samachara
www.samachara.com
ಪಂಚತಾರ ಹೋಟೆಲ್‌ನಲ್ಲಿ ಅವರು, ರೆಸಾರ್ಟ್‌ಗೆ ಹೊರಟರು ಇವರು: ಓಟ್‌ ಹಾಕಿ ಕಳಿಸಿದ್ದು ಜನರು
COVER STORY

ಪಂಚತಾರ ಹೋಟೆಲ್‌ನಲ್ಲಿ ಅವರು, ರೆಸಾರ್ಟ್‌ಗೆ ಹೊರಟರು ಇವರು: ಓಟ್‌ ಹಾಕಿ ಕಳಿಸಿದ್ದು ಜನರು

ರಾಜ್ಯದ 224 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಪಾಲು 81. ಇದರಲ್ಲಿ ಸದ್ಯ 77 ಮಂದಿ ರೆಸಾರ್ಟ್‌ಗೆ ರವಾನೆಯಾಗಲಿದ್ದಾರೆ. ಬಿಜೆಪಿ ಸಂಖ್ಯೆ ಒಟ್ಟು 104. ಇವರು ಹರಿಯಾಣದ ಗುರುಗ್ರಾಮದ ಪಂಚತಾರಾ ಹೋಟೆಲ್‌ನಲ್ಲಿ ಬೀಡು ಬಿಟ್ಟಿದ್ದಾರೆ. ಉಳಿದಿರುವುದು...

Team Samachara

ಸಮ್ಮಿಶ್ರ ಸರಕಾರದ ಭವಿಷ್ಯ ನಿರ್ಧರಿಸುವ ಸಭೆ ಎನ್ನಿಸಿಕೊಂಡಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ನಾಲ್ಕು ಮಂದಿ ಶಾಸಕರು ಗೈರಾಗಿದ್ದಾರೆ; ಬೆನ್ನಿಗೇ ಕಾಂಗ್ರೆಸ್‌ ರೆಸಾರ್ಟ್ ರಾಜಕಾರಣದ ಮೊರೆ ಹೋಗಿದೆ. ಈ ಮೂಲಕ ರಾಜ್ಯ ರಾಜಕಾರಣ ಮತ್ತೊಂದು ಅಸಹ್ಯಕರ ಅಧ್ಯಾಯಕ್ಕೆ ತೆರೆದುಕೊಂಡಿದೆ.

ಗೋಕಾಕ್‌ ಶಾಸಕ ರಮೇಶ್‌ ಜಾರಕಿಹೊಳಿ, ಅಥಣಿ ಶಾಸಕ ಮಹೇಶ್‌ ಕುಮಟಳ್ಳಿ ಕಾಂಗ್ರೆಸ್‌ನ ಸಂಪರ್ಕಕ್ಕೆ ಸಿಕ್ಕಿಲ್ಲ. ಚಿಂಚೋಳಿ ಶಾಸಕ ಉಮೇಶ್‌ ಜಾದವ್‌ ಮತ್ತು ಬಳ್ಳಾರಿ ಶಾಸಕ ಬಿ. ನಾಗೇಂದ್ರ ಕಾಂಗ್ರೆಸ್‌ ಶಾಸಕರನ್ನು ಸಂಪರ್ಕಿಸಿ ಸಭೆಗೆ ಬರಲಾಗದ ಬಗ್ಗೆ ಕಾರಣ ನೀಡಿದ್ದಾರೆ.

"ಸಭೆಗೆ ಗೈರಾಗಿರುವ ನಾಲ್ಕೂ ಜನರಿಗೂ ವಿವರಣೆ ಕೇಳಿ ನೋಟಿಸ್‌ ಜಾರಿ ಮಾಡಲಾಗುವುದು. ಹೈಕಮಾಂಡ್‌ ನಿರ್ಧಾರದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು," ಎಂದು ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸಿಎಲ್‌ಪಿ ಸಭೆಯ ನಂತರ ತಿಳಿಸಿದರು.

