀಟನಾಶಕಗಳ ಬೆಲೆ ದಿನೇ ದಿನೇ ಗಗನಕ್ಕೇರುತ್ತಿದೆ. ಇದರ ಬೆಲೆಯನ್ನು ನಿಯಂತ್ರಿಸಲು ಅತ್ತಕಡೆ ಸರಕಾರವೂ ಮನಸ್ಸು ಮಾಡುತ್ತಿಲ್ಲ. ಇತ್ತಕಡೆ ಕೀಟಗಳ ಭಾದೆಯಿಂದ ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ. ಕಾಫಿ ಬೆಳೆ ನಂಬಿ ಸಾಲ ಮಾಡಿದ ಅನೇಕ ಜನ ಕಾಫಿಗೆ ಸೂಕ್ತ ಬೆಲೆ ಸಿಗದೆ ಇಂದು ಬೀದಿಗೆ ಬಂದಿದ್ದಾರೆ,” ಎಂದು 'ಸಮಾಚಾರ'ದ ಜೊತೆಗೆ ತಮ್ಮ ಅಳಲನ್ನು ಅವರು ತೋಡಿಕೊಳ್ಳುತ್ತಾರೆ.

ಲಾಭಕೋರ ಮಧ್ಯವರ್ತಿಗಳು:

ಚಿಕ್ಕಮಗಳೂರಿನ ಮಟ್ಟಿಗೆ ಕಾಫಿ ಬೆಳೆ ಒಂದು ಕಾಲದಲ್ಲಿ ಚಿನ್ನದ ಫಸಲಾಗಿತ್ತು. ಈಗಲೂ ಪರಿಸ್ಥಿತಿ ಬಹುತೇಕ ಹಾಗೇ ಇದೆ. ಆದರೆ ಕಾಫಿ ಚಿನ್ನದ ಫಸಲಾಗಿರುವುದು ಬೆಳೆಗಾರರಿಗಲ್ಲ, ಬದಲಾಗಿ ಮಧ್ಯವರ್ತಿಗಳು ಹಾಗೂ ವ್ಯಾಪಾರಿಗಳಿಗೆ.

“ಒಂದು ಕಾಲದಲ್ಲಿ ಏನೂ ಇಲ್ಲದೆ ಹಾದಿಬೀದಿಯಲ್ಲಿ ಅಡ್ಡಾಡುತ್ತಿದ್ದವರು ಕಾಫಿ ಮುಕ್ತ ಮಾರುಕಟ್ಟೆಗೆ ಬಂದ ಕೆಲವೇ ವರ್ಷಗಳಲ್ಲಿ ಕೋಟ್ಯಾಧಿಪತಿಗಳಾಗಿದ್ದಾರೆ. ಜಿಲ್ಲೆಯ ಪ್ರಮುಖ ರಾಜಕಾರಣಿಗಳಾಗಿ ಮೆರೆಯುತ್ತಿದ್ದಾರೆ,” ಎಂದು ಇಲ್ಲಿನ ಜನ ಉದಾಹರಣೆ ರೂಪದಲ್ಲಿ ಇಲ್ಲಿ ಬದಲಾದ ಸಾಮಾಜಿಕ ಸನ್ನಿವೇಶವನ್ನು ಮುಂದಿಡುತ್ತಾರೆ.

“ಕಾಫಿ ಬೆಳೆಗಾರರು ಎಷ್ಟೇ ಉತ್ತಮ ಕಾಫಿ ಬೀಜವನ್ನು ತೆಗೆದುಕೊಂಡು ಹೋದರೂ, ಅದರ ಗುಣಮಟ್ಟದ ಮಾನದಂಡವನ್ನು ಮುಂದಿಟ್ಟು, ಮೂಟೆಯೊಂದರ ಮೇಲೆ (ಚೆರಿ ಮೂಟೆ) ಕನಿಷ್ಠ 400 ರಿಂದ 1000ರೂಪಾಯಿಗಳ್ನು ಕಳೆಯಲಾಗುತ್ತದೆ. ಜತೆಗೆ ತೂಕದಲ್ಲೂ ಮೋಸ ಮಾಡಲಾಗುತ್ತದೆ. 100 ಕೆ.ಜಿ ಮೂಟೆಗೆ ಕನಿಷ್ಟ ಒಂದರಿಂದ ಒಂದೂವರೆ ಕೆ.ಜಿ ವಂಚಿಸಲಾಗುತ್ತದೆ. ಹೀಗೆ ರಸ್ತೆ ಬದಿಯ ಸಾಮಾನ್ಯ ವ್ಯಾಪಾರಿಯೊಬ್ಬ ಯಾವುದೇ ಶ್ರಮವಿಲ್ಲದೆ, ಕುಳಿತಲ್ಲೆ ಮೂಟೆಯೊಂದರ (ಚೆರಿ ಮೂಟೆ) ಮೇಲೆ ಕನಿಷ್ಠ 1400 ರಿಂದ 1600 ರೂಗಳ ವರೆಗೆ ಲಾಭ ಗಳಿಸುತ್ತಾರೆ. ಪಾರ್ಚ್ಮೆಂಟ್ ಮೂಟೆಯೊಂದರ ಮೇಲೆ ಕನಿಷ್ಠ 3000 ರೂ. ಗಳವರೆಗೆ ಲಾಭ ಗಳಿಸುತ್ತಾರೆ,” ಎಂದು ಬದಲಾದ ಉದ್ಯಮದ ಲೆಕ್ಕಾಚಾರವನ್ನು ಮುಂದಿಡುತ್ತಾರೆ ಚಿಕ್ಕಮಗಳೂರಿನ ‘ಕನ್ನಡ ಪ್ರಭ’ದ ವರದಿಗಾರ ಬಿ. ಎಸ್. ತಾರಾನಾಥ್.

