samachara
www.samachara.com
ಚುನಾವಣಾ ಪೂರ್ವ ಬಜೆಟ್‌; ಜನಪ್ರಿಯ ಘೋಷಣೆಗಳ ಕಡೆಗೇ ಸರಕಾರದ ಚಿತ್ತ?
COVER STORY

ಚುನಾವಣಾ ಪೂರ್ವ ಬಜೆಟ್‌; ಜನಪ್ರಿಯ ಘೋಷಣೆಗಳ ಕಡೆಗೇ ಸರಕಾರದ ಚಿತ್ತ?

ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಮಂಡನೆಯಾಗುತ್ತಿರುವ ಬಜೆಟ್‌ನಲ್ಲಿ ಎಲ್ಲರನ್ನೂ ಓಲೈಸುವ ಘೋಷಣೆಗಳ ನಿರೀಕ್ಷೆ ಸಾಮಾನ್ಯ.

Team Samachara

ನಿನ್ನದೇ ನೆಲ! ನಿನ್ನದೇ ಹೊಲ!

ನಿನ್ನದೇ ಕಾನ್! ನಿನ್ನದೇ ಬಾನ್!

ನಿನ್ನದೆ ನುಡಿ! ನಿನ್ನದೆ ಗುಡಿ!

ನಿನ್ನದೆ ಹೊಳೆ! ನಿನ್ನದೇ ಬೆಳೆ

ನಿನಗಾಗಿಯೆ! ನಿನ್ನೊಲವಿಗೆ

ಇನ್ ಮೀಸಲ್ ನೀ ಬೆಳೆವ ಬೆಳೆ!

“ಕುವೆಂಪು ಅವರ ಈ ದೀಕ್ಷಾ ಗೀತೆಯು ನಮ್ಮ ನಾಡಿನ ಬಗ್ಗೆ ಮೈತ್ರಿ ಸರಕಾರದ ಮುನ್ನೋಟವಾಗಲಿದೆ. ಸರಕಾರದ ನಡೆನುಡಿಯೆಲ್ಲವೂ ಕರ್ನಾಟಕ ಕೇಂದ್ರೀಕೃತವಾಗಲಿದೆ...”

ಹೀಗೆ ರಾಷ್ಟ್ರಕವಿ ಕುವೆಂಪು ಅವರ ಕವಿತೆಯ ಮೂಲಕ ಹಣಕಾಸು ಖಾತೆ ಹೊಂದಿದ್ದ ಎಚ್.ಡಿ.ಕುಮಾರಸ್ವಾಮಿ ಇದೀಗ ಫೆಬ್ರುವರಿ 8ರಂದು ಮಂಡಿಸಲಿರುವ ಪ್ರಸಕ್ತ ಸಾಲಿನ ಆಯವ್ಯಯದ ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ.

ಕೇಂದ್ರ ಸರಕಾರ ಫೆಬ್ರವರಿ 1ರಂದು ಬಜೆಟ್ ಮಂಡಿಸಿದ ಒಂದು ವಾರದ ಬಳಿಕ ಸಮ್ಮಿಶ್ರ ಸರಕಾರದ 2ನೇ ಬಜೆಟ್ ಮಂಡನೆಯಾಗುತ್ತಿರುವುದರಿಂದ ನಾಡಿನ ರೈತಾಪಿ ವರ್ಗ ಈ ಬಜೆಟ್‍ನತ್ತ ದೃಷ್ಟಿಹರಿಸಿದೆ.

ಕಳೆದ ಬಾರಿಯ ಬಜೆಟ್‍ನಲ್ಲಿ ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ ರೈತರು ಪಡೆದಿದ್ದ ಸುಮಾರು 46 ಸಾವಿರ ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಬೇಕಾದ ಒತ್ತಡ ಕುಮಾರಸ್ವಾಮಿಗೆ ಇತ್ತು. ಜೆಡಿಎಸ್ ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲೇ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುವ ವಾಗ್ದಾನವನ್ನು ಕುಮಾರಸ್ವಾಮಿ ನೀಡಿದ್ದರು.

