samachara
www.samachara.com
ವೈರಲ್‌ ಕವಿತೆಯ ಅಸಲಿ ಕತೆ: ಬರೆಯಲು ‘ಆ’ ಶ್ರೀಶ್ರೀ ಪ್ರೇರಣೆ, ಭಕ್ತರಿಂದ ‘ಈ’ ಶ್ರೀಶ್ರೀಗೆ ಅರ್ಪಣೆ
COVER STORY

ವೈರಲ್‌ ಕವಿತೆಯ ಅಸಲಿ ಕತೆ: ಬರೆಯಲು ‘ಆ’ ಶ್ರೀಶ್ರೀ ಪ್ರೇರಣೆ, ಭಕ್ತರಿಂದ ‘ಈ’ ಶ್ರೀಶ್ರೀಗೆ ಅರ್ಪಣೆ

ತೆಲುಗಿನಲ್ಲೇ ನವ ಜನಪದವಾಗಿ ಬೆಳೆದ ಕವಿತೆಯೊಂದು ಈಗ ಶಿವಕುಮಾರ ಸ್ವಾಮೀಜಿ ಹೆಸರಿನೊಂದಿಗೆ ಹರಿದಾಡುತ್ತಿದೆ. ಆಳಕ್ಕಿಳಿದರೆ ಸಾಹಿತ್ಯ ಲೋಕದ ಮತ್ತೊಂದು ಮಜಲು ತೆರೆದುಕೊಳ್ಳುತ್ತದೆ. 

ದಯಾನಂದ

ದಯಾನಂದ

ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿ ನಿಧನದ ಸಂದರ್ಭದಲ್ಲಿ ಸ್ವಾಮೀಜಿ ಬರೆದಿದ್ದರೆನ್ನಲಾದ ಕವಿತೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ತೆಲುಗಿನ ಕವಿ 'ಶ್ರೀ ಶ್ರೀ' (ಶ್ರೀರಂಗಂ ಶ್ರೀನಿವಾಸರಾವ್) ಅವರ ಹೆಸರಿನಲ್ಲಿ ತೆಲುಗಿನಲ್ಲಿ ಹರಿದಾಡಿದ್ದ ಈ ಕವಿತೆಯನ್ನು ಸುಮಾರು ಎರಡು ವರ್ಷಗಳ ಹಿಂದೆ ಪದ್ಮ ಕೆ. ರಾಜ್‌ ಕನ್ನಡಕ್ಕೆ ಅನುವಾದಿಸಿದ್ದರು. ಕನ್ನಡಕ್ಕೆ ಅನುವಾದಗೊಂಡಿದ್ದ ಈ ಕವಿತೆಯನ್ನು 'ಭಕ್ತ'ರು ಶಿವಕುಮಾರ ಸ್ವಾಮೀಜಿಗಳ ಹೆಸರಿನೊಂದಿಗೆ ಹರಿದು ಬಿಡುವ ಮೂಲಕ ‘ಗುರುಋಣ’ ತೀರಿಸಿಕೊಂಡ ಧನ್ಯಭಾವದಲ್ಲಿದ್ದಾರೆ!

ಶಿವಕುಮಾರ ಸ್ವಾಮೀಜಿ ಹೆಸರಿನಲ್ಲಿ ಹರಿದಾಡಿದ ಈ ಕವಿತೆಯನ್ನು ಬರೆದವರು 'ಶ್ರೀ ಶ್ರೀ' ಅವರೂ ಅಲ್ಲ! ಈ ಕವಿತೆಗೆ ಅವರು ಪ್ರೇರಣೆ. ಶ್ರೀ ಶ್ರೀ ಅವರ ಕವಿತೆಗಳಿಂದ ಸ್ಫೂರ್ತಿ ಪಡೆದ ತೆಲುಗಿನ ಲಲಿತ್‌ ಪಾಟೀಲ್‌ ಎಂಬ ಯುವಕವಿ ಬರೆದ ಈ ಕವಿತೆ ಎರಡು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಲಲಿತ್‌ ಪಾಟೀಲ್‌ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದ ಈ ಕವಿತೆಯನ್ನು ಹಲವರು ಕಾಪಿ ಮಾಡಿ ತಮ್ಮ ತಮ್ಮ ಹೆಸರುಗಳಲ್ಲಿ ಪೋಸ್ಟ್‌ ಮಾಡಿದ್ದರು. ಇನ್ನೂ ಕೆಲವರು ಶ್ರೀ ಶ್ರೀ ಹೆಸರಿನಲ್ಲಿ ಈ ಕವಿತೆ ಶೇರ್‌ ಮಾಡಿದ್ದರು.

