samachara
www.samachara.com
ಗೌರಿ ಹತ್ಯೆ, ಮುಂಡೆ ಕೊಲೆ & ಧೂಳೆಬ್ಬಿಸಿದ ಇವಿಎಂ ಟ್ಯಾಂಪರಿಂಗ್‌ ಆರೋಪದ ಸುತ್ತ...
COVER STORY

ಗೌರಿ ಹತ್ಯೆ, ಮುಂಡೆ ಕೊಲೆ & ಧೂಳೆಬ್ಬಿಸಿದ ಇವಿಎಂ ಟ್ಯಾಂಪರಿಂಗ್‌ ಆರೋಪದ ಸುತ್ತ...

ಇವಿಎಂ ತಿರುಚುವಿಕೆ 2014ರಲ್ಲಿ ಮೋದಿ ಗೆಲುವಿಗೆ ಕಾರಣವಾಯಿತು ಎಂಬುದರಿಂದ ಹಿಡಿದು ಗೋಪಿನಾಥ್‌ ಮುಂಡೆ ಕೊಲೆ, ಪತ್ರಕರ್ತೆ-ಹೋರಾಟಗಾರ್ತಿ ಗೌರಿ ಲಂಕೇಶ್‌ ಹತ್ಯೆ, ಹ್ಯಾಕಿಂಗ್‌ನಲ್ಲಿ ರಿಲಯನ್ಸ್‌ ಜಿಯೋ ಕೈವಾಡದವರೆಗೆ ಆರೋಪಗಳ ಸರಣಿ ಹಬ್ಬಿದೆ.

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಆಗಾಗ ಹೊಗೆಯಾಡಿ ತಣ್ಣಗಾಗುವ ಇವಿಎಂ ಟ್ಯಾಂಪರಿಂಗ್‌ ಎಂಬ ಬೂದಿ ಮುಚ್ಚಿದ ಕೆಂಡದಿಂದ ಮತ್ತೆ ಕಿಡಿ ಹಾರಿದೆ. ಈ ಬಾರಿ ಲಂಡನ್‌ನಿಂದ ‘ಎಲೆಕ್ಟ್ರಾನಿಕ್‌ ವೋಟಿಂಗ್‌ ಮೆಷೀನ್‌ (ಇವಿಎಂ)’ಗಳನ್ನು ತಿರುಚಬಹುದು ಎಂಬ ಆರೋಪ ಕೇಳಿ ಬಂದಿದೆ.

ಇವಿಎಂ ತಿರುಚುವಿಕೆ ಎಂಬುದು 2014ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಗೆಲುವಿಗೆ ಕಾರಣವಾಯಿತು ಎಂಬುದರಿಂದ ಹಿಡಿದು ಗೋಪಿನಾಥ್‌ ಮುಂಡೆ ಕೊಲೆ, ಪತ್ರಕರ್ತೆ-ಹೋರಾಟಗಾರ್ತಿ ಗೌರಿ ಲಂಕೇಶ್‌ ಹತ್ಯೆ ಮತ್ತು ಹ್ಯಾಕಿಂಗ್‌ನಲ್ಲಿ ರಿಲಯನ್ಸ್‌ ಜಿಯೋ ಕೈವಾಡದವರೆಗೆ ಈ ಆರೋಪಗಳ ಸರಣಿ ಹಬ್ಬಿದೆ.

