samachara
www.samachara.com
ವೀರಾಪುರದಲ್ಲೊಂದು ಸುತ್ತು: ಹುಟ್ಟಿದೂರಲ್ಲೇ ಶತಾಯುಷಿಯ ಕುರುಹುಗಳಿಲ್ಲ
COVER STORY

ವೀರಾಪುರದಲ್ಲೊಂದು ಸುತ್ತು: ಹುಟ್ಟಿದೂರಲ್ಲೇ ಶತಾಯುಷಿಯ ಕುರುಹುಗಳಿಲ್ಲ

ವೀರಾಪುರದ ಮಾರ್ಗದಲ್ಲಿ ಸಿಗುವ ಬಾಣವಾಡಿ ಹಾಗೂ ಪಾಲನಹಳ್ಳಿಗಳಲ್ಲಿ ಶಿವಕುಮಾರ ಸ್ವಾಮೀಜಿ ಹೆಸರಿನಲ್ಲಿ ತಗಡಿನ ಕಮಾನು ಹಾಗೂ ಪಾಲನಹಳ್ಳಿಯಲ್ಲಿ ಒಂದು ಸಿಮೆಂಟ್‌ ಪ್ರತಿಮೆ ಬಿಟ್ಟರೆ ವೀರಾಪುರದಲ್ಲಿ ಸ್ವಾಮೀಜಿಯ ಬೇರಾವ ಕುರುಹುಗಳಿಲ್ಲ. 

ದಯಾನಂದ

ದಯಾನಂದ

ಅದು ಬೆಂಗಳೂರಿನಿಂದ ಸುಮಾರು 50 ಕಿ.ಮೀ. ದೂರದಲ್ಲಿರುವ ಪುಟ್ಟ ಹಳ್ಳಿ. ಸುಮಾರು ಐವತ್ತು ಮನೆಗಳಿರುವ ಆ ಹಳ್ಳಿಯಲ್ಲಿ 111 ವರ್ಷಗಳ ಹಿಂದೆ ಶಿವಣ್ಣ ಎಂಬ ಬಾಲಕ ಹುಟ್ಟಿದ್ದ. ಅಂದು ಹುಟ್ಟಿದ್ದ ಆ ಬಾಲಕ ಮುಂದೆ ದೊಡ್ಡ ಮಠವೊಂದರ ಪೀಠಾಧಿಪತಿಯಾದ. ಆದರೆ, ಆ ಬಾಲಕ ಹುಟ್ಟಿದ ಹಳ್ಳಿಯ ಈ ಹೊತ್ತಿನ ಸ್ಥಿತಿ ಶತಮಾನಕ್ಕಿಂತಲೂ ಹಿಂದಿನ ಸ್ಥಿತಿಗಿಂತ ತೀರಾ ಭಿನ್ನವಾಗೇನೂ ಇಲ್ಲ.

ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಹುಟ್ಟಿದ ಮಾಗಡಿ ತಾಲ್ಲೂಕಿನ ವೀರಾಪುರ ಗ್ರಾಮದ ಸ್ಥಿತಿ ಇದು. ಶಿವಕುಮಾರ ಸ್ವಾಮೀಜಿ ಹುಟ್ಟಿದ ಹಳ್ಳಿ ಎಂಬ ಹೆಸರು ಬಿಟ್ಟರೆ ಈ ಗ್ರಾಮದಲ್ಲಿ ಇತರೆ ಯಾವುದೇ ಹೇಳಿಕೊಳ್ಳುವಂಥ ಕೆಲಸಗಳಾಗಿಲ್ಲ. ಹೊರಗಿನಿಂದ ಬಂದವರಿಗೆ ಈ ಹಳ್ಳಿಯೂ ಎಲ್ಲಾ ಹಳ್ಳಿಗಳಂತೆಯೇ. ಏಕೆಂದರೆ ಈ ಹಳ್ಳಿಯಲ್ಲೇ ಶಿವಕುಮಾರ ಸ್ವಾಮೀಜಿ ಹುಟ್ಟಿದ್ದು ಎಂದು ಹೇಳುವ ಒಂದು ಕುರುಹೂ ಸಿಗುವುದಿಲ್ಲ.

