samachara
www.samachara.com
ಮೂಡ್‌ ಆಫ್‌ ದಿ ನೇಷನ್: ಎಸ್‌ಪಿ- ಬಿಎಸ್‌ಪಿ ‘ಕೈ’ ಹಿಡಿದರೆ ಈ ಬಾರಿ ‘ಕಮಲ’ ಅರಳವುದು ಕಷ್ಟ
COVER STORY

ಮೂಡ್‌ ಆಫ್‌ ದಿ ನೇಷನ್: ಎಸ್‌ಪಿ- ಬಿಎಸ್‌ಪಿ ‘ಕೈ’ ಹಿಡಿದರೆ ಈ ಬಾರಿ ‘ಕಮಲ’ ಅರಳವುದು ಕಷ್ಟ

ಎಸ್‌ಪಿ, ಬಿಎಸ್‌ಪಿ, ಆರ್‌ಎಲ್‌ಡಿ ಪಕ್ಷಗಳು ಕಾಂಗ್ರೆಸ್‌ ಜತೆಗೂಡಿ ಚುನಾವಣೆ ಎದುರಿಸಿದರೆ ಈ ಬಾರಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಸಂಖ್ಯೆ 73ರಿಂದ 5ಕ್ಕೆ ಕುಸಿಯಲಿದೆ ಎಂದು ಸಮೀಕ್ಷೆ ತಿಳಿಸಿದೆ.

ಕೇಂದ್ರದಲ್ಲಿ ಅಧಿಕಾರ ಹಿಡಿಯುವ ಪಕ್ಷಗಳ ಹಣೆಬರಹ ನಿರ್ಧರಿಸುವ ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ, ಎಸ್‌ಪಿ, ಆರ್‌ಎಲ್‌ಡಿ ಪಕ್ಷಗಳು ಕಾಂಗ್ರೆಸ್ ಜತೆ ಸೇರಿ ಚುನಾವಣೆ ಎದುರಿಸಿದರೆ ಈ ಬಾರಿ ಲೋಕಸಭೆಯಲ್ಲಿ ಕನಿಷ್ಠ 75 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದು 'ಇಂಡಿಯಾ ಟುಡೆ- ಕಾರ್ವಿ' ಸಮೀಕ್ಷೆ ಹೇಳಿದೆ.

80 ಲೋಕಸಭಾ ಕ್ಷೇತ್ರಗಳಿರುವ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಈಗಾಗಲೇ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದು, ಕಾಂಗ್ರೆಸ್‌ನ್ನು ಮೈತ್ರಿಯಿಂದ ಹೊರಗಿಟ್ಟಿವೆ. ಎಸ್‌ಪಿ, ಬಿಎಸ್‌ಪಿ, ಆರ್‌ಎಲ್‌ಡಿ ಮತ್ತು ಕಾಂಗ್ರೆಸ್‌ ಒಟ್ಟಾಗಿ ಬಿಜೆಪಿ ವಿರುದ್ಧ ನಿಂತರೆ ಬಿಜೆಪಿ ಸಂಖ್ಯೆ 5ಕ್ಕೆ ಕುಸಿಯುವ ಸಾಧ್ಯತೆ ಇದೆ ಎಂದಿದೆ ಸಮೀಕ್ಷೆ.

2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಉತ್ತರ ಪ್ರದೇಶದಲ್ಲಿ 73 ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿ ಈ ನಾಲ್ಕು ಪಕ್ಷಗಳು ಒಟ್ಟಾಗಿ ಬಿಜೆಪಿ ವಿರುದ್ಧ ನಿಂತರೆ ಕನಿಷ್ಠ 75 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿಯನ್ನು ಹೀನಾಯವಾಗಿ ಸೋಲಿಸಬಹುದು ಎಂದು ಸಮೀಕ್ಷೆ ಹೇಳಿದೆ.

