samachara
www.samachara.com
ವ್ಯರ್ಥವಾಗುತ್ತಿರುವ ಆಹಾರ, ‘ಅಪೌಷ್ಠಿಕ’ ಭಾರತ; ಅನ್ನಕ್ಕಾಗಿ ಯುದ್ಧ ನಡೆಯುವ ಮೊದಲು ಎಚ್ಚರವಾಗಿ!
COVER STORY

ವ್ಯರ್ಥವಾಗುತ್ತಿರುವ ಆಹಾರ, ‘ಅಪೌಷ್ಠಿಕ’ ಭಾರತ; ಅನ್ನಕ್ಕಾಗಿ ಯುದ್ಧ ನಡೆಯುವ ಮೊದಲು ಎಚ್ಚರವಾಗಿ!

ಆಹಾರದ ಮಹತ್ವ ಅರಿತು ಆಹಾರ ಪೋಲಾಗದಂತೆ ತಡೆಯದಿದ್ದರೆ ಮುಂದೊಂದು ದಿನ ಅನ್ನಕ್ಕಾಗಿ ಯುದ್ಧವೇ ನಡೆದರೆ ಆಶ್ಚರ್ಯವಿಲ್ಲ.

ಶಿವಕುಮಾರ ಸ್ವಾಮೀಜಿ ಅಂತ್ಯ ಸಂಸ್ಕಾರದ ದಿನ ಸಿದ್ದಗಂಗಾ ಮಠಕ್ಕೆ ಬಂದ ಭಕ್ತರಿಗೆ ಊಟದ ವ್ಯವಸ್ಥೆ ಮಾಡಿದ್ದ ಜಾಗದಲ್ಲಿ ಆಹಾರ ವ್ಯರ್ಥ ಮಾಡದಂತೆ ಭಕ್ತರಿಗೆ ಬುದ್ಧಿ ಹೇಳುತ್ತಿದ್ದ ಬಾಲಕನ ವಿಡಿಯೊ ವೈರಲ್‌ ಆಗಿದೆ. ಆಹಾರ ವ್ಯರ್ಥವಾಗದಂತೆ ತಡೆಯುವ ನಿಟ್ಟಿನಲ್ಲಿ ಬಾಲಕ ಹೇಳುತ್ತಿದ್ದ ಮಾತುಗಳು ನಿಜ. ಜಗತ್ತಿನಲ್ಲಿ ಒಂದೆಡೆ ಆಹಾರ ವ್ಯರ್ಥವಾಗುತ್ತಿದ್ದರೆ, ಮತ್ತೊಂದಷ್ಟು ಜನ ಆಹಾರವಿಲ್ಲದೆ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ.

ಆಹಾರ ಪದಾರ್ಥಗಳ ವ್ಯರ್ಥ ಎಂಬುದು ಇಂದು ವಿಶ್ವದ ಎದುರು ಬೃಹತ್ ಸಮಸ್ಯೆಯಾಗಿ ತಲೆದೋರಿದೆ. 130 ಕೋಟಿ ಜನರನ್ನು ಹೊಂದಿರುವ ಭಾರತದಲ್ಲಿ ಇಂದಿನ ಕೃಷಿಯ ಪರಿಸ್ಥಿತಿ ಏನು? ದೇಶದಲ್ಲಿ ವ್ಯರ್ಥವಾಗುತ್ತಿರುವ ಆಹಾರವೆಷ್ಟು? ಭಾರತದಲ್ಲಿ ಅನ್ನವಿಲ್ಲದೆ ಅಪೌಷ್ಠಿಕತೆಯಿಂದ ಬಳಲುತ್ತಿರವವರ ಪ್ರಮಾಣವೆಷ್ಟು? ಅಪೌಷ್ಠಿಕತೆಯಿಂದಾಗುತ್ತಿರುವ ನವಜಾತಶಿಶುಗಳ ಮರಣವೆಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ.

ವ್ಯರ್ಥವಾಗುತ್ತಿರುವ ಆಹಾರ, ‘ಅಪೌಷ್ಠಿಕ’ ಭಾರತ; ಅನ್ನಕ್ಕಾಗಿ ಯುದ್ಧ ನಡೆಯುವ ಮೊದಲು ಎಚ್ಚರವಾಗಿ!

