samachara
www.samachara.com
ಸಂಘಿ ಪುತ್ರ- 5: ಮೋದಿ ಎಸಗಿದ ಅದೊಂದು ಪ್ರಮಾದದ ಲಾಭ ಪಡೆದುಕೊಂಡರು ನಿತಿನ್ ಗಡ್ಕರಿ!
COVER STORY

ಸಂಘಿ ಪುತ್ರ- 5: ಮೋದಿ ಎಸಗಿದ ಅದೊಂದು ಪ್ರಮಾದದ ಲಾಭ ಪಡೆದುಕೊಂಡರು ನಿತಿನ್ ಗಡ್ಕರಿ!

ಯಾವುದಾದರೂ ಯೋಜನೆ ಸರಕಾರದಿಂದ ಜಾರಿಗೊಳಿಸುವ ಅಸಾಧ್ಯ ಎಂಬ ವಾಸನೆ ಕಾರ್ಪೊರೇಟ್‌ ಜಗತ್ತಿಗೆ ಸಿಗುತ್ತಿದ್ದಂತೆ ಉದ್ಯಮಿಗಳೆಲ್ಲಾ ಇರುವೆಗಳಂತೆ ಸುತ್ತ ಮುತ್ತಿಕೊಳ್ಳುತ್ತಿದ್ದರು. ಗಡ್ಕರಿ ಎಷ್ಟರ ಮಟ್ಟಿಗೆ ಇಲಾಖೆಯಲ್ಲಿ ಈಜಾಡಿದ್ದರು ಎಂದರೆ...

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

  • ಭಾಗ- 5

ಸಾಮಾನ್ಯವಾಗಿ ಕೇಂದ್ರ ಸಚಿವರುಗಳು ಕಾರ್ಯದರ್ಶಿಗಳಿಗೆ ಸ್ವಲ್ಪ ಹೆದರುತ್ತಾರೆ. ಕಾರಣ ಅವರುಗಳು ಮೋದಿ ಜತೆ ನೇರ ಸಂಪರ್ಕದಲ್ಲಿರುತ್ತಾರೆ ಎಂಬ ಕಾರಣಕ್ಕೆ. ಆದರೆ ಗಡ್ಕರಿ ಹಾಗಲ್ಲ. ತಮಗೆ ಬೇಕಾಗಿದ್ದನ್ನು ಮಾಡಿ ಕೊಡಿ ಇಲ್ಲ ಜಾಗ ಖಾಲಿ ಮಾಡಿ ಎಂದು ಕಾರ್ಯದರ್ಶಿಗಳಿಗೆ ನೇರ ತಾಕೀತು ಮಾಡುತ್ತಾರೆ ಎನ್ನುತ್ತಾರೆ ದೆಹಲಿ ಮೂಲದ ಲಾಬಿಕಾರರೊಬ್ಬರು. ಹೀಗೆ ಮಾಡಿಯೇ ಅಧಿಕಾರಿಗಳಿಂದ ಅವರು ಕೆಲಸ ತೆಗಿಸಿಕೊಳ್ಳುತ್ತಾರೆ ಎಂಬುದು ಅವರ ಅಭಿಪ್ರಾಯ.

ಗಡ್ಕರಿಗೆ ಉದ್ಯಮದ ಒಳನೋಟಗಳು ಚೆನ್ನಾಗಿವೆ ಎನ್ನುತ್ತಾರೆ ಇವರುಗಳು. ಅದಕ್ಕೆ ಸಿಮೆಂಟ್‌ ಸಮಸ್ಯೆಗೆ ಅವರು ಸೂಚಿಸಿದ ಪರಿಹಾರವನ್ನು ಉದಾಹರಣೆಯಾಗಿ ನೀಡುತ್ತಾರೆ. ಗಡ್ಕರಿ ಹೆದ್ದಾರಿ ಇಲಾಖೆಗೆ ಬಂದಾಗ ಸಿಮೆಂಟ್‌ ಬೆಲೆ ಏರಿಕೆಯ ಹಾದಿಯಲ್ಲಿತ್ತು. ಇದು ದೊಡ್ಡ ದೊಡ್ಡ ಕಂಪನಿಗಳ ವಂಚಕ ಜಾಲದ ಕೆಲಸ ಎಂಬುದನ್ನು ಅರ್ಥ ಮಾಡಿಕೊಳ್ಳಲು ಅವರಿಗೆ ಹೆಚ್ಚು ಸಮಯ ಹಿಡಿಯಲಿಲ್ಲ. ಆಗ ದಾಳ ಉರುಳಿಸಿದ ಗಡ್ಕರಿ, ಮುಚ್ಚಿದ 117ಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಕಾರ್ಖಾನೆಗಳಿಗೆ ಮರು ಜೀವ ನೀಡಲು ಮುಂದಾದರು. ನಮಗೆ ಇಂಥಹ ಗುಣಮಟ್ಟದ ಇಷ್ಟು ಸಿಮೆಂಟ್‌ ಬೇಕೆಂದು ಇಲಾಖೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದರು. ಒಮ್ಮೆಗೆ ಇವೆಲ್ಲಾ ಉತ್ಪಾದನೆ ಆರಂಭಿಸಿದವು. ಅಲ್ಲಿಗೆ ಸಮಸ್ಯೆ ಕೊನೆಯಾಯಿತು. ಉದ್ಯಮದ ಒಳ ಹೊರಗು ಬಲ್ಲವರಿಗೆ ಮಾತ್ರ ಇದು ಸಾಧ್ಯವಿತ್ತು.

