samachara
www.samachara.com
ಅಪ್ಪ ‘ಜೇಮ್ಸ್ ಬಾಂಡ್’- ಮಕ್ಕಳು ವ್ಯವಹಾರ ಚತುರರು; ಕಪ್ಪು ಹಣ & ದೋವಲ್ ಕಂಪನಿಗಳ ಸುತ್ತ...
COVER STORY

ಅಪ್ಪ ‘ಜೇಮ್ಸ್ ಬಾಂಡ್’- ಮಕ್ಕಳು ವ್ಯವಹಾರ ಚತುರರು; ಕಪ್ಪು ಹಣ & ದೋವಲ್ ಕಂಪನಿಗಳ ಸುತ್ತ...

ತಂದೆ ಅಜಿತ್‌ ದೋವಲ್‌, ತೆರಿಗೆ ಕಳ್ಳರ ಸ್ವರ್ಗಗಳನ್ನು ಮಟ್ಟ ಹಾಕಬೇಕು ಎನ್ನುತ್ತಿದ್ದಾರೆ; ಮಕ್ಕಳು ಅದೇ ಸ್ವರ್ಗದಿಂದ ತಮ್ಮ ಉದ್ಯಮ ಸಾಮ್ರಾಜ್ಯಗಳನ್ನು ನಡೆಸುತ್ತಿದ್ದಾರೆ!

Team Samachara

ಇಬ್ಬರು ಪುತ್ರರತ್ನರು. ‘ಜೇಮ್ಸ್‌ ಬಾಂಡ್‌’ ಎಂದೇ ಖ್ಯಾತರಾದ ಅವರಪ್ಪನಿಗೆ ದೇಶದ ಪ್ರಧಾನಿ ಜತೆ ಹತ್ತಿರದ ನಂಟು. ತಂದೆ ಚಾಣಾಕ್ಷರಾದರೆ, ಮಕ್ಕಳು ವ್ಯವಹಾರ ಚತುರರು. ಅಮೆರಿಕಾ, ಬ್ರಿಟನ್‌, ಸಿಂಗಾಪುರ ಎಂದೆಲ್ಲಾ ಓಡಾಡುತ್ತಾ ತೆರಿಗೆ ಕಳ್ಳರ ಸ್ವರ್ಗ ಕೇಮನ್‌ ಐಲ್ಯಾಂಡ್ಸ್‌ಗೆ ಕಾಲಿಟ್ಟವರು. ಸೌದಿ ರಾಜಮನೆತನದ ವ್ಯಕ್ತಿಗಳನ್ನೇ ತಮ್ಮ ಉದ್ಯಮದೊಳಕ್ಕೆ ಎಳೆದುಕೊಂಡ ಇವರ ವ್ಯವಹಾರದ ಸಿಕ್ಕುಗಳನ್ನು ಬಿಡಿಸುವುದು ತೀರಾ ಕಷ್ಟ.

ಆದರೂ ಸಹಿಸಿಕೊಂಡು ಇದಿಷ್ಟನ್ನು ಓದಿದರೆ ಅಧಿಕಾರ ಕೇಂದ್ರದ ಸುತ್ತ ವ್ಯವಹಾರಗಳು ಹೇಗೆ ನಡೆಯುತ್ತವೆ ಎಂಬುದರ ಚಿಕ್ಕ ಪರಿಚಯ ಸಿಗುತ್ತದೆ.

ಅಂದ ಹಾಗೆ ಇಲ್ಲಿ ಜೇಮ್ಸ್‌ ಬಾಂಡ್‌ ಅಂದರೆ ಪ್ರಧಾನಿ ನರೇಂದ್ರ ಮೋದಿ ರಕ್ಷಣಾ ಸಲಹೆಗಾರ ಅಜಿತ್‌ ದೋವಲ್‌; ಮತ್ತು ಪುತ್ರರತ್ನರು -ಕಿರಿಯವ ವಿವೇಕ್‌ ದೋವಲ್‌ ಮತ್ತು ಹಿರಿಯ ಮಗ ಶೌರ್ಯ ದೋವಲ್.

‘ಡಿ - ಕಂಪನೀಸ್‌’

ಅಜಿತ್‌ ದೋವಲ್‌ ಕಿರಿಯ ಪುತ್ರ ವಿವೇಕ್‌ ದೋವಲ್‌ಗೆ ಸೇರಿದ ಅಮೆರಿಕಾ, ಬ್ರಿಟನ್‌, ಸಿಂಗಾಪುರ ಮತ್ತು ಕೇಮನ್‌ ಐಲ್ಯಾಂಡ್‌ಗಳ ವ್ಯವಹಾರ ದಾಖಲೆಗಳನ್ನು ‘ದಿ ಕ್ಯಾರವಾನ್‌’ ಪಡೆದುಕೊಂಡಿದೆ. ಇವುಗಳ ಮೇಲೆ ಕಣ್ಣಾಡಿಸಿದಾಗ ದೋವಲ್‌ ಪುತ್ರ ತೆರಿಗೆ ಕಳ್ಳರ ಸ್ವರ್ಗ ‘ಕೇಮನ್‌ ಐಲ್ಯಾಂಡ್‌’ನಲ್ಲಿ ಬಂಡಾವಳ ಹೂಡಿರುವುದು ತಿಳಿದು ಬಂದಿದೆ.

ವಿಶೇಷವೆಂದರೆ 2016ರ ನವೆಂಬರ್‌ 8ರಂದು ಪ್ರಧಾನಿ ನರೇಂದ್ರ ಮೋದಿ ಡಿಮಾನಟೈಸೇಷನ್‌ ಘೋಷಣೆ ಮಾಡುವ ಕೇವಲ 13 ದಿನ ನಂತರ ಈ ಕಡಲಾಚೆಗಿನ ಬಂಡವಾಳ ಹೂಡಿಕೆಯನ್ನು ನೋಂದಣಿ ಮಾಡಲಾಗಿದೆ.

ವಿವೇಕ್‌ ದೋವಲ್‌ ವೃತ್ತಿಯಿಂದ ಚಾರ್ಟರ್ಡ್‌ ಫೈನಾನ್ಶಿಯಲ್‌ ಅನಾಲಿಸ್ಟ್‌: ಬ್ರಿಟನ್‌ ಪ್ರಜೆ. ಸದ್ಯ ಸಿಂಗಾಪುರ್‌ನಲ್ಲಿ ನೆಲೆಸಿದ್ದಾರೆ. ‘ಜಿಎನ್‌ವೈ ಏಷ್ಯಾ ಫಂಡ್‌’ ಎಂಬ ಸಂಸ್ಥೆಯ ಮುಖ್ಯಸ್ಥರಾಗಿದ್ದಾರೆ. 2018ರ ಜುಲೈ ದಾಖಲೆಗಳ ಪ್ರಕಾರ ಡಾನ್‌ ಡಬ್ಲ್ಯೂ ಎಬ್ಯಾಂಕ್ಸ್‌ ಮತ್ತು ಮೊಹಮದ್‌ ಅಲ್ತಾಫ್‌ ಮುಸ್ಲಿಯಾನ್‌ ವೀಟಿಲ್‌ ಇದರ ನಿರ್ದೇಶಕರುಗಳಾಗಿದ್ದಾರೆ. ಇವರಿಬ್ಬರ ಇತಿಹಾಸ ಆಸಕ್ತಿಕರವಾಗಿದೆ.

