samachara
www.samachara.com
ಹದಗೆಟ್ಟ ಕರ್ನಾಟಕದ ‘ಆರೋಗ್ಯ’; ಹಳ್ಳಿಗೆ ಹೋಗೊ ತಮ್ಮಾ;  ಕಾರ್ಪೊರೇಟ್ ಆಸ್ಪತ್ರೆ ಸೇರ್ತೀನಮ್ಮ!
COVER STORY

ಹದಗೆಟ್ಟ ಕರ್ನಾಟಕದ ‘ಆರೋಗ್ಯ’; ಹಳ್ಳಿಗೆ ಹೋಗೊ ತಮ್ಮಾ; ಕಾರ್ಪೊರೇಟ್ ಆಸ್ಪತ್ರೆ ಸೇರ್ತೀನಮ್ಮ!

ಸರಕಾರಿ ಕೋಟಾದ ಅಡಿಯಲ್ಲಿ ಕೋರ್ಸ್ ಮುಗಿಸುವ ವೈದ್ಯರು 1 ಲಕ್ಷ ದಂಡ ಪಾವತಿಸಲು ಸಿದ್ಧರಿದ್ದಾರೆ ಆದರೆ ಗ್ರಾಮೀಣ ಭಾಗದಲ್ಲಿ ಕೆಲಸ ಮಾಡಲು ಸಿದ್ದರಿಲ್ಲ.

ಅಶೋಕ್ ಎಂ ಭದ್ರಾವತಿ

ಅಶೋಕ್ ಎಂ ಭದ್ರಾವತಿ

ಆಕೆಯ ಹೆಸರು ರತ್ನಮ್ಮ; ವಯಸ್ಸು 14. ದಿಢೀರನೆ ಆವರಿಸಿಕೊಂಡ ಜ್ವರಕ್ಕೆ ಹುಡುಗಿ ನಲುಗಿ ಹೋಗಿದ್ದಳು. ಆಕೆಯನ್ನು ಆಸ್ಪತ್ರೆಗೆ ಸೇರಿಸಲು ತಂದೆ ಇನ್ನಿಲ್ಲದ ಪ್ರಯತ್ನ ಪಟ್ಟಿದ್ದರು. ಆದರೆ ಆಂಧ್ರ- ಕರ್ನಾಟಕ ಗಡಿ ಪ್ರದೇಶವಾದ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಕೋಡಿಗೇನಹಳ್ಳಿಯಲ್ಲಿ ಸುಸಜ್ಜಿತ ಆಸ್ಪತ್ರೆ ಇರಲಿ, ಕನಿಷ್ಟ ಒಂದು ಪ್ರಾಥಮಿಕ ಕೇಂದ್ರ ಸಹ ಇಲ್ಲ. ಆಂಬ್ಯುಲೆನ್ಸ್ ಸೇವೆ ಲಭ್ಯವಾಗದ ನತದೃಷ್ಟ ಗ್ರಾಮ ಅದು.

ಕೊನೆಗೂ ಆಕೆಯನ್ನು ಬೈಕಿನಲ್ಲಿ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಸರಿಯಾದ ಸಮಯಕ್ಕೆ ವೈದ್ಯರಿಲ್ಲದ ಕಾರಣ ಆಕೆ ಪ್ರಾಣವನ್ನೇ ಕಳೆದುಕೊಳ್ಳಬೇಕಾಯಿತು. ಕರ್ನಾಟಕದಲ್ಲಿ ರತ್ನಮ್ಮಳಂತೆ ಸರಿಯಾದ ಸಮಯಕ್ಕೆ ಸರಿಯಾದ ಚಿಕಿತ್ಸೆ ಇಲ್ಲದೆ ಗ್ರಾಮೀಣ ಭಾಗದಲ್ಲಿ ಜೀವ ಕಳೆದುಕೊಳ್ಳುವವರ ಸಂಖ್ಯೆ ಶೇ.14 ಎನ್ನುತ್ತಿದೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 2015 ರಲ್ಲಿ ಬಿಡುಗಡೆ ಮಾಡಿರುವ ಭಾರತೀಯ ಗ್ರಾಮೀಣ ಆರೋಗ್ಯ ಸೂಚಿ.

