samachara
www.samachara.com
ದೇಣಿಗೆ ಸಂಗ್ರಹದಲ್ಲಿ ಬಿಜೆಪಿ ನಾಗಾಲೋಟ;  2017-18ರಲ್ಲಿ ಕೇಸರಿ ಪಾಳಯಕ್ಕೇ ಶೇ. 93ರಷ್ಟು ಚಂದಾ
COVER STORY

ದೇಣಿಗೆ ಸಂಗ್ರಹದಲ್ಲಿ ಬಿಜೆಪಿ ನಾಗಾಲೋಟ; 2017-18ರಲ್ಲಿ ಕೇಸರಿ ಪಾಳಯಕ್ಕೇ ಶೇ. 93ರಷ್ಟು ಚಂದಾ

2017-18ರಲ್ಲಿ 7 ರಾಷ್ಟ್ರೀಯ ಪಕ್ಷಗಳಿಗೆ 20,000 ರೂಪಾಯಿಗಿಂತ ಹೆಚ್ಚಿನ ಮೊತ್ತದ 469.89 ಕೋಟಿ ರೂಪಾಯಿ ದೇಣಿಗೆ ಹರಿದು ಬಂದಿದೆ. ಇದರಲ್ಲಿ 437.04 ಕೋಟಿ ರೂಪಾಯಿಗಳು ಬಿಜೆಪಿ ಪಾಲಾಗಿದೆ.

2017-18ರಲ್ಲಿ 7 ರಾಷ್ಟ್ರೀಯ ಪಕ್ಷಗಳು ಪಡೆದುಕೊಂಡಿರುವ ದೇಣಿಗೆಗಳತ್ತ ಕಣ್ಣಾಡಿಸಿದಾಗ ಆಸಕ್ತಿಕರ ಅಂಶಗಳು ಕಂಡು ಬಂದಿವೆ. ಕೇಂದ್ರದಲ್ಲಿ ಮತ್ತು ಹಲವು ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಉಳಿದ ಆರು ಪಕ್ಷಗಳಿಗೆ ಹೋಲಿಸಿದರೆ ಬರೋಬ್ಬರಿಗೆ 13 ಪಟ್ಟು ಹೆಚ್ಚಿನ ದೇಣಿಗೆ ಪಡೆದುಕೊಂಡಿದೆ.

ಕಾಂಗ್ರೆಸ್‌, ಎನ್‌ಸಿಪಿ, ಸಿಪಿಐಎಂ, ಸಿಪಿಐ, ಟಿಎಂಸಿ, ಬಿಎಸ್‌ಪಿ ಒಟ್ಟಾಗಿ ಶೇಕಡಾ 7ರಷ್ಟು ದೇಣಿಗೆಯನ್ನು ಹಂಚಿಕೊಂಡಿದ್ದಾರೆ. ಬಿಜೆಪಿ ಶೇಕಡಾ 93ರಷ್ಟು ದೇಣಿಗೆಗಳನ್ನು ಬಾಚಿಕೊಂಡಿದೆ. ‘ಅಸೋಸಿಯೇಷನ್‌ ಫಾರ್‌ ಡೆಮಾಕ್ರಾಟಿಕ್‌ ರಿಫಾರ್ಮ್ಸ್’ ಅಥವಾ ‘ಎಡಿಆರ್‌’ ಸಂಸ್ಥೆ ಚುನಾವಣಾ ಆಯೋಗದ ದಾಖಲೆಗಳನ್ನು ಆಧರಿಸಿ ಈ ವರದಿ ತಯಾರಿಸಿದ್ದು ಅದರಲ್ಲಿ ಈ ಮಾಹಿತಿಗಳಿವೆ.