ಶ್ರೀ ಶ್ರೀ ಅವರ ಕವಿತೆಗಳ ಶೈಲಿಯಲ್ಲೇ ಇದ್ದ ಈ ಕವಿತೆಗೆ ಕೆಲವರು ಇನ್ನಷ್ಟು ಸಾಲುಗಳನ್ನು ಸೇರಿಸುತ್ತಾ ಹೋದರು. ಶ್ರೀ ಶ್ರೀ ಸ್ಫೂರ್ತಿಯಿಂದ ಲಲಿತ್ ಪಾಟೀಲ್‌ ಬರೆದ, ಶ್ರೀ ಶ್ರೀ ಹೆಸರಿನಲ್ಲಿ ವೈರಲ್‌ ಆಗಿದ್ದ ಕವಿತೆ ಕೊನೆಯ ಎರಡು ಸಾಲುಗಳನ್ನು ಹೊಸದಾಗಿ ಸೇರಿಸಿಕೊಂಡು ತೆಲುಗಿನಲ್ಲಿ ಸ್ಫೂರ್ತಿದಾಯಕ ಕವಿತೆಯಾಗಿ ಹರಿದಾಡಿತ್ತು. ಕನ್ನಡಕ್ಕೆ ಅನುವಾದಗೊಂಡ ಈ ಕವಿತೆಯೂ ಫೇಸ್‌ಬುಕ್‌, ವಾಟ್ಸ್‌ಆಪ್‌ಗಳಲ್ಲಿ ಹರಿದಾಡಿತ್ತು. ಇಲ್ಲೂ ಕೆಲವರು ತಮ್ಮ ಹೆಸರಿನೊಂದಿಗೆ ಈ ಕವಿತೆಯನ್ನು ಹರಿಬಿಟ್ಟಿದ್ದರು.

ವೈರಲ್‌ ಆಗಿರುವ ಕವಿತೆಯಲ್ಲಿರುವ ‘ಓದಿದರೆ ಇವು ಪದಗಳಷ್ಟೇ... ಆದರೆ ಆಚರಿಸಿದಾಗ ಅಸ್ತ್ರಗಳು..!!!!! ಮಹಾ ಶಸ್ತ್ರಗಳು!!!!!!! ’ ಎಂಬ ಸಾಲುಗಳನ್ನು ಕೂಡಾ ಯಾರೋ ರಿಪೋಸ್ಟ್‌ ಮಾಡುವಾಗ ಸೇರಿಸಿರುವುದು. ಇದು ತನ್ನ ಗಮನಕ್ಕೆ ಬಂದಿದ್ದೂ ತುಂಬಾ ದಿನಗಳಾದ ಮೇಲೆ ಎಂದಿದ್ದಾರೆ ಲಲಿತ್‌ ಪಾಟೀಲ್‌.

ಜನಪದ ಸಾಹಿತ್ಯ ಜನರ ಬಾಯಿಂದ ಬಾಯಿಗೆ ಹರಡುವ ಮಾದರಿಯಲ್ಲೇ ಹೊಸ ಕಾಲದ ಈ ಕವಿತೆ ಸಾಮಾಜಿಕ ಜಾಲತಾಣಗಳ ಮೂಲಕ ಹೊಸ ಜನಪದ ಕವಿತೆಯಾಗಿ ಹರಿದಾಡಿದೆ. ಮಹಾಕವಿಯೊಬ್ಬರ ಪ್ರೇರಣೆ, ಯುವಕವಿಯ ಬರವಣಿಗೆ, ಅದಕ್ಕೆ ಮತ್ತಿನ್ಯಾರೋ ಕೆಲ ಸಾಲುಗಳನ್ನು ಸೇರಿಸಿ ವೈರಲ್‌ ಆಗಿರುವ ಈ ಕವಿತೆ ‘ನವ ಜನಪದ’ವಾಗಿ ಬೆಳೆದಿದೆ.