ಕಾಫಿ ವ್ಯಾಪಾರಿಗಳಿಂದ ಸಾಲ ತೆಗೆದುಕೊಂಡಿದ್ದರಂತೂ ದೇವರೆ ಗತಿ. ಪಡೆದ ಸಾಲಕ್ಕೆ ಕಾಫಿ ಬೆಳೆಗಾರರು ವಾರ್ಷಿಕ ಶೇ. 24 ರಿಂದ ಶೇ. 36 ರಷ್ಟು ಬಡ್ಡಿ ತೆರಬೇಕಾಗುತ್ತದೆ. ಸಾಲ‌ ಪಡೆದ ರೈತ ಮುಂದಿನ ವರ್ಷದಲ್ಲಿ ಕಾಫಿ ತೆಗೆದುಕೊಂಡು ಹೋದಾಗ ವ್ಯಾಪಾರಿ ಕೇಳಿದ ರೇಟಿಗೆ ಕೊಡಬೇಕಾಗುತ್ತದೆ. ಹೀಗಿದೆ ನೋಡಿ ಚಿಕ್ಕಮಗಳೂರಿನಲ್ಲಿ ರೈತರ ಪರಿಸ್ಥಿತಿ ಎಂದು ತಾರಾನಾಥ್ ಕೆಲವು ದಿನಗಳ ಹಿಂದೆಯೇ ಕಾಫಿ ಬೆಳೆಗಾರರ ಸ್ಥಿತಿಯನ್ನು ಬಿಚ್ಚಿಟ್ಟಿದ್ದರು.

ಕೈಕೊಟ್ಟ ಮಳೆ, ವ್ಯಾಪಾರಿಗಳಿಂದ ಸುಲಿಗೆ: ಸಣ್ಣ ಬೆಳೆಗಾರರ ಸಮಸ್ಯೆಗೆ ಕುರುಡಾದ ಕಾಫಿ ಬೋರ್ಡ್
ಕಾಫಿ ಬೆಳೆಗಾರರ ಹಿತಕಾಯಲೆಂದೇ ಕಾಫಿ ಬೋರ್ಡ್ ಕಾರ್ಯನಿರ್ವಹಿಸುತ್ತಿದೆ. ಕಾಫಿ ಬೆಳೆಗಾರರ ಸಮಸ್ಯೆಯ ಕುರಿತು ಮಾಹಿತಿ ಸಂಗ್ರಹಿಸಲು ಹಾಗೂ ಕಳೆದ ಎರಡು ವರ್ಷಗಳಿಂದ ಕಾಫಿ ಬೆಳೆಗಾರರಿಗೆ ಉಂಟಾಗಿರುವ ನಷ್ಟದ ಪ್ರಮಾಣವನ್ನು ತಿಳಿದುಕೊಳ್ಳಲು ‘ಸಮಾಚಾರ’ ತಂಡ ಕಾಫಿ ಬೋರ್ಡ್ ಸಹಾಯಕ ನಿರ್ದೇಶಕ ಡಾ. ತಶ್ವಿಮ್ ಅವರಿಗೆ ಕರೆ ಮಾಡಿತ್ತು. ಆದರೆ “ಕಾಫಿ ಬೆಳೆ ಕುರಿತ ಮಾಹಿತಿಗಳನ್ನು, ಬೆಳೆಗಾರರ ಸಂಕಷ್ಟಗಳನ್ನು ಹೀಗೆ ಮಾಧ್ಯಮದವರೊಂದಿಗೆ ಹಂಚಿಕೊಳ್ಳುವ ಹಾಗಿಲ್ಲ,” ಎಂದವರು ಕರೆಯನ್ನು ಸ್ಥಿಗಿತಗೊಳಿಸಿದರು.

ಒಟ್ಟಾರೆ, ಕಾಫಿ ಬೆಳೆಗಾರರ ಸಂಕಷ್ಟಗಳಿಗೆ ಕಾಫಿ ಬೋರ್ಡ್ ಸಹ ಕಿವಿಯಾಗುತ್ತಿಲ್ಲ ಎಂಬ ಆರೋಪಕ್ಕೆ ಪೂರಕವಾದ ಪ್ರತಿಕ್ರಿಯೆಯೊಂದು ಸಿಕ್ಕಂತಾಯಿತು. ಪರಿಸ್ಥಿತಿ ಹೀಗೆ ಮುಂದುವರೆದರೆ ಚಿಕ್ಕಮಗಳೂರಿನಲ್ಲಿ ಕಾಫಿ ಬೆಳೆಗಾರರ ಬದುಕು ಇನ್ನೂ ಅಸಹನೀಯ ಸ್ಥಿತಿಗೆ ಸಲುಪಲಿದೆ. ಪರಿಸ್ಥಿತಿ ಕೈಮೀರುವ ಮುನ್ನ ಸರಕಾರ ಎಚ್ಚೆತ್ತುಕೊಳ್ಳಲಿ. ಮಧ್ಯವರ್ತಿಗಳ, ವ್ಯಾಪಾರಿಗಳಿಗೆ ಕಡಿವಾಣ ಹಾಕುವ ಮೂಲಕ ಇಳುವರಿ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ನೆಮ್ಮದಿ ತರಲಿ ಎಂಬುದು ಆಶಯ.