samachara
www.samachara.com
ಒಂದೇ ದೇಶಕ್ಕೆ ಇಬ್ಬರು ಅಧ್ಯಕ್ಷರು; ವೆನಿಜುವೆಲಾ ಕಲಹದಲ್ಲಿ ಮೂಗು ತೂರಿಸಿದ ಅಮೆರಿಕಾ-ರಷ್ಯಾ
COVER STORY

ಒಂದೇ ದೇಶಕ್ಕೆ ಇಬ್ಬರು ಅಧ್ಯಕ್ಷರು; ವೆನಿಜುವೆಲಾ ಕಲಹದಲ್ಲಿ ಮೂಗು ತೂರಿಸಿದ ಅಮೆರಿಕಾ-ರಷ್ಯಾ

ವೆನಿಜುವೆಲಾ ಅಧ್ಯಕ್ಷ ನಿಕೋಲಸ್ ಮದುರೋ ಅಮೆರಿಕಾದ ರಾಜತಾಂತ್ರಿಕರಿಗೆ ದೇಶ ಬಿಡಲು 72 ಗಂಟೆಗಳ ಗಡುವು ನೀಡಿದ್ದಾರೆ.

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಅರಾಜಕರತೆಯಲ್ಲೇ ಕಳೆದೆರಡು ವರ್ಷಗಳಿಂದ ಮುಳುಗೇಳುತ್ತಿರುವ ಲ್ಯಾಟಿನ್‌ ಅಮೆರಿಕಾದ ತೈಲ ಸಂಪದ್ಭರಿತ ದೇಶ ವೆನಿಜುವೆಲಾದಲ್ಲಿ ಬುಧವಾರದಿಂದ ಹೊಸ ಸಮಸ್ಯೆ ಸೃಷ್ಟಿಯಾಗಿದೆ. ಬುಧವಾರ ವಿರೋಧ ಪಕ್ಷದ ನಾಯಕ ಜುವಾನ್‌ ಗೈಡೋ ರಾಜಧಾನಿ ಕರಾಕಸ್‌ ಬೀದಿಯಲ್ಲಿ ಸುಮಾರು ಹತ್ತು ಸಾವಿರ ಜನರ ಜತೆ ನಿಂತು ತನ್ನನ್ನು ತಾನು ಹಂಗಾಮಿ ಅಧ್ಯಕ್ಷ ಎಂದು ಘೋಷಿಸಿಕೊಳ್ಳುವ ಮೂಲಕ ಹೊಸ ಬಿಕ್ಕಟ್ಟಿಗೆ ನಾಂದಿ ಹಾಡಿದ್ದಾರೆ.

ಇದರಿಂದ ಸಿಟ್ಟಿಗೆದ್ದಿರುವ ಹಾಲಿ ಅಧ್ಯಕ್ಷ ನಿಕೋಲಸ್‌ ಮದುರೋ ಗೈಡೋಗೆ ಬೆಂಬಲ ನೀಡಿದ ಅಮೆರಿಕಾದ ಮೇಲೆ ಕೆಂಡಕಾರಿದ್ದಾರೆ. ಅಮೆರಿಕಾ ಜತೆಗಿನ ಸಂಬಂಧವನ್ನು ವೆನಿಜುವೆಲಾ ಅಧಿಕೃತವಾಗಿ ಮುರಿದುಕೊಂಡಿದೆ ಎಂದು ಘೋಷಿಸಿರುವ ಅವರು, ದೇಶ ಬಿಡಲು ರಾಯಭಾರಿಗಳಿಗೆ 72 ಗಂಟೆಗಳ ಗಡುವು ನೀಡಿದ್ದಾರೆ. ಬುಧವಾರ ಸಂಜೆ ಮಾಧ್ಯಮಗಳ ಮೂಲಕ ಅಧ್ಯಕ್ಷರ ನಿವಾಸದಿಂದ ಮಾತನಾಡಿರುವ ಅವರು, ‘ನಿಮ್ಮ ಮಧ್ಯ ಪ್ರವೇಶ ಸಾಕು’ ಎಂದು ಅಮೆರಿಕಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದೇ ದೇಶಕ್ಕೆ ಇಬ್ಬರು ಅಧ್ಯಕ್ಷರು!