ಈಗಲೂ ಕೂಡ ಪ್ರತಿಪಕ್ಷ ರೈತರ ಸಾಲ ಮನ್ನಾ ಎಂಬುದೇ ಒಂದು ದೊಡ್ಡ ಬೋಗಸ್ ಎಂದು ಆರೋಪ ಮಾಡುತ್ತಿದೆ. "ಬರುವ ಬಜೆಟ್‍ನಲ್ಲಿ ಒಂದೇ ಕಂತಿನಲ್ಲಿ ಬ್ಯಾಂಕ್‍ಗಳಿಗೆ ಹಣ ತುಂಬಿಕೊಡುತ್ತೇನೆ. ಕೇಂದ್ರದ ಮುಂದೆ ನಾವು ಸಾಲಮನ್ನಾ ಮಾಡಿ ಎಂದು ಭಿಕ್ಷೆ ಬೇಡುವುದಿಲ್ಲ" ಎಂದು ಕುಮಾರಸ್ವಾಮಿ ಬಿಜೆಪಿಗೆ ಟಾಂಗ್ ಕೊಡುತ್ತಿದ್ದಾರೆ.

ಈ ಬಾರಿಯ ಬಜೆಟ್‍ನಲ್ಲಿ ಜನಪ್ರಿಯತೆಗೆ ಒತ್ತು ನೀಡಬೇಕೆ ಇಲ್ಲವೇ ಸಮತೋಲನದ ಬಜೆಟ್ ಮಂಡನೆ ಮಾಡಬೇಕೆ ಎಂಬ ಗೊಂದಲದಲ್ಲಿ ಸಮ್ಮಿಶ್ರ ಸರಕಾರವಿದೆ. ಸಮ್ಮಿಶ್ರ ಸರಕಾರದಲ್ಲಿ ಕುಮಾರಸ್ವಾಮಿಯ ಮೊದಲ ಬಜೆಟ್‌ ಸಾಲಮನ್ನಾದಿಂದ ಸದ್ದು ಮಾಡಿದ್ದರೆ ಈ ಬಜೆಟ್‌ನಲ್ಲಿ ಯಾವ ವಲಯಗಳ ಮೇಲೆ ಹೆಚ್ಚು ಒತ್ತು ಕೊಡಲಾಗುತ್ತದೆ ಎಂಬ ಕುತೂಹಲವೂ ಹೆಚ್ಚಿದೆ.

ಹಣಕಾಸು ಖಾತೆಯನ್ನು ಹೊಂದಿರುವ ಕುಮಾರಸ್ವಾಮಿಗೆ ನಿವೃತ್ತ ಐಎಎಸ್ ಅಧಿಕಾರಿ ಸುಬ್ರಹ್ಮಣ್ಯ ಆರ್ಥಿಕ ಸಲಹೆಗಾರರಾಗಿದ್ದಾರೆ. ಆರ್ಥಿಕ ಇಲಾಖೆಯಲ್ಲಿ ಸಾಕಷ್ಟು ಪಳಗಿರುವ ಅವರು ಯಾವುದಕ್ಕೆ ಒತ್ತು ನೀಡಬೇಕು, ಹೇಗೆ ತೆರಿಗೆ ಸೋರಿಕೆಯನ್ನು ತಡೆಗಟ್ಟಬೇಕು ಎಂಬುದರ ಬಗ್ಗೆ ಸಾಕಷ್ಟು ಅರಿವು ಇಟ್ಟುಕೊಂಡೇ ಬಜೆಟ್ ತಯಾರಿಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.