"ಸುಮಾರು ಎರಡು ವರ್ಷಗಳ ಹಿಂದೆ ಈ ಕವಿತೆಯನ್ನ ನಾನು ಕನ್ನಡಕ್ಕೆ ಅನುವಾದಿಸಿದ್ದೆ. ಆಗ ಇದು ಶ್ರೀ ಶ್ರೀ ಕವಿತೆ ಎಂದೇ ಹೆಸರಾಗಿತ್ತು. ಆದರೆ, 2017ರಲ್ಲಿನ ಒಂದು ಸಂದರ್ಭನಲ್ಲಿ ಲಲಿತ್‌ ಪಾಟೀಲ್‌ ಎಂಬ ಯುವಕ ಈ ಕವಿತೆಯನ್ನು ಬರೆದಿದ್ದು ನಾನು ಎಂದು ಹೇಳಿಕೊಂಡಿದ್ದ. ಅಷ್ಟರ ವೇಳೆಗೆ ಆ ಕವಿತೆ ಶ್ರೀ ಶ್ರೀ ಹೆಸರಿನಲ್ಲೇ ಜನಪ್ರಿಯವಾಗಿತ್ತು. ಕನ್ನಡದಲ್ಲೂ ಹಲವರು ಆ ಕವಿತೆಗೆ ತಮ್ಮ ಹೆಸರು ಸೇರಿಸಿಕೊಂಡು ಪೋಸ್ಟ್‌ ಮಾಡಿಕೊಂಡಿದ್ದರು. ಹೆಸರು ಯಾರದಾದರೇನು ವಿಚಾರ ಹರಡಬೇಕಾದ್ದು ಮುಖ್ಯ ಎಂದು ನಾನೂ ಈ ಬಗ್ಗೆ ಹೆಚ್ಚು ಗಮನ ಕೊಡಲಿಲ್ಲ. ಈಗ ಇದೇ ಕವಿತೆ ಸ್ವಾಮೀಜಿ ಹೆಸರಿನಲ್ಲಿ ವೈರಲ್‌ ಆಗಿದೆ. ಕೆಲ ದುರಾಭಿಮಾನಿಗಳು ಯಂಡಮೂರಿ ಹೆಸರಿನಲ್ಲೂ ಈ ಕವಿತೆಯನ್ನು ಹರಿಬಿಟ್ಟಿದ್ದಾರೆ" ಎನ್ನುತ್ತಾರೆ ಈ ಕವಿತೆಯನ್ನು ಕನ್ನಡಕ್ಕೆ ತಂದಿರುವ ಪದ್ಮಾ ಕೆ. ರಾಜ್‌.

ಕವಿತೆ ವೈರಲ್‌ ಆಗಿರುವ ಬಗ್ಗೆ 'ಸಮಾಚಾರ'ದೊಂದಿಗೆ ಮಾತನಾಡಿದ ಅವರು, "ಲಲಿತ್‌ ಪಾಟೀಲ್‌ ಸಂದರ್ಶನ ನೋಡುವವರೆಗೂ ನಾನೂ ಇದು ಶ್ರೀ ಶ್ರೀ ಅವರ ಕವಿತೆ ಎಂದೇ ತಿಳಿದಿದ್ದೆ. ಆದರೆ, ಆ ಕವಿತೆ ಬರೆದಿದ್ದು ನಾನು ಎಂದು ಲಲಿತ್‌ ಪಾಟೀಲ್‌ ಹೇಳಿಕೊಂಡಿದ್ದಾರೆ. ಅಲ್ಲದೆ, ಈ ಕವಿತೆಗೆ ಶ್ರೀ ಶ್ರೀ ಅವರೇ ಸ್ಫೂರ್ತಿ ಎಂದಿದ್ದಾರೆ. ಶ್ರೀ ಶ್ರೀ ಅವರ ಕವಿತೆಗಳ ಸಂಗ್ರಹದಲ್ಲೂ ಈ ಕವಿತೆ ಇಲ್ಲ ಎಂಬ ಮಾಹಿತಿ ಇದೆ" ಎಂದರು.