ಇದಕ್ಕೂ ಮೊದಲು ರ್ಯಾಲಿಯನ್ನುದ್ದೇಶಿ ಮಾತನಾಡಿದ್ದ 35 ವರ್ಷದ ಗೈಡೋ, ದೇಶದ ಅಧ್ಯಕ್ಷ ಮದುರೋ ಅಧಿಕಾರವನ್ನು ಕಿತ್ತುಕೊಂಡಿದ್ದಾರೆ ಎಂದು ಹರಿಹಾಯ್ದಿದ್ದರು. ಮಾತ್ರವಲ್ಲದೆ ನಾನು ಅಧ್ಯಕ್ಷನಾದರೆ ಅಧಿಕ ಹಣದುಬ್ಬರದಿಂದ ಕುಸಿದಿರುವ ಆರ್ಥಿಕತೆಯನ್ನು ಮೇಲೆತ್ತುವುದಾಗಿ ಭರವಸೆ ನೀಡಿದ್ದರು. ಹೀಗೆ ಹೇಳುತ್ತಲೇ ನಾನೀಗ ಹಂಗಾಮಿ ಅಧ್ಯಕ್ಷ ಎಂದು ಘೋಷಿಸಿಕೊಂಡಿದ್ದರು. ‘ಇದಕ್ಕಾಗಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ’ ಎಂದು ತಮ್ಮ ಬೆಂಬಲಿಗರನ್ನು ಎಚ್ಚರಿಸಿದ್ದ ಅವರು ಭಾಷಣ ಮುಗಿಸಿ ಅಜ್ಞಾತ ಸ್ಥಳಕ್ಕೆ ತೆರಳಿದ್ದರು.

ಬುಧವಾರ ತಾನೇ ಅಧ್ಯಕ್ಷ ಎಂದು ಸ್ವಘೋಷಣೆ ಮಾಡಿಕೊಂಡ ಜುವಾನ್‌ ಗೈಡೋ.
ಬುಧವಾರ ತಾನೇ ಅಧ್ಯಕ್ಷ ಎಂದು ಸ್ವಘೋಷಣೆ ಮಾಡಿಕೊಂಡ ಜುವಾನ್‌ ಗೈಡೋ.

ಭಾಷಣದ ಬೆನ್ನಿಗೆ ಗೈಡೋ ಬಂಬಲಿಗರ ಸಂಖ್ಯೆ ದೊಡ್ಡ ಮಟ್ಟಕ್ಕೆ ಏರಿಕೆಯಾಗಿದ್ದು ತೈಲ ಸಂಪದ್ಭತರಿತ ದೇಶದಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿದೆ. ತಾನು ಅಧ್ಯಕ್ಷ ಎಂದು ಘೋಷಿಸಿಕೊಳ್ಳುವುದರೊಂದಿಗೆ ಮದುರೋಗೆ ಸಮನಾಂತರವಾಗಿ ಗೈಡೋ ಸರಕಾರವನ್ನು ಮುನ್ನಡೆಸಲು ಹೊರಟಂತೆ ಕಾಣಿಸುತ್ತಿದೆ. ಜತೆಗೆ ಅವರು ತಮ್ಮ ಅಧ್ಯಕ್ಷೀಯ ಹುದ್ದೆಗೆ ಅಂತರಾಷ್ಟ್ರೀಯ ಮಾನ್ಯತೆಯನ್ನು ಪಡೆದುಕೊಳ್ಳಲು ಯತ್ನಿಸುತ್ತಿದ್ದಾರೆ.

