samachara
www.samachara.com
‘ಆಪರೇಷನ್‌’ ಭೂತ, ನಂಬಿಕೆ ಕಳೆದುಕೊಂಡ ಶಾಸಕರು & ಸಿಎಂ ಕೈಯಲ್ಲಿನ ಗುಪ್ತಚರ ಇಲಾಖೆ
COVER STORY

‘ಆಪರೇಷನ್‌’ ಭೂತ, ನಂಬಿಕೆ ಕಳೆದುಕೊಂಡ ಶಾಸಕರು & ಸಿಎಂ ಕೈಯಲ್ಲಿನ ಗುಪ್ತಚರ ಇಲಾಖೆ

ಸರಕಾರ ಬೀಳಿಸುವ ಯತ್ನ ಮಾತ್ರ ಇನ್ನೂ ನಿಂತಿಲ್ಲ. ಫೆ.8ರಂದು ರಾಜ್ಯ ಬಜೆಟ್ ಮಂಡನೆಯಾಗಲಿದ್ದು, ಅದಕ್ಕೂ ಮೊದಲೇ ಸರ್ಕಾರವನ್ನು ಉರುಳಿಸಲು ಬಿಜೆಪಿ ಸಂಚು ರೂಪಿಸಿದೆ ಎಂಬ ಮಾತುಗಳಿವೆ.

Team Samachara

ಅದು 2006ರ ಜನವರಿ 21, ಶನಿವಾರ. ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌ ಶಾಸಕರು ರಾಜಭವನಕ್ಕೆ ತೆರಳಿ ಗೋವಾದ ರೆಸಾರ್ಟ್‌ನತ್ತ ಹೊರಟಿದ್ದರು. ಗುಪ್ತಚರ ಇಲಾಖೆ, ಪೊಲೀಸ್‌ ಇಲಾಖೆ, ಆಪ್ತರು, ಸಲಹೆಗಾರರು ಹೀಗೆ ಸುತ್ತ ಮುತ್ತ ನೂರಾರು ಜನರನ್ನು ಇಟ್ಟುಕೊಂಡಿದ್ದಾಗಲೂ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ ಎನ್‌. ಧರಂಸಿಂಗ್‌ಗೆ ಇದರ ಯಾವುದೇ ಸುಳಿವೂ ಸಿಕ್ಕಿರಲಿಲ್ಲ. ಗುಪ್ತಚರ ಇಲಾಖೆ ತಮ್ಮ ಕೈ ಕೆಳಗೆ ಇದ್ದೂ ತಮ್ಮ ಸರಕಾರ ಉರುಳುವ ಯಾವ ಮುನ್ಸೂಚನೆಯೂ ಅವರ ಗಮನಕ್ಕೆ ಬಂದಿರಲಿಲ್ಲ. ಅಷ್ಟರ ಮಟ್ಟಿಗೆ ಗುಪ್ತಚರ ಇಲಾಖೆ ಎನ್ನುವುದು ಸೊರಗಿ ಹೋಗಿತ್ತು. ಸರಿಯಾಗಿ 13 ವರ್ಷದ ಕೆಳಗೆ ಈ ಬೆಳವಣಿಗೆಗೆ ರಾಜ್ಯ ಸಾಕ್ಷಿಯಾಗಿತ್ತು.