ಇಲಾಖೆ ಜವಾಬ್ದಾರಿ ವಹಿಸಿಕೊಂಡ ನಂತರ ಗಡ್ಕರಿ ಹತ್ತಾರು ಉಪ ಸಮಿತಿಗಳನ್ನು ರಚಿಸಿದರು. ಅವುಗಳಿಗೆಲ್ಲಾ ಆರ್‌ಎಸ್‌ಎಸ್‌ ಜತೆ ನಂಟಿದ್ದ ಮನುಷ್ಯರನ್ನೇ ತಂದು ಕೂರಿಸಿದರು. ಇವರುಗಳು ನೀಡಿದ ಶಿಫಾರಸ್ಸುಗಳನ್ನು ಹೆದ್ದಾರಿ ಖಾತೆಯ ಪಾಲಿಸಿಗಳಲ್ಲಿ ಜಾರಿಗೆ ತರಲಾಗುತ್ತಿತ್ತು. ಇನ್ನು ಹೆಚ್ಚಿನ ಸಂದರ್ಭದಲ್ಲಿ ಕಾರ್ಯಸಾಧುವಲ್ಲದ ಗುರಿಗಳನ್ನೇ ಅವರು ಅಧಿಕಾರಿಗಳಿಗೆ ನೀಡುತ್ತಿದ್ದರು. ಹೀಗಿದ್ದಾಗ ಅರ್ಧದಷ್ಟಾದರೂ ಕೆಲಸವಾಗುತ್ತದೆ ಎಂಬುದು ಅವರ ಲೆಕ್ಕಾಚಾರವಾಗಿತ್ತು.

2015-16 ರಲ್ಲಿ ಅವರು ದಿನಕ್ಕೆ 41 ಕಿಲೋ ಮೀಟರ್‌ನಂತೆ 15,000 ಕಿ.ಮೀ. ರಸ್ತೆ ನಿರ್ಮಾಣವಾಗಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಈ ಹಿಂದಿನ ಸರಕಾರ ದಿನಕ್ಕೆ ಒಂದಂಕಿಯ ಲೆಕ್ಕದಲ್ಲಿ ರಸ್ತೆಗಳ ನಿರ್ಮಾಣವನ್ನಷ್ಟೇ ಮಾಡುತ್ತಿತ್ತು. ಹೀಗಾಗಿ ಇದು ಭಾರೀ ಅನಿಸಿತ್ತು. ಆದರೆ ಗಡ್ಕರಿ ಅಂದುಕೊಂಡಂತೆ ಅದರ ಅರ್ಧದಷ್ಟು ಅಂದರೆ 8,200 ಕಿಮೀ ರಸ್ತೆ ನಿರ್ಮಾಣವಾಯಿತು.

ಹೀಗೆ ಗಡ್ಕರಿ ತಮ್ಮ ಇಲಾಖೆಯಲ್ಲಿ ಭರಪೂರ ಕೆಲಸಗಳಾಗುವಂತೆ ನೋಡಿಕೊಳ್ಳುತ್ತಿದ್ದಾರೆ. 2017ರ ಅಕ್ಟೋಬರ್‌ನಲ್ಲಿ ನಡೆದ ಸಂಪುಟ ಸಭೆಯಲ್ಲಿ 7 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ 83,000 ಕಿಲೋಮೀಟರ್‌ ಉದ್ದದ ರಸ್ತೆ ನಿರ್ಮಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. 24,800 ಕಿ.ಮೀ.ಗಳ ಭಾರತ್‌ ಮಾಲಾ ಯೋಜನೆ ಸೇರಿ ಇದರಲ್ಲಿ 2022ಕ್ಕೆ ಮೊದಲ ಹಂತದ 34,800 ಕಿ.ಮೀ.‌ಗಳ ರಸ್ತೆ ನಿರ್ಮಿಸುವ ಗುರಿ ಹಾಕಿಕೊಳ್ಳಲಾಗಿದೆ.

ಹೀಗೆ ಸಣ್ಣ, ದೊಡ್ಡ ಯೋಜನೆಗಳು ಸೇರಿ ಎಲ್ಲಾ ಯೋಜನೆಗಳ ಶಂಕುಸ್ಥಾಪನೆ, ಉದ್ಘಾಟನೆಗಳಿಗೆ ಹಾಜರಾಗುತ್ತಾ ರಾಜಕೀಯ ಮತ್ತು ಜನಪ್ರೀಯತೆಯ ಮೈಲೇಜ್‌ ತೆಗೆದುಕೊಳ್ಳುವ ಕಾರ್ಯದಲ್ಲಿ ಗಡ್ಕರಿ ನಿರತರಾಗಿದ್ದಾರೆ.

ಆದರೆ ಆರಂಭದಲ್ಲಿ ಪರಿಸ್ಥಿತಿ ಹೀಗಿರಲಿಲ್ಲ. ಮೋದಿ ಜತೆಗಿನ ಸಂಬಂಧ ಅವರಿಗೆ ಅಡ್ಡಗಾಲಾಗಿತ್ತು. ಆರಂಭದಲ್ಲಿ ಗಡ್ಕರಿ ಕನಸಿನ ಮೊದಲ ಮೂರು ಯೋಜನೆಗಳು ಮತ್ತು ಅವರ ಎರಡು ವಿದೇಶಿ ಪ್ರವಾಸಕ್ಕೆ ಮೋದಿ ಅನುಮತಿ ನೀಡಲಿಲ್ಲ ಎನ್ನುತ್ತಾರೆ ಗಡ್ಕರಿ ಆಪ್ತ, ಮಾಜಿ ಪತ್ರಕರ್ತ ಕನಾಟೆ. ನಾಲ್ಕನೇ ಫೈಲ್‌ ಕೂಡ ಮೋದಿಯಿಂದ ತಿರಸ್ಕೃತವಾದಾಗ ಗಡ್ಕರಿ ಹತಾಷರಾಗಿದ್ದರು.

