samachara
www.samachara.com
ದನಗಳ ಸಮಸ್ಯೆ, ಜಾತಿ ಸಮೀಕರಣ; ಕಮಲ ಪಕ್ಷಕ್ಕೆ ಮುಳುವಾಗಲಿದೆ ಸೈಕಲ್‌-ಆನೆ ಜೋಡಿ!
COVER STORY

ದನಗಳ ಸಮಸ್ಯೆ, ಜಾತಿ ಸಮೀಕರಣ; ಕಮಲ ಪಕ್ಷಕ್ಕೆ ಮುಳುವಾಗಲಿದೆ ಸೈಕಲ್‌-ಆನೆ ಜೋಡಿ!

ದನಗಳ ಸಮಸ್ಯೆ, ಜಾತಿ ಲೆಕ್ಕಾಚಾರಗಳ ಜತೆಗೆ ಎಸ್‌ಪಿ- ಬಿಎಸ್‌ಪಿ ಮೈತ್ರಿ ಹಾಗೂ ಪ್ರಿಯಾಂಕಾ ಗಾಂಧಿಯ ಹೊಸ ವರ್ಚಸ್ಸಿನ ಎದುರು ಈ ಬಾರಿ ಬಿಜೆಪಿಗೆ ನಿರೀಕ್ಷಿತ ಗೆಲುವು ಸಿಗುವುದು ಕಷ್ಟವಿದೆ.

Team Samachara

ರಾಷ್ಟ್ರ ರಾಜಕಾರಣದ ದಿಕ್ಕು ಬದಲಿಸುವ ಉತ್ತರ ಪ್ರದೇಶದ ಚುನಾವಣೆಯಲ್ಲಿ ಈ ಬಾರಿ ಜಾತಿ ಹಾಗೂ ಬೀಡಾಡಿ ದನಗಳ ಸಮಸ್ಯೆ ಮುನ್ನೆಲೆಗೆ ಬರಲಿದೆ. ತಗ್ಗಿರುವ ಮೋದಿ ಅಲೆ ಹಾಗೂ ಎಸ್‌ಪಿ- ಬಿಎಸ್‌ಪಿ ಮೈತ್ರಿ ಬಿಜೆಪಿಗೆ ಮುಳುವಾಗುವ ಸಾಧ್ಯತೆ ಇದೆ.

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ ಮುಖ್ಯಮಂತ್ರಿಯಾಗಿ ಬಂದ ಮೇಲೆ ಗೋ ರಕ್ಷಣೆಯ ಹೆಸರಿನಲ್ಲಿ ಬೀಡಾಡಿ ದನಗಳ ಸಂಖ್ಯೆ ಹೆಚ್ಚಾಗಿದೆ. ಇದು ರೈತ ಸಮುದಾಯದ ತಾಳ್ಮೆ ಕೆಡುವಂತೆ ಮಾಡಿದೆ. ಅಲ್ಲಿನ ಸರಕಾರ ಗೋಶಾಲೆಗಳನ್ನು ತೆರೆಯುತ್ತಿದ್ದರೂ ಬೀಡಾಡಿ ದನಗಳ ಸಂಖ್ಯೆಗೆ ಹೋಲಿಸಿದರೆ ಗೋಶಾಲೆಗಳ ಸಂಖ್ಯೆ ಕಡಿಮೆ.

ಹಲವು ಜಿಲ್ಲೆಗಳಲ್ಲಿ ಬೀಡಾಡಿ ದನಗಳ ಸಮಸ್ಯೆ ಹೆಚ್ಚಾಗಿದ್ದು, ಈ ಸಮಸ್ಯೆಯ ಪರಿಹಾರಕ್ಕಾಗಿ ಸರಕಾರ ಹೆಚ್ಚಿನ ಗೋಶಾಲೆಗಳನ್ನು ತೆರೆಯುವಂತೆ ರೈತರು ಪ್ರತಿಭಟನೆಗಳನ್ನೂ ನಡೆಸಿದ್ದಾರೆ. ರೈತರ ಆರ್ಥಿಕತೆಗೂ ದನಗಳಿಗೂ ನೇರ ಸಂಬಂಧವಿದ್ದು, ವಯಸ್ಸಾದ ಹಾಗೂ ಹೋರಿ ಕರುಗಳನ್ನು ಸಾಕುವುದು ಸಣ್ಣ ರೈತರಿಗೆ ಕಷ್ಟವಾಗುತ್ತಿದೆ. ಇಂಥ ದನಗಳನ್ನು ರೈತರು ಬೀದಿಗೆ ಬಿಡುತ್ತಿರುವುದರಿಂದ ಬೀಡಾಡಿ ದನಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಗೋ ರಕ್ಷಣೆಯ ಹೆಸರಿನಲ್ಲಿ ಹಿಂಸಾತ್ಮಕ ದಾಳಿಗಳು ಹೆಚ್ಚಾದ ಬಳಿಕ ಉತ್ತರ ಪ್ರದೇಶದಲ್ಲಿ ಕಸಾಯಿಖಾನೆಗಳ ವ್ಯವಹಾರ ಬಹುತೇಕ ಕುಸಿದಿದೆ. ಅಕ್ರಮವಷ್ಟೇ ಅಲ್ಲ, ಗೋ ರಕ್ಷಕರ ದಾಳಿಗಳಿಗೆ ಹೆದರಿ ಎಷ್ಟೋ ಸಕ್ರಮ ಕಸಾಯಿಖಾನೆಗಳೂ ಬಾಗಿಲು ಮುಚ್ಚಿವೆ. ಹೀಗಾಗಿ ಬೀಡಾಡಿ ದನಗಳ ಸಂಖ್ಯೆ ಹೆಚ್ಚಿದ್ದು, ಈ ಸಮಸ್ಯೆ ಈ ಬಾರಿಯ ಲೋಕಸಭಾ ಚುನಾವಣಾ ವಿಷಯವಾಗುವ ಮಟ್ಟಕ್ಕೆ ಬಂದಿದೆ.

