samachara
www.samachara.com
ರಾಜಕಾರಣದ ಕರಿನೆರಳು & ವಿವಾದಗಳ ಹಾದಿಯಲ್ಲಿ ‘ಭಾರತ ರತ್ನ’
COVER STORY

ರಾಜಕಾರಣದ ಕರಿನೆರಳು & ವಿವಾದಗಳ ಹಾದಿಯಲ್ಲಿ ‘ಭಾರತ ರತ್ನ’

ಎಲ್ಲಾ ಸಾಧನೆಗಳಾಚೆಗೆ ಇಂದಿರಾ ಗಾಂಧಿ 1971ರಲ್ಲಿ ತಮಗೆ ತಾವೇ ‘ಭಾರತ ರತ್ನ’ ಘೋಷಸಿಕೊಂಡಿದ್ದು ಇರುಸು ಮುರುಸಿಗೆ ಕಾರಣವಾಗಿತ್ತು.

Team Samachara

ವಿವಾದ, ವಿಡಂಬನೆಗಳ ಮೂಲಕ ಭಾರತದ ಅತ್ಯುನ್ನತ ನಾಗರಿಕ ಪುರಸ್ಕಾರ 'ಭಾರತ ರತ್ನ' ಮತ್ತೆ ಸುದ್ದಿ ಕೇಂದ್ರಕ್ಕೆ ಬಂದಿದೆ.

ಜೀವನಪೂರ್ತಿ ಕಾಂಗ್ರೆಸಿಗನಾಗಿದ್ದುಕೊಂಡು ನಾಗಪುರಕ್ಕೆ ತೆರಳಿ ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಂದ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ, ಸಂಘ ಪರಿವಾರದ ನಾಯಕರಾಗಿದ್ದ ನಾನಾಜಿ ದೇಶ್‌ಮುಖ್‌ ಮತ್ತು ಸಂಗೀತಗಾರ ಭೂಪೇನ್‌ ಹಝಾರಿಕಾ ಅವರಿಗೆ 2019ನೇ ಸಾಲಿನ ಭಾರತ ರತ್ನ ಪ್ರಶಸ್ತಿ ಘೋಷಿಸಿರುವುದು ಅಚ್ಚರಿ ಮತ್ತು ಆಕ್ಷೇಪಣೆಗಳಿಗೆ ಕಾರಣವಾಗಿದೆ.

ಬಂಗಾಳದಲ್ಲಿ ಬೇರುಗಳನ್ನು ಇಳಿಬಿಡಲು ಏದುಸಿರು ಬಿಡುತ್ತಿರುವ ಬಿಜೆಪಿ ಪ್ರಣವ್‌ ದಾಗೆ ಭಾರತ ರತ್ನ ನೀಡಿ ಆ ಮೂಲಕ ಬೆಂಗಾಲಿಗಳ ಮನಗೆಲ್ಲಲು ಹೊರಟಿದೆ ಎಂಬುದು ಒಂದು ಆರೋಪವಾದರೆ; ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಬೆಂಕಿ ಚೆಂಡಿನಂತಾಗಿರುವ ಈಶಾನ್ಯ ರಾಜ್ಯಗಳನ್ನು ಭೂಪೇನ್‌ ಹಝಾರಿಕಾ (ಅಸ್ಸಾಂ) ಮೂಲಕ ತಣ್ಣಗಾಗಿಸಲು ಹೊರಟಿದೆ ಎಂಬುದು ಇನ್ನೊಂದು ವಾದ. ಸಂಘ ಪರಿವಾರದ ಹಿನ್ನೆಲೆ ಕಾರಣಕ್ಕೆ ನಾನಾಜಿ ದೇಶಮುಖ್‌ ಹೆಸರು ಕೂಡ ವಿವಾದಕ್ಕೆ ಕಾರಣವಾಗಿದೆ.