ವೈದ್ಯರಿಲ್ಲದೆ ಚಿಕಿತ್ಸೆ ಇಲ್ಲದೆ ಕನಿಷ್ಟ ಆಂಬ್ಯುಲೆನ್ಸ್ ಇಲ್ಲದೆ ರತ್ನಮ್ಮ ಎಂಬ ಹುಡುಗಿ ಪ್ರಾಣ ಕಳೆದುಕೊಂಡ ಸುದ್ದಿ 2017ರಲ್ಲಿ ರಾಜ್ಯಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ಸರಕಾರವನ್ನು ವಿರೋಧ ಪಕ್ಷಗಳು ಟೀಕೆಗೆ ಗುರಿ ಮಾಡಿದ್ದವು, ಮಾಧ್ಯಮಗಳೂ ಸತತ ಎರಡು ದಿನ ಈ ಸುದ್ದಿಯನ್ನು ಭಿತ್ತರಿಸುವ ಮೂಲಕ ದೊಡ್ಡ ಮಟ್ಟದ ಹೈಪ್ ಕ್ರಿಯೇಟ್ ಆಗಿತ್ತು. ಎಲ್ಲಾ ಸುದ್ದಿಗಳಂತೆ ಇದೂ ಕೂಡ ತಣ್ಣಗಾಯಿತು. ಸಮಸ್ಯೆಗೇನೂ ಕಡಿವಾಣ ಬೀಳಿಲ್ಲ.

ಗ್ರಾಮೀಣ ಭಾಗಗಳಲ್ಲಿ ಸರಕಾರಿ ಆಸ್ಪತ್ರೆಗಳ ಹಾಗೂ ನುರಿತ ವೈದ್ಯರ ಕೊರತೆ ದೊಡ್ಡಮಟ್ಟದಲ್ಲಿದೆ. ಇದೇ ಕಾರಣಕ್ಕೆ ಸರಕಾರಿ ಕೋಟಾದ ಅಡಿಯಲ್ಲಿ ವೈದ್ಯಕೀಯ ಪದವಿ ಪಡೆದವರು ಕನಿಷ್ಟ 1 ವರ್ಷ ಕಡ್ಡಾಯವಾಗಿ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಬೇಕು. ಇಲ್ಲದಿದ್ದರೆ ಸರಕಾರಕ್ಕೆ 1 ಲಕ್ಷ ದಂಡ ಪಾವತಿಸಬೇಕು ಎಂಬ ಕಾನೂನಿದೆ. ಕೋರ್ಸ್ ಮುಗಿಸುವ ವೈದ್ಯರು 1 ಲಕ್ಷ ದಂಡ ಪಾವತಿಸಲು ಸಿದ್ಧರಿದ್ದಾರೆ. ಆದರೆ ಗ್ರಾಮೀಣ ಭಾಗದಲ್ಲಿ ಕೆಲಸ ಮಾಡಲು ಸಿದ್ದರಿಲ್ಲ. ಹೀಗೆ ದಂಡದ ರೂಪದಲ್ಲಿ ಸರಕಾರಕ್ಕೆ ಬರಬೇಕಿರುವ ಹಣ ಸುಮಾರು 260 ಕೋಟಿ ಎಂದು ಅಂದಾಜಿಸಲಾಗಿದೆ. ದಂಡ ವಸೂಲಿಯಲ್ಲೂ ಸಾಕಷ್ಟು ಅಕ್ರಮ ನಡೆದ ಹಿನ್ನೆಲೆ ಹೈಕೋರ್ಟ್ ಈ ಅಕ್ರಮವನ್ನು ಬಯಲಿಗೆಳೆದಿದೆ.

ಇಲ್ಲಿ ಪ್ರಾಣಕ್ಕಿಲ್ಲ ಕಿಮ್ಮತ್ತು:

