samachara
www.samachara.com
‘ಬಿಜೆಪಿ 125’: ಬಂಗಾಳದಲ್ಲಿ ದೀದೀ ಅಬ್ಬರ, ಬಿಜೆಪಿ ವಿರೋಧಕ್ಕೆ ಸಜ್ಜುಗೊಂಡ ವೇದಿಕೆ
/ಹಿಂದೂಸ್ತಾನ್ ಟೈಮ್ಸ್. 
COVER STORY

‘ಬಿಜೆಪಿ 125’: ಬಂಗಾಳದಲ್ಲಿ ದೀದೀ ಅಬ್ಬರ, ಬಿಜೆಪಿ ವಿರೋಧಕ್ಕೆ ಸಜ್ಜುಗೊಂಡ ವೇದಿಕೆ

ಪ್ರಾದೇಶಿಕ ಪಕ್ಷಗಳ ಸಮಾವೇಶ ಮಾಡುವ ಮೊದಲು ದೀದಿ ತಮ್ಮ ಒಕ್ಕೂಟದ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸಲಿ ಎಂದು ಬಿಜೆಪಿ ಟೀಕಿಸುತ್ತಿದೆ. 

Team Samachara

ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾದಾಗಿನಿಂದ ದೇಶದ ರಾಜಕಾರಣ ದಿನಕ್ಕೊಂದು ಬೆಳವಣಿಗೆಗೆ ಸಾಕ್ಷಿಯಾಗುತ್ತಲೇ ಇದೆ. ಬಿಜೆಪಿಯನ್ನು ಸೋಲಿಸುವ ಸಲುವಾಗಿ ಕಳೆದ ವಾರ ಉತ್ತರಪ್ರದೇಶದಲ್ಲಿ ಎಸ್‌ಪಿ ಹಾಗೂ ಬಿಎಸ್‌ಪಿ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದು ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಆಡಳಿತರೂಢ ಬಿಜೆಪಿ ಪಕ್ಷ ಈ ಆಘಾತದಿಂದ ಎಚ್ಚೆತ್ತುಕೊಳ್ಳುವ ಮುನ್ನವೇ ಮತ್ತೊಂದು ಅಘಾತ ನೀಡಲು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಮಮತ ಬ್ಯಾನರ್ಜಿ ಮುಂದಾಗಿದ್ದಾರೆ.

2019ರ ಲೋಕಸಬಾ ಚುನಾವಣೆಯಲ್ಲಿ ರಾಷ್ಟ್ರಾದ್ಯಂತ ಬಿಜೆಪಿಯನ್ನು 125 ಸ್ಥಾನಗಳಿಗೆ ಸೀಮಿತಗೊಳಿಸಬೇಕು ಎಂದು ಸವಾಲು ಹಾಕಿರುವ ಮಮತಾ ಬ್ಯಾನರ್ಜಿ ಶನಿವಾರ (ಜ.19) ಕೋಲ್ಕತಾದಲ್ಲಿ 'ವಿರೋಧ ಪಕ್ಷಗಳ ಒಕ್ಕೂಟ ರ್ಯಾಲಿ'ಯನ್ನು ಆಯೋಜಿಸಿದ್ದಾರೆ. ಈ ರ್ಯಾಲಿಯಲ್ಲಿ ದೇಶದ ಪ್ರಮುಖ ಪ್ರಾದೇಶಿಕ ಪಕ್ಷಗಳ ನಾಯಕರು ಭಾಗವಹಿಸಲಿದ್ದು, ಬಿಜೆಪಿಗೆ ಎಚ್ಚರಿಕೆ ಗಂಟೆ ಬಾರಿಸಿದಂತಿದೆ. ಅಲ್ಲದೆ ಈ ಸಮಾವೇಶದಿಂದ ಕೇಂದ್ರ ರಾಜಕಾರಣದಲ್ಲಿ ಹೊಸ ಶಕೆ ಆರಂಭವಾಗಲಿದ್ದು, ಬಿಜೆಪಿಗೆ ಮರಣ ಶಾಸನ ಬರೆಯಲು ಎಲ್ಲಾ ಪ್ರಾದೇಶಿಕ ಪಕ್ಷಗಳು ಒಟ್ಟಾಗಿವೆ ಎನ್ನುತ್ತಿದ್ದಾರೆ ರಾಜಕೀಯ ತಜ್ಞರು.

