samachara
www.samachara.com
ಕೊಪ್ಪಳ ಎಂಬ ಅಸ್ಪೃಶ್ಯತೆ ಕೂಪದಲ್ಲಿ ಗಣತಂತ್ರದ ಅಣಕ; ದಲಿತರ ಪಾಲಿಗಿದು ನಿತ್ಯ ನರಕ
COVER STORY

ಕೊಪ್ಪಳ ಎಂಬ ಅಸ್ಪೃಶ್ಯತೆ ಕೂಪದಲ್ಲಿ ಗಣತಂತ್ರದ ಅಣಕ; ದಲಿತರ ಪಾಲಿಗಿದು ನಿತ್ಯ ನರಕ

‘ನಮಗೆ ಕ್ಷೌರ ಇಲ್ಲ, ಹೋಟೆಲ್ ದೇವಸ್ಥಾನದ ಒಳಗೂ ಪ್ರವೇಶವಿಲ್ಲ, ನೀರಿನ ನಲ್ಲಿಯನ್ನೂ ಮುಟ್ಟುವಂತಿಲ್ಲ, ಪ್ರಶ್ನೆ ಮಾಡಿದವ್ರನ್ನ ಊರಿಂದ ಬಹಿಷ್ಕರಿಸ್ತಾರೆ. ಇಲ್ಲಾಂದ್ರ ಮರಕ್ಕೆ ಕಟ್ಟಿಹಾಕಿ ಬಡೀತಾರೆ’ - ಹನುಮೇಶಪ್ಪ.

ಅಶೋಕ್ ಎಂ ಭದ್ರಾವತಿ

ಅಶೋಕ್ ಎಂ ಭದ್ರಾವತಿ

ದಲಿತರ ಪಾಲಿಗೆ ಇದೊಂದು ನತದೃಷ್ಟ ಗ್ರಾಮ. ಗ್ರಾಮದಿಂದ ಹೊರಗೆ ದೂರದಲ್ಲೊಂದು ದಲಿತ ಕೇರಿ. ಶೌಚಾಲಯ ವ್ಯವಸ್ಥೆ ಇಲ್ಲದ ಊರಿಗೆ ರಸ್ತೆಯ ಇಕ್ಕೆಲಗಳೇ ಪಾಯಿಖಾನೆ. ಎಲ್ಲವನ್ನೂ ದಾಟಿ ಮುಂದೆ ನಡೆದರೆ ಅಲ್ಲಿ ಸಿಗುವುದೇ ಬಹದ್ದೂರ್ ಬಂಡಿ ಹೊಸೂರು.

ಹೈದ್ರಾಬಾದ್ ಕರ್ನಾಟಕದ ಭಾಗವಾಗಿರುವ ಕೊಪ್ಪಳ ಜಿಲ್ಲೆಯ ಕೇಂದ್ರ ಭಾಗದಿಂದ ಕೂಗಳತೆ ದೂರದಲ್ಲಿರುವ ಈ ಗ್ರಾಮದಲ್ಲಿ ಈಗಲೂ ಅಸ್ಪೃಶ್ಯತೆ ಎಂಬುದು ನಮ್ಮ ನಿಮ್ಮ ಊಹೆಗೂ ಮೀರಿ, ಗಂಭೀರ ಸ್ಥಿತಿಯಲ್ಲಿ ಕಾಣಸಿಗುತ್ತದೆ.

ಅದು ಬೆಳಗ್ಗಿನ ಜಾವ 6.30 ರ ಸಮಯ. ಊರಿನ ಹೊರಗೆ ವೃತ್ತದ ಬಳಿ ಸಣ್ಣ ಪೆಟ್ಟಿಗೆ ಅಂಗಡಿ ತರಹದ ಕ್ಯಾಂಟೀನ್. ನಾಷ್ಟ ತಿನ್ನಲು ಬಂದ ದಲಿತ ವ್ಯಕ್ತಿಗೆ ದಿನ ಪತ್ರಿಕೆಯಲ್ಲಿ ತಿಂಡಿ ಕೊಡಲಾಗುತ್ತೆ. ಇಲ್ಲಿ ದಲಿತರು ಕ್ಯಾಂಟೀನ್ ಒಳಗೆ ಬರುವಂತಿಲ್ಲ, ದಾಹವಾದರೆ ನೀರಿನ ಬಾಟಲಿಯನ್ನು ಸಹ ಮುಟ್ಟುವಂತಿಲ್ಲ. ಅಂಗಡಿ ಮಾಲೀಕ ಅಂಗಡಿಯಿಂದ ಹೊರಗೆ ಬಂದು ನೀರನ್ನು ಮೇಲಿಂದ ಎತ್ತಿ ಸುರಿಯುತ್ತಾನೆ. ಅದನ್ನು ಹಾಗೆ ಬಾಗಿ ಕೈಚಾಚಿ ಕುಡಿಯಬೇಕು ಅಷ್ಟೇ. ಗಣರಾಜ್ಯ ಭಾರತದಲ್ಲಿ ಹೀಗಿದೆ ನೋಡಿ ಸಮಾನತೆಯ ಪರಿಸ್ಥಿತಿ.

“ಇಲ್ಲಾ ಬುದ್ಧಿ ನಮ್ ತಾತನ್ ಕಾಲದಿಂದಲೂ ಇದು ಹೀಗೆ ನಡಕೊಂಡ್ ಬಂದೈತೆ. ನಮಗೆ ಕ್ಷೌರ ಇಲ್ಲ, ಹೋಟೆಲ್ ದೇವಸ್ಥಾನದ ಒಳಗೂ ಪ್ರವೇಶವಿಲ್ಲ, ನೀರಿನ ನಲ್ಲಿಯನ್ನೂ ಮುಟ್ಟುವಂತಿಲ್ಲ. ಪ್ರಶ್ನೆ ಮಾಡಿದವ್ರನ್ನ ಊರಿಂದ ಬಹಿಷ್ಕರಿಸ್ತಾರೆ. ಇಲ್ಲಾಂದ್ರ ಮರಕ್ಕೆ ಕಟ್ಟಿಹಾಕಿ ಬಡೀತಾರೆ, ಅದ್ಕೆ ನಾವು ಸಂಪ್ರದಾಯ ಅನ್ಕೊಂಡು ಎಲ್ಲವನ್ನೂ ಪಾಲಿಸ್ತಾ ಇದೀವಿ,” ಅಂತ ಮುಗ್ಧವಾಗಿ ಆಧುನಿಕ ಅಸ್ಪೃಶ್ಯತೆಯನ್ನು 'ಸಮಾಚಾರ'ಕ್ಕೆ ವಿವರಿಸಿದರು ಊರಿನ ಹನುಮೇಶಪ್ಪ.

ಇದು ಇಂತಹದ್ದೇ ಸಾಮಾಜಿಕ ಆಚರಣೆಗಳನ್ನು ಹೊಂದಿರುವ ಕೊಪ್ಪಳದ ಬಹದ್ದೂರ್ ಬಂಡಿ ಹೊಸೂರು, ಹ್ಯಾಟಿ, ಹಿರೇಸಿಂಧೋಗಿ, ಶಿವಪುರ, ಗಂಗಾವತಿಯ ಮರಕುಂಭಿ, ಈಚನಾಳ ಗ್ರಾಮಗಳ ಕಥೆಯಷ್ಟೇ ಅಲ್ಲ. ಬದಲಿಗೆ ಇಡೀ ಕೊಪ್ಪಳಕ್ಕೆ ಕೊಪ್ಪಳವೇ ಇಂದು ಅಸ್ಪೃಶ್ಯತೆ ಎಂಬ ಹೀನ ಆಚರಣೆಗೆ ಬಿದ್ದು, ಅಭಿವೃದ್ಧಿ ಕಾಣದೆ ಶತಮಾನಗಳಷ್ಟು ಹಿಂದುಳಿದಿದೆ.

ಈ ಜಿಲ್ಲೆಯ ಹಲವು ಭಾಗಗಳಲ್ಲಿ ದಲಿತರು ಈಗಲೂ ಪ್ರಾಣ ಭಯದಿಂದ ಬದುಕುವ ಪರಿಸ್ಥಿತಿಯಲ್ಲಿದ್ದಾರೆ. ದೇಶ ಗಣರಾಜ್ಯವಾಗಿ 69 ವರ್ಷವಾಗಿದೆ. ಆದರೂ ಕೊಪ್ಪಳದ ಗ್ರಾಮಗಳಿಗೆ ವ್ಯಕ್ತಿ ಸ್ವಾತಂತ್ರ್ಯ ಹಾಗೂ ಸಮಾನತೆ ಎಂಬುದು ಕಾಲಿಡಲು ಹಿಂದು ಮುಂದು ನೋಡುತ್ತಿದೆ.

ಅಸ್ಪೃಶ್ಯತೆಯ ಕೂಪ ಕೊಪ್ಪಳ:

ರಾಜ್ಯದ ರಾಜಧಾನಿ ಬೆಂಗಳೂರಿನಿಂದ 334 ಕಿಮೀ ದೂರದಲ್ಲಿರುವ, ಹೈದ್ರಾಬಾದ್ ಕರ್ನಾಟಕದ ಅತ್ಯಂತ ಚಿಕ್ಕ ಜಿಲ್ಲೆಗಳ ಪೈಕಿ ಬಿಸಿಲನಾಡು ಕೊಪ್ಪಳವೂ ಒಂದು. ಗಂಗಾವತಿ, ಕುಷ್ಟಗಿ, ಯಲಬುರ್ಗಾ ಹಾಗೂ ಕೊಪ್ಪಳ ಸೇರಿದಂತೆ ಕೇವಲ ನಾಲ್ಕು ತಾಲೂಕು ಕೇಂದ್ರಗಳು ಹಾಗೂ ಕನಕಗಿರಿ ಎಂಬ ಒಂದು ಹೋಬಳಿಯನ್ನು ಈ ಜಿಲ್ಲೆ ಒಳಗೊಂಡಿದೆ. ಗಂಗಾವತಿ ತಾಲೂಕಿನ ಕೆಲವು ಪ್ರದೇಶಗಳನ್ನು ಹೊರತುಪಡಿಸಿ ಜಿಲ್ಲೆಯಲ್ಲಿ ಶೇ. 72 ರಷ್ಟು ಭೂಮಿ ಮಳೆಯಾಧಾರಿತ ಕೃಷಿಯನ್ನೇ ಅವಲಂಭಿಸಿದೆ. ಹೀಗಾಗಿ ಬರಕ್ಕೂ ಕೊಪ್ಪಳಕ್ಕೂ ಎಲ್ಲಿಲ್ಲದ ನಂಟು.