ರೈತರ ಸಂಕಷ್ಟ ಹಾಗೂ ಕೃಷಿಯ ಕುರಿತ ಪ್ರಭುತ್ವದ ಅಸಡ್ಡೆ ಒಂದೆಡೆಯಾದರೆ, ಆಹಾರ ಪದಾರ್ಥಗಳನ್ನು ವ್ಯರ್ಥ ಮಾಡುವುದು ದೇಶದ ಮತ್ತೊಂದು ದೊಡ್ಡ ಪಿಡುಗಾಗಿ ಬದಲಾಗಿದೆ. ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಪ್ರತಿನಿತ್ಯ ಉತ್ಪಾದನೆಯಾಗುವ ಶೇ.40 ರಷ್ಟು ಆಹಾರ ಪದಾರ್ಥಗಳನ್ನು ವ್ಯರ್ಥವಾಗುತ್ತಿದೆ. ಭಾರತದಲ್ಲಿ ಪ್ರತಿವರ್ಷ 67 ಮಿಲಿಯನ್ ಟನ್ ಆಹಾರ ಉತ್ಪನ್ನಗಳನ್ನು ವ್ಯರ್ಥ ಮಾಡಲಾಗುತ್ತಿದೆ. ವರ್ಷವೊಂದಕ್ಕೆ ಸುಮಾರು 21 ಮಿಲಿಯನ್ ಟನ್ ಗೋದಿ ಉತ್ಪನ್ನ ವ್ಯರ್ಥವಾಗುತ್ತಿದೆ.

ವರ್ಷವೊಂದಕ್ಕೆ ಭಾರತದಲ್ಲಿ ವ್ಯರ್ಥವಾಗಿ ಕಸದ ಬುಟ್ಟಿ ಸೇರುತ್ತಿರುವ ಆಹಾರ ಪದಾರ್ಥಗಳ ಮೌಲ್ಯ ಸುಮಾರು 92,000 ಕೋಟಿ ರೂಪಾಯಿ ಎಂದು ಅಂದಾಜು ಮಾಡಲಾಗಿದೆ. ಈ ಪ್ರಮಾಣದ ಆಹಾರ ಪದಾರ್ಥಗಳನ್ನು ಬೆಳೆಯಲು ದೇಶದ ಶುದ್ಧ ಕುಡಿಯುವ ನೀರಿನ ಪೈಕಿ ಶೇ.25 ರಷ್ಟು ನೀರು ಖರ್ಚಾಗುತ್ತದೆ. ಕುಡಿಯಲು ನೀರಿಗೂ ಆಹಾಕಾರ ಎದ್ದಿರುವ ಇಂದಿನ ದಿನಗಳಲ್ಲಿ ಈ ಪ್ರಮಾಣ ಆಹಾರದ ಉತ್ಪನ್ನಗಳನ್ನು ವ್ಯರ್ಥ ಮಾಡುವುದು ಖಂಡಿತ ಉತ್ತಮ ಬೆಳೆವಣಿಗೆಯಲ್ಲ.

ಆಹಾರವನ್ನು ವ್ಯರ್ಥಗೊಳಿಸುವ ದೇಶಗಳ ಪೈಕಿ ಭಾರತಕ್ಕೆ 7ನೇ ಸ್ಥಾನವಿದೆ. ಭಾರತದಲ್ಲಿ ಅತಿಹೆಚ್ಚು ಆಹಾರವನ್ನು ವ್ಯರ್ಥಮಾಡುತ್ತಿರುವ ರಾಜ್ಯಗಳ ಪೈಕಿ ದೆಹಲಿಗೆ ಮೊದಲ ಸ್ಥಾನದಲ್ಲಿದೆ. ಬಿಎಂಸಿ ಅಂಕಿಅಂಶಗಳ ಪ್ರಕಾರ ರಾಜಧಾನಿ ದೆಹಲಿ ಒಂದರಲ್ಲೇ ಪ್ರತಿವರ್ಷ ಸುಮಾರು 9,000 ಮೆಟ್ರಿಕ್ ಟನ್ ಆಹಾರ ಪದಾರ್ಥಗಳು ಮಣ್ಣು ಪಾಲಾಗುತ್ತಿವೆ.

ವ್ಯರ್ಥವಾಗುತ್ತಿರುವ ಆಹಾರ, ‘ಅಪೌಷ್ಠಿಕ’ ಭಾರತ; ಅನ್ನಕ್ಕಾಗಿ ಯುದ್ಧ ನಡೆಯುವ ಮೊದಲು ಎಚ್ಚರವಾಗಿ!

ಕರ್ನಾಟಕದ ಪಾಲೆಷ್ಟು..?