ಗೂಢಚರ್ಯೆ ಎನ್ನುವುದು ಎಲ್ಲಾ ಕಾಲಕ್ಕೂ ಆಡಳಿತ ನಡೆಸುವವರ ಪ್ರಮುಖ ಅಸ್ತ್ರ. ಅದರತ್ತಲೇ ನಿರ್ಲಕ್ಷಿತರಾಗಿದ್ದರು ಧರಂಸಿಂಗ್; ಅಥವಾ ಗುಪ್ತಚರ ವ್ಯವಸ್ಥೆ ಅಷ್ಟರ ಮಟ್ಟಿಗೆ ಹಳ್ಳ ಹಿಡಿದಿತ್ತು. ಪರಿಣಾಮ ವಾಸ್ತವ ಅರಿವಾಗುವ ಮೊದಲೇ ಅವರು ಅಧಿಕಾರ ಕಳೆದುಕೊಂಡಿದ್ದರು. ಆದರೆ ಎಲ್ಲರೂ ಹಾಗಲ್ಲ. ಕೆಲವರಂತೂ ಗುಪ್ತಚರ ಇಲಾಖೆಗೆ ವಿಶೇಷ ಮಾನ್ಯತೆ ನೀಡುತ್ತಾರೆ. ಮತ್ತು ಈ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಅಧಿಕಾರ ಕಳೆದುಕೊಂಡವರೂ ಇದ್ದಾರೆ. ರಾಮಕೃಷ್ಣ ಹೆಗಡೆ ಪ್ರಕರಣದಲ್ಲಿ ಅದೇ ಆಗಿತ್ತು.

1988ರಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ಎಚ್.ಡಿ. ದೇವೇಗೌಡ ಸೇರಿ ಪಕ್ಷದ ಹಾಗೂ ಪ್ರತಿಪಕ್ಷದ ಮುಖಂಡರು ಮತ್ತು ಉದ್ಯಮಿಗಳ ದೂರವಾಣಿ ಕದ್ದಾಲಿಸಿದ್ದಾರೆ ಎಂಬ ಆರೋಪ ದೊಡ್ಡ ಪ್ರಮಾಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಸುಬ್ರಮಣಿಯನ್‌ ಸ್ವಾಮಿ ಈ ಆರೋಪ ಮಾಡಿದ್ದರು. ಹೆಗಡೆ ಅವರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿತ್ತು. ಹೀಗಾಗಿ ಅವರು ಅವಧಿ ಪೂರ್ಣಗೊಳಿಸುವುದಕ್ಕೆ ಎರಡು ವರ್ಷ ಮೊದಲೇ ಅಧಿಕಾರ ಕಳೆದುಕೊಂಡಿದ್ದರು.

ಹೀಗಿದ್ದೂ ತಾವು ಫೋನ್‌ ಕದ್ದಾಲಿಕೆಗೆ ಆದೇಶ ನೀಡೇ ಇಲ್ಲ ಎಂದು ಹೆಗಡೆ ವಾದಿಸುತ್ತಿದ್ದರು. ಮುಂದೊಂದು ದಿನ 1990ರಲ್ಲಿ ಚುನಾವಣೆ ನಡೆದು ವೀರೇಂದ್ರ ಪಾಟೀಲರು ಮುಖ್ಯಮಂತ್ರಿಯಾದ ಬಳಿಕ ರಾಮಕೃಷ್ಣ ಹೆಗಡೆ ವಾದವನ್ನು ತಲೆ ಕೆಳಗು ಮಾಡಿದ್ದರು. 1990 ಜೂನ್‌ 26ರಂದು ನಡೆದಿದ್ದ ಅಧಿವೇಶನದಲ್ಲಿ ದಾಖಲೆ ಸಮೇತ ಹೆಗಡೆ ಫೋನ್‌ ಕದ್ದಾಲಿಕೆಗೆ ಆದೇಶ ನೀಡಿದ್ದನ್ನು ಸದನದಲ್ಲಿ ಬಿಚ್ಚಿಟ್ಟಿದ್ದರು.