ಬಿಜೆಪಿಗೆ ಮರಣಶಾಸನ; ದೀದಿ ಸವಾಲು

ಅಭಿಮಾನಿಗಳಿಂದ ದೀದಿ ಎಂದು ಕರೆಯಲ್ಪಡುವ ಮಮತಾ ಬ್ಯಾನರ್ಜಿ ಅರಂಭದಿಂದಲೂ ಕೇಸರಿ ಪಕ್ಷದ ಕುರಿತು ಅಸಹನೆಯನ್ನು ಹೊಂದಿದ್ದರು. ಬಿಜೆಪಿ ಪಕ್ಷದ ದುರಾಡಳಿತವನ್ನು ಕಳೆದ ನಾಲ್ಕೂವರೆ ವರ್ಷಗಳಿಂದ ಕಟುವಾಗಿ ಟೀಕಿಸುತ್ತಲೇ ಬಂದವರ ಪೈಕಿ ಪ್ರಮುಖರು. ಕೇಂದ್ರದ ಮಹತ್ವಾಕಾಂಕ್ಷೆಯ ಯೋಜನೆಯಾದ "ಆಯುಷ್ಮಾನ್ ಭಾರತ್" ಯೋಜನೆಯಿಂದ ಜನರಿಗೆ ಯಾವುದೇ ಉಪಯೋಗವಿಲ್ಲ. ಜನರ ಆರೋಗ್ಯದ ವಿಚಾರದಲ್ಲೂ ಬಿಜೆಪಿ ಸರಕಾರ ನೀಚ ರಾಜಕಾರಣ ಮಾಡುತ್ತಿದೆ ಎಂದು ದೂಷಿಸಿದ್ದ ಮಮತಾ ಬ್ಯಾನರ್ಜಿ ಕೋಲ್ಕತಾದಲ್ಲಿ ಈ ಯೋಜನೆಯನ್ನೇ ಕೈಬಿಟ್ಟಿದ್ದರು. ಹೀಗೆ ಪಶ್ಚಿಮ ಬಂಗಾಳದ ದೀದಿ ಒಂದಲ್ಲಾ ಒಂದು ರೀತಿ ಕೇಂದ್ರದ ವಿರೋಧಿ ನಿಲುವು ಪ್ರದರ್ಶಿಸುತ್ತಲೇ ಬಂದಿದ್ದಾರೆ.

ಕಳೆದ ಚುನಾವಣೆಯಲ್ಲಿ ಬಿಜೆಪಿ ತಾನು ಕೊಟ್ಟ ಆಶ್ವಾಸನೆಗಳನ್ನು ಈಡೇರಿಸಿಲ್ಲ. ಜನ ಕೇಂದ್ರ ಸರಕಾರದ ಮೇಲಿನ ಭರವಸೆಗಳನ್ನು ಕಳೆದುಕೊಂಡಿದ್ದಾರೆ ಎಂದು ವಿರೋಧ ಪಕ್ಷಗಳು ಟೀಕಿಸುತ್ತಲೇ ಬಂದರೂ, ಬಿಜೆಪಿ ವಿರುದ್ಧ ಏಕಾಂಗಿಯಾಗಿ ಸ್ಪರ್ಧಿಸಿ ಗೆಲ್ಲುವುದು ಅಷ್ಟು ಸುಲಭದ ಮಾತಲ್ಲ. ಇದು ಕಾಂಗ್ರೆಸ್ ಸೇರಿದಂತೆ ದೇಶದ ಎಲ್ಲಾ ಪ್ರಾದೇಶಿಕ ಪಕ್ಷಗಳಿಗೂ ಗೊತ್ತು. ಏಕೆಂದರೆ 2014 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ಹಾಗಿತ್ತು. 282 ಕ್ಷೇತ್ರಗಳಲ್ಲಿ ಜಯಗಳಿಸಿದ ಬಿಜೆಪಿ ಹೊಸ ದಾಖಲೆ ಬರೆದಿತ್ತು. (ಎನ್‌ಡಿಎ ಮೈತ್ರಿಕೂಟ ಒಟ್ಟಾರೆ 339 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿತ್ತು.) ದಶಕಗಳ ನಂತರ ಕೇಂದ್ರದಲ್ಲಿ ಜನ ಒಂದು ಪಕ್ಷಕ್ಕೆ ಬಹುಮತ ನೀಡಿ ಗೆಲ್ಲಿಸಿದ್ದರು. ಈ ಚುನಾವಣೆಯ ನಂತರ ಬಿಜೆಪಿ ಬಹುದೊಡ್ಡ ಶಕ್ತಿಯಾಗಿ ಹೊರಹೊಮ್ಮಿತ್ತು. ಈ ಕಾರಣಕ್ಕಾಗಿ ರೂಪಗೊಂಡದ್ದೇ "ವಿರೋಧ ಪಕ್ಷಗಳ ಒಕ್ಕೂಟ".