ಭಾರತ ರತ್ನ ಗೌರವಕ್ಕೆ ಪಾತ್ರರಾದ ನಾನಾಜಿ ದೇಶ್‌ಮುಖ್‌, ಪ್ರಣಬ್‌ ಮುಖರ್ಜಿ, ಭೂಪೇನ್‌ ಹಝಾರಿಕಾ
ಭಾರತ ರತ್ನ ಗೌರವಕ್ಕೆ ಪಾತ್ರರಾದ ನಾನಾಜಿ ದೇಶ್‌ಮುಖ್‌, ಪ್ರಣಬ್‌ ಮುಖರ್ಜಿ, ಭೂಪೇನ್‌ ಹಝಾರಿಕಾ
/ದಿ ವೈರ್

ಹಾಗಂಥ ಭಾರತ ರತ್ನಕ್ಕೆ ಆಕ್ಷೇಪಣೆಗಳು ಕೇಳಿ ಬರುತ್ತಿರುವುದು ಇದು ಮೊದಲೇನೂ ಅಲ್ಲ. 1988ರಲ್ಲಿ ಅಂದಿನ ರಾಜೀವ್‌ ಗಾಂಧಿ ಸರಕಾರ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಮತ್ತು ಸಿನಿಮಾ ನಟ ಎಂ.ಜಿ.ರಾಮಚಂದ್ರನ್‌ಗೆ ಪ್ರಶಸ್ತಿ ನೀಡಿದ್ದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. 1989ರ ತಮಿಳುನಾಡು ವಿಧಾನಸಭೆ ಚುನಾವಣೆಗೂ ಮುನ್ನ ನೀಡಿದ ಈ ಪ್ರಶಸ್ತಿಯನ್ನು ತಮಿಳು ಮತದಾರರ ಓಲೈಕೆ ಯತ್ನ ಎಂದೇ ಬಿಂಬಿಸಲಾಗಿತ್ತು. 1977ರ ತಮಿಳುನಾಡು ವಿಧಾನಸಭೆ ಚುನಾವಣೆಗೂ ಮುನ್ನ 1976ರಲ್ಲಿ ಇದೇ ರೀತಿ ಇಂದಿರಾಗಾಂಧಿ ಕಾಮರಾಜ್‌ಗೆ ಭಾರತ ರತ್ನ ಘೋಷಿಸಿದಾಗಲೂ ಓಲೈಕೆಯ ಆರೋಪ ಕೇಳಿ ಬಂದಿತ್ತು.

ವಿಚಿತ್ರವೆಂದರೆ ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‌ ಮತ್ತು ಭಾರತದ ಏಕೀಕರಣದಲ್ಲಿ ಮಹತ್ವದ ಪಾತ್ರ ವಹಿಸಿದ ವಲ್ಲಭಭಾಯಿ ಪಟೇಲ್‌ಗೆ ಭಾರತ ರತ್ನಕ್ಕಾಗಿ ಕಾಮರಾಜ್‌ ಮತ್ತು ಎಂಜಿಆರ್‌ ಸರದಿ ಕಾಯಬೇಕಾಗಿತ್ತು. ಊರಿಗೆಲ್ಲಾ ಕೊಟ್ಟ ಮೇಲೆ ಕ್ರಮವಾಗಿ 1990 ಮತ್ತು 91ರಲ್ಲಿ ಇವರಿಗೆ ಪ್ರಶಸ್ತಿ ನೀಡಿದಾಗ ಇಷ್ಟು ತಡವಾಗಿ ನೀಡಬೇಕಿತ್ತೇ? ಎಂಬ ಪ್ರಶ್ನೆ ಉದ್ಭವಿಸಿತ್ತು.