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡುವ ಅಂಕಿಅಂಶಗಳ ಪ್ರಕಾರ, ದೇಶದ ಗ್ರಾಮೀಣ ಭಾಗಗಳಲ್ಲಿ ಚಿಕಿತ್ಸೆಗಾಗಿ ಈಗಲೂ ಜನ ಸರಾಸರಿ 100 ಕಿ. ಮೀ. ದೂರ ಕ್ರಮಿಸಬೇಕಾದ ಪರಿಸ್ಥಿತಿ ಇದೆ. ಈ ವಿಚಾರದಲ್ಲಿ ಕರ್ನಾಟಕವೂ ಹಿಂದೆ ಉಳಿದಿಲ್ಲ. ರಾಜ್ಯದ ಬಹುತೇಕ ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ಸೇವೆಯನ್ನು ಒದಗಿಸಲು ಈಗಲೂ ಸರಕಾರ ತಿಣುಕಾಡುತ್ತಿದೆ. ದಕ್ಷಿಣ ಭಾರತದ ರಾಜ್ಯಗಳ ಪೈಕಿ ನೆರೆಯ ತಮಿಳುನಾಡು ಮತ್ತು ಕೇರಳಕ್ಕಿಂತ ಆರೋಗ್ಯ ಸೇವೆಯಲ್ಲಿ ಕರ್ನಾಟಕದ ಸಾಧನೆ ತೀರಾ ಕಳಪೆ ಎನ್ನುತ್ತಿವೆ ಅಂಕಿಅಂಶಗಳು.

10 ಸಾವಿರ ಜನ ಇರುವ ಪ್ರದೇಶಕ್ಕೆ ಕನಿಷ್ಟ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ, ನುರಿತ ವೈದ್ಯರ ತಂಡ ಹಾಗೂ ವೈದ್ಯಕೀಯ ಸಹಾಯಕರು ಕಡ್ಡಾಯವಾಗಿ ಇರಲೇಬೇಕು ಎಂಬ ಕಾನೂನಿದೆ.

ಆದರೆ ಈ ಎಲ್ಲಾ ಕಾನೂನುಗಳು ಕೇವಲ ಕಾಗದಗಳಿಗಷ್ಟೇ ಸೀಮಿತವಾಗಿರುವ ಪರಿಣಾಮ, ಗ್ರಾಮೀಣ ಭಾಗದ ಜನ ಸಣ್ಣ ಜ್ವರಕ್ಕೂ ಸಹ ಇಂದು ಮೈಲಿ ಗಟ್ಟಲೆ ನಡೆಯಬೇಕಾದ ಪರಿಸ್ಥಿತಿ ಇದೆ. ಉತ್ತರ ಕರ್ನಾಟಕದ ಯಾದಗಿರಿ, ಗುಲ್ಬರ್ಗ, ರಾಯಚೂರು, ಕೊಪ್ಪಳ, ಬಳ್ಳಾರಿ, ಬೀದರ್, ಬಾಗಲಕೋಟೆ ಹಾಗೂ ದಕ್ಷಿಣ ಕರ್ನಾಟಕದ ಚಾಮರಾಜನಗರ ರಾಜ್ಯದಲ್ಲೇ ಅತ್ಯಂತ ಕಳಪೆ ಆರೋಗ್ಯ ಸೇವೆ ಹೊಂದಿರುವ ಜಿಲ್ಲೆಗಳು ಎಂದು ಸರಕಾರಿ ಅಂಕಿಅಂಶಗಳೇ ಹೇಳುತ್ತವೆ.

ಯಾದಗಿರಿ ಜಿಲ್ಲಾಸ್ಪತ್ರೆ ಹಿಂದೊಮ್ಮೆ ಅವ್ಯವಸ್ಥೆ ಕಾರಣಕ್ಕೆ ಸುದ್ದಿಯಾಗಿತ್ತು. ಜಿಲ್ಲಾ ಕೇಂದ್ರಗಳಲ್ಲಿರುವ ಸರಕಾರ ಆಸ್ಪತ್ರೆಗಳ ಪರಿಸ್ಥಿತಿಯೇ ಹೀಗಿದ್ದರೆ, ಇನ್ನು ತಾಲೂಕು ಹಾಗೂ ಗ್ರಾಮಾಂತರ ಭಾಗಗಳಲ್ಲಿ ಸ್ಥಿತಿ ಇನ್ನೂ ಶೋಚನೀಯವಾಗಿದೆ. 
ಯಾದಗಿರಿ ಜಿಲ್ಲಾಸ್ಪತ್ರೆ ಹಿಂದೊಮ್ಮೆ ಅವ್ಯವಸ್ಥೆ ಕಾರಣಕ್ಕೆ ಸುದ್ದಿಯಾಗಿತ್ತು. ಜಿಲ್ಲಾ ಕೇಂದ್ರಗಳಲ್ಲಿರುವ ಸರಕಾರ ಆಸ್ಪತ್ರೆಗಳ ಪರಿಸ್ಥಿತಿಯೇ ಹೀಗಿದ್ದರೆ, ಇನ್ನು ತಾಲೂಕು ಹಾಗೂ ಗ್ರಾಮಾಂತರ ಭಾಗಗಳಲ್ಲಿ ಸ್ಥಿತಿ ಇನ್ನೂ ಶೋಚನೀಯವಾಗಿದೆ. 

