samachara
www.samachara.com
ಬಹುತ್ವ, ಪರಿನಿಯಮ,  ವಿಶ್ವೇಶ್ವರ ಭಟ್‌ ಆಹ್ವಾನ & ಮಲ್ಲಿಕಾ ಘಂಟಿ ಸಮರ್ಥನೆ
COVER STORY

ಬಹುತ್ವ, ಪರಿನಿಯಮ, ವಿಶ್ವೇಶ್ವರ ಭಟ್‌ ಆಹ್ವಾನ & ಮಲ್ಲಿಕಾ ಘಂಟಿ ಸಮರ್ಥನೆ

ಮಲ್ಲಿಕಾ ಘಂಟಿ ಅವರು ಬಹುತ್ವದ ಮರೆಯಲ್ಲಿ ಹಾಗೂ ಕನ್ನಡ ವಿಶ್ವವಿದ್ಯಾಲಯದ ಪರಿನಿಯಮದ ಅಡಿಯಲ್ಲಿ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

Team Samachara

ಫೆಬ್ರುವರಿ 1ರಂದು ನಡೆಯಲಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿಹಬ್ಬದ ಸಮಾರೋಪ ಸಮಾರಂಭಕ್ಕೆ ಪತ್ರಕರ್ತ ವಿಶ್ವೇಶ್ವರ ಭಟ್‌ ಅವರನ್ನು ಆಹ್ವಾನಿಸಿರುವುದನ್ನು ಕುಲಪತಿ ಮಲ್ಲಿಕಾ ಘಂಟಿ ಸಮರ್ಥಿಸಿಕೊಂಡಿದ್ದಾರೆ. ವಿಶ್ವವಿದ್ಯಾಲಯ ಎಲ್ಲರನ್ನೂ ಒಳಗೊಳ್ಳಬೇಕು ಎಂಬ ಕಾರಣಕ್ಕೆ ವಿಶ್ವೇಶ್ವರ ಭಟ್‌ ಅವರನ್ನು ಆಹ್ವಾನಿಸಲಾಗಿದೆ ಎಂದಿದ್ದಾರೆ.

‘ಸಮಾಚಾರ’ದೊಂದಿಗೆ ಮಾತನಾಡಿದ ಮಲ್ಲಿಕಾ ಘಂಟಿ, "ನಾನು ಎಡಪಂಥದವಳಾಗಿ, ಒಬ್ಬ ಮಹಿಳೆಯಾಗಿ, ಮಲ್ಲಿಕಾ ಘಂಟಿಯಾಗಿ ವಿಶ್ವೇಶ್ವರ ಭಟ್‌ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ಕನ್ನಡ ವಿಶ್ವವಿದ್ಯಾಲಯದ ಪರಿನಿಯಮದ ಅನುಸಾರ ಎಲ್ಲರನ್ನೂ ವಿಶ್ವವಿದ್ಯಾಲಯ ಒಳಗೊಳ್ಳಬೇಕಿದೆ. ಇದಕ್ಕೆ ಪಂಥಭೇದವಿಲ್ಲ. ಪರಿನಿಯಮದಂತೆ ನಾನು ನಡೆದುಕೊಳ್ಳುತ್ತಿದ್ದೇನೆ. ಇದಕ್ಕೆ ರಾಜ್ಯಪಾಲರೂ ಸೇರಿ ಯಾರ ಒತ್ತಡವೂ ಇಲ್ಲ" ಎಂದರು.

“ಯಾರನ್ನೂ ವಿಶ್ವವಿದ್ಯಾಲಯಕ್ಕೆ ಕರೆಯಬಾರದೆಂದಿಲ್ಲ. ಈ ಹಿಂದೆ ಎಡಪಂಥೀಯರನ್ನೂ ವಿಶ್ವವಿದ್ಯಾಲಯಕ್ಕೆ ಕರೆಸಿದ್ದೇನೆ. ಆಗ ಬಲಪಂಥೀಯರು ಯಾರೂ ವಿರೋಧ ವ್ಯಕ್ತಪಡಿಸಿರಲಿಲ್ಲ. ಕನ್ನಡ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿಭಾಗವಿದೆ. ಕನ್ನಡ ಪತ್ರಿಕೋದ್ಯಮಕ್ಕೆ ನೀಡಿರುವ ಕೊಡುಗೆಗಾಗಿ, ಕನ್ನಡ ಬರವಣಿಗೆಗಾಗಿ ವಿಶ್ವೇಶ್ವರ ಭಟ್‌ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇವೆ. ಒಬ್ಬ ಸಂಪಾದಕರಾಗಿ, ಒಬ್ಬ ಲೇಖಕರಾಗಿ ಮಾತ್ರ ಅವರನ್ನು ಕರೆಯಲಾಗಿದೆ. ತಮ್ಮ ಪಂಥದವರಲ್ಲ ಎಂಬ ಕಾರಣಕ್ಕೆ ಅವರನ್ನು ವಿಶ್ವವಿದ್ಯಾಲಯಕ್ಕೆ ಆಹ್ವಾನಿಸಲೇಬಾರದು ಎಂಬುದು ಸರಿಯಲ್ಲ” ಎಂದು ಹೇಳಿದರು.