2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯ ಪೂರ್ವದಲ್ಲಿ ಸಾವನ್ನಪ್ಪಿದ್ದ ಮದನ್‌ ಮೋಹನ್‌ ಮಾಳವೀಯ ಅವರಿಗೆ ಪ್ರಶಸ್ತಿ ಘೋಷಿಸಿದ್ದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಅವರ ಅಪಾರ ಕೊಡುಗೆಗಳಾಚೆ ಇಷ್ಟು ತಡವಾಗಿ ಪ್ರಶಸ್ತಿ ನೀಡುವ ಔಚಿತ್ಯ ಏನಿತ್ತು ಎಂದು ‘ಟೈಮ್ಸ್‌ ಆಫ್‌ ಇಂಡಿಯಾ’ ತನ್ನ ಸಂಪಾದಕೀಯದಲ್ಲಿ ಪ್ರಶ್ನಿಸಿತ್ತು. ಹೀಗೆ ನೀಡುತ್ತಾ ಹೋದರೆ ಇತಿಹಾಸದ ಮಹಾಪುರುಷರ ಹೆಸರೆಲ್ಲಾ ಮುನ್ನೆಲೆಗೆ ಬರುತ್ತದೆ ಎಂದು ಅದು ಎಚ್ಚರಿಸಿತ್ತು. ಜತೆಗೆ ವಾರಣಾಸಿಗೆ ಸೇರಿದ ಮಾಳವೀಯರಿಗೆ ಮೋದಿ ಬೇಕೆಂದೇ ಪ್ರಶಸ್ತಿ ನೀಡಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ಜನಾರ್ದನ್‌ ದ್ವಿವೇದಿ ಆರೋಪಿಸಿದ್ದರು.

ಆದರೆ ಇಂಥಹದ್ದೊಂದು ಕೆಟ್ಟ ಸಂಪ್ರದಾಯವನ್ನು ಸ್ವತಃ ಕಾಂಗ್ರೆಸ್‌ ಹುಟ್ಟುಹಾಕಿತ್ತು. ಎಲ್ಲಾ ಸಾಧನೆಗಳಾಚೆಗೆ ಇಂದಿರಾ ಗಾಂಧಿ ತಮಗೆ ತಾವೇ ಪ್ರಶಸ್ತಿ ಘೋಷಸಿಕೊಂಡಿದ್ದು ಇರುಸು ಮುರುಸಿಗೆ ಕಾರಣವಾಗಿತ್ತು. ಭಾರತದ ಹಾಕಿ ದಂತಕಥೆ ಧ್ಯಾನ್‌ಚಂದ್‌ಗೆ ಭಾರತ ರತ್ನ ನೀಡಬೇಕೆಂದು ಹಲವು ಬಾರಿ ಬೇಡಿಕೆಗಳು ಕೇಳಿ ಬಂದಾಗಲೂ ಅದಕ್ಕೆ ಆಡಳಿತದಲ್ಲಿದ್ದ ಕಾಂಗ್ರೆಸ್‌ ಸೊಪ್ಪು ಹಾಕಿರಲಿಲ್ಲ.

2011ರಲ್ಲಂತೂ ಅವರಿಗೆ ಪ್ರಶಸ್ತಿ ನೀಡುವಂತೆ 82 ಸಂಸದರು ಧ್ಯಾನ್‌ಚಂದ್‌ ಹೆಸರನ್ನು ಪ್ರಧಾನಿ ಸಚಿವಾಲಯಕ್ಕೆ ಶಿಫಾರಸ್ಸು ಮಾಡಿದ್ದರು. ಆದರೆ ನಿಯಮ ಬದಲಾವಣೆ ಮಾಡಿ 2013ರಲ್ಲಿ ಮೊದಲ ಬಾರಿಗೆ ಕ್ರೀಡಾ ಕ್ಷೇತ್ರದವರಿಗೆ ಪ್ರಶಸ್ತಿ ನೀಡಲು ಯುಪಿಎ ಸರಕಾರ ಹೊರಟಾಗ ಸಚಿನ್‌ ತೆಂಡೂಲ್ಕರ್‌ ಹೆಸರನ್ನು ಕೈಗೆತ್ತಿಕೊಳ್ಳಲಾಯಿತು. 2014ರ ಚುನಾವಣೆಗೂ ಮೊದಲು ನೀಡಿದ ಈ ಪ್ರಶಸ್ತಿಯ ಕಾರಣಕ್ಕೆ ಕಾಂಗ್ರೆಸ್‌ ತೀವ್ರ ಟೀಕೆಗೆ ಗುರಿಯಾಗಬೇಕಾಯಿತು.