ಈ ಜಿಲ್ಲೆಯ ಗ್ರಾಮೀಣ ಭಾಗಗದ ಶೇ. 60 ಕ್ಕೂ ಹೆಚ್ಚು ಜನರಿಗೆ ಈಗಲೂ ಸರಕಾರದ ಆರೋಗ್ಯ ಸೇವೆಗಳು ತಲುಪಿಲ್ಲ. ಇನ್ನೂ ಹಲವು ಭಾಗಗಳಲ್ಲಿ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳಿರಲಿ, ದ್ವಿತೀಯ ಮತ್ತು ತೃತೀಯ ಆರೋಗ್ಯ ಸೇವೆಗಳನ್ನೂ ಜನರಿಗೆ ಒದಗಿಸಲು ಸಾಧ್ಯವಾಗುತ್ತಿಲ್ಲ.

ಪರಿಣಾಮ, ಗರ್ಭಿಣಿ ಸ್ತ್ರೀಯರಿಗೆ ಸರಿಯಾದ ಚಿಕಿತ್ಸೆ ಲಭ್ಯವಾಗುತ್ತಿಲ್ಲ. ಆಸ್ಪತ್ರೆ ಸೌಲಭ್ಯಗಳಿಲ್ಲದೆ ಶೇ.40 ರಷ್ಟು ಮಹಿಳೆಯರಿಗೆ ಮನೆಯಲ್ಲೇ ಹೆರಿಗೆಯಾಗುತ್ತಿದೆ. ಶೇ.45 ರಷ್ಟು ಮಹಿಳೆಯರು ಸಹಜ ಹೆರಿಗೆಯಾಗದೆ ಖಾಸಗಿ ಆಸ್ಪತ್ರೆಗಳಲ್ಲಿ ಶಸ್ತ್ರ ಚಿಕಿತ್ಸೆಗಳ ಮೂಲಕ ಹೆರಿಗೆ ಮಾಡಿಸಿಕೊಳ್ಳುತ್ತಿದ್ದಾರೆ. ರಾಜ್ಯದ ಗ್ರಾಮೀಣ ಭಾಗದಲ್ಲಿ ಸರಿಯಾದ ಚಿಕಿತ್ಸೆ ಇಲ್ಲದೆ ಹಾವು ಕಡಿದು ಸಾಯುವವರ ಸಂಖ್ಯೆಯೇ ವರ್ಷಕ್ಕೆ 10 ಸಾವಿರ ದಾಟುತ್ತಿದೆ. ಇದು ಪರಿಸ್ಥಿತಿ.

ಸರಕಾರಿ ಆಸ್ಪತ್ರೆಗಳಿಲ್ಲ, ವೈದ್ಯರೂ ಇಲ್ಲ:

ಸುಸಜ್ಜಿತ ಆಸ್ಪತ್ರೆ ಕಟ್ಟಡಗಳು ಹಾಗೂ ನುರಿತ ವೈದ್ಯರು ಇಲ್ಲದೆ ಇರುವುದು ರಾಜ್ಯದ ಗ್ರಾಮೀಣ ಭಾಗದ ಜನರ ಸಾವಿನ ಪ್ರಮಾಣದಲ್ಲಿ ಏರಿಕೆ ಕಾಣುತ್ತಿರುವುದಕ್ಕೆ ಕಾರಣಗಳಲ್ಲೊಂದು. ಕರ್ನಾಟಕದಲ್ಲಿ ಶೇ.20ರಷ್ಟು ಭಾಗಗಳಲ್ಲಿ ಆಸ್ಪತ್ರೆಗೆ ಸರಿಯಾದ ಕಟ್ಟಡಗಳೇ ಇಲ್ಲ.