ಆಹಾರ ಪದಾರ್ಥಗಳನ್ನು ವ್ಯರ್ಥಗೊಳಿಸುವುದರಲ್ಲಿ ಕರ್ನಾಟಕವೂ ಹಿಂದೆ ಉಳಿದಿಲ್ಲ. ಕೆಲವು ಎನ್‌ಜಿಓಗಳು ನಡೆಸಿರುವ ಸಮೀಕ್ಷೆಗಳ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ ವಾರ್ಷಿಕ 4,500 ಮೆಟ್ರಿಕ್ ಟನ್ ಆಹಾರವನ್ನು ವ್ಯರ್ಥ ಮಾಡಲಾಗುತ್ತಿದೆ. ಬೆಂಗಳೂರಿನ ಮದುವೆ ಮಂಟಪಗಳು, ಹೋಟೆಲ್‌ಗಳು ಹಾಗೂ ಖಾಸಗಿ ಪಾರ್ಟಿಗಳ ನೆಪದಲ್ಲಿ ವ್ಯರ್ಥವಾಗುತ್ತಿರುವ ಆಹಾರದ ಮೌಲ್ಯವೇ ಪ್ರತಿವರ್ಷ 1,500 ಕೋಟಿಗೂ ಅಧಿಕ ಎನ್ನುತ್ತಿವೆ ಸಮೀಕ್ಷೆಗಳು.

ಹಸಿವಿನಿಂದ, ಅಪೌಷ್ಠಿಕತೆಯಿಂದ ಬಳಲುತ್ತಿರುವ ದೇಶದಲ್ಲಿ ಅದ್ದೂರಿ ಮದುವೆಗಳು, ಅದ್ದೂರಿತನದ ಹೆಸರಿನಲ್ಲಿ ಅಪಾರ ಪ್ರಮಾಣದ ಆಹಾರವನ್ನು ವ್ಯರ್ಥಗೊಳಿಸುವುದು ಈ ದೇಶದ ತಳವರ್ಗದ ಜನರ ಪರಿಸ್ಥಿತಿಯನ್ನು ಅಣಕ ಮಾಡುವಂತಿದೆ.

ಅಪೌಷ್ಠಿಕತೆಯಲ್ಲಿ ಭಾರತವೇ ಮುಂದು!

ವಿಶ್ವದಲ್ಲೇ ಅತಿಹೆಚ್ಚು ಅಪೌಷ್ಠಿಕತೆಯಿಂದ ನರಳುತ್ತಿರುವ ಜನರನ್ನು ಹೊಂದಿರುವ ದೇಶಗಳ ಪೈಕಿ ಭಾರತಕ್ಕೆ ಅಗ್ರ ಸ್ಥಾನ. ದೇಶದಲ್ಲಿ 65 ಮಿಲಿಯನ್ ಜನರಿಗೆ ಹಸಿವೆಂಬುದು ದಿನನಿತ್ಯದ ಶತ್ರು. ಇದು ಫ್ರಾನ್ಸ್ ದೇಶದ ಜನಸಂಖ್ಯೆಗೂ ಅಧಿಕ. ಭಾರತದಲ್ಲಿ 190.07 ಮಿಲಿಯನ್ ಜನರಿಗೆ ಒಪ್ಪೊತ್ತಿನ ಊಟಕ್ಕೂ ಕಷ್ಟವಿದೆ. ದೇಶದ ಜನಸಂಖ್ಯೆಯ ಶೇ.14.05 ರಷ್ಟು ಜನ ಅಪೌಷ್ಠಿಕಾಂಶತೆಯಿಂದ ನರಳುತ್ತಿದ್ದಾರೆ. ಐದು ವರ್ಷಕ್ಕಿಂತ ಕೆಳಗಿನ ಶೇ.21 ರಷ್ಟು ಮಕ್ಕಳಲ್ಲಿ ಅಪೌಷ್ಠಿಕತೆ ಇದೆ. ಪೌಷ್ಠಿಕ ಆಹಾರ ಇಲ್ಲದ ಕಾರಣಕ್ಕೆ 5 ವರ್ಷಕ್ಕೆ ಮೇಲ್ಪಟ್ಟ ಶೇ.38.04 ರಷ್ಟು ಮಕ್ಕಳಿಗೆ ವಯಸ್ಸಿಗೆ ತಕ್ಕಂತೆ ದೇಹದಲ್ಲಿ ಬೆಳವಣಿಗೆಯಾಗುತ್ತಿಲ್ಲ.

ವ್ಯರ್ಥವಾಗುತ್ತಿರುವ ಆಹಾರ, ‘ಅಪೌಷ್ಠಿಕ’ ಭಾರತ; ಅನ್ನಕ್ಕಾಗಿ ಯುದ್ಧ ನಡೆಯುವ ಮೊದಲು ಎಚ್ಚರವಾಗಿ!

