samachara
www.samachara.com
ಜಾಹೀರಾತಲ್ಲೇ ‘ಬೇಟಿ ಬಚಾವೋ’; ಪ್ರಚಾರಕ್ಕೆ ಖರ್ಚಾಯ್ತು ‘ಬೇಟಿ ಪಡಾವೋ’ದ 56% ಹಣ!
COVER STORY

ಜಾಹೀರಾತಲ್ಲೇ ‘ಬೇಟಿ ಬಚಾವೋ’; ಪ್ರಚಾರಕ್ಕೆ ಖರ್ಚಾಯ್ತು ‘ಬೇಟಿ ಪಡಾವೋ’ದ 56% ಹಣ!

161ರಲ್ಲಿ 53 ಜಿಲ್ಲೆಗಳಲ್ಲಿ 2015ರಲ್ಲಿ ಯೋಜನೆ ಜಾರಿಯಾದ ನಂತರ ಲಿಂಗಾನುಪಾತ ಹೆಚ್ಚಾಗುವ ಬದಲು ಕಡಿಮೆಯಾಗಿದೆ. 

Team Samachara

2015ರ ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ಎರಡು ಮಹತ್ತರ ಉದ್ದೇಶಗಳನ್ನು ಮುಂದಿಟ್ಟುಕೊಂಡು ‘ಬೇಟಿ ಬಚಾವೋ ಬೇಟಿ ಪಡಾವೋ’ ಯೋಜನೆಗೆ ಚಾಲನೆ ನೀಡಿದ್ದರು. ಒಂದು ಭಾರತದಲ್ಲಿ ಕುಸಿತವಾಗುತ್ತಿದ್ದ ಲಿಂಗಾನುಪಾತವನ್ನು ಮೇಲೆತ್ತುವುದು, ಇನ್ನೊಂದು ಹೆಣ್ಣು ಮಗುವಿನ ಬಗೆಗಿರುವ ಮನಸ್ಥಿತಿಯನ್ನು ಬದಲಾಯಿಸುವುದು ಇದರ ಹಿಂದಿದ್ದ ಉದ್ದೇಶವಾಗಿತ್ತು.

ಇದಕ್ಕಾಗಿ ಮೂರು ಇಲಾಖೆಗಳ ಮೂಲಕ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆ ರೂಪಿಸಲಾಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಗಳು ಈ ಯೋಜನೆಯನ್ನು ಕಾರ್ಯಗತಗೊಳಿಸುವ ಹೊಣೆ ಹೊತ್ತುಕೊಂಡವು.

ಇದಾಗಿ ನಾಲ್ಕು ವರ್ಷಗಳ ನಂತರ ಸರಕಾರ ದಾಖಲೆಗಳನ್ನು ಬಿಡುಗಡೆ ಮಾಡಿದ್ದು ತನ್ನ ಮುಖ್ಯ ಗುರಿಯೇ ಜಾಹೀರಾತು ಎಂಬುದಾಗಿ ಸಾರಿ ಹೇಳಿದೆ. 2014-15ರಿಂದ ಆರಂಭಿಸಿ 2018-19ರ ವರೆಗೆ ‘ಬೇಟಿ ಬಚಾವೋ ಬೇಟಿ ಪಾಡಾವೋ ಯೋಜನೆ’ಗೆ ಕೇಂದ್ರ ಸರಕಾರ 648 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಈ ಹಣದಲ್ಲಿ ಶೇಕಡಾ 56.27ರಷ್ಟು ಅಂದರೆ 364.66 ಕೋಟಿ ರೂಪಾಯಿಗಳನ್ನು ಜಾಹೀರಾತುಗಳಿಗೆ ಖರ್ಚು ಮಾಡಲಾಗಿದೆ.

ಇದಕ್ಕೆ ಪ್ರತಿಯಾಗಿ ಕೇವಲ ಶೇಕಡಾ 24.5ರಷ್ಟು ಹಣವನ್ನು ಅಂದರೆ 159.18 ಕೋಟಿ ರೂಪಾಯಿಗಳನ್ನು ರಾಜ್ಯಗಳು ಮತ್ತು ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗಿದೆ. ಇನ್ನು ಶೇಕಡಾ 19ಕ್ಕಿಂತ ಹೆಚ್ಚಿನ ಅನುದಾನವನ್ನು ಬಿಡುಗಡೆಯೇ ಮಾಡಿಲ್ಲ. ಜನವರಿ 4ರಂದು ಲೋಕಸಭೆಯಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ರಾಜ್ಯ ದರ್ಜೆ ಸಚಿವ ಡಾ. ವೀರೇಂದ್ರ ಕುಮಾರ್‌ ಈ ಉತ್ತರ ನೀಡಿದ್ದಾರೆ.