ಸಾಮಾನ್ಯವಾಗಿ ಒಂದು ಬಜೆಟ್ ಆ ರಾಜ್ಯದ ಮುನ್ನೋಟವನ್ನು ಬಿಂಬಿಸುತ್ತದೆ. ಆಯಾ ವರ್ಷದಲ್ಲಿ ಸರಕಾರದ ಕಾರ್ಯಕ್ರಮಗಳು, ಹೊಸ ಯೋಜನೆಗಳು ಸೇರಿದಂತೆ ದೂರದೃಷ್ಟಿ ಬಿಂಬಿಸುವ ಬಜೆಟ್‍ಗೆ ಒತ್ತು ನೀಡಲಾಗುತ್ತದೆ. ಕಳೆದ ವರ್ಷ ಬರೋಬ್ಬರಿ ಎರಡು ಲಕ್ಷ ಕೋಟಿಗೂ ಅಧಿಕ ಮೊತ್ತದ ಬಜೆಟ್ ಮಂಡಿಸಿದ್ದ ಕುಮಾರಸ್ವಾಮಿಗೆ ಈ ಬಾರಿ ಹೊಸ ಸವಾಲುಗಳು ಎದುರಾಗಿದೆ.

ಬಜೆಟ್‌ ಪೂರ್ವದಲ್ಲಿ ಕುಮಾರಸ್ವಾಮಿ ರೈತ ಮುಖಂಡರೊಂದಿಗೆ ಸಭೆಯನ್ನೂ ನಡೆಸಿದ್ದಾರೆ. ಕೃಷಿ ಬಿಕ್ಕಟ್ಟು, ಸಾಲಮನ್ನಾ, ಕಬ್ಬಿನ ಬಾಕಿ ಬಿಡುಗಡೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ರೈತರ ಸಭೆಯಲ್ಲಿ ಚರ್ಚೆ ನಡೆದಿದೆ. ಆದರೆ, ಮುಂದೆ ಲೋಕಸಭಾ ಚುನಾವಣೆ ಇರುವುದರಿಂದ ಜನಪ್ರಿಯ ಘೋಷಣೆಗಳ ಮೇಲೆಯೇ ಸರಕಾರ ಹೆಚ್ಚಿನ ಗಮನ ಹರಿಸುವ ಸಾಧ್ಯತೆ ಇದೆ.

ಚುನಾವಣೆ ಇದೆ ಎಂದು ಬಜೆಟ್‌ನಲ್ಲಿ ಹೆಚ್ಚೆಚ್ಚು ಜನಪ್ರಿಯ ಘೋಷಣೆಗಳನ್ನು ಮಾಡಿದರೆ ಅವುಗಳನ್ನು ಅನುಷ್ಠಾನಕ್ಕೆ ತರುವುದು ಕಷ್ಟವಾಗುತ್ತದೆ. ಹೀಗಾಗಿ ಯಾವ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಸಾಧ್ಯವೋ ಅಂತಹ ಘೋಷಣೆಗಳನ್ನು ಮಾಡಿ ಎಂದು ಬಜೆಟ್‌ ಪೂರ್ವ ಸಭೆಯಲ್ಲಿ ಮುಖ್ಯಮಂತ್ರಿಯವರಿಗೆ ಸಲಹೆ ನೀಡಿದ್ದೇವೆ. ಸಾಲಮನ್ನಾ ಷರತ್ತು ಸಡಿಲಿಸಬೇಕು, ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ನಿಗಧಿಯಾಗಬೇಕು, ಬೆಳೆ ವಿಮೆ ಪ್ಯಾಕೇಜ್‌ ಬದಲಿಸಬೇಕು ಎಂಬ ಒತ್ತಾಯ ನಮ್ಮದು.
- ಕುರುಬೂರು ಶಾಂತಕುಮಾರ್‌, ಹಿರಿಯ ರೈತ ಮುಖಂಡ