ಕಾಂಗ್ರೆಸ್ ಕಳೆದ ಎರಡು ವರ್ಷಗಳಿಂದ ಪ್ರಾದೇಶಿಕ ಪಕ್ಷಗಳನ್ನು ಸೆಳೆಯಲು ಕಸರತ್ತು ನಡೆಸುತ್ತಿದೆ. ಮತ್ತೊಂದೆಡೆ ಉತ್ತರಪ್ರದೇಶದಲ್ಲಿ ಬಿಜೆಪಿಗೆ ಮಣ್ಣು ಮುಕ್ಕಿಸಲು ಎಸ್‌ಪಿಯ ಅಖಿಲೇಶ್ ಯಾದವ್ ಹಾಗೂ ಬಿಎಸ್‌ಪಿಯ ಮಾಯಾವತಿ ನಡುವಿನ ಮೈತ್ರಿ ಸಿದ್ಧತೆ ನಡೆಸುತ್ತಿದೆ. ಈ ನಡುವೆ ರಾಷ್ಟ್ರ ಮಟ್ಟದಲ್ಲಿ ಮತ್ತೊಂದು ಬೃಹತ್‌ ಮೈತ್ರಿ ಸೂತ್ರವನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೆಣೆಯುತ್ತಿದ್ದಾರೆ.

ಶನಿವಾರದ ಬೃಹತ್ ರ್ಯಾಲಿ ಹಾಗೂ ಸಮಾವೇಶದ ಕುರಿತು ಪ್ರತಿಕ್ರಿಯೆ ನೀಡಿರುವ ಮಮತಾ, "ಇದು ಕೇಸರಿ ಪಕ್ಷದ ದುರಾಡಳಿತದ ವಿರುದ್ಧ 'ಭಾರತೀಯ ಒಕ್ಕೂಟದ ರ್ಯಾಲಿ'. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 125ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಜಯಗಳಿಸಲಾರದು. ಪ್ರಾದೇಶಿಕ ಪಕ್ಷಗಳು ಬಿಜೆಪಿಗಿಂತ ಹೆಚ್ಚು ಕ್ಷೇತ್ರಗಳನ್ನು ಗಳಿಸಲಿವೆ. ದೇಶದ ಪ್ರಾದೇಶಿಕ ಪಕ್ಷಗಳ ಒಕ್ಕೂಟ ಈ ಬಾರಿಯ ಚುನಾವಣೆಯನ್ನು ನಿರ್ಧರಿಸಲಿವೆ" ಎಂದು ಹೇಳಿದ್ದಾರೆ.