ಮೋಹನ್ ಭಾಗವತ್- ನಿತಿನ್ ಗಡ್ಕರಿ- ನರೇಂದ್ರ ಮೋದಿ. 
ಮೋಹನ್ ಭಾಗವತ್- ನಿತಿನ್ ಗಡ್ಕರಿ- ನರೇಂದ್ರ ಮೋದಿ. 

ಅವತ್ತು ಅವರು ಫೋನ್‌ ಕೈಗೆತ್ತಿಕೊಂಡವರೇ ನೇರ ಮೋಹನ್‌ ಭಾಗವತ್‌ಗೆ ಫೋನಾಯಿಸಿ, "ನನಗೆ ಹೀಗೆ ಕೆಲಸ ಮಾಡಲು ಸಾಧ್ಯವಿಲ್ಲ. ನಾನು ವಾಪಸ್‌ ಬಂದು ಸ್ವಯಂ ಸೇವಕನಾಗಿ ಇರುತ್ತೇನೆ," ಎಂದುಬಿಟ್ಟರು. ಆ ಮಾತು ಕೇಳಿ ಭಾಗವತ್‌ ವಿಮಾನ ಹತ್ತಿ ದೆಹಲಿಗೆ ತುರ್ತಾಗಿ ಹೊರಟು ಬಂದರು. ಮರು ದಿನ ಮೋದಿ ಮತ್ತು ಗಡ್ಕರಿ ಜತೆ ತಡರಾತ್ರಿಯ ಸಭೆ ಏರ್ಪಾಟು ಮಾಡಿದರು. ಮೋದಿ ಬಳಿಯಲ್ಲಿ, “ಗಡ್ಕರಿ ನಿಮಗೆ ಏನಾರೂ ತೊಂದರೆ ಮಾಡುತ್ತಿದ್ದಾರಾ ಅಥವಾ ಸರಕಾರದ ಇಮೇಜ್‌ಗೆ ತೊಂದರೆಯಾಗುವಂತೆ ನಡೆದುಕೊಳ್ಳುತ್ತಿದ್ದಾರಾ?” ಎಂದು ಭಾಗವತ್‌ ಪ್ರಶ್ನಿಸಿದರು. ಅದಕ್ಕೆ ಮೋದಿ ಇಲ್ಲವೆಂದು ಉತ್ತರಿಸಿದರು.

ಕೊನೆಗೆ ಒಂದು ತೀರ್ಮಾನಕ್ಕೆ ಬರಲಾಯಿತು. ಗಡ್ಕರಿ ಪಕ್ಷದ ಹೊರಗೆ ಅಥವಾ ಒಳಗೆ ಮೋದಿಯನ್ನು ಟೀಕಿಸುವುದಿಲ್ಲ. ಪ್ರತಿಯಾಗಿ ಗಡ್ಕರಿಗೆ ತಮ್ಮ ಕೆಲಸ ಮಾಡಲು ಪೂರ್ತಿ ಸ್ವಾತಂತ್ರ್ಯ ನೀಡಬೇಕು ಎಂಬುದು ಒಪ್ಪಂದವಾಯಿತು. ಇದಾದ ಬಳಿಕ "ಗಡ್ಕರಿಯ ಖಾತೆಯಲ್ಲಿ ಮೋದಿ ಹೆಚ್ಚಾಗಿ ತಲೆಯಾಡಿಸುವುದಿಲ್ಲ. ಇವತ್ತು ಮೋದಿಯ ದೊಡ್ಡ ದೊಡ್ಡ ಯೋಜನೆಗಳೆಲ್ಲಾ ಗಡ್ಕರಿ ಸಚಿವಾಲಯದಲ್ಲಿ ನಡೆಯುತ್ತಿವೆ," ಎನ್ನುತ್ತಾರೆ ಕನಾಟೆ.

ಹೀಗಿರುವಾಗಲೇ ಒಂದು ಬೆಳವಣಿಗೆ ನಡೆಯಿತು. 83,000 ಕಿಲೋಮೀಟರ್‌ ರಸ್ತೆ ನಿರ್ಮಾಣ ಮಾಡುವ ಯೋಜನೆಯೊಂದನ್ನು ಅರುಣ್‌ ಜೇಟ್ಲಿ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು. ಇದರಲ್ಲಿ ಗಡ್ಕರಿ ಇರಲಿಲ್ಲ. ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಆಗ ಪತ್ರಕರ್ತರು ಕೇಳಿದ್ದಕ್ಕೆ, ‘ನನ್ನನ್ನು ಮರು ದಿನ ಪತ್ರಿಕಾಗೋಷ್ಠಿ ನಡೆಸುವಂತೆ ಹೇಳಿದ್ದಾರೆ’ ಎಂದು ಉತ್ತರಿಸಿದ್ದರಂತೆ. ಮರುದಿನ ಗಡ್ಕರಿ ಪತ್ರಿಕಾಗೋಷ್ಠಿ ಹಮ್ಮಿಕೊಂಡಾಗ ಮಾಧ್ಯಮದವರಾರೂ ಇದರತ್ತ ಗಮನಕೊಡಲಿಲ್ಲ.