ಕೇಂದ್ರ ಸರಕಾರವು ಒಂದೇ ರಾಷ್ಟ್ರ, ಒಂದೇ ತೆರಿಗೆ ಎಂಬ ಪರಿಕಲ್ಪನೆಯೊಂದಿಗೆ ಜಾರಿ ಮಾಡಿದ ಜಿಎಸ್‍ಟಿಯಿಂದ ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗಿಲ್ಲ. ಸರಕಾರದ ಬೊಕ್ಕಸಕ್ಕೆ ಶಕ್ತಿ ತುಂಬುತ್ತಿದ್ದ ಅಬಕಾರಿ ಇಲಾಖೆಯಲ್ಲೂ ಸೋರಿಕೆಯನ್ನು ತಡೆಗಟ್ಟಲು ಸಾಧ್ಯವಾಗಿಲ್ಲ. ರೈತರ ಸಾಲಮನ್ನಾ ಮಾಡಿರುವ ಪರಿಣಾಮ ಬ್ಯಾಂಕ್‍ಗಳಿಗೆ ಆರ್ಥಿಕ ವರ್ಷದ ಅವಧಿಯಲ್ಲಿ ಹಣ ತುಂಬಿಕೊಡಬೇಕೆಂಬ ಸಂದಿಗ್ಧ ಸ್ಥಿತಿಗೆ ಕುಮಾರಸ್ವಾಮಿ ಸಿಲುಕಿದ್ದಾರೆ.

ಕಳೆದ ಬಾರಿ ಬಜೆಟ್‍ನಲ್ಲಿ ಘೋಷಣೆ ಮಾಡಿದ್ದ ಅನೇಕ ಹೊಸ ಯೋಜನೆಗಳಿಗೆ ಅನುದಾನ ನೀಡುವಲ್ಲಿ ಸರಕಾರ ಹಿಂದೆ ಬಿದ್ದಿದೆ ಎಂಬ ಆರೋಪವಿದೆ. ಜೊತೆಗೆ ಹಿಂದೆಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧಿಕಾರದ ಅವಧಿಯಲ್ಲಿ ಜಾರಿಗೆ ತಂದ ಅನ್ನ ಭಾಗ್ಯ, ಕ್ಷೀರಭಾಗ್ಯ, ಶೂ ಭಾಗ್ಯ ಹೀಗೆ ಸರಣಿ ಭಾಗ್ಯಗಳನ್ನು ಮುಂದುವರೆಸಲೇಬೇಕಾಗಿರುವುದರಿಂದ ಇದು ಬೊಕ್ಕಸಕ್ಕೆ 10 ಸಾವಿರದಿಂದ 12 ಸಾವಿರ ಕೋಟಿ ರೂಪಾಯಿಯ ಹೊರೆಯಾಗುತ್ತದೆ ಎನ್ನಲಾಗುತ್ತಿದೆ.

ಕುಮಾರಸ್ವಾಮಿ ಅವರೇ ಕಳೆದ ವರ್ಷ ಬಜೆಟ್‍ನಲ್ಲಿ ಘೋಷಿಸಿದ ಅನೇಕ ಕಾರ್ಯಕ್ರಮಗಳನ್ನು ನಿರೀಕ್ಷಿತ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲು ಸಾಧ್ಯವಾಗಿಲ್ಲ. ಆದ್ಯತಾ ವಲಯಗಳಾದ ಶಿಕ್ಷಣ, ಆರೋಗ್ಯ, ಲೋಕೋಪಯೋಗಿ, ಇಂಧನ, ವಸತಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸೇರಿದಂತೆ ಪ್ರಮುಖ ಇಲಾಖೆಗಳಿಗೆ ಹೆಚ್ಚಿನ ಅನುದಾನವನ್ನು ಮೀಸಲಿಡಬೇಕಿದೆ.

