samachara
www.samachara.com
ರೆಸಾರ್ಟ್‌ನಲ್ಲಿ ಆಡಳಿತ; ಗೌರವಾನ್ವಿತ ರಾಜ್ಯಪಾಲರಿಗೊಂದು ಬಹಿರಂಗ ಪತ್ರ...
COVER STORY

ರೆಸಾರ್ಟ್‌ನಲ್ಲಿ ಆಡಳಿತ; ಗೌರವಾನ್ವಿತ ರಾಜ್ಯಪಾಲರಿಗೊಂದು ಬಹಿರಂಗ ಪತ್ರ...

ರಾಜ ಭವನ ವಿಶ್ವವಿದ್ಯಾನಿಲಯಗಳ ನೇಮಕಾತಿಗೆ ಸೀಮಿತವಾಗಿದೆ ಎಂಬ ಆರೋಪ ಇದೆ. ಈಗ ಇಂತಹ ಆರೋಪಗಳಿಂದ ಮುಕ್ತರಾಗುವ ಅವಕಾಶವೊಂದು ನಿಮಗಿದೆ.

Team Samachara

ಗೌರವಾನ್ವಿತ ಪ್ರಥಮ ಪ್ರಜೆ, ರಾಜ್ಯಪಾಲ ವಾಜುಭಾಯಿ ವಾಲಾ ಅವರೇ,

ಇವತ್ತು ಶನಿವಾರ, ವಾರದ ಕೊನೆಯ ದಿನ. ಬೆಳಗ್ಗೆ ಎದ್ದಾಗ ರಾಜ್ಯದ ರಾಜಕಾರಣ ಶಕ್ತಿಕೇಂದ್ರ ವಿಧಾನಸೌಧದಿಂದ ರೆಸಾರ್ಟ್‌ಗೆ ವರ್ಗಾವಣೆಯಾದ ವಿಚಾರ ತಿಳಿಯಿತು. ಕಳೆದ ಒಂದು ವಾರದಿಂದ ವಿರೋಧ ಪಕ್ಷದ ಶಾಸಕರು ದೂರದ ಗುರುಗ್ರಾಮದಲ್ಲಿ ಬೀಡು ಬಿಟ್ಟಿದ್ದರು. ಬೀಡು ಅಂದರೆ ಐಶಾರಾಮಿ ಹೋಟೆಲ್‌-ನಲ್ಲಿ ವಾಸ್ತವ್ಯ ಹೂಡಿದ್ದರು. ಶುಕ್ರವಾರ ಆಡಳಿತ ಪಕ್ಷದಲ್ಲಿ ಒಂದಾದ ಕಾಂಗ್ರೆಸ್ ಕೂಡ ತನ್ನ ಶಾಸಕರನ್ನು ಬಿಡದಿಯ ರೆಸಾರ್ಟ್‌ಗೆ ಕರೆದುಕೊಂಡು ಹೋಗಿದೆ.

ಬಿಡಿ, ನಮಗೆ ರೆಸಾರ್ಟ್‌ ರಾಜಕಾರಣ ಹೊಸತಲ್ಲ. ಜನಪ್ರತಿನಿಧಿಗಳ ಕುದುರೆ ವ್ಯಾಪಾರ ಕೂಡ ಹೊಸತಲ್ಲ. ನಾವು ಮತ ಹಾಕಿ ಗೆಲ್ಲಿಸಿ ಕಳುಹಿಸುವ ಶಾಸಕರನ್ನು ಅವರುಗಳು ಪ್ರತಿನಿಧಿಸುವ ರಾಜಕೀಯ ಪಕ್ಷಗಳು ನಿಯಂತ್ರಿಸುತ್ತವೆ. ಪಕ್ಷದ ಹೈಕಮಾಂಡ್ ಮತ ಹಾಕಿದ ಜನರಿಗಿಂತ ಅವರಿಗೆ ಮುಖ್ಯವಾಗುತ್ತದೆ. ಇಂತಹ ಕಲುಷಿತ ರಾಜಕೀಯ ಪರಿಸ್ಥಿತಿಯಲ್ಲಿ ಇವರುಗಳಿಂದ ನಮ್ಮ ಪರವಾದ ನಡೆಗಳನ್ನು ನಿರೀಕ್ಷಿಸುವುದಾದರೂ ಹೇಗೆ? ವಿಷಯ ಅದಲ್ಲ.