ಇತ್ತ ಮದುರೋ ಸರಕಾರದ ನಿಯಂತ್ರಣವನ್ನು ಬಿಟ್ಟು ಕೊಡದೇ ಇರುವುದು ಗೈಡೋಗೆ ಅಡ್ಡಿಯಾಗಿದೆ. ಅದರಲ್ಲೂ ಮುಖ್ಯವಾಗಿ ಸೇನೆ ಮದುರೋ ಬೆನ್ನಿಗೆ ನಿಂತಿದೆ. ಈ ಹಿಂದೆ ನಡೆದ ಎರಡು ಬೃಹತ್‌ ಬೀದಿ ಹೋರಾಟಗಳನ್ನು ಹತ್ತಿಕ್ಕಿ ಸೇನೆ ಮದುರೋ ಕುರ್ಚಿಯನ್ನು ರಕ್ಷಿಸಿತ್ತು. ಈ ಹಿನ್ನೆಲೆಯಲ್ಲಿ ಗೈಡೋ ಸ್ವಘೋಷಣೆ ಸಂಘರ್ಷದಲ್ಲೇ ಮಿಂದೇಳುತ್ತಿರುವ ದೇಶದಲ್ಲಿ ಹೊಸ ಆತಂಕ ಮೂಡಿಸಿದೆ.

ಬಿಕ್ಕಟ್ಟಿನ ಬೆಂಕಿಗೆ ಅಮೆರಿಕಾ ತುಪ್ಪ:

ಈ ಕುರಿತು ಹೇಳಿಕೆ ನೀಡಿರುವ ವೆನಿಜುವೆಲಾ ರಕ್ಷಣಾ ಸಚಿವ ವ್ಲಾದಿಮೀರ್‌ ಪ್ಯಾಡ್ರಿನೋ, ಸೇನೆ ಸ್ವಘೋಷಿತ ನಾಯಕನನ್ನು ಒಪ್ಪಿಕೊಳ್ಳುವುದಿಲ್ಲ ಎಂದಿದ್ದಾರೆ. ಆದರೆ ಗೈಡೋ ಘೋಷಣೆ ಬೆನ್ನಿಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕಾ ಅಧ್ಯಕ್ಷ ಟ್ರಂಪ್‌ ಮಧ್ಯಂತರ ನಾಯಕರನ್ನು ಒಪ್ಪಿಕೊಳ್ಳುವುದಾಗಿ ಹೇಳಿದ್ದಾರೆ. “ವೆನಿಜುವೆಲಾ ಜನರು ಧೈರ್ಯವಾಗಿ ಮದುರೋ ಆಡಳಿತದ ವಿರುದ್ಧ ಮಾತನಾಡಿದ್ದಾರೆ ಮತ್ತು ಸ್ವಾತಂತ್ರ್ಯ ಮತ್ತು ಕಾನೂನಾತ್ಮಕ ಆಡಳಿತವನ್ನು ಕೇಳಿಕೊಂಡಿದ್ದಾರೆ,” ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಟ್ರಂಪ್‌ ಹೇಳಿಕೆ ಬೆನ್ನಲ್ಲೆ ದಕ್ಷಿಣ ಅಮೆರಿಕಾ ಖಂಡದ ಪ್ರಮುಖ ದೇಶಗಳಾದ ಬ್ರೆಜಿಲ್‌, ಅರ್ಜೆಂಟೀನಾ, ಚಿಲಿ, ಪೆರು, ಕೊಲಂಬಿಯಾ ಗೈಡೋರನ್ನು ಬೆಂಬಲಿಸಿವೆ. ಆದರೆ ಮೆಕ್ಸಿಕೋ, ಕ್ಯೂಬಾ, ಟರ್ಕಿ, ರಷ್ಯಾ, ಚೀನಾ ಮತ್ತು ಬೊಲೀವಿಯಾ ಮದುರೋ ಬೆಂಬಲಕ್ಕೆ ನಿಂತಿವೆ.