ಶಿವಕುಮಾರ ಸ್ವಾಮೀಜಿ ಹುಟ್ಟಿ ಬೆಳೆದ ವೀರಾಪುರದ ಗ್ರಾಮಸ್ಥರು ಸ್ವಾಮೀಜಿಯ ಬಗ್ಗೆ ಅತಿಯಾದ ಅಭಿಯಾನದ ಮಾತನ್ನೇನೂ ಆಡುವುದಿಲ್ಲ. “ಸ್ವಾಮೀಜಿಯೇನೋ ಬೆಳೆದರು. ಆದರೆ, ಹುಟ್ಟಿದ ಊರನ್ನು ನೆನೆಸಲಿಲ್ಲ” – ಇದು ವೀರಾಪುರದ ಬಹುತೇಕರು ಹೇಳುವ ಮಾತು.

ಸ್ವಾಮೀಜಿಯೇನೋ ಊರು ಮರೆತರು, ಆದರೆ ಸ್ವಾಮೀಜಿ ಹುಟ್ಟಿದ ಹಳ್ಳಿ ಎಂಬ ಕಾರಣಕ್ಕೆ ಜನಪ್ರತಿನಿಧಿಗಳಾದರೂ ಈ ಹಳ್ಳಿಯಲ್ಲಿ ಸ್ವಾಮೀಜಿ ಹೆಸರಿನಲ್ಲಿ ಹೇಳಿಕೊಳ್ಳುವಂಥದ್ದು ಏನೂ ಮಾಡಿಲ್ಲ ಎಂಬ ಕೊರಗು ಇಲ್ಲಿನ ಗ್ರಾಮಸ್ಥರಿಗಿದೆ.

ಪುಟ್ಟ ಹಳ್ಳಿ ವೀರಾಪುರದ ರಸ್ತೆಗಳಿಗೆ ಕ್ರಾಂಕ್ರೀಟ್‌ ಬಂದಿದೆ. ಹಳ್ಳಿಯ ಮುಂದೆ ತೊಂಬೆ ನಲ್ಲಿ ನೀರಿನ ವ್ಯವಸ್ಥೆ ಇದೆ. ಇಷ್ಟನ್ನು ಬಿಟ್ಟರೆ ಈ ಹಳ್ಳಿಯಲ್ಲಿ ಹೇಳಿಕೊಳ್ಳುವಂಥ ಯಾವ 'ಅಭಿವೃದ್ಧಿ' ಕೆಲಸಗಳೂ ಆಗಿಲ್ಲ. ಸ್ವಾಮೀಜಿ ಓದಿದ ಪ್ರಾಥಮಿಕ ಶಾಲೆಯೂ ಧೂಳು ಹಿಡಿಯುತ್ತಾ ನಿಂತಿದೆ.

ಸಣ್ಣ ಹಳ್ಳಿ ವೀರಾಪುರದಲ್ಲಿ ಶಿವಕುಮಾರ ಸ್ವಾಮೀಜಿ ಹೆಸರಿನಲ್ಲಿ ಏನೇನೂ ಆಗಿಲ್ಲ. ಹಳ್ಳಿಗೆ ಬಂದವರಿಗೆ ಗ್ರಾಮಸ್ಥರು ತೋರಿಸುವುದು ಸ್ವಾಮೀಜಿಯ ತಂದೆ- ತಾಯಿಯ ಸಮಾಧಿಯನ್ನು ಮಾತ್ರ. ಶಿವಕುಮಾರ ಸ್ವಾಮೀಜಿ ಹೆಸರಿನಲ್ಲಿ ಈ ಹಳ್ಳಿಯಲ್ಲಿ ಕಾಣಸಿಗುವುದು ಈ ಎರಡು ಸಮಾಧಿಗಳಷ್ಟೇ.

ಸ್ವಾಮೀಜಿಯ ತಂದೆ ಹೊನ್ನೇಗೌಡ ಹಾಗೂ ತಾಯಿ ಗಂಗಮ್ಮ ಅವರ ಸಮಾಧಿ . 
ಸ್ವಾಮೀಜಿಯ ತಂದೆ ಹೊನ್ನೇಗೌಡ ಹಾಗೂ ತಾಯಿ ಗಂಗಮ್ಮ ಅವರ ಸಮಾಧಿ . 
/ಸಮಾಚಾರ. 