ಈ ಬಾರಿ ಕಳೆದ 7 ದಶಕಗಳಲ್ಲಿ ಕಾಣದ ಬರವನ್ನು ರಾಜ್ಯ ಎದುರಿಸುತ್ತಿದೆ. ನಿಮಗೂ ಕೂಡ ರಾಜ್ಯ ಸರಕಾರ ಕಳೆದ ಡಿಸೆಂಬರ್‌ ತಿಂಗಳಿನಲ್ಲಿ ಬರದ ಪರಿಸ್ಥಿತಿ ಕುರಿತು ತಯಾರಿಸಿದ ವರದಿ ತಲುಪಿರಬಹುದು. ಇದರ ಜತೆಗೆ, ಸಾಲ ಮನ್ನಾ ಘೋಷಿಸಿದ ಸರಕಾರ ಅದಕ್ಕಾಗಿ ಹಣ ಹೊಂದಿಸುವ ಇಕ್ಕಟ್ಟಿಗೆ ಬಿದ್ದಿದೆ. ಒಂದು ಕಡೆ ಸಾಲ ಮನ್ನಾ ಆಗದೆ, ಬೆಳೆದ ಬೆಳೆಗೆ ಬೆಲೆ ಸಿಗದೆ ರೈತರು ಹೈರಾಣಾಗಿದ್ದಾರೆ. ಯುವಜನರು ಉದ್ಯೋಗದ ಬೇಡಿಕೆ ಮುಂದಿಡುತ್ತಿದ್ದಾರೆ. ರಾಜ್ಯದಲ್ಲಿ ಅಪರಾಧದ ಸಂಖ್ಯೆ ಏರಿಕೆಯಾಗುತ್ತಿದೆ. ಮಹಿಳೆಯರು ಮದ್ಯಪಾನ ನಿಷೇಧಿಸಿ ಎಂದು ಪಾದಯಾತ್ರೆ ಹೊರಟಿದ್ದಾರೆ. ಇಂತಹ ನೂರಾರು ಸಮಸ್ಯೆಗಳನ್ನು ಪಟ್ಟಿ ಮಾಡುವುದೇ ಕ್ಲೀಷೆ ಅನ್ನಿಸುತ್ತದೆ. ಹೀಗಿರುವಾಗ ಒಂದು ಸುಸ್ಥಿರ ಆಡಳಿತವೂ ಇಲ್ಲದೇ ಹೋದರೆ ಏನಾಗಬಹುದು?

ಕಳೆದ ಏಳು ತಿಂಗಳಿನಲ್ಲಿ ರಾಜ್ಯದಲ್ಲಿ ಒಂದು ಆಡಳಿತ ಇದೆ ಎಂಬ ಭಾವನೆ ಅಧಿಕಾರ ವರ್ಗದಲ್ಲಿ ಕಾಣೆಯಾಗಿದೆ. ಗ್ರಾಮ ಪಂಚಾಯ್ತಿಗಳಿಂದ ಹಿಡಿದು ಜಿಲ್ಲಾ ಪಂಚಾಯ್ತಿಗಳವರೆಗೆ ಎಲ್ಲಿಯೂ ಲಂಚ ಇಲ್ಲದೆ ಕೆಲಸ ನಡೆಯುತ್ತಿಲ್ಲ. ಗ್ರಾಮೀಣ ಭಾಗದ ಜನ ಜನನ ಪ್ರಮಾಣ ಪತ್ರ ಬೇಕಾದರೂ ಒಂದಷ್ಟು ಲಂಚ ಕೊಡಬೇಕು, ಜಮೀನಿನ ಖಾತೆ, ಪಹಣಿಯಲ್ಲಿ ಹೆಸರು ಬದಲಾಗಬೇಕು ಎಂದರೆ ಲಂಚ ಕೊಡಬೇಕು ಎಂಬ ಪರಿಸ್ಥಿತಿ ಇದೆ. ಇಂತಹ ದೂರನ್ನು ತಮ್ಮ ಜನಪ್ರತಿನಿಧಿಗಳಿಗೆ ತಲುಪಿಸಬೇಕು ಎಂದರೆ ಅವರೀಗ ರೆಸಾರ್ಟ್‌ಗಳಲ್ಲಿ 'ಬರದ ಕುರಿತು ಚರ್ಚೆ' ಮಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳನ್ನಾದರೂ ಯಾರ ಬಳಿ ಹೇಳಿಕೊಳ್ಳಬೇಕು ನೀವೇ ಹೇಳಿ ಸರ್?

