
ದೊಡ್ಡವರಿಗೆ ಕಾಡು, ಚಿಕ್ಕವರಿಗೆ ನಾಡು; ಕೊಡಗಿನಲ್ಲಿ ಸಿಗುತ್ತಿಲ್ಲ ಭೂಗಳ್ಳರ ‘ಒತ್ತುವರಿ ಜಾಡು’
ಕೊಡಗಿನಲ್ಲಿ ಸ್ಥಳೀಯ ಆಡಳಿತವೂ ಅಕ್ರಮದಲ್ಲಿ ಕೈಜೋಡಿಸಿರುವುದರಿಂದ ಕಾನೂನುಗಳೇನೇ ಇದ್ದರೂ ರಂಗೋಲೆ ಕೆಳಗೆ ತೂರುವ ಜಾಣತನವನ್ನು ಭೂಗಳ್ಳರು ಮಾಡಿಕೊಂಡು ಬರುತ್ತಿದ್ದಾರೆ.
ಕುಶಾಲನಗರದ ಮುಳ್ಳುಸೋಗೆಯ ಸರ್ವೇ ನಂಬರ್ 192/1 ಹಾಗೂ 192/2ರ ಜಮೀನನ್ನು ಅಲ್ಲಿನ ಪಂಚಾಯ್ತಿ ಪುನಃ ದಾನಿಗಳಿಗೇ ವಾಪಸ್ ನೀಡಿದೆ. ಸರ್ವೆ ನಂಬರ್ 146,146/1 ಮತ್ತು 59 ಸಿ ಜಮೀನುಗಳಲ್ಲಿ ಉದ್ಯಾನವನ ಹಾಗೂ ರಸ್ತೆಗೆ ಮೀಸಲಿರಿಸಲಾದ ಜಾಗದ ಮೂಲ ದಾಖಲೆ ಪತ್ರವೇ ಪಂಚಾಯ್ತಿ ಕಚೇರಿಯಲ್ಲಿ ಲಭ್ಯವಿಲ್ಲ.
ಇದು ಕೊಡಗು ಜಿಲ್ಲೆಯ ಭೂಗಳ್ಳತನದ ಒಂದು ಸಣ್ಣ ಉದಾಹರಣೆ. ಕೊಡಗಿನಲ್ಲಿ ಅರಣ್ಯ ಭೂಮೊ, ಸರಕಾರಿ ಭೂಮಿ ಒತ್ತುವರಿಯನ್ನು ಚಿಕ್ಕವರು ಚಿಕ್ಕದಾಗಿ, ದೊಡ್ಡವರು ದೊಡ್ಡದಾಗಿ ಮಾಡಿಕೊಂಡು ಬರುತ್ತಿದ್ದಾರೆ. ಇದಕ್ಕೆ ಸ್ಥಳೀಯ ಆಡಳಿತವೂ ಕೈಜೋಡಿಸಿರುವುದರಿಂದ ಕಾನೂನುಗಳೇನೇ ಇದ್ದರೂ ರಂಗೋಲೆ ಕೆಳಗೆ ತೂರುವ ಜಾಣತನವನ್ನು ಭೂಗಳ್ಳರು ಮಾಡಿಕೊಂಡು ಬರುತ್ತಿದ್ದಾರೆ.
ಸುಮಾರು 15 ದಿನಗಳ ಹಿಂದೆ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಇಲ್ಲಿನ ನೆಹರೂ ಬಡಾವಣೆಯಲ್ಲಿ ದೊಡ್ಡಯ್ಯ ಎಂಬ ವ್ಯಕ್ತಿಯೊಬ್ಬರು ಪಾರ್ಕಿಗೆ ಸೇರಿದ 7 ಸೆಂಟು ಜಾಗಕ್ಕೆ ಬೇಲಿ ಹಾಕಿದ್ದನ್ನು ತೆರವುಗೊಳಿಸಿದರು. ಸಾರ್ವಜನಿಕರ ದೂರಿನ ಮೇರೆಗೆ ಸ್ಥಳಕ್ಕೆ ತೆರಳಿದ ಅಧಿಕಾರಿಗಳಿಗೆ ಆಶ್ಚರ್ಯ ಕಾದಿತ್ತು. ಏಕೆಂದರೆ ಒತ್ತುವರಿ ಮಾಡಿಕೊಂಡಿದ್ದ 7 ಸೆಂಟು ಜಾಗಕ್ಕೆ ಸೋಮವಾರಪೇಟೆ ತಹಶೀಲ್ದಾರ್ ಅವರು ಹಕ್ಕು ಪತ್ರ ನೀಡಿದ್ದರು!