ರಾಜ್ಯದಲ್ಲಿ ಸುಮಾರು 2353 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಈ ಚಿಕಿತ್ಸಾ ಕೇಂದ್ರಗಳ ಪೈಕಿ ಬಹುಪಾಲು ಕೇಂದ್ರಗಳು ಸುಸಜ್ಜಿತವಲ್ಲದ ಬಾಡಿಗೆ ಕಟ್ಟಡಗಳನ್ನೇ ಅವಲಂಭಿಸಿವೆ. ಇನ್ನು ಅನೇಕ ಜಿಲ್ಲೆಗಳಲ್ಲಿ ಚಿಕಿತ್ಸಾ ಕೇಂದ್ರಗಳೇ ಇಲ್ಲದ ಪರಿಸ್ಥಿತಿ ಇದೆ.

ಗ್ರಾಮೀಣ ಭಾಗಕ್ಕೆ ಸೇವೆಗೆ ಬರಲು ವೈದ್ಯರು ಸಹ ಹಿಂದೇಟು ಹಾಕುತ್ತಿರುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ರಾಜ್ಯದ ಪ್ರಾಥಮಿಕ ಕೇಂದ್ರಗಳಿಗೆ 2353 ಸಾಮಾನ್ಯ ವೈದ್ಯರ ಅವಶ್ಯಕತೆ ಇದೆ. ಆದರೆ ಈವರೆಗೆ 157 ಜನ ವೈದ್ಯರು ಗ್ರಾಮೀಣ ಭಾಗದಲ್ಲಿ ಸೇವೆಗೆ ನಿಯೋಜನೆಯಾಗಲು ಹಿಂದುಮುಂದು ನೋಡುತ್ತಿದ್ದಾರೆ. 824 ನುರಿತ ವೈದ್ಯರ ಅವಶ್ಯಕತೆ ಇದ್ದು 322 ಹುದ್ದೆ ಖಾಲಿ ಇದೆ. ಇತರೆ ವಿಭಾಗದ ವೈದ್ಯರ ಅವಶ್ಯಕತೆ 2765 ಇದ್ದು ಈ ಪೈಕಿ ಶೇ.40 ರಷ್ಟು ವೈದ್ಯರ ಕೊರತೆ ಇದೆ.

9264 ಆರೋಗ್ಯ ಸೇವೆ ಸಹಾಯಕರ ಅಗತ್ಯವಿದೆ. ಇದಲ್ಲದೆ ಸರ್ಸಿಂಗ್, ಲ್ಯಾಬ್ ಟೆಕ್ನೀಷಿಯನ್, ಬ್ಲಡ್ ಬ್ಯಾಂಕ್ ಸೇರಿದಂತೆ ಅನೇಕ ಉದ್ಯೋಗಗಳು ಖಾಲಿ ಇವೆ. ಒಂದೆಡೆ ವೈದ್ಯರು ಗ್ರಾಮೀಣ ಭಾಗಕ್ಕೆ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದರೆ, ಮತ್ತೊಂದೆಡೆ ಸರಕಾರವೇ ಉಳಿದ ನೌಕರರನ್ನು ನೇಮಿಸಲು ಮುಂದಾಗದಿರುವುದು ಕೂಡ ಕನಿಷ್ಟ ಆರೋಗ್ಯ ಸೇವೆ ನೀಡುವುದರ ಮೇಲೆ ಪರಿಣಾಮ ಬೀರುತ್ತಿದೆ.

ಖಾಸಗಿಯವರಿಗೆ ಬಂಪರ್:

ಆರೋಗ್ಯ ಕ್ಷೇತ್ರವನ್ನು ಎಷ್ಟು ಗಂಭೀರವಾಗಿ ನಮ್ಮ ಸರಕಾರಗಳು ತೆಗೆದುಕೊಂಡಿವೆ ಎಂಬುದಕ್ಕೆ ಮೇಲಿನ ಗ್ರಾಫ್‌ ಸಾಕ್ಷಿ. 
ಆರೋಗ್ಯ ಕ್ಷೇತ್ರವನ್ನು ಎಷ್ಟು ಗಂಭೀರವಾಗಿ ನಮ್ಮ ಸರಕಾರಗಳು ತೆಗೆದುಕೊಂಡಿವೆ ಎಂಬುದಕ್ಕೆ ಮೇಲಿನ ಗ್ರಾಫ್‌ ಸಾಕ್ಷಿ. 
/ಅಲ್‌ ಜಝೀರಾ. 