ಚುನಾವಣಾ ಆಯೋಗದ ದಾಖಲೆಗಳ ಪ್ರಕಾರ 2017-18ರಲ್ಲಿ 7 ರಾಷ್ಟ್ರೀಯ ಪಕ್ಷಗಳಿಗೆ ಹರಿದು ಬಂದ
20,000 ರೂಪಾಯಿಗಿಂತ ಹೆಚ್ಚಿನ ಮೊತ್ತದ ವೈಯಕ್ತಿಕ ದೇಣಿಗೆಗಳ ಒಟ್ಟು ಮೊತ್ತವೇ ಸುಮಾರು 469.89 ಕೋಟಿ ರೂಪಾಯಿ. ಇದರಲ್ಲಿ 437.04 ಕೋಟಿ ರೂಪಾಯಿಗಳು ಬಿಜೆಪಿ ಪಾಲಾಗಿದೆ. ಬಿಎಸ್‌ಪಿ ಮಾತ್ರ ತಾನು 20,000 ರೂಪಾಯಿ ಮೇಲಿನ ಯಾವುದೇ ದೇಣಿಗೆ ಪಡೆದುಕೊಂಡಿಲ್ಲ ಎಂದು ಹೇಳಿದೆ. ಪಕ್ಷ ಕಳೆದ 12 ವರ್ಷಗಳಿಂದ ಇದೇ ಮಾತನ್ನು ಹೇಳುತ್ತಿದೆ ಕೂಡ.

ಬಿಜೆಪಿ ನಂತರದ ಸ್ಥಾನದಲ್ಲಿ ಕಾಂಗ್ರೆಸ್‌ ಇದ್ದು ಕೇವಲ 26.65 ಕೋಟಿ ರೂಪಾಯಿಗಳನ್ನು ಅದು ದೇಣಿಗೆ ರೂಪದಲ್ಲಿ ಪಡೆದುಕೊಂಡಿದೆ. ಇದೇ ಅವಧಿಯಲ್ಲಿ ಸಿಪಿಐಎಂ 2.75 ಕೋಟಿ ರೂ., ಎನ್‌ಸಿಪಿ 2.08 ಕೋಟಿ ರೂ., ಸಿಪಿಐ 1.14 ಕೋಟಿ ರೂ. ಮತ್ತು ಟಿಎಂಸಿ 0.2 ಕೋಟಿ ರೂ. ದೇಣಿಗೆ ಪಡೆದುಕೊಂಡಿವೆ.

‘ಕಳೆದ ಕೆಲವು ವರ್ಷಗಳಿಂದ ಬಿಜೆಪಿಯ ದೇಣಿಗೆ ಪ್ರಮಾಣ ಏರಿಕೆಯಾಗುತ್ತಲೇ ಇದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಈ ಪ್ರಮಾಣ ಇನ್ನೂ ಹೆಚ್ಚಾಗಿದೆ’ ಎಂದು ಎಡಿಆರ್‌ ಮುಖ್ಯಸ್ಥ ಅನಿಲ್‌ ವರ್ಮಾ ಹೇಳಿದ್ದಾರೆ.

ದೇಣಿಗೆಗಳಲ್ಲಿ ಹೆಚ್ಚಿನವು ಅಂದರೆ 208.56 ಕೋಟಿ ರೂಪಾಯಿ ದೆಹಲಿಯಿಂದ ಬಂದಿದ್ದರೆ, ಮಹಾರಾಷ್ಟ್ರದಿಂದ 71.93 ಕೋಟಿ ರೂ, ಗುಜರಾತ್‌ನಿಂದ 44.02 ಕೋಟಿ ರೂ. ಮತ್ತು ಕರ್ನಾಟಕದಿಂದ 43.67 ಕೋಟಿ ರೂಪಾಯಿ ಬಂದಿದೆ. ಹರ್ಯಾಣದಿಂದ 10.59 ಕೋಟಿ ರೂ. ಬಂದಿದ್ದರೆ ಉಳಿದ ಎಲ್ಲಾ ರಾಜ್ಯಗಳಿಂದ ಒಟ್ಟಾಗಿ ಕೇವಲ 48.52 ಕೋಟಿ ರೂಪಾಯಿ ಚುನಾವಣಾ ದೇಣಿಗೆಗಳು ಬಂದಿವೆ. ಇದೇ ವೇಳೆ ಅಪರಿಚಿತ ಅಥವಾ ವಿಳಾಸ ಘೋಷಿಸದ ಸ್ಥಳಗಳಿಂದ 42.60 ಕೋಟಿ ರೂಪಾಯಿ ದೇಣಿಗೆ ಬಂದಿದೆ.