ಎಬ್ಯಾಂಕ್ಸ್‌ ಈ ಹಿಂದೆ ಕೇಮನ್‌ ಐಲ್ಯಾಂಡ್ಸ್‌ ಸರಕಾರದಲ್ಲಿ ಅಧಿಕಾರಿಯಾಗಿದ್ದವರು. ಇಲ್ಲಿನ ಹಣಕಾಸು ಕಾರ್ಯದರ್ಶಿ ಮತ್ತು ಸಂಪುಟ ಸಚಿವರಿಗೆ ಸಲಹೆಗಾರರೂ ಆಗಿದ್ದರು. ಕೇಮನ್‌ ಐಲ್ಯಾಂಡ್ಸ್‌ನಲ್ಲಿ ನೋಂದಣಿಯಾಗಿರುವ ಎರಡು ಉದ್ಯಮಗಳ ನಿರ್ದೇಶಕರಾಗಿದ್ದ ಅವರ ಹೆಸರು ಮೊದಲ ಬಾರಿಗೆ ‘ಪ್ಯಾರಡೈಸ್‌ ಪೇಪರ್ಸ್‌’ನಿಂದ ಹೊಸ ಜನರನ್ನು ತಲುಪಿತ್ತು.

ದೋವಲ್‌ ಸಹೋದರರ ಕಂಪನಿಯ ದಾಖಲೆಗಳು.
ದೋವಲ್‌ ಸಹೋದರರ ಕಂಪನಿಯ ದಾಖಲೆಗಳು.
/ದಿ ಕ್ಯಾರವಾನ್

ಇನ್ನು ಅಲ್ತಾಫ್‌ ಲುಲು ಗ್ರೂಪ್‌ ಇಂಟರ್ನ್ಯಾಷನಲ್‌ನ ಪ್ರಾದೇಶಿಕ ನಿರ್ದೇಶಕರಾಗಿದ್ದಾರೆ. ಈ ಸಂಸ್ಥೆ ಪಶ್ಚಿಮ ಏಷ್ಯಾದಲ್ಲಿ ಹೈಪರ್‌ಮಾರ್ಕೆಟ್‌ಗಳ ಜಾಲವನ್ನು ಮುನ್ನಡೆಸುತ್ತದೆ. ಇದಿಷ್ಟಕ್ಕೇ ನಿಲ್ಲುವುದಿಲ್ಲ; ಜಿಎನ್‌ವೈ ಏಷ್ಯಾ ಫಂಡ್‌ ಕಾನೂನಾತ್ಮಕ ವಿಳಾಸದಲ್ಲಿ ವಾಲ್ಕರ್ಸ್‌ ಕಾರ್ಪೊರೇಟ್‌ ಲಿ. ಹೆಸರಿದೆ. ಈ ಕಂಪನಿ ಹೆಸರು ಕೂಡ ‘ಪ್ಯಾರಡೈಸ್‌ ಪೇಪರ್ಸ್‌’ ಮತ್ತು ‘ಪನಾಮ ಪೇಪರ್ಸ್‌’ ಎರಡರಲ್ಲೂ ಉಲ್ಲೇಖವಾಗಿತ್ತು.

ಅಣ್ಣ ತಮ್ಮ ಜುಗಲ್‌ಬಂಧಿ:

ಪ್ಯಾರಡೈಸ್‌ ಪೇಪರ್ಸ್‌ ಸಂಪರ್ಕಗಳಾಚೆಗೆ ಅಣ್ಣ ಶೌರ್ಯ ದೋವಲ್‌ ಉದ್ಯಮದ ಜತೆಗೂ ಸಂಬಂಧ ಹೊಂದಿದ್ದಾರೆ ವಿವೇಕ್‌ ದೋವಲ್‌. ಈ ಶೌರ್ಯ ದೋವಲ್‌ರದ್ದು ಇನ್ನೊಂದು ಕಥೆ. ಅವರ ತಂದೆ ಪ್ರಧಾನಿ ನರೇಂದ್ರ ಮೋದಿ ಸುತ್ತ ಸುಳಿದಾಡುತ್ತಿದ್ದರೆ, ಮಗ ಪ್ರಧಾನಿಗೆ ಆಪ್ತವಾಗಿರುವ ‘ಇಂಡಿಯಾ ಫೌಂಡೇಶನ್‌’ ಎಂಬ ಚಿಂತಕರ ಚಾವಡಿಯ ಮುಖ್ಯಸ್ಥರು.

ಈ ಶೌರ್ಯ ದೋವಲ್‌ ಕಂಪನಿಗಳಿಗೂ, ವಿವೇಕ್‌ ದೋವಲ್‌ ಕಂಪನಿಗಳಿಗೂ ಸಂಬಂಧಗಳಿವೆ ಎನ್ನುವುದಕ್ಕೆ ಹಲವು ಸಾಕ್ಷ್ಯಗಳಿವೆ. ಮಾತ್ರವಲ್ಲದೆ ಅಣ್ಣ ತಮ್ಮ ಸೇರಿ ದೊಡ್ಡ ಮಟ್ಟದ ಹಣಕಾಸು ವ್ಯವಹಾರ ನಡೆಸುತ್ತಿರುವುದನ್ನು ಸೂಚಿಸುತ್ತಿದೆ. ಇವುಗಳಲ್ಲಿ ಕೆಲವು ವ್ಯವಹಾರಗಳು ಸೌದಿ ಅರೇಬಿಯಾದ ಅರಮನೆ, ಹೌಸ್‌ ಆಫ್‌ ಸೌದ್‌ ಜತೆಗೂ ಸಂಬಂಧ ಹೊಂದಿವೆ.