ಇಡೀ ವಿಶ್ವದಲ್ಲೇ ಆರೋಗ್ಯ ಸೇವೆಗೆ ಅತ್ಯಂತ ಕಡಿಮೆ ಹಣವನ್ನು ವಿನಿಯೋಗಿಸುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಮುಂಚೂಣಿಯಲ್ಲಿದೆ. ದೇಶದ ಜಿಡಿಪಿಯ ಕೇವಲ ಶೇ.1 ರಷ್ಟು ಹಣವನ್ನು ಮಾತ್ರ ಕೇಂದ್ರ ಸರಕಾರ ಆರೋಗ್ಯ ಸೇವೆಗಳ ಮೇಲೆ ವಿನಿಯೋಗಿಸುತ್ತಿದೆ. ರಾಜ್ಯದಲ್ಲೂ ಈ ಪರಿಸ್ಥಿತಿ ಆಶಾದಾಯಕವಾಗೇನು ಇಲ್ಲ. ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ಸೇವೆಯನ್ನು ಸುಧಾರಿಸುವ ಬದಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಇಡೀ ಆರೋಗ್ಯ ವ್ಯವಸ್ಥೆಯನ್ನೇ ಖಾಸಗಿ ವಲಯಕ್ಕೆ ಮಾರಿಕೊಂಡಿದೆ. ಯಾವ ಜಿಲ್ಲೆಗಳಲ್ಲೂ ಸಹ ಸುಸಜ್ಜಿತವಾದ ಸರಕಾರಿ ಆಸ್ಪತ್ರೆಗಳಾಗಲಿ ನುರಿತ ವೈದ್ಯರ ತಂಡವಾಗಲಿ ಇಲ್ಲ. ಪರಿಣಾಮ ಜನ ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳ ಕಡೆಗೆ ಮುಖಮಾಡಿದ್ದಾರೆ.

ಇದರ ಲಾಭವನ್ನು ಸರಿಯಾಗಿ ಬಳಸಿಕೊಳ್ಳುತ್ತಿರುವ ಖಾಸಗಿ ಆಸ್ಪತ್ರೆಗಳು ಎಲ್ಲಾ ಚಿಕಿತ್ಸೆಗೂ ತಮಗಿಷ್ಟ ಬಂದಂತೆ ದರ ನಿಗದಿ ಪಡಿಸುತ್ತಿವೆ. ಖಾಸಗಿ ಅಸ್ಪತ್ರೆಗಳಲ್ಲಿ ದರ ನಿಗದಿಪಡಿಸುವ ಹಕ್ಕು ಸಹ ಸರಕಾರಕ್ಕೆ ಇಲ್ಲದಂತಾಗಿದೆ. ಪರಿಣಾಮ ದುಬಾರಿ ಚಿಕಿತ್ಸೆ ಪಡೆಯಲು ಹಣವಿಲ್ಲದೆ ಬಡವರು ಖಾಸಗಿ ಆಸ್ಪತ್ರೆಯ ಹೆಸರು ಕೇಳಿದರೆ ಭಯಬೀಳಬೇಕಿದೆ. ಅಂಕಿಅಂಶಗಳ ಪ್ರಕಾರ, ಕರ್ನಾಟಕ ಗ್ರಾಮೀಣ ಭಾಗದಲ್ಲಿ ದುಬಾರಿ ಚಿಕಿತ್ಸೆಗೆ ಹಣವಿಲ್ಲದೆ ಸಾವನ್ನು ಎದುರು ನೋಡುತ್ತಾ ಕೂತಿರುವ ರೋಗಿಗಳ ಸಂಖ್ಯೆ ಕನಿಷ್ಟ ಶೇ.38. ಪರಿಸ್ಥಿತಿಯ ಗಂಭೀರತೆ ಹೀಗಿದೆ.