ಲೋಕಸಭೆಗೆ ವೀರೇಂದ್ರ ಕುಮಾರ್‌ ನೀಡಿದ ಉತ್ತರದಲ್ಲಿ ಜಾಹೀರಾತಿಗೆ ಹೆಚ್ಚಿನ ಹಣ ಖರ್ಚಾಗಿರುವುದನ್ನು ಗಮನಿಸಬಹುದು.
ಲೋಕಸಭೆಗೆ ವೀರೇಂದ್ರ ಕುಮಾರ್‌ ನೀಡಿದ ಉತ್ತರದಲ್ಲಿ ಜಾಹೀರಾತಿಗೆ ಹೆಚ್ಚಿನ ಹಣ ಖರ್ಚಾಗಿರುವುದನ್ನು ಗಮನಿಸಬಹುದು.

ದೇಶದ ಎಲ್ಲಾ 640 ಜಿಲ್ಲೆಗಳಲ್ಲಿ ಯೋಜನೆಯನ್ನು ಜಾರಿಗೊಳಿಸಲು ಕೇಂದ್ರ ಸರಕಾರ ನಿರ್ಧರಿಸಿದ್ದು ಮೊದಲ ಹಂತದಲ್ಲಿ ಲಿಂಗಾನುಪಾತ ಕಡಿಮೆ ಇರುವ 100 ಜಿಲ್ಲೆಗಳನ್ನು ಯೋಜನೆಯ ಅಡಿಯಲ್ಲಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಎರಡನೇ ಹಂತದಲ್ಲಿ ಅಂದರೆ ಎರಡನೇ ವರ್ಷ ಇದಕ್ಕೆ ಇನ್ನೂ 61 ಜಿಲ್ಲೆಗಳನ್ನು ಸೇರಿಸಿ ಒಟ್ಟು 161 ಜಿಲ್ಲೆಗಳಿಗೆ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯನ್ನು ವಿಸ್ತರಿಸಲಾಗಿತ್ತು.

ಕರ್ನಾಟಕದಿಂದ ಮೊದಲ ಹಂತದಲ್ಲಿ ಬಿಜಾಪುರ ಮತ್ತು ಎರಡನೇ ಹಂತದಲ್ಲಿ ಗದಗ, ಬಾಗಲಕೋಟೆ, ಹಾವೇರಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಬಿಜಾಪುರದಲ್ಲಿ 0-6 ವರ್ಷ ಒಳಗಿನ ಮಕ್ಕಳ ಲಿಂಗಾನುಪಾತ ಕೇವಲ 931 ಇದ್ದರೆ ಉಳಿದ ಜಿಲ್ಲೆಗಳಲ್ಲಿ 2001ಕ್ಕೆ ಹೋಲಿಸಿದರೆ 2011ರಲ್ಲಿ ಲಿಂಗಾನುಪಾತ ದೊಡ್ಡ ಮಟ್ಟಕ್ಕೆ ಕುಸಿತವಾಗಿತ್ತು. ಈ ಹಿನ್ನೆಲೆಯಲ್ಲಿ ಈ ಐದು ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು.

ಹೀಗೆ ಆಯ್ಕೆ ಮಾಡಿಕೊಂಡ 161 ಜಿಲ್ಲೆಗಳಲ್ಲಿ 53 ಜಿಲ್ಲೆಗಳಲ್ಲಿ 2015ರಲ್ಲಿ ಯೋಜನೆ ಜಾರಿಯಾದ ನಂತರ ಲಿಂಗಾನುಪಾತ ಹೆಚ್ಚಾಗುವ ಬದಲು ಕಡಿಮೆಯಾಗಿದೆ. ಉಳಿದ ಜಿಲ್ಲೆಗಳಲ್ಲಿ ಸ್ವಲ್ಪ ಮಟ್ಟಿಗೆ ಏರಿಕೆಯಾಗಿದೆ. ಕೇಂದ್ರಾಡಳಿತ ಪ್ರದೇಶಗಳಲ್ಲಂತೂ ಈ ಲಿಂಗಾನುಪಾತ ದೊಡ್ಡ ಮಟ್ಟಕ್ಕೆ ಕುಸಿದಿದೆ. ಉದಾಹರಣೆಗೆ ನಿಕೋಬಾರ್‌ನಲ್ಲಿ 2014-15ರಲ್ಲಿ 1000 ಪುರುಷರಿಗೆ 985 ಮಹಿಳೆಯರಿದ್ದರು. ಈ ಪ್ರಮಾಣ 2016-17ರಲ್ಲಿ 839ಕ್ಕೆ ಇಳಿಕೆಯಾಗಿದೆ.

