samachara
www.samachara.com
1908- 2019 ‘ವ್ಯಕ್ತಿ’ಚಿತ್ರ: ವೀರಾಪುರದ ಶಿವಣ್ಣ- ಕಾಯಕಯೋಗಿ- ನಡೆದಾಡುವ ‘ದೇವರು’
COVER STORY

1908- 2019 ‘ವ್ಯಕ್ತಿ’ಚಿತ್ರ: ವೀರಾಪುರದ ಶಿವಣ್ಣ- ಕಾಯಕಯೋಗಿ- ನಡೆದಾಡುವ ‘ದೇವರು’

ಶಿವಕುಮಾರ ಸ್ವಾಮೀಜಿ ಕೂಡಾ ಆರಂಭದಲ್ಲಿ ಸಿದ್ಧಗಂಗಾ ಮಠದಲ್ಲಿ ತಾರತಮ್ಯವನ್ನು ಅನುಭವಿಸಬೇಕಾಗಿತ್ತು. ಆದರೆ, ಅವರು ಪೀಠಾಧಿಪತಿಯಾಗಿದ್ದ ಕಾಲದಲ್ಲೂ ಈ ತಾರತಮ್ಯ ಮುಂದುವರಿದ ಆರೋಪಗಳಿದ್ದದ್ದು ಮಾತ್ರ ದುರಂತ.

Team Samachara

ಮಠವೊಂದು ಆಧ್ಯಾತ್ಮದ ಗೆರೆ ಮೀರಿ ಶೈಕ್ಷಣಿಕವಾಗಿ, ರಾಜಕೀಯವಾಗಿ ಎಷ್ಟರ ಮಟ್ಟಿಗೆ ಪ್ರಭಾವಿಯಾಗಬಹುದು ಎಂಬುದನ್ನು ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ತೋರಿಸಿಕೊಟ್ಟಿದ್ದು ಸಿದ್ಧಗಂಗಾ ಮಠ ಹಾಗೂ ಅದರ ಹಿಂದಿದ್ದವರು ಶಿವಕುಮಾರ ಸ್ವಾಮೀಜಿ.

111 ವರ್ಷ ಬದುಕಿನ ದೀರ್ಘಾಯುಷಿ ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅನ್ನ ದಾಸೋಹ ಹಾಗೂ ವಿದ್ಯಾ ದಾಸೋಹಕ್ಕೆ ಹೆಸರಾಗಿದ್ದವರು. ಒಂದು ಮಠವನ್ನು ಹೇಗೆಲ್ಲಾ ಬೆಳೆಸಬಹುದು ಎಂಬುದಕ್ಕೆ ಮಾದರಿ ಎಂಬಂತೆ ಸಿದ್ಧಗಂಗಾ ಮಠವನ್ನು ಬೆಳೆಸಿದವರು ಈ ಸ್ವಾಮೀಜಿ.

ಸ್ವಾಮೀಜಿಯವರದ್ದು ಮೂಲತಃ ಕುಂಚಿಟಿಗ ಒಕ್ಕಲಿಗ ಮನೆತನ. ಈ ವಿಚಾರವನ್ನು ಲಿಂಗಾಯತ ಸಮುದಾಯ ಮರೆ ಮಾಚುತ್ತಲೇ ಬಂದಿದೆ. ಬಸವ ತತ್ವದ ಶರಣ ಪರಂಪರೆಗೆ ಮನಸೋತಿದ್ದ ಶಿವಕುಮಾರ ಸ್ವಾಮೀಜಿ ಕುಟುಂಬದ ಹಿಂದಿನ ತಲೆಮಾರಿನವರು ಲಿಂಗದೀಕ್ಷೆ ಪಡೆದು ಲಿಂಗಾಯತರಾಗಿದ್ದರು. ಇದೇ ಕಾರಣಕ್ಕೆ ಶಿವಕುಮಾರ ಸ್ವಾಮೀಜಿ ಕೂಡಾ ಆರಂಭದಲ್ಲಿ ಸಿದ್ಧಗಂಗಾ ಮಠದಲ್ಲಿ ತಾರತಮ್ಯವನ್ನು ಅನುಭವಿಸಬೇಕಾಗಿತ್ತು ಎಂಬ ಮಾತುಗಳೂ ಇವೆ. ಆದರೆ, ಅವರು ಪೀಠಾಧಿಪತಿಯಾಗಿದ್ದ ಕಾಲದಲ್ಲೂ ಈ ತಾರತಮ್ಯ ಮುಂದುವರಿದ ಆರೋಪಗಳಿದ್ದದ್ದು ಮಾತ್ರ ದುರಂತ.

ಶಿವಕುಮಾರ ಸ್ವಾಮೀಜಿ ಹುಟ್ಟಿದ್ದು 1908 ಏಪ್ರಿಲ್ 1ರಂದು ಹಿಂದಿನ ಬೆಂಗಳೂರು ಜಿಲ್ಲೆಯ ಮಾಗಡಿ ತಾಲ್ಲೂಕಿನ ವೀರಾಪುರ ಗ್ರಾಮದಲ್ಲಿ. ಅವರ ತಂದೆ ಹೊನ್ನಪ್ಪ, ತಾಯಿ ಗಂಗಮ್ಮ. ಸ್ವಾಮೀಜಿಯ ಮೊದಲ ಹೆಸರು ಶಿವಣ್ಣ. ತಂದೆ ಹೊನ್ನಪ್ಪ ಅವರ ಕಾಲಕ್ಕಾಗಲೇ ಇವರ ಕುಟುಂಬ ಸಿದ್ಧಗಂಗಾ ಮಠಕ್ಕೆ ನಡೆದುಕೊಳ್ಳುತ್ತಿತ್ತು. ಮಠ ಹಾಗೂ ಆಧ್ಯಾತ್ಮದ ಬಗ್ಗೆ ಬಾಲಕ ಶಿವಣ್ಣನಿಗೆ ಆಸಕ್ತಿ ಮೂಡಲು ಇದೇ ಕಾರಣ.