ಸಾಂದರ್ಭಿಕ ಚಿತ್ರ. 
ಸಾಂದರ್ಭಿಕ ಚಿತ್ರ. 
/ದಿ ಹಿಂದೂ

ಈ ದೇಣಿಗೆಗಳ ಆಳಕ್ಕಿಳಿದಾಗ ಇವುಗಳಲ್ಲಿ ಶೇಕಡಾ 90ರಷ್ಟು ದೇಣಿಗೆಗಳನ್ನು ಅಂದರೆ 422.04 ಕೋಟಿ ರೂಪಾಯಿಗಳನ್ನು ಕಾರ್ಪೊರೇಟ್‌ ಕಂಪನಿಗಳು ನೀಡಿರುವುದು ತಿಳಿದು ಬರುತ್ತದೆ.

ವ್ಯಕ್ತಿಗಳು ವೈಯಕ್ತಿಕವಾಗಿ 47.12 ಕೋಟಿ ರೂಪಾಯಿಗಳನ್ನು ಪಕ್ಷಗಳಿಗೆ ದೇಣಿಗೆ ನೀಡಿದ್ದಾರೆ. ಕಾರ್ಪೊರೇಟ್‌ ದೇಣಿಗೆಯಲ್ಲಿ ಸಿಂಹಪಾಲನ್ನು ಬಿಜೆಪಿ ಪಡೆದುಕೊಂಡಿದ್ದು 400.23 ಕೋಟಿ ರೂಪಾಯಿಗಳನ್ನು ಬಾಚಿಕೊಂಡಿದೆ. ಇದೇ ಅವಧಿಯಲ್ಲಿ 36.71 ಕೋಟಿ ರೂಪಾಯಿ ವೈಯಕ್ತಿಕ ದೇಣಿಗೆಯೂ ಕಮಲ ಪಕ್ಷಕ್ಕೆ ಬಂದಿದೆ. ಕಾಂಗ್ರೆಸ್‌ಗೆ 19.29 ಕೋಟಿ ರೂಪಾಯಿ ಕಾರ್ಪೊರೇಟ್‌ ದೇಣಿಗೆ ಬಂದಿದ್ದರೆ, 7.36 ಕೋಟಿ ರೂಪಾಯಿ ವೈಯಕ್ತಿಕ ದೇಣಿಗೆಗಳು ಬಂದಿವೆ.

ಬಿಜೆಪಿ ಅತೀ ದೊಡ್ಡ ಮೊತ್ತದ ಹಣವನ್ನು ‘ಪ್ರುಡೆಂಟ್‌ ಎಲೆಕ್ಟೋರಲ್‌ ಟ್ರಸ್ಟ್‌’ ನೀಡಿದೆ. ಏರ್ಟೆಲ್‌ ಮೊದಲಾದ ಬ್ರ್ಯಾಂಡ್‌ಗಳನ್ನು ಮುನ್ನಡೆಸುವ ಭಾರ್ತಿ ಎಂಟರ್‌ಪ್ರೈಸಸ್‌ಗೆ ಸೇರಿದ್ದೆನ್ನಲಾದ ಈ ಟ್ರಸ್ಟ್‌ ಬಿಜೆಪಿಗೆ 154.3 ಕೋಟಿ ರೂಪಾಯಿ ದೇಣಿಗೆ ನೀಡಿದೆ. ಎಬಿ ಜನರಲ್ ಎಲೆಕ್ಟೋರಲ್‌ ಟ್ರಸ್ಟ್‌ 12.5 ಕೋಟಿ ರೂ., ಕ್ಯಾಡಿಲಾ ಹೆಲ್ತ್‌ಕೇರ್‌ 10 ಕೋಟಿ ರೂ, ಸಿಪ್ಲಾ ಲಿ. 9 ಕೋಟಿ ರೂ., ಉಸವ್‌ ಪ್ರೈವೇಟ್‌ ಲಿ. 9 ಕೋಟಿ ರೂ., ಮೈಕ್ರೋ ಲ್ಯಾಬ್ಸ್‌ ಲಿ. 9 ಕೋಟಿ ರೂ, ಪ್ರಗತಿ ಗ್ರೂಪ್ಸ್‌ 8.75 ಕೋಟಿ ರೂ, ರೇರ್‌ ಎಂಟರ್‌ಪ್ರೈಸಸ್‌ 8 ಕೋಟಿ ರೂ., ಮಹಾವೀರ್‌ ಮೆಡಿಕೇರ್‌ 6 ಕೋಟಿ ರೂ., ಅಲೆಂಬಿಕ್‌ ಫಾರ್ಮಸೆಟುಕಲ್ಸ್‌ 6 ಕೋಟಿ ರೂಪಾಯಿಗಳನ್ನು ನೀಡಿವೆ.