ಹೇಳುವುದು ವೇದಾಂತ, ತಿನ್ನುವುದು ಬದನೆಕಾಯಿ:

ಹೀಗೊಂದು ತೆರಿಗೆ ಕಳ್ಳ ದೇಶಗಳಲ್ಲಿ ವ್ಯವಹಾರ ಹೊಂದುವುದನ್ನು ಈ ದೋವಲ್‌ ಸಹೋದರರ ತಂದೆ ಇಷ್ಟಪಟ್ಟವರಲ್ಲ. ಗುಪ್ತಚರ ಇಲಾಖೆ ನಿರ್ದೇಶಕರಾಗಿ ನಿವೃತ್ತರಾಗಿದ್ದ ಅಜಿತ್‌ ದೋವಲ್‌ ಮತ್ತು ಸದ್ಯ ಆರ್‌ಬಿಐ ಸ್ವತಂತ್ರ ನಿರ್ದೇಶಕರಾಗಿರುವ ಎಸ್‌. ಗುರುಮೂರ್ತಿ 2011ರಲ್ಲಿ ಬಿಜೆಪಿಗೆ ಒಂದು ವರದಿ ನೀಡಿದ್ದರು. "ಇಂಡಿಯನ್‌ ಬ್ಲ್ಯಾಕ್‌ ಮನಿ ಅಬ್ರಾಡ್‌: ಇನ್‌ ಸೀಕ್ರೆಟ್‌ ಬ್ಯಾಂಕ್ಸ್‌ ಆಂಡ್‌ ಟ್ಯಾಕ್ಸ್‌ ಹೆವನ್ಸ್‌," ಎಂಬ ಶೀರ್ಷಿಕೆಯ ಈ ವರದಿಯಲ್ಲಿ ಇಂಥಹ ವ್ಯವಹಾರವನ್ನು ಕೊನೆಗಾಣಿಸಬೇಕು ಎಂದು ಕಟು ಶಬ್ದಗಳಲ್ಲಿ ಹೇಳಿದ್ದರು. ಆಗ ಅದನ್ನು ಈ ದೇಶದ ಜನರು ಮುಕ್ತ ಕಂಠದಿಂದ ಸ್ವಾಗತಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಜತೆ ರಕ್ಷಣಾ ಸಲಹೆಗಾರ ಅಜಿತ್‌ ದೋವಲ್.
ಪ್ರಧಾನಿ ನರೇಂದ್ರ ಮೋದಿ ಜತೆ ರಕ್ಷಣಾ ಸಲಹೆಗಾರ ಅಜಿತ್‌ ದೋವಲ್.
/ದಿ ವೈರ್

ಇದೇ ಅಜಿತ್ ದೋವಲ್‌ ಪುತ್ರ ವಿವೇಕ್‌ ದೋವಲ್‌ ಇದೀಗ ಅಪ್ಪ ಪ್ರಸ್ತಾಪಿಸಿದ ತೆರಿಗೆ ಕಳ್ಳರ ಸ್ವರ್ಗ ಕೇಮನ್‌ ಐಲ್ಯಾಂಡ್ಸ್‌ನಲ್ಲಿ ಹಣ ಹೂಡಿದ್ದಾರೆ. ಈ ದೇಶದ ವಿಶೇಷತೆ ಏನೆಂದರೆ ಇಲ್ಲಿ ಕಾರ್ಪೊರೇಟ್‌ ತೆರಿಗೆ ವಿಧಿಸುವುದಿಲ್ಲ. ಜತೆಗೆ ಹೆಚ್ಚಿನ ಪರಿಶೀಲನೆ ಇಲ್ಲದೆ ಇಲ್ಲಿ ಕಾರ್ಪೊರೇಟ್‌ ಸಂಸ್ಥೆಗಳನ್ನು ಸುಲಭವಾಗಿ ಸ್ಥಾಪಿಸಬಹುದು. ಹೀಗೊಂದು ದೇಶ ಕೇಮನ್‌ ಐಲ್ಯಾಂಡ್ಸ್‌ನಲ್ಲಿ ನವೆಂಬರ್‌ 21, 2016ರಲ್ಲಿ ಜಿಎನ್‌ವೈ ಏಷ್ಯಾ ಸಂಸ್ಥೆ ನೋಂದಣಿಯಾಗಿತ್ತು.

ಅಮಿತ್‌ ಶರ್ಮಾ ಈ ಸಾಗರೋತ್ತರ ಬಂಡವಾಳ ಹೂಡಿಕೆ ಕಂಪನಿಯ ಚಾರ್ಟಡ್‌ ಫೈನಾನ್ಶಿಯಲ್‌ ಅನಾಲಿಸ್ಟ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ದಾಖಲೆಗಳ ಪ್ರಕಾರ ‘ಗೋರ್ಡಿಯನ್‌ ಕ್ಯಾಪಿಟಲ್‌ ಸಿಂಗಾಪುರ ಪ್ರೈವೇಟ್‌ ಲಿ.’ ಈ ನಿಧಿಯ ಲಾಭದಾಯಕ ಮಾಲಿಕ ಸಂಸ್ಥೆಯಾಗಿದೆ. ಈ ಸಂಸ್ಥೆಯ ವೆಬ್‌ಸೈಟ್‌ ಪ್ರಕಾರ ಲಂಡನ್‌ ಮೂಲದ ‘ಜಿಎನ್‌ವೈ ಕ್ಯಾಪಿಟಲ್‌ ಲಿ.’ ‘ಜಿಎನ್‌ವೈ ಏಷ್ಯಾ’ ಸಂಸ್ಥೆಯ ಸಲಹೆಗಾರನಾಗಿ ಕೆಲಸ ಮಾಡುತ್ತದೆ.

ಈ ‘ಜಿಎನ್‌ವೈ ಕ್ಯಾಪಿಟಲ್‌’ನಲ್ಲಿ ವಿವೇಕ್‌ ದೋವಲ್‌ ಮತ್ತು ಶರ್ಮಾ ಇಬ್ಬರೂ ನಿರ್ದೇಶಕರಾಗಿದ್ದಾರೆ. ಬ್ರಿಟನ್‌ ಸರಕಾರದ ಕಂಪನಿ ರೆಜಿಸ್ಟಾರ್‌ ಮಾಹಿತಿಗಳ ಪ್ರಕಾರ ಅಕ್ಟೋಬರ್‌ 2016ರ ಹೊತ್ತಿಗೆ ಇದೊಂದು ಕೇವಲ 5,400 ಪೌಂಡ್‌ ಮೌಲ್ಯದ ಚಿಲ್ಲರೆ ಕಂಪನಿಯಾಗಿತ್ತು (ಸುಮಾರು 4.4 ಲಕ್ಷ ರೂಪಾಯಿ).

