samachara
www.samachara.com
ಕೊಡಗು ಜಿಲ್ಲೆಯ ಕೇಂದ್ರ ಸ್ಥಳ ಮಡಿಕೇರಿಯಲ್ಲಿ ನಡೆದ ಪ್ರವಾಹ ಸಂತ್ರಸ್ಥರ ಪ್ರತಿಭಟನೆ. 
ಕೊಡಗು ಜಿಲ್ಲೆಯ ಕೇಂದ್ರ ಸ್ಥಳ ಮಡಿಕೇರಿಯಲ್ಲಿ ನಡೆದ ಪ್ರವಾಹ ಸಂತ್ರಸ್ಥರ ಪ್ರತಿಭಟನೆ. |/ಸಮಾಚಾರ. 
COVER STORY

ಸರಕಾರ ರೆಸಾರ್ಟ್‌ನಲ್ಲಿ, ಜನ ಬೀದಿಯಲ್ಲಿ: ಕೊಡಗು ಜನರಿಗೆ ಬೇಕಿರುವುದು‘ಪೇಯ್ಡ್‌ ಸಲಹೆ’ಯಲ್ಲ, ಪರಿಹಾರ

ಜನರ ನೋವಿಗೆ ಮಿಡಿಯುವ ಸ್ಪಂದನಶೀಲತೆ ಈ ಸರಕಾರಕ್ಕೆ, ಈ ಜನಪ್ರತಿನಿಧಿಗಳಿಗೆ ಇದಿದ್ದರೆ ಕೊಡಗಿನ ಜನ ಸೂರಿಗಾಗಿ ಈಗ ಬೀದಿಗಿಳಿಯಬೇಕಿರಲಿಲ್ಲ. ಹೀಗಿರುವಾಗ ಮಾಧ್ಯಮಗಳು ಬರದ, ಪ್ರವಾಹ ಪರಿಹಾರ, ಜನರ ಸಂಕಷ್ಟಗಳ ಬಗ್ಗೆ ವರದಿ ಮಾಡಿಲ್ಲ ಎಂದರೆ ಹೇಗೆ?

Team Samachara

ನಾಡಿನ ಸಮಸ್ಯೆಗಳನ್ನು ಸರಕಾರದ ಮುಖಕ್ಕೆ ಸರಕಾರದ ಮುಖಕ್ಕೆ ಎತ್ತಿ ಹಿಡಿದು ಆರತಿ ಬೆಳಗುವುದು ಮಾಧ್ಯಮಗಳ ಕೆಲಸ. ರಾಜ್ಯದಲ್ಲಿ ಹಲವು ಜ್ವಲಂತ ಸಮಸ್ಯೆಗಳಿವೆ. ತೀವ್ರ ಬರದ ಪರಿಣಾಮಗಳು ಆರಂಭವಾಗಿವೆ. ಇನ್ನು ಕೆಲವು ದೀರ್ಘಕಾಲೀನ ಸಮಸ್ಯೆಗಳು ಕಣ್ಣಿಗೆ ರಾಚುತ್ತಿವೆ. ಇವೆಲ್ಲವಕ್ಕೂ ಪರಿಹಾರವನ್ನು 7 ತಿಂಗಳ ಸಮ್ಮಿಶ್ರ ಸರಕಾರ ನೀಡಲು ಸಾಧ್ಯವಿಲ್ಲ ಕೂಡ. ಆದರೆ ಇದೇ ಸರಕಾರದ ಅವಧಿಯಲ್ಲಿ ರಾಜ್ಯದ ಪುಟ್ಟ ಜಿಲ್ಲೆ ಕೊಡಗಿನಲ್ಲಿ ನಡೆದ ಪ್ರವಾಹದ ನಂತರದ ಸಂತ್ರಸ್ತ ಕಾರ್ಯಾಚರಣೆಯನ್ನಾದರೂ ಹೊಣೆಗಾರಿಕೆಯಿಂದ ನಡೆಸಬೇಕಿತ್ತು, ಅಲ್ವಾ?