ಇಲ್ಲಿ ಸೆಂಟು ಜಾಗಕ್ಕೆ 5 ಲಕ್ಷ ರೂಪಾಯಿಗಳಿಗೂ ಹೆಚ್ಚಿನ ಬೆಲೆ ಇದೆ. ಹೀಗಾಗಿ ಭೂಮಿಗೆ ಬಂಗಾರದ ಬೆಲೆ ಬಂದಿರುವ ದಿನಗಳಲ್ಲಿ ಇಂಚಿಂಚು ಜಾಗಕ್ಕೂ ಪ್ರಭಾವ ಬೀರುವ ಜನ ಹೆಚ್ಚಾಗಿದ್ದಾರೆ. ಅಧಿಕಾರಿಗಳು ಹಾಗೂ ಪ್ರಭಾವಿಗಳು ಇಲ್ಲಿ ಭೂಗಳ್ಳರಿಗೆ ಶ್ರೀರಕ್ಷೆ ಒದಗಿಸುತ್ತಿರುವ ಆರೋಪಗಳಿವೆ.
ಮತ್ತೊಂದು ಪ್ರಕರಣದಲ್ಲಿ ತಾವರೆಕೆರೆ ಸಮೀಪದ ಪ್ರಭಾವಿ ರಿಯಲ್ ಎಸ್ಟೇಟ್ ಡೆವಲಪರ್ ಒಬ್ಬರು ಕೆರೆಯ ಜಾಗವನ್ನೇ ಒತುವರಿ ಮಾಡಿಕೊಂಡು ತಾವು ನಿರ್ಮಿಸುತ್ತಿರುವ ಲೇಔಟ್ಗೆ ತೆರಳಲು ರಸ್ತೆ ನಿರ್ಮಿಸಿಕೊಂಡಿದ್ದರು. ಸ್ಥಳೀಯರು ಜಿಲ್ಲಾಧಿಕಾರಿಗಳಿಗೇ ನೇರವಾಗಿ ದೂರು ನೀಡಿದ ಪರಿಣಾಮ ಸಹಾಯಕ ಕಮಿಷನರ್ ಅವರನ್ನು ಸ್ಥಳಕ್ಕೆ ಕಳಿಸಿ ಒತ್ತುವರಿ ತೆರವುಗೊಳಿಸಿದ್ದರು. ಒತ್ತುವರಿಯಾಗಿದ್ದ ಜಾಗದ ಮೌಲ್ಯ ಸುಮಾರು 50 ಲಕ್ಷ ರೂಪಾಯಿಗೂ ಹೆಚ್ಚಾಗಿತ್ತು. ಭೂಮಿ ಬೆಲೆ ಹೆಚ್ಚುತ್ತಿರುವ ಕಾರಣ ಕುಶಾಲನಗರ ಈಗ ಭೂ ಗಳ್ಳರ ಸ್ವರ್ಗವಾಗಿದೆ.
ಕೊಡಗಿನಲ್ಲಿ ನೂರಾರು ವರ್ಷಗಳ ಹಿಂದೆಯೇ ಸರ್ಕಾರಿ ಜಾಗಗಳಿಗೆ ಬೇಲಿ ಸುತ್ತಿ ಸಾವಿರಾರು ಜನರು ಆಸ್ತಿ ಮಾಡಿಕೊಂಡಿದ್ದಾರೆ. ಇಂದು ಕೊಡಗಿನಲ್ಲಿ ಶೇ. 70ರಷ್ಟು ಅರಣ್ಯ ಸಂಪತ್ತು ಇದ್ದರೂ ಸರ್ಕಾರಿ ಉದ್ದೇಶಗಳಿಗಾಗಿ, ಕಡು ಬಡವರಿಗೆ ಆಶ್ರಯ ಮನೆ ನಿರ್ಮಾಣಕ್ಕಾಗಿ ಎಲ್ಲಿ ಹುಡುಕಿದರೂ ಭೂಮಿ ಸಿಗುತ್ತಿಲ್ಲ.