ಕೆಲವು ವಿದೇಶಗಳ ಬೆಂಬಲವನ್ನು ಬೆನ್ನಿಗಿಟ್ಟುಕೊಂಡು ಅಮೆರಿಕಾ ವಿರುದ್ಧ ಸಮರ ಸಾರಿರುವ ಮದುರೋ ಎಲ್ಲಾ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಳ್ಳಲು ಮುಂದಾಗಿದ್ದಾರೆ. ಅಮೆರಿಕಾ ವೆನಿಜುವೆಲಾದ ಪ್ರಮುಖ ತೈಲ ಆಮದು ದೇಶವಾಗಿದ್ದು, ದೇಶದ ಪ್ರಮುಖ ಆದಾಯ ಮೂಲವಾಗಿತ್ತು. ಹೀಗಿದ್ದೂ ತಲೆ ಕೆಡಿಸಿಕೊಳ್ಳದ ಮದುರೋ ಅಮೆರಿಕಾದ ರಾಜತಾಂತ್ರಿಕರಿಗೆ ದೇಶ ಬಿಡಲು 72 ಗಂಟೆಗಳ ಗಡುವು ನೀಡಿದ್ದಾರೆ. ಅಷ್ಟೇ ಅಲ್ಲದೆ ಅಮೆರಿಕಾದಲ್ಲಿರುವ ವೆನಿಜುವೆಲಾ ದೂತವಾಸ ಕಚೇರಿಯನ್ನು ಮುಚ್ಚುವುದಾಗಿ ಘೋಷಿಸಿರುವ ಅವರು, ರಾಯಭಾರಿಗಳಿಗೆ ದೇಶಕ್ಕೆ ವಾಪಸಾಗುವಂತೆ ಸೂಚಿಸಿದ್ದಾರೆ.

ತಮ್ಮ ಬೆಂಬಲಿಗರತ್ತ ದೇಶದ ಧ್ವಜ ಬೀಸುತ್ತಿರುವ ಅಧ್ಯಕ್ಷ ನಿಕೋಲಸ್‌ ಮದುರೋ
ತಮ್ಮ ಬೆಂಬಲಿಗರತ್ತ ದೇಶದ ಧ್ವಜ ಬೀಸುತ್ತಿರುವ ಅಧ್ಯಕ್ಷ ನಿಕೋಲಸ್‌ ಮದುರೋ
/ಲಾಟೈಮ್ಸ್‌

ದೇಶ ಬಿಡುವಂತೆ ಅಮೆರಿಕಾ ರಾಯಭಾರಿಗಳಿಗೆ ಮದುರೋ ವಿಧಿಸಿರುವ ಗಡುವನ್ನು ಟ್ರಂಪ್‌ ಆಡಳಿತ ನಿರ್ಲಕ್ಷಿಸಿದ್ದು, ‘ಮಾಜಿ ಅಧ್ಯಕ್ಷ’ರಿಗೆ ಸಂಬಂಧ ಮುರಿದುಕೊಳ್ಳುವ ಹಕ್ಕಿಲ್ಲ ಎಂದು ಹೇಳಿದೆ.

ಅಮೆರಿಕಾದ ಈ ಮಾತಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಮದುರೋ, ಶೀತಲ ಸಮರದ ಅವಧಿಯಲ್ಲಿ ಲ್ಯಾಟಿನ್‌ ಅಮೆರಿಕಾದ ದೇಶಗಳ ಮೇಲೆ ಅಮೆರಿಕಾದ ಹಸ್ತಕ್ಷೇಪವನ್ನು ಪ್ರಸ್ತಾಪಿಸಿದ್ದಾರೆ. ಅಧ್ಯಕ್ಷರ ನಿವಾಸದಲ್ಲಿ ಕೆಂಪು ಬಟ್ಟೆ ತೊಟ್ಟು ನೆರೆದಿದ್ದ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿರುವ ಅವರು, ‘ವಿದೇಶಿಗರನ್ನು ನಂಬಬೇಡಿ’ ಎಂದು ಎಚ್ಚರಿಸಿದ್ದಾರೆ. ‘ಅವರಿಗೆ ಗೆಳೆಯರು, ಬೆಂಬಲಿಗರು ಯಾರೂ ಇಲ್ಲ. ಅವರಿಗೆ ವೆನಿಜುವೆಲಾದ ತೈಲ, ಗ್ಯಾಸ್‌, ಚಿನ್ನದ ಮೇಲೆ ಅಧಿಪತ್ಯ ಸ್ಥಾಪಿಸುವ ಆಸಕ್ತಿ ಮತ್ತು ಮಹತ್ವಾಕಾಂಕ್ಷೆ ಮಾತ್ರವಿದೆ,’ ಎಂದು ಅಬ್ಬರಿಸಿದ್ದಾರೆ.