40ನೇ ವಯಸ್ಸಿಗೆ ಪ್ರಶಸ್ತಿ ಸ್ವೀಕರಿಸಿ ಭಾರತ ರತ್ನ ಪುರಸ್ಕಾರ ಪಡೆದ ಅತ್ಯಂತ ಕಿರಿಯ ವ್ಯಕ್ತಿ ಸಚಿನ್‌ ತೆಂಡೂಲ್ಕರ್.
40ನೇ ವಯಸ್ಸಿಗೆ ಪ್ರಶಸ್ತಿ ಸ್ವೀಕರಿಸಿ ಭಾರತ ರತ್ನ ಪುರಸ್ಕಾರ ಪಡೆದ ಅತ್ಯಂತ ಕಿರಿಯ ವ್ಯಕ್ತಿ ಸಚಿನ್‌ ತೆಂಡೂಲ್ಕರ್.

ಅದೇ ವರ್ಷ ಸಿಎನ್‌ಆರ್‌ ರಾವ್‌ಗೆ ನೀಡಿದ ಪ್ರಶಸ್ತಿಗೂ ಆಕ್ಷೇಪಣೆಗಳು ಕೇಳಿ ಬಂದಿದ್ದವು. 1,400 ಸಂಶೋಧನಾ ಲೇಖನಗಳನ್ನು ಮನುಷ್ಯ ಮಾತ್ರದವರು ಬರೆಯಲು ಸಾಧ್ಯವಿಲ್ಲ. ಜತೆಗೆ ಅವರಿಗಿಂತ ಹೋಮಿ ಜಹಾಂಗೀರ್‌ ಬಾಬಾ ಮತ್ತು ವಿಕ್ರಂ ಸಾರಭಾಯಿ ಭಾರತದ ವಿಜ್ಞಾನ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದಾರೆ ಎಂದು ಹಲವರು ನೇರವಾಗಿ ಕೋರ್ಟ್‌ ಮೊರೆ ಹೋಗಿದ್ದರು.

ಅರ್ಹರಿಗೆ ಭಾರತ ರತ್ನ ನೀಡಲು ಕೇಂದ್ರ ಸರಕಾರ ಹಿಂದೆ ಮುಂದೆ ನೋಡುತ್ತದೆ ಎಂಬ ತಕರಾರುಗಳೂ ಇವೆ. ಉದಾಹರಣೆಗೆ ಮದರ್‌ ಥೆರೆಸಾಗೆ ನೊಬೆಲ್‌ ಪ್ರಶಸ್ತಿ ಸಿಕ್ಕ ಮರುವರ್ಷ ಅಂದರೆ 1980ರಲ್ಲಿ ಭಾರತ ರತ್ನ ನೀಡಲಾಯಿತು. ಸತ್ಯಜಿತ್‌ ರೇಗೆ ಆಸ್ಕರ್‌ ಗೌರವ ಪ್ರಶಸ್ತಿ ಸಿಕ್ಕಿದ ಬಳಿಕ 1992ರಲ್ಲಿ ಭಾರತ ರತ್ನ ಘೋಷಿಸಲಾಯಿತು. ಅಮರ್ಥ್ಯ ಸೇನ್‌ಗೆ ಕೂಡ 1999ರಲ್ಲಿ ನೊಬೆಲ್‌ ಸಿಕ್ಕಿದ ನಂತರವೇ ಭಾರತ ರತ್ನ ದೊರಕಿತು. ಇನ್ನು ರಾಷ್ಟ್ರಪಿತ ಮಹಾತ್ಮಾ ಗಾಂಧಿಗೆ ಭಾರತ ರತ್ನ ನೀಡಲಿಲ್ಲ ಎಂಬ ಕೊರಗು ಆರಂಭದಿಂದಲೂ ಇದೆ. ಕೊನೆಗೆ ಅವರು ‘ಅದಕ್ಕಿಂತ ಮೇಲು’ ಎಂಬ ಅಲಿಖಿತ ತೀರ್ಮಾನಕ್ಕೆ ಬರಲಾಯಿತು.