ಆಗ ಸದನದಲ್ಲಿ, “ಯಾರ ಫೋನ್‌ ಕದ್ದಾಲಿಸಬೇಕೆಂದು ಗುಪ್ತಚರ ಅಧಿಕಾರಿ ಮುಖ್ಯಮಂತ್ರಿಗಳಿಂದ ಲಿಖಿತ ಆದೇಶ ಪಡೆಯುವುದಿಲ್ಲ. ಇಂಥಹವರ ಚಟುವಟಿಕೆ ಮೇಲೆ ಕಣ್ಣಿಡಿ ಎಂದರೆ ಸಾಕು, ಆ ಅಧಿಕಾರಿ ಸಂಬಂಧಿಸಿದವರ ನಂಬರ್‌ನ್ನು ಟೆಲಿಗ್ರಾಫ್ ಇಲಾಖೆಯ ಜನರಲ್ ಮ್ಯಾನೇಜರ್‌ಗೆ ನೀಡುತ್ತಾರೆ. ಆಗ ಅವರು ಗುಪ್ತಚರ ಅಧಿಕಾರಿಗೆ ಫೋನ್‌ ಕದ್ದಾಲಿಸುವ ಉಪಕರಣ ಪೂರೈಸುತ್ತಾರೆ. ನಂತರ ಆ ಕೆಲಸ ಸಲೀಸಾಗಿ ನಡೆಯುತ್ತದೆ. ಗುಪ್ತಚರ ಅಧಿಕಾರಿ ಸಿಎಂ ವಿಶ್ವಾಸದ ಮೇಲೆ ಕೆಲಸ ಮಾಡುತ್ತಾರೆ,” ಎಂದು ಗೂಢಚರ್ಯೆಯ ಒಳಹೊರಗನ್ನು ವೀರೇಂದ್ರ ಪಾಟೀಲರು ತೆರೆದಿಟ್ಟಿದ್ದರು.

ಈ ಕಾವೇರಿದ ಚರ್ಚೆಯ ನಡುವೆ ಹೆಗಡೆಯವರಿಗೂ ಮೊದಲು ಮುಖ್ಯಮಂತ್ರಿಯಾಗಿದ್ದ ಆರ್. ಗುಂಡೂರಾವ್ ಅವಧಿಯಲ್ಲಿ ವಿರೋಧಪಕ್ಷಗಳ ನಾಯಕರಾಗಿದ್ದ ಬಿ.ಎಸ್.ಯಡಿಯೂಪ್ಪ, ಡಿ.ಎಚ್.ಶಂಕರಮೂರ್ತಿ ಸೇರಿದಂತೆ ಬೆಂಗಳೂರು ನಗರದ ಖ್ಯಾತನಾಮರ ಫೋನ್‌ಗಳನ್ನು ಕದ್ದು ಕೇಳಲಾಗಿತ್ತು ಎಂಬ ವಿಚಾರವನ್ನು ಸ್ವತಃ ರಾಮಕೃಷ್ಣ ಹೆಗಡೆ ಬಾಯ್ಬಿಟ್ಟಿದ್ದರು.

ಹೀಗೆ ಕರ್ನಾಟಕದ ರಾಜಕಾರಣ ಎನ್ನುವುದು ಆಗಾಗ ಗುಪ್ತಚರ ಇಲಾಖೆಯ ಕಾರಣಗಳಿಗೆ ಸುದ್ದಿಯಾಗುತ್ತಲೇ ಬಂದಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಆರಂಭದಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರ ಸಹೋದರ ಸೇರಿದಂತೆ ಐವರು ಆಪ್ತರ ಫೋನ್‌ ಕದ್ದಾಲಿಕೆ ಮಾಡಲಾಗಿದ್ದು, ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಬಿಜೆಪಿ ನಾಯಕ ಸುರೇಶ್‌ ಕುಮಾರ್ ಆರೋಪಿಸಿದ್ದರು. ಸಿದ್ದರಾಮಯ್ಯ ಅಧಿಕಾರದಿಂದ ಇಳಿಯುವವರೆಗೂ ಆಡಳಿತ ಮತ್ತು ವಿರೋಧ ಪಕ್ಷಗಳು ಪೋನ್‌ ಕದ್ದಾಲಿಕೆ ಆರೋಪವನ್ನು ಮಾಡುತ್ತಲೇ ಬಂದಿದ್ದವು. ಕಾಂಗ್ರೆಸ್‌ ಕೇಂದ್ರದತ್ತ ಬೆಟ್ಟು ಮಾಡಿದರೆ, ಬಿಜೆಪಿಯವರು ರಾಜ್ಯ ಸರಕಾರವನ್ನು ದೂರುತ್ತಿದ್ದರು.