ಸೋಮವಾರ ಲಂಡನ್‌ನಲ್ಲಿ ‘ಇಂಡಿಯನ್ ಜರ್ನಲಿಸ್ಟ್‌ ಅಸೋಸಿಯೇಷನ್‌ (ಯುರೋಪ್‌)’ ಅಧ್ಯಕ್ಷ ಆಶೀಷ್‌ ರೇ ಪತ್ರಿಕಾಗೋಷ್ಠಿಯೊಂದನ್ನು ಹಮ್ಮಿಕೊಂಡಿದ್ದರು. ತಾವು ಈ ಪತ್ರಿಕಾಗೋಷ್ಠಿಯಲ್ಲಿ ಮಾಡುತ್ತಿರುವ ಆರೋಪಗಳನ್ನು ಪರಿಶೀಲನೆಗೆ ಒಳಪಡಿಸಿಲ್ಲ, ಜತೆಗೆ ಇದಕ್ಕೆ ನಮ್ಮ ಬೆಂಬಲವೂ ಇಲ್ಲ, ವಿರೋಧವೂ ಇಲ್ಲ ಎಂದು ಹೇಳಿ ಅವರು ಪ್ರೆಸ್‌ಮೀಟ್‌ಗೆ ಚಾಲನೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ತನ್ನನ್ನು ತಾನು ಹೈದರಾಬಾದ್‌ ಮೂಲದ ಅಮೆರಿಕಾ ಸೈಬರ್‌ ತಜ್ಞ ಎಂದು ಪರಿಚಯಿಸಿಕೊಂಡ ಸಯ್ಯದ್‌ ಶುಜಾ ಅರ್ಧ ಮುಖ ಮುಚ್ಚಿಕೊಂಡು ಸ್ಕೈಪ್‌ ಮೂಲಕ ನೆರೆದವರನ್ನು ಉದ್ದೇಶಿಸಿ ಮಾತನಾಡಿದರು; ಆರೋಪಗಳ ಸುರಿಮಳೆ ಸುರಿಸಿದರು.

ಕಾಂಗ್ರೆಸ್‌ನ ಹಿರಿಯ ನಾಯಕ ಕಪಿಲ್‌ ಸಿಬಲ್‌ ಉಪಸ್ಥಿತರಿದ್ದ ಈ ಪತ್ರಿಕಾಗೋಷ್ಠಿಯಲ್ಲಿ ಶುಜಾ, ಭಾರತದ ಚುನಾವಣೆಯಲ್ಲಿ ಬಳಸಿದ ಇವಿಎಂಗಳನ್ನು ತಿರುಚಬಹುದು ಎಂಬ ಸ್ಫೋಟಕ ಮಾತುಗಳನ್ನಾಡಿದ್ದಾರೆ. ಜತೆಗೆ ಇವಿಎಂ ಟ್ಯಾಂಪರಿಂಗ್‌ನ ಬಹಿರಂಗ ಪ್ರದರ್ಶನ ನೀಡುವುದಾಗಿಯೂ ಹೇಳಿದರು. ಆದರೆ ಕಾರ್ಯಕ್ರಮದಲ್ಲಿ ಅಂಥಹ ಯಾವುದೇ ಪ್ರದರ್ಶನ ಇರಲಿಲ್ಲ.

ತಿರುಚುವಿಕೆಯಾಚೆ ತಮ್ಮ ಆರೋಪಗಳನ್ನು ವಿಸ್ತರಿಸಿದ ಅವರು ಭಾರತದಲ್ಲಿ 2014ರಿಂದ 2019ರವರೆಗೆ ಚುನಾವಣೆಗಳಲ್ಲಿ ಬಳಸಿದ ಇವಿಎಂಗಳನ್ನು ವಿನ್ಯಾಸ ಮಾಡಿದವರಲ್ಲಿ ನಾನೂ ಒಬ್ಬ. ನಾನು ‘ಎಲೆಕ್ಟ್ರಾನಿಕ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ಲಿ. (ಇಸಿಐಎಲ್‌)‘ಗೆ 2009 ರಿಂದ 2014ರ ವರೆಗೆ ಕೆಲಸ ನಿರ್ವಹಿಸುತ್ತಿದ್ದೆ. 2014ರಲ್ಲಿ ರಿಲಯನ್ಸ್‌ ಜಿಯೋ ಬಳಿಯಲ್ಲಿರುವ ತಂತ್ರಜ್ಞಾನ ಬಳಸಿ ಇವಿಎಂ ತಿರುಚಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಿದ್ದು ನನ್ನ ತಂಡಕ್ಕೆ ತಿಳಿಯುತ್ತಿದ್ದಂತೆ ಇದರಲ್ಲಿದ್ದ ಹಲವು ಕೊಲೆಯಾದರು ಎಂದು ವಿವರಿಸಿದ್ದಾರೆ. ಮತ್ತು ಕೊಲೆಯಾದವರು ಎನ್ನಲಾದ ವ್ಯಕ್ತಿಗಳ ಹೆಸರನ್ನೂ ಅವರು ಬಾಯ್ಬಿಟ್ಟಿದ್ದಾರೆ.