ಬಾಲ್ಯದಲ್ಲಿ ತಂದೆ ತಾಯಿ ಜತೆಗೆ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಹೋಗಿ ಬರುತ್ತಿದ್ದ ಬಾಲಕ ಶಿವಣ್ಣನಿಗೆ ಮುಂದೆ ವಾರಕ್ಕೆ ಒಮ್ಮೆಯಾದರೂ ಮಠಕ್ಕೆ ಭೇಟಿ ನೀಡುವ ಅಭ್ಯಾಸ ಬೆಳೆಯಿತು. ಮಠದ ಸಂಪರ್ಕಕ್ಕೆ ಬಂದ ಮೇಲೆ ಆಧ್ಯಾತ್ಮದ ಬಗ್ಗೆ ಒಲವು ಇನ್ನೂ ಹೆಚ್ಚಾಗುತ್ತಾ ಹೋಯಿತು. ಶಿಕ್ಷಣದ ಜತೆಜತೆಗೇ ಶಿವಣ್ಣನ ಆಧ್ಯಾತ್ಮದ ಒಲವೂ ಬೆಳೆಯಿತು.

ವೀರಾಪುರದ ಕೂಲಿಮಠದಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ತುಮಕೂರು ಜಿಲ್ಲೆಯ ನಾಗವಲ್ಲಿಯಲ್ಲಿ ಮಾಧ್ಯಮಿಕ ಶಿಕ್ಷಣ ಪಡೆದ ಬಾಲಕ ಶಿವಣ್ಣ, ಪ್ರೌಢಶಾಲೆಯ ವಿದ್ಯಾಭ್ಯಾಸಕ್ಕಾಗಿ ತುಮಕೂರಿಗೆ ಬರಬೇಕಾಯಿತು. 1926ರಲ್ಲಿ ಮೆಟ್ರಿಕ್ಯುಲೇಷನ್ ಮುಗಿಸಿದ ಶಿವಣ್ಣ ಮುಂದಿನ ನಾಲ್ಕು ತಿಂಗಳ ಕಾಲ ಸಿದ್ಧಗಂಗಾ ಮಠದಲ್ಲೇ ಉಳಿದುಕೊಂಡಿದ್ದರು. ಈ ಸಮಯದಲ್ಲಿ ಮಠದ ಅಂದಿನ ಸ್ವಾಮೀಜಿ ಉದ್ಧಾನ ಶಿವಯೋಗಿಗಳ ಆಧ್ಯಾತ್ಮಿಕ ಪ್ರವಚನಗಳು ಬಾಲಕ ಶಿವಣ್ಣನ ಮೇಲೆ ಗಾಢ ಪರಿಣಾಮ ಬೀರಿದ್ದವು.

ಸ್ವಾಮೀಜಿಯಾದ ಶಿವಣ್ಣ:

ಮುಂದೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿಎ ಪದವಿ ವ್ಯಾಸಂಗಕ್ಕೆ ಸೇರಿದರು ಶಿವಣ್ಣ. ಬೆಂಗಳೂರಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ದಿನಗಳಲ್ಲಿ ಅವರಿಗೆ ಅನ್ನ, ನೆರಳು ನೀಡಿದ್ದು ಗುಬ್ಬಿ ತೋಟದಪ್ಪ ಹಾಸ್ಟೆಲ್. ಶಿವಣ್ಣ ಸೆಂಟ್ರಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುವ ದಿನಗಳಲ್ಲೇ ಸಿದ್ಧಗಂಗಾ ಮಠದಲ್ಲಿ ಅವರ ಆಪ್ತ ಸ್ನೇಹಿತರಾಗಿದ್ದ ಮರುಳಾರಾಧ್ಯ ಸಾವನ್ನಪ್ಪಿದ್ದರು. ಮಠದ ಉತ್ತರಾಧಿಕಾರಿಯಾಗಿದ್ದ ಮರುಳಾರಾಧ್ಯರ ಅಕಾಲಿಕ ಸಾವಿನಿಂದ ಮುಂದೆ ಮಠದ ಪೀಠವೇರುವ ಸಮರ್ಥರ ಕೊರತೆ ಉಂಟಾಗಿತ್ತು. ಅದೇ ಹೊತ್ತಿಗೆ ಮಠದ ಪೀಠಾಧಿಪತಿ ಉದ್ಧಾನ ಶಿವಯೋಗಿಗಳು ಶಿವಣ್ಣನನ್ನು ಉತ್ತರಾಧಿಕಾರಿಯಾಗಿ ನೇಮಿಸುವ ನಿರ್ಧಾರಕ್ಕೆ ಬಂದಿದ್ದರು. ಮುಂದೆ ಮಠದ ಕೆಲ ಭಕ್ತರ ಅಡೆತಡೆಗಳ ನಡುವೆಯೂ ಸಿದ್ಧಗಂಗಾ ಪೀಠವನ್ನು ಏರಲು ಆಯ್ಕೆಯಾಗಿದ್ದು ಶಿವಣ್ಣ.