ಇದೀಗ ಸಮ್ಮಿಶ್ರ ಸರಕಾರ ಗಂಡಾಂತರದಲ್ಲಿರುವ ಹೊತ್ತಲ್ಲಿ ಈ ಗುಪ್ತಚರ ಇಲಾಖೆ ಮತ್ತೆ ಮುನ್ನೆಲೆಗೆ ಬಂದಿದೆ. ತನ್ನ ಶಾಸಕರ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಆಪರೇಷನ್ ಕಮಲ ತಡೆಯಲು ಶಾಸಕರ ಚಲನವಲನಗಳ ಮೇಲೆ ಕಣ್ಣಿಡುವಂತೆ ಗುಪ್ತಚರ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದೆ ಎಂಬುದು ವಿಧಾನಸೌಧದಿಂದ ಬಂದಿರುವ ಹೊಸ ಮಾಹಿತಿ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
/ಇಂಡಿಯನ್‌ ಎಕ್ಸ್‌ಪ್ರೆಸ್‌

ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಅತೃಪ್ತ ಶಾಸಕರನ್ನು ಭಾರೀ ಪ್ರಮಾಣದ ಹಣದ ಅಮಿಷವೊಡ್ಡಿ ಸೆಳೆಯಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ಬಹಿರಂಗವಾಗಿಯೇ ಆರೋಪಗಳನ್ನು ಮಾಡಿದ್ದರು. ಇದೀಗ ಮುಖ್ಯಮಂತ್ರಿಗಳು ಪ್ರತಿ ಶಾಸಕರ ಚಲನವಲನಗಳನ್ನು, ದಿನನಿತ್ಯದ ದಿನಚರಿಗಳನ್ನು ತಮ್ಮ ಗಮನಕ್ಕೆ ತರಬೇಕೆಂದು ಗುಪ್ತಚರ ವಿಭಾಗದ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ಸೂಚನೆ ರವಾನಿಸಿದ್ದಾರೆ ಎಂದು ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಮೂಲಗಳು ಹೇಳುತ್ತಿವೆ. ಈ ಮೂಲಕ ಆಪರೇಷನ್‌ ಬೆಳವಣಿಗೆಗಳನ್ನು ಆರಂಭದಲ್ಲೇ ಚಿವುಟಿ ಹಾಕಲು ತಂತ್ರ ರೂಪಿಸಿದ್ದಾರೆ.

ಬಂಡಾಯ, ಅತೃಪ್ತ ಶಾಸಕರ ಭಯ:

ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿಗೆ ಅಧ್ಯಕ್ಷರ ನೇಮಕಾತಿಯ ನಂತರ ಅವಕಾಶ ವಂಚಿತ ಶಾಸಕರು ಪಕ್ಷದ ವಿರುದ್ಧವೇ ತೊಡೆತಟ್ಟಿದ್ದರು. ಅದರಲ್ಲೂ ಸಚಿವ ಸ್ಥಾನ ಕಳೆದುಕೊಂಡಿದ್ದ ರಮೇಶ್ ಜಾರಕಿಹೊಳಿ ಸರ್ಕಾರವನ್ನೇ ಕೆಡವುದಾಗಿ ರಣ ಕಹಳೆ ಮೊಳಗಿಸಿದ್ದರು. ಅದರಂತೆ ಒಂದಷ್ಟು ಶಾಸಕರು ಮುಂಬೈ ತಲುಪಿದ್ದರು.