‘ತಾನು ಇವಿಎಂ ವಿನ್ಯಾಸಗಾರರಲ್ಲಿ ಒಬ್ಬನಾಗಿದ್ದು, ಇವಿಎಂ ಟ್ಯಾಂಪರ್‌ ಮಾಡಬಹುದೇ ಎಂಬುದನ್ನು ಪತ್ತೆ ಹಚ್ಚುವಂತೆ ಮತ್ತು ಟ್ಯಾಂಪರ್‌ ಮಾಡುವ ವಿಧಾನವನ್ನು ಸೂಚಿಸುವಂತೆ ತಮಗೆ ‘ಇಸಿಐಎಲ್‌’ ತಿಳಿಸಿತ್ತು’ ಎಂದಿದ್ದಾರೆ. ಈ ಉಪಕರಣಗಳನ್ನು ಹ್ಯಾಕ್‌ ಮಾಡಬಹುದು ಎಂದು ತಿಳಿಯುತ್ತಿದ್ದಂತೆ ನಾನು ಬಿಜೆಪಿ ನಾಯಕರನ್ನು ಭೇಟಿಯಾಗಲು ತೆರಳಿದ್ದೆ. ಆದರೆ ನಾನು ಮತ್ತು ನನ್ನ ತಂಡದ ಮೇಲೆ ಗುಂಡು ಹಾರಿಸಲಾಯಿತು ಎಂದು ಶುಜಾ ವಿವರಿಸಿದ್ದಾರೆ.

ತಮ್ಮ ಸಹೊದ್ಯೋಗಿಗಳ ಕೊಲೆಯನ್ನು ಮುಚ್ಚಿ ಹಾಕಲು ಹೈದರಾಬಾದ್‌ನ ಕಿಶನ್‌ಗರ್‌ನಲ್ಲಿ ಬಿಜೆಪಿ ಕೋಮುಗಲಭೆಗೂ ಯತ್ನಿಸಿತ್ತು ಎಂದವರು ದೂರಿದ್ದಾರೆ. ನಾನು ಮಾತ್ರ ತಪ್ಪಿಸಿಕೊಂಡು ಅಮೆರಿಕಾಗೆ ಪಲಾಯನ ಮಾಡಿದೆ ಮತ್ತು ರಾಜಕೀಯ ಆಶ್ರಯ ಕೇಳಿಕೊಂಡೆ ಎಂದು ಹೇಳಿದ್ದಾರೆ. ‘ಅಂದುಕೊಂಡಂತೆ ಆಗಿದ್ದರೆ ನಾನು ಪತ್ರಿಕಾಗೋಷ್ಠಿಯಲ್ಲಿ ಹಾಜರಿರಬೇಕಿತ್ತು. ಆದರೆ ನಾಲ್ಕು ದಿನಗಳ ಹಿಂದೆ ನನ್ನ ಮೇಲೆ ದಾಳಿಯಾಗಿದ್ದರಿಂದ ನಾನು ಈ ಲಂಡನ್‌ನ ಇವಿಎಂ ಟ್ಯಾಂಪರಿಂಗ್ ಪ್ರದರ್ಶನದಲ್ಲಿ ಭಾಗವಹಿಸುತ್ತಿಲ್ಲ’ ಎಂದು ಸ್ಕೈಪ್‌ ಲೈವ್‌ನಲ್ಲೇ ಶುಜಾ ವಿವರಿಸಿದರು.