ಶಿವಣ್ಣ ಪದವಿ ವ್ಯಾಸಂಗವನ್ನು ಮುಗಿಸುವ ಮುನ್ನವೇ ಸಿದ್ಧಗಂಗಾ ಮಠ ಶಿವಣ್ಣನನ್ನು ಗುರು ಎಂದು ಒಪ್ಪಿಕೊಂಡಿತು. ಶಿವಣ್ಣ ‘ಶಿವಕುಮಾರ ಸ್ವಾಮೀಜಿ’ಯಾಗಿ ಪೀಠದ ಉತ್ತರಾಧಿಕಾರಿಯಾದರು. ಮತ್ತೆ ಸೆಂಟ್ರಲ್ ಕಾಲೇಜಿಗೆ ಹಿಂದಿರುಗಿ ತಮ್ಮ ವ್ಯಾಸಂಗ ಪೂರ್ಣಗೊಳಿಸಿದ ಸ್ವಾಮೀಜಿ, ಸಿದ್ಧಗಂಗಾ ಮಠಕ್ಕೆ ಉದ್ಧಾನ ಶಿವಯೋಗಿಗಳ ನಂತರದ ಪೀಠಾಧಿಕಾರಿಯಾದರು. ತಮ್ಮ ಮಗ ಉನ್ನತ ಅಧಿಕಾರಿಯಾಗಬೇಕೆಂದು ಕನಸು ಕಂಡಿದ್ದ ಶಿವಣ್ಣನ ತಂದೆ- ತಾಯಿಗಳಿಗೆ ಮಗ ಸನ್ಯಾಸಿಯಾಗಿದ್ದರಿಂದ ತೀವ್ರ ನಿರಾಸೆಯಾಗಿತ್ತು. ಮಗ ವೈರಾಗ್ಯದ ದಾರಿ ಹಿಡಿದಿದ್ದು ಆರಂಭದಲ್ಲಿ ಅವರಿಗೆ ಇಷ್ಟವಿರಲಿಲ್ಲ.

ಮಠದ ಉತ್ತರಾಧಾರಿಯಾಗಿ 1930 ಮಾರ್ಚ್ 3ರಂದು ಪೀಠಾರೋಹಣ ಮಾಡಿದ ಶಿವಕುಮಾರ ಸ್ವಾಮೀಜಿ, ಅನ್ನ ದಾಸೋಹ, ವಿದ್ಯಾ ದಾಸೋಹಕ್ಕಾಗಿ ದೇಣಿಗೆ ಸಂಗ್ರಹಕ್ಕೆ ಮುಂದಾದರು. ಸ್ವಾಮೀಜಿಯ ಸುತ್ತಾಟಗಳಿಂದ ಮಠಕ್ಕೆ ದಾನ ಹರಿದುಬರುವುದು ಹೆಚ್ಚಾಯಿತು. ಸುಸಜ್ಜಿತ ಸಂಸ್ಕೃತ ಶಿಕ್ಷಣ ಕೇಂದ್ರ ಹಾಗೂ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್‌ಗಳು ನಿರ್ಮಾಣಗೊಂಡವು. 1917ರಲ್ಲಿ ಉದ್ಧಾನ ಶಿವಯೋಗಿಗಳು ಸ್ಥಾಪಿಸಿದ್ದ ಸಂಸ್ಕೃತ ಶಾಲೆಯನ್ನು 1937ರಲ್ಲಿ ಸಂಸ್ಕೃತ ಕಾಲೇಜಾಗಿ ಪರಿವರ್ತಿಸಲಾಯಿತು. ಸಂಸ್ಕೃತ ಕಾಲೇಜಿನಲ್ಲಿ ವೇದಾಧ್ಯಯನದ ಜತೆಗೆ ತರ್ಕಶಾಸ್ತ್ರ, ವ್ಯಾಕರಣ, ಭಾಷಾ ಸಾಹಿತ್ಯವನ್ನೂ ಕಲಿಸಲು ಆರಂಭಿಸಲಾಯಿತು.

1941ರ ಜನವರಿ 11ರಂದು ಮಠದ ಹಿರಿಯ ಸ್ವಾಮೀಜಿ ಉದ್ಧಾನ ಶಿವಯೋಗಿಗಳು ನಿಧನರಾದರು. ಮುಂದೆ ಇಡೀ ಮಠದ ಸಂಪೂರ್ಣ ಜವಾಬ್ದಾರಿ ಶಿವಕುಮಾರ ಸ್ವಾಮೀಜಿಯ ಹೆಗಲ ಮೇಲೆ ಬಿತ್ತು. ಉದ್ಧಾನ ಶಿವಯೋಗಿಗಳ ನಿಧನದ ನಂತರ ಮಠದ ಆರ್ಥಿಕ ಬಲ ಕುಗ್ಗುತ್ತಾ ಬಂತು. ಆಗ ಶಿವಕುಮಾರ ಸ್ವಾಮೀಜಿಯ ಕೈಯಲ್ಲಿ ಇದ್ದಿದ್ದು ಕೇವಲ 300 ರೂಪಾಯಿ. ಮಠದ ಬ್ಯಾಂಕ್‌ ಖಾತೆಯಲ್ಲಿ ಒಂದಷ್ಟು ಹಣ ಇತ್ತಾದರೂ ಅದು ಹಿರಿಯ ಸ್ವಾಮೀಜಿಯ ಹೆಸರಿನಲ್ಲಿತ್ತು. ಮಠದ ಭಕ್ತರು ಮಠಕ್ಕೆ ಬೇಕಾದ ಸಾಮಾನುಗಳಿಂದ ಹಿಡಿದು ದವಸ ಧಾನ್ಯಗಳನ್ನು ಮಠಕ್ಕೆ ತಂದು ನೀಡತೊಡಗಿದರು. ಮಠದ ಸ್ಥಿತಿ ದಿನದಿಂದ ದಿನಕ್ಕೆ ಸುಧಾರಿಸತೊಡಗಿತು.