ಸರಕಾರಿ ಆದೇಶಕ್ಕೂ ಕಿಮ್ಮತ್ತಿಲ್ಲ:

ರಾಜ್ಯದಲ್ಲಿ 27 ವೈದ್ಯಕೀಯ ಕಾಲೇಜುಗಳಿವೆ. ಇವುಗಳ ಪೈಕಿ ಬಹುತೇಕ ಖಾಸಗಿ ಕಾಲೇಜುಗಳು. ಈವರೆಗೆ ಎಲ್ಲಾ ಸರಕಾರಗಳು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ವೈದ್ಯಕೀಯ ಕೋರ್ಸ್ ಆರಂಭಿಸಲು ಪರವಾನಗಿಯನ್ನು ಎಗ್ಗಿಲ್ಲದೆ ನೀಡಿವೆ. ಪರಿಣಾಮ ದೇಶದ ನಾನಾ ಕಡೆಗಳಿಂದ ಬಂದ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಲಕ್ಷಾಂತರ ಡೊನೇಷನ್ ನೀಡಿ ಈ ಕಾಲೇಜುಗಳಲ್ಲಿ ಶಿಕ್ಷಣ ಪಡೆಯಲು ಆಗಮಿಸುತ್ತಿದ್ದಾರೆ. ಈ ಸಂಸ್ಥೆಗಳಲ್ಲಿ ಕೆಲ ಸೀಟುಗಳನ್ನು ನೆಪಕ್ಕೆ ಎಂಬಂತೆ ಸರಕಾರಕ್ಕೆ ನೀಡಲಾಗುತ್ತದೆ. ಅಲ್ಲದೆ ಸರಕಾರಿ ಕೋಟಾದ ಅಡಿಯಲ್ಲಿ ವೈದ್ಯಕೀಯ ಶಿಕ್ಷಣ ಪಡೆದ ವಿದ್ಯಾರ್ಥಿಯು ಕನಿಷ್ಟ ಒಂದು ವರ್ಷಗಳ ಕಾಲ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಬೇಕು, ಇಲ್ಲದಿದ್ದರೆ ಸರಕಾರಕ್ಕೆ 1 ಲಕ್ಷ ದಂಡ ತೆರಬೇಕು ಎಂಬ ನಿಯಮವಿದೆ. ಆದರೆ ಯಾವ ವಿದ್ಯಾರ್ಥಿಯೂ ಈ ನಿಯಮವನ್ನು ಪಾಲಿಸುತ್ತಿಲ್ಲ. ಬದಲಾಗಿ ಸರಕಾರಕ್ಕೆ ಒಂದು ಲಕ್ಷ ದಂಡ ತೆರಲು ಸಿದ್ಧವಿದ್ದಾರೆ.

ಚಿತ್ರ ಸಾಂದರ್ಭಿಕ. 
ಚಿತ್ರ ಸಾಂದರ್ಭಿಕ. 

ನೆರಯ ಕೇರಳ ರಾಜ್ಯದಲ್ಲಿ 9 ವೈದ್ಯಕೀಯ ಕಾಲೇಜುಗಳಿದ್ದು ಇವೆಲ್ಲಾ ಸರಕಾರಿ ವೈದ್ಯಕೀಯ ಕಾಲೇಜುಗಳೇ ಆಗಿವೆ. ಇಲ್ಲಿ ಶಿಕ್ಷಣ ಪಡೆದವರು ಗ್ರಾಮೀಣ ಭಾಗದಲ್ಲಿ ಕಡ್ಡಾಯ ಸೇವೆ ಮಾಡಬೇಕು ಎಂಬ ನಿಯಮವನ್ನು ಕಠಿಣವಾಗಿ ಪಾಲಿಸಲಾಗುತ್ತಿದೆ. ವೈದ್ಯಕೀಯ ಸೇವೆಯನ್ನು ಸರಕಾರವೇ ನಿಭಾಯಿಸುತ್ತಿದ್ದು ಇಲ್ಲಿ ಖಾಸಗಿಯವರಿಗೆ ಜಾಗವಿಲ್ಲ. ಪರಿಣಾಮ ಸರಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆ ಸಿಗುತ್ತಿದೆ.