2014ರ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಮತ್ತು ಬಿಜೆಪಿ ಫಲಿತಾಂಶವನ್ನು ತಿರುಚಿದೆ. ಇದಕ್ಕಾಗಿ ಮಿಲಿಟರಿ ವರ್ಗದ ತರಂಗಗಳನ್ನು ಬಳಸಲಾಗಿದೆ ಎಂದು ಶುಜಾ ಪ್ರತಿಪಾದಿಸಿದ್ದಾರೆ. ಈ ಮೂಲಕ ಗುಜರಾತ್, ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ದೆಹಲಿಯ ಫಲತಾಂಶವನ್ನು ಬದಲಿಸಲಾಗಿದೆ. ಈ ವಿಚಾರ ಬಿಜೆಪಿ ನಾಯಕ ಗೋಪಿನಾಥ್‌ ಮುಂಡೆಯವರಿಗೆ ಗೊತ್ತಿದ್ದಕ್ಕಾಗಿ ಅವರನ್ನು 2014ರಲ್ಲಿ ಕೊಲೆ ಮಾಡಲಾಗಿದೆ ಎಂದಿದ್ದಾರೆ. (2014ರ ಜೂನ್‌ನಲ್ಲಿ ದೆಹಲಿಯಲ್ಲಿ ನಡೆದ ಅಪಘಾತದಲ್ಲಿ ಮುಂಡೆ ಸಾವನ್ನಪ್ಪಿದ್ದರು.)

ಚುನಾವಣೆಯಲ್ಲಿ ಅಕ್ರಮ ಎಸಗಲು ಎಲ್ಲಾ ಪಕ್ಷಗಳು ತಮ್ಮನ್ನು ಸಂಪರ್ಕಿಸಿದ್ದವು. ಆದರೆ ಭಾರತದಲ್ಲಿ ಹ್ಯಾಕಿಂಗ್‌ ಯತ್ನಗಳನ್ನು ತಡೆಯಲೆಂದೇ ಸೈಬರ್‌ ತಜ್ಞರ ತಂಡವೊಂದು ಭಾರಿ ಪರಿಶ್ರಮದಿಂದ ಕೆಲಸ ನಿರ್ವಹಿಸುತ್ತಿದೆ. ಡಿಸೆಂಬರ್‌ನಲ್ಲಿ ಕೊನೆಗೊಂಡ ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಸೋಲಲು ಈ ತಂಡವೇ ಕಾರಣ ಎಂದೂ ಶುಜಾ ವಿವರಿಸಿದ್ದಾರೆ. ಬಿಜೆಪಿಯ ಮತಯಂತ್ರ ತಿರುಚುವ ಪ್ರಯತ್ನವನ್ನು ಈ ತಂಡ ತಡೆಯದೇ ಹೋಗಿದ್ದರೆ ಪಕ್ಷ ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಗೆಲ್ಲುತ್ತಿತ್ತು ಎಂದಿದ್ದಾರೆ.

ಈ ಮತಯಂತ್ರ ತಿರುಚುವ ವಿಚಾರ ಪತ್ರಕರ್ತೆ ಮತ್ತು ಹೋರಾಟಗಾರ್ತಿ ಗೌರಿ ಲಂಕೇಶ್‌ ಸಾವಿಗೂ ಕಾರಣವಾಯಿತು ಎಂದು ಅವರು ಹೇಳಿದ್ದಾರೆ. ಇವಿಎಂ ಹ್ಯಾಕ್‌ ಬಗೆಗಿನ ಸುದ್ದಿಯನ್ನು ಪ್ರಕಟ ಮಾಡಲು ಗೌರಿ ಲಂಕೇಶ್‌ ಒಪ್ಪಿದ್ದರು. ಇದೇ ಕಾರಣಕ್ಕೆ ಅವರನ್ನು ಕೊಲೆ ಮಾಡಲಾಯಿತು ಎಂದು ಶುಜಾ ತಿಳಿಸಿದ್ದಾರೆ.