ಸರ್, ನೀವು ರಾಜ್ಯದ ಪ್ರಥಮ ಪ್ರಜೆ. ಕೆಲವು ದಿನಗಳ ಹಿಂದೆ ನೀವು ರಾಜ ಭವನವನ್ನು ಜನರಿಗೆ ತೋರಿಸುವ ಕೆಲಸ ಮಾಡಿದ್ದಿರಿ. ಒಂದು ತಿಂಗಳು ಐಶಾರಾಮಿ ರಾಜ್ಯಪಾಲರ ನಿವಾಸ ಹಾಗೂ ಕಚೇರಿಯನ್ನು ಕಣ್ತುಂಬಿಕೊಳ್ಳಲು ಅವಕಾಶ ಮಾಡಿಕೊಟ್ಟಿರಿ. ಈ ಮೂಲಕ ನಮ್ಮ ತೆರಿಗೆ ಹಣದಲ್ಲಿ ನಿಮಗಾಗಿ ನಾವು ವಿನಿಯೋಗಿಸುತ್ತಿರುವ 10 ಕೋಟಿ ರೂಪಾಯಿ ಹಣಕ್ಕೆ ನೀವು ಹೀಗೆಲ್ಲಾ ನ್ಯಾಯ ಒದಗಿಸಲು ಮುಂದಾದಿರಿ. ಆದರೆ ಆಡಳಿತ ವಿಚಾರದಲ್ಲಿ ರಾಜ ಭವನ ವಿಶ್ವವಿದ್ಯಾನಿಲಯಗಳ ನೇಮಕಾತಿಗೆ ಸೀಮಿತವಾಗಿ ಎಂಬ ಆರೋಪ ಇದೆ. ಈಗ ಇಂತಹ ಆರೋಪಗಳಿಂದ ಮುಕ್ತರಾಗುವ ಅವಕಾಶವೊಂದು ನಿಮಗಿದೆ.

ನಮ್ಮ ರಾಜ್ಯದಲ್ಲಿ ಪ್ರಜ್ಞಾವಂತ ಜನರಿದ್ದಾರೆ. ಒತ್ತಡ ಗುಂಪುಗಳಿವೆ. ಸಂವಿಧಾನ ಉಳಿಸಲು ಹೊರಟವರ ದೊಡ್ಡ ದಂಡೇ ಇದೆ. ಆದರೆ ಯಾಕೋ ಗೊತ್ತಿಲ್ಲ, ಇಂತಹ ಸಾಂವಿಧಾನಿಕ ಬಿಕ್ಕಟ್ಟುಗಳು ಎದುರಾದಾಗ ಅವರೂ ಕೂಡ ಮುಗುಮ್ಮಾಗಿ ಉಳಿದು ಬಿಡುತ್ತಾರೆ. ಅವರಿಗೆ ಆಡಳಿತ ಮತ್ತು ವಿರೋಧ ಪಕ್ಷವನ್ನು ಒಂದೇ ತಕ್ಕಡಿಯಲ್ಲಿ ತೂಗಬೇಕು ಎಂಬ ಸಾಮಾನ್ಯ ಎಳೆ ಮರೆತು ಹೋದಂತಿದೆ. ಹೀಗಾಗಿ ಆಡಳಿತ ನಡೆಸುವವರು ರೆಸಾರ್ಟ್‌ಗೆ ವರ್ಗಾವಣೆಗೊಂಡಾಗ ನಾವು ವಿಧಾನ ಸೌಧದ ಮುಂದಾಗಲೀ, ಮುಖ್ಯಮಂತ್ರಿ ಮನೆಯ ಮುಂದಾಗಲಿ ಭಾರಿ ಪ್ರತಿಭಟನೆಗಳನ್ನು ನಿರೀಕ್ಷೆ ಮಾಡುವುದು ಕಷ್ಟ ಇದೆ. ಇಂತಹ ಸಮಯದಲ್ಲಿ ನಮಗೆ ಆಯ್ಕೆ ಅಂತ ಉಳಿದಿರವುದು ನೀವು ಸರ್.

