samachara
www.samachara.com
ಮದ್ಯನಿಷೇಧ ಆಂದೋಲನ: ಮಾದರಿಯಾಗಬೇಕಿದ್ದ ಎ. ಟಿ. ಬಾಬುರನ್ನು ಮರೆಯೋದು ಹೆಂಗೆ?
COVER STORY

ಮದ್ಯನಿಷೇಧ ಆಂದೋಲನ: ಮಾದರಿಯಾಗಬೇಕಿದ್ದ ಎ. ಟಿ. ಬಾಬುರನ್ನು ಮರೆಯೋದು ಹೆಂಗೆ?

ದಶಕದ ಹಿಂದೆ ಮದ್ಯ ನಿಷೇಧ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ಎ. ಟಿ. ಬಾಬು ಹೆಸರನ್ನು ರಾಜ್ಯ ಮರೆತಿರುವ ಹೊತ್ತಿನಲ್ಲಿ ಮತ್ತೊಂದು ಮದ್ಯ ನಿಷೇಧ ಆಂದೋಲನ ರೂಪುಗೊಳ್ಳುತ್ತಿದೆ. ಯಾರಿವರು? ಇತಿಹಾಸ ಕುತೂಹಲಕಾರಿ ತುಣುಕು ಇದು. 

Team Samachara

ಎ.ಟಿ. ಬಾಬು. ದಶಕದ ಹಿಂದೆ ಕರ್ನಾಟಕದ 'ಪ್ರಗತಿಪರ' ಚಳವಳಿಗಳಲ್ಲಿ ಸಕ್ರಿಯರಾಗಿದ್ದವರಿಗೆ ಈ ಹೆಸರು ನೆನಪಿರಬಹುದು; ಆಗ ಸಕ್ರಿಯರಾಗಿದ್ದವರ ಪೈಕಿ ಈಗ ಕೆಲವರು ಈ ಹೆಸರನ್ನು ಮರೆತಿರಲೂಬಹುದು. ಕರ್ನಾಟಕದಲ್ಲಿ ದಶಕದ ಹಿಂದೆ ಮದ್ಯ ನಿಷೇಧ ಚಳವಳಿ ಗಟ್ಟಿಗೊಳ್ಳುತ್ತಿದ್ದ ಆರಂಭದ ದಿನಗಳಲ್ಲಿ ಆ ಹೋರಾಟಕ್ಕೆ ಬಲಿಯಾದವರು ಬೆಂಗಳೂರಿನ ಪ್ರಕಾಶ್ ನಗರದ ಎ.ಟಿ. ಬಾಬು.

ರಾಜ್ಯದಲ್ಲಿ ಮದ್ಯ ನಿಷೇಧ ಆಂದೋಲನ ಮತ್ತೆ ಸದ್ದು ಮಾಡುತ್ತಿದೆ. ಸಂಪೂರ್ಣ ಮದ್ಯ ನಿಷೇಧಕ್ಕೆ ಒತ್ತಾಯಿಸಿ ಕಳೆದ ಶನಿವಾರ (ಜನವರಿ 19) ಚಿತ್ರದುರ್ಗದಿಂದ ಆರಂಭವಾಗಿರುವ ಪಾದಯಾತ್ರೆ ಸದ್ಯ ತುಮಕೂರು ಜಿಲ್ಲೆ ತಲುಪಿದೆ. ಜನವರಿ 30ರಂದು ವಿಧಾನಸೌಧ ಮುತ್ತಿಗೆ ಹಾಕುವುದಾಗಿ ಆಂದೋಲನದ ಮುಂದಾಳುಗಳು ಘೋಷಿಸಿದ್ದಾರೆ. ಮದ್ಯ ನಿಷೇಧಕ್ಕೆ ಒತ್ತಾಯಿಸಿ ಹೋರಾಟ ಮಾಡುತ್ತಿರುವ ಈ ಹೊತ್ತಿನ ಬಹುತೇಕರಿಗೆ ಎ.ಟಿ. ಬಾಬು ಹೆಸರಿನ ಪರಿಚಯವೂ ಇಲ್ಲ.