ಸಾಮಾನ್ಯವಾಗಿ ಸಾಗರೋತ್ತರ ಬಂಡವಾಳ ಹೂಡಿಕೆಗೆ ಆರಂಭಿಕ ಮೊತ್ತ ಬೇಕಾಗುತ್ತದೆ. ಇಲ್ಲಿ ‘ಜಿಎನ್‌ವೈ ಏಷ್ಯಾ’ಕ್ಕೆ ಆರಂಭಿಕ ಮೊತ್ತ ಎಲ್ಲಿಂದ ಬಂತು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಕಂಪನಿ ಆರಂಭಿಸುವ ವೇಳೆ ‘ಬ್ಲೂಂಬರ್ಗ್‌’ಗೆ ಪ್ರತಿಕ್ರಿಯೆ ನೀಡಿರುವ ಶರ್ಮ, ಮಧ್ಯ ಪೂರ್ವ ದೇಶಗಳ ಜನರಿಗೆ ಹೂಡಿಕೆ ಪಡೆದುಕೊಳ್ಳುವುದಾಗಿ ಹೇಳಿದ್ದರು. ಇದೇ ವರದಿಯಲ್ಲಿ, 2016ರ ಡಿಸೆಂಬರ್‌ನಿಂದ ಸಾಗರೋತ್ತರ ಹೂಡಿಕೆ ವಹಿವಾಟು ಆರಂಭಿಸಲಾಗಿದೆ ಎಂಬ ವಿವರಗಳಿವೆ.

ಮುಂದುವರಿದು ಅಮೆರಿಕಾದ ಸೆಕ್ಯುರಿಟೀಸ್‌ ಆಂಡ್‌ ಎಕ್ಸ್‌ಚೇಂಜ್‌ ಕಮಿಷನ್‌ನ ದಾಖಲೆಗಳ ಮೇಲೆ ಕಣ್ಣಾಡಿಸಿದಾಗ ಜುಲೈ 2018ರಲ್ಲಿ ‘ಜಿಎನ್‌ವೈ ಏಷ್ಯಾ’ 11.19 ಮಿಲಿಯನ್‌ ಅಂದರೆ ಸುಮಾರು 77 ಕೋಟಿ ರೂಪಾಯಿ ಮೌಲ್ಯದ ಕಂಪನಿಯಾಗಿ ಬೆಳೆದು ನಿಂತಿದ್ದು ಕಂಡು ಬರುತ್ತದೆ.

ಈ ‘ಜಿಎನ್‌ವೈ ಏಷ್ಯಾ’ದ ನಿಧಿಯ ನಿರ್ವಹಣೆಯ ಹೊಣೆಯನ್ನು ‘ಎಡೆಲ್‌ವೆಸ್‌ ಕಸ್ಟೋಡಿಯಲ್‌’ ಎಂಬ ಸಂಸ್ಥೆ ಹೊತ್ತುಕೊಂಡಿದೆ. ಇದೇ ಕಂಪನಿ 2017ರಲ್ಲಿ ‘ಎಡೆಲ್‌ವೆಸ್‌ ಇಂಡಿಯಾ ಕಾನ್ಫರೆನ್ಸ್‌’ ಎಂಬ ಹೂಡಿಕೆದಾರರ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಭಾರತದ ಕಂಪನಿಗಳಿಗೆ ದೊಡ್ಡ ದೊಡ್ಡ ಹೂಡಿಕೆದಾರರನ್ನು ಕಂಡುಕೊಳ್ಳಲು ಇದೊಂದು ವೇದಿಕೆಯಾಗಿತ್ತು. ಇದರಲ್ಲಿ ‘ಜಿಎನ್‌ವೈ ಏಷ್ಯಾ’ ಭಾಗವಹಿಸಿತ್ತು- ಸಂಸ್ಥೆ ಪರವಾಗಿ ಅಕುಲ್‌ ಝಝಾರಿಯಾ ಸಭೆಗಳಿಗೆ ಹಾಜರಾಗಿದ್ದರು. ನೆನಪಿಡಿ ‘ಕೇಮನ್‌ ಐಲ್ಯಾಂಡ್ಸ್‌’ನಲ್ಲಿ ಕಂಪನಿ ನೋಂದಣಿಯಾದ ಕೇವಲ ಎರಡು ತಿಂಗಳಲ್ಲಿ ಈ ಬೆಳವಣಿಗೆ ನಡೆದಿತ್ತು.

ಅದಕ್ಕಿಂತಲೂ ಅಚ್ಚರಿಯ ವಿಚಾರವೆಂದರೆ ಜಿಎನ್‌ವೈ ಏಷ್ಯಾ ಬೃಹತ್‌ ಕಂಪನಿಗಳ ಜತೆ ಟೇಬಲ್‌ ಹಂಚಿಕೊಂಡಿತ್ತು. ಜುಜುಬಿ ಮೊತ್ತ ಇಟ್ಟುಕೊಂಡು ಆರಂಭವಾಗಿದ್ದ ಕಂಪನಿ ಬೃಹತ್‌ ಸಂಸ್ಥೆಗಳ ಜತೆ ವ್ಯವಹಾರಕ್ಕೆ ಇಳಿದಿತ್ತು. ಗೋಲ್ಡ್‌ಮ್ಯಾನ್‌ ಸಾಶ್ಸ್‌ ಅಸೆಟ್‌ ಮ್ಯಾನೇಜ್‌ಮೆಂಟ್‌ ಪ್ರೈ. ಲಿ., ಐಸಿಐಸಿಐ ಪ್ರುಡೆನ್ಶಿಯಲ್ ಅಸೆಟ್‌ ಮ್ಯಾನೇಜ್‌ಮೆಂಟ್‌ ಕಂಪನಿ ಲಿ., ಕೋಟಕ್‌ ಮಹೀಂದ್ರಾ ಅಸೆಟ್‌ ಮ್ಯಾನೇಜ್‌ಮೆಂಟ್‌ ಕಂಪನಿ ಲಿ., ಎಸ್‌ಬಿಐ ಲೈಫ್‌ ಇನ್ಶೂರೆನ್ಸ್‌ ಕಂಪನಿ ಲಿ.ಗಳು ಇವುಗಳಲ್ಲಿ ಸೇರಿದ್ದವು.