ಇನ್ನು ಇವಿಎಂ ಟ್ಯಾಂಪರ್‌ ಮಾಡುವುದನ್ನು ಜಗತ್ತಿಗೆ ತೋರಿಸುವಂತೆ ಕೋರಿ ಎಎಪಿ ತಮ್ಮನ್ನು ಸಂಪರ್ಕಿಸಿತ್ತು ಎಂಬ ವಿವರಗಳನ್ನೂ ಶುಜಾ ನೀಡಿದ್ದಾರೆ. ಆದರೆ ಈ ವಾದವನ್ನು ಎಎಪಿ ತಳ್ಳಿ ಹಾಕಿದೆ. ಇವಿಎಂ ಟ್ಯಾಂಪರ್‌ ವಿಚಾರದಲ್ಲಿ ನಾವು ಹಲವರ ಜತೆ ಸಂಪರ್ಕದಲ್ಲಿರುವುದು ನಿಜ. ಆದರೆ ಆ ಹಲವರಲ್ಲಿ ಶುಜಾ ಇಲ್ಲ ಎಂದು ಹೇಳಿದೆ. ಆದರೆ ಟ್ಯಾಂಪರಿಂಗ್‌ ಆರೋಪ ಗಂಭೀರವಾದುದು. ಇದನ್ನೇ ನಾವು ಹಲವು ಸಮಯದಿಂದ ಹೇಳುತ್ತಾ ಬಂದಿದ್ದೇವೆ ಎಂದು ಪುನರುಚ್ಛರಿಸಿದೆ.

ಶುಜಾ ಹೇಳಿಕೆ ರಾಜಕೀಯ ಕ್ಷೇತ್ರದಲ್ಲಿ ಬಿರುಗಾಳಿ ಎಬ್ಬಿಸಿದೆ. ಶುಜಾ ವಾದವನ್ನು ಚುನಾವಣಾ ಆಯೋಗ ತಳ್ಳಿ ಹಾಕಿದ್ದು, ಕಾನೂನು ಕ್ರಮ ತೆಗೆದುಕೊಳ್ಳುವ ಮಾತುಗಳನ್ನಾಡಿದೆ. ಆಡಳಿತರೂಢ ಬಿಜೆಪಿಯ ಅರುಣ್‌ ಜೇಟ್ಲಿ, ಮುಕ್ತಾರ್‌ ಅಬ್ಬಾಸ್‌ ನಖ್ವಿ ಮೊದಲಾದವರು ಇದೊಂದು ಆಧಾರ ರಹಿತ ಆರೋಪ ಮತ್ತು ಕಾಂಗ್ರೆಸ್‌ ಸಂಚು ಎಂದು ಕರೆದಿದ್ದಾರೆ. ಆದರೆ ವಿರೋಧ ಪಕ್ಷಗಳು ಈ ಪತ್ರಿಕಾಗೋಷ್ಠಿಯನ್ನೇ ದಾಳವಾಗಿಸಿಕೊಂಡಿದ್ದು ಇವಿಎಂ ವಿರುದ್ಧ ಮುಗಿಬಿದ್ದಿವೆ. ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಎಲ್ಲಾ ರಾಜಕೀಯ ಪಕ್ಷಗಳ ಅಭಿಪ್ರಾಯ ಪಡೆದು ಚುನಾವಣೆಯನ್ನು ಬ್ಯಾಲೆಟ್‌ ಪೇಪರ್‌ಗೆ ಮರಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದಕ್ಕೆ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿಯೂ ಧ್ವನಿಗೂಡಿಸಿದ್ದಾರೆ.