ಅಂದು ಎ.ಟಿ. ಬಾಬು ಜತೆಗೆ ಮದ್ಯ ನಿಷೇಧ ಹೋರಾಟದಲ್ಲಿ ಅವರ ಹತ್ತಿರಲ್ಲಿದ್ದವರೂ ಇಂದು ಅವರ ಹೆಸರು ಕೇಳುತ್ತಿದ್ದಂತೆ ಮೈ ಮೇಲೆ ಕೆಂಡ ಚೆಲ್ಲಿಕೊಂಡವರಂತೆ ಸಿಡಿಮಿಡಿಗೊಳ್ಳುತ್ತಾರೆ, ಪ್ರಾಣ ಬೆದರಿಕೆಯ ಕಾರಣಕ್ಕೆ 'ಏನನ್ನೂ' ಹೇಳಲು ಹಿಂಜರಿಯುತ್ತಾರೆ.

ಇನ್ನೂ ಕೆಲವರು, "ಬಾಬು ಹೋರಾಟದ ಮಾದರಿಯೇ ಅಪಾಯಕಾರಿಯಾಗಿತ್ತು, ಅವರು ಎಚ್ಚರದಿಂದ ಚಳವಳಿ ಸಂಘಟಿಸಿದ್ದರೆ ಪ್ರಾಣ ಕಳೆದುಕೊಳ್ಳುವ ಸ್ಥಿತಿ ಬರುತ್ತಿರಲಿಲ್ಲ,” ಎನ್ನುತ್ತಾರೆ. ಹೀಗೆ ಹತ್ತು ವರ್ಷದ ಹಿಂದೆ ಕೊಲೆಗೀಡಾದ ಬಾಬು ಬಗ್ಗೆ ಅಂದು ಅವರ ಜತೆಗಿದ್ದವರೇ ಈಗ ಉದ್ದೇಶಪೂರ್ವಕವಾಗಿ ಅವರನ್ನು ಮರೆಯುವ ಪ್ರಯತ್ನದಲ್ಲಿದ್ದಾರೆ.

ಅದು 2008ರ ಜುಲೈ 21. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮಂಡ್ಯಕ್ಕೆ ಹೋಗುತ್ತಿದ್ದ ಎ. ಟಿ. ಬಾಬು ರಾಮನಗರದ ಸಮೀಪ ಕೊಲೆಯಾಗಿದ್ದರು. ಅವರು ಹೋಗುತ್ತಿದ್ದ ಮಾರುತಿ ವ್ಯಾನ್‌ ಅನ್ನು ತಡೆದಿದ್ದ ದುಷ್ಕರ್ಮಿಗಳು ಬಾಬು ಅವರನ್ನು ಕೊಲೆ ಮಾಡಿದ್ದರು. ಅಂದು ಬಾಬು ಜತೆಗಿದ್ದ ಇಬ್ಬರು ಈ ಪ್ರಕರಣದ ಪ್ರಮುಖ ಸಾಕ್ಷಿಗಳು.

ಕುಂದಾಪುರ ಮೂಲದ ಅಲ್ತಾರ್‌ ತೇಜಪ್ಪಶೆಟ್ಟಿ ಬಾಬು ಬೆಂಗಳೂರಿಗೆ ಬಂದು ಆರಂಭದಲ್ಲಿ ಟೈಲರಿಂಗ್‌, ಮುಂದೆ ಹೋಟೆಲ್‌ ನಡೆಸಿಕೊಂಡು ಬದುಕು ನಡೆಸುತ್ತಿದ್ದವರು. ಪ್ರಕಾಶ್‌ನಗರ, ಶ್ರೀರಾಮಪುರ ಭಾಗದಲ್ಲಿ ಸ್ಥಳೀಯಮಟ್ಟದ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದ ಬಾಬು ಆರಂಭದಲ್ಲಿ ಕಾಂಗ್ರೆಸ್‌ ಹಾಗೂ ಬಳಿಕ ಬಿಜೆಪಿ ಪಕ್ಷಕ್ಕೆ ಕೆಲಸ ಮಾಡುತ್ತಿದ್ದವರು. ಜತೆಗೆ ಪುಟ್ಟದೊಂದು ಶಾಲೆಯನ್ನೂ ನಡೆಸುತ್ತಿದ್ದರು.