ಸಭೆ ನಡೆಯುವ ವೇಳೆ ‘ಜಿಎನ್‌ವೈ ಏಷ್ಯಾ’ ಬಳಿಯಲ್ಲಿ ಎಷ್ಟು ಪ್ರಮಾಣದ ಆಸ್ತಿಗಳಿದ್ದವು ಎಂಬುದರ ವಿವರಗಳು ಇಲ್ಲವಾದರೂ, 2018ರ ಮಧ್ಯದಲ್ಲಿ ಅಮೆರಿಕಾ ಸರಕಾರಕ್ಕೆ ಸಲ್ಲಿಸಿದ ದಾಖಲೆಗಳಲ್ಲಿ ಕಂಪನಿಯ ಮೌಲ್ಯವಿದ್ದದ್ದು ಕೇವಲ 77 ಕೋಟಿ ರೂಪಾಯಿ ಮಾತ್ರ. ಅಂತಹ ಸಂಸ್ಥೆ 17,000 ಕೋಟಿ ರೂ ಮೌಲ್ಯದ ಮೋಟೊಲಾಲ್‌ ಓಸ್ವಾಲ್‌ ಅಸೆಟ್‌ ಮ್ಯಾನೇಜ್‌ಮೆಂಟ್‌, ಸುಮಾರು 92,000 ಕೋಟಿ ರೂ ಮೌಲ್ಯದ ಎಚ್‌ಡಿಎಫ್‌ಸಿ ಲೈಫ್‌ ಇನ್ಶೂರೆನ್ಸ್‌ ಕಂಪನಿಗಳ ಜತೆ ಫೆಬ್ರವರಿಯಲ್ಲಿ ವ್ಯವಹಾರ ಕುದುರಿಸಲು ಮುಂದಾಗಿತ್ತು. 88,000 ಕೋಟಿ ರೂ ಪೌಲ್ಯದ ಕೋಟಕ್‌ ಮಹೀಂದ್ರ ಅಸೆಟ್‌ ಮ್ಯಾನೇಜ್‌ಮೆಂಟ್‌ ಕಂಪನಿ ಜತೆಗೂ ಸಭೆ ನಡೆಸಿತ್ತು.

ವಿಶೇಷವೆಂದರೆ ಈ ಸಭೆಗಳು ನಡೆಯುವಾಗ ‘ಜಿಎನ್‌ವೈ ಏಷ್ಯಾ’ಗೆ ‘ಲೀಗಲ್‌ ಎಂಟಿಟಿ ಐಡೆಂಟಿಫೈರ್‌ ಕೋಡ್‌’ ಕೂಡ ಇರಲಿಲ್ಲ. ಅಂತರಾಷ್ಟ್ರೀಯ ಹಣಕಾಸು ವ್ಯವಹಾರಗಳನ್ನು ನಡೆಸಲು ಈ 20 ಅಂಕಿಗಳ ಎಲ್‌ಇಐ ಸಂಖ್ಯೆಯನ್ನು ಇಂದು ಪ್ರಮುಖವಾಗಿ ಗಮನಿಸಲಾಗುತ್ತದೆ. ಇಂಥಹ ಸಂಸ್ಥೆಯನ್ನು ಎಡೆಲ್‌ವಿಸ್‌ ಗ್ರಾಹಕನಾಗಿ ಸ್ವೀಕರಿಸಿತು ಮತ್ತು ಹೂಡಿಕೆದಾರರ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಲು ಅವಕಾಶನ್ನು ಹೇಗೆ ನೀಡಿತು ಎಂಬ ಪ್ರಶ್ನೆಯನ್ನು ‘ಕ್ಯಾರವಾನ್‌’ ಸಂಸ್ಥೆಗೆ ಕೇಳಿದೆ. ಆದರೆ ಅದಕ್ಕಿನ್ನೂ ಉತ್ತರ ಬಂದಿಲ್ಲ.

ಅಂತರಾಷ್ಟ್ರೀಯ ಮಾನದಂಡಗಳ ಕಥೆ ಹೀಗಾದರೆ, 2014ರಿಂದ ಸೆಬಿ ವಿದೇಶಿ ಹೂಡಿಕೆದಾರರನ್ನು ‘ಎಫ್‌ಪಿಐ’ ಎಂಬ ವರ್ಗದಡಿಯಲ್ಲಿ ನೋಂದಣಿ ಮಾಡಿಕೊಳ್ಳುವ ಪ್ರಕ್ರಿಯೆ ಆರಂಭಿಸಿದೆ. ಆದರೆ ಇಲ್ಲಿಯವರೆಗೆ ಇದರ ಅಡಿಯಲ್ಲೂ ‘ಜಿಎನ್‌ವೈ ಏಷ್ಯಾ’ ನೋಂದಣಿ ಮಾಡಿಕೊಂಡಿಲ್ಲ.

ಇವುಗಳ ವ್ಯವಹಾರದ ಆಳ ಅಗಲಗಳು ಹೇಗಿರುತ್ತವೆಂದರೆ, 2018ರ ನವೆಂಬರ್‌ ಆರಂಭದಲ್ಲಿ ಜಿಎನ್‌ವೈ ಏಷ್ಯಾಗೆ ಸಲಹೆ ನೀಡುವ ‘ಜಿಎನ್‌ವೈ ಕ್ಯಾಪಿಟಲ್’ ವಿಳಾಸವನ್ನು ಬದಲಾಯಿಸಲಾಯಿತು. ಆಗ ತಿಳಿದು ಬಂದಿದ್ದೇನೆಂದರೆ ಈ ಹೊಸ ವಿಳಾಸದಲ್ಲಿ ಅದಾಗಲೇ ಬ್ರಿಟನ್‌ನಲ್ಲಿ 120 ಕಂಪನಿಗಳು ನೋಂದಣಿಯಾಗಿದ್ದವು.

ದೋವಲ್‌ ಗ್ಯಾಂಗ್‌:

ಇವೆಲ್ಲದರೆ ನಡುವೆ 2017ರ ಜನವರಿಯಲ್ಲಿ ವಿವೇಕ್‌ ದೋವಲ್‌ ತಂದೆ ಅಜಿತ್‌ ದೋವಲ್‌ ಜತೆ ನೋಯ್ಡಾ ನೋಂದಣಿ ಕಚೇರಿಗೆ ಬಂದಿದ್ದರು. ಇಲ್ಲಿನ ಯುನಿಟೆಕ್‌ ಹಾರಿಜಾನ್‌ನಲ್ಲಿ ಖರೀದಿಸಿದ ಹೊಸ ಫ್ಲ್ಯಾಟ್‌ನ ಮಾಲಿಕತ್ವದ ಪ್ರಕ್ರಿಯೆ ಪೂರ್ಣಗೊಳಿಸಲು ಅವರು ಬಂದಿದ್ದರು. ಇದಕ್ಕೆ ಸಂಬಂಧಿಸಿದಂತೆ ಮತ್ತು ಇನ್ನೂ ಹಲವಾರು ಪ್ರಶ್ನೆಗಳನ್ನು ವಿವೇಕ್‌ ದೋವಲ್‌ ‘ಕ್ಯಾರವನ್‌’ ಕಡೆಯಿಂದ ಕೇಳಲಾಗಿದೆ. ಆದರೆ ಅದಕ್ಕೆ ಉತ್ತರಿಸುವ ಬದಲು ಸ್ಟೋರಿ ಪ್ರಕಟವಾಗುತ್ತಿದ್ದಂತೆ ವಿವೇಕ್‌ ದೋವಲ್‌ ನಿಯತಕಾಲಿಕೆಯ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ಒಂದು ಕಡೆ ಜಿಎನ್‌ವೈ ಏಷ್ಯಾದ ವ್ಯವಹಾರಗಳು ನಡೆಯುತ್ತಿದ್ದರೆ, ಇದೇ ಅವಧಿಯಲ್ಲಿ ಅದರ ಪ್ರಾಯೋಜಕ ಸಂಸ್ಥೆಯಾಗಿ ನಿಂತುಕೊಂಡಿದ್ದ ‘ಎಡೆಲ್‌ವೆಸ್‌ ಕಸ್ಟೋಡಿಯಲ್‌ ಸರ್ವಿಸಸ್‌’ ವ್ಯವಹಾರಗಳು ದೊಡ್ಡ ಮಟ್ಟಕ್ಕೆ ಏರಿಕೆಯಾಗಿದ್ದವು. 2015-16ರಲ್ಲಿ 5.64 ಕೋಟಿ ಇದ್ದ ಕಂಪನಿ ವ್ಯವಹಾರ ಮುಂದಿನ ವರ್ಷದಲ್ಲಿ 34.97 ಕೋಟಿ ರೂಪಾಯಿಗೆ ಏರಿಕೆಯಾಗಿತ್ತು. 2017-18ರಲ್ಲಂತೂ ಪವಾಡದ ರೀತಿ ಕಂಪನಿ ವ್ಯವಹಾರ ಈ ಮೊತ್ತ 166.8 ಕೋಟಿ ರೂಪಾಯಿಗೆ ಬೆಳೆದಿತ್ತು; ಮತ್ತು ನಿವ್ವಳ ಲಾಭ 49.35 ಕೋಟಿ ರೂಪಾಯಿಗೆ ಏರಿಕೆಯಾಗಿತ್ತು.