ರಷ್ಯಾ ಎಂಟ್ರಿ:

ಮದುರೋ ಅಬ್ಬರಕ್ಕೆ ರಷ್ಯಾ ಸಾಥ್‌ ನೀಡಿದೆ. ಎಲ್ಲೆಲ್ಲಾ ಅಮೆರಿಕಾ ಮಧ್ಯ ಪ್ರವೇಶವಾಗುತ್ತದೋ ಅಲ್ಲೆಲ್ಲಾ ತನಗೂ ಹಕ್ಕಿದೆ ಎಂಬ ಅಲಿಖಿತ ನಿಯಮವನ್ನು ಪಾಲಿಸುತ್ತಾ ಬಂದಿರುವ ರಷ್ಯಾ, ವೆನಿಜುವೆಲಾ ರಾಜಕೀಯದಲ್ಲೂ ಕೈಯಾಡಿಸಲು ಬಂದಿದೆ. ಈ ಮೂಲಕ ಆಂತರಿಕ ಸಂಘರ್ಷದಿಂದ ಅಂತಾರಾಷ್ಟ್ರೀಯ ಸಂಘರ್ಷದ ಯುದ್ಧ ಭೂಮಿಯಾಗಿ ವೆನಿಜುವೆಲಾ ಮಾರ್ಪಡುವ ಲಕ್ಷಣಗಳು ಕಾಣಿಸಿಕೊಂಡಿವೆ.

ತಾನೇ ಅಧ್ಯಕ್ಷ ಎಂದು ಘೋಷಿಸಿಕೊಂಡಿರುವ ಗೈಡೋರನ್ನು, ‘ಅಮೆರಿಕಾ ಬೆಂಬಲಿತ ಕ್ಷಿಪ್ರ ಕ್ರಾಂತಿಯ ಯತ್ನ’ ಎಂದು ರಷ್ಯಾದ ಹಿರಿಯ ಅಧಿಕಾರಿಗಳು ಕರೆದಿದ್ದಾರೆ. “ಇದೆಲ್ಲವೂ ಆಗಿಂದಾಗೆ ಆಗಿದ್ದು ಎಂದು ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಬಹುಶಃ ಅಮೆರಿಕಾ ಸಂಯೋಜನೆಯಲ್ಲಿ ಈ ಪೂರ್ವ ನಿಯೋಜಿತ ಕೃತ್ಯ ನಡೆದಿದೆ,” ಎಂದು ಅಧಿಕಾರಿಗಳು ದೂರಿದ್ದಾರೆ.

ಇನ್ನು ಟರ್ಕಿ ಅಧ್ಯಕ್ಷ ರೆಸಿಪ್‌ ತಯ್ಯಿಪ್‌ ಎರ್ಡೋಗನ್‌ ಕೂಡ ಮದುರೋ ಬೆಂಬಲಕ್ಕೆ ನಿಂತಿದ್ದಾರೆ. ‘ಬ್ರದರ್‌ ಮದುರೋ, ತಲೆಕೆಡಿಸಿಕೊಳ್ಳಬೇಡ’ ಎಂಬ ಸಂದೇಶವನ್ನು ಅವರು ನೀಡಿದ್ದಾರೆ.