ತೆಲುಗು ಕವಿ ಶ್ರೀ ಶ್ರೀ. 
ತೆಲುಗು ಕವಿ ಶ್ರೀ ಶ್ರೀ. 

ಯಾರು ಈ ಶ್ರೀ ಶ್ರೀ:

ತೆಲುಗಿನ ಯುಗ ಪ್ರವರ್ತಕ ಕವಿ ಎಂದು ಕರೆಯಲಾಗುವ ಶ್ರೀರಂಗಂ ಶ್ರೀನಿವಾಸರಾವ್ (1910-1983) ‘ಶ್ರೀ ಶ್ರೀ’ ಎಂದೇ ಹೆಸರಾದವರು. ಸಾಹಿತ್ಯದ ಮೂಲಕ ಆಧುನಿಕ ಮನೋಭಾವ ಬಿತ್ತಲು ಕಾರಣರಾದ ಅವರು ಕಲೆ, ಸಾಹಿತ್ಯ, ಸಮಾಜ ಬೇರೆ ಬೇರೆಯಲ್ಲ, ಸಾಹಿತ್ಯವೂ ಸಾಮಾಜಿಕ ಚಳವಳಿಗಳ ಭಾಗ ಎಂಬುದನ್ನು ತಮ್ಮ ಬರಹದ ಮೂಲಕ ಪ್ರತಿಪಾದಿಸಿದವರು. 'ಮಹಾಪ್ರಸ್ಥಾನಂ' ಸಂಕಲನದ ಮೂಲಕ ತೆಲುಗು ಕಾವ್ಯಕ್ಕೆ ಆಧುನಿಕತೆಯನ್ನು ತಂದವರು ಅವರು.

ಚಳವಳಿ ಸಾಹಿತ್ಯ, ಸಿನಿಮಾ ಸಾಹಿತ್ಯ, ಶುದ್ಧ ಸಾಹಿತ್ಯ ಎಂಬ ರೇಖೆಗಳನ್ನು ಎಳೆದುಕೊಳ್ಳದೆ ಸಾಹಿತ್ಯ ರಚನೆ ಮಾಡಿದ್ದ ಶ್ರೀ ಶ್ರೀ ಕಾವ್ಯ ತೆಲುಗಿನಲ್ಲಿ ಜನಪದದಂತೆ ಜನರ ಬಾಯಲ್ಲಿ ಹಾಡಾಗಿದೆ. 60ರ ದಶಕದಲ್ಲಿ ತೆಲುಗಿನಲ್ಲಿ ಬಂದ 'ದಿಗಂಬರ ಕಾವ್ಯ'ದ ಮೇಲೆ ಶ್ರೀ ಶ್ರೀ ಕಾವ್ಯ ಕಿಡಿಯ ಪ್ರಭಾವವಿದೆ. ಕರ್ನಾಟಕದಲ್ಲಿ ಉದಯವಾದ ಬಂಡಾಯ ಸಾಹಿತ್ಯ ಚಳವಳಿಯ ಮೇಲೂ ಶ್ರೀ ಶ್ರೀ ಸಾಹಿತ್ಯದ ಪ್ರಭಾವವಿತ್ತು. 1979ರ ಮಾರ್ಚ್ 11ರಂದು ಬೆಂಗಳೂರಿನಲ್ಲಿ ನಡೆದಿದ್ದ ಮೊದಲ ಬಂಡಾಯ ಸಾಹಿತ್ಯ ಸಮ್ಮೇಳನದಲ್ಲಿ ಶ್ರೀ ಶ್ರೀ ಭಾಗವಹಿಸಿದ್ದರು.