ರಾಜ್ಯವೊಂದರಲ್ಲಿ ಆಡಳಿತವೊಂದು ಹೀಗೆ ರೆಸಾರ್ಟ್‌ಗೆ ಹೋದರೆ ಸಂವಿಧಾನದಲ್ಲಿ ಏನಾದರೂ ಪರ್ಯಾಯಗಳಿವೆಯಾ ಎಂದು ಪರೀಕ್ಷಿಸಲು ಹೋದೆ ಸರ್. ಆದರೆ, ಸಂವಿಧಾನ ಬರೆದವರು ಇಂತಹ ಅಸಹ್ಯಕರ ಸನ್ನಿವೇಶವನ್ನು ಊಹಿಸಿದಂತೆ ಕಾಣಿಸುತ್ತಿಲ್ಲ. ಆದರೆ ಆಡಳಿತ ನಡೆಸುವವರು, ವಿರೋಧ ಪಕ್ಷದವರು ತಮ್ಮ ಹೊಣೆಗಾರಿಕೆ ಮರೆತರೆ ಉಳಿದ ಆಯ್ಕೆ ನೀವೇ ಸರ್. ನಿಮಗಿರುವ ಅಧಿಕಾರದ ವ್ಯಾಪ್ತಿಯಲ್ಲಿ ಮನಸ್ಸು ಮಾಡಿದರೆ ವಿಶೇಷ ಅಧಿವೇಶನ ಕರೆಯಬಹುದು. ಆಡಳಿತ ಪಕ್ಷದವರನ್ನು, ವಿರೋಧ ಪಕ್ಷಗಳನ್ನು ಕೂರಿಸಿಕೊಂಡು, 'ಆಡಳಿತ ಸರಿಯಾಗಿ ನಡೆಸ್ರಪ್ಪ' ಎಂದು ತಿಳಿ ಹೇಳಬಹುದು. ಇದಕ್ಕೂ ಅವರು ಕೇಳದಿದ್ದರೆ ಸರಕಾರವನ್ನು ವಜಾಗೊಳಿಸಿ, ಸಂವಿಧಾನದತ್ತ ಹಕ್ಕನ್ನು ಜನರಿಗೆ ತಲುಪಿಸುವ ಕೆಲಸ ಮಾಡಬಹುದು.

ತಿಂಗಳಿಗೆ ನಿಮ್ಮ ಕಾನೂನು ಸಲಹೆಗಾರರಿಗೆ ಸುಮಾರು 1.5 ಲಕ್ಷ ಸಂಬಳವನ್ನು ನಾವು ಕೊಡುತ್ತಿದ್ದೀವಿ. ಈ ಸಮಯದಲ್ಲಿ ನೀವು ಅವರಿಂದ ಈ ಕುರಿತು ಸಲಹೆಯನ್ನು ಪಡೆದುಕೊಂಡು ಸದುಪಯೋಗಪಡಿಸಿಕೊಳ್ಳಿ. ಜತೆಗೆ, ಹೇಗೂ ರಾಜಕೀಯ ಸಲಹೆಗಾರರೂ ನಿಮಗಿದ್ದಾರೆ. ಅವರಿಗೂ ಇಷ್ಟೆ ಪ್ರಮಾಣದ ಸಂಬಳ ನೀಡುತ್ತಿದ್ದೇವೆ. ಅವರ ಜತೆಯಲ್ಲೂ ನೀವು ಈ ವಿಚಾರವನ್ನು ಚರ್ಚೆ ಮಾಡಿ. ಏನಾದರೂ ಮಾಡಿ, ಒಟ್ಟಿನಲ್ಲಿ ನಮ್ಮ ಆಡಳಿತ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಿ ಸಾಕು.