ಬೇಟಿ ಬಚಾವೋ ಬೇಟಿ ಪಡಾವೋ ಜಾಹೀರಾತೊಂದರ ತುಣುಕು.
ಬೇಟಿ ಬಚಾವೋ ಬೇಟಿ ಪಡಾವೋ ಜಾಹೀರಾತೊಂದರ ತುಣುಕು.

ಪುದುಚೆರಿಯ ಯಾನಂನಲ್ಲಿ 1107ರಿಂದ 976ಕ್ಕೆ ಇಳಿಕೆಯಾಗಿದೆ. ಸರಕಾರ ಅಂಡಮಾನ್‌ ಮತ್ತು ನಿಕೋಬಾರ್‌ ಹಾಗೂ ಪುದುಚೆರಿಗೆ ಕ್ರಮವಾಗಿ 55 ಮತ್ತು 46 ಕೋಟಿ ರೂಪಾಯಿಗಳ ಅನುದಾನ ನೀಡಿತ್ತು. ಇಷ್ಟೊಂದು ಸಣ್ಣ ಪ್ರದೇಶಕ್ಕೆ ದೊಡ್ಡ ಮೊತ್ತದ ಅನುದಾನ ನೀಡಿಯೂ ಫಲಿತಾಂಶ ಋಣಾತ್ಮಕವಾಗಿರುವುದು ನಿರಾಶೆ ಮೂಡಿಸಿದೆ. ಇದಕ್ಕೆ ಸರಕಾರ ಜಾಹೀರಾತಿನ ಮೇಲೆ ಹೆಚ್ಚು ಖರ್ಚು ಮಾಡಿ, ಸರಿಯಾಗಿ ಅನುದಾನಗಳನ್ನು ಬಿಡುಗಡೆ ಮಾಡದೇ ಇರುವುದೇ ಕಾರಣ ಎನ್ನುತ್ತಾರೆ ತಜ್ಞರು.

ಆರ್ಥಿಕ ತಜ್ಞೆ ಮಿತಾಲಿ ನಿಕೋರೆ ಪ್ರಕಾರ, “ಯೋಜನೆಯಲ್ಲಿ ಸಣ್ಣ ಮೊತ್ತದ ಹಣ ಅಂದರೆ ಶೇಕಡಾ 5ರಷ್ಟು ಅನುದಾನವನ್ನು ಶಿಕ್ಷಣ ಮತ್ತು ಆರೋಗ್ಯಕ್ಕೆ ವಿನಿಯೋಗಿಸಲಾಗಿದೆ.” ಇನ್ನು, “ಕೇವಲ ಶೇಕಡಾ 5ರಷ್ಟು ಹಣವನ್ನು ಜಿಲ್ಲಾಮಟ್ಟದಲ್ಲಿ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿಗೆ ಬಳಸಲಾಗಿದೆ. ಕೇಂದ್ರ ಮಟ್ಟದಲ್ಲಂತೂ ತರಬೇತಿಗೆ ಬಳಸುವ ಹಣ ಜುಜುಬಿ ಶೇಕಡಾ 1 ಮಾತ್ರ,” ಎಂದು ಟೈಮ್ಸ್‌ ಅಫ್‌ ಇಂಡಿಯಾಕ್ಕೆ ಬರೆದ ಅಂಕಣದಲ್ಲಿ ಅವರು ವಿವರಿಸಿದ್ದಾರೆ.

ಸರಕಾರ ದೂರದೃಷ್ಟಿ ಇಟ್ಟುಕೊಂಡು ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಪರಿಣಾಮಕಾರಿ ಬದಲಾವಣೆಗೆ ಮುಂದಾಗೇಕಿತ್ತು. ಅದರ ಬದಲು ಕೇವಲ ಪ್ರಚಾರಕ್ಕೆ ಒತ್ತು ನೀಡಿದೆ ಎಂದು ಅವರು ದೂರಿದ್ದಾರೆ. ಒಟ್ಟಿನಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ಪ್ರಧಾನಿ ನರೇಂದ್ರ ಮೋದಿಗೆ ಜನಪ್ರಿಯತೆಯನ್ನು ತಂದುಕೊಟ್ಟಿರಬಹುದು. ಆದರೆ ಯಶಸ್ಸಿನ ವಿಚಾರದಲ್ಲಿ ಹಾಗಾಗಿಲ್ಲ. ಈ ಮೂಲಕ ಮೋದಿ ಸರಕಾರದ ವಿಫಲ ಯೋಜನೆಗಳ ಪಟ್ಟಿಗೆ ಇದೂ ಸೇರಿಕೊಂಡಂತಾಗಿದೆ.