1979ರ ಮಾರ್ಚ್ 10ರಂದು ಬೆಂಗಳೂರಿನಲ್ಲಿ ನಡೆದ ಬಂಡಾಯ ಸಾಹಿತ್ಯ ಸಮ್ಮೇಳನದಲ್ಲಿ ತೆಲುಗು ಕವಿ ಶ್ರೀ ಶ್ರೀ, ದೇವನೂರ ಮಹಾದೇವ, ನಿರಂಜನ ಹಾಗೂ ಸಿದ್ದಲಿಂಗಯ್ಯ (ಮಾತನಾಡುತ್ತಿರುವವರು). 
1979ರ ಮಾರ್ಚ್ 10ರಂದು ಬೆಂಗಳೂರಿನಲ್ಲಿ ನಡೆದ ಬಂಡಾಯ ಸಾಹಿತ್ಯ ಸಮ್ಮೇಳನದಲ್ಲಿ ತೆಲುಗು ಕವಿ ಶ್ರೀ ಶ್ರೀ, ದೇವನೂರ ಮಹಾದೇವ, ನಿರಂಜನ ಹಾಗೂ ಸಿದ್ದಲಿಂಗಯ್ಯ (ಮಾತನಾಡುತ್ತಿರುವವರು). 
ಚಿತ್ರಕೃಪೆ: ಪ್ರಜಾವಾಣಿ

ಕನ್ನಡದಲ್ಲಿ ಇಂದು ಒಂದು ಕಡೆಗೆ 'ಶುದ್ಧ ಸಾಹಿತ್ಯ'ದ ಬಗ್ಗೆ ಚರ್ಚೆಗಳು ನಡೆಯುತ್ತಾ, ವೈಚಾರಿಕ ಮನೋಭಾವದ ಸಾಹಿತ್ಯವನ್ನು 'ಚಳವಳಿ ಸಾಹಿತ್ಯ' ಎಂದು ಮೂದಲಿಸುವ ಕೆಲಸಗಳು ಹೆಚ್ಚಾಗಿವೆ. ಒಂದಷ್ಟು ಹೊಸ ಬರಹಗಾರರೂ ತಮಗೆ ಸಿದ್ಧಾಂತಗಳ ಭಾರವಿಲ್ಲ ಎಂದು ಘೋಷಿಸಿಕೊಳ್ಳುವ ಮೂಲಕ ಶುದ್ಧ ಸಾಹಿತ್ಯದ ಮಾರ್ಗಕಾರರಾಗಲು ಹೊರಟಿದ್ದಾರೆ. ಇಂಥ ಹೊತ್ತಲ್ಲಿ ಶ್ರೀ ಶ್ರೀ ಸ್ಫೂರ್ತಿಯಿಂದ ಹುಟ್ಟಿದ ವೈಚಾರಿಕ ಮನೋಭಾವದ ಕವಿತೆಯೊಂದು ಸ್ವಾಮೀಜಿ ಹೆಸರಲ್ಲಿ ವೈರಲ್‌ ಆಗಿರುವುದು ವರ್ತಮಾನದ ವೈರುಧ್ಯ.

ವೈರಲ್‌ ಆದ ಕವಿತೆ ಇಲ್ಲಿದೆ:

ಸಾಧ್ಯವಾದರೆ ಓಡು
ಆಗಲಿಲ್ಲವಾದರೆ ನಡೆ
ಅದೂ ಸಾಧ್ಯವಾಗದಿರೆ
ಉರುಳಿಕೊಂಡು ಹೋಗು ಅಷ್ಟೇ!