ಕೊಪ್ಪಳಕ್ಕೂ ಬರಕ್ಕೂ ಹೇಗೆ ಒಂದು ನಂಟಿದೆಯೋ, ಹಾಗೆ ಜಾತಿ ತಾರತಮ್ಯಕ್ಕೂ ಬರಕ್ಕೂ ಒಂದು ನಂಟಿದೆ. ಬೀದರ್‌ನಿಂದ ಕೋಲಾರದವರೆಗೆ ಎಲ್ಲಿಲ್ಲಿ ಬರೆವಿದೆಯೋ ಅಲ್ಲೆಲ್ಲ ದಲಿತರ, ಕೆಳ ಜಾತಿಯವರ ಮೇಲಿನ ಶೋ‍ಷಣೆಗಳು ವರದಿಯಾಗುತ್ತವೆ. ಉತ್ತರ ಕರ್ನಾಟಕ ಬರಪೀಡಿತ ಜಿಲ್ಲೆಗಳಾದ ಬಳ್ಳಾರಿ, ರಾಯಚೂರು, ಹಾವೇರಿ, ಬೀದರ್, ಬಿಜಾಪುರ, ಗುಲಬರ್ಗಾದಲ್ಲಿ ಈಗಲೂ ಅಸ್ಪೃಶ್ಯತೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ ಕೊಪ್ಪಳ ಜಿಲ್ಲೆಯಲ್ಲಿ ಆಚರಿಸಲಾಗುತ್ತಿರುವ ಅಸ್ಪೃಶ್ಯತೆ ಪ್ರಜ್ಞಾವಂತ ಸಮಾಜವೂ ನಾಚಿ ತಲೆ ತಗ್ಗಿಸುವಂತಿದೆ.

ದಲಿತರಿಗೆ ಪ್ರವೇಶವಿಲ್ಲ:

ಕೊಪ್ಪಳ ಜಿಲ್ಲೆಯ ನಗರ ಭಾಗದ ಕೆಲವು ಹೋಟೆಲ್‌ಗಳನ್ನು ಹೊರತುಪಡಿಸಿದರೆ, ಜಿಲ್ಲೆಯಾದ್ಯಂತ ಭಾಗಶಃ ಎಲ್ಲಾ ಹೋಟೆಲ್‌ಗಳ ಒಳಗೆ ದಲಿತರ ಪ್ರವೇಶವನ್ನು ಇವತ್ತಿಗೂ ನಿರಾಕರಿಸಲಾಗಿದೆ. ಪ್ರತಿಯೊಂದು ಹಳ್ಳಿಯ ಹೊರಗೂ ದಲಿತ ಕೇರಿಯೊಂದಿದ್ದು, ಕೆಲವು ಹಳ್ಳಿಗಳಲ್ಲಿ ಮಾತ್ರವೇ ಈ ಕೇರಿಯ ಜನರಿಗೆ ಊರಿನ ಒಳಗೆ ಪ್ರವೇಶ ನೀಡಲಾಗುತ್ತದೆ. ಕೆಲವು ಹಳ್ಳಿಗಳಲ್ಲಿ ಕೇರಿ ಜನ ಕನಿಷ್ಟ ಊರೊಳಗೆ ಓಡಾಡುವ ಹಾಗೆಯೂ ಇಲ್ಲ.

ಜತೆಗೆ ಊರಿನ ದೇವಾಲಯ, ಹೋಟೆಲ್‌ಗಳ ಒಳಗೂ ಕೆಳ ಜಾತಿಯ ಜನರಿಗೆ ಪ್ರವೇಶವಿಲ್ಲ. ದಲಿತರು ಬಂದರೆ ಅವರಿಗೆ ಹೋಟೆಲ್‌ನಿಂದ ಹೊರಗೆ ಇಟ್ಟಿರಲಾಗುವ ಪ್ಲಾಸ್ಟಿಕ್ ತಟ್ಟೆಯಲ್ಲೇ ಊಟ ಹಾಕಲಾಗುತ್ತದೆ. ಪ್ಲಾಸ್ಟಿಕ್ ಕಪ್ ಅಥವಾ ಕೆಲವು ಕಡೆ ತೆಂಗಿನ ಚಿಪ್ಪಿನಲ್ಲಿ ಚಹಾ ಕೊಡುವ ಅಮಾನವೀಯ ಪದ್ಧತಿಯನ್ನು ಈಗಲೂ ಅಚರಿಸಿಕೊಂಡು ಬರಲಾಗುತ್ತಿದೆ. ಇನ್ನೂ ದಲಿತರು ನೀರು ಕುಡಿಯಲು ಯಾವುದೇ ಲೋಟ ಅಥವಾ ಜಗ್‌ಗಳನ್ನು ಮುಟ್ಟುವ ಹಾಗಿಲ್ಲ. ಬದಲಿಗೆ ಹೋಟೆಲ್‌ನವರೇ ಜಗ್ಗಿನಿಂದ ನೀರನ್ನು ಎತ್ತಿ ಸುರಿದರೆ ಕೈಚಾಚಿ ಕುಡಿದು ಮುಂದೆ ಸಾಗಬೇಕಿದೆ.

ಕೊಪ್ಪಳ ಜಿಲ್ಲೆ ಕೊಪ್ಪಳ ತಾಲೂಕಿನ ಬಹುದ್ದೂರುಬಂಡಿ ಹೊಸೂರು ಗ್ರಾಮದ ಹೋಟೆಲ್‌ ಒಂದರ ಮುಂದೆ ಕಂಡ ದೃಶ್ಯ. 
ಕೊಪ್ಪಳ ಜಿಲ್ಲೆ ಕೊಪ್ಪಳ ತಾಲೂಕಿನ ಬಹುದ್ದೂರುಬಂಡಿ ಹೊಸೂರು ಗ್ರಾಮದ ಹೋಟೆಲ್‌ ಒಂದರ ಮುಂದೆ ಕಂಡ ದೃಶ್ಯ. 
/ಸಮಾಚಾರ. 

ಅಸ್ಪೃಶ್ಯರಿಗೆ ದೇವಾಲಯಗಳ ಒಳಗೂ ಪ್ರವೇಶಿಸುವಂತಿಲ್ಲ. ಪೂಜೆ ಪುನಸ್ಕಾರಗಳಲ್ಲಿ ಭಾಗಿಯಾಗುವಂತಿಲ್ಲ. ದೇವಾಲಯದಲ್ಲಿ ಪೂಜೆ ಸಂದರ್ಭದಲ್ಲಿ ದಲಿತರು ದೇವಾಲಯದಿಂದ ಹೊರಗಡೆ ನಿಂತಿರುತ್ತಾರೆ. ಅಲ್ಲೆ ಅಣತಿ ದೂರದಲ್ಲಿ ತೆಂಗಿನಕಾಯಿ ಹೂವು ಇರುವ ಬುಟ್ಟಿಯನ್ನು ಇಡಬೇಕು, ಅದನ್ನು ತೆಗೆದುಕೊಂಡು ಹೋಗುವ ಪೂಜಾರಿ ಕಾಯಿ ಒಡೆದು ಅವರಿಗೆ ಹೊರಗೆ ತಂದು ಕೊಡುತ್ತಾನೆ.

ನೀರಿನ ಮೂಲಗಳಲ್ಲೂ ನಿರ್ಬಂಧ:

ದಲಿತರು ಊರಿನಲ್ಲಿ ನೀರಿನ ನಲ್ಲಿಯನ್ನು, ಬೋರ್‌ವೆಲ್‌ಗಳನ್ನು ಮುಟ್ಟುವಂತಿಲ್ಲ. ದಲಿತರು ನಲ್ಲಿಯನ್ನು ಮುಟ್ಟಿದರೆ ಮೈಲಿಗೆಯಾಗುತ್ತೆ ಎಂಬ ನಂಬಿಕೆ ಈಗಲೂ ಈ ಭಾಗದಲ್ಲಿ ಆಳವಾಗಿ ಬೇರೂರಿದೆ. ಬದಲಿಗೆ ಯಾರಾದರು ಮೇಲ್ಜಾತಿಯವರು ಬಂದು ನೀರನ್ನು ಹಿಡಿದು ಇವರ ತಂಬಿಗೆಗಳಿಗೆ ಸುರಿಯುವವರೆಗೆ ದಲಿತರು ಕಾದು ಕೂರಬೇಕು ಅಷ್ಟೇ.

ಇದು ಕೊಪ್ಪಳದ ಎಲ್ಲಾ ಗ್ರಾಮಗಳಲ್ಲೂ ಸಾಮಾನ್ಯವಾಗಿ ಕಂಡು ಬರುವ ದೃಶ್ಯ. ಅಲ್ಲದೆ ಇದು ಆಯಾ ಗ್ರಾಮಗಳ ನಿಯಮ ಎಂಬಂತೆ ಈಗಲೂ ಪಾಲಿಸಲಾಗುತ್ತಿದೆ. ಈ ನಿಯಮವನ್ನು ಉಲ್ಲಂಘಿಸಿ ಯಾರಾದರೂ ನಲ್ಲಿಯನ್ನೋ, ಬೋರ್‌ವೆಲ್‌ಗಳನ್ನೋ, ಬಾವಿಯನ್ನೋ ಮುಟ್ಟಿದರೆ ಅಂತವರನ್ನು ಮರಕ್ಕೆ ಕಟ್ಟಿಹಾಕಿ ಚರ್ಮ ಸುಲಿಯುವಂತೆ ಬಾರಿಸಲಾಗುತ್ತದೆ. ಈ ಕುರಿತು ಎಲ್ಲೂ ಪ್ರಕರಣ ದಾಖಲಾಗಲ್ಲ; ಇಂತಹ ಅಮಾನವೀಯ ಘಟನೆಗಳನ್ನು ಯಾರೂ ಪ್ರಶ್ನಿಸುವುದೂ ಇಲ್ಲ.