ನವಜಾತಶಿಶುಗಳ ಮರಣದಲ್ಲೂ ಭಾರತವೇ ಮುಂದು!

ದೇಶದಲ್ಲಿ ಹುಟ್ಟುವ ಪ್ರತಿ ನಾಲ್ಕು ಮಕ್ಕಳ ಪೈಕಿ ಒಂದು ಮಗು ಅಪೌಷ್ಠಿಕತೆಯಿಂದ ಬಳಲುತ್ತಿದೆ. ಸೂಕ್ತ ಪೌಷ್ಠಿಕಾಂಶವಿಲ್ಲದೆ ಪ್ರತಿದಿನ 3,000 ಮಕ್ಕಳು ಸಾವನ್ನಪ್ಪುತ್ತಿವೆ. ಭಾರತದಲ್ಲಿ 5 ವರ್ಷದೊಳಗಿನ ಮಕ್ಕಳ ಸಾವಿನ ಸಂಖ್ಯೆ ಶೇ 24 ರಷ್ಟಿದೆ. ಗರ್ಭಿಣಿ ಸ್ತ್ರೀ ಹಾಗೂ ತಾಯಂದಿರಿಗೂ ಪೌಷ್ಠಿಕಯುಕ್ತ ಆಹಾರವಿಲ್ಲದ ಕಾರಣ ಶೇ.30 ರಷ್ಟು ನವಜಾತ ಶಿಶುಗಳು ದೇಶದಲ್ಲಿ ಪ್ರತಿನಿತ್ಯ ಸಾವನ್ನಪ್ಪುತ್ತಿವೆ. 2012 ರಲ್ಲಿ ಸುಮಾರು 7 ಮಿಲಿಯನ್ ಮಕ್ಕಳು ಅಪೌಷ್ಠಿಕತೆಯಿಂದ ಸಾವನ್ನಪ್ಪಿದ್ದವು. ಈ ಸಂಖ್ಯೆ ಪ್ರತಿವರ್ಷ ಏರುತ್ತಲೇ ಇದೆ. ವಿಶ್ವದ ಹಸಿವಿನ ಸೂಚಿಯಲ್ಲಿ ಸ್ಥಾನಪಡೆದಿರುವ 88 ರಾಷ್ಟ್ರಗಳ ಪೈಕಿ ಭಾರತಕ್ಕೆ 63 ಸ್ಥಾನ.

ಭಾರತದಲ್ಲಿ ವ್ಯರ್ಥ ಮಾಡಲಾಗುತ್ತಿರುವ ಆಹಾರ ಪದಾರ್ಥಗಳ ಪ್ರಮಾಣವನ್ನು ಕಂಡು ವಿಶ್ವಸಂಸ್ಥೆಯೇ ದಿಗ್ಭ್ರಮೆಗೊಳಗಾಗಿದೆ. ಅಲ್ಲದೆ ಭವಿಷ್ಯದ ಆಹಾರದ ಬಿಕ್ಕಟ್ಟಿನ ಕುರಿತು ಭಾರತಕ್ಕೆ ಎಚ್ಚರಿಕೆ ನೀಡಿದೆ. ಈಗಲೂ ಭಾರತ ಎಚ್ಚೆತ್ತುಕೊಳ್ಳದಿದ್ದರೆ, ಮುಂದೊಂದು ದಿನ ಸೂಡಾನ್, ಸೊಮಾಲಿಯಾ, ಇಥಿಯೋಪಿಯಾ, ನೈಜೀರಿಯಾ, ಜಾಂಬಿಯಾ ದೇಶಗಳಂತೆ ತುತ್ತು ಅನ್ನಕ್ಕಾಗಿ ಪರದಾಡುವಂತಹ ಸ್ಥಿತಿ ಭಾರತದಲ್ಲೂ ಉಂಟಾಗಬಹುದು.