1966ರಲ್ಲಿ ನಾಡಿನಲ್ಲಿ ಅನ್ನಾಹಾರಕ್ಕೆ ಕ್ಷಾಮ ಉಂಟಾಗಿತ್ತು. ಬಡಜನರು ಅನ್ನಕ್ಕಾಗಿ ಮಠಕ್ಕೆ ಬರುವುದು ಹೆಚ್ಚಾಯಿತು. ಹಸಿವು ಎಂದು ಮಠಕ್ಕೆ ಬರುವ ಯಾರೂ ಖಾಲಿ ಹೊಟ್ಟೆಯಲ್ಲಿ ಹೊರಕ್ಕೆ ಹೋಗದಂತೆ ಸ್ವಾಮೀಜಿ ನೋಡಿಕೊಂಡರು. ಮಠದ ಕಾರ್ಯವನ್ನು ಗುರುತಿಸಿದ ರಾಜ್ಯ ಸರಕಾರ, ಮಠಕ್ಕೆ ದವಸ ಧಾನ್ಯಗಳನ್ನು ಪೂರೈಸಿತು. ಮುಂದೆ ನಾಡಿನ ಮೂಲೆ ಮೂಲೆಗಳಿಂದ ಮಠಕ್ಕೆ ಧವಸ ಧಾನ್ಯ ಹರಿದು ಬರಲು ಶುರುವಾಯಿತು.

ಸ್ವಾತಂತ್ರ್ಯ ಪೂರ್ವದಲ್ಲೇ ತುಮಕೂರು ಜಿಲ್ಲೆಯ ಹಲವು ಕಡೆ ಗ್ರಾಮೀಣ ಶಾಲೆಗಳನ್ನು ಆರಂಭಿಸಿದ್ದ ಶಿವಕುಮಾರ ಸ್ವಾಮೀಜಿ ಹಲವು ಮಿತಿಗಳ ನಡುವೆಯೂ ಗ್ರಾಮೀಣ ಶಿಕ್ಷಣಕ್ಕೆ ಒತ್ತು ಕೊಟ್ಟಿದ್ದರು. ರಾಜ್ಯ ಸರಕಾರ ಈ ಗ್ರಾಮೀಣ ಶಾಲೆಗಳನ್ನು ತಾನು ಮುನ್ನಡೆಸಲು ಮುಂದಾಗುವವರೆಗೂ ಈ ಶಾಲೆಗಳಿಗೆ ಸಂಪನ್ಮೂಲ ಹರಿದು ಬರುತ್ತಿದ್ದಿದ್ದು ಸಿದ್ಧಗಂಗಾ ಮಠದಿಂದಲೇ. ಸಿದ್ಧಗಂಗೆಯ ಸಂಸ್ಕೃತ ವಿದ್ಯಾಕೇಂದ್ರ ಹಾಗೂ ಗ್ರಾಮೀಣ ಶಾಲೆಗಳಿಂದ ಆರಂಭವಾದ ಮಠದ ಶೈಕ್ಷಣಿಕ ಅಭಿವೃದ್ಧಿ ಈಗ ಎಂಜಿನಿಯರಿಂಗ್ ಕಾಲೇಜಿನ ಮಟ್ಟಕ್ಕೆ ಬಂದಿದೆ.

ಎಂಜಿನಿಯರಿಂಗ್ ಕಾಲೇಜು ಮಾತ್ರವಲ್ಲದೆ ಸಿದ್ಧಗಂಗಾ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವೂ ತುಮಕೂರಿನಲ್ಲಿ ತಲೆ ಎತ್ತಿದೆ. ‘ಆಧ್ಯಾತ್ಮ ಸಾಧನೆ’ಯೊಂದಿಗೆ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆ, ರಾಜಕೀಯ ಪ್ರಭಾವವನ್ನು ಬೆಳೆಸಿಕೊಳ್ಳುವ ಮಾದರಿಯನ್ನು ರಾಜ್ಯದಲ್ಲಿ ಹುಟ್ಟುಹಾಕಿದ್ದೇ ಸಿದ್ಧಗಂಗಾ ಮಠ.

‘ಕಾಯಕ ಯೋಗಿ’ ಎಂದು ಹೆಸರಾಗಿರುವ ಶಿವಕುಮಾರ ಸ್ವಾಮೀಜಿ ರಾತ್ರಿ 11ಕ್ಕೆ ಮಲಗಿದರೆ, ಬೆಳಗಿನ ಜಾವ 2 ಗಂಟೆಗೆ ಏಳುತ್ತಿದ್ದರು. ಇಷ್ಟಲಿಂಗ ಪೂಜೆಯ ಬಳಿಕ ಇಡೀ ದಿನ ಮಠದ ಕೆಲಸ, ಭಕ್ತರಿಗೆ ದರ್ಶನ, ಲೆಕ್ಕಪತ್ರಗಳ ವ್ಯವಹಾರ ನೋಡಿಕೊಳ್ಳುತ್ತಿದ್ದರು. 111 ನೇ ವಯಸ್ಸಿನಲ್ಲೂ ಅವರು ಮತ್ತೊಬ್ಬರ ಮೇಲೆ ಅವಲಂಬಿತರಾಗಲು ಇಷ್ಟಪಡುತ್ತಿರಲಿಲ್ಲ ಎಂಬುದು ಅವರ ಆಪ್ತರ ಮಾತು.