‘ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ’ಯು ಶ್ರೀಮಂತ ಕಾಫಿ ಬೆಳೆಗಾರರು ಒತ್ತುವರಿ ಮಾಡಿಕೊಂಡಿರುವ ಸಹಸ್ರಾರು ಎಕರೆ ಭೂಮಿಯನ್ನು ಹಿಂಪಡೆಯುವಂತೆ ಸರ್ಕಾರದ ಮೇಲೆ ಒತ್ತಡ ಹೇರಿತ್ತು. ಅಲ್ಲದೆ ರಾಜ್ಯ ಸರಕಾರವೇ 5 ಎಕರೆ ಒಳಗಿನ ಭೂ ಒತ್ತುವರಿದಾರರನ್ನು ಒಕ್ಕಲೆಬ್ಬಿಸದಂತೆ ನಿರ್ದೇಶನ ನೀಡಿತ್ತು. ಹಾಗಂತ ಐದು ಎಕರೆ ಮಿತಿ ಮೀರಿ ಒತ್ತುವರಿ ಮಾಡಿಕೊಂಡವರ ಜಮೀನುಗಳ ಒತ್ತುವರಿ ತೆರವು ಕಾರ್ಯಾಚರಣೆಗಳೇನೂ ನಡೆದಿಲ್ಲ.

ಕೊಡಗಿನ ಹೆಬ್ಬಾಗಿಲು ಎಂದೇ ಕರೆಯಲ್ಪಡುವ ಕುಶಾಲನಗರ ಪಟ್ಟಣ ದಿನೇ ದಿನೇ ಅಭಿವೃದ್ದಿ ಹೊಂದುತ್ತಾ ಸಾಗಿದ್ದು ಮುಂದಿನ ದಿನಗಳಲ್ಲಿ ಇದು ರಾಜಧಾನಿ ಮಡಿಕೇರಿಯನ್ನೂ ಮೀರಿಸಿ ಬೆಳೆಯುವ ಎಲ್ಲಾ ಲಕ್ಷಣಗಳನ್ನು ತೋರಿಸುತ್ತಿದೆ. ಈಗಾಗಲೇ ಪಟ್ಟಣದ ಸಮೀಪದಲ್ಲಿ ಭೂಮಿಯ ಬೆಲೆ ಗಗನಕ್ಕೇರಿದ್ದು ಇದು ಮಡಿಕೇರಿ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲೇ ಇರುವುದರಿಂದ ಬೆಲೆ ಏರುತ್ತಲೇ ಇದೆ. ಈ ಪುಟ್ಟ ನಗರದಲ್ಲೀಗ 36 ವಸತಿ ಬಡಾವಣೆಗಳಿವೆ.
ಕುಶಾಲನಗರದಲ್ಲಿ ಸರಕಾರಿ ಭೂಮಿ ಸೇರಿದಂತೆ ಅನೇಕ ಕಡೆಗಳಲ್ಲಿ ದಾನಿಗಳೂ ಕೂಡ ಪಾರ್ಕ್, ರಸ್ತೆ, ಕೆರೆಗಳ ನಿರ್ಮಾಣಕ್ಕೆ ಭೂಮಿ ನೀಡಿದ್ದಾರೆ. ಆದರೆ ದಿನಗಳೆದಂತೆ ಪಾರ್ಕ್ ಹಾಗೂ ಕೆರೆಗಳ ಭೂಮಿ ರಾತ್ರೋರಾತ್ರಿ ಖಾಸಗಿಯವರ ಪಾಲಾಗುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಇಲ್ಲಿನ ಪಟ್ಟಣ ಪಂಚಾಯ್ತಿ ಕಚೇರಿಯಲ್ಲಿ ದಾನಿಗಳು ದಾನ ನೀಡಿರುವ ಭೂಮಿಯ ದಾಖಲೆ ಪತ್ರಗಳೇ ಮಾಯವಾಗುತ್ತಿವೆ. ಇಲ್ಲಿನ ಅಧಿಕಾರಿಗಳೇ ಭೂಗಳ್ಳರೊಂದಿಗೆ ಶಾಮೀಲಾಗಿದ್ದು ಕೇಳಿದ ದಾಖಲೆಗಳಿಗೆ, "ಮಾಹಿತಿ ಲಭ್ಯವಿಲ್ಲ" ಎಂದು ಷರಾ ಬರೆಯುತಿದ್ದಾರೆ.