ಅಂಕಿಅಂಶಗಳ ಪ್ರಕಾರ, ಕೇರಳದಲ್ಲಿ ಓರ್ವ ವ್ಯಕ್ತಿ ತಾನು ಜೀವಮಾನವಿಡೀ ದುಡಿದ ಹಣದ ಶೇ.8 ರಷ್ಟು ಹಣವನ್ನು ಮಾತ್ರ ಆರೋಗ್ಯ ಸೇವೆಗೆ ಖರ್ಚು ಮಾಡುತ್ತಿದ್ದಾನೆ. ಆದರೆ ಕರ್ನಾಟಕದಲ್ಲಿ ಓರ್ವ ವ್ಯಕ್ತಿ ಸುಮಾರು ಶೇ.26 ಕ್ಕೂ ಅಧಿಕ ಹಣವನ್ನು ಆರೋಗ್ಯಕ್ಕಾಗಿ ಖರ್ಚು ಮಾಡುತ್ತಿದ್ದಾನೆ.

ಕರ್ನಾಟಕದಲ್ಲಿ ಸರಕಾರಿ ಕೋಟಾದ ಅಡಿಯಲ್ಲಿ, ಬಡವರ ತೆರಿಗೆ ಹಣದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಹಳ್ಳಿಗಾಡಿನಲ್ಲಿ ಸೇವೆ ಸಲ್ಲಿಸಲು ತಯಾರಿಲ್ಲ. ಗ್ರಾಮೀಣ ಭಾಗದಲ್ಲಿ ಕಡ್ಡಾಯವಾಗಿ ವೈದ್ಯಕೀಯ ಸೇವೆ ಸಲ್ಲಿಸಲೇಬೇಕು ಎಂಬುದಕ್ಕೆ ಕಠಿಣ ನೀತಿ ನಿರೂಪಣೆ ರಾಜ್ಯದಲ್ಲಿಲ್ಲ. ಕೇವಲ 1 ಲಕ್ಷ ದಂಡ ಕಟ್ಟಿ ಎಲ್ಲರೂ ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ದಂಡದ ಪ್ರಮಾಣವನ್ನು 10 ಲಕ್ಷಕ್ಕೆ ಏರಿಸಿ ಎಂಬ ಕೂಗು ಸಹ ಕೇಳಿ ಬಂದಿತ್ತು. ಆದರೆ ಈ ಬಗ್ಗೆ ಆಸ್ತೆ ವಹಿಸದ ಸರಕಾರ, ದಂಡ ವಸೂಲಿಯಲ್ಲೂ ಭ್ರಷ್ಟಾಚಾರವೆಸಗಿತು.

ದೇಶದಲ್ಲೇ ಮೊದಲ ಬಾರಿಗೆ ಆರೋಗ್ಯಕ್ಕಾಗಿ ಕಾಯ್ದೆ ರೂಪಿಸಿದ ರಾಜ್ಯ ಎಂಬ ಹೆಗ್ಗಳಿಕೆ ಕರ್ನಾಟಕಕ್ಕಿದೆ. 2014 ರಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ ಆರೋಗ್ಯಕ್ಕೆ ಪತ್ರ್ಯೇಕ ಕಾಯ್ದೆ ರೂಪಿಸಲಾಗಿತ್ತು. ಜನರ ಆರೋಗ್ಯ ಸೇವೆಗಾಗಿ ಹಣ ಮೀಸಲಿಡಲಾಗಿತ್ತು. ಆದರೆ ಇವೆಲ್ಲಾ ಘೋಷಣೆಗಳು ಹಾಗೂ ಯೋಜನೆಗಳು ಕಾಗದಗಳಲ್ಲೇ ಉಳಿದ ಪರಿಣಾಮ ಗುಣಮಟ್ಟದ ಚಿಕಿತ್ಸೆ ಎಂಬುದು ಜನರಿಗೆ ಈಗಲೂ ಗಗನ ಕುಸುಮವಾಗಿಯೇ ಉಳಿದಿದೆ. ಅಲ್ಲದೆ ಇಂದಿನ ದಿನಗಳಲ್ಲಿ ಆರೋಗ್ಯ ಸೇವೆ ಸೇರಿದಂತೆ ಎಲ್ಲವೂ ಖಾಸಗಿ ಹಿಡಿತದಲ್ಲೇ ಇರುವ ಕಾರಣ ಇಂತಹ ಒಂದು ಸಾಧ್ಯತೆಯನ್ನು ಎದುರು ನೋಡುವುದು ಸಹ ಅಸಾಧ್ಯ.