ಆದರೆ ಅಮೆರಿಕಾ ತನ್ನ ಪಟ್ಟು ಬಿಟ್ಟು ಕೊಡುತ್ತಿಲ್ಲ. ಅಮೆರಿಕಾ ಸೆಕ್ರೆಟರಿ ಆಫ್‌ ಸ್ಟೇಟ್‌ ಮೈಕ್‌ ಪೊಂಪೇವ್, ‘ವೆನಿಜುವೆಲಾ ಸೇನೆ ನಾಗರೀಕರ ಕಲ್ಯಾಣ ಮತ್ತು ಯೋಗಕ್ಷೇಮವನ್ನು ರಕ್ಷಿಸಬೇಕು’ ಎಂದು ಕರೆ ನೀಡಿದ್ದಾರೆ. ಈ ಮೂಲಕ ಗೈಡೋ ಬೆನ್ನಿಗೆ ನಿಲ್ಲುವಂತೆ ಕೇಳಿಕೊಂಡಿದ್ದಾರೆ. ರಾಯಭಾರಿಗಳಿಗೆ ವಿಧಿಸಿರುವ ಗಡುವನ್ನು ತಳ್ಳಿ ಹಾಕಿರುವ ಅವರು, ‘ಒಂದೊಮ್ಮೆ ಯಾರಾದರೂ ಅಮೆರಿಕಾ ಪ್ರಜೆಗಳಿಗೆ ಅಪಾಯ ಉಂಟು ಮಾಡಿದರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ,’ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಹಂಗಾಮಿ ಅಧ್ಯಕ್ಷರ ಮೂಲಕ ಅಮೆರಿಕಾ ರಾಜತಾಂತ್ರಿಕ ಸಂಬಂಧ ಹೊಂದಲಿದೆ ಎಂದಿರುವ ಅವರು ಭವಿಷ್ಯದ ದಾರಿಗಳನ್ನು ತೆರೆದಿಟ್ಟಿದ್ದಾರೆ.

ಇತ್ತೀಚೆಗೆ ಆಯ್ಕೆಗೊಂಡ ಬ್ರೆಜಿಲ್‌ ಬಲಪಂಥೀಯ ನಾಯಕ ಜೈರ್‌ ಬೊಲ್ಸ್‌ನಾರೋ ಕೂಡ ಗೈಡೋ ನಾಯಕತ್ವವನ್ನು ಒಪ್ಪಿಕೊಳ್ಳುವುದಾಗಿ ಹೇಳಿದ್ದಾರೆ. ಕೊಲಂಬಿಯಾ ಅಧ್ಯಕ್ಷ ಇವಾನ್‌ ದುಕು ಕೂಡ ಇದನ್ನು ಬೆಂಬಲಿಸಿದ್ದು ಪ್ರಜಾಪ್ರಭುತ್ವವನ್ನು ಮರು ಸ್ಥಾಪಿಸಲು ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಕೆನಡಾವೂ ಗೈಡೋ ಹೋರಾಟಕ್ಕೆ ದನಿ ಗೂಡಿಸಿದೆ.

ಮದುರೋಗೆ ಜನ ವಿರೋಧದ ಬಿಸಿ:

2013ರಲ್ಲಿ ಎಡಪಂಥದ ಬೆಂಕಿ ಚೆಂಡು ಎಂದೇ ಕರೆಸಿಕೊಳ್ಳುತ್ತಿದ್ದ ಹ್ಯೂಗೋ ಶಾವೆಜ್‌ ನಿಧನದ ಬಳಿಕ ಮಿಲಿಟರಿ ಮತ್ತು ರಷ್ಯಾದ ಬೆಂಬಲದೊಂದಿಗೆ ಮದುರೋ ದೇಶದ ಅಧಿಕಾರವನ್ನು ಕೈಗೆ ತೆಗೆದುಕೊಂಡಿದ್ದರು. ಬಳಿಕ ನಡೆದ ಔಪಚಾರಿಕ ಚುನಾವಣೆಯಲ್ಲಿ ಗೆದ್ದು ಅಧಿಕಾರದ ಹಕ್ಕನ್ನು ಪಡೆದುಕೊಂಡಿದ್ದರು.