ಏತನ್ಮಧ್ಯೆ ಮತ್ತೊಂದು ಬೆಳವಣಿಗೆಯಲ್ಲಿ ಕೇಮನ್‌ ಐಲ್ಯಾಂಡ್ಸ್‌ನಿಂದ ಭಾರತಕ್ಕೆ ಬರುತ್ತಿರುವ ಹೂಡಿಕೆಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದ್ದವು. ಆರ್‌ಬಿಐ ದಾಖಲೆಗಳ ಪ್ರಕಾರ 2016-17ರಲ್ಲಿ ಕೇವಲ 348 ಕೋಟಿ ರೂಪಾಯಿ ಇದ್ದ ಹೂಡಿಕೆ 2017-18ರಲ್ಲಿ 8,101 ಕೋಟಿ ರುಪಾಯಿಗೆ ಏರಿಕೆಯಾಗಿತ್ತು. ಇದೇ ಅವಧಿಯಲ್ಲಿ ಕೇಮನ್‌ ಐಲ್ಯಾಂಡ್ಸ್‌ ದೋವಲ್‌ ಕಂಪನಿಗಳು ಉದಯವಾಗಿದ್ದವು ಎಂಬುದನ್ನು ಇಲ್ಲಿ ಗಮನಿಸಬಹುದು.

ಸಹೋದರರ ವ್ಯವಹಾರ ಸಂಬಂಧ:

ಇವಿಷ್ಟು ಅಜಿತ್‌ ದೋವಲ್‌ ಕಿರಿಯ ಪುತ್ರನ ಕತೆಗಳಾದರೆ ಹಿರಿಯ ಪುತ್ರ ಶೌರ್ಯ ದೋವಲ್‌ರದ್ದು ಇನ್ನೊಂದು ಕತೆ. ಇನ್ವೆಸ್ಟ್‌ಮೆಮಟ್‌ ಬ್ಯಾಂಕರ್‌ ಆಗಿ ಗುರುತಿಸಿಕೊಂಡಿದ್ದ ದೋವಲ್‌ ಸದ್ಯ ಭಾರತದ ರಾಜಕಾರಣದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. 2009ರಲ್ಲಿ ಭಾರತಕ್ಕೆ ವಾಪಸಾದ ಅವರು ‘ಇಂಡಿಯಾ ಫೌಂಡೇಷನ್‌’ ನಿರ್ದೇಶಕರಾಗಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್‌ ಮಾಧವ್‌ ಜತೆ ಕೆಲಸ ಆರಂಭಿಸಿದ್ದರು.

ಹಲವು ವರ್ಷಗಳ ಕಾಲ ದೆಹಲಿಯಲ್ಲಿ ತೆರೆಮರೆಯಲ್ಲಿದ್ದುಕೊಂಡೇ ಈ ಸಂಘಟನೆ ಕೆಲಸ ಮಾಡಿತ್ತು. ಯಾವಾಗ ನರೇಂದ್ರ ಮೋದಿ 2014ರಲ್ಲಿ ಅಧಿಕಾರಕ್ಕೇರಿದರೋ ಅಲ್ಲಿಂದ ಈ ಸಂಸ್ಥೆಯ ಬೆಳವಣಿಗೆಯ ಗ್ರಾಫ್‌ ಮೇಲೇರತೊಡಗಿತು. ನಂತರದ್ದು ಶೌರ್ಯ ದೋವಲ್‌ ವ್ಯವಹಾರಗಳ ಮತ್ತೊಂದು ಯುಗ; ವಿದೇಶಗಳ ರಾಯಭಾರಿಗಳು, ಗಣ್ಯರ ಜತೆಗಿನ ಸಭೆ, ನ್ಯೂಯಾರ್ಕ್‌ನ ಮ್ಯಾಡಿಸನ್‌ ಸ್ಕ್ವಾರ್‌ನಂಥ ಬೃಹತ್‌ ಆಯೋಜನೆಗಳ ಹಿಂದಿರುವವು ಇದೇ ಶೌರ್ಯ ದೋವಲ್.

ಇವರ ಈ ‘ಇಂಡಿಯಾ ಫೌಂಡೇಷನ್‌’ನಲ್ಲಿ ಬಿಜೆಪಿ ಸಚಿವರೂ ಸಕ್ರಿಯರಾಗಿದ್ದು ನಿರ್ದೇಶಕರ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಈ ತಂಡ ಕೇಂದ್ರ ಸರಕಾರದ ಆಪ್ತ ಸಲಹೆಗಾರರಾಗಿರುವುದು ಇವತ್ತಿಗೆ ರಹಸ್ಯವಾಗಿಯೇನೂ ಉಳಿದಿಲ್ಲ.