ಈ ಸಮಸ್ಯೆಯ ನಾಡಿ ಮಿಡಿತ ಹಿಡಿದಿರುವ ಎಸ್‌ಪಿ ಹಾಗೂ ಬಿಎಸ್‌ಪಿ ಪಕ್ಷಗಳು ಇದನ್ನೇ ಚುನಾವಣಾ ವಿಷಯವಾಗಿ ಬಳಸಿಕೊಳ್ಳಲು ಮುಂದಾಗಿವೆ. ಬೀಡಾಡಿ ದನಗಳ ನಿಯಂತ್ರಣಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಓಟ್‌ ಬ್ಯಾಂಕ್‌ ಭದ್ರಪಡಿಸಿಕೊಳ್ಳುವ ಕೆಲಸಕ್ಕೆ ಈಗಾಗಲೇ ಈ ಪಕ್ಷಗಳು ಮುಂದಾಗಿದೆ.

ಬೀಡಾಡಿ ದನಗಳ ಸಮಸ್ಯೆಯ ಬಗ್ಗೆ ಬಿಜೆಪಿ ಬೆಂಬಲಿಗರಲ್ಲೂ ಅಸಮಾಧಾನವಿದೆ. ರಾಜ್ಯದಲ್ಲಿ ರೈತರ ಸಂಕಷ್ಟ ಹಾಗೂ ಗೋ ರಕ್ಷಣೆಯ ನಡುವೆ ಈಗಾಗಲೇ ಘರ್ಷಣೆ ಶುರುವಾಗಿದೆ. ಗುಂಪು ಗುಂಪಾಗಿ ಜಮೀನಿಗೆ ನುಗ್ಗುವ ಬೀಡಾಡಿ ದನಗಳನ್ನು ನಿಯಂತ್ರಿಸುವುದು ರೈತರಿಗೆ ಕಷ್ಟವಾಗುತ್ತಿದೆ. ಈ ಸಮಸ್ಯೆ ಸದ್ಯ ರಾಜ್ಯದ ಕೃಷಿಕರ ಗಂಭೀರ ಸಮಸ್ಯೆಗಳಲ್ಲಿ ಒಂದಾಗಿದೆ. ಇದು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ತೀವ್ರ ಹೊಡೆತ ಕೊಡುವ ಸಾಧ್ಯತೆ ಇದೆ.

ದಶಕಗಳ ವೈರತ್ವ ಮರೆತು ಒಂದಾಗಿರುವ ಎಸ್‌ಪಿ- ಬಿಎಸ್‌ಪಿ
ದಶಕಗಳ ವೈರತ್ವ ಮರೆತು ಒಂದಾಗಿರುವ ಎಸ್‌ಪಿ- ಬಿಎಸ್‌ಪಿ

ತಗ್ಗಿದ ಮೋದಿ ಅಲೆ:

2014ರ ಚುನಾವಣೆಯ ಸಂದರ್ಭದಲ್ಲಿ ಮೋದಿ ಅಲೆ ಹೆಚ್ಚಾಗಿತ್ತು. ಉತ್ತರ ಪ್ರದೇಶ ಮಾತ್ರವಲ್ಲದೆ ದೇಶದ ಹಲವು ರಾಜ್ಯಗಳಲ್ಲಿ ಮೋದಿ ಅಲೆ ಬಿಜೆಪಿಗೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ನೆರವಾಗಿತ್ತು. ಆದರೆ, ಈ ಬಾರಿಯ ಚುನಾವಣೆಯಲ್ಲಿ ಮೋದಿ ಅಲೆ ಕೆಲಸ ಮಾಡುವುದು ಕಷ್ಟ. ನೋಟು ರದ್ಧತಿ, ನಿರುದ್ಯೋಗ ಸಮಸ್ಯೆಗಳ ಕಾರಣಕ್ಕೆ ಉತ್ತರ ಭಾರತದಲ್ಲಿ ಮೋದಿ ವಿರುದ್ಧದ ಅಲೆ ಸೃಷ್ಟಿಯಾಗಿದೆ.