ರಾಷ್ಟ್ರ ಮಟ್ಟದಲ್ಲಿ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಿ ಆಡಳಿತರೂಢ ಬಿಜೆಪಿ ಪಕ್ಷಕ್ಕೆ ಸವಾಲು ಹಾಕುವ ಮೂಲಕ ಮಮತಾ ಬ್ಯಾನರ್ಜಿ ರಾಷ್ಟ್ರ ನಾಯಕಿಯಾಗಲು ಹೊರಟಿದ್ದಾರೆ. ಮಮತಾ ಅವರ ರಾಷ್ಟ್ರ ರಾಜಕಾರಣದ ಪ್ರವೇಶಕ್ಕೆ ಶನಿವಾರದ ಸಮಾವೇಶ ವೇದಿಕೆಯಾಗಲಿದೆ ಎಂದು ರಾಜಕೀಯ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿವೆ. ಆದರೆ ಕೇಂದ್ರದಲ್ಲಿ ಮಾಜಿ ರೈಲ್ವೆ ಸಚಿವೆಯಾಗಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ಅನುಭವ ಹೊಂದಿರುವ ಮಮತಾ ಬ್ಯಾನರ್ಜಿ ಪ್ರಧಾನಿ ಹುದ್ದೆಗೆ ಸೂಕ್ತ ಆಯ್ಕೆ. ಹೀಗಾಗಿ ಅವರು ರಾಷ್ಟ್ರ ರಾಜಕಾರಣ ಪ್ರವೇಶ ನಿರ್ಧಾರ ಸರಿಯಾಗಿಯೇ ಇದೆ ಎನ್ನುತ್ತಿದ್ದಾರೆ ರಾಜಕೀಯ ತಜ್ಞರು.

ಸಮಾವೇಶದಲ್ಲಿ ಪ್ರಾದೇಶಿಕ ಶಕ್ತಿ

ಆಡಳಿತರೂಢ ಬಿಜೆಪಿ ಪಕ್ಷದ ವಿರುದ್ದ ಪಶ್ಚಿಮ ಬಂಗಾಳದಲ್ಲಿ ಆಯೋಜಿಸಲಾಗಿರುವ "ಪ್ರಾದೇಶಿಕ ಪಕ್ಷಗಳ ಒಕ್ಕೂಟ ರ್ಯಾಲಿ" ಗೆ ದೇಶದ ಬಹುತೇಕ ಪ್ರಮುಖ ಪಕ್ಷಗಳ ಮುಖಂಡರು ಬಾಗಿಯಾಗುವುದು ಖಚಿತವಾಗಿದೆ. ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕರ್ನಾಟಕ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ, ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ, ಓಮರ್ ಅಬ್ದುಲ್ಲಾ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ (ಎಸ್‌ಪಿ) , ರಾಷ್ಟ್ರೀಯ ಜನತಾ ದಳ ಪಕ್ಷದ ಮುಖ್ಯಸ್ಥ ತೇಜಸ್ವಿ ಯಾದವ್, ಡಿಎಂಕೆ ಪಕ್ಷದ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ರ್ಯಾಲಿಯಲ್ಲಿ ಬಾಗವಹಿಸಲಿದ್ದಾರೆ.

ಬಿಎಸ್‌ಪಿ ಪಕ್ಷದಿಂದ ಕಾರ್ಯದರ್ಶಿ ಶತೀಶ್ ಚಂದ್ರ ಮಿಶ್ರಾ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್, ರಾಷ್ಟ್ರೀಯ ಲೋಕ ದಳದ ಅಜಿತ್ ಸಿಂಗ್, ಕೇಂದ್ರದ ಮಾಜಿ ಮಂತ್ರಿಗಳಾದ ಯಶವಂತ್ ಸಿನ್ಹಾ, ಅರುಣ್ ಶೌರಿ, ಗುಜರಾತ್ ಪಾಟೀದಾರ್ ಹೋರಾಟಗಾರ ಹಾರ್ದಿಕ್ ಪಟೇಲ್, ದಲಿತ ನಾಯಕ ಜಿಗ್ನೇಶ್ ಮೇವಾನಿ, ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಜಾರ್ಖಂಡ್ ವಿಕಾಸ್ ಮೋರ್ಚಾ ಪಕ್ಷದ ಮುಖ್ಯಸ್ಥ ಬಾಬುಲಾಲ್ ಮುರಾಂಡಿ, ಅರುಣಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಗೆಗಾಂಗ್ ಅಪಾಂಗ್ ದೀದಿ ಜೊತೆಗೆ ಸಮಾವೇಶದಲ್ಲಿ ವೇದಿಕೆ ಹಂಚಿಕೊಳ್ಳಲಿದ್ದಾರೆ.

ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಹಾಗೂ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಈ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿಲ್ಲ. ರಾಹುಲ್ ಪತ್ರವೊಂದನ್ನು ಬರೆದಿದ್ದು, ಮಮತಾ ರಾಜಕೀಯ ನಡೆಗೆ ಬೆಂಬಲ ಸೂಚಿಸ್ದದಾರೆ. ಕಾಂಗ್ರೆಸ್ ಪಕ್ಷದಿಂದ ಲೋಕಸಭೆ ವಿರೋಧ ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಂಸದ ಅಭಿಷೇಕ್ ಸಿಂಗ್ವಿ ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸಲಿದ್ದಾರೆ.

ಒಟ್ಟಾರೆ ಕಳೆದ ಎರಡು ವರ್ಷಗಳಿಂದ ಬಿಜೆಪಿ ವಿರುದ್ಧ ರಾಷ್ಟ್ರಮಟ್ಟದಲ್ಲಿ ಎಲ್ಲಾ ಪ್ರಾದೇಶಿಕ ಪಕ್ಷಗಳು ಒಂದಾಗಬೇಕು ಎಂಬ ಕೂಗು ಕೇಳಿ ಬರುತ್ತಲೇ ಇತ್ತು. ಕರ್ನಾಟಕದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭಕ್ಕೆ ಬಹುತೇಕ ಎಲ್ಲಾ ಪ್ರಾದೇಶಿಕ ಪಕ್ಷಗಳ ಮುಖಂಡರೂ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ತೃತೀಯ ರಂಗದ ಕೂಗು ಜೋರಾಗಿತ್ತಾದರೂ ಎಲ್ಲಾ ಪಕ್ಷಗಳು ದೊಡ್ಡ ಮಟ್ಟದಲ್ಲಿ ಒಂದಾಗಿರಲಿಲ್ಲ. ಆದರೆ ಈಗ ಪರಿಸ್ಥಿತಿ ಬದಲಾಗಿದೆ.

ಲೋಕಸಭಾ ಚುನಾವಣೆ ಹತ್ತಿರಾಗುತ್ತಿದೆ. ಎಲ್ಲಾ ಪ್ರಾದೇಶಿಕ ಪಕ್ಷಗಳು ಬಹುತೇಕ ಬಿಜೆಪಿಯ ಮೈತ್ರಿಯಿಂದ ದೂರ ಉಳಿಯುತ್ತಿವೆ. ಮೋದಿ ನಾಯಕತ್ವ ಹಾಗೂ ಸರಕಾರದ ಕುರಿತು ಅಪಸ್ವರಗಳು ಕೇಳಿಬರುತ್ತಿವೆ. ಪರಿಸ್ಥಿತಿಗೆ ಸರಿಯಾಗಿ ರಾಷ್ಟ್ರಮಟ್ಟದ ರಾಜಕಾರಣಕ್ಕೆ ಧುಮುಕಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಎಲ್ಲಾ ಪಕ್ಷಗಳನ್ನು ಒಟ್ಟುಗೂಡಿಸುವ ಯತ್ನಕ್ಕೆ ಕೈಹಾಕಿದ್ದಾರೆ. ಆ ಮೂಲಕ ಬಿಜೆಪಿಗೆ ಬಲವಾದ ಪೆಟ್ಟು ಕೊಡಲು ಮುಂದಾಗಿದ್ದಾರೆ. ಪ್ರಾದೇಶಿಕ ಪಕ್ಷಗಳ ಸಮಾವೇಶ ಮಾಡುವ ಮೊದಲು ಮಮತಾ ಬ್ಯಾನರ್ಜಿ ತಮ್ಮ ಒಕ್ಕೂಟದ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸಲಿ ಎಂದು ಬಿಜೆಪಿ ಟೀಕಿಸುತ್ತಿದೆ. ಇಂತಹ ಟೀಕೆಗಳ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಶನಿವಾರ ನಡೆಯಲಿರುವ ಸಮಾವೇಶ ಮಹತ್ವ ಪಡೆದುಕೊಂಡಿದೆ.