“ಬಾಬು ಸಾಮಾನ್ಯ ಕನ್ನಡ ಹೋರಾಟಗಾರರ ಮಾದರಿಯವರು. ಕನ್ನಡಾಭಿಮಾನ ಆಗ ತುಸು ಹೆಚ್ಚೆ ಇತ್ತು. ಅಂತಹ ಸಮಯದಲ್ಲಿ ಕನ್ನಡಕ್ಕಾಗಿ ಜೈ ಎನ್ನುತ್ತಿದ್ದರು ಬಾಬು. ಆದರೆ, ನಿಧಾನವಾಗಿ ಅವರಿಗೆ ಹೋರಾಟದ ಇತರೆ ವಿಚಾರಧಾರೆಗಳು ಪರಿಚಯವಾದವು. ಅದು ಅವರನ್ನು ಮದ್ಯ ನಿಷೇಧದ ಹೋರಾಟಕ್ಕೆ ಕರೆತಂದಿತು,’’ ಎನ್ನುತ್ತಾರೆ ಬಾಬು ಅವರಿದ್ದ ಏರಿಯಾದಲ್ಲಿಯೇ ಬೆಳೆದು ಬಂದ ಒಬ್ಬರು.

ಹೀಗೆ, ಸರಾಯಿ ನಿಷೇಧಕ್ಕೆ ಒತ್ತಾಯಿಸಿ ಬಾಬು ಅಖಾಡಕ್ಕೆ ಧುಮುಕಿದರು. “ಬಹುಶಃ ಅವರು ಟೌನ್‌ ಹಾಲ್‌ ಮುಂದೆ ಹೋರಾಟ ಮಾಡಿದ್ದರೆ ಏನೂ ಆಗುತ್ತಿರಲಿಲ್ಲ. ಬದಲಿಗೆ, ತಮ್ಮ ಮನೆಯ ಮುಂದೆಯೇ ಇರುವ ಮದ್ಯದಂಗಡಿ ಎದುರಿಗೆ ಹೋರಾಟ ಹಮ್ಮಿಕೊಂಡರು. ಅದೇ ಅವರ ಕೊಲೆಗೆ ಕಾರಣವಾಯಿತು,’’ ಎನ್ನುತ್ತಾರೆ ಎ. ಟಿ. ಬಾಬು ಅವರ ಮದ್ಯ ವಿರೋಧಿ ಹೋರಾಟಕ್ಕೆ ಸಾಕ್ಷಿಯಾದ ಸ್ಥಳೀಯರೊಬ್ಬರು. ಈ ವೇಳೆ ಬಾಬು ನ್ಯಾಷನಲ್‌ ಅಲಯನ್ಸ್‌ ಆಫ್‌ ಪೀಪಲ್ಸ್‌ ಮೂವ್‌ಮೆಂಟ್‌ (ಎನ್‌ಎಪಿಎಂ) ಸಂಘಟನೆಯಲ್ಲಿ ಸಕ್ರಿಯರಾಗಿದ್ದರು.