"ಕಾಂಗ್ರೆಸ್‌ ಶಾಸಕರಿಗೆ ಆಮಿಷ ಒಡ್ಡಲು ಬಿಜೆಪಿ ಪ್ರಯತ್ನ ನಡೆಸಿರುವುದು ನಿಜ. ನಮ್ಮ ಶಾಸಕರಿಗೆ 25, 50, 100 ಕೋಟಿ ರೂಪಾಯಿವರೆಗೆ ಆಮಿಷ ಒಡ್ಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಕೇಂದ್ರ ಮಂತ್ರಿಗಳಿಂದ ಹಿಡಿದು ಎಲ್ಲರೂ ಆಪರೇಷನ್‌ ಕಮಲಕ್ಕೆ ಪ್ರಯತ್ನ ನಡೆಸಿದ್ದಾರೆ. ಇದಕ್ಕೆ ನಮ್ಮ ಬಳಿ ಸಾಕ್ಷ್ಯಗಳಿವೆ," ಎಂದು ಇದೇ ವೇಳೆ ಸಿದ್ದರಾಮಯ್ಯ ಪುನರುಚ್ಚರಿಸಿದರು.

ಬಿಜೆಪಿಯ ಆಪರೇಷನ್‌ ಕಮಲದ ಭೀತಿಯಲ್ಲಿರುವ ಕಾಂಗ್ರೆಸ್‌ ರಾಮನಗರದ ಈಗಲ್ಟನ್‌ ರೆಸಾರ್ಟ್‌ಗೆ ತಮ್ಮ ಶಾಸರನ್ನು ಕರೆದೊಯ್ಯಲು ಮುಂದಾಗಿದೆ. ಸಿಎಲ್‌ಪಿ ಸಭೆಗೆ ಬಂದಿರುವ ಯಾವ ಶಾಸಕರೂ ಬಿಜೆಪಿ ಸೆಳೆತಕ್ಕೆ ಒಳಗಾಗಬಾರದು ಎಂಬ ಕಾರಣಕ್ಕೆ ಕಾಂಗ್ರೆಸ್‌ ಕೂಡಾ ಈಗ ರೆಸಾರ್ಟ್‌ ರಾಜಕಾರಣಕ್ಕೆ ಇಳಿದಿದೆ.

"ಬಿಜೆಪಿಯ ಆಮಿಷಗಳಿಂದ ತಪ್ಪಿಸಿಕೊಳ್ಳಲು ಈಗ ನಾವೆಲ್ಲರೂ ರೆಸಾರ್ಟ್‌ಗೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಹಾಗೆಂದು ನಮಗೆ ಬಿಜೆಪಿ ಬಗ್ಗೆ ಭಯವಿಲ್ಲ. ಲೋಕಸಭಾ ಚುನಾವಣೆಯ ಸಿದ್ಧತೆ ಹಾಗೂ ಬರ ಪರಿಹಾರಗಳ ಬಗ್ಗೆ ರೆಸಾರ್ಟ್‌ನಲ್ಲೇ ಚರ್ಚೆ ನಡೆಸುತ್ತೇವೆ," ಎಂದು ಸಿದ್ದರಾಮಯ್ಯ ಅಸಹ್ಯಕರ ರಾಜಕೀಯ ಬೆಳವಣಿಗೆಗೆ ಸಮಜಾಯಿಷಿ ನೀಡಿದರು.

"ಸಮ್ಮಿಶ್ರ ಸರಕಾರ ಇಂದು ಬಿದ್ದು ಹೋಗುತ್ತದೆ, ನಾಳೆ ಬಿದ್ದು ಹೋಗುತ್ತದೆ ಎಂಉ ಮಾಧ್ಯಮಗಳಲ್ಲಿ ನಿತ್ಯವೂ ವರದಿಗಳು ಬರುತ್ತಿವೆ. ಈ ಬಗ್ಗೆ ಸ್ಪಷ್ಟನೆ ನೀಡಲು ಹಾಗೂ ನಮ್ಮ ಒಗ್ಗಟ್ಟು ಪ್ರದರ್ಶಿಸಲು ಈ ಸಭೆ ಕರೆಯಲಾಗಿತ್ತು. ನಮ್ಮೆಲ್ಲಾ ಶಾಸಕರು ನಮ್ಮೊಂದಿಗೆ ಇದ್ದಾರೆ. ಸಂಪರ್ಕ ಸಿಗದ ಇಬ್ಬರು ಶಾಸಕರ ಬಗ್ಗೆ ಗೊತ್ತಿಲ್ಲ. ಒಬ್ಬ ಆಂಗ್ಲೋ ಇಂಡಿಯನ್‌ ಸದಸ್ಯರು ಸೇರಿ ಒಟ್ಟು 77 ಮಂದಿ ಶಾಸಕರು ಇಂದಿನ ಸಭೆಯಲ್ಲಿ ಹಾಜರಾಗಿದ್ದಾರೆ. ಇಬ್ಬರು ಆರೋಗ್ಯ ಹಾಗೂ ಕೋರ್ಟ್‌ಗೆ ಹಾಜರಾಗಬೇಕಾದ ಕಾರಣ ನೀಡಿದ್ದಾರೆ," ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