ಆದರೆ, ಕೊಡಗಿನ ಜನ ಅಲ್ಲಿ ಬೀದಿಗೆ ಬಂದಿದ್ದಾರೆ. ಮನೆಗಳಿನ್ನೂ ಹಂಚಿಕೆಯಾಗಿಲ್ಲ ಎಂಬುದು ಅದರ ದೂರು.

ಕೊಡಗಿನಲ್ಲಿ ಮನೆ ಕಳೆದುಕೊಂಡವರಿಗೆ ಹೊಸ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಸರಕಾರ ಭರವಸೆ ನೀಡಿ ನಾಲ್ಕು ತಿಂಗಳು ಕಳೆದಿದೆ. ಅಷ್ಟೇ ಅಲ್ಲ ಕೊಡಗು ಪುನರ್‌ ನಿರ್ಮಾಣ ಪ್ರಾಧಿಕಾರದ ರಚನೆಯೂ ಆಗಿಲ್ಲ. ಗಾಳಿಬೀಡು, ಜಂಬೂರು ಬಾಣೆ, ನಿಡುಗಣೆ ಗ್ರಾಮಗಳಲ್ಲಿ ಸಂತ್ರಸ್ಥರಿಗಾಗಿ ಒಟ್ಟು 840 ಮನೆಗಳ ನಿರ್ಮಾಣಕ್ಕೆ ಜಿಲ್ಲಾಡಳಿತ ಮುಂದಾಗಿದ್ದರೂ ಒಂದೇ ಒಂದು ಮನೆ ಪೂರ್ಣವಾಗಿಲ್ಲ. ಈ ಮನೆಗಳ ನಿರ್ಮಾಣ ಕುಂಟುತ್ತಾ ಸಾಗುತ್ತಿದೆ. ತಲಾ 9.80 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಮನೆಗಳ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿತ್ತು

ಮನೆ ನಿರ್ಮಾಣದ ಈ ವಿಳಂಬವನ್ನು ಪ್ರಶ್ನಿಸಿ ‘ಕೊಡಗು ಪ್ರಕೃತಿ ವಿಕೋಪ ಪರಿಹಾರ ಹೋರಾಟ ಸಮಿತಿ’ ಮಡಿಕೇರಿಯಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿತು. ಜಿಲ್ಲೆಯ ಜನಪ್ರತಿನಿಧಿಗಳು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ, ಸಂತ್ರಸ್ತರ ಹೋರಾಟಕ್ಕೆ ಬೆಂಬಲ ಸೂಚಿಸಬೇಕೆಂದು ಈ ಸಮಿತಿ ಒತ್ತಾಯಿಸಿತು.