ಹೀಗೆ ವಿವಾದ, ಸಮಸ್ಯೆಗಳ ನಡುವೆಯೇ ಗಡ್ಕರಿ ಇಲಾಖೆ ಸಾಗುತ್ತಿತ್ತು. ಆದರೆ ಸ್ವಂತ ಹಿತಾಸಕ್ತಿಯನ್ನು ಮಾತ್ರ ಅವರು ಎಲ್ಲಾ ಕಾಲಕ್ಕೂ ಕಾಪಾಡಿಕೊಂಡೇ ಬಂದಿದ್ದರು. ಇಥೆನಾಲ್‌ನಲ್ಲಿ ಬಸ್ಸುಗಳ ಓಡಾಟ, ಇಂಧನಕ್ಕೆ ಹೆಚ್ಚಿನ ಪ್ರಮಾಣದ ಇಥೆನಾಲ್ ಬಳಕೆ, ಹೊಸ ಅನ್ವೇಷಣೆಗಳಾಚೆ ಅವರ ಸ್ವ ಹತಾಸಕ್ತಿಗಳ ಕಾರ್ಯಕ್ರಮಗಳಾಗಿದ್ದವು. ಯೋಜನೆ ಜಾರಿಗೆ ಬರುತ್ತಿದ್ದಂತೆ ಗಡ್ಕರಿಗೆ ನಂಟಿದ್ದ ಪೂರ್ತಿ ಗ್ರೂಪ್‌ ಒಂದೇ ಸಮನೆ ಇಥೆನಾಲ್‌ ಉತ್ಪಾದನೆಯನ್ನು ಏರಿಸಿತು. ಅಲ್ಲದೆ ಇದಕ್ಕಾಗಿ ‘ಮನಾಸ್‌ ಆಗ್ರೋ ಇಂಡಸ್ಟೀಸ್‌’ ಎಂಬ ಕಂಪನಿ ಸ್ಥಾಪನೆಯಾಯಿತು. ಇದಕ್ಕೆ ಗಡ್ಕರಿಯ ಓರ್ವ ಮಗನೇ ನಿರ್ದೇಶಕರಾಗಿದ್ದರು. ಐಡಿಬಿಐ ನೇತೃತ್ವದ ಸಾರ್ವಜನಿಕ ರಂಗದ ಬ್ಯಾಂಕ್‌ಗಳಿಂದ ಇದಕ್ಕೆ 1,034 ಕೋಟಿ ರೂಪಾಯಿಗಳ ಸಾಲವನ್ನೂ ಕೊಡಿಸಲಾಯಿತು. ಹೀಗಿತ್ತು ಗಡ್ಕರಿಯ ವರಸೆ!

ವಿವಾದಕ್ಕೊಳಗಾದ ಗಡ್ಕರಿ ಕುರಿತು ಅಂದು ‘ಇಂಡಿಯಾ ಟುಡೆ’ ಪ್ರಕಟಿಸಿದ ವ್ಯಂಗ್ಯ ಚಿತ್ರ. 
ವಿವಾದಕ್ಕೊಳಗಾದ ಗಡ್ಕರಿ ಕುರಿತು ಅಂದು ‘ಇಂಡಿಯಾ ಟುಡೆ’ ಪ್ರಕಟಿಸಿದ ವ್ಯಂಗ್ಯ ಚಿತ್ರ. 

ಗಡ್ಕರಿ ಇದೇ ರೀತಿ ಮತ್ತೊಮ್ಮೆ 2015ರಲ್ಲಿ ವಿವಾದಕ್ಕೆ ಗುರಿಯಾದರು. ಎಸ್ಸಾರ್‌ ಸಂಸ್ಥೆಗೆ ಸೇರಿದ ಐಷಾರಾಮಿ ಬೋಟ್‌ನಲ್ಲಿ ಫ್ರೆಂಚ್‌ ರಿವೇರಿಯಾದಲ್ಲಿ ಗಡ್ಕರಿ ಕುಟುಂಬ 2013ರ ಜುಲೈನಲ್ಲಿ ಎರಡು ದಿನಗಳನ್ನು ಕಳೆದು ಬಂದಿತ್ತು. ಈ ದಾಖಲೆಗಳೀಗ ಮಾಧ್ಯಮಗಳಿಗೆ ಸೋರಿಕೆಯಾಗಿತ್ತು. ಈ ಕುರಿತು ಪ್ರಶ್ನಿಸಿದಾಗ, “ಇದು ನನ್ನ ವೈಯಕ್ತಿಕ ಸಂಬಂಧ. ನನಗೆ ನನ್ನ ಹುದ್ದೆಯಾಚೆಗೆ ವೈಯಕ್ತಿಕ ಸಂಬಂಧಗಳು ವ್ಯಕ್ತಿಗಳ ಜತೆಗಿವೆ,” ಎಂದು ಬಿಟ್ಟರು ಗಡ್ಕರಿ.

ಆದರೆ ಅದು ಪೂರ್ತಿ ಸತ್ಯವಾಗಿರಲಿಲ್ಲ. ಪೂರ್ತಿ ಗ್ರೂಪ್‌ ಮತ್ತು ಎಸ್ಸಾರ್‌ ಸೇರಿಕೊಂಡು 2013ರಲ್ಲಿ ಪೆಟ್ರೋಲ್‌ ಪಂಪ್‌ಗಳ ಜಾಲ ನಿರ್ಮಾಣಕ್ಕೆ ಚಾಲನೆ ನೀಡಿದ್ದವು. ಅದರ ಹಿನ್ನೆಲೆಯಲ್ಲಿ ಈ ಮೋಜಿನ ಪ್ರವಾಸ ನಡೆದಿತ್ತು.

2016ರ ಜನವರಿಯಲ್ಲಿ ಕಾಶ್ಮೀರ ಮತ್ತು ಲಡಾಕ್‌ ಸಂಪರ್ಕಿಸುವ ಝೊಜಿಲಾ ಪಾಸ್‌ ಸುರಂಗ ನಿರ್ಮಾಣ ಯೋಜನೆಯನ್ನು ಕೈಗೆತ್ತಿಕೊಳ್ಳಲಾಯಿತು. 10,050 ಕೋಟಿ ರೂಪಾಯಿಗಳ ಈ ಯೋಜನೆಯ ಗುತ್ತಿಗೆಯನ್ನು ಗಡ್ಕರಿಯ ಹಳೆ ಗೆಳಯ ಮೈಸ್ಕರ್‌ ಕುಟುಂಬಕ್ಕೆ ಸೇರಿದ ಐಆರ್‌ಬಿ ಇನ್ಫ್ರಾಸ್ಟ್ರಕ್ಚರ್‌ ಡೆವಲಪರ್‌ಗೆ ನೀಡಲಾಯಿತು. ಮುಂದೆ ಇದಕ್ಕೆ ವಿರೋಧ ಪಕ್ಷಗಳಿಂದ ತೀವ್ರ ವಿರೋಧ ಕೇಳಿ ಬಂದ ನಂತರ, 2017ರಲ್ಲಿ ಆರಂಭಿಕ ಯೋಜನೆಯ ಅರ್ಧ ಮೊತ್ತಕ್ಕೆ ಇದು ಐಎಲ್‌&ಎಫ್‌ಎಸ್‌ ಪಾಲಾಯಿತು.