ಇವು ಸ್ವಾಮೀಜಿ ಬಗೆಗೆ ಹೇಳಲಾಗುವ ‘ಭಕ್ತಿ ಪೂರ್ವಕ’ ಸಕಾರಾತ್ಮಕ ಮಾತುಗಳು. ಆದರೆ, ಶಿವಕುಮಾರ ಸ್ವಾಮೀಜಿ ಹಾಗೂ ಸಿದ್ಧಗಂಗಾ ಮಠದ ಬಗ್ಗೆ ಅಪಥ್ಯವಾಗುವಂತಹ ವಿಚಾರಗಳೂ ಕೆಲವು ಇವೆ. ಗೌರಿಶಂಕರ ಸ್ವಾಮೀಜಿ ಪ್ರಕರಣ, ಯಡಿಯೂರಪ್ಪ ಬಗ್ಗೆ ಅಪಾರ ಒಲವು, ಲಿಂಗಾಯತ ಪಕ್ಷಪಾತಿ, ಮಠದಲ್ಲಿ ದಲಿತರು, ಹಿಂದುಳಿದವರಿಗೆ ಕಡೆಯ ಸ್ಥಾನ ಎಂಬ ಋಣಾತ್ಮಕ ಮಾತುಗಳೂ ಮಠ ಹಾಗೂ ಸ್ವಾಮೀಜಿ ಬಗ್ಗೆ ಇವೆ.

ಗೌರಿಶಂಕರ ಸ್ವಾಮೀಜಿ. 
ಗೌರಿಶಂಕರ ಸ್ವಾಮೀಜಿ. 

ಗೌರಿಶಂಕರ ಸ್ವಾಮೀಜಿ Vs ಸಿದ್ಧಗಂಗಾ ಮಠ

ಅಂಗಾಂಗ ವೈಫಲ್ಯದಿಂದ ಮೃತಪಟ್ಟ ಗೌರಿಶಂಕರ ಸ್ವಾಮೀಜಿ ದಶಕಗಳ ಹಿಂದೆ ಸಿದ್ದಗಂಗಾ ಮಠದ ಕಿರಿಯ ಸ್ವಾಮೀಜಿಯಾಗಿದ್ದವರು. ಸಿದ್ಧಗಂಗಾ ಮಠದ ಅಧ್ಯಕ್ಷರ ಹುದ್ದೆಯನ್ನು ನಿರ್ವಹಿಸಿದ್ದವರು ಗೌರಿಶಂಕರ ಸ್ವಾಮೀಜಿ. ಸಲಿಂಗ ಕಾಮದ ಆರೋಪದ ಕಾರಣಕ್ಕೆ ಗೌರಿಶಂಕರ ಸ್ವಾಮೀಜಿ ಸಿದ್ಧಗಂಗಾ ಮಠದಿಂದಲೇ ಹೊರಗೆ ಬರಬೇಕಾಯಿತು. 1987ರಲ್ಲಿ ಸಲಿಂಗ ಕಾಮದ ಆರೋಪಕ್ಕೆ ಅವರನ್ನು ಮಠದಿಂದ ಉಚ್ಛಾಟಿಸಲಾಗಿತ್ತು. ಮಠದ ಉತ್ತರಾಧಿಕಾರಿಯಾಗಿದ್ದ ಗೌರಿಶಂಕರ ಸ್ವಾಮೀಜಿಯನ್ನು ಮಠದಿಂದ ಹೊರ ಹಾಕಲು ಮಠದೊಳಗಿನ ಹಿತಾಸಕ್ತಿ ಸಂಘರ್ಷವೇ ಕಾರಣ ಎಂಬ ಆರೋಪ ಕೇಳಿಬಂದಿತ್ತು.

ಗೌರಿಶಂಕರ ಸ್ವಾಮೀಜಿ ತಮ್ಮ ವಿರುದ್ಧದ ಆರೋಪಗಳ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ನ್ಯಾಯಾಲಯ ಗೌರಿಶಂಕರ ಸ್ವಾಮೀಜಿ ವಿರುದ್ಧವೇ ತೀರ್ಪು ನೀಡಿತ್ತು. 2004ರಲ್ಲಿ ಹೈಕೋರ್ಟ್ ಸ್ವಾಮೀಜಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಸ್ವಾಮೀಜಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. 2008ರಲ್ಲಿ ಸುಪ್ರೀಂಕೋರ್ಟ್ ಅವರ ವಿರುದ್ಧ ಹೈಕೋರ್ಟ್ ನೀಡಿದ್ದ ಆದೇಶವನ್ನು ವಜಾಗೊಳಿಸಿತ್ತು.

ಕಾನೂನು ಹೋರಾಟದಲ್ಲಿ ಗೆದ್ದರೂ ಗೌರಿಶಂಕರ ಸ್ವಾಮೀಜಿ ಮತ್ತೆ ಮಠದೊಳಕ್ಕೆ ಬರಲು ಸಾಧ್ಯವಾಗಲೇ ಇಲ್ಲ. ಸಾಯುವ ಮುನ್ನಾ ಶಿವಕುಮಾರ ಸ್ವಾಮೀಜಿಯ ಪಾದಪೂಜೆ ಮಾಡಬೇಕೆಂಬ ಆಸೆಯೊಂದಿಗೇ ಗೌರಿಶಂಕರ ಸ್ವಾಮೀಜಿ ಕೊನೆಯುಸಿರೆಳೆದರು. ಮಠದೊಳಗಿನ ಅವ್ಯವಸ್ಥೆಯನ್ನು ಬಯಲು ಮಾಡಿದ್ದು ಹಾಗೂ ಈ ಬಗ್ಗೆ ಶಿವಕುಮಾರ ಸ್ವಾಮೀಜಿ ಮೌನಿಯಾಗಿದ್ದೇ ಗೌರಿಶಂಕರ ಸ್ವಾಮೀಜಿಯ ಅವನತಿಗೆ ಕಾರಣ ಎಂಬ ಆರೋಪಗಳೂ ಇವೆ. “ಗೌರಿಶಂಕರ ಸ್ವಾಮೀಜಿ ಬಸವತತ್ವದ ಶರಣತ್ವವನ್ನು ಪ್ರತಿಪಾದಿಸಿದರೆ, ಶಿವಕುಮಾರ ಸ್ವಾಮೀಜಿ ಹಿಂದುತ್ವದ ಶರಣತ್ವಕ್ಕೆ ಹೆಚ್ಚು ಒತ್ತುಕೊಡುತ್ತಿದ್ದರು. ಇದೇ ಕಾರಣಕ್ಕೆ ಗೌರಿಶಂಕರ ಸ್ವಾಮೀಜಿ ಮತ್ತು ಶಿವಕುಮಾರ ಸ್ವಾಮೀಜಿ ಮಧ್ಯೆ ಸಂಘರ್ಷವೊಂದು ಆರಂಭದಿಂದಲೂ ಕಂಡೂ ಕಾಣದಂತೆ ಇತ್ತು,” ಎನ್ನುತ್ತಾರೆ ಮಠದ ಭಕ್ತರು.