ಎನ್‌ಎಪಿಎಂನ ಕರ್ನಾಟಕ ರಾಜ್ಯ ಸಂಯೋಜಕರಾಗಿದ್ದ ಬಾಬು ಕರ್ನಾಟಕ ಮಧ್ಯಪಾನ ವಿರೋಧಿ ಆಂದೋಲನ ರೂಪಿಸಲು ಶುರುಮಾಡಿದ್ದರು. ಬಿಡದಿ ಬಳಿ ನಡೆದ ಬಾಬು ಕೊಲೆ ಪ್ರಕರಣದಲ್ಲಿ ಪಾಯ್ಸನ್‌ ರಾಮ ಎಂಬ ರೌಡಿ ಶೀಟರ್‌ ಪ್ರಮುಖ ಆರೋಪಿಯಾಗಿದ್ದ. ಆದರೆ, ರಾಮನ ವಿರುದ್ಧ ಸರಿಯಾದ ಸಾಕ್ಷ್ಯಗಳನ್ನು ಕಲೆಹಾಕಲು ಇಂದಿಗೂ ಪೊಲೀಸರಿಗೆ ಸಾಧ್ಯವಾಗಿಲ್ಲ.

"ಬಾಬು ಎಚ್ಚರಿಕೆಯಿಂದ ಕೆಲಸ ಮಾಡಬೇಕಿತ್ತು. ಅತಿ ಉತ್ಸಾಹದಿಂದ ಹೋರಾಟಕ್ಕೆ ಮುಂದಾಗಿ ತಮ್ಮ ಪ್ರಾಣ ಕಳೆದುಕೊಂಡರು. ಆ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು 2008ರಲ್ಲೇ ಪ್ರತಿಭಟನೆ ನಡೆಸಲಾಗಿತ್ತು. ಆದರೆ, ಮುಂದೆ ಆ ಪ್ರಕರಣ ಏನಾಯಿತು ಎಂಬ ಮಾಹಿತಿ ಇಲ್ಲ," ಎನ್ನುತ್ತಾರೆ ಹಿರಿಯ ಹೋರಾಟಗಾರ ಜಾಣಗೆರೆ ವೆಂಕಟರಾಮಯ್ಯ.

ಜಾಣಗೆರೆ ಮಾತ್ರ ಅಲ್ಲ, 2008ರಲ್ಲಿ ಬಾಬು ಕೊಲೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಹುತೇಕರು ಹೇಳುವ ಮಾತುಗಳು ಇವು. ಈಗ 'ಸಮಾಚಾರ'ದೊಂದಿಗೆ ಮಾತಿಗೆ ಸಿಕ್ಕ ಆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಎಲ್ಲರೂ ಪ್ರಸ್ತಾಪಿಸಿದ್ದು 'ಬಾಬು ಎಚ್ಚರಿಕೆಯಿಂದ ಇರಬೇಕಿತ್ತು' ಎಂಬ ಮಾತನ್ನೇ.

ಎ. ಟಿ. ಬಾಬು ಪ್ರಕರಣದ ಸುತ್ತ ಮಾಹಿತಿಗಾಗಿ ಮೇಲಿನ ಚಿತ್ರದಲ್ಲಿರುವ ಬಹುತೇಕ ಎಲ್ಲರನ್ನೂ ‘ಸಮಾಚಾರ’ ಸಂಪರ್ಕಿಸಿತು. “ಆಗ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ನಿಜ. ಆದರೆ, ಮುಂದೆ ಆ ಪ್ರಕರಣ ಏನಾಯಿತೋ ಗೊತ್ತಿಲ್ಲ” ಎಂಬ ಉತ್ತರವೇ ಎಲ್ಲರಿಂದಲೂ ಬಂತು.

ಸದ್ಯ ಲಭ್ಯ ಮಾಹಿತಿ ಪ್ರಕಾರ, ಎ. ಟಿ. ಬಾಬು ಕುಟುಂಬ ಇವತ್ತಿಗೂ ಪ್ರಕಾಶ್ ನಗರದಲ್ಲಿಯೇ ಇದೆ. ಅವತ್ತು ಮೂಡಿದ ಭಯ ಇನ್ನೂ ಅವರನ್ನು ಕಾಡುತ್ತಿದೆ. ಮಾಧ್ಯಮಗಳಿಂದ ದೂರ ಉಳಿಯುವ ಅವರ ಇಚ್ಚೆಯನ್ನು ‘ಸಮಾಚಾರ’ ಕೂಡ ಒಪ್ಪಿಕೊಂಡು ಯಾವುದೇ ಪ್ರತಿಕ್ರಿಯೆಯನ್ನು ಇಲ್ಲಿ ಪ್ರಕಟಿಸುತ್ತಿಲ್ಲ.