‘ಭಾರತ ರತ್ನ’:

ಕಲೆ, ಸಾಹಿತ್ಯ, ವಿಜ್ಞಾನ ಮತ್ತು ಸಮಾಜ ಸೇವೆ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಭಾರತ ರತ್ನ ಎಂಬ ದೇಶದ ಪರಮೋಚ್ಛ ಗೌರವ ನೀಡುವ ಸಂಪ್ರದಾಯವನ್ನು 1954ರಲ್ಲಿ ಆರಂಭಿಸಲಾಗಿತ್ತು. ಮೊದಲ ಬಾರಿಗೆ ಸಿ. ರಾಜಗೋಪಾಲಾಚಾರಿ, ಸಿ.ವಿ. ರಾಮನ್‌ ಮತ್ತು ಮೊದಲ ಉಪರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್‌ ಅವರಿಗೆ ಈ ಗೌರವ ನೀಡಲಾಗಿತ್ತು.

ಗೃಹ ಸಚಿವಾಲಯದ ಶಿಫಾರಸ್ಸುಗಳನ್ನು ಗಮನಿಸಿ ಭಾರತ ರತ್ನ ನೀಡಬೇಕಾದವರ ಹೆಸರುಗಳನ್ನು ಪ್ರಧಾನಿಗಳು ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡುತ್ತಾರೆ. ಈ ಹೆಸರುಗಳನ್ನು ರಾಷ್ಟ್ರಪತಿಗಳು ಘೋಷಣೆ ಮಾಡುತ್ತಾರೆ. ಆರಂಭದಲ್ಲಿ ಮರಣೋತ್ತರವಾಗಿ ಈ ಗೌರವ ನೀಡಲು ಅವಕಾಶ ಇರಲಿಲ್ಲ. ಇದಕ್ಕೆ 1955ರಲ್ಲಿ ತಿದ್ದುಪಡಿ ತಂದು 1966ರಲ್ಲಿ ಮೊದಲ ಬಾರಿಗೆ ದಿವಂಗತ ಲಾಲ್‌ ಬಹದ್ದೂರ್‌ ಶಾಸ್ತ್ರಿಯವರಿಗೆ ಭಾರತ ರತ್ನ ನೀಡಲಾಯಿತು. ನೆಲ್ಸನ್‌ ಮಂಡೇಲಾ ಮತ್ತು ಗಡಿನಾಡ ಗಾಂಧಿ ಎಂದೇ ಖ್ಯಾತರಾಗಿದ್ದ ಖಾನ್‌ ಅಬ್ದುಲ್‌ ಗಫಾರ್‌ ಖಾನ್‌ ಎಂಬ ಇಬ್ಬರು ವಿದೇಶಿಗರಿಗೂ ಈ ಗೌರವ ನೀಡಲಾಗಿದೆ.

ಸಚಿನ್‌ ತೆಂಡೂಲ್ಕರ್‌ಗೆ ಭಾರತ ರತ್ನ ನೀಡುವ ಮೊದಲು 2011ರಲ್ಲಿ ನಿಯಮಗಳಿಗೆ ತಿದ್ದುಪಡಿ ತಂದು ಯಾವುದೇ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದವರು ಅಥವಾ ಸೇವೆ ಸಲ್ಲಿಸಿದವರು ಈ ಪ್ರಶಸ್ತಿಗೆ ಅರ್ಹರು ಎಂದು ನಿಯಮ ಬದಲಾಯಿಸಲಾಗಿತ್ತು. ವರ್ಷದಲ್ಲಿ ಗರಿಷ್ಠ ಮೂರು ಜನರಿಗೆ ಭಾರತ ರತ್ನ ನೀಡಲಾಗುತ್ತದೆ. ಭಾರತ ರತ್ನ ಗೌರವದೊಂದಿಗೆ ಯಾವುದೇ ನಗದು ಪುರಸ್ಕಾರ ಇರುವುದಿಲ್ಲ. ಆದರೆ ಕೆಲವು ಸರಕಾರಿ ಸೌಲಭ್ಯಗಳು ಇರುತ್ತವೆ. ಜತೆಗೆ ಸರಕಾರಿ ಶಿಷ್ಟಾಚಾರದಲ್ಲಿ 7ನೇ ಸ್ಥಾನ ಪಡೆದುಕೊಂಡಿರುತ್ತಾರೆ.