“ಮಠದ ಹಣ ಹಾಗೂ ಸಾಮಾನುಗಳು ಮಠದ ಒಳಗಿರುವವರಿಂದಲೇ ಸೋರಿಕೆಯಾಗುತ್ತಿವೆ ಎಂಬುದನ್ನು ಮಠದ ಅಧ್ಯಕ್ಷರಾಗಿದ್ದ ಗೌರಿಶಂಕರ ಸ್ವಾಮೀಜಿ ಸಾಕ್ಷ್ಯ ಸಮೇತ ಶಿವಕುಮಾರ ಸ್ವಾಮೀಜಿ ಗಮನಕ್ಕೆ ತಂದಿದ್ದರು. ಅದೇ ಅವರಿಗೆ ಮುಳುವಾಯಿತು. ಶಿವಕುಮಾರ ಸ್ವಾಮೀಜಿ ಗೌರಿಶಂಕರ ಸ್ವಾಮೀಜಿಯೊಂದಿಗೆ ನಿಲ್ಲಲಿಲ್ಲ. ಹೀಗಾಗಿ ಗೌರಿಶಂಕರ ಸ್ವಾಮೀಜಿ ಕೊನೆಯವರೆಗೂ ಮಠದಿಂದ ದೂರವಾಗಿಯೇ ಉಳಿಯಬೇಕಾಯಿತು” ಎಂದು ನೆನಪಿಸಿಕೊಳ್ಳುತ್ತಾರೆ ಮಠದ ಭಕ್ತರೊಬ್ಬರು.

ಸಿದ್ಧಗಂಗಾ ಮಠದಿಂದ ದೂರಾದ ಮೇಲೆ ಗೌರಿಶಂಕರ ಸ್ವಾಮೀಜಿ 2009ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಏನೇ ತಪ್ಪು ಮಾಡಿದ್ದರೂ ತಮ್ಮ ಶಿಷ್ಯ ಹಾಗೂ ಹಿಂದೆ ಮಠದ ಉತ್ತರಾಧಿಕಾರಿಯಾಗಿದ್ದ ಕಿರಿಯ ಸ್ವಾಮೀಜಿಗೆ ಪಾದ ಪೂಜೆಗೆ ಅವಕಾಶ ಮಾಡಿಕೊಡಲಿಲ್ಲ ಎಂಬ ಮಾತಂತೂ ಶಿವಕುಮಾರ ಸ್ವಾಮೀಜಿ ವಿಚಾರದಲ್ಲಿ ಉಳಿದುಹೋಯಿತು.

‘ಶರಣ ಪಥದಲ್ಲೂ ತಾರತಮ್ಯ’

‘ತ್ರಿವಿಧ ದಾಸೋಹ’ ನಡೆಯುವ ಪುಣ್ಯ ಕ್ಷೇತ್ರ ಎಂದು ಹೇಳಲಾಗುವ ಸಿದ್ಧಗಂಗಾ ಮಠದಲ್ಲೂ ತಾರತಮ್ಯ ಇದ್ದೇ ಇದೆ ಎಂಬ ಆರೋಪಗಳಿವೆ. ದಲಿತರು, ಮುಸ್ಲಿಂ ಮಕ್ಕಳನ್ನೂ ಮಠದ ಶಾಲೆಗಳಿಗೆ, ಹಾಸ್ಟೆಲ್‌ಗಳಿಗೆ ಸೇರಿಸಿಕೊಳ್ಳಲಾಗುತ್ತದೆ. ಆದರೆ, ಲಿಂಗಾಯತ ಮಕ್ಕಳಿಗೂ ದಲಿತ, ಹಿಂದುಳಿದ ಮಕ್ಕಳಿಗೂ ಒಂದೇ ಬಗೆಯ ಉಪಚಾರವಿಲ್ಲ ಎಂಬುದು ಮಠದ ವ್ಯವಸ್ಥೆಯನ್ನು ಹತ್ತಿರದಿಂದ ಕಂಡವರೊಬ್ಬರ ಆರೋಪ.

“ಲೋಕದ ಕಣ್ಣಿಗೆ ಶಿವಕುಮಾರ ಸ್ವಾಮೀಜಿ ನಡೆದಾಡುವ ದೇವರು. ಆದರೆ, ಇಡೀ ಮಠದ ನಿಯಂತ್ರಣ ಲಿಂಗಾಯತ ಮುಖಂಡರು ಹಾಗೂ ಸಮುದಾಯದ ಪ್ರಭಾವಿ ಉದ್ಯಮಿಗಳ ಕೈಯಲ್ಲಿದೆ. ಸ್ವಾಮೀಜಿಯನ್ನು ಉತ್ಸವ ಮೂರ್ತಿಯಾಗಿ ಮಾಡಿಕೊಂಡು ಪ್ರಭಾವಿಗಳು ಮಠವನ್ನು ನಡೆಸುತ್ತಿದ್ದಾರೆ. ಮಠದ ಆಡಳಿತ ವ್ಯವಸ್ಥೆ ಸ್ವಾಮೀಜಿಯ ಕೈತಪ್ಪಿ ಎಷ್ಟೋ ದಶಕಗಳಾಗಿವೆ” ಎನ್ನುತ್ತಾರೆ ಮಠದಲ್ಲೇ ಕಲಿತ ಹಳೆಯ ದಲಿತ ವಿದ್ಯಾರ್ಥಿಯೊಬ್ಬರು.