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಈಚನಾಳ ಗ್ರಾಮದಲ್ಲಿ ದಲಿತರು ಬೋರ್‌ವೆಲ್ ಮುಟ್ಟುವುದು ನಿಷಿದ್ಧ. 
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಈಚನಾಳ ಗ್ರಾಮದಲ್ಲಿ ದಲಿತರು ಬೋರ್‌ವೆಲ್ ಮುಟ್ಟುವುದು ನಿಷಿದ್ಧ. 
/ಸಮಾಚಾರ. 

ದಲಿತರಿಗಿಲ್ಲ ಕಟಿಂಗ್ ಶೇವಿಂಗ್

ಕೊಪ್ಪಳದ ಗ್ರಾಮಗಳಲ್ಲಿ ದಲಿತರಿಗೆ ಕಟಿಂಗ್ ಶೇವಿಂಗ್ ಮಾಡುವುದಿಲ್ಲ. ಕ್ಷೌರ ವೃತ್ತಿ ನಿರ್ವಹಿಸುವ ಸವಿತಾ ಸಮಾಜ ಹಿಂದುಳಿದ ಕಾಯಕ ಸಮಾಜಗಳಲ್ಲೊಂದು. ಆದರೆ ಇವರೂ ಕೂಡ ದಲಿತರಿಗೆ ಕಟಿಂಗ್ ಶೇವಿಂಗ್ ಮಾಡಲು ಹಿಂದೆ ಮುಂದೆ ನೋಡುತ್ತಾರೆ. 2014ರಲ್ಲಿ ಗಂಗಾವತಿಯ ಮರಕುಂಭಿ ಗ್ರಾಮದಲ್ಲಿ ದಲಿತರಿಗೆ ಕಟಿಂಗ್ ನಿಷೇಧಿಸಲಾಗಿತ್ತು. ಇದನ್ನು ಪ್ರಶ್ನೆ ಮಾಡಿದ ಕಾರಣಕ್ಕೆ ಇಬ್ಬರು ದಲಿತರ ಮನೆಗಳಿಗೆ ಮೇಲ್ಜಾತಿಯವರು ಬೆಂಕಿ ಹಾಕಿದ್ದರು.

ಗ್ರಾಮದೊಳಗೆ ಈ ಘಟನೆ ದೊಡ್ಡ ಮಟ್ಟದ ಗಲಭೆಗೆ ಕಾರಣವಾಗಿತ್ತು. ಜಿಲ್ಲಾಡಳಿತ ಇಡೀ ಗ್ರಾಮಕ್ಕೆ ಅಂದು ಪೊಲೀಸ್ ಬಂದೋಬಸ್ತ್‌ ನೀಡಿತ್ತು. ಕೊನೆಗೆ ರಾಜೀ ಪಂಚಾಯಿತಿ ಮಾಡಿದ್ದರೂ ಸಹ ದಲಿತರಿಗೆ ಕ್ಷೌರ ಮಾಡಲು ಯಾರೂ ಒಪ್ಪಿರಲಿಲ್ಲ. ಪರಿಣಾಮ ಈಗಲೂ ಕೊಪ್ಪಳದಲ್ಲಿ ಹಲವರು ತಮ್ಮ ಮಕ್ಕಳಿಗೆ ತಾವೇ ಕಟಿಂಗ್ ಮಾಡುತ್ತಾರೆ. ಕೊಪ್ಪಳದ ಬಹುಪಾಲು ಎಲ್ಲಾ ಗ್ರಾಮಗಳಲ್ಲಿ ಈಗಲೂ ಇದೇ ಸ್ಥಿತಿ ಇದೆ.

“ನಮ್ಮ ಊರಿನಲ್ಲಿ ದಲಿತರು ಎಂಬ ಕಾರಣಕ್ಕೆ ನಮಗೆ ಯಾರೂ ಕ್ಷೌರ ಮಾಡುವುದಿಲ್ಲ. ಸಣ್ಣ ಮಕ್ಕಳಿಗೆ ನಾವೇ ಕೂದಲು ಕತ್ತರಿಸುತ್ತೇವೆ. ದೊಡ್ಡವರು ಕ್ಷೌರ ಮಾಡಿಸಿಕೊಳ್ಳಬೇಕು ಎಂದರೆ ಸಿಟಿಗೆ ಬಂದು ಕಟಿಂಗ್ ಮಾಡಿಸಿಕೊಂಡು ಹೋಗಬೇಕು. ಊರಿನಲ್ಲಿರುವ ಕ್ಷೌರದ ಅಂಗಡಿಗೆ ಕಾಲಿಟ್ಟರೆ ದೊಡ್ಡ ಗಲಾಟೆ ಮಾಡಿ ಊರಿನಿಂದ ಬಹಿಷ್ಕಾರ ಹಾಕುತ್ತಾರೆ,” ಎಂದು ಮಾಹಿತಿ ನೀಡುತ್ತಾರೆ ಕೊಪ್ಪಳ ಪದವಿ ಕಾಲೇಜಿನಲ್ಲಿ ಬಿಎ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿ ಮಂಜುನಾಥ ಕಟ್ಟೀಮನಿ.

ಆರ್ಥಿಕ ಹಿಂದುಳಿದಿರುವಿಕೆ:

ಅಸ್ಪೃಶ್ಯತೆ ಈ ಕಾಲದಲ್ಲೂ ಮುಂದುವರೆಯಲು ಕೆಳ ವರ್ಗದ ಜನ ಆರ್ಥಿಕವಾಗಿ ಹಿಂದುಳಿದಿರುವುದೂ ಒಂದು ಕಾರಣ. ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಕೊಪ್ಪಳದಲ್ಲಿ ದಲಿತರ ಪರಿಸ್ಥಿತಿ ತೀರಾ ಚಿಂತಾಜನಕವಾಗಿದೆ. 2018ರಲ್ಲಿ ಕೊಪ್ಪಳ ಜಿಲ್ಲಾಡಳಿತ ನಡೆಸಿರುವ ಸಮೀಕ್ಷೆಯ ಪ್ರಕಾರ, ಜಿಲ್ಲೆಯಲ್ಲಿ ಸುಮಾರು 2,58,600 ಜನ ಪರಿಶಿಷ್ಟ ಜಾತಿಯವರಿದ್ದರೆ, 1,64,271 ಜನ ಪರಿಶಿಷ್ಟ ಪಂಗಡದವರಿದ್ದಾರೆ.

ಜಿಲ್ಲೆಯ ಒಟ್ಟಾರೆ ಜನಸಂಖ್ಯೆಯಲ್ಲಿ ಪರಿಶಿಷ್ಟ ಜಾತಿಯವರು ಶೇ.18.6 ರಷ್ಟಿದ್ದರೆ, ಪರಿಶಿಷ್ಟ ಪಂಗಡದವರ ಸಂಖ್ಯೆ ಶೇ.11.08. ಕೊಪ್ಪಳ ಜಿಲ್ಲೆಯಲ್ಲಿ ಭೂಮಿ ಹೊಂದಿರುವ ದಲಿತರ ಸಂಖ್ಯೆ ಶೇ.7 ನ್ನೂ ದಾಟದು. ಹೀಗಾಗಿ ಇತರರ ಭೂಮಿಗಳಲ್ಲಿ ದುಡಿಯುವುದೇ ದಲಿತರ ಮುಂದಿರುವ ಏಕೈಕ ಆಯ್ಕೆ.

ಅದರಲ್ಲೂ ಬರಗಾಲದ ಸಂದರ್ಭದಲ್ಲಿ ಕಾರಟಗಿ, ಕನಕಗಿರಿ, ಕುಷ್ಟಗಿ, ಯಲಬುರ್ಗಾ ಭಾಗದಿಂದ ಅಪಾರ ಸಂಖ್ಯೆಯ ಜನ ಬೆಂಗಳೂರು, ಹುಬ್ಬಳ್ಳಿ, ಮುಂಬೈಗೆ ಗುಳೆ ಹೋಗುವುದು ಸಾಮಾನ್ಯ ಸಂಗತಿ. ಇನ್ನೂ ಗ್ರಾಮೀಣ ಭಾಗದಲ್ಲೇ ಉಳಿಯುವ ದಲಿತರಿಗೆ ಬೇರೆಯವರ ಜಮೀನಿನಲ್ಲಿ ಸಣ್ಣ ಪುಟ್ಟ ಕೂಲಿ ಕೆಲಸ, ಪಾಯಿಖಾನೆ ತೊಳೆಯುವ ಕೆಲಸವೇ ಆಧಾರ.

ಚಿತ್ರ ಸಾಂದರ್ಭಿಕ. 
ಚಿತ್ರ ಸಾಂದರ್ಭಿಕ. 

ಜಿಲ್ಲಾಡಳಿತವೆ ನೀಡುವ ಅಂಕಿ ಅಂಶಗಳ ಪ್ರಕಾರ, ಕೊಪ್ಪಳದ ದಲಿತನ ಒಂದು ದಿನದ ದುಡಿಮೆ ಗರಿಷ್ಟ 100 ರೂಪಾಯಿಗಳನ್ನು ದಾಟುವುದು ಕಷ್ಟ. ಮಾನವ ಅಭಿವೃದ್ಧಿ ಸೂಚ್ಯಾಂಕದಲ್ಲಿ ದಲಿತರ ಪಾಲು ಕೇವಲ ಶೇ. 0.575 ರಷ್ಟಿದೆ.