ಉತ್ತರ ಪ್ರದೇಶದ 2,478 ಜನ ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದು, ಬಿಜೆಪಿ ವಿರುದ್ಧ ಈ ನಾಲ್ಕು ಪಕ್ಷಗಳು ಒಂದಾದರೆ ಲೋಕಸಭೆಯ ಭವಿಷ್ಯ ಬದಲಾಗಲಿದೆ ಎಂದಿದ್ದಾರೆ.

2014ರಲ್ಲಿ ಪ್ರಾದೇಶಿಕ ಪಕ್ಷ ಅಪ್ನಾ ದಳ (ಎಡಿ) ಜತೆಗೆ ಚುನಾವಣೆ ಎದುರಿಸಿದ್ದ ಬಿಜೆಪಿ 73 ಸ್ಥಾನಗಳಲ್ಲಿ ಗೆಲುವು ಕಂಡಿತ್ತು. ಬಿಜೆಪಿ- ಎಡಿ ಮೈತ್ರಿಗೆ ಆಗ ಸಿಕಿದ್ದ ಮತ ಗಳಿಕೆ ಪ್ರಮಾಣ ಶೇಕಡ 43.3. ಈ ಬಾರಿಯ ಚುನಾವಣೆಯಲ್ಲಿ ಎಸ್‌ಪಿ, ಬಿಎಸ್‌ಪಿ, ಆರ್‌ಎಲ್‌ಡಿ ಮತ್ತು ಕಾಂಗ್ರೆಸ್‌ ಒಂದಾದರೆ ಭಾರಿ ಕುಸಿತ ಕಾಣುವ ಸಾಧ್ಯತೆ ಇದೆ. ಬಿಜೆಪಿ- ಎಡಿ ಮೈತ್ರಿಯ ಸ್ಥಾನಗಳು 73ರಿಂದ 5ಕ್ಕೆ ಕುಸಿಯಲಿದ್ದು, ಮತ ಗಳಿಕೆ ಪ್ರಮಾಣ ಶೇಕಡ 43.3ರಿಂದ 36ಕ್ಕೆ ಕುಸಿಯಲಿದೆ ಎನ್ನುತ್ತಿದೆ ಸಮೀಕ್ಷೆ.

2014ರಲ್ಲಿ ಶೇಕಡ 56.7ರಷ್ಟು ಮತಗಳನ್ನು ಪಡೆದಿದ್ದ ಮಹಾಮೈತ್ರಿಯ ಪಕ್ಷಗಳು ಈ ಬಾರಿ ಒಟ್ಟಾಗಿ ಚುನಾವಣೆ ಎದುರಿಸಿದರೆ ಮತ ಗಳಿಕೆ ಪ್ರಮಾಣ 64ಕ್ಕೆ ಹೆಚ್ಚಾಗಲಿದೆ. ಈ ಮತ ಗಳಿಕೆ ಪ್ರಮಾಣವೇ ಬಿಜೆಪಿಗೆ ಮುಳುವಾಗಲಿದೆ. ಎಸ್‌ಪಿ, ಬಿಎಸ್‌ಪಿ, ಆರ್‌ಎಲ್‌ಡಿ ಮತ್ತು ಕಾಂಗ್ರೆಸ್‌ ಒಂದಾದರೆ ಈ ಬಾರಿ ಉತ್ತರ ಪ್ರದೇಶದಲ್ಲಿ ಕಮಲ ಅರಳುವುದು ಕಷ್ಟ ಎಂಬುದು ಸಮೀಕ್ಷೆಯಿಂದ ಗೊತ್ತಾಗಿದೆ.