ನಗರದ ಸುತ್ತಮುತ್ತಲೂ 100ಕ್ಕೂ ಹೆಚ್ಚು ವಸತಿ ಬಡಾವಣೆಗಳು ನಿರ್ಮಾಣಗೊಳ್ಳುತಿದ್ದು ಈ ಬಡಾವಣೆಗಳ ಮಾಲೀಕರು ನಕಲಿ ದಾಖಲೆ ಸೃಷ್ಟಿಸಿ, ಭೂ ಒತ್ತುವರಿಯನ್ನೂ ಮಾಡಿಕೊಂಡು ನಿವೇಶನಗಳನ್ನು ಮಾರಾಟ ಮಾಡುತಿದ್ದಾರೆ ಎನ್ನಲಾಗಿದೆ. ಕೆಲ ಬಡಾವಣೆಗಳ ಭೂ ಪರಿವರ್ತನಾ ಆದೇಶ ಪತ್ರ, ನೀಲಿ ನಕಾಶೆ, ಸರ್ವೆ ನಕಾಶೆ ಕೂಡ ಪಟ್ಟಣ ಪಂಚಾಯ್ತಿಯಲ್ಲಿ ಲಭ್ಯ ಇಲ್ಲ ಎನ್ನಲಾಗುತ್ತಿದೆ.
2008ರಲ್ಲಿ ರಾಜ್ಯ ಸರ್ಕಾರ ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಿದ್ದರೂ ಅಕ್ರಮ ನಿವೇಶನಗಳ ಮಾರಾಟ ಕಡಿಮೆಯೇನೂ ಆಗಿಲ್ಲ. ಬೇಕಾಬಿಟ್ಟಿಯಾಗಿ ಬಡಾವಣೆ ನಿರ್ಮಿಸಿ, ನಿವೇಶನ ಹಂಚುತ್ತಿರುವುದರಿಂದ ಇದು ಮುಂದೆ ಪಟ್ಟಣದ ಮೂಲಸೌಕರ್ಯಕ್ಕೆ ತೊಡಕಾಗಲಿದೆ ಎನ್ನುತ್ತಾರೆ ಕುವೆಂಪು ಬಡಾವಣೆಯ ಹಿರಿಯ ನಾಗರಿಕ ಬಿ.ಆರ್. ನಾರಾಯಣ್.
ಇದು ಬೆಳೆಯುತ್ತಿರುವ ಪಟ್ಟಣಗಳ ಭೂ ಒತ್ತುವರಿಯ ಕಥೆಯಾದರೆ ಅರಣ್ಯ ಭಾಗದ ಕಾಫಿ ಎಸ್ಟೇಟ್ಗಳ ಭೂ ಒತ್ತುವರಿಯದ್ದು ದೊಡ್ಡ ಕಥೆ. ಟಾಟಾ ಎಸ್ಟೇಟ್ ಸೇರಿದಂತೆ ಹಲವು ದೊಡ್ಡ ದೊಡ್ಡ ಕಾಫಿ ಎಸ್ಟೇಟ್ಗಳು ಸಾವಿರಾರು ಎಕರೆ ಅರಣ್ಯ ಒತ್ತುವರಿ ಮಾಡಿಕೊಂಡಿರುವ ಆರೋಪವಿದೆ. ಆದರೆ, ಸರಕಾರಗಳು ಈ ದೊಡ್ಡ ದೊಡ್ಡ ಕಾಫಿ ಎಸ್ಟೇಟ್ಗಳ ಒತ್ತುವರಿ ತೆರವಿಗೆ ಮನಸ್ಸು ಮಾಡುತ್ತಿಲ್ಲ.
ಕೊಡಗಿನ ಆನೆ - ಮಾನವ ಸಂಘರ್ಷಕ್ಕೂ ಈ ಅರಣ್ಯ ಒತ್ತುವರಿಗೂ ನೇರ ಸಂಬಂಧವಿದೆ. ಆದರೆ, ದೊಡ್ಡವರ ಒತ್ತುವರಿ ಭೂಮಿ ತೆರವಿಗೆ ಸರಕಾರಗಳು ಮನಸ್ಸು ಮಾಡುತ್ತಿಲ್ಲ. ಆರಂಭದಲ್ಲಿ ಉತ್ಸಾಹದಿಂದ ಕೆಲಸ ಮಾಡುವ ಐಎಎಸ್ ಅಧಿಕಾರಿಗಳೂ ಈ ಒತ್ತುವರಿ ತೆರವಿನ ವಿಚಾರದಲ್ಲಿ ಮೌನವಾಗಿದ್ದು ವಿಪರ್ಯಾಸ.