“ಸ್ವಾಮೀಜಿ ಹುಟ್ಟಿದ ಹಳ್ಳಿ ಎಂದು ಇಲ್ಲಿಗೆ ಹುಡುಕಿಕೊಂಡು ಬರುವವರು ತುಂಬಾ ಕಡಿಮೆ. ಸ್ವಾಮೀಜಿ ಹೆಸರಿನಲ್ಲಿ ಇಲ್ಲಿ ಏನನ್ನೂ ಮಾಡಿಲ್ಲ. ಹಳ್ಳಿಗೆ ಸ್ವಾಮೀಜಿ ಹೆಸರಿನಲ್ಲಿ ಒಂದು ಕಾಲೇಜು ಆಗಬೇಕು ಎಂಬುದು ನಮ್ಮ ಬೇಡಿಕೆ. ಆದರೆ, ಸ್ವಾಮೀಜಿಗೇ ಆ ಬಗ್ಗೆ ಆಸಕ್ತಿ ಇಲ್ಲ. ತಾವು ಹುಟ್ಟಿದ ಹಳ್ಳಿ ಎಂಬ ಬಗ್ಗೆ ಅವರಿಗೆ ಹೆಚ್ಚಿನ ಅಭಿಮಾನವೇನಿಲ್ಲ. ಅವರು ಹಳ್ಳಿಗೆ ಬಂದಿದ್ದೇ ಸುಮಾರು 15-20 ವರ್ಷದ ಹಿಂದೆ. ವೀರಾಪುರದವರು ಎಂದರೆ ಸಿದ್ಧಗಂಗಾ ಮಠದಲ್ಲೂ ಅಷ್ಟಕ್ಕಷ್ಟೇ,” ಎಂದು ‘ಸಮಾಚಾರ’ದ ಜತೆ ಅಳಲು ತೋಡಿಕೊಂಡರು ಗ್ರಾಮದ ಹಿರಿಯರೊಬ್ಬರು.

“ಸ್ವಾಮೀಜಿ ತಾವು ಬೆಳೆದರು. ಆದರೆ, ಹಳ್ಳಿಗೆ ಏನನ್ನೂ ಮಾಡಿಸಲಿಲ್ಲ. ಗ್ರಾಮದಲ್ಲಿ ಏನಾದರೂ ಕಾರ್ಯಕ್ರಮ ಮಾಡಲು ಅವರನ್ನು ಆಹ್ವಾನಿಸಲು ಹೋದರೆ ಅವರು ನಮಗೆ ದಿನವನ್ನೇ ಕೊಡಲು ಹಿಂದೇಟು ಹಾಕುತ್ತಿದ್ದರು. ಮಠದ ಆಡಳಿತವೂ ವೀರಾಪುರದ ಗ್ರಾಮಸ್ಥರು ಎಂದರೆ ಸ್ವಲ್ಪ ಅಂತರ ಕಾಯ್ದುಕೊಳ್ಳುತ್ತದೆ. ಹಳ್ಳಿಯ ಮೂರ್ನಾಲ್ಕು ಜನರಿಗೆ ಮಠದ ಶಾಲೆಗಳಲ್ಲಿ ಶಿಕ್ಷಕರಾಗಿ ಕೆಲಸ ಸಿಕ್ಕಿದೆ. ಅದನ್ನು ಬಿಟ್ಟರೆ ಮಠಕ್ಕೂ ನಮ್ಮ ಹಳ್ಳಿಗೂ ಹೆಚ್ಚಿನ ಸಂಬಂಧವೇನೂ ಇಲ್ಲ,” ಎನ್ನುತ್ತಾರೆ ಸ್ವಾಮೀಜಿಯ ಕುಟುಂಬಕ್ಕೇ ಸೇರಿದ ಮತ್ತೊಬ್ಬರು.

ಸಿದ್ದಗಂಗಾ ಸ್ವಾಮೀಜಿ ಓದಿದ ವೀರಾಪುರದ ಪ್ರಾಥಮಿಕ ಶಾಲೆ. 
ಸಿದ್ದಗಂಗಾ ಸ್ವಾಮೀಜಿ ಓದಿದ ವೀರಾಪುರದ ಪ್ರಾಥಮಿಕ ಶಾಲೆ. 