ಹೀಗೆ ಅಧಿಕಾರಕ್ಕೇರಿದ ದಿನಗಳಲ್ಲೇ ತೈಲ ಬೆಲೆ ಕುಸಿಯಲು ಆರಂಭವಾಗಿತ್ತು. ನೋಡ ನೋಡುತ್ತಲೇ ಒಂದು ಕಾಲದ ಶ್ರೀಮಂತ ದೇಶದ ಖಜಾನೆ ಬರಿದಾಯಿತು. ಶಾವೆಜ್‌ ಆರಂಭಿಸಿದ್ದ ಕಲ್ಯಾಣ ಕಾರ್ಯಕ್ರಮಗಳು ಹಣದ ಮುಗ್ಗಟ್ಟಿನಲ್ಲಿ ಸ್ಥಗಿತಗೊಂಡವು. ಬೆನ್ನಿಗೆ ಆರಂಭವಾಗಿದ್ದೇ ಪ್ರತಿಭಟನೆಗಳ ಮಹಾಪರ್ವ.

ಬೆಲೆ ಏರಿಕೆ, ಆಹಾರವಿಲ್ಲದೆ ಜನರು ದಂಗೆ ಏಳಲು ಆರಂಭಿಸಿದರು. ಈ ಸಂದರ್ಭದಲ್ಲಿ ಪರಿಸ್ಥಿತಿ ಹತೋಟಿಗೆ ತೆಗೆದುಕೊಳ್ಳಲು 2017ರ ಜನವರಿಯಲ್ಲಿ ವಿರೋಧ ಪಕ್ಷಗಳ ನಾಯಕರು ಮತ್ತು ಇತರರನ್ನು ಮದುರೋ ಜೈಲಿಗೆ ತಳ್ಳಿದರು. ಅದೇ ಹೊತ್ತಿಗೆ ಅಲ್ಲಿನ ಸುಪ್ರೀಂ ಕೋರ್ಟ್‌ ವಿರೋಧ ಪಕ್ಷಗಳ ನೇತೃತ್ವದ ನ್ಯಾಷನಲ್‌ ಅಸೆಂಬ್ಲಿಯನ್ನು ವಿಸರ್ಜನೆಗೊಳಿಸಿದಾಗ ಪ್ರತಿಭಟನೆ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿತು. ಈ ಪ್ರತಿಭಟನೆಯಲ್ಲಿ ಬರೋಬ್ಬರಿ 120 ಜನರು ಸಾವನ್ನಪ್ಪಿದ್ದರು.

ಆದರೆ ಹೇಗೋ ಮಿಲಿಟರಿ ಸಹಾಯದಿಂದ ಈ ಬಾರಿ ಬಚಾವಾದ ಮದುರೋ 2018ರಲ್ಲಿ ಕಾಟಾಚಾರದ ಚುನಾವಣೆ ನಡೆಸಿ ಅಧ್ಯಕ್ಷರ ಹುದ್ದೆ ಮೇಲೆ ಮತ್ತೆ ಪ್ರಭುತ್ವ ಸಾಧಿಸಿದರು. ಹೀಗೆ ಕಳೆದ ಜನವರಿ 10ರಂದು ಅವರ ಹೊಸ ಆಡಳಿತ ಆರಂಭವಾಗಿತ್ತು. ಅದಾದ ಬಳಿಕ ಕಾಣಿಸಿಕೊಂಡಿದ್ದೇ ಈ ಹೊಸ ಪ್ರತಿಭಟನೆ.