ಗಡ್ಕರಿಯ ಕಾರ್ಯಯೋಜನೆಗಳು ಒಂದಕ್ಕಿಂತ ಒಂದು ಭಿನ್ನವಾಗಿದ್ದವು. ಮೇ 2017ರಲ್ಲಿ ಉತ್ತರಾಖಂಡ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 74ರ ನಿರ್ಮಾಣ ಸಂಬಂಧ ಪರಭಾರೆ ಮಾಡಿಕೊಂಡ ಜಮೀನುಗಳಲ್ಲಿ 240 ಕೋಟಿ ರೂಪಾಯಿಗಳ ಹಗರಣ ನಡೆದಿದೆ ಎಂದು ಅಧಿಕಾರಗಳ ಮೇಲೆ ಪ್ರಕರಣ ದಾಖಲಾಯಿತು. ಆಗ ಬ್ಲ್ಯಾಕ್‌ಮೇಲ್‌ ದಾಟಿಯಲ್ಲಿ ಅಲ್ಲಿನ ಸಿಎಂಗೆ ಪತ್ರ ಬರೆದ ಗಡ್ಕರಿ, ‘ಇದು ಅಧಿಕಾರಿಗಳ ಉತ್ಸಾಹದ ಮೇಲೆ ಪರಿಣಾಮ ಬಿರುತ್ತದೆ, ರಾಜ್ಯದಲ್ಲಿ ಜಾರಿಯಲ್ಲಿರುವ ಯೋಜನೆಗಳ ಬಗ್ಗೆ ನಾವು ಪುನರ್‌ವಿಮರ್ಶೆ ಮಾಡಬೇಕಾಗುತ್ತದೆ,” ಎಂದರು. ಆದರೆ ಗಡ್ಕರಿಗೆ ತಲೆ ಕೆಡಿಸಿಕೊಳ್ಳದ ಸರಕಾರ ಇದನ್ನು ತಣ್ಣಗೆ ವಿಶೇಷ ತನಿಖಾ ತಂಡಕ್ಕೆ ವಹಿಸಿ ಕೈತೊಳೆದುಕೊಂಡಿತು. ವಿಚಿತ್ರವೆಂದರೆ ಅದರ ವರದಿ ಇನ್ನೂ ಹೊರ ಬಂದಿಲ್ಲ.

ಇಷ್ಟಕ್ಕೇ ನಿಲ್ಲುವುದಿಲ್ಲ. ಗಡ್ಕರಿಯ ಹಿತಾಸಕ್ತಿಗಳ ಸಂಘರ್ಷದ ಕಥೆಗಳ ದೊಡ್ಡ ಪಟ್ಟಿಯೇ ಇದೆ. ವೈಭವ್‌ ದಂಗೆ ಎಂಬ ಗಡ್ಕರಿಯ ಆಪ್ತ ಕಾರ್ದರ್ಶಿ ನಡೆಸುವ ಇಂಡಿಯನ್‌ ಫೆಡರೇಷನ್‌ ಆಫ್‌ ಗ್ರೀನ್‌ ಎನರ್ಜಿ ಎಂಬ ಸಂಸ್ಥೆ ಹೆದ್ದಾರಿ ಸಚಿವಾಲಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿತ್ತು. ಇದರ ವೆಬ್‌ಸೈಟ್‌ನಲ್ಲಿ ಸಂಸ್ಥೆಯ ಪೋಷಕರು ಎಂದು ಇವತ್ತಿಗೂ ಗಡ್ಕರಿ ಹೆಸರಿದೆ. ಕೇಂದ್ರ ಸಚಿವ ಸುರೇಶ್‌ ಪ್ರಭು ಇಂದಿಗೂ ಸಂಸ್ಥೆಯ ಗೌರವ ಅಧ್ಯಕ್ಷರಾಗಿದ್ದಾರೆ.

ಹೀಗೆ ಗಡ್ಕರಿಗೆ ಸಂಬಂಧಿಸಿದ ಯಾವುದೇ ಸರಣಿ ಹಗರಣಗಳು ಹೊರ ಬಂದರೂ ಅದು ಈ ಬಾರಿ ಮೋದಿಯ ಇಮೇಜ್‌ಗೆ ಧಕ್ಕೆ ತರಲಿತ್ತು. ಹೀಗಾಗಿಯೋ ಏನೋ ಪೂರ್ತಿ ಗ್ರೂಪ್‌ ಹಗರಣದ ಸಂದರ್ಭದಲ್ಲಿದ್ದ ಕವರೇಜ್‌ ಈಗ ಇರಲಿಲ್ಲ. 2015ರಲ್ಲಿ ಮಾತ್ರ ನವ ಮತ್ತು ನವೀಕರಿಸಬಹುದಾದ ಇಂಧನ ಇಲಾಖೆಯ ಸಬ್ಸಿಡಿ ಯೋಜನೆಗಳ ಅನುಷ್ಠಾನದಲ್ಲಿ ‘ಪೂರ್ತಿ’ ಅವ್ಯವಹಾರ ನಡೆಸಿದೆ ಎಂದು ಸಿಎಜಿ ಹೇಳಿತ್ತು. ಹೀಗಿದ್ದೂ ಈ ಬಾರಿ ಜೇಟ್ಲಿಯೇ ಗಡ್ಕರಿ ರಕ್ಷಣೆಗೆ ಧಾವಿಸಿ ಈ ಪ್ರಕರಣಕ್ಕೆ ಮಣ್ಣು ಮುಚ್ಚಿದರು. ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಈ ಬಗ್ಗೆ ಅಂತಹ ದೊಡ್ಡ ಸದ್ದು ಮಾಡಲಿಲ್ಲ. ಕೇಳಿದ್ದಕ್ಕೆ ‘ಗಡ್ಕರಿ ಮೋದಿ ವಿರೋಧಿ. ಹಾಗಾಗಿ ನಾವು ಹೆಚ್ಚಿಗೆ ಮುಂದುವರಿಯಲಿಲ್ಲ,’ ಎಂದು ಬಿಟ್ಟರು ಕಾಂಗ್ರೆಸ್‌ ನಾಯಕರು!