ಈ ಹಿಂದೆ ಪಂಚವಾರ್ಷಿಕ ಯೋಜನೆಯಡಿ ರಾಜ್ಯಕ್ಕೆ ಕೇಂದ್ರ ಸರಕಾರದಿಂದ ಸಾಕಷ್ಟು ಅನುದಾನ ಹರಿದುಬರುತ್ತಿತ್ತು. ಕೇಂದ್ರದಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಈ ಯೋಜನೆಗೂ ಕೊಕ್ಕೆ ಬಿದ್ದಿದ್ದರಿಂದ ಅನುದಾನ ಕಡಿತವಾಗಿದೆ. ತಮ್ಮ ಸರಕಾರದ ಅವಧಿಯಲ್ಲಿ ಜಾರಿ ಮಾಡಿರುವ ಯೋಜನೆಗಳನ್ನು ಕಡಿತಗೊಳಿಸಬಾರದೆಂದು ಕಾಂಗ್ರೆಸ್, ಜೆಡಿಎಸ್ ಮೇಲೆ ಒತ್ತಡ ತಂತ್ರ ಅನುಸರಿಸಿದೆ. ಹೀಗಾಗಿ ಕುಮಾರಸ್ವಾಮಿ ಸಮತೋಲಿತ ಬಜೆಟ್‌ ಮಂಡಿಸುವ ಇಕ್ಕಟ್ಟಿನಲ್ಲಿದ್ದಾರೆ.

ಕುಮಾರಸ್ವಾಮಿ ಕಳೆದ ಬಾರಿ ದಕ್ಷಿಣ ಕರ್ನಾಟಕ, ಅದರಲ್ಲೂ ಒಕ್ಕಲಿಗರು ಹೆಚ್ಚಾಗಿರುವ ಜಿಲ್ಲೆಗಳನ್ನಷ್ಟೇ ಗಮನದಲ್ಲಿಟ್ಟುಕೊಂಡು ಬಜೆಟ್‌ ಮಂಡಿಸಿದ್ದಾರೆ ಎಂಬ ಟೀಕೆಗಳು ಕೇಳಿಬಂದಿದ್ದವು. ಉತ್ತರ ಕರ್ನಾಟಕ ಹಾಗೂ ಕರಾವಳಿ ಜಿಲ್ಲೆಗಳಿಗೆ ಕುಮಾರಸ್ವಾಮಿ ಅನ್ಯಾಯ ಮಾಡಿದ್ದಾರೆ ಎಂದು ಆ ಭಾಗದ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಾರಿ ಆ ಜಿಲ್ಲೆಗಳಿಗೂ ಆದ್ಯತೆ ನೀಡಬೇಕಾದ ಅನಿವಾರ್ಯತೆ ಕುಮಾರಸ್ವಾಮಿಗಿದೆ.

ಲೋಕಸಭಾ ಚುನಾವಣೆಯ ಮುನ್ನಾ ಮಂಡಿಸುತ್ತಿರುವ ಬಜೆಟ್‌ ಇದಾಗಿರುವುದರಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳೆರಡೂ ಜನಪ್ರಿಯತೆಯ ಕಡೆಗೇ ಹೆಚ್ಚಿನ ಒತ್ತು ನೀಡುವ ನಿರೀಕ್ಷೆ ಇದೆ. ಜನಪ್ರಿಯ ಘೋಷಣೆಗಳ ಮೂಲಕ ಮತಬ್ಯಾಂಕ್‌ ಗಟ್ಟಿಗೊಳಿಸುವ ಕಸರತ್ತಿಗೆ ಕೇಂದ್ರ - ರಾಜ್ಯ ಸರಕಾರಗಳು ಮುಂದಾಗುವುದು ಸಹಜವೇ. ಹೀಗಾಗಿ ಕೃಷಿ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡುವುದಾಗಿ ಕೇಂದ್ರ- ರಾಜ್ಯ ಸರಕಾರಗಳು ಹೇಳಿಕೊಳ್ಳುತ್ತಿವೆ. ಸಂಕಷ್ಟದಲ್ಲಿರುವ ಅನ್ನದಾತನಿಗೆ ಅನುಕೂಲವಾಗುವಂಥ ಯಾವ ಯೋಜನೆಗಳು ಘೋಷಣೆಯಾಗಲಿವೆಯೋ ಕಾದುನೋಡಬೇಕು.