ಚಿತ್ರದುರ್ಗದಿಂದ ಪಾದಯಾತ್ರೆ ಹೊರಟಿರುವ ಮಹಿಳೆಯರು. 
ಚಿತ್ರದುರ್ಗದಿಂದ ಪಾದಯಾತ್ರೆ ಹೊರಟಿರುವ ಮಹಿಳೆಯರು. 

ಚಿತ್ರದುರ್ಗದಿಂದ ಪಾದಯಾತ್ರೆ:

ಕರ್ನಾಟಕದಲ್ಲಿ ದಶಕದ ಹಿಂದಿನ ಮದ್ಯಪಾನ ವಿರೋಧಿ ಚಳವಳಿ ಬಾಬು ಕೊಲೆಯೊಂದಿಗೆ ತೆರೆಮರೆಗೆ ಸರಿದಿತ್ತು. ನಂತರದ ದಿನಗಳಲ್ಲಿ ವಿದೇಶಿ ಮದ್ಯ ಲಾಭಿಯ ಒತ್ತಾಯಕ್ಕೆ ಮಣಿದ ಸರಕಾರ ದೇಸಿ ಮದ್ಯವನ್ನು ನಿಷೇಧಿಸಿತ್ತ ಕೂಡ. ಈಗ ರಾಜ್ಯದಲ್ಲಿ ಮತ್ತೊಂದು ಸುತ್ತಿನ ಮದ್ಯ ನಿಷೇಧ ಹೋರಾಟ ಕಾವು ಪಡೆದುಕೊಳ್ಳುತ್ತಿದೆ. ಕರ್ನಾಟಕ ಮದ್ಯಪಾನ ನಿಷೇಧ ಆಂದೋಲನದಡಿ ಸಾವಿರಾರು ಮಹಿಳೆಯರು ಚಿತ್ರದುರ್ಗದಿಂದ ಪಾದಯಾತ್ರೆ ಹೊರಟಿದ್ದಾರೆ. ಪಾದಯಾತ್ರೆಯ ಮೂಲಕ ಬೆಂಗಳೂರು ತಲುಪಿ ಮದ್ಯ ನಿಷೇಧಕ್ಕೆ ಒತ್ತಾಯಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಪಾದಯಾತ್ರೆಯಲ್ಲಿ ಭಾಗವಹಿಸಿದರು ಹೇಳುತ್ತಿದ್ದಾರೆ.

ಎ.ಟಿ. ಬಾಬು ಪ್ರಕರಣವನ್ನು ನೆನಪಿಸಿಕೊಂಡೇ 'ಸಮಾಚಾರ'ದೊಂದಿಗೆ ಮಾತನಾಡಿದ . ಕರ್ನಾಟಕ ಮದ್ಯಪಾನ ನಿಷೇಧ ಆಂದೋಲನದ ಸಂಚಾಲಕಿ ವಿದ್ಯಾ ಪಾಟೀಲ್‌, "ಮದ್ಯಪಾನದ ದುಷ್ಪರಿಣಾಮದಿಂದ ಸಾವಿರಾರು ಮಹಿಳೆಯರು ನಿತ್ಯವೂ ಸಾಯುತ್ತಿದ್ದಾರೆ. ಈ ಹೋರಾಟದಲ್ಲಿ ಲಿಕ್ಕರ್‌ ಮಾಫಿಯಾ ನಮ್ಮನ್ನು ಕೊಲ್ಲುವುದಾದರೆ ಕೊಂದು ಹಾಕಲಿ ಎಂಬ ಧೈರ್ಯದ ಮೇಲೆಯೇ ಮಹಿಳೆಯರು ಪಾದಯಾತ್ರೆಗೆ ಬಂದಿದ್ದಾರೆ. ನಿತ್ಯ ಸಾಯುವುದಕ್ಕಿಂತ ಒಂದೇ ಬಾರಿ ಸಾಯಲು ಈ ಮಹಿಳೆಯರು ಸಿದ್ಧರಾಗಿದ್ದಾರೆ," ಎನ್ನುತ್ತಾರೆ.