ನುಡಿಸಿರಿಯಲ್ಲಿ ಷ.ಶೆಟ್ಟರ್‌, ಚಂದ್ರಶೇಖರ ಕಂಬಾರ, ಎಂ.ಮೋಹನಆಳ್ವ, ಗಣೇಶ್‌ ಕಾರ್ಣಿಕ್‌ ಜತೆ ಮಲ್ಲಿಕಾ ಘಂಟಿ
ನುಡಿಸಿರಿಯಲ್ಲಿ ಷ.ಶೆಟ್ಟರ್‌, ಚಂದ್ರಶೇಖರ ಕಂಬಾರ, ಎಂ.ಮೋಹನಆಳ್ವ, ಗಣೇಶ್‌ ಕಾರ್ಣಿಕ್‌ ಜತೆ ಮಲ್ಲಿಕಾ ಘಂಟಿ
ಚಿತ್ರಕೃಪೆ: ಪ್ರಜಾವಾಣಿ

“ಎಲ್ಲಾ ಪಂಥದವರೂ ಪರಸ್ಪರ ಚರ್ಚೆ ನಡೆಸಿದಾಗಲೇ ಬಹುತ್ವಕ್ಕೆ ಬೆಲೆ ಸಿಗುವುದು. ಬಹುತ್ವಕ್ಕೆ ಅವಕಾಶ ಇಲ್ಲದಂತೆ ವರ್ತಿಸುವುದು ಸರಿಯಲ್ಲ. ಕವಿಗೋಷ್ಠಿ ಹಾಗೂ ಮಾತುಕಥೆಗೆ ಲೇಖಕರನ್ನು ಆಹ್ವಾನಿಸುವಾಗಲೂ ನಾವು ಎಲ್ಲರನ್ನೂ ಗಮನದಲ್ಲಿಟ್ಟುಕೊಂಡೇ ಕರೆದಿದ್ದೇವೆ. ಎಲ್ಲಾ ಲೇಖಕರು ಬಂದು ತಮ್ಮ ವಿಚಾರಗಳನ್ನು ಹಂಚಿಕೊಳ್ಳಬೇಕು ಎಂಬುದು ನಮ್ಮ ಬಯಕೆ. ಕೆಲವರು ಇದನ್ನು ಬಹಿಷ್ಕರಿಸಿದರೆ ನಾನೇನು ಮಾಡಲಿ” ಎಂಬ ಪ್ರಶ್ನೆ ಘಂಟಿ ಅವರದ್ದು.

ವಿರೋಧಿಸುತ್ತಿರುವವರು ವಿಶ್ವೇಶ್ವರ ಭಟ್‌ ಮಹಿಳಾ ವಿರೋಧಿ ಎನ್ನುತ್ತಿದ್ದಾರೆ. ಎಲ್ಲರೂ ಒಂದಲ್ಲಾ ಒಂದಕ್ಕೆ ವಿರೋಧ ತೋರುತ್ತಲೇ ಇರುತ್ತಾರೆ. ಕೆಲವರು ಜಾತಿ ವಿರೋಧಿಗಳಿರುತ್ತಾರೆ, ಕೆಲವರು ಪಂಥ ವಿರೋಧಿಗಳಿರುತ್ತಾರೆ. ವಿಶ್ವವಿದ್ಯಾಲಯದ ನಡೆಯನ್ನು ಈಗ ಪ್ರಶ್ನಿಸುತ್ತಿರುವವರು ಬಹುತ್ವವನ್ನು ಒಪ್ಪದವರು.
- ಮಲ್ಲಿಕಾ ಘಂಟಿ, ಕುಲಪತಿ, ಕನ್ನಡ ವಿಶ್ವವಿದ್ಯಾಲಯ, ಹಂಪಿ

ಆಳ್ವಾಸ್‌ ನುಡಿಸಿರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿಕೊಂಡಿದ್ದ ಘಂಟಿ ಅವರ ನಿರ್ಧಾರಕ್ಕೆ ಈ ಹಿಂದೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ವಿಶ್ವೇಶ್ವರ ಭಟ್‌ ಅವರನ್ನು ವಿಶ್ವವಿದ್ಯಾಲಯದ ಕಾರ್ಯಕ್ರಮಕ್ಕೆ ಆಹ್ವಾನಿಸುವ ಮೂಲಕ ಘಂಟಿ ಬಲಪಂಥೀಯರ ಓಲೈಕೆಗೆ ಮುಂದಾಗಿದ್ದಾರೆ ಎಂಬ ಟೀಕೆಗಳು ಈಗ ವ್ಯಕ್ತವಾಗಿವೆ.