ಶೌರ್ಯ ದೋವಲ್‌ ಕೈಚಳಕದ ಮ್ಯಾಡಿಸನ್‌ ಸ್ಕ್ವಾರ್‌ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಭಾಷಣ.
ಶೌರ್ಯ ದೋವಲ್‌ ಕೈಚಳಕದ ಮ್ಯಾಡಿಸನ್‌ ಸ್ಕ್ವಾರ್‌ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಭಾಷಣ.
/ರಾಯ್ಟರ್ಸ್‌

ಸದ್ಯ ಶೌರ್ಯ ದೋವಲ್‌ ಪೂರ್ಣ ಪ್ರಮಾಣದಲ್ಲಿ ಸಕ್ರಿಯ ರಾಜಕೀಯಕ್ಕೆ ಧುಮುಕಲು ಸಜ್ಜಾಗಿದ್ದಾರೆ. 2017ರ ಡಿಸೆಂಬರ್‌ನಲ್ಲಿ ನಡೆದ ಉತ್ತರಾಖಂಡ್‌ ರಾಜ್ಯ ಬಿಜೆಪಿ ಕಾರ್ಯಕಾರಣಿಯಲ್ಲಿ ಭಾಗವಹಿಸಿದ್ದ ಅವರು ಲೋಕಸಭೆ ಚುನಾವಣೆಗೆ ನಿಲ್ಲುವ ಉಮೇದಿನಲ್ಲಿದ್ದಾರೆ. ದೋವಲ್‌ ಕುಟುಂಬದ ತವರು ಪೌರಿ ಗರ್ವಾಲ್‌ನಿಂದ 2019ರ ಚುನಾವಣೆಯ ಸ್ಪರ್ಧಿಸುವುದು ಅವರ ಯೋಜನೆಯಿದ್ದಂತೆ ಕಾಣಿಸುತ್ತಿದೆ. ಅದಕ್ಕೆ ಪೂರಕವಾಗಿ ಅವರು 2018ರ ಮಧ್ಯ ಭಾಗದಲ್ಲಿ ಇಲ್ಲಿ ಉದ್ಯೋಗ, ಆರೋಗ್ಯ ಮತ್ತು ಶಿಕ್ಷಣವನ್ನು ಗುರಿಯಾಗಿಸಿಕೊಂಡು ಕಾರ್ಯಕ್ರಮವೊಂದನ್ನು ನಡೆಸಿದ್ದರು. ಹಾಗಂಥ ಅವರು ಇದಕ್ಕೇ ಸೀಮಿತರಾಗಿಲ್ಲ.

ಸಾಗರೋತ್ತರ ವ್ಯವಹಾರ ನಡೆಸುವ ತಮ್ಮ ವಿವೇಕ್‌ ದೋವಲ್‌ಗೂ ಶೌರ್ಯ ದೋವಲ್‌ ವ್ಯವಹಾರಗಳಿಗೂ ನೇರ ಸಂಬಂಧಗಳಿವೆ. ಜತೆಗೆ ರಾಜಕೀಯದಾಚೆ ಶೌರ್ಯ ದೋವಲ್‌ ಇಂದಿಗೂ ಸಿಂಗಾಪುರ ಮೂಲದ ಅಸೆಟ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆ ‘ಟಾರ್ಚ್‌ ಫೈನಾನ್ಶಿಯಲ್‌ ಸರ್ವೀಸಸ್‌’ ಸಿಇಒ ಆಗಿ ಮುಂದುವರಿದಿದ್ದಾರೆ. ಈ ಹಿಂದೆ ಅವರು ‘ಝಿಯೋಸ್‌ ಕ್ಯಾಪ್‌’ ಮುಖ್ಯಸ್ಥರಾಗಿದ್ದರು. ಮುಂದೆ ಇದು ಟಾರ್ಚ್‌ನಲ್ಲಿ ವಿಲೀನಗೊಂಡಿತ್ತು.

ಅಣ್ಣ ತಮ್ಮರ ನಡುವೆ ಔದ್ಯಮಿಕ ಸಂಬಂಧಗಳಿವೆ ಎಂಬುದಕ್ಕೆ ಹಲವು ನಿದರ್ಶನಗಳು ಸಿಗುತ್ತವೆ. ಉದಾಹರಣೆಗೆ ವಿವೇಕ್ ದೋವಲ್‌ರ ‘ಜಿಎನ್‌ವೈ ಏಷ್ಯಾ’ ಮತ್ತು ‘ಜಿಎನ್‌ವೈ ಕ್ಯಾಪಿಟಲ್‌’ ನಿರ್ದೇಶಕನ ಹುದ್ದೆಯಲ್ಲಿರುವ ಅಮಿತ್‌ ಶರ್ಮಾ ದೆಹಲಿ ಮೂಲದ ‘ವೈಫಿನ್‌ ಅಡ್ವೈಸರ್‌’ ಸಲಹೆಗಾರರೂ ಆಗಿದ್ದಾರೆ. ಇದರಲ್ಲಿ ಶೇರುದಾರರಾಗಿರುವ ಏಕೈಕ ವ್ಯಕ್ತಿ ಶೌರ್ಯ ದೋವಲ್.

ಇನ್ನು 2017ರ ಫೆಬ್ರವರಿಯಲ್ಲಿ ಹೂಡಿಕೆದಾರರ ಸಭೆಯಲ್ಲಿ ‘ಜಿಎನ್‌ವೈ ಏಷ್ಯಾ’ವನ್ನು ಪ್ರತಿನಿಧಿಸಿದ್ದ ಝಝಾರಿಯಾ ಈ ಹಿಂದೆ ಶೌರ್ಯ ದೋವಲ್‌ ನಿರ್ದೇಶಕರಾಗಿರುವ ಝೀಯೋಸ್‌ನಲ್ಲಿ ನೌಕರಿಯಲ್ಲಿದ್ದರು. ಸದ್ಯ ಟಾರ್ಸಿಯಾ ಅಡ್ವೈಸರ್ಸ್‌ ಪ್ರೈವೇಟ್‌ ಲಿ. ಎಂದು ಹೆಸರಾಗಿರುವ ಝಾಡ್‌ ಸಪೋರ್ಟ್‌ ಸರ್ವೀಸಸ್‌ ಪ್ರೈವೇಟ್‌ ಲಿಮೆಂಟ್‌ನಲ್ಲಿಯೂ ಅವರು ದೋವಲ್‌ ಹಿರಿಯ ಪುತ್ರನಿಗೆ ಜೊತೆಗಾರರಾಗಿದ್ದರು. ಹೀಗೆ ಸಂಬಂಧಗಳ ಪಟ್ಟಿ ಮುಂದುವರಿಯುತ್ತದೆ.

ಈ ‘ಟಾರ್ಚ್‌ ಫೈನಾನ್ಶಿಯಲ್‌ ಸರ್ವಿಸಸ್‌’ ಸಾಮಾನ್ಯದ ಕಂಪನಿಯಲ್ಲ. ಇದರ ಮೇಲುಸ್ತುವಾರಿ ಸಮಿತಿಯಲ್ಲಿ ಸೌದಿ ಅರೇಬಿಯಾದ ರಾಜಮನೆತನಕ್ಕೆ ಸೇರಿದ ಮಿಶಾಲ್‌ ವಿನ್‌ ಅಬ್ದುಲ್ಲಾಹ್‌ ಬಿನ್‌ ಟರ್ಕಿ ಬಿನ್‌ ಅಬ್ದುಲಜೀಜ್‌ ಅಲ್‌ ಸೌದ್‌ ಕೂಡ ಇದ್ದಾರೆ.