ನಿತಿನ್ ಗಡ್ಕರಿ ಕಂಡರೆ ಎಲ್ಲಾ ಪಕ್ಷದವರಿಗೂ ಪ್ರೀತಿ, ಕಾರ್ಪೊರೇಟ್ ಪ್ರಪಂಚಕ್ಕೆ ಮಮಕಾರ. 
ನಿತಿನ್ ಗಡ್ಕರಿ ಕಂಡರೆ ಎಲ್ಲಾ ಪಕ್ಷದವರಿಗೂ ಪ್ರೀತಿ, ಕಾರ್ಪೊರೇಟ್ ಪ್ರಪಂಚಕ್ಕೆ ಮಮಕಾರ. 
/ಇಂಡಿಯಾ ಟುಡೆ. 

‘ಇವೆಲ್ಲಾ ಕೇವಲ ಸಂಚುಗಳು’ ಎನ್ನುತ್ತಾರೆ ಗಡ್ಕರಿ ಬಗ್ಗೆ ತಿಳಿದಿರುವ ಆರ್‌ಎಸ್‌ಎಸ್‌ ನಾಯಕರೊಬ್ಬರು. ‘ಅಮಿತ್‌ ಶಾ ಪುತ್ರನ ಮೇಲಿನ ಆರೋಪಗಳಿಗಿಂತ ಇದೆಲ್ಲಾ ಹೇಗೆ ಭಿನ್ನ? ಪೂರ್ತಿ ಮೇಲಿನ ಆರೋಪಗಳು ಕೇವಲ ‘ಟೈಮ್ಸ್‌ ನೌ’ ಮತ್ತು ‘ಎನ್‌ಡಿಟಿವಿ’ಯ ಸಂಚು,’ ಎನ್ನುತ್ತಾರೆ ಅವರು. ಈ ಪ್ರಕರಣಗಳೆಲ್ಲಾ ಇವತ್ತು ಎಲ್ಲಿವೆ ಎಂದು ಪ್ರಶ್ನಿಸುತ್ತಾರೆ ಅವರು. ಪೂರ್ತಿ ಮೇಲೆ ದಾಳಿಗಳನ್ನು ನಡೆಸಿದ ಕೆವಿ ಚೌಧರಿಗೆ ಮುಂದೆ ಕೇಂದ್ರ ವಿಚಕ್ಷಣ ಆಯೋಗದ ಮುಖ್ಯಸ್ಥರಾಗಿ ಭಡ್ತಿ ನೀಡಲಾಯಿತು ಎಂದು ವಿವರಿಸುತ್ತಾರೆ ಅವರು. ಆ ಮೂಲಕ ಇವುಗಳ ಹಿಂದೆ ಮೋದಿ ಇದ್ದರು ಎಂಬುದನ್ನು ಸೂಚ್ಯವಾಗಿ ಹೇಳುತ್ತಾರೆ.

ಗಡ್ಕರಿಗೆ ಯಾರೇನೇ ಅಂದುಕೊಳ್ಳಲಿ ತಮ್ಮ ಯಶಸ್ಸು ಅಡಗಿರುವುದು ಸರಕಾರಿ ಖಾಸಗಿ ಪಾಲುದಾರಿಕೆಯ ಯೋಜನೆಯಲ್ಲಿ ಎಂಬ ಅರಿವಿತ್ತು. ಅದಕ್ಕಾಗಿ ಅವರು ವಿಶೇಷ ಪ್ರಯತ್ನವನ್ನೇನೂ ಮಾಡಬೇಕಾಗಿರಲಿಲ್ಲ. ಒಮ್ಮೆ ಯಾವುದಾದರೂ ಯೋಜನೆ ಸರಕಾರದಿಂದ ಜಾರಿಗೊಳಿಸುವ ಅಸಾಧ್ಯ ಎಂಬ ವಾಸನೆ ಕಾರ್ಪೊರೇಟ್‌ ಜಗತ್ತಿಗೆ ಸಿಗುತ್ತಿದ್ದಂತೆ ಉದ್ಯಮಿಗಳೆಲ್ಲಾ ಇರುವೆಗಳಂತೆ ಅವರ ಸುತ್ತ ಮುತ್ತಿಕೊಳ್ಳುತ್ತಿದ್ದರು. ಗಡ್ಕರಿ ಎಷ್ಟರ ಮಟ್ಟಿಗೆ ಇಲಾಖೆಯಲ್ಲಿ ಈಜಾಡಿದ್ದರು ಎಂದರೆ ಅದು ಮೋದಿಗೂ ಅಸೂಯೆ ತರಿಸಿತ್ತು. ಹೀಗಾಗಿ 2017ರ ಸೆಪ್ಟಂಬರ್‌ನಲ್ಲಿ ಅವರ ಹೆಸರು ರಕ್ಷಣಾ ಇಲಾಖೆಗೆ ಕೇಳಿ ಬಂತು. ಆದರೆ ಹೆದ್ದಾರಿ ಬಿಟ್ಟು ಪಕ್ಕಕ್ಕೆ ಸರಿಯಲು ಅವರು ಸಿದ್ಧರಿರಲಿಲ್ಲ.