ಘಂಟಿ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವವರು ವಿಶ್ವೇಶ್ವರ ಭಟ್‌ ಮಹಿಳಾ ವಿರೋಧಿ ಹೇಳಿಕೆಗಳನ್ನೂ ಉಲ್ಲೇಖಿಸುತ್ತಿದ್ದಾರೆ. ಮಹಿಳೆಯರ ಬಗ್ಗೆ ಗೌರವಿಲ್ಲದ, ಬಲಪಂಥೀಯ ಪತ್ರಕರ್ತರೊಬ್ಬರನ್ನು ವಿಶ್ವವಿದ್ಯಾಲಯದ ಸಮಾರಂಭಕ್ಕೆ ಕರೆಯುತ್ತಿರುವುದು ಸರಿಯಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸುತ್ತಿದ್ದಾರೆ.

ಕರ್ನಾಟಕದ ಪ್ರಗತಿಪರ ಚಳವಳಿಗಳೊಂದಿಗೆ ಗುರುತಿಸಿಕೊಂಡಿದ್ದ ಮಲ್ಲಿಕಾ ಘಂಟಿ ನುಡಿಸಿರಿಯ ಅಧ್ಯಕ್ಷೀಯ ಸ್ಥಾನವನ್ನು ಒಪ್ಪಿಕೊಂಡಿದ್ದರು. ನುಡಿಸಿರಿ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವ ಕಾರಣಕ್ಕೆ ಆವರೆಗೂ ಮಲ್ಲಿಕಾ ಘಂಟಿ ಅವರೊಂದಿಗೆ ಆತ್ಮೀಯರಾಗಿದ್ದವರೂ ಅವರ ನಡೆಗೆ ವಿರೋಧ ತೋರಿದ್ದರು.

ಮಲ್ಲಿಕಾ ಘಂಟಿ ನಡೆಯನ್ನು ಪತ್ರಕರ್ತ, ಲೇಖಕ ಹರ್ಷಕುಮಾರ್‌ ಕುಗ್ವೆ, ಲೇಖಕಿ ಪ್ರೀತಿ ನಾಗರಾಜ್‌ ಸೇರಿದಂತೆ ಹಲವರು ತೀವ್ರವಾಗಿ ಪ್ರತಿಭಟಿಸಿದ್ದಾರೆ. ಕಥೆಗಾರ ಹನುಮಂತ ಹಾಲಿಗೇರಿ ಕವಿಗೋಷ್ಠಿ ಬಹಿಷ್ಕರಿಸುವುದಾಗಿ ಹೇಳಿದ್ದಾರೆ.

ಕವಿ, ಶಿಕ್ಷಕ ವೀರಣ್ಣ ಮಡಿವಾಳರ ಈ ಹಿಂದೆ ನುಡಿಸಿರಿ ಸಂದರ್ಭದಲ್ಲೂ ಮಲ್ಲಿಕಾ ಘಂಟಿ ಅವರ ನಡೆಯನ್ನು ಸಮರ್ಥಿಸಿಕೊಂಡಿದ್ದರು. ಈಗಲೂ ಮಲ್ಲಿಕಾ ಘಂಟಿ ಬೆಂಬಲಕ್ಕೆ ನಿಂತಿರುವ ವೀರಣ್ಣ ಮಡಿವಾಳರ ವಿರೋಧ ತೋರುತ್ತಿರುವವರನ್ನು ವಿರೋಧಿಸಿ ಮಾತನಾಡಿದ್ದಾರೆ.

ವಿರೋಧಿ ಗುಂಪಿನ ವೇದಿಕೆಗೂ ಹೋಗಿ ನಮ್ಮ ಮಾತುಗಳನ್ನು ಹೇಳಿಬರಬೇಕು ಎಂಬುದು ಬಂಡಾಯ ಚಳವಳಿ ಸಂದರ್ಭದಲ್ಲಿ ನಾವು ತೆಗೆದುಕೊಂಡಿದ್ದ ನಿರ್ಧಾರವಾಗಿತ್ತು ಎಂದು ಈ ಹಿಂದೆ ಮಲ್ಲಿಕಾ ಘಂಟಿ ನುಡಿಸಿರಿಯಲ್ಲಿ ಭಾಗವಹಿಸಿದ್ದನ್ನು ಸಮರ್ಥಿಸಿಕೊಂಡಿದ್ದರು. ಈಗ ಬಹುತ್ವದ ಮರೆಯಲ್ಲಿ ಹಾಗೂ ಕನ್ನಡ ವಿಶ್ವವಿದ್ಯಾಲಯದ ಪರಿನಿಯಮದ ಅಡಿಯಲ್ಲಿ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.