ಇನ್ನೊಂದೆಡೆ “ನಮ್ಮ ಶ್ರೇಷ್ಠ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಬೇಕಾಗಿದೆ. ಪ್ರತಿ ಮತವೂ ಅಮೂಲ್ಯ. ಮೊನ್ನೆ ನಡೆದ ಮಹಾಘಟಬಂಧನ್‌ ರ್ಯಾಲಿಯಲ್ಲಿ ಎಲ್ಲಾ ಪಕ್ಷಗಳು ಇವಿಎಂ ಬಗ್ಗೆ ಚರ್ಚೆ ನಡೆಸಿದ್ದು ಈ ವಿಚಾರವನ್ನು ಚುನಾವಣಾ ಆಯೋಗದ ಗಮನಕ್ಕೆ ತರಲಿದ್ದೇವೆ,” ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ಟೀಟ್‌ ಮಾಡಿದ್ದಾರೆ. ಗೋಪಿನಾಥ್‌ ಮುಂಡೆ ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರ ಸಂಬಂಧಿ ಎನ್‌ಸಿಪಿ ನಾಯಕ ಧನಂಜಯ್‌ ಮುಂಡೆ, ‘ರಾ’ ಅಥವಾ ಸುಪ್ರೀಂಕೋರ್ಟ್‌ ನ್ಯಾಯಧೀಶರ ನೇತೃತ್ವದಲ್ಲಿ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಅಡ್ವಾಣಿಯಿಂದ ಕೇಜ್ರಿವಾಲ್‌ವರೆಗೆ...

ಹಾಗೆ ನೋಡಿದರೆ ಇವಿಎಂ ಹ್ಯಾಕಿಂಗ್‌ ಆರೋಪವನ್ನು ಮೊದಲು ಮಾಡಿದವರೇ ಬಿಜೆಪಿಗರು. 2009ರಲ್ಲಿ ಲೋಕಸಭೆ ಚುನಾವಣೆ ಸೋತ ನಂತರ ಬಿಜೆಪಿಯ ಹಿರಿಯ ನಾಯಕ, ಅಂದಿನ ವಿರೋಧ ಪಕ್ಷದ ಮುಂದಾಳು ಎಲ್‌.ಕೆ. ಅಡ್ವಾಣಿ ಇವಿಎಂ ತಿರುಚುವಿಕೆಯ ಆರೋಪ ಮಾಡಿದ್ದರು. ಜತೆಗೆ ಮಹಾರಾಷ್ಟ್ರ ಮತ್ತು ಇತರ ಮೂರು ರಾಜ್ಯಗಳ ಚುನಾವಣೆಯಲ್ಲಿ ಬ್ಯಾಲೆಟ್‌ ಪೇಪರ್‌ ಬಳಕೆಯನ್ನೇ ಆರಂಭಿಸುವಂತೆ ಅವರು ಒತ್ತಾಯಿಸಿದ್ದರು. ಈ ಮೂಲಕ ಮೊದಲ ಬಾರಿಗೆ ಪ್ರಭಾವಿ ನಾಯಕರೊಬ್ಬರ ಬಾಯಲ್ಲಿ ಇಂಥಹ ಹೇಳಿಕೆ ಹೊರ ಬಿದ್ದಿತ್ತು.

ಮುಂದೆ ಹಲವರು ಇವಿಎಂ ಬಗ್ಗೆ ಗಂಭೀರ ಅನುಮಾನಗಳನ್ನು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಪಂಜಾಬ್‌ ಮತ್ತು ಗೋವಾ ವಿಧಾನಸಭೆ ಚುನಾವಣೆಯಲ್ಲಿ ಸೋಲೊಪ್ಪಿಕೊಂಡ ನಂತರ ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ನಾಯಕ ಅರವಿಂದ ಕೇಜ್ರಿವಾಲ್‌ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಜತೆಗೆ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಕ್ಲೀನ್‌ಸ್ವೀಪ್‌ ಸಾಧನೆಯೂ ವಿರೋಧ ಪಕ್ಷಗಳಲ್ಲಿ ಅನುಮಾನವನ್ನು ಹುಟ್ಟಿಸಿತ್ತು.