ಆದರೆ ಕದಲದೇ
ಬಿದ್ದಿರಬೇಡ ಒಂದೇ ಕಡೆ

ಕೆಲಸ ಸಿಗಲಿಲ್ಲವೆಂದು,
ವ್ಯಾಪಾರ ನಷ್ಟವಾಯಿತೆಂದು
ಗೆಳೆಯನೊಬ್ಬ ಮೋಸಮಾಡಿದನೆಂದು,
ಪ್ರೀತಿಸಿದವಳು
ಕೈಬಿಟ್ಟಳೆಂದು!!

ಹಾಗೆ ಇದ್ದರೆ ಹೇಗೆ..?
ದಾಹಕ್ಕೆ ಬಾರದ
ಸಮುದ್ರದ ಅಲೆಗಳು ಕೂಡಾ
ಕುಣಿದು ಕುಪ್ಪಳಿಸುತ್ತವೆ ನೋಡು!

ಮನಸು ಮಾಡಿದರೇ...
ನಿನ್ನ ಹಣೆಬರಹ ಇಷ್ಟೇ
ಅಂದವರೂ ಸಹ...
ನಿನ್ನ ಮುಂದೆ ತಲೆ ತಗ್ಗಿಸುವ
ತಾಕತ್ತು ನಿನ್ನಲ್ಲಿದೆ

ಅಂತದ್ದರಲ್ಲಿ ಈ ಪುಟ್ಟ ಕಷ್ಟ ಕೋಟಲೆಗೆ ತಲೆ ಬಾಗಿದರೆ ಹೇಗೆ?

ಸೃಷ್ಟಿ ಚಲನಶೀಲ
ಯಾವುದೂ ನಿಲ್ಲಬಾರದು

ಹರಿಯುವ ನದಿ
ಬೀಸುವ ಗಾಳಿ
ತೂಗುವ ಮರ
ಹುಟ್ಟೋ ಸೂರ್ಯ
ಅಂದುಕೊಂಡಿದ್ದನ್ನು ಸಾಧಿಸಬೇಕೆಂದು
ನಿನ್ನಲ್ಲಿ ಛಲದಿಂದ ಹರಿಯುವ ರುಧಿರ ಸಹ

ಯಾವುದೂ ನಿಲ್ಲಬಾರದು.
ಏಳು... ಎದ್ದೇಳು
ಹೊರಡು...
ನಿನ್ನನ್ನು ಅಲಗಾಡದಂತೆ
ಮಾಡಿದ ಆ ಮಾನಸಿಕ ‌ಸಂಕೋಲೆಗಳನ್ನು ಬೇಧಿಸು,
ಬಿದ್ದ ಜಾಗದಿಂದಲೇ
ಓಟ ಶುರು ಮಾಡು

ನೀನು ಮಲಗಿದ ಹಾಸಿಗೆ
ನಿನ್ನನ್ನು ಅಹಸ್ಯಪಡುವ ಮುನ್ನ
ಅಲಸ್ಯವನ್ನು ಬಿಡು

ಕನ್ನಡಿ ನಿನ್ನನ್ನು ಪ್ರಶ್ನಿಸುವ
ಮುನ್ನ ಉತ್ತರ ಹುಡುಕು

ನೆರಳು ನಿನ್ನನ್ನು ಬಿಡುವ
ಮುನ್ನ ಬೆಳಕಿಗೆ ಬಾ

ಮತ್ತೆ ಹೇಳುತ್ತಿದ್ದೇನೆ...
ಕಣ್ಣೀರು ಸುರಿಸುವುದರಿಂದ
ಅದು ಸಾಧ್ಯವಿಲ್ಲ!
ಬೆವರು ಸುರಿಸುವುದರಿಂದ
ಮಾತ್ರ ಚರಿತ್ರೆ
ಸೃಷ್ಟಿಸಬಹುದೆಂದು
ತಿಳಿದುಕೋ...

ಓದಿದರೆ ಇವು ಪದಗಳಷ್ಟೇ...
ಆದರೆ ಆಚರಿಸಿದಾಗ
ಅಸ್ತ್ರಗಳು..!!!!!
ಮಹಾ ಶಸ್ತ್ರಗಳು!!!!!!!