“ತುಮಕೂರಿನ ದಲಿತರ ಪಾಲಿಗೆ ಸಿದ್ಧಗಂಗಾ ಮಠ ಬಿಸಿ ತುಪ್ಪ. ಹೇಳಿ ಅನುಭವಿಸುವ ಹಾಗೂ ಇಲ್ಲ, ಒಳಗೇ ಅದುಮಿಟ್ಟುಕೊಳ್ಳುವ ಹಾಗೂ ಇಲ್ಲ. ಶಿವಕುಮಾರ ಸ್ವಾಮೀಜಿ ಆರೋಗ್ಯ ಇನ್ನೂ ಚೆನ್ನಾಗಿದ್ದ ದಿನಗಳಲ್ಲೇ ಗೌರಿಶಂಕರ ಸ್ವಾಮೀಜಿ ಮಠದ ಅವ್ಯವಹಾರಗಳನ್ನು ಅವರ ಗಮನಕ್ಕೆ ತಂದಿದ್ದರು. ಆದರೆ, ಆ ಅವ್ಯವಹಾರಗಳಿಗೆ ಕಡಿವಾಣ ಹಾಕುವ ಬದಲು ಗೌರಿಶಂಕರ ಸ್ವಾಮೀಜಿ ಮೇಲೆ ಸುಳ್ಳು ಆರೋಪ ಹೊರಿಸಿ ಅವರನ್ನೇ ಮಠದಿಂದ ಹೊರಹಾಕಲಾಯಿತು. ಮಠದ ವ್ಯವಸ್ಥೆಯಲ್ಲಿ ಆ ಹೊತ್ತಿಗಾಗಲೇ ಶಿವಕುಮಾರ ಸ್ವಾಮೀಜಿ ಹಿಡಿತ ಕಳೆದುಕೊಂಡಿದ್ದರು” ಎಂಬ ಮಾತು ಅವರದ್ದು.

“ಮಠದೊಳಗೆ ದಲಿತರು, ಮುಸ್ಲಿಮರು, ಹಿಂದುಳಿದ ವರ್ಗದವರಿಗೆ ಕಡೆಯ ಸ್ಥಾನ. ಲಿಂಗಾಯತರಿಗೆ ಮಾತ್ರ ಅಗ್ರ ಸ್ಥಾನ. ಇದು ಮಠದೊಳಗೆ ಎದ್ದು ಕಾಣುತ್ತದೆ. ಎಲ್ಲಾ ಮಠ, ಮಂದಿರಗಳಲ್ಲಿ ಇರುವಂತೆ ಈ ಮಠದೊಳಗೂ ವಿಐಪಿ ಭಕ್ತರು, ಸಾಮಾನ್ಯ ಭಕ್ತರು ಎಂಬ ವರ್ಗೀಕರಣ ಇದ್ದೇ ಇದೆ. ಹೊರ ನೋಟಕ್ಕೆ ಎಲ್ಲವೂ ದೈವಿಕ ಮಾಯೆಯ ಉನ್ಮತ್ತತೆಯಂತೆ ಕಾಣುತ್ತದೆ. ಆದರೆ, ಒಳಗೆ ಎಲ್ಲಾ ಮಠಗಳ ಮಿತಿ ಈ ಮಠಕ್ಕೂ ಇದೆ” ಎನ್ನುತ್ತಾರೆ ಅವರು.

ಯಡಿಯೂರಪ್ಪ ಭೇಟಿ, ಯಡಿಯೂರಪ್ಪಗೆ ಓಟು!

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಿ.ಎಸ್. ಯಡಿಯೂರಪ್ಪ 2011ರಲ್ಲಿ ಜೈಲು ಸೇರಿದ್ದ ಸಂದರ್ಭದಲ್ಲಿ ಶಿವಕುಮಾರ ಸ್ವಾಮೀಜಿ ನಡೆ ಮಠದೊಳಗಿನವರಿಗೇ ಇರುಸು ಮುರುಸು ತಂದಿತ್ತು. ಬಂಧನದ ಬಳಿಕ ಎದೆನೋವಿನ ಕಾರಣಕ್ಕೆ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದ ಯಡಿಯೂರಪ್ಪ ಭೇಟಿಗೆ ಶಿವಕುಮಾರ ಸ್ವಾಮೀಜಿ ದೌಡಾಯಿಸಿದ್ದರು. ಆಸ್ಪತ್ರೆಗೆ ಭೇಟಿ ನೀಡಿ ಯಡಿಯೂರಪ್ಪ ಆರೋಗ್ಯ ವಿಚಾರಿಸಿದ್ದ ಸ್ವಾಮೀಜಿ, ಸುಮಾರು ಅರ್ಧ ಗಂಟೆ ಕಾಲ ಬಿಎಸ್‌ವೈ ಜತೆಗೆ ಮಾತುಕತೆ ನಡೆಸಿದ್ದರು.