"ಕುಡಿತದ ವ್ಯಸನಕ್ಕೆ ಬಲಿಯಾಗಿರುವವರು ಮನೆಯ ಅಕ್ಕಿ ಬೇಳೆ, ಮನೆಯ ಪಾತ್ರೆಗಳು, ಹೆಂಡತಿಯರ ಸೀರೆಗಳನ್ನು ಮಾರಿ ಕುಡಿದು ಬಂದು ಹೆಂಡತಿ, ಮಕ್ಕಳನ್ನು ಹೊಡೆಯುವುದು ಮಾಡುತ್ತಿದ್ದಾರೆ. ನಿತ್ಯ ಇದನ್ನು ನೋಡಿ ಈ ಮಹಿಳೆಯರಿಗೆ ಜೀವನ ಬೇಸತ್ತು ಹೋಗಿದೆ. ತಮ್ಮದೊಂದೇ ಮನೆಯ ಕಷ್ಟಕ್ಕಾಗಿ ಈ ಮಹಿಳೆಯರು ಪಾದಯಾತ್ರೆಗೆ ಬಂದಿಲ್ಲ, ಇದೊಂದು ಸಾಮೂಹಿಕ ಹೋರಾಟ" ಎಂಬ ಮಾತು ವಿದ್ಯಾ ಪಾಟೀಲ್‌ ಅವರದ್ದು.

ಸರಕಾರ ಸ್ಪಂದಿಸುತ್ತದೋ ಇಲ್ಲವೋ, ನಾವು ನಮ್ಮ ಹೋರಾಟ ಮುಂದುವರಿಸುತ್ತೇವೆ ಎಂದು ಈ ಮಹಿಳೆಯರು ಬೆಂಗಳೂರಿಗೆ ಪಾದಯಾತ್ರೆ ಹೊರಟಿದ್ದಾರೆ. ಮದ್ಯದಿಂದಲೇ ಹೆಚ್ಚಿನ ಆದಾಯ ಪಡೆಯುತ್ತಿರುವ ರಾಜ್ಯ ಸರಕಾರ ಮದ್ಯ ನಿಷೇಧಕ್ಕೆ ಮುಂದಾಗುವುದು ಕಷ್ಟ. ಅಲ್ಲದೆ, ರಾಜಕೀಯ ಅಸ್ಥಿರತೆಯಲ್ಲಿರುವ ಸರಕಾರ ಈ ಮಹಿಳೆಯರ ಪಾದಯಾತ್ರೆಯ ಬಗ್ಗೆ ಅದೆಷ್ಟು 'ಸಂವೇದನಾಶೀಲ'ವಾಗಿ ನಡೆದುಕೊಳ್ಳುತ್ತದೆ ಎಂಬುದು ಜನವರಿ 30ಕ್ಕೆ ಗೊತ್ತಾಗಲಿದೆ. ಈ ಸಮಯದಲ್ಲಿ ಹೋರಾಟಗಳಲ್ಲಿಯೂ ಎಚ್ಚರಿಕೆ ಪಾಠವೊಂದನ್ನು, ಹೋರಾಟಗಾರರಿಗೆ ಮಾದರಿಯೊಂದನ್ನು ಎ. ಟಿ. ಬಾಬು ಬಿಟ್ಟು ಹೋಗಿದ್ದಾರೆ.