ಇನ್ನೂ ದಲಿತರಿಗೆ ಸ್ವಂತ ಮನೆ ಎಂಬುದೂ ಕೂಡ ಇಲ್ಲಿ ಗಗನ ಕುಸುಮವಾಗಿದೆ. 2014 ರಲ್ಲಿ ಜಿಲ್ಲಾಡಳಿತ ನೀಡಿರುವ ಅಂಕಿ ಅಂಶಗಳ ಪ್ರಕಾರ ಕೊಪ್ಪಳದಲ್ಲಿ 43,621 ದಲಿತ ಕುಟುಂಬಗಳಿವೆ. ಈ ಪೈಕಿ 10,515 ಕುಟುಂಬಗಳು ಅರೆ ಶಾಶ್ವತ ಮನೆಗಳಲ್ಲಿದ್ದರೆ, 3,066 ಕುಟುಂಬಗಳು ವಾಸಿಸಲು ಯೋಗ್ಯವಲ್ಲದ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ತಾತ್ಕಾಲಿಕ ಜಾಗಗಳಲ್ಲಿ ಸುಮಾರು 5,645 ಕುಟುಂಬಗಳು ವಾಸಿಸುತ್ತಿವೆ. ಉಳಿದ ಕುಟುಂಬಗಳು ಬಹುತೇಕ ಜೋಪಡಿಗಳನ್ನ ಚಿಕ್ಕಪುಟ್ಟ ಶೆಡ್‌ಗಳನ್ನೇ ನಂಬಿ ಬದುಕುತ್ತಿವೆ.

ಶೈಕ್ಷಣಿಕವಾಗಿಯೂ ಪ್ರಗತಿ ಇಲ್ಲ:

ಶಿಕ್ಷಣವೇ ಅಭಿವೃದ್ಧಿಯ ಕೀಲಿ ಕೈ ಎಂಬ ಮಾತಿದೆ. ಶಿಕ್ಷಣ ವಂಚಿತ ಯಾವ ಸಮುದಾಯವೂ ಆರ್ಥಿಕವಾಗಿ ಸಾಮಾಜಿವಾಗಿ ಅಭಿವೃದ್ಧಿ ಹೊಂದುವುದು ಸಾಧ್ಯವೇ ಇಲ್ಲ ಎನ್ನಲಾಗುತ್ತದೆ. ಆದರೆ ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಕೊಪ್ಪಳ ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿ ತೀರಾ ಕಳಪೆಯಾಗಿದೆ. ಇನ್ನೂ ದಲಿತರ ಪರಿಸ್ಥಿತಿಯಂತೂ ಹೇಳ ತೀರದು.

ಕೊಪ್ಪಳ ಜಿಲ್ಲೆಯಲ್ಲಿ 1 ರಿಂದ 8ನೇ ತರಗತಿವರೆಗೆ ಶಾಲೆಗೆ ದಾಖಲಾಗುವ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಸಂಖ್ಯೆ ಕೇವಲ ಶೇ.18.43 ರಷ್ಟಾದರೆ, ಪರಿಶಿಷ್ಟ ಪಂಗಡದವರ ಸಂಖ್ಯೆ ಶೇ. 12.09 ಮಾತ್ರ. ಇನ್ನು ಒಂಭತ್ತು, ಹತ್ತನೇ ತರಗತಿಗೆ ಸೇರ್ಪಡೆಯಾಗುವ ಪರಿಶಿಷ್ಟ ಜಾತಿಯ ಮಕ್ಕಳ ಸಂಖ್ಯೆ ಶೇ.14.25 ರಷ್ಟಾದರೆ, ಪರಿಶಿಷ್ಟ ಪಂಗಡದ ಮಕ್ಕಳ ಸಂಖ್ಯೆ ಕೇವಲ ಶೇ. 11.46. ಇದರ ನಡುವೆ ಕಾಲೇಜಿನ ಮೆಟ್ಟಿಲು ಹತ್ತುವುದು ಈಗಲೂ ದಲಿತರಿಗೆ ಕನಸಿನ ಮಾತಾಗಿಯೇ ಉಳಿದಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೀಡುವ ಅಂಕಿ ಅಂಶಗಳ ಪ್ರಕಾರ, ಕೊಪ್ಪಳ ಜಿಲ್ಲೆಯಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಇವರ ಪೈಕಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ಮಕ್ಕಳ ಸಂಖ್ಯೆಯೇ ಅಧಿಕವಾಗಿದೆ. ದಲಿತನ ಮನೆಯಲ್ಲಿ ಹಾಸುಹೊದ್ದು ಮಲಗಿರುವ ಬಡತನ ಹಾಗೂ ಬಾಲ ಕಾರ್ಮಿಕ ಪದ್ಧತಿಯೇ ಶಿಕ್ಷಣದಿಂದ ವಂಚಿತರಾಗಲು ಮೂಲ ಕಾರಣ.

ಈ ಪ್ರಮಾಣದಲ್ಲಿ ದಲಿತರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದರೂ, ಇವರನ್ನು ಮತ್ತೆ ಶಾಲೆಗೆ ಕರೆತರುವಲ್ಲಿ, ಶಿಕ್ಷಣ ನೀಡುವಲ್ಲಿ ಕೊಪ್ಪಳ ಜಿಲ್ಲಾಡಳಿತ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಪರಿಣಾಮ ಯಾವ ಹಳ್ಳಿಗೆ ಹೋದರೂ ಶಿಕ್ಷಣದಿಂದ ವಂಚಿತ ದಲಿತ ಸಮುದಾಯವೊಂದು ಕಣ್ಣಿಗೆ ಬೀಳುತ್ತದೆ.

ಕೊಪ್ಪಳದ ಶಾಲಾ ಮಕ್ಕಳು.
ಕೊಪ್ಪಳದ ಶಾಲಾ ಮಕ್ಕಳು.
/ಎನ್‌ಡಿಟಿವಿ

ಜಾತಿ ಎಂಬ ಮೇಲುಗಾರಿಕೆ:

“ಗ್ರಾಮೀಣ ಭಾಗಗಳಲ್ಲಿ ದಲಿತರು ನಮಗಿಂತ ಕೀಳು ನಾವು ಮೇಲು ಎಂಬ ಕಲ್ಪನೆ ಶತಮಾನಗಳಿಂದ ನಮ್ಮ ಮೇಲ್ವರ್ಗದ ಜನರ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ. ಹೀಗಾಗಿ ಮೇಲ್ಜಾತಿಯವನು ಮಾನಸಿಕವಾಗಿ ತಾನು ಮೇಲು ಎಂಬ ನಿರ್ಣಯಕ್ಕೆ ಬಂದಿದ್ದಾನೆ. ಅಲ್ಲದೆ ದಲಿತರನ್ನು ತನ್ನ ಅಂಕೆಯಲ್ಲಿ ಇಡಲು, ತನಗೆ ಬೇಕಾದ ಕೆಲಸವನ್ನು ಅವರಿಂದ ಮಾಡಿಸಿಕೊಳ್ಳಲು ಅಸ್ಪೃಶ್ಯತೆಯನ್ನು ಆಯುಧವನ್ನಾಗಿ ಬಳಸುತ್ತಿದ್ದಾನೆ. ಆದರೆ ಇಂತಹದ್ದೇ ಕಾರಣಕ್ಕೆ ತಾವು ಅಸ್ಪೃಶ್ಯತೆಗೆ ಒಳಗಾಗುತ್ತಿದ್ದೇವೆ ಎಂಬ ಪರಿವೆಯೂ ದಲಿತನಿಗೆ ಇಲ್ಲ. ಇಲ್ಲಿ ಅಸ್ಪೃಶ್ಯತೆ ಬದುಕಿನ ಒಂದು ಭಾಗವೇ ಆಗಿ ಹೋಗಿದೆ,” ಎನ್ನುತ್ತಾರೆ ಕೊಪ್ಪಳದ ಹಿರಿಯ ಪತ್ರಕರ್ತ ಚಾಮರಾಜ ಸವಡಿ.

ದೇಶ ಸ್ವಾತಂತ್ರ್ಯಗೊಂಡು 72 ವರ್ಷಗಳಾಗಿದೆ. ಸಂವಿಧಾನವನ್ನು ಜಾರಿ ತಂದು 70 ವರ್ಷ ತುಂಬುತ್ತಿದೆ. ಅಸ್ಪೃಶ್ಯತೆ ನಿವಾರಣೆಗಾಗಿ ಎಲ್ಲಾ ಸರಕಾರಗಳು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿವೆ. ಆದರೂ ಈಗಲೂ ನಮ್ಮ ಭಾರತದ ಗ್ರಾಮೀಣ ಭಾಗಗಳಲ್ಲಿ ಅಸ್ಪೃಶ್ಯತೆ ಬೇರು ಮಟ್ಟದಲ್ಲಿ ಗಟ್ಟಿಯಾಗಿದೆ. ಸಮಾಜದ ಮೇಲ್ವರ್ಗ ಹಾಗೂ ಕೆಳವರ್ಗ ಇಬ್ಬರಿಗೂ ತಾವು ಅಸ್ಪೃಶ್ಯತೆಯ ಭಾಗವಾಗಿದ್ದೇವೆ ಎಂಬ ಪರಿವೆಯೇ ಇದ್ದಂತಿಲ್ಲ ಎಂಬುದು ಹಿರಿಯ ಪತ್ರಕರ್ತ ಚಾಮರಾಜ ಸವಡಿ ಮಾತಿನಿಂದ ಸ್ಪಷ್ಟವಾಗುತ್ತದೆ.

ದೇವದಾಸಿ ದಲಿತ ಮಹಿಳೆಯರು:

ಸ್ವಾತಂತ್ರ್ಯ ನಂತರದ ಭಾರತದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಸಾಕಷ್ಟು ಅನಿಷ್ಟ ಪದ್ಧತಿಗಳನ್ನು ಕಂದಾಚಾರಗಳನ್ನು ಸರಕಾರವೇ ಮುಂದೆ ನಿಂತು ತೊಡೆದು ಹಾಕಿದೆ. ಆದರೆ ಸರಕಾರದಿಂದ ಈಗಲೂ ಆಗದ ಏಕೈಕ ಕೆಲಸವೆಂದರೆ 'ದೇವದಾಸಿ ಪದ್ಧತಿ' ನಿರ್ಮೂಲನೆ.