ಇದಕ್ಕೆ ಅದರದ್ದೇ ಆದ ಕಾರಣಗಳಿವೆ. ಇವತ್ತಿಗೆ ಜಗತ್ತಿನಲ್ಲಿರುವ ಸುಮಾರು 120 ಪ್ರಜಾಪ್ರಭುತ್ವ ದೇಶಗಳಲ್ಲಿ ಕೇವಲ 25 ದೇಶಗಳು ಮಾತ್ರ ಚುನಾವಣೆಗೆ ಇವಿಎಂ ನೆಚ್ಚಿಕೊಂಡಿವೆ. ಅಮೆರಿಕಾ, ಬ್ರಿಟನ್‌ನಂಥ ಯಾವ ಮುಂದುವರಿದ ದೇಶಗಳೂ ಇವಿಎಂ ಬಳಸುತ್ತಿಲ್ಲ. ಬದಲಿಗೆ ಪಾರಂಪರಿಕ ಬ್ಯಾಲೆಟ್‌ ಪೇಪರ್‌ಗಳನ್ನೇ ನೆಚ್ಚಿಕೊಂಡಿವೆ. ಇವು ಹೆಚ್ಚು ಪಾರದರ್ಶಕ ಮತ್ತು ತಿರುಚುವುದು ಅಸಾಧ್ಯ ಎಂಬುದೇ ಇದಕ್ಕೆ ಕಾರಣ.

ಆದರೆ ಭಾರತದಲ್ಲಿ ಮಾತ್ರ ಮತದಾನಕ್ಕೆ 1999ರಿಂದಲೂ ಇವಿಎಂ ಬಳಕೆಯಲ್ಲಿದೆ. ಮತ್ತು ಇದು ತನ್ನ ಸುತ್ತ ಯಾವತ್ತೂ ವಿವಾದದ ಸ್ವರೂಪವನ್ನು ಕಾಪಾಡಿಕೊಂಡೇ ಬಂದಿದೆ. ಪ್ರತೀ ಬಾರಿ ಆರೋಪ ಮಾಡಿದಾಗಲೂ ರಾಜಕೀಯ ನಾಯಕರಾಗಲಿ, ತಂತ್ರಜ್ಞರಾಗಲಿ ಅದಕ್ಕೆ ಬೇಕಾದ ಪೂರಕ ಸಾಕ್ಷ್ಯ, ಪುರಾವೆಗಳನ್ನು ಜನರ ಮುಂದಿಟ್ಟಿಲ್ಲ. ಇದು ಶುಜಾ ಪ್ರಕರಣದಲ್ಲಿಯೂ ಮರುಕಳುಹಿಸಿದೆ.

ಇನ್ನೊಂದು ಕಡೆ ಚುನಾವಣಾ ಆಯೋಗ ಆರೋಪ ತಳ್ಳಿ ಹಾಕಲು ಸೀಮಿತವಾಗಿದೆಯೇ ಹೊರತು ಅದರ ಮಾತುಗಳು ಇವಿಎಂ ಟ್ಯಾಂಪರ್‌ ಮಾಡಲು ಸಾಧ್ಯವಿಲ್ಲ ಎಂಬ ನಂಬಿಕೆಯನ್ನು ವಿರೋಧ ಪಕ್ಷಗಳಲ್ಲಿ ಮತ್ತು ಈ ದೇಶದ ಜನರಲ್ಲಿ ಹುಟ್ಟಿಸುತ್ತಿಲ್ಲ. ಇವೆರಡರಲ್ಲಿ ಒಂದಾದರೂ ಸಾಧ್ಯವಾಗದ ಹೊರತು ಚುನಾವಣೆ ಬಂದಾಗಲೆಲ್ಲಾ ಮತ್ತೆ ಮತ್ತೆ ‘ಇವಿಎಂ ಟ್ಯಾಂಪರಿಂಗ್‌’ ಎನ್ನುವುದು ಧೂಳೆಬ್ಬಿಸುತ್ತಲೇ ಇರುತ್ತದೆ. ಪರಿಣಾಮ ದೇಶದ ಚುನಾವಣಾ ವ್ಯವಸ್ಥೆ ಬಗೆಗಿನ ನಂಬಿಕೆ ಕುಸಿಯುತ್ತಲೇ ಹೋಗುತ್ತದೆ. ಅದನ್ನು ಕಾಪಾಡುವ ಜವಾಬ್ದಾರಿ ಆಯೋಗದ ಮೇಲಿದೆ.