ಮುಂದೆ ಚುನಾವಣೆಯ ಸಂದರ್ಭದಲ್ಲಿ ಯಡಿಯೂರಪ್ಪ ಸ್ವಾಮೀಜಿಯ ಮೊರೆ ಹೊಕ್ಕಾಗ ಯಡಿಯೂರಪ್ಪಗೆ ಮತ ನೀಡಿ ಎಂದು ಬಹಿರಂಗವಾಗಿಯೇ ಹೇಳುವ ಮೂಲಕ ಸ್ವಾಮೀಜಿ ತಮ್ಮ ರಾಜಕೀಯ ಒಲವನ್ನು ಹೊರಹಾಕಿದ್ದರು. ಬಿಜೆಪಿ ಪಕ್ಷ ಹಾಗೂ ಒಬ್ಬ ರಾಜಕಾರಣಿಯ ಪರವಾಗಿ ಇಷ್ಟೊಂದು ಆಪ್ತತೆಯನ್ನು ತೋರಿದ್ದು ಕೂಡಾ ಇತರೆ ಪಕ್ಷಗಳಲ್ಲಿರುವ ಲಿಂಗಾಯತ ಸಮುದಾಯದ ಮುಖಂಡರಿಗೆ ಸ್ವಾಮೀಜಿ ಬಗ್ಗೆ ಅಸಮಾಧಾನ ಹೆಚ್ಚುವಂತೆ ಮಾಡಿತ್ತು.

ಪದೇ ಪದೇ ಆರೋಗ್ಯ ಸಮಸ್ಯೆ

ಶಿವಕುಮಾರ ಸ್ವಾಮೀಜಿಗೆ ನೂರು ವರ್ಷ ತುಂಬಿದ ಬಳಿಕ ಪದೇ ಪದೇ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಆರೋಗ್ಯ ಸಮಸ್ಯೆ ತುಸು ಹೆಚ್ಚಾದಾಗೆಲ್ಲಾ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮಠಕ್ಕೆ ಮರಳುತ್ತಿದ್ದ ಸ್ವಾಮೀಜಿ ಈ ಬಾರಿ ಚೆನ್ನೈನ ರೇಲಾ ಆಸ್ಪತ್ರೆಗೆ ದಾಖಲಾಗಿದ್ದರು. ಈ ಹಿಂದೆ ಹಲವು ಬಾರಿ ಅವರಿಗೆ ಸ್ಟಂಟ್ ಅಳವಡಿಕೆ ಮಾಡಲಾಗಿತ್ತು. ಚೆನ್ನೈಗೆ ಏರ್ ಆಂಬುಲೆನ್ಸ್ ಮೂಲಕ ಹೋದ ಸ್ವಾಮೀಜಿ ವೀಲ್‌ ಚೇರ್ ಅಥವಾ ಸ್ಟ್ರೆಚರ್ ಬಳಸದೆ ನಡೆದುಕೊಂಡೇ ಆಸ್ಪತ್ರೆಯೊಳಕ್ಕೆ ಹೋಗಿದ್ದರು. ರೇಲಾ ಆಸ್ಪತ್ರೆಯಲ್ಲಿ ಸ್ವಾಮೀಜಿಗೆ ಪಿತ್ತನಾಳದಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದ್ದ ಭಾಗಕ್ಕೆ ಡಿಸೆಂಬರ್‌ 8ರಂದು ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಶಸ್ತ್ರಚಿಕಿತ್ಸೆ ಯಶಸ್ವಿಯೂ ಆಗಿ ಸ್ವಾಮೀಜಿ ಡಿಸೆಂಬರ್‌ 19ರಂದು ಸಿದ್ಧಗಂಗಾ ಮಠಕ್ಕೆ ವಾಪಸ್‌ ಆಗಿದ್ದರು. ನಂತರ ಅವರನ್ನು ತುಮಕೂರಿನಲ್ಲೇ ಚಿಕಿತ್ಸೆಗೆ ಒಳಪಡಿಸಲಾಗಿತ್ತು.

1965ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ನೀಡಿತ್ತು. 2007ರಲ್ಲಿ ರಾಜ್ಯ ಸರಕಾರ ಅವರಿಗೆ ‘ಕರ್ನಾಟಕ ರತ್ನ’ ಪುರಸ್ಕಾರ ನೀಡಿ ಗೌರವಿಸಿತ್ತು. ಕರ್ನಾಟಕ ರತ್ನ ಪುರಸ್ಕಾರದ ಬೆನ್ನಲ್ಲೇ ಅವರಿಗೆ ‘ಭಾರತ ರತ್ನ’ ಪುರಸ್ಕಾರ ನೀಡುವಂತೆ ರಾಜ್ಯ ಸರಕಾರ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಈ ಬಗ್ಗೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದ್ದರು. ಆದರೆ, ಆಗ ಕರ್ನಾಟಕದ ಹಿಂದೂಸ್ತಾನಿ ಸಂಗೀತ ಸಾಧಕ ಭೀಮಸೇನ ಜೋಶಿ ಅವರಿಗೆ ಭಾರತ ರತ್ನ ಗೌರವ ನೀಡಲಾಯಿತು.

2018ರ ಜನವರಿ 24ರಂದು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ಪುರಸ್ಕಾರ ನೀಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಆದರೆ, ಸಿದ್ದರಾಮಯ್ಯ ಪತ್ರ ಬರೆದು ಹೆಚ್ಚೂ ಕಡಿಮೆ ವರ್ಷವಾದರೂ ಈ ಬಗ್ಗೆ ಮೋದಿ ಸರಕಾರ ಮಾತೇ ಆಡಲಿಲ್ಲ. ಕೊನೆಗೂ ಶಿವಕುಮಾರ ಸ್ವಾಮೀಜಿ ‘ಭಾರತ ರತ್ನ’ವಾಗದೆ ಕೇವಲ ‘ಕರ್ನಾಟಕ ರತ್ನ’ವಾಗೇ ದೇಹ ತ್ಯಜಿಸಬೇಕಾಯಿತು.