‘ಸಮಾಚಾರ’ದೊಂದಿಗೆ ಮಾತನಾಡಿದ ಸಮಿತಿಯ ಅಧ್ಯಕ್ಷ ಎಂ.ಬಿ. ದೇವಯ್ಯ, ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ, “ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಹೋರಾಟವನ್ನು ಹಮ್ಮಿಕೊಳ್ಳುವುದಾಗಿ,” ಎಚ್ಚರಿಕೆ ನೀಡಿದರು. “ಅತಿವೃಷ್ಟಿ ಹಾನಿ ಸಂಭವಿಸಿ ಐದು ತಿಂಗಳುಗಳೇ ಕಳೆದಿವೆ. ಆದರೆ, ಇಲ್ಲಿಯವರೆಗೆ ಮನೆ ನಿರ್ಮಾಣ ಕಾರ್ಯ ಪ್ರಗತಿ ಕಂಡಿಲ್ಲ. ಗದ್ದೆ ಮತ್ತು ತೋಟಗಳಲ್ಲಿ ತುಂಬಿರುವ ಹೂಳು ತೆಗೆಯುವ ಕಾರ್ಯ ನಡೆದಿಲ್ಲ. ಸರ್ಕಾರ ಪರಿಹಾರದ ಹೆಸರಿನಲ್ಲಿ ಕೇವಲ ಕಣ್ಣೊರೆಸುವ ತಂತ್ರ ಮಾಡುತ್ತಿದೆ,” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಡಳಿತ ಇತ್ತೀಚೆಗಷ್ಟೆ ಮಡಿಕೇರಿಯಲ್ಲಿ ಕೋಟಿ ಖರ್ಚುಮಾಡಿ ‘ಕೊಡಗು ಪ್ರವಾಸಿ ಉತ್ಸವ’ವನ್ನು ಯಶಸ್ವಿಯಾಗಿ ನಡೆಸಿತ್ತು. “ಇದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಉತ್ಸವಕ್ಕೆ ತೋರಿದ ಕಾಳಜಿಯನ್ನು ಸಂತ್ರಸ್ತರ ನೆರವಿಗಾಗಿ ಯಾಕೆ ತೋರುತ್ತಿಲ್ಲವೆಂಬುದು,” ದೇವಯ್ಯ ಪ್ರಶ್ನಿಸುತ್ತಾರೆ.

ಮಡಿಕೇರಿಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ ಕೊಡಗು ಪ್ರಕೃತಿ ವಿಕೋಪ ಪರಿಹಾರ ಹೋರಾಟ ಸಮಿತಿ ಸದಸ್ಯರು. 
ಮಡಿಕೇರಿಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ ಕೊಡಗು ಪ್ರಕೃತಿ ವಿಕೋಪ ಪರಿಹಾರ ಹೋರಾಟ ಸಮಿತಿ ಸದಸ್ಯರು. 
/ಸಮಾಚಾರ. 

ಹೋರಾಟ ಸಮಿತಿಯು, ‘ಕೃಷಿ ಭೂಮಿ, ತೋಟ ಮತ್ತು ಮನೆ ಕಳೆದುಕೊಂಡವರಿಗೆ ನಷ್ಟಕ್ಕೆ ಅನುಗುಣವಾಗಿ ಬದಲಿ ವ್ಯವಸ್ಥೆ ಕಲ್ಪಿಸಬೇಕು. ಸಂತ್ರಸ್ತರ ಮಕ್ಕಳ ಶಿಕ್ಷಣ ವ್ಯವಸ್ಥೆಯ ಜವಬ್ದಾರಿಯನ್ನು ಸರ್ಕಾರವೇ ಹೊರಬೇಕು, ಸಂತ್ರಸ್ತರ ಎಲ್ಲಾ ಸಾಲಗಳನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು, ಅಳಿದು ಉಳಿದ ಜಾಗವನ್ನು ಅಭಿವೃದ್ಧಿ ಪಡಿಸಲು ದೀರ್ಘಾವಧಿ ಸಾಲ ನೀಡಬೇಕು, ರಿಯಾಯಿತಿ ದರದಲ್ಲಿ ವೈದ್ಯಕೀಯ ಸೌಲಭ್ಯ ನೀಡಬೇಕು, ಆರ್ಥಿಕವಾಗಿ ಚೇತರಿಸಿಕೊಳ್ಳುವವರೆಗೆ ಎಲ್ಲಾ ಸಂತ್ರಸ್ತರಿಗೆ ಬಿಪಿಎಲ್ ಕಾರ್ಡ್ ನೀಡಬೇಕು’ ಎಂಬ ಬೇಡಿಕೆಗಳನ್ನು ಮುಂದಿಟ್ಟಿದೆ.