ಕಾಂಗ್ರೆಸ್‌ಗೆ ಅತೀ ಹೆಚ್ಚಿನ ದೇಣೀಗೆ ನೀಡಿದವರಲ್ಲಿಯೂ ಇದೇ ಪ್ರುಡೆಂಟ್‌ ಮೊದಲ ಸ್ಥಾನದಲ್ಲಿದೆ. ರೂ. 10 ಕೋಟಿ ರೂಪಾಯಿಗಳನ್ನು ಈ ಟ್ರಸ್ಟ್‌ ದೇಣಿಗೆ ನೀಡಿದೆ. ಕ್ಯಾಂಟಿಲಾ ಹೆಲ್ತ್‌ಕೇರ್‌ ಲಿ. 2 ಕೋಟಿ ರೂ., ಅಬ್‌ ಜನರಲ್‌, ಭಾರತೀಯ ಸೋಷಿಯಲಿಸ್ಟ್‌ ರಿಪಬ್ಲಿಕನ್‌ ಎಲೆಕ್ಟೋರಲ್‌ ಟ್ರಸ್ಟ್‌, ನಿರ್ಮಾ ಲಿ. ಟ್ರಿಯಂಫ್‌ ಎಲೆಕ್ಟ್ರೋರಲ್‌ ಟ್ರಸ್ಟ್‌ ತಲಾ 1 ಕೋಟಿ ರೂಪಾಯಿಗಳನ್ನು ನೀಡಿವೆ. ಗಾಯತ್ರಿ ಪ್ರಾಜೆಕ್ಟ್ಸ್‌ ಲಿ. 92 ಲಕ್ಷ ರೂ., ಪಿಐ ಇಂಡಸ್ಟ್ರೀಸ್‌ ಲಿ. ಮತ್ತು ಝೈಡಸ್‌ ಹೆಲ್ತ್‌ಕೇರ್‌ ಲಿ. ತಲಾ 50 ಲಕ್ಷ ರೂ., ಪವನ್‌ ಅನಿಲ್ ಬಕೇರಿ 25 ಲಕ್ಷ ರೂ. ನೀಡಿದ್ದಾರೆ.

ಎನ್‌ಸಿಪಿ ಪಟ್ಟಿಯಲ್ಲಿ ರಿಯಲ್‌ ಎಸ್ಟೇಟ್‌ ಮತ್ತು ಮೂಲಸೌಕರ್ಯ ವಲಯದ ಕಂಪನಿಗಳಿದ್ದು ಶರದ್‌ ಪವಾರ್ ಪುತ್ರಿ ಸುಪ್ರಿಯಾ ಸುಳೆ ವೈಯಕ್ತಿಕ ಮಟ್ಟದ ದೀಣಿಗೆ ನೀಡಿದವರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಸಿಪಿಐ ದೇಣಿಗೆಯಲ್ಲಿ ಕೇರಳ ರಾಜ್ಯ ಸಮಿತಿ ಮೊದಲ ಸ್ಥಾನದಲ್ಲಿದ್ದು 23.85 ಲಕ್ಷ ರೂಪಾಯಿ ನೀಡಿದೆ. ಪಕ್ಷದ ಸದಸ್ಯರಾದ ಡಿ. ರಾಜಾ, ಸುಧಾಕರ್‌ ರೆಡ್ಡಿ, ಶಮೀಮ್‌ ಫೈಜೀ ಮೊದಲಾದವರೂ ದೊಡ್ಡ ಮೊತ್ತದ ಹಣ ನೀಡಿದ್ದಾರೆ. ತೃಣಮೂಲ ಕಾಂಗ್ರೆಸ್‌ನಲ್ಲಿ ಯಾವುದೇ ಕಾರ್ಪೊರೇಟ್‌ ಸಂಸ್ಥೆಗಳಿಲ್ಲ. ಮಮತಾ ಬ್ಯಾನರ್ಜಿ, ಡೆರಿಕ್‌ ಓ'ಬ್ರಿಯಾನ್, ಸುವೇಂದು ಅಧಿಕಾರಿ, ಇದ್ರಿಸ್‌ ಅಲಿ ಮೊದಲಾದವರೇ ಹೆಚ್ಚಿನ ಮೊತ್ತದ ಹಣ ನೀಡಿದ್ದಾರೆ.