ಸದ್ಯ ವೆನಿಜುವೆಲಾ ಪರಿಸ್ಥಿತಿ ವಿಪರೀತ ಹದಗೆಟ್ಟಿದ್ದು ಹಣದುಬ್ಬರ ಶೇಕಡಾ 1 ಕೋಟಿಗೆ ಸಮೀಪಿಸಿದೆ. ದೇಶದಲ್ಲಿ ಆಹಾರದ ಕೊರತೆ ಉಂಟಾಗಿದ್ದು ಹತ್ತಾರು ಲಕ್ಷ ಜನ ಕಳೆದೊಂದು ವರ್ಷದಲ್ಲಿ ದೇಶ ಬಿಟ್ಟಿದ್ದಾರೆ. ಹಸಿವಿನಿಂದ ಕಂಗಾಲದ ಜನರು ಸೋಮವಾರದಿಂದ ಬೀದಿಗೆ ಇಳಿದಿದ್ದು ಮದುರೋ ಆಡಳಿತದ ವಿರುದ್ಧ ಧ್ವನಿ ಎತ್ತಿದ್ದಾರೆ.

ಮದುರೋ ವಿರುದ್ಧ ಬೀದಿಗಿಳಿದಿರುವ ಅಪಾರ ಜನಸ್ತೋಮ
ಮದುರೋ ವಿರುದ್ಧ ಬೀದಿಗಿಳಿದಿರುವ ಅಪಾರ ಜನಸ್ತೋಮ
/ಇಂಡಿಪೆಂಡೆಂಟ್‌

ದೇಶದ ಮೂಲೆ ಮೂಲೆಗಳಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಯುತ್ತಿದ್ದು ಘರ್ಷಣೆಗಳಲ್ಲಿ 26 ಜನರು ಸಾವನ್ನಪ್ಪಿ ನೂರಾರು ಜನರು ಗಾಯಗೊಂಡಿದ್ದಾರೆ. ಇದೇ ವೇಳೆ ಸರಕಾರ 59ಕ್ಕೂ ಹೆಚ್ಚು ಜನರನ್ನು ಬಂಧಿಸಿದೆ. ಇವೆಲ್ಲದರ ನಡುವೆ ಈ ಅಧ್ಯಕ್ಷರ ಹುದ್ದೆಯ ಕಚ್ಚಾಟ ಆರಂಭಗೊಂಡಿದೆ.

ಸದ್ಯ ವೆನಿಜುವೆಲಾ ನಾಗರಿಕರು ಶುಕ್ರವಾರದ ಹೊತ್ತಿಗೆ ಅಮೆರಿಕಾದ ತೀರ್ಮಾನವನ್ನು ಎದುರು ನೋಡುತ್ತಿದ್ದಾರೆ. ಇನ್ನೊಂದು ಕಡೆ ವಿರೋಧಿ ಪಾಳಯ ಅಜ್ಞಾತ ಸ್ಥಳದಲ್ಲಿರುವ ಗೈಡೋ ಸಂದೇಶಕ್ಕಾಗಿ ಕಾಯುತ್ತಿದೆ. ಇತ್ತ ಮದುರೋಗೆ ಮಿಲಿಟರಿ ಸಹಾಯ ನೀಡುತ್ತಾ ಬಂದಿರುವ ರಷ್ಯಾ, ವೆನಿಜುವೆಲಾದೊಳಕ್ಕೆ ಸೇನ ನುಗ್ಗಿಸದಂತೆ ಅಮೆರಿಕಾಗೆ ಎಚ್ಚರಿಕೆ ನೀಡಿದೆ. ಚೀನಾ ಮತ್ತು ಟರ್ಕಿ ಕೂಡ ಅಮೆರಿಕಾದ ಮಧ್ಯ ಪ್ರವೇಶವನ್ನು ವಿರೋಧಿಸಿವೆ. ಸದ್ಯಕ್ಕೆ ಪರಿಸ್ಥಿತಿ ಇಲ್ಲಿಗೆ ಬಂದು ನಿಂತಿದೆ.