“ಸ್ವಾಮೀಜಿಯ ಅಣ್ಣಂದಿರ ಮಕ್ಕಳು ಈಗ ಬದುಕಿಲ್ಲ. ಸ್ವಾಮೀಜಿ ಹುಟ್ಟಿದ ಊರಿನಲ್ಲಿ ಅವರ ಹೆಸರಿನಲ್ಲಿ ಏನೂ ಆಗಿಲ್ಲ. ಅವರು ಓದಿದ ಶಾಲೆಯೂ ಎಲ್ಲಾ ಸರಕಾರಿ ಶಾಲೆಗಳಂತೇ ಇದೆ. ಈ ಹಳ್ಳಿಯನ್ನು ಮಾದರಿ ಗ್ರಾಮವಾಗಿ ಮಾಡುತ್ತೇವೆ ಎಂದು ಹಿಂದಿನ ಶಾಸಕರು ಭರವಸೆ ಕೊಟ್ಟಿದ್ದರು. ಆ ಭರವಸೆಯೂ ಈಡೇರಿಲ್ಲ. ಸ್ವಾಮೀಜಿ ಹೆಸರಿನಲ್ಲಿ ಕಾಲೇಜೂ ಇನ್ನೂ ಕನಸಾಗಿಯೇ ಇದೆ” ಎಂಬ ಕೊರಗು ಗ್ರಾಮದ ಮತ್ತೊಬ್ಬರದ್ದು. ಬಹುತೇಕ ಗ್ರಾಮಸ್ಥರು ತಮ್ಮ ಹೆಸರನ್ನು ಈ ವರದಿ ಜತೆಯಲ್ಲಿ ಉಲ್ಲೇಖಿಸುವುದಕ್ಕೆ ಹಿಂದೇಟು ಹಾಕಿದರು.

“ಊರಿಗೆ ಯಾರಾದರೂ ಸ್ವಾಮೀಜಿ ಹೆಸರು ಹೇಳಿಕೊಂಡು ಬಂದರೆ ಅವರಿಗೆ ಸ್ವಾಮೀಜಿ ತಂದೆ ತಾಯಿ ಸಮಾಧಿ ತೋರಿಬೇಕು. ಅದನ್ನು ಬಿಟ್ಟು ಬೇರೆ ಏನೂ ಇಲ್ಲಿ ಆಗಿಲ್ಲ. ಊರಿಗೆ ಸರಿಯಾದ ಬಸ್‌ ವ್ಯವಸ್ಥೆಯೂ ಇಲ್ಲ. ಇತ್ತೀಚೆಗೆ ದಿನಕ್ಕೆರಡು ಟ್ರಿಪ್‌ ಬಸ್‌ ಬಿಟ್ಟಿದ್ದಾರೆ. ಸ್ವಾಮೀಜಿ ಹುಟ್ಟಿದ ಹಳ್ಳಿ ಎಂದು ಹುಡುಕಿಕೊಂಡು ಯಾರೂ ಇಲ್ಲಿಗೆ ಬರುವುದಿಲ್ಲ. ಅವರು ಹುಟ್ಟಿದ್ದಷ್ಟೇ ಇಲ್ಲಿ. ಮಠದೊಂದಿಗೆ ಬೆಳೆದ ಸಂಬಂಧ ಅವರಿಗೆ ಹುಟ್ಟಿದ ಹಳ್ಳಿಯ ಬಗ್ಗೆ ಬೆಳೆಯಲಿಲ್ಲ. ಮಠದ ಪೀಠಾಧಿಪತಿಯಾದ ಮೇಲೂ ಅವರು ಹಳ್ಳಿಗೆ ಬಂದಿದ್ದು ತುಂಬಾ ಕಡಿಮೆ. ಅವರು ನಮ್ಮೂರಲ್ಲಿ ಹುಟ್ಟಿದ್ದರು ಎಂಬ ಅಭಿಮಾನವೇ ನಮಗೆ ದೊಡ್ಡದು. ಹಳ್ಳಿಗೆ ಬರಲು ಅವರಿಗೇ ಇಷ್ಟವಿಲ್ಲ ಎಂದ ಮೇಲೆ ಯಾರೇನು ಮಾಡಲು ಸಾಧ್ಯ,” ಎಂಬ ಪ್ರಶ್ನೆ ವೀರಾಪುರ ಗ್ರಾಮದ ಮಹಿಳೆಯೊಬ್ಬರದ್ದು.