ಅಲ್ಲದೆ, ‘ಹದಗೆಟ್ಟ ಕೃಷಿ ಭೂಮಿಯನ್ನು ಕೃಷಿಗೆ ಯೋಗ್ಯವಾಗುವಂತೆ ಹದ ಮಾಡಿ ಕೊಡಬೇಕು, ಅನಾಹುತದ ಸಂದರ್ಭ ಕಳೆದುಹೋದ ದಾಖಲೆಗಳನ್ನು ಸಂಬಂಧಿಸಿದ ಸಂತ್ರಸ್ತರಿಗೆ ದೊರಕಿಸಿ ಕೊಡಬೇಕು, ಬಿದ್ದ ಮರಗಳನ್ನು ವಿಲೇವಾರಿ ಮಾಡಿ ಆ ಹಣವನ್ನು ಸಂತ್ರಸ್ತ ಬೆಳೆಗಾರರಿಗೆ ನೀಡಬೇಕು, ನದಿಯಲ್ಲಿ ತುಂಬಿರುವ ಹೂಳನ್ನು ತುರ್ತಾಗಿ ತೆಗೆಯಬೇಕು,’ ಎಂದು ಒತ್ತಾಯಿಸುತ್ತಿದೆ.

ವಿಶೇಷ ಅಂದರೆ, ಇಂತಹ ದೀರ್ಘಾವಧಿ ಚೇತರಿಕೆಗೆ ಬೇಡಿಕೆಗಳನ್ನು ಮುಂದಿಡುವ ಸಮಿತಿ, ‘ಕೊಡಗಿನ ಸಂತ್ರಸ್ತರಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಜಮಾ ಆಗಿರುವ ಒಟ್ಟು ಹಣ ಮತ್ತು ಪರಿಹಾರ ಕಾರ್ಯಗಳಿಗೆ ಖರ್ಚಾಗಿರುವ ಹಣದ ಬಗ್ಗೆ ಶ್ವೇತಪತ್ರ ಹೊರಡಿಸಬೇಕು’ ಎಂದು ಆಗ್ರಹಿಸುತ್ತಾರೆ.

ಜಿಲ್ಲಾಧಿಕಾರಿಯೇ ವರ್ಗ:

ಮಡಿಕೇರಿ ಜಿಲ್ಲಾಧಿಕಾರಿಯಾಗಿದ್ದ ಶ್ರೀವಿದ್ಯಾ
ಮಡಿಕೇರಿ ಜಿಲ್ಲಾಧಿಕಾರಿಯಾಗಿದ್ದ ಶ್ರೀವಿದ್ಯಾ

ಈ ಮಧ್ಯೆ ಕೊಡಗಿನಲ್ಲಿ ಉತ್ಸಾಹದಿಂದ ಕೆಲಸ ನಿರ್ವಹಿಸುತಿದ್ದ ಜಿಲ್ಲಾಧಿಕಾರಿ ಶ್ರೀವಿದ್ಯಾ ಕಳೆದ 7 ದಿನದ ಹಿಂದೆ ಎರಡು ತಿಂಗಳು ದೀರ್ಘಾವಧಿ ರಜೆ ಮೇಲೆ ತೆರಳಿದ್ದಾರೆ. ಇಂತಹ ಬಿಕ್ಕಟ್ಟಿನ ಸಮಯದಲ್ಲಿ ಜಿಲ್ಲಾಧಿಕಾರಿ ಇಷ್ಟೊಂದು ಸುದೀರ್ಘ ರಜೆಯೆ ಮೇಲೆ ಹೊರಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ‘ದಕ್ಷ ಅಧಿಕಾರಿ’ ಎನ್ನಿಸಿಕೊಂಡದ್ದ ಇವರು, “ಪ್ರಕೃತಿ ವಿಕೋಪ ನಿರ್ವಹಣೆಯಲ್ಲಿ ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಡುತ್ತಿರಲಿಲ್ಲ. ಇದೇ ಕಾರಣಕ್ಕೆ ಆಳುವ ಪಕ್ಷದ ಪ್ರಮುಖರ ಕೆಂಗಣ್ಣಿಗೂ ಗುರಿಯಾಗಿದ್ದರು. ಇವರನ್ನು ಇಲ್ಲಿಂದ ವರ್ಗಾವಣೆ ಮಾಡಿ ಹಿಂದಿದ್ದ ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಅವರನ್ನು ಪುನಃ ಇಲ್ಲಿಗೇ ಕರೆಸಿಕೊಳ್ಳಲೂ ರಾಜಕಾರಣಿಗಳ ಗುಂಪೊಂದು ಯತ್ನ ನಡೆಸಿತು. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಬೆಂಬಲಿಸಿದ್ದಾರೆ,” ಎಂಬ ಮಾತುಗಳಲ್ಲಿ ಬೆಳವಣಿಗೆಯನ್ನು ಹತ್ತಿರದಿಂದ ಬಲ್ಲ ಅಧಿಕಾರಿಯೊಬ್ಬರು ಮುಂದಿಡುತ್ತಾರೆ.