ಕಾಂಗ್ರೆಸ್‌ ಜತೆಗಿನ ಮಹಾಮೈತ್ರಿಯಿಂದ ಬಿಎಸ್‌ಪಿ ಮತ್ತು ಎಸ್‌ಪಿ ಪಕ್ಷಗಳು ಆರಂಭದಿಂದಲೂ ಅಡ್ಡಗೋಡೆ ಮೇಲೆ ದೀಪ ಇಟ್ಟಂತ ಅಂತರವನ್ನು ಕಾಯ್ದುಕೊಂಡೇ ಬಂದಿವೆ. ಉತ್ತರ ಪ್ರದೇಶದ ಮೈತ್ರಿ ಸಂದರ್ಭದಲ್ಲಿ ಕಾಂಗ್ರೆಸ್‌ ಅನ್ನು ಮೈತ್ರಿಯಿಂದ ಹೊರಗಿಟ್ಟ ಎಸ್‌ಪಿ- ಬಿಎಸ್‌ಪಿ ಕಾಂಗ್ರೆಸ್ ಸ್ಪರ್ಧಿಸುವ ಎರಡು ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಹಾಕುವುದಿಲ್ಲ ಎಂದಷ್ಟೇ ಹೇಳಿಕೊಂಡಿವೆ.

ಎಸ್‌ಪಿ - ಬಿಎಸ್‌ಪಿ ಪಕ್ಷಗಳು ಕಾಂಗ್ರೆಸ್‌ ಅನ್ನು ಬಹುತೇಕ ಮೈತ್ರಿಯಿಂದ ಹೊರಗಿಟ್ಟಿದ್ದರೂ ಕಾಂಗ್ರೆಸ್ ಮುಖಂಡರು ಮಾತ್ರ ಇನ್ನೂ ಈ ಪಕ್ಷಗಳೊಂದಿಗೆ ಮೈತ್ರಿಯಾಗುವ ಸಾಧ್ಯತೆಯ ಬಗ್ಗೆ ಭರವಸೆಯ ಮಾತುಗಳನ್ನೇ ಆಡುತ್ತಾ ಬಂದಿದ್ದಾರೆ.

ಎಸ್‌ಪಿ- ಬಿಎಸ್‌ಪಿ ಮೈತ್ರಿ ಬಗ್ಗೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್‌ ಮುಖಂಡ ಪಿ. ಚಿದಂಬರಂ, "ಮೈತ್ರಿ ಸಾಧ್ಯತೆ ಇನ್ನೂ ಮುಗಿದಿಲ್ಲ. ಎಸ್‌ಪಿ- ಬಿಎಸ್‌ಪಿ ಮೈತ್ರಿಯೇ ಕೊನೆಯಲ್ಲ" ಎಂದಿದ್ದರು.

ಲೋಕಸಭೆಗೆ ಈಗಾಗಲೇ ಮೈತ್ರಿ ಮಾಡಿಕೊಂಡ ಮಾಯಾವತಿ ಮತ್ತು ಅಖಿಲೇಶ್ ಯಾದವ್. 
ಲೋಕಸಭೆಗೆ ಈಗಾಗಲೇ ಮೈತ್ರಿ ಮಾಡಿಕೊಂಡ ಮಾಯಾವತಿ ಮತ್ತು ಅಖಿಲೇಶ್ ಯಾದವ್. 

ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್‌ನಾಥ್‌ ಕೂಡಾ ಎಸ್‌ಪಿ- ಬಿಎಸ್‌ಪಿ ಮೈತ್ರಿಯ ಸೀಟು ಹಂಚಿಕೆಯೇ ಅಂತಿಮವಲ್ಲ ಎನ್ನುವ ಮೂಲಕ ಕಾಂಗ್ರೆಸ್‌ಗೂ ಈ ಮೈತ್ರಿಯಲ್ಲಿ ಜಾಗ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದರು. ಲೋಕಸಭಾ ಚುನಾವಣೆಗೆ ಹೆಚ್ಚೂ ಕಡಿಮೆ ಮೂರು ತಿಂಗಳ ಮುಂಚೆ ಪಕ್ಷಗಳು ಕ್ಷೇತ್ರಗಳನ್ನು ಗೆಲ್ಲುವ ಲೆಕ್ಕಾಚಾರಗಳಿಗೆ ಇಳಿದಿರುವ ಸಂದರ್ಭದಲ್ಲಿ ಈ ಸಮೀಕ್ಷೆ ಬಿಜೆಪಿಗೆ ದಿಗಿಲನ್ನೂ, ಕಾಂಗ್ರೆಸ್‌ಗೆ ಭರವಸೆಯನ್ನೂ ಮೂಡಿಸುವಂತಿದೆ.