ದೇವದಾಸಿ ಸಂಪ್ರದಾಯ ಎಂದರೆ, ದೇವತೆಗಳ ವಿಗ್ರಹಗಳು, ಪೂಜಾಸ್ಥಳಗಳು,ಮತ್ತು ಧಾರ್ಮಿಕ ಸಂಸ್ಥೆಗಳಿಗೆ ಮಹಿಳೆಯರನ್ನು ಅರ್ಪಿಸುವುದು. ಸಾಮಾನ್ಯವಾಗಿ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ವ್ಯಕ್ತಿ ತನ್ನ ಮಗಳನ್ನು ದೇವರಿಗೆ ಅರ್ಪಿಸುತ್ತಾನೆ. ಎಲ್ಲರ ಸಮ್ಮುಖದಲ್ಲಿ ದೇವಸ್ಥಾನದ ಅರ್ಚಕ ಆಕೆಯ ಕತ್ತಿಗೆ ಮುತ್ತು ಕಟ್ಟುವ ಮೂಲಕ ಆಕೆಗೆ ದೇವದಾಸಿ ದೀಕ್ಷೆ ಕೊಡಲಾಗುತ್ತದೆ.

ಹೀಗೆ ಒಮ್ಮೆ ದೇವದಾಸಿ ದೀಕ್ಷೆ ಪಡೆದರೆ ಆಕೆ ಮದುವೆಯಾಗುವಂತಿಲ್ಲ. ಆಕೆಯನ್ನು ಊರಿನ ಹಿರಿಯ ಜನ ದೇವರ ಹೆಸರಿನಲ್ಲಿ ಲೈಂಗಿಕವಾಗಿ ಬಳಸಿಕೊಳ್ಳುತ್ತಾರೆ. ಇಂತವರ ಮಕ್ಕಳು ಯಾರನ್ನೂ ಅಪ್ಪ ಎಂದು ಕರೆಯುವಂತಿಲ್ಲ, ಇತ್ತೀಚೆಗೆ ದೇವದಾಸಿ ಪದ್ಧತಿ ಎಂಬುದು ವೇಶ್ಯಾವೃತ್ತಿಯಂತೆ ಬದಲಾಗಿದೆ.

ದೇವದಾಸಿ ಪದ್ಧತಿ ನಿರ್ಮೂಲನೆಗಾಗಿ ಭಾರತ ಸರಕಾರ 1984 ರಲ್ಲಿ 'ದೇವದಾಸಿ ಸಮರ್ಪಣಾ ನಿಷೇಧ ಕಾಯ್ದೆ'ಯನ್ನು ಜಾರಿಗೆ ತಂದಿತ್ತು. ಇದರಿಂತೆ ಮಹಿಳೆ ಒಪ್ಪಿಗೆ ಸೂಚಿಸಿದರೂ, ಸೂಚಿಸದೆ ಇದ್ದರೂ ದೇವದಾಸಿ ಪದ್ಧತಿಯ ಪಾಲನೆ ಎಂಬುದು ಕಾನೂನು ಬಾಹಿರ.

ಆದರೆ ಕೊಪ್ಪಳದಲ್ಲಿ ಇಂದಿಗೂ ದೇವದಾಸಿ ಪದ್ಧತಿ ಜೀವಂತವಾಗಿದೆ. ಕೊಪ್ಪಳದ ಹಿರೇಸಿಂಧೋಗಿ, ಶಿವಪುರಗಳಲ್ಲಿ ಈಗಲೂ ಸಾಮಾನ್ಯವಾಗಿ ಹೆಣ್ಣು ಪ್ರೌಢವಸ್ಥೆಗೆ ಬಂದಾಗ ಆಕೆಗೆ ಮುತ್ತು ಕಟ್ಟುವ ಮೂಲಕ ದೇವದಾಸಿ ಎಂದು ಘೋಷಿಸಲಾಗುತ್ತದೆ. ಕೊಪ್ಪಳ ಜಿಲ್ಲೆಯಲ್ಲಿ ಸುಮಾರು 4,880ಕ್ಕೂ ಹೆಚ್ಚು ಜನ ದೇವದಾಸಿಯರಿದ್ದಾರೆ. ದೇವದಾಸಿ ಪದ್ಧತಿಗೆ ನೂಕಲ್ಪಡುವ ಎಲ್ಲರೂ ದಲಿತ ಜನಾಂಗದವರೇ ಎಂಬುದು ಉಲ್ಲೇಖಾರ್ಹ. ಇನ್ನೂ ಇಡೀ ಕರ್ನಾಟಕದಲ್ಲೇ ಅತಿ ಹೆಚ್ಚು ದೇವದಾಸಿಯರನ್ನು ಹೊಂದಿರುವ ಜಿಲ್ಲೆ ಎಂಬ ಕುಖ್ಯಾತಿಯೂ ಕೊಪ್ಪಳಕ್ಕಿದೆ.

ನಮಗೆ ಉತ್ತರ ಕರ್ನಾಟಕದಲ್ಲಿ ಈವರೆಗೆ ಅಸ್ಪೃಶ್ಯತೆ ಕಂಡಿಲ್ಲ. ಎಲ್ಲೋ ಒಂದು ಎರಡು ಕಡೆ ಈ ಆಚರಣೆಗಳನ್ನು ಪಾಲಿಸಿಕೊಂಡು ಬರುತ್ತಿರಬೇಕು ಅಷ್ಟೆ. ನಿಮ್ಮಂತವರು ಪ್ರಶ್ನೆ ಮಾಡಿದರೆ ಜನ ಮನಸ್ಸು ಬಿಚ್ಚಿ ಮಾತನಾಡುತ್ತಾರೆ. ಆದರೆ ಅಧಿಕಾರಿಗಳ ಬಳಿ ಅವರು ಇವನ್ನೆಲ್ಲ ಹೇಳಿಕೊಳ್ಳಲು ಮುಂದಾಗುವುದಿಲ್ಲ. ಅಸ್ಪೃಶ್ಯತೆ ಸಮರ್ಥನೀಯವಲ್ಲ. ಅದರ ವಿರುದ್ಧ ಕಾನೂನು ಕ್ರಮ ಜರುಗಿಸಲೇಬೇಕು.
ಪ್ರಿಯಾಂಕ್ ಖರ್ಗೆ, ಸಚಿವರು, ಸಮಾಜ ಕಲ್ಯಾಣ ಇಲಾಖೆ

ದಲಿತರ ಪರ ಇಲ್ಲದ ಕಾನೂನು:

ಕೇಂದ್ರ ಸರಕಾರ 1986 ರಲ್ಲಿ ಅಸ್ಪೃಶ್ಯತಾ ನಿವಾರಣೆ ಕಾಯ್ದೆಯನ್ನು ಜಾರಿಗೆ ತಂದಿದೆ. 2015 ರಲ್ಲಿ ಮತ್ತೊಮ್ಮೆ ಈ ಕಾಯ್ದೆಗೆ ತಿದ್ದುಪಡಿ ತರಲಾಗಿತ್ತು. ಈ ಕಾಯ್ದೆಯ ಪ್ರಕಾರ ಜಾತಿಯ ಹೆಸರಲ್ಲಿ ವ್ಯಕ್ತಿಯನ್ನು ನಿಂದಿಸುವುದು, ಅಪಮಾನಿಸುವುದು ಹಾಗೂ ಅಸ್ಪೃಶ್ಯತಾ ಆಚರಣೆ ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ.

ಈ ಪ್ರಕರಣಗಳ ತ್ವರಿತಗತಿಯ ಇತ್ಯರ್ಥಕ್ಕಾಗಿ ಸರಕಾರ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಿವೆ. ವಿಶೇಷ ವಕೀಲರನ್ನೂ ನೇಮಿಸಲಾಗಿದೆ. ಈ ಕಾಯ್ದೆಯಡಿಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುವ ಅಧಿಕಾರವನ್ನು ನ್ಯಾಯಾಲಯಕ್ಕೆ ನೀಡಲಾಗಿದೆ. ಅಲ್ಲದೆ ಎರಡು ತಿಂಗಳ ಒಳಗಾಗಿ ಇಂತಹ ಪ್ರಕರಣಗಳನ್ನು ಇತ್ಯರ್ಥ ಪಡಿಸಬೇಕು ಎಂದು ಸಮಯದ ಗಡುವನ್ನೂ ನೀಡಲಾಗಿದೆ. ಆದರೆ ಈ ಕುರಿತ ಕಾನೂನಿನ ಅರಿವನ್ನು ದಲಿತನಿಗೆ ತಲುಪಿಸುವಲ್ಲಿ ಮಾತ್ರ ಸರಕಾರ ವಿಫಲವಾಗಿದೆ.

ಕೊಪ್ಪಳದಲ್ಲಿ ವರ್ಷದಿಂದ ವರ್ಷಕ್ಕೆ ದಲಿತರ ಮೇಲಿನ ಹಲ್ಲೆ, ಕೊಲೆ ಹಾಗೂ ಅತ್ಯಾಚಾರ ಪ್ರಕರಣಗಳು ಏರಿಕೆ ಕಾಣುತ್ತಲೇ ಇವೆ. ಜಿಲ್ಲೆಯಲ್ಲಿ ದಾಖಲಾಗುವ ಅಪರಾಧ ಪ್ರಕರಣಗಳ ಪೈಕಿ ದಲಿತರ ಮೇಲಿನ ಹಲ್ಲೆ, ಕೊಲೆ ಹಾಗೂ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಶೇ 36. ಆದರೆ ನ್ಯಾಯ ಪಡೆದ ದಲಿತರ ಸಂಖ್ಯೆ ಮಾತ್ರ ತೀರ ಕಡಿಮೆ ಎನ್ನುತ್ತಿವೆ ಅಂಕಿ ಅಂಶಗಳು.