ಅತ್ತ ಸೌದಿ ರಾಜಮನೆತನದವರು ದೋವಲ್‌ ಸಹೋದರರ ಜತೆ ಗುರುತಿಸಿಕೊಂಡಿದ್ದರೆ, ಇತ್ತ ಅಪ್ಪ ಅಜಿತ್‌ ದೋವಲ್‌ ಹೆಸರು ಕೂಡ ಮಕ್ಕಳ ಉದ್ಯಮಗಳ ಜತೆ ಥಳಕು ಹಾಕಿಕೊಂಡಿದೆ. ಉದಾಹರಣೆಗೆ ‘ಟಾರ್ಸಿಯಾ ಅಡ್ವೈಸರ್ಸ್‌’ ದ್ವಾರ್ಕಾದಲ್ಲಿರುವ ನಿವಾಸವನ್ನೇ ತನ್ನ ಅಧಿಕೃತ ಕಚೇರಿ ಎಂದು ನೋಂದಣಿ ಮಾಡಿಕೊಂಡಿದೆ. ಈ ನಿವಾಸ ಅಜಿತ್‌ ದೋವಲ್‌ ಹೆಸರಿನಲ್ಲಿದೆ. 2015ರಲ್ಲಿ ಕಂಪನಿ ರೆಜಿಸ್ಟಾರ್‌ಗೆ ಪತ್ರದ ಬರೆದಿದ್ದ ಮೋದಿ ರಕ್ಷಣಾ ಸಲಹೆಗಾರರು ತಮ್ಮ ನಿವಾಸವನ್ನು ಟಾರ್ಸಿಯಾ (ಆಗಿನ ಝಾಡ್) ಅಧಿಕೃತ ಕಚೇರಿಯಾಗಿ ಬಳಸುವುದಕ್ಕೆ ತಮ್ಮ ಅಭ್ಯಂತರವಿಲ್ಲ ಎಂದು ಹೇಳಿದ್ದರು.

ಈ ಕೌಟುಂಬಿಕ ಸಂಬಂಧ ಅಜಿತ್‌ ದೋವಲ್‌ಗೆ ಕೊನೆಯಾಗುವುದಿಲ್ಲ. ಕುಟುಂಬದ ಇನ್ನೋರ್ವ ಸದಸ್ಯೆ ದೋವಲ್‌ ಪತ್ನಿಯೂ ಈ ಉದ್ಯಮಗಳಲ್ಲಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಭಾರತದ ಉದ್ಯೋಗ ಮಾಹಿತಿ ತಾಣ ‘ವಿಸ್‌ಡಮ್‌ಜಾಬ್ಸ್‌’ನಲ್ಲಿ ‘ಜಿಯೋಸ್‌ ಸ್ಟ್ರಾಟೆಜಿಕ್‌ ಮ್ಯಾನೇಜ್‌ಮೆಂಟ್‌ ಅಡ್ವೈಸರ್ಸ್‌ ಲಿ.’ ಬಗ್ಗೆ ವರದಿಯೊಂದು ಪ್ರಕಟವಾಗಿತ್ತು. ಶೌರ್ಯ ಮತ್ತು ಆತನ ತಾಯಿ ಇದರ ನಿರ್ದೇಶಕರಾಗಿದ್ದು, ಪುನೀತ್‌ ಕಮ್ರಾ ಇದರ ಇನ್ನೋರ್ವ ನಿರ್ದೇಶಕರಾಗಿದ್ದಾರೆ. ಕಮ್ರಾ ‘ಟಾರ್ಸಿಯಾ ಅಡ್ವೈಸರ್ಸ್‌’ನ ಸಲಹೆಗಾರರೂ ಹೌದು. ಈ ‘ವಿಸ್ಡಮ್‌ಜಾಬ್ಸ್‌’ನಲ್ಲಿ ಪ್ರಕಟವಾದ ಜಾಹೀರಾತಿನಲ್ಲಿ ವಿವೇಕ್‌ ಒಡೆತನದ ಬ್ರಿಟನ್‌ ಮೂಲದ ಸಂಸ್ಥೆ ‘ಜಿಎನ್‌ವೈ ಕ್ಯಾಪಿಟಲ್‌’ಗೆ ಬ್ಯುಸಿನೆಸ್‌ ಅನಾಲಿಸ್ಟ್‌ಗಳು ಬೇಕು ಹೇಳಲಾಗಿತ್ತು. ಹೀಗೆ ಈ ಸರಣಿ ಜಾಲಗಳು ಮುಂದುವರಿಯುತ್ತವೆ.

ಕೊನೆಯ ಮಾತು...

ಬಿಜೆಪಿಗೆ 2011ರಲ್ಲಿ ನೀಡಿದ ತೆರಿಗೆ ಕಳ್ಳರ ಸ್ವರ್ಗದ ಬಗೆಗಿನ ವರದಿಯಲ್ಲಿ ದೋವಲ್‌ ಮತ್ತು ಗುರುಮೂರ್ತಿ, ಎಲ್ಲಾ ಚುನಾವಣಾ ಅಭ್ಯರ್ಥಿಗಳು ತಮ್ಮ ಅಫಿಡವಿಟ್‌ನಲ್ಲಿ ನಾವು ವಿದೇಶದಲ್ಲಿ ಯಾವುದೇ ಅಕ್ರಮ ಹಣ ಹೊಂದಿಲ್ಲ ಎಂಬುದನ್ನು ಖಚಿತಪಡಿಸವಂತೆ ಶಿಫಾರಸ್ಸು ಮಾಡಿದ್ದರು. ಈಗ ತಮ್ಮ ಮಕ್ಕಳ ಈ ಸಾಗರೋತ್ತರ, ತೆರಿಗೆ ಕಳ್ಳರ ದೇಶದಿಂದ ನಡೆಸುತ್ತಿರುವ ವ್ಯವಹಾರದ ಬಗ್ಗೆ ದೋವಲ್‌ ಏನೆನ್ನುತ್ತಾರೆ? ಮಾನನಷ್ಟ ಮೊಕದ್ದಮೆಯಾಚೆಗಿನ ಅವರ ಪ್ರತಿಕ್ರಿಯೆ ಬಗ್ಗೆ ಕುತೂಹಲವಿದೆ.

ಕೃಪೆ: ದಿ ಕ್ಯಾರವಾನ್