ನಿಜ, ಇದು ನಾವು ನೀಡಿದ ಫಲಿತಾಂಶ. ಸಮ್ಮಿಶ್ರ ಸರಕಾರದ ಸ್ಥಾಪನೆಗೆ ಕಾರಣ ನಾವೇ. ಹಾಗಂತ ಆಡಳಿತ ನಡೆಸುವುದನ್ನು ಬಿಟ್ಟು ರೆಸಾರ್ಟ್‌ಗೆ ಹೋಗಿ ಅಂತ ನಾವೇನೂ ಹೇಳಿಲ್ಲ ಅಲ್ವಾ? ಈಗಾಗಲೇ ವಾರ ಕಳೆದಿದೆ. ಇನ್ನೂ ಕೆಲವು ದಿನ ನಮ್ಮ ಪ್ರತಿನಿಧಿಗಳ ನೋಟಂಕಿ ಆಟ ಮುಂದುವರಿಯುವ ಸಾಧ್ಯತೆ ಕಾಣಿಸುತ್ತಿದೆ. ಈಗಲೇ ಅಧಿಕಾರ ವರ್ಗ ಮೇಲ್ವಿಚಾರಣೆ ಇಲ್ಲದೆ ನಿರಮ್ಮಳವಾಗಿದೆ. ಜನರಿಗೆ ಅಗತ್ಯ ಸೇವೆಗಳನ್ನು ನೀಡದೆ ಉಗಿದು ಅಟ್ಟುತ್ತಿದ್ದಾರೆ.

ಇಂತಹ ಸಮಯದಲ್ಲಿ ನೀವು ನಿಮ್ಮ ಸಾಂವಿಧಾನಿಕ ಅಸ್ತ್ರವನ್ನು ಬಳಸಿ. ರಾಜ್ಯಾಡಳಿತದಲ್ಲಿ ಅಪರೂಪದ ಹೆಜ್ಜೆಯೊಂದನ್ನು ಮುಂದಿಡಿ. ರಾಜ ಭವನ ಎಂದರೆ ಬಿಳಿಯಾನೆ ಸಾಕಿದಂತೆ ಎಂಬ ಭಾವನೆ ಇದೆ. ಕನಿಷ್ಟ ಇಂತಹ ಸಮಯದಲ್ಲಾದರೂ ನಿಮ್ಮ ಇರುವಿಕೆ ಸುಮ್ಮನೆ ಅಲ್ಲ ಎಂಬುದನ್ನು ಅರ್ಥ ಪಡಿಸಿ.

ಚುನಾವಣಾ ಆಯೋಗ ಶಕ್ತಿ ಏನೆಂಬುದನ್ನು ಒಬ್ಬರು ಟಿ. ಎನ್. ಶೇಷನ್ ಈ ದೇಶದ ಜನರಿಗೆ ಅರ್ಥ ಪಡಿಸಿದ್ದರು. ಲೋಕಾಯುಕ್ತ ಸಂಸ್ಥೆಯ ವ್ಯಾಪ್ತಿ ಏನು ಎಂಬುದನ್ನು ಜಸ್ಟಿಸ್ ವೆಂಕಟಾಚಲ ತೋರಿಸಿಕೊಟ್ಟಿದ್ದರು. ಇದೀಗ, ರಾಜ್ಯಪಾಲರು ಎಂದರೆ ಕೇವಲ 'ರಬ್ಬರ್ ಸ್ಟ್ಯಾಂಪ್' ಅಲ್ಲ ಎಂಬುದನ್ನು ಸಾಕ್ಷಿ ಸಮೇತ ಮುಂದಿಡಲು ನಿಮಗೊಂದು ಅವಕಾಶ ಸಿಕ್ಕಿದೆ ಸರ್. ಈ ಮೂಲಕ ನಿಮ್ಮ ಹೆಸರು ಕರ್ನಾಟಕದ ರಾಜಕಾರಣದಲ್ಲಿ ಅಚ್ಚಳಿಯದಂತೆ ಉಳಿಸಿ ಹೋಗಿ ಎಂಬುದು ವಿನಂತಿ.

ನಿಮ್ಮಿಂದ ಗಟ್ಟಿ ನಿರ್ಧಾರವೊಂದರ ನಿರೀಕ್ಷೆಯಲ್ಲಿ...

ಕರ್ನಾಟಕದ ಸತ್ಪ್ರಜೆ.