2015 ರಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ದಲಿತ ವಿದ್ಯಾರ್ಥಿ ಯಲ್ಲಾಲಿಂಗನ ಕೊಲೆ ಪ್ರಕರಣ ಸಹ ಇನ್ನೂ ಇತ್ಯರ್ಥವಾಗದಿರುವುದು ಕೊಪ್ಪಳದಲ್ಲಿ ದಲಿತರ ಪರಿಸ್ಥಿತಿ ಹೇಗಿದೆ ಎಂಬುದಕ್ಕೆ ತಾಜಾ ಉದಾಹರಣೆ. ಮೇಲ್ಜಾತಿ ಜನರ ದೌರ್ಜನ್ಯದ ಕುರಿತು ದನಿ ಎತ್ತಲು, ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲು ಮಾಡಲು ಈಗಲೂ ದಲಿತರಿಗೆ ಧೈರ್ಯವಿಲ್ಲದಂತಹ ಪರಿಸ್ಥಿತಿ ಕೊಪ್ಪಳದಲ್ಲಿದೆ.

ಇನ್ನು ‘ಕೊಪ್ಪಳದ ಹಲವಾರು ಭಾಗದಲ್ಲಿ ದಲಿತ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ದಾಖಲಾಗುವುದೇ ಇಲ್ಲ. ಬದಲಾಗಿ ಅಲ್ಲೇ ಗ್ರಾಮೀಣ ಭಾಗದಲ್ಲಿ ಹಣಕೊಟ್ಟು ರಾಜೀ ಪಂಚಾಯಿತಿ ಮಾಡಿಸಲಾಗುತ್ತದೆ. ಪ್ರತಿರೋಧಿಸಿದರೆ ಹಲ್ಲೆ, ಕೊಲೆ ಯತ್ನಗಳು ನಡೆಯುತ್ತವೆ. ಊರಿನಿಂದ ಬಹಿಷ್ಕಾರ ಹಾಕುತ್ತಾರೆ. ಕೊಪ್ಪಳದಲ್ಲಿ ದಲಿತರು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬದುಕಬೇಕಾದ ಅಸಹನೀಯ ಸ್ಥಿತಿಗೆ ತಲುಪಿದ್ದಾರೆ,’ ಎಂದು ಬೇಸರದಿಂದ ನುಡಿಯುತ್ತಾರೆ ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಹುಸೇನಪ್ಪ ಮಾದಿಗ.

ಹುಸೇನಪ್ಪ ಮಾದಿಗ; ಕೊಪ್ಪಳದ ದಲಿತ ಹೋರಾಟಗಾರ. 
ಹುಸೇನಪ್ಪ ಮಾದಿಗ; ಕೊಪ್ಪಳದ ದಲಿತ ಹೋರಾಟಗಾರ. 

ಅಸ್ಫೃಶ್ಯತೆ ಕೊನೆ ಹೇಗೆ?:

ಅಸ್ಪೃಶ್ಯತೆ ಇಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇದನ್ನು ತುರ್ತಾಗಿ ತೊಡೆದು ಹಾಕಲೇಬೇಕಿದೆ. ಆದರೆ ಶತಶತಮಾನಗಳಿಂದ ಸಂಪ್ರದಾಯದ ಹೆಸರಿನಲ್ಲಿ ನಡೆದುಕೊಂಡು ಬಂದ ಈ ಆಚರಣೆಯನ್ನು ಯಾವ ಕಾನೂನಿನಿಂದಲೂ ಈವರೆಗೆ ನಿವಾರಿಸಲು ಸಾಧ್ಯವಿಲ್ಲ. ಹಾಗಾದರೆ ಅಸ್ಪೃಶ್ಯತೆಯನ್ನು ನಿವಾರಿಸಿ ಸಮಾನ ಸಮಾಜವನ್ನು ನಿರ್ಮಿಸುವುದು ಹೇಗೆ ಸಾಧ್ಯ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತದೆ.

“ಇಚ್ಚಾಶಕ್ತಿ ಇದ್ದರೆ ಯಾವುದೂ ಅಸಾಧ್ಯವಲ್ಲ. ಆದರೆ ನಮ್ಮ ರಾಜಕೀಯ ನಾಯಕರಿಗೆ ಜಾತಿ ಆಧಾರಿತ ತಾರತಮ್ಯ, ಅಸ್ಪೃಶ್ಯತೆ ನಿವಾರಣೆಯಾಗುವುದು ಬೇಕಿಲ್ಲ. ಜಾತಿಗೆ ಸಂಬಂಧಿಸಿದ ಈ ಸಮಸ್ಯೆಗಳೇ ಅವರ ಓಟ್ ಬ್ಯಾಂಕ್. ಒಮ್ಮೆ ಈ ಸಮಸ್ಯೆ ಬಗೆಹರಿದರೆ ಅವರ ಮತ ಬ್ಯಾಂಕ್‌ಗೆ ಕೊಡಲಿ ಪೆಟ್ಟು ನೀಡಿದಂತೆ. ಹೀಗಾಗಿ ಈ ಸಮಸ್ಯೆ ಎಲ್ಲಾ ಕಾಲಕ್ಕೂ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಲಾಗುತ್ತಿದೆ. 1980 ರ ದಶಕದಲ್ಲಿ ಪ್ರೊ. ಕೃಷ್ಣಪ್ಪ ನೇತೃತ್ವದಲ್ಲಿ ದಲಿತರನ್ನು ಒಟ್ಟಾಗಿಸುವ ದೊಡ್ಡ ಚಳುವಳಿ ನಡೆಯಿತು. ದಲಿತರ ಸಮಸ್ಯೆಗಳನ್ನು ಮುನ್ನೆಲೆಗೆ ತಂದು ಪರಿಹಾರ ಕಂಡುಕೊಳ್ಳಲಾಗಿತ್ತು. ಆದರೆ ಕಾಲಾನಂತರದಲ್ಲಿ ಈ ಚಳುವಳಿ ಹರಿದು ಹಂಚಿಹೋಯಿತು. ಈಗ ಮತ್ತೆ ದಲಿತ ಸಂಘಟನೆಗಳು ಒಂದಾಗಿ ಬೃಹತ್ ಚಳುವಳಿಯನ್ನು ರೂಪಿಸುವ ಅಗತ್ಯವಿದೆ. ಇದು ಸಾಧ್ಯವಾಗಬೇಕು. ಎಲ್ಲಾ ದಲಿತ ಸಂಘಟನೆಗಳು ಒಟ್ಟಾಗಿ ಎಲ್ಲಾ ಗ್ರಾಮಗಳಲ್ಲೂ ಕ್ರಾಂತಿಯುತ ಬದಲಾವಣೆ ತಂದರೆ ಅಸ್ಪೃಶ್ಯತೆಯನ್ನು ತೊಡೆದು ಹಾಕುವುದು ದೊಡ್ಡ ಮಾತೇನಲ್ಲ,” ಎನ್ನುತ್ತಾರೆ ಕೊಪ್ಪಳದ ದಲಿತ ಹೋರಾಟಗಾರ ಬಸವರಾಜ ಶೀಲವಂತರ.

ಶೀಲವಂತರ ಹೇಳುವಂತೆ, 80ರ ದಶಕದ ದಲಿತ ಚಳುವಳಿಯನ್ನು ಮತ್ತೆ ಸಂಘಟಿಸಿದರೆ, ಎಲ್ಲಾ ದಲಿತ ಸಂಘಟನೆಗಳು ಒಟ್ಟಾದರೆ ಅಸ್ಪೃಶ್ಯತೆಯನ್ನು ತೊಲಗಿಸುವುದು ಅಸಾಧ್ಯವೇನಲ್ಲ. ಆದರೆ ಅಧಿಕಾರದ ಹಾಗೂ ನಾಯಕತ್ವದ ಹಪಾಹಪಿಗಾಗಿ ಒಡೆದು ಹರಿದು ಹಂಚಿಹೋಗಿರುವ ದಲಿತ ಸಂಘಟನೆಗಳನ್ನು ಇಂದು ಒಟ್ಟಾಗಿಸುವ, ಒಂದೇ ವೇದಿಕೆಯ ಅಡಿಯಲ್ಲಿ ತರುವ ಕೆಲಸ ಮಾಡುವವರು ಯಾರು ಎಂಬುದು ದೊಡ್ಡ ಯಕ್ಷ ಪ್ರಶ್ನೆಯಾಗಿದೆ.

ದಲಿತರಿಗೆ ಸವಲತ್ತು, ಜಾಗೃತಿ:

ಕೊಪ್ಪಳದಲ್ಲಿರುವ ದಲಿತರ ಪೈಕಿ ಸುಮಾರು ಶೇ. 93 ರಷ್ಟು ಜನ ಭೂಹೀನ ವರ್ಗ. ಇವರಿಗೆ ಕೃಷಿ ಮಾಡಲು ಭೂಮಿ ಇಲ್ಲ. ಬದುಕಲು ಸ್ವಂತ ಮನೆ ಇಲ್ಲ. ವರ್ಷದ 175 ದಿನ ಕೇಂದ್ರ ಸರಕಾರದ 'ಉದ್ಯೋಗ ಖಾತ್ರಿ' ಯೋಜನೆಯಿಂದಲೇ ಇವರ ಹೊಟ್ಟೆ ತುಂಬುತ್ತದೆ. ಉಳಿದ ದಿನಗಳಲ್ಲಿ ಮೇಲ್ಜಾತಿ ಜನರ ಮನೆಯಲ್ಲಿ ಅಥವಾ ಭೂಮಿಯಲ್ಲಿ ಕೆಲಸ ಮಾಡಿ ಹೊಟ್ಟೆ ಹೊರೆದುಕೊಳ್ಳುತ್ತಾರೆ. ಇಲ್ಲದಿದ್ದರೆ ಬೆಂಗಳೂರು, ಹುಬ್ಬಳ್ಳಿ, ಮುಂಬೈಗೆ ಕೆಲಸ ಹುಡುಕಿ ಗುಳೆ ಹೊರಡುವುದು ಇಲ್ಲಿನ ದಲಿತರ ಪ್ರತಿವರ್ಷದ ಗೋಳು.