ಅವರನ್ನು ರಕ್ಷಣಾ ಸಚಿವರಾಗಿ ವರ್ಗ ಮಾಡಲು ಮೋದಿ ಬಯಸಿದ್ದರು ಎನ್ನುತ್ತಾರೆ ಆನಂದನ್‌. ಅವತ್ತೇ ಸಂಜೆ ಸುಷ್ಮಾ ಸ್ವರಾಜ್‌, ರಾಜನಾಥ್‌ ಸಿಂಗ್‌, ಜೇಟ್ಲಿ ಜತೆ ಉನ್ನತ ಮಟ್ಟದ ಸಭೆಯಲ್ಲಿ ಗಡ್ಕರಿ ಭಾಗವಹಿಸಿದರು. ತಮಗೆ ಹೇಳಬೇಕಾಗಿದ್ದನ್ನು ಅವರು ಅಲ್ಲಿಯೇ ಹೇಳಿ ಮುಗಿಸಿದರು. ಮರು ದಿನ ರಕ್ಷಣಾ ಖಾತೆ ನಿರ್ಮಲಾ ಸೀತಾರಾಮನ್‌ ಪಾಲಾಗಿತ್ತು. ಮೋದಿ ಗಡ್ಕರಿ ಮೇಲೆ ಹುದ್ದೆ ವಹಿಸಿಕೊಳ್ಳುವಂತೆ ಭಾರೀ ಒತ್ತಡ ಹೇರಿದ್ದರು. ಆದರೆ ಅದರ ಹಿಂದಿನ ಸಂಚು ಅರಿತಿದ್ದ ಗಡ್ಕರಿ ಅಲ್ಲಿಂದ ಜಾರಿಕೊಂಡಿದ್ದರು.

ಗಡ್ಕರಿಗೆ ಯಾವುದೇ ಸಚಿವಾಲಯ ಬೇಕಾಗಿರಲಿಲ್ಲ. ಬದಲಿಗೆ ಸರಕಾರದಲ್ಲಿ ಎರಡನೇ ಹುದ್ದೆ ಅವರದಾಗಬೇಕಿತ್ತು ಎನ್ನುತ್ತಾರೆ ಕನಾಟೆ. ಅದಕ್ಕಾಗಿ ಅವರು ರೈಲ್ವೇ ಸಚಿವಾಲಯವನ್ನು ಬಯಸಿದ್ದರು. ಆದರೆ ಅದು ಅವರಿಗೆ ಸಿಗಲೇ ಇಲ್ಲ. ಕೊನೆಗೆ ಜಲ ಸಂಪನ್ಮೂಲ ಮತ್ತು ಗಂಗಾ ಕಲ್ಯಾಣ ಮಾತ್ರ ಸಿಕ್ಕಿತು. ಅದು ಮೋದಿ ಒತ್ತಾಸೆ ಮೇಲೆ ಗಡ್ಕರಿ ಪಡೆದುಕೊಂಡಿದ್ದರು.

ಗಡ್ಕರಿ ಸಂಪುಟದಲ್ಲಿ ಇದ್ದಿದ್ದೇ ಹಾಗೆ. ಸಂಪುಟ ಸಭೆಗಳಲ್ಲಿ ಅವರು ಎಲ್ಲರಿಗಿಂತ ಹೆಚ್ಚು ಮಾತನಾಡುತ್ತಿದ್ದರು. ಇದು ‘ಒನ್‌ ಮ್ಯಾನ್‌ ಷೋ’ ಅಲ್ಲ ಎಂಬುದನ್ನು ಮೋದಿಗೆ ಸೂಚ್ಯವಾಗಿ ತಲುಪಿಸುತ್ತಿದ್ದರು. ಮೋದಿ ಬಗ್ಗೆ ಬಹಿರಂಗವಾಗಿ ಜೋಕ್‌ ಮಾಡುತ್ತಿದ್ದ ಸಂಪುಟದ ಏಕೈಕ ವ್ಯಕ್ತಿ ಗಡ್ಕರಿಯಾಗಿದ್ದರು. ಒಮ್ಮೆ ಶಹನವಾಜ್‌ ಹುಸೇನ್‌ ಗಡ್ಕರಿ ಬಳಿ ಹೋಗಿದ್ದರು. 2015ರ ಬೇಸಿಗೆಯಲ್ಲಿ. "ಇದೆಂಥಾ ಸರಕಾರ ನಡೆಯುತ್ತಿದೆ? ನಾನು ಮುಸ್ಲಿಮನಾಗಿದ್ದುಕೊಂಡೂ ನನ್ನ ಇಡೀ ಜೀವನವನ್ನೇ ಪಕ್ಷಕ್ಕೆ ಮುಡಿಪಾಗಿಟ್ಟಿದ್ದೇನೆ. ಪ್ರತೀ ವಾರ ಪ್ರಧಾನಿಯನ್ನು ಭೇಟಿಯಾಗಲು ನಾನು ಸಮಯ ಕೇಳುತ್ತಲೇ ಇದ್ದೇನೆ. ಆದರೆ ನಿರಾಕರಿಸಲಾಗುತ್ತಿದೆ,” ಎಂದರು. ಆಗ ಗಡ್ಕರಿ, "ನನ್ನನ್ನು ಯಾಕೆ ಕೇಳುತ್ತಿದ್ದೀರಿ? ಅವರು ಅವರ ತಾಯಿಯನ್ನೇ ಎರಡು ವರ್ಷ ನಂತರ ಭೇಟಿಯಾದವರು," ಎಂದು ಚಟಾಕಿ ಹಾರಿಸಿದ್ದರು.