ಬಾಣವಾಡಿಯಲ್ಲಿರುವ ತಗಡಿನ ಕಮಾನು. 
ಬಾಣವಾಡಿಯಲ್ಲಿರುವ ತಗಡಿನ ಕಮಾನು. 

ವೀರಾಪುರಕ್ಕೆ ಹೋಗುವ ಮಾರ್ಗದಲ್ಲಿ ಸಿಗುವ ಬಾಣವಾಡಿ ಹಾಗೂ ಪಾಲನಹಳ್ಳಿಗಳಲ್ಲಿ ಶಿವಕುಮಾರ ಸ್ವಾಮೀಜಿ ಹೆಸರಿನಲ್ಲಿ ತಗಡಿನ ಕಮಾನು ಹಾಗೂ ಪಾಲನಹಳ್ಳಿಯಲ್ಲಿ ಒಂದು ಸಿಮೆಂಟ್‌ ಪ್ರತಿಮೆ ಬಿಟ್ಟರೆ ವೀರಾಪುರದಲ್ಲಿ ಸ್ವಾಮೀಜಿಯ ಬಗ್ಗೆ ಇಂಥ ಕುರುಹುಗಳೂ ಇಲ್ಲ. ಸ್ವಾಮೀಜಿ ಹೆಸರಿನಲ್ಲಿ ಏನೂ ಇಲ್ಲದ ಊರಿಗೆ ಬಂದು ಹೋಗುವವರು ಕಡಿಮೆ. ಹೀಗಾಗಿ ಈ ಊರಿಗೆ ಇಷ್ಟೂ ವರ್ಷ ಬಸ್‌ ಇರಲಿಲ್ಲ. ಈಗೊಂದಿಷ್ಟು ದಿನಗಳ ಹಿಂದಿನಿಂದ ಬಸ್‌ ವ್ಯವಸ್ಥೆಯಾಗಿದೆ. ಅದರಲ್ಲೂ ಜನ ಓಡಾಡುವುದು ಕಡಿಮೆ. ಯಾವಾಗ ಆ ಬಸ್‌ ಕೂಡಾ ನಿಲ್ಲಿಸುತ್ತಾರೋ ಗೊತ್ತಿಲ್ಲ ಎನ್ನುತ್ತಾರೆ ಪಾಲನಹಳ್ಳಿಯ ಗ್ರಾಮಸ್ಥರೊಬ್ಬರು. ಗ್ರಾಮಸ್ಥರೇ ಹೇಳುವಂತೆ ಸ್ವಾಮೀಜಿಗೂ ಬೇಡವಾಗಿದ್ದ, ಜನಪ್ರತಿನಿಧಿಗಳಿಗೂ ಬೇಡವಾಗಿರುವ ಗ್ರಾಮ ಈ ವೀರಾಪುರ.

ಸ್ವಾಮಿಗಳಾದವರು ತಮ್ಮ ಪೂರ್ವಾಶ್ರಮವನ್ನು ಮರೆಯಬೇಕು ಎಂಬ ಪ್ರತೀತಿ ಇದೆ. ವೀರಾಪುರ ನೋಡಿದರೆ ಈ ಮಾತಿಗೆ ಅನ್ವರ್ಥನಾಮದಂತಿದೆ. ಶಿವಕುಮಾರ ಸ್ವಾಮೀಜಿ ಇಲ್ಲದ ಈ ಹೊತ್ತಿನಲ್ಲಿ, ಅವರು ಹುಟ್ಟಿದ ಹಳ್ಳಿಯನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಅಲೋಚನೆ ಮಾಡುವುದು ಹೆಚ್ಚು ಆರೋಗ್ಯಪೂರ್ಣ; ‘ಭಾರತ ರತ್ನ’ಕ್ಕಿಂತ.