ಈ ದಲಿತ ಸಮಾಜದಲ್ಲಿರುವ ಅಸ್ಪೃಶ್ಯತೆಯನ್ನು ನಿವಾರಿಸಲು ಹಾಗೂ ದಲಿತರನ್ನು ಅಭಿವೃದ್ಧಿ ಪಥಕ್ಕೆ ತರಲು ಸರಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಈ ಯಾವ ಯೋಜನೆಗಳ ಕುರಿತ ಸಾಮಾನ್ಯ ಅರಿವು ಸಹ ಗ್ರಾಮೀಣ ಭಾಗದ ದಲಿತರ ಲಭ್ಯವಾಗದೆ ಇರುವುದು ದುರಂತ. ಇದಕ್ಕೆ ಕಾರಣ ಮತ್ತದೇ ಅನಕ್ಷರತೆ. ಹೀಗಾಗಿ ಸರಕಾರದ ಯೋಜನೆಗಳು ಈ ಸಮುದಾಯಕ್ಕೆ ತಲುಪಲು, ಎಲ್ಲರೂ ಶಿಕ್ಷಣ ಕಲಿತು ಸಬಲರಾಗಲು ಸರಕಾರಗಳು ಬೇರು ಮಟ್ಟದ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ.

ಜಿಲ್ಲಾಡಳಿತದ ಹೊಣೆಗಾರಿಕೆ:

ಕೊಪ್ಪಳ ಜಿಲ್ಲಾಡಳಿತದ ಕಚೇರಿ. 
ಕೊಪ್ಪಳ ಜಿಲ್ಲಾಡಳಿತದ ಕಚೇರಿ. 

ಅಸ್ಫೃಶ್ಯತೆಯನ್ನು ತೊಡೆದು ಹಾಕುವುದು, ದಲಿತರು ಸಹ ಎಲ್ಲರಂತೆ ಸಮಾನತೆಯ ಜೀವನ ಸಾಗಿಸುವ ಪರಿಸ್ಥಿತಿ ನಿರ್ಮಾಣ ಮಾಡಬೇಕಿರುವುದು ಜಿಲ್ಲಾಡಳಿತದ ಕರ್ತವ್ಯ.

2014 ಜನವರಿಯಲ್ಲಿ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಕೊನೆಯ ಹಳ್ಳಿ ಈಚನಾಳದಲ್ಲಿ ಅಸ್ಪೃಶ್ಯತೆ ವಿರುದ್ಧ ದಲಿತರು ರೊಚ್ಚಿಗೆದ್ದಿದ್ದರು. ದಲಿತರ ಪರ ಧ್ವನಿ ಎತ್ತಿದ್ದ ಡಿಎಸ್‌ಎಸ್ ಇಡೀ ಕೊಪ್ಪಳ ಬಂದ್‌ಗೆ ಕರೆ ನೀಡಿತ್ತು. ಬಂದ್ ಯಶಸ್ವಿಯಾಗಿತ್ತು. ಈಚನಾಳ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಪರಿಸ್ಥಿತಿಯನ್ನು ತಿಳಿಗೊಳಿಸಲು ಗ್ರಾಮಕ್ಕೆ ತೆರಳಿದ್ದ ಅಂದಿನ ಜಿಲ್ಲಾಧಿಕಾರಿ ಮೋಹನ್, ಮೇಲ್ಜಾತಿ ಹಾಗೂ ತಳ ಸಮುದಾಯದ ಜನರ ರಾಜೀ ಪಂಚಾಯಿತಿ ಮಾಡಿಸಿದ್ದರು. ಆದರೆ ಮೇಲ್ವರ್ಗದ ಜನ ದಲಿತರನ್ನು ತಮ್ಮ ಕೇರಿಗೆ ಬಿಡಲು ಒಪ್ಪಲಿಲ್ಲ.

ಕೊನೆಗೂ ಮೇಲ್ಜಾತಿ ಜನರ ದರ್ಪಕ್ಕೆ ಮಣಿದ ಜಿಲ್ಲಾಡಳಿತ ಈಚನಾಳದ ದಲಿತರ ಕೇರಿಗೆ ಪ್ರತ್ಯೇಕ ರಸ್ತೆ, ನೀರಿನ ನಲ್ಲಿ ಸೇರಿದಂತೆ ಮೂಲಭೂತ ಸೌಲಭ್ಯಗಳ ಪ್ರತ್ಯೇಕ ವ್ಯವಸ್ಥೆ ಮಾಡುವ ಮೂಲಕ ಆ ಗ್ರಾಮದವರನ್ನು ಸರಕಾರಿ ಪ್ರಾಯೋಜಿತ ಅಸ್ಪೃಶ್ಯರನ್ನಾಗಿಸಿತು. “ನಂತರ ಜಿಲ್ಲಾಡಳಿತವಿರಲಿ ಒಬ್ಬ ಅಧಿಕಾರಿಯೂ ಸಹ ಈ ಗ್ರಾಮಕ್ಕೆ ಕಾಲಿಡಲಿಲ್ಲ. ಮತ್ತೆ ಪರಿಸ್ಥಿತಿ ಸುಧಾರಿಸುವ ಅಸ್ಪೃಶ್ಯತೆ ತೊಡೆದು ಹಾಕುವ ಕೆಲಸಕ್ಕೆ ಮುಂದಾಗಲಿಲ್ಲ,” ಎನ್ನುತ್ತಾರೆ ಈ ಗ್ರಾಮದ ದಲಿತ ಯುವಕ ಗಂಗಾಧರ.

ರಾಜಕಾರಣಿಗಳು, ಸರಕಾರಿ ವಲಯದ ಅಧಿಕಾರಿಗಳು ದಲಿತರ ಮನೆಯಲ್ಲಿ ಒಂದು ದಿನ ನೆಪ ಮಾತ್ರಕ್ಕೆ ಊಟ ಮಾಡಿದ ತಕ್ಷಣ ಅಸ್ಪೃಶ್ಯತೆ ನಿವಾರಣೆಯಾಗುತ್ತದೆ ಎಂಬುದು ಸುಳ್ಳು. ಬದಲಾಗಿ ಸರಕಾರ ಅಸ್ಪೃಶ್ಯತೆ ನಿವಾರಣೆಗೆ ದೊಡ್ಡ ಮಟ್ಟದ ಕಾರ್ಯಕ್ರಮ ರೂಪಿಸಬೇಕು. ಜಿಲ್ಲಾಡಳಿತ, ತಾಲೂಕು ಪಂಚಾಯಿತಿಗಳು ತಮ್ಮ ಜಿಲ್ಲೆಯಲ್ಲಿ ಸಮಸ್ಯೆ ಇರುವ ಎಲ್ಲಾ ಗ್ರಾಮಗಳಿಗೂ ತೆರಳಬೇಕು. ಪ್ರತಿ ತಿಂಗಳು ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. “ದಲಿತರ ಮೇಲೆ ದೌರ್ಜನ್ಯವೆಸಗುವವರಿಗೆ ಕಠಿಣ ಕಾನೂನಿನ ರುಚಿಯನ್ನು ತೋರಿಸದ ಹೊರತಾಗಿ ಅಸ್ಪೃಶ್ಯತೆ ನಿವಾರಣೆ ಸಾಧ್ಯವಿಲ್ಲ,” ಎನ್ನುತ್ತಾರೆ ಕೊಪ್ಪಳದ ಮಾನವ ಹಕ್ಕುಗಳ ಹೋರಾಟಗಾರ ರಾಜಾಭಕ್ಷಿ.

ರಾಜಾಭಕ್ಷಿ ಹೇಳುವಂತೆ ಪ್ರತಿ ಗ್ರಾಮಗಳಿಗೆ ಜಿಲ್ಲಾಡಳಿತವೇ ತೆರಳಿ ವಿಶೇಷ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ, ದಲಿತರಿಗೂ ಕಾನೂನಿನ ಅರಿವು ಮೂಡಿಸುವ ಮೂಲಕ ಈ ಅನಿಷ್ಠ ಪದ್ಧತಿಯನ್ನು ತೊಡೆದು ಹಾಕುವುದು ಸಾಧ್ಯವಿದೆ. ಆದರೆ ಕಳೆದ ಒಂದು ದಶಕದಲ್ಲಿ ಕೊಪ್ಪಳದಲ್ಲಿ ಜಿಲ್ಲಾಡಳಿತ ಅಂತಹ ಯಾವುದೇ ಜಾಗೃತಿ ಕೆಲಸವನ್ನು ಜಾರಿಗೆ ತಂದ ಉದಾಹರಣೆಗಳಿಲ್ಲ. ಇನ್ನು ರಾಜಕಾರಣಿಗಳಿಗಂತೂ ಆ ಇಚ್ಚಾಶಕ್ತಿ ಇದ್ದಂತೆ ಕಾಣಿಸುವುದಿಲ್ಲ. ಪರಿಣಾಮ ಈಗಲೂ ದಲಿತ ಕೇರಿಗಳಲ್ಲಿ ಅಸ್ಪೃಶ್ಯತೆ ತಾಂಡವವಾಡುತ್ತಿದೆ.

ಮಠಗಳು ಮನಸ್ಸು ಮಾಡಬಾರದೇಕೆ..?