ಸಂತ್ರಸ್ಥರ ಪುನರ್ವಸತಿ ಹಾಗೂ ಮನೆ ನಿರ್ಮಾಣಕ್ಕಾಗಿಯೇ ಬೆಂಗಳೂರಿನಿಂದ ಎಂ.ಕೆ. ಜಗದೀಶ್ ಎಂಬ ಹೆಚ್ಚುವರಿ ಜಿಲ್ಲಾಧಿಕಾರಿಯನ್ನು ಪುನರ್‌ ನಿರ್ಮಾಣ ವಿಭಾಗಕ್ಕೆ ನೇಮಕ ಮಾಡಿಕೊಳ್ಳಲಾಗಿತ್ತು. ಎರಡು ವಾರಗಳ ಹಿಂದಷ್ಟೇ ಅವರನ್ನೂ ಬೇರೆಡೆಗೆ ವರ್ಗ ಮಾಡಲಾಗಿದೆ. ಕೊಡಗಿನ ಪರಿಸ್ಥಿತಿ ಹೀಗಿರುವಾಗ ಅಲ್ಲಿನ ಜನರಿಗೆ ಪ್ರತಿಭಟನೆ ಮಾಡದೆ ಬೇರೆ ದಾರಿಗಳು ಕಾಣುತ್ತಿಲ್ಲ.

ರಾಜ್ಯದ ಮಾಧ್ಯಮಗಳು ಜನರ ಸಮಸ್ಯೆಗಳನ್ನು ಮುಂದಿಟ್ಟರೂ, ಇವನ್ನು ಪರಿಗಣಿಸಿ, ಆಡಳಿತಾತ್ಮ ನೆಲೆಯಲ್ಲಿ ಪರಿಹಾರ ಸೂಚಿಸಬೇಕಾದವರು ರೆಸಾರ್ಟ್‌ ಸೇರಿಕೊಂಡಿದ್ದಾರೆ. ಪರಿಸ್ಥಿತಿ ಹೀಗಿರುವಾಗ, ಖೈದಿಗಳು ಕಟ್ಟಿದ ವಿಧಾನ ಸೌಧದಲ್ಲಿ 'ದೇವರ ಕೆಲಸ’ವನ್ನು ಮರೆತವರನ್ನು ವಾಪಾಸ್ ಕರೆತರುವುದು ಮುಖ್ಯನಾ? ಇಲ್ಲ ಸಮಸ್ಯೆ ಇಷ್ಟಿದೆ ನೋಡಿ ಎಂದು ಕನ್ನಡಿ ಹಿಡಿಯುವುದು ಮುಖ್ಯನಾ? ಕೊಡಗಿನ ಜನ ಬೀದಿಯಲ್ಲಿ ನಿಂತು ಪ್ರಶ್ನಿಸುತ್ತಿದ್ದಾರೆ. ಅವರಿಗೆ ಬೇಕಿರುವುದು ‘ಪೇಯ್ಡ್‌ ಸಲಹೆ’ ಅಲ್ಲ, ಪರಿಹಾರ.