ಹೀಗಿದ್ದೂ ಅಗತ್ಯ ಬೆಂಬಲ ಗಿಟ್ಟಿಸಲು ವಿಫಲವಾದ ಹಿನ್ನೆಲೆಯಲ್ಲಿ ಶಾಸಕರು ರಾಜೀನಾಮೆಗೆ ಹಿಂದೇಟು ಹಾಕುತ್ತಿದ್ದಾರೆ. ಜತೆಗೆ ಶಿವಕುಮಾರ ಸ್ವಾಮೀಜಿಗಳ ನಿಧನದಂಥ ಬೆಳವಣಿಗೆಗಳು ಆಪರೇಷನ್‌ ಕಮಲವನ್ನು ತಣ್ಣಗಾಗಿಸಿವೆ. ಈ ಮೂಲಕ ಬೀಸೋ ದೊಣ್ಣೆಯಿಂದ ಸರಕಾರ ಸದ್ಯಕ್ಕೆ ತಪ್ಪಿಸಿಕೊಂಡಿದೆ. ಆದರೆ ಭವಿಷ್ಯದಲ್ಲಿ ಅಪಾಯ ತಪ್ಪಿದ್ದಲ್ಲ.

ಹಾಗೆ ನೋಡಿದರೆ ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಬಳಿಕ ಆಯಕಟ್ಟಿನ ಜಾಗಗಳಿಗೆ ತಮಗೆ ಬೇಕಾದವರನ್ನು ನೇಮಿಸಿ ಗುಪ್ತಚರ ಇಲಾಖೆ ಬಲಪಡಿಸಿದ್ದರು. ಇದೇ ಕಾರಣಕ್ಕೆ ಈ ಹಿಂದೆಯೂ ಆಪರೇಷನ್‌ ಕಮಲಕ್ಕೆ ಬಿಜೆಪಿ ನಾಯಕರು ಕೈ ಹಾಕಿದಾಗ ಮಾಹಿತಿಗಳು ಸಿಎಂ ಕಚೇರಿ ತಲುಪಿದ್ದವು. ಇದೇ ಆಧಾರದಲ್ಲಿ ಅವರು ಸರಕಾರ ಕೆಡವಲು ಮೀಟರ್ ಬಡ್ಡಿ, ಹವಾಲಾ ದಂಧೆ ನಡೆಸುವವರನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದು ಬಹಿರಂಗವಾಗಿಯೇ ಆರೋಪಿಸಿದ್ದರು.

ಆದರೆ ಈ ಸರಕಾರ ಬೀಳಿಸುವ ಯತ್ನ ಮಾತ್ರ ಇನ್ನೂ ನಿಂತಿಲ್ಲ. ಫೆ.8ರಂದು ರಾಜ್ಯ ಬಜೆಟ್ ಮಂಡನೆಯಾಗಲಿದ್ದು, ಅದಕ್ಕೂ ಮೊದಲೇ ಸರ್ಕಾರವನ್ನು ಉರುಳಿಸಲು ಬಿಜೆಪಿ ಸಂಚು ರೂಪಿಸಿದೆ ಎಂಬ ಮಾತುಗಳಿವೆ. ಹೀಗಾಗಿ ಯಾವ ಸಂದರ್ಭದಲ್ಲಿ ಏನು ಬೇಕಾದರೂ ಸಂಭವಿಸಬಹುದೆಂಬ ಹಿನ್ನೆಲೆಯಲ್ಲಿ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಅನಿವಾರ್ಯತೆ ಕಾಂಗ್ರೆಸ್‍ಗೆ ಎದುರಾಗಿದೆ. ಇದಕ್ಕಾಗಿ ಮೈತ್ರಿ ಸರಕಾರದ ನಾಯಕರು ಭಿನ್ನಮತೀಯರು, ಪಕ್ಷ ಬಿಡುವ ಅನುಮಾನಿತರ ಮೇಲೆ ಗೂಢಚರ್ಯೆಯ ಭೂತ ಬಿಟ್ಟಿದ್ದಾರೆ.