ಗವಿ ಸಿದ್ದೇಶ್ವರ ಮಠದ ದ್ವಾರ, ಕೊಪ್ಪಳ.
ಗವಿ ಸಿದ್ದೇಶ್ವರ ಮಠದ ದ್ವಾರ, ಕೊಪ್ಪಳ.
/ಕರ್ನಾಟಕ ಟ್ರಾವೆಲ್

ಕೊಪ್ಪಳದಲ್ಲಿ ಶತಮಾನಗಳ ಇತಿಹಾಸವಿರುವ ಗವಿಸಿದ್ದೇಶ್ವರ ಮಠವಿದೆ. ಮೂಲತಃ ವೀರಶೈವ ಲಿಂಗಾಯತ ಮಠದ ಹಾಲಿ ಪೀಠಾಧಿಪತಿಗಳು ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು. ಇದನ್ನು ದಕ್ಷಿಣ ಕಾಶಿ ಎಂತಲೂ ಕರೆಯುತ್ತಾರೆ. ಪ್ರತಿವರ್ಷ ಇಲ್ಲಿ ನಡೆಯುವ ಅಜ್ಜನ ಜಾತ್ರೆಗೆ ಲಕ್ಷಾಂತರ ಜನ ಬರುತ್ತಾರೆ. ಭಕ್ತರ ಪ್ರೀತಿ ಹೆಚ್ಚಾದಂತೆಲ್ಲಾ ದಶಕದಿಂದ ದಶಕ್ಕೆ ಮಠವೂ ಶ್ರೀಮಂತವಾಗುತ್ತಲೇ ಇದೆ. ಮಠದ ಪರಂಪರೆಗೂ ದೊಡ್ಡ ಇತಿಹಾಸವೇ ಇದೆ. ಆದರೆ ಇಂತಹ ಮಠಗಳು ಭಕ್ತಿ ಭಾವಗಳನ್ನು ಮೆರೆಯುವ ಜೊತೆಗೆ ಸಮಾಜಮುಖಿ ಕೆಲಸಕ್ಕೂ ಮುಂದಾಗಬೇಕಲ್ಲವೇ..?

“ಕೆಲ ತಿಂಗಳುಗಳ ಹಿಂದೆ ವಿಧವೆಯರ ಮರು ವಿವಾಹಕ್ಕೆ ಮಠದ ಆಡಳಿತ ಮುಂದಾಗಿತ್ತು. ನಿಜಕ್ಕೂ ಇದು ಸ್ವಾಗತಾರ್ಹ ಕೆಲಸ. ಆದರೆ ಇದಕ್ಕೆ ಕೆಲ ಸಣ್ಣಪುಟ್ಟ ವಿರೋಧಗಳು ವ್ಯಕ್ತವಾಗುತ್ತಿದ್ದಂತೆ ಅಭಿನವ ಶ್ರೀಗಳು ಈ ಕಾರ್ಯಕ್ರಮದಿಂದ ಹಿಂದೆ ಸರಿದು ಬಿಟ್ಟರು. ಕೊಪ್ಪಳದಂತಹ ಹಿಂದುಳಿದ ಜಿಲ್ಲೆಯಲ್ಲಿ ಮೌಢ್ಯ ಕಂದಾಚಾರದ ವಿರುದ್ಧ ಯಾವುದೇ ಒಳ್ಳೆಯ ಕೆಲಸಗಳು ಆರಂಭವಾದರೂ ಅದಕ್ಕೆ ಇಂತಹ ವಿಘ್ನಗಳು ಎದುರಾಗುವುದು ಸಾಮಾನ್ಯ. ಆದರೆ ಇಂತಹ ಸಣ್ಣಪುಟ್ಟ ವಿರೋಧಗಳಿಗೆ ಹೆದರಿ ಗವಿಸಿದ್ದೇಶ್ವರ ಮಠ ಒಂದು ಕಾರ್ಯಕ್ರಮದಿಂದ ಹಿಂದೆ ಸರಿಯಬಾರದಿತ್ತು,” ಎನ್ನುತ್ತಾರೆ ಹೆಸರು ಹೇಳಲು ಇಚ್ಚಿಸದ ಕೊಪ್ಪಳದ ಪ್ರಜ್ಞಾವಂತ ನಾಗರೀಕರೊಬ್ಬರು.

ಕೊಪ್ಪಳದಲ್ಲಿ ಅಸ್ಪೃಶ್ಯತೆ, ಬಾಲ್ಯ ವಿವಾಹ, ದೇವದಾಸಿ ಪದ್ಧತಿಯಂತಹ ಹತ್ತಾರು ಮೌಢ್ಯ ಕಂದಾಚಾರಗಳಿವೆ. ಅಸಲಿಗೆ ಇಡೀ ಕೊಪ್ಪಳವೇ ಮೌಢ್ಯಗಳ ಕೂಪದಲ್ಲಿ ಬಿದ್ದು ಅಭಿವೃದ್ಧಿ ಕಾಣದೆ ಏದುಸಿರು ಬಿಡುತ್ತಿದೆ. ಆದರೆ ಇಂತಹ ಮೌಢ್ಯಗಳನ್ನು ತೊಡೆಯುವುದರಲ್ಲಿ ಮಠಗಳ ಕರ್ತವ್ಯವೂ ಇದೆ. ಗವಿ ಸಿದ್ದೇಶ್ವರ ಮಠ ಇಂತಹ ಸಮಾಜಮುಖಿ ಕಾರ್ಯಕ್ಕೆ ಮುಂದಾದರೆ ಕೊಪ್ಪಳ ಜಿಲ್ಲೆಯ ಮೌಢ್ಯವನ್ನು ತೊಡೆದುಹಾಕುವುದು ಅಷ್ಟೊಂದು ಕಷ್ಟದ ಮಾತಲ್ಲ.

ವಿದ್ಯಾವಂತ ದಲಿತರ ಕರ್ತವ್ಯಗಳು:

ತಳ ಸಮುದಾಯದಲ್ಲಿ ಹುಟ್ಟಿ ಕಷ್ಟಪಟ್ಟು ಓದಿ ಸರಕಾರಿ ನೌಕರಿ ಪಡೆದ ದಲಿತರು ಕೊಪ್ಪಳದಲ್ಲಿದ್ದಾರೆ. ಅಂಕಿ ಅಂಶಗಳ ಪ್ರಕಾರ ಶೇ.08 ರಷ್ಟು ಕೊಪ್ಪಳದ ದಲಿತರು ಸರಕಾರಿ ನೌಕರಿ ಗಿಟ್ಟಿಸಿದ್ದಾರೆ. ಇನ್ನೂ ದಲಿತ ಮೀಸಲು ಕ್ಷೇತ್ರದಿಂದ ಗೆದ್ದು ಆಯ್ಕೆಯಾಗಿರುವ ಶಾಸಕ, ತಾಲೂಕು, ಜಿಲ್ಲಾ ಪಂಚಾಯಿತಿ ಸದಸ್ಯರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದರೆ ಹೀಗೆ ತಳ ಸಮುದಾಯದಿಂದ ಮೇಲೆ ಬಂದ ದಲಿತರು ಎಲ್ಲಾ ಕಡೆಗಳಲ್ಲೂ ಕಾಣುವಂತೆ, ಇಲ್ಲಿಯೂ ನವ ಪುರೋಹಿತಶಾಹಿಗಳಾಗಿ ಬದಲಾಗುತ್ತಿದ್ದಾರೆ. ತಮ್ಮದೇ ಸಮಾಜದ ಇತರೆ ಯುವಕರಿಗೆ ಸಹಾಯ ಹಸ್ತ ಚಾಚಲು ಮುಂದಾಗದ ಇವರು ದಿಢೀರನೆ ಮೇಲ್ವರ್ಗದವರಂತೆ ವರ್ತಿಸುತ್ತಿರುವುದು ದಲಿತ ಸಮಾಜದ ಅಭಿವೃದ್ಧಿಗೆ ದೊಡ್ಡ ತೊಡಕಾಗಿದೆ.

“ದಲಿತ ಸಮಾಜದಲ್ಲೇ ಹುಟ್ಟಿ ಕಷ್ಟ ಪಟ್ಟು ಅಭಿವೃದ್ಧಿ ಹೊಂದಿದ ದಲಿತ ಯುವಕರು ತಮ್ಮದೇ ಸಮಾಜದ ಅಭಿವೃದ್ಧಿಗೆ ಕೆಲಸ ಮಾಡದಿದ್ದಲ್ಲಿ, ಅಂತಹಾ ಒಂದು ಉದಾರತೆಯನ್ನು ನಾವು ಸಮಾಜದ ಮೇಲ್ವರ್ಗದ ಜನರಿಂದ ಎದುರು ನೋಡುವುದು ಅಸಾಧ್ಯವಾದ ಮಾತು,” ಎನ್ನುತ್ತಾರೆ ಹಿರಿಯ ಪತ್ರಕರ್ತ ಚಾಮರಾಜ ಸವಡಿ. ಇವರ ಮಾತಿನಂತೆ ಕೊಪ್ಪಳದಂತಹ ಜಿಲ್ಲೆಯಲ್ಲಿ ದಲಿತರು ತೀರಾ ಹಿಂದುಳಿಯಲು ಇದು ಸಹ ಒಂದು ಕಾರಣ.

ಇಂತಹ ಮನಸ್ಥಿತಿಗಳು ಬದಲಾಗುವವರೆಗೆ, ಜಾತಿ ಅಸ್ತ್ರ ಕೇವಲ ಓಟ್ ಬ್ಯಾಂಕಿಗೆ ಮಾತ್ರ ಸೀಮಿತವಾಗಿರುವವರೆ, ಜಾತಿ ಕಂದಾಚಾರಗಳನ್ನು ಸಮಾಜದ ಬೇರು ಮಟ್ಟದಿಂದ ತೊಡೆದು ಹಾಕಲು ಕಾರ್ಯಾಂಗ ಶಾಸಕಾಂಗ ಹಾಗೂ ನ್ಯಾಯಾಂಗ ಈ ಮೂರು ಅಂಗಗಳು ಪ್ರಾಮಾಣಿಕ ಪ್ರಯತ್ನ ನಡೆಸದವರೆಗೆ ನಮ್ಮ ದೇಶದಲ್ಲಿ ಅಸ್ಪೃಶ್ಯತೆ ನಿವಾರಣೆ ಎಂಬುದು ಅಸಾಧ್ಯವಾದ ಮಾತು. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಅಸ್ಪೃಶ್ಯತೆ ಹಾಗೂ ಜಾತಿ ಕಂದಾಚಾರಗಳು ನಿರ್ಮೂಲನೆಯಾಗುವವರೆಗೂ ಈ ಗಣರಾಜ್ಯೋತ್ಸವದಂತಹ ಸರಕಾರಿ ಆಚರಣೆಗಳಿಗೆ ಅರ್ಥ ಸಿಗುವುದಿಲ್ಲ.