ಇನ್ನು ಬಿಜೆಪಿಯ ದೊಡ್ಡ ಮಟ್ಟದ ದೇಣಿಗೆ ಸಂಗ್ರಹದಲ್ಲಿ ಎಲೆಕ್ಟೋರಲ್‌ ಬಾಂಡ್‌ಗಳ ಪಾಲು ದೊಡ್ಡದಿದೆ ಎಂದು ಎಡಿಆರ್ ಸಹ ಸಂಸ್ಥಾಪಕ ಜಗದೀಪ್‌ ಛೋಕರ್‌ ತಿಳಿಸಿದ್ದಾರೆ. ರಾಜಕೀಯ ಪಕ್ಷಗಳಿಗೆ ಅಪರಿಚಿತರಿಂದ ಹಣ ಪಡೆದುಕೊಳ್ಳುವುದನ್ನು ಸರಾಗವಾಗಿಸಲು 2017ರ ಬಜೆಟ್‌ನಲ್ಲಿ ಎಲೆಕ್ಟೋರಲ್‌ ಬಾಂಡ್‌ ವ್ಯವಸ್ಥೆ ಜಾರಿಗೆ ತರಲಾಗಿತ್ತು.

ಬಿಜೆಪಿಯ ಲೆಕ್ಕಪತ್ರಗಳು ಮತ್ತು ಸ್ಟೇಟ್‌ ಬ್ಯಾಂಕ್‌ನಿಂದ ಪಡೆದುಕೊಂಡ ಆರ್‌ಟಿಐ ಮಾಹಿತಿಗಳ ಪ್ರಕಾರ 2017-18ರಲ್ಲಿ ಮಾರಾಟವಾದ 222 ಕೋಟಿ ರೂಪಾಯಿಗಳ ಎಲೆಕ್ಟೋರಲ್‌ ಬಾಂಡ್‌ಗಳಲ್ಲಿ ಶೇಕಡಾ 95 ಬಿಜೆಪಿ ಪಾಲಾಗಿದೆ.

‘ವಿರೋಧ ಪಕ್ಷಗಳಿಗೆ ಹಣ ಹರಿದು ಹೋಗುವುದನ್ನು ಎಲೆಕ್ಟೋರಲ್‌ ಬಾಂಡ್‌ಗಳು ತಡೆಯಲಿದ್ದು, ಒಂದೇ ಪಕ್ಷಕ್ಕೆ ಹೆಚ್ಚಿನ ಮೊತ್ತವನ್ನು ತಂದುಕೊಡಲಿದೆ’ ಎಂದು ಛೋಕರ್‌ ಅನುಮಾನಿಸಿದ್ದರು. ಇದೀಗ ಪರೋಕ್ಷವಾಗಿ ಈ ಅನುಮಾನ ಸಾಬೀತಾಗಿದೆ ಎಂದು ಅವರು ಹೇಳಿದ್ದಾರೆ. ಇವೆಲ್ಲದರಾಚೆಗೆ ಘೋಷಣೆಯಾಗಿರುವ ದೇಣಿಗೆಯ ಪ್ರಮಾಣ ಕೇವಲ ‘ಟಿಪ್‌ ಆಫ್‌ ದಿ ಐಸ್‌ಬರ್ಗ್’ ಎಂದು ಅವರು ಎಚ್ಚರಿಸಿದ್ದಾರೆ.

ಕೃಪೆ: ಎಡಿಆರ್‌ & ಕ್ಯಾರವಾನ್