ಹೀಗೊಂದು ಇತಿಹಾಸ ಇರುವ ಗೌರವ ಈ ಬಾರಿಯೂ ವಿವಾದಕ್ಕೆ ಗುರಿಯಾಗಿದೆ. ಹಾಗೆ ನೋಡಿದರೆ ಭಾರತ ರತ್ನ ಮಾತ್ರವಲ್ಲ ಪದ್ಮ ಪ್ರಶಸ್ತಿಗಳ ಬಗ್ಗೆಯೂ ಈ ಬಾರಿ ಅಪಸ್ವರಗಳು ಕೇಳಿ ಬಂದಿವೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಎಂದುಕೊಳ್ಳಲಾಗಿರುವ ಮಲಯಾಳಂ ಸೂಪರ್‌ಸ್ಟಾರ್‌ ಮೋಹನ್‌ಲಾಲ್‌ಗೆ ಪದ್ಮಭೂಷಣ ನೀಡಲಾಗಿದೆ. ಓಡಿಶಾ ಮತ್ತು ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ತಮಗೆ ನೀಡಿದ ಪದ್ಮ ಪ್ರಶಸ್ತಿಯನ್ನು ನವೀನ್‌ ಪಟ್ನಾಯಕ್‌ ಸೋದರಿ, ಲೇಖಕಿ ಗೀತಾ ಮೆಹ್ತಾ ನಿರಾಕರಿಸಿದ್ದಾರೆ.

ಇನ್ನು ಗೂಢಚರ್ಯೆ ಆರೋಪದ ಮೇಲೆ ಬಂಧಿತರಾಗಿ, 14 ವರ್ಷ ಕಾನೂನು ಹೋರಾಟ ನಡೆಸಿ ಇತ್ತೀಚೆಗೆ ಆರೋಪದಿಂದ ಮುಕ್ತರಾಗಿದ್ದ ಇಸ್ರೋದ ಮಾಜಿ ವಿಜ್ಞಾನಿ ನಂಬಿ ನಾರಾಯಣನ್‌ ಅವರಿಗೆ ಪದ್ಮಭೂಷಣ ನೀಡಲಾಗಿದೆ. ಜೀವಮಾನವಿಡಿ ಅವರನ್ನು ಗೋಳು ಹೊಯ್ದುಕೊಂಡ ವ್ಯವಸ್ಥೆ ಕೊನೆಗೊಮ್ಮೆ ಪ್ರಶಸ್ತಿ ನೀಡಿ ತಪ್ಪಿಗೆ ಮಾಡಿಕೊಂಡ ಪ್ರಾಯಶ್ಚಿತದಂತೆ ಕಾಣಿಸುತ್ತಿದೆ.

ಇವೆಲ್ಲದರ ಒಟ್ಟು ಸಾರ ಇಷ್ಟೇ. ಅದು ಭಾರತ ರತ್ನವೇ ಇರಲಿ, ಪದ್ಮ ಪ್ರಶಸ್ತಿಗಳೇ ಇರಲಿ; ಅಳೆದು ತೂಗಿ ಯಾರಿಗೆ ನೀಡಲಾಗುತ್ತದೆ ಎನ್ನುವುದರ ಮೇಲೆ ಅವುಗಳ ಮೌಲ್ಯ ನಿರ್ಧಾರವಾಗುತ್ತದೆ. ಬೇಕಾಬಿಟ್ಟಿ ನೀಡುತ್ತಾ ಹೋದರೆ ಕೊನೆಗೊಂದು ದಿನ ಭಾರತ ರತ್ನವೂ ರಾಜ್ಯೋತ್ಸವ, ಕೆಂಪೇಗೌಡ ಪ್ರಶಸ್ತಿಗಳ ಮಟ್ಟಕ್ಕೆ ಬಂದು ತಲುಪುತ್ತದೆ.

Also read: ಪ್ರಶಸ್ತಿ ರಾಜಕೀಯ; ಸಾಧನೆ, ಮಾನದಂಡ, ಪ್ರಕ್ರಿಯೆ, ಲಾಬಿ, ಒತ್ತಡ, ಆಯ್ಕೆ ಪಟ್ಟಿ ಇತ್ಯಾದಿ…