ಉತ್ತರ ಪ್ರದೇಶ ಚುನಾವಣೆಯಲ್ಲಿ ಗೆಲುವಿಗಾಗಿ ರಣತಂತ್ರ ರೂಪಿಸುತ್ತಿರುವ ಕಾಂಗ್ರೆಸ್‌ ಪ್ರಿಯಾಂಕಾ ಗಾಂಧಿ ಅವರಿಗೆ ರಾಜ್ಯದ ಪೂರ್ವ ಭಾಗದ ಚುನಾವಣಾ ಉಸ್ತುವಾರಿ ವಹಿಸಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಒಂದು ಕ್ಷೇತ್ರವನ್ನೂ ಗೆಲ್ಲಲಾಗದ 30 ಲೋಕಸಭಾ ಕ್ಷೇತ್ರಗಳ ಹೊಣೆಯನ್ನು ಈಗ ಪ್ರಿಯಾಂಕಾಗೆ ವಹಿಸಲಾಗಿದೆ.

ಬಿಜೆಪಿಯನ್ನು ಸೋಲಿಸಬೇಕೆಂಬ ಅಂಶವನ್ನು ಮುಂದಿಟ್ಟುಕೊಂಡು ಎಸ್‌ಪಿ- ಬಿಎಸ್‌ಪಿ ಬಹುಕಾಲದ ವೈಷಮ್ಯ ಮರೆತು ಉತ್ತರ ಪ್ರದೇಶದಲ್ಲಿ ಈಗಾಗಲೇ ತಲಾ 38 ಕ್ಷೇತ್ರಗಳನ್ನು ಹಂಚಿಕೆ ಮಾಡಿಕೊಂಡಿವೆ. ಈ ಸಂದರ್ಭದಲ್ಲಿ ಕಾಂಗ್ರೆಸ್‌ ಜತೆಗಿನ ಮರುಮೈತ್ರಿ ಸಾಧ್ಯತೆಯೂ ಸುಲಭವಿಲ್ಲ. ಆದರೆ, ಸಮೀಕ್ಷೆ ಹೇಳಿರುವಂತೆ ಮತ ಗಳಿಕೆ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದರೆ ಎಸ್‌ಪಿ- ಬಿಎಸ್‌ಪಿ, ಕಾಂಗ್ರೆಸ್‌ಗೆ ಮತಗಳು ಹಂಚಿಹೋಗಿ ಅದು ಬಿಜೆಪಿಗೇ ಅನುಕೂಲವಾಗಲಿದೆ.

ಎಸ್‌ಪಿ- ಬಿಎಸ್‌ಪಿ ಪಕ್ಷಗಳು ಕಾಂಗ್ರೆಸ್‌ ಜತೆಗೆ ಚುನಾವಣೆಗೆ ಹೊರಟರೆ ಲಾಭ ಹೆಚ್ಚು ಎಂದು ಈ ಸಮೀಕ್ಷೆ ಹೇಳಿದೆ. ಸಮೀಕ್ಷೆಯ ನಂತರವೂ ಎಸ್‌ಪಿ-ಬಿಎಸ್‌ಪಿ, ಕಾಂಗ್ರೆಸ್‌ ಸ್ವತಂತ್ರವಾಗಿ ಚುನಾವಣೆ ಎದುರಿಸಲಿವೆಯೋ ಅಥವಾ ಮರುಮೈತ್ರಿಗೆ ಮನಸ್ಸು ಮಾಡಲಿವೆಯೋ ಎಂಬುದಕ್ಕೆ ಮುಂದಿನ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.