2014-15ರಲ್ಲಿ 9,009 ಕೋಟಿ ಮೌಲ್ಯದ ಅಕ್ಕಿಯನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲಾಗಿತ್ತು. 2016-17 ರಲ್ಲಿ 6,623 ಕೋಟಿ ಮೌಲ್ಯದ ಹಣ್ಣು ತರಕಾರಿಗಳನ್ನು ಆಸ್ಟ್ರೇಲಿಯಾ ಸೇರಿದಂತೆ ಅನೇಕ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳಲಾಗಿದೆ. ಇದಲ್ಲದೆ ಗೋದಿ, ಸಕ್ಕರೆ, ಬೇಳೆಕಾಳುಗಳು ಹಾಗೂ ಅಡಿಕೆಯನ್ನು ಭಾರತ ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದೆ. ಇದಕ್ಕೆ ಅಪಾರ ಪ್ರಮಾಣದ ಹಣವನ್ನೂ ವ್ಯಯಿಸುತ್ತಿದೆ. ವಿಶ್ವದಲ್ಲೇ ಅತ್ಯಂತ ದೊಡ್ಡ ಕೃಷಿ ಆಧಾರಿತ ರಾಷ್ಟ್ರ ಎನಿಸಿರುವ ಭಾರತ ಅನ್ನಕ್ಕಾಗಿ ಮತ್ತೊಂದು ದೇಶದೆದುರು ಕೈಚಾಚುವ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದಲ್ಲಿ ವರ್ಷಕ್ಕೆ 15,000 ಜನ ಹಸಿವಿನಿಂದ ಸಾಯುತ್ತಿದ್ದಾರೆ ಎಂದರೆ ಭಾರತದಲ್ಲಿ ಕೃಷಿ ರಂಗದ ಇಂದಿನ ದುಸ್ಥಿತಿಯನ್ನು ಊಹಿಸಿಕೊಳ್ಳಿ.

ದೇಶದಲ್ಲಿ ಯಾವ ಸರ್ಕಾರಗಳೂ ಸಹ ಸುಸ್ಥಿರ ಕೃಷಿಯ ಕುರಿತು ಗಮನವಹಿಸದಿರುವುದು ಇದಕ್ಕೆ ಮುಖ್ಯ ಕಾರಣ. ಸ್ಪಷ್ಟ ಕೃಷಿನೀತಿ ರೂಪಿಸುವಲ್ಲಿ ಸರಕಾರಗಳ ವೈಫಲ್ಯ ಹಾಗೂ ಕೃಷಿಯ ಕುರಿತ ಅಸಡ್ಡೆಯಿಂದಾಗಿ ಇಂದು ದೇಶದಲ್ಲಿ ಕೃಷಿ ಸಂಪೂರ್ಣ ಅವನತಿಯ ಅಂಚಿಗೆ ಬಂದು ನಿಂತಿದೆ. ದೇಶದಲ್ಲಿ ಸುಮಾರು ಶೇ.60 ಕ್ಕೂ ಅಧಿಕ ಮಳೆಯಾಧಾರಿತ ಕೃಷಿ ಭೂಮಿ ಇದೆ. ಆದರೆ, ನೀರುಣಿಸಲು ಸರಿಯಾದ ನೀರಾವರಿ ಯೋಜನೆಗಳಿಲ್ಲ, ಹತ್ತಾರು ನಿರಾವರಿ ಯೋಜನೆಗಳು ಇನ್ನೂ ಕಾಗದಗಳಲ್ಲೇ ಇದೆ.

ಇದೆಲ್ಲದರ ಪರಿಣಾಮ ರೈತ ಕೃಷಿಯಲ್ಲಿ ಅಭಿವೃದ್ಧಿ ಕಾಣದೆ ಕಂಗಾಲಾಗಿದ್ದಾನೆ. ಸಾಲದ ಸುಳಿಗೆ ಸಿಲುಕಿ ನರಳುತ್ತಿದ್ದಾನೆ. ಕೃಷಿಯನ್ನು ತ್ಯಜಿಸಿ ನಗರಗಳಿಗೆ ವಲಸೆ ಹೋಗುತ್ತಿದ್ದಾನೆ. ಸರಕಾರವೇ ನೀಡುವ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಪ್ರತಿ 30 ನಿಮಿಷಕ್ಕೆ ಒಬ್ಬ ರೈತ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ದೇಶದಲ್ಲಿ ರೈತರ ಆತ್ಮಹತ್ಯೆ, ಕೃಷಿ ಬಿಕ್ಕಟ್ಟಿನ ನಡುವೆ ನಡುವೆಯೂ ಅಪಾರ ಪ್ರಮಾಣದ ಆಹಾರ ವ್ಯರ್ಥವಾಗುತ್ತಿದೆ. ಆಹಾರದ ಮಹತ್ವ ಅರಿತು ಆಹಾರ ಪೋಲಾಗದಂತೆ ತಡೆಯದಿದ್ದರೆ ಮುಂದೊಂದು ದಿನ ಅನ್ನಕ್ಕಾಗಿ ಯುದ್ಧವೇ ನಡೆದರೆ ಆಶ್ಚರ್ಯವಿಲ್ಲ.