"ಬಿಜೆಪಿ ಎರಡು ಬಾರಿ ಆಪರೇಷನ್‌ ಕಮಲ ನಡೆಸಿ ವಿಫಲವಾಗಿದೆ. ಮುಖಭಂಗ ಅನುಭವಿಸಿದ್ದರೂ ಬಿಜೆಪಿ ಮತ್ತೆ ಮತ್ತೆ ಕಾಂಗ್ರೆಸ್‌ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಲೇ ಇದೆ. ಬಿಜೆಪಿ ಲಫಂಗ ರಾಜಕಾರಣ ಮಾಡುತ್ತಿದೆ" ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ರೆಸಾರ್ಟ್‌- ಹೋಟೆಲ್‌ಗಳಲ್ಲಿ ಜನಪ್ರತಿನಿಧಿಗಳು:

ಹೀಗೆ, ರಾಜ್ಯದ ಗಮನ ಸೆಳೆದಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ನಂತರ ಆಡಳಿತದಲ್ಲಿ ದೊಡ್ಡ ಪಾಲು ಹೊಂದಿರುವ ಪಕ್ಷ ತನ್ನ ಶಾಸಕರನ್ನು ರೆಸಾರ್ಟ್‌ಗಳಲ್ಲಿ ಕೂಡಿಡಲು ಹೊರಟಿದೆ. ರಾಜ್ಯದ 224 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಪಾಲು 81. ಇದರಲ್ಲಿ ಸದ್ಯ 77 ಮಂದಿ ರೆಸಾರ್ಟ್‌ಗೆ ರವಾನೆಯಾಗಲಿದ್ದಾರೆ.

ಬಿಜೆಪಿ ಸಂಖ್ಯೆ ಒಟ್ಟು 104. ಇದರಲ್ಲಿ ಶೇ. 100 ಶಾಸಕರು ಹರಿಯಾಣದ ಗುರುಗ್ರಾಮದ ಪಂಚತಾರಾ ಹೋಟೆಲ್‌ನಲ್ಲಿ ಬೀಡು ಬಿಟ್ಟಿದ್ದಾರೆ. ಉಳಿದಿರುವುದು ಜೆಡಿಎಸ್‌ನ 37 ಮಂದಿ ಶಾಸಕರು. ಇಬ್ಬರು ಪಕ್ಷೇತರರು ಹಾಗೂ ಒಬ್ಬರು ಬಿಎಸ್‌ಪಿ ಶಾಸಕರು.

ಕಳೆದ ಒಂದು ವಾರದ ಅಂತರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರಮುಖ ಪಕ್ಷಗಳು ಎಲ್ಲಾ ಶಾಸಕರು ತಮ್ಮ ಕ್ಷೇತ್ರಗಳನ್ನು ತೊರೆದಿದ್ದಾರೆ. ಆಪರೇಷನ್ ಭೀತಿಯನ್ನು ಮುಂದಿಟ್ಟು ರೆಸಾರ್ಟ್ ಹಾಗೂ ಪಂಚತಾರಾ ಹೋಟೆಲ್‌ಗಳಲ್ಲಿ ಬೀಡು ಬಿಟ್ಟಿದ್ದಾರೆ.

ಇದು ಸದ್ಯದ ಕರ್ನಾಟಕದ ರಾಜಕಾರಣದ ಚಿತ್ರಣ. ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿ ಕಳುಹಿಸಿದ ಜನ ಇನ್ನೂ ಶಾಂತವಾಗಿ ಯಾವ ಆಶಯವನ್ನು ಇಟ್ಟುಕೊಂಡು ಇವರನ್ನು ಎದುರು ನೋಡುತ್ತಿದ್ದಾರೋ, ಗೊತ್ತಿಲ್ಲ.