ಉತ್ತರ ಪ್ರದೇಶವೂ ಸೇರಿದಂತೆ ಹಲವು ಉತ್ತರದ ರಾಜ್ಯಗಳಿಂದ ದಕ್ಷಿಣದ ಕಡೆಗೆ ಉದ್ಯೋಗ ಅರಸಿ ಬರುವ ಯುವಕರ ಸಂಖ್ಯೆ ಹೆಚ್ಚಾಗಿದೆ. ಮೋದಿ ಅಧಿಕಾರಕ್ಕೆ ಬಂದ ಬಳಿಕ ನಿರುದ್ಯೋಗ ಸಮಸ್ಯೆ ಕಡಿಮೆಯಾಗಬಹುದು ಎಂದು ನಿರೀಕ್ಷಿಸಿದ್ದ ಜನ ಸಾಮಾನ್ಯರಿಗೆ ಅದು ನಿರಾಸೆ ತಂದಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದರೂ ನಿರುದ್ಯೋಗ ಸಮಸ್ಯೆ ನಿವಾರಿಸದ ಕಾರಣಕ್ಕೆ ಜನಸಾಮಾನ್ಯರಲ್ಲಿ ಬಿಜೆಪಿ ಬಗ್ಗೆ ಆಡಳಿತ ವಿರೋಧಿ ಅಲೆ ಎದ್ದಿದೆ.

ಇದರ ಜತೆಗೆ ಯಾದವರು, ಜಾಟರು ಹಾಗೂ ಜಾಟವರು ಈ ಬಾರಿ ಎಸ್‌ಪಿ- ಬಿಎಸ್‌ಪಿ ಮೈತ್ರಿ ಕಡೆಗೆ ಒಲವು ಹೊಂದಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ ಮೋದಿ ಅಲೆಯ ಕಾರಣಕ್ಕೆ ಬ್ರಾಹ್ಮಣರು, ರಜಪೂತರ ಜತೆಗೆ ಈ ಸಮುದಾಯಗಳ ಮತಗಳೂ ಬಿಜೆಪಿಗೆ ಹರಿದಿದ್ದವು. ಆದರೆ, ಈ ಬಾರಿ ಈ ಮತಗಳು ಎಸ್‌ಪಿ-ಬಿಎಸ್‌ಪಿಗೆ ಒಲಿಯಲಿವೆ.

ಒಂದು ಕಡೆಗೆ ಎಸ್‌ಪಿ - ಬಿಎಸ್‌ಪಿ ಮೈತ್ರಿ, ಮೋದಿ ವಿರೋಧಿ ಅಲೆ, ಜಾತಿ ಸಮೀಕರಣ, ಗೋ ರಾಜಕಾರಣ ಕೆಲಸ ಮಾಡುತ್ತಿದ್ದರೆ ಮತ್ತೊಂದು ಕಡೆಗೆ ಕಾಂಗ್ರೆಸ್‌ ಪ್ರಿಯಾಂಕಾ ಗಾಂಧಿ ಮೂಲಕ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ನ ಅದೃಷ್ಟ ಪರೀಕ್ಷೆಗೆ ಇಳಿದಿದೆ. ಎಸ್‌ಪಿ- ಬಿಎಸ್‌ಪಿ ಮೈತ್ರಿ ಹಾಗೂ ಕಾಂಗ್ರೆಸ್‌ನ ಪ್ರಿಯಾಂಕಾ ಗಾಂಧಿಯ ಹೊಸ ವರ್ಚಸ್ಸಿನ ಎದುರು ಈ ಬಾರಿ ಉತ್ತರ ಪ್ರದೇಶಲ್ಲಿ ಬಿಜೆಪಿಗೆ ನಿರೀಕ್ಷಿತ ಗೆಲುವು ಸಿಗುವುದು ಕಷ್ಟವಿದೆ.

ಮಾಹಿತಿ ಮೂಲ: ದಿ ಇಂಡಿಯನ್‌ ಎಕ್ಸ್‌ಪ್ರೆಸ್‌