ಹೀಗೊಂದು ಸ್ವಾತಂತ್ರ್ಯದ ಆಚೆಗೂ ಗಡ್ಕರಿಯ ಬಲ ಕುಗ್ಗಿಸುವ ಯತ್ನಗಳು ಹಿಂದಿನಿಂದಲೂ ನಡೆದುಕೊಂಡು ಬಂದಿವೆ. ಆರ್‌ಎಸ್‌ಎಸ್‌ ಬೆಂಬಲ ಇದ್ದೂ ಅಂಶುಮಾನ್‌ ಮಿಶ್ರಾರನ್ನು ಮತ್ತೆ ರಾಜ್ಯಸಭೆಗೆ ಕಳುಹಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ಸುಧೀರ್‌ ಮಂಗಾಂಟಿವರ್‌, ಏಕನಾಥ್‌ ಖಡ್ಸೆ ಮತ್ತು ಆಶೀಷ್‌ ಶೆಲಾರ್‌ ಮೊದಲಾದ ಗಡ್ಕರಿ ಶಿಷ್ಯರನ್ನು ಮಹಾರಾಷ್ಟ್ರದಲ್ಲಿ ಬೇಕೆಂದೇ ಕಡೆಗಣಿಸಲಾಯಿತು. ಒಂದೊಮ್ಮೆ ಅವರೆಲ್ಲಾ ಬಲಶಾಲಿಗಳಾದರೆ ಗಡ್ಕರಿಯನ್ನು ಹಿಡಿಯುವವರು ಯಾರೂ ಇರುವುದಿಲ್ಲ ಎಂಬುದು ಮೋದಿಗೆ ಚೆನ್ನಾಗಿ ಗೊತ್ತಿತ್ತು.

ಇದಕ್ಕೆ ಮೋದಿಯ ಹಿನ್ನೆಲೆಯೂ ಕಾರಣವಾಗಿತ್ತು. ಮೋದಿ ಅವರೆಂದೂ ಆರ್‌ಎಸ್‌ಎಸ್‌ನ್ನು ನೆಚ್ಚಿಕೊಂಡು ಬೆಳೆಯಲಿಲ್ಲ. "ಮೋದಿ ತಮಗೆ ಇಚ್ಛೆ ಬಂದಂತೆ ಗುಜರಾತ್‌ನಲ್ಲಿ ಬೆಳೆದರು. ಅಲ್ಲಿನ ಆಡಳಿತ ತರಗತಿ ಕೊಠಡಿಯಂತೆ ಇತ್ತು. ಮೋದಿ ಅದರ ಮುಖ್ಯ ಶಿಕ್ಷರಾಗಿದ್ದರು," ಎನ್ನುತ್ತಾರೆ ದೆಹಲಿ ಮೂಲದ ಲಾಬಿಗಾರರೊಬ್ಬರು. ಮೋದಿ ಪಾಲಿಗೆ "ಸಂಘ ಅಪ್ರಸ್ತುತವಾಗಿತ್ತು. ನನಗೆ ಆರ್‌ಎಸ್‌ಎಸ್‌ ಬೇಕಿಲ್ಲ ಎಂಬುದು ಅವರಿಗೆ ಮನವರಿಕೆಯಾಗಿತ್ತು. ‘ಜನರು ನನ್ನ ಜತೆಗಿದ್ದಾರೆ’ ಎಂದು ಅವರು ಅಂದುಕೊಂಡಿದ್ದರು. ಅವರು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಮೀರಿ ಬೆಳೆದಿದ್ದರು. ಸಂಘ ಇದನ್ನೆಲ್ಲಾ ಇಷ್ಟಪಡುವುದಿಲ್ಲ. ಮೋದಿಗೆ ಆರ್‌ಎಸ್‌ಎಸ್‌ ಜತೆ ಹೇಳಿಕೊಳ್ಳುವ ಸಂಬಂಧವೇನಿಲ್ಲ. ಆದರೆ ಗಡ್ಕರಿಗೆ ಇದೆ," ಎನ್ನುತ್ತಾರೆ ಅವರು.

ಇದೇ ಭಾವನೆಯಲ್ಲಿ ಮೋದಿ ಸ್ವಯಂ ಕೃತ ಅಪರಾಧ ಮಾಡಿಕೊಂಡರು. ಮತ್ತದನ್ನು ಗಡ್ಕರಿ ತಮ್ಮ ಲಾಭಕ್ಕೆ ಬಳಸಿಕೊಂಡರು.

2017ರ ಏಪ್ರಿಲ್‌ನಲ್ಲಿ ಮೋದಿ ನಾಗಪುರಕ್ಕೆ ಪ್ರವಾಸ ಹೊರಟಿದ್ದರು. ಈ ಸಂದರ್ಭದಲ್ಲಿ ನಾನು ತಂಗುವಲ್ಲಿ ಬಂದು ಭೇಟಿಯಾಗುವಂತೆ ಮೋದಿ ಮೋಹನ್‌ ಭಾಗವತ್‌ಗೆ ಸಂದೇಶ ಕಳುಹಿಸಿದ್ದರು. ನಗರಕ್ಕೆ ಬಂದಾಗ "ವಾಜಪೇಯಿ ಕೂಡ ಸಂಘ ಪರಿವಾರದ ಕೇಂದ್ರ ಕಚೇರಿಗೆ ಬರುತ್ತಿದ್ದರು," ಎನ್ನುತ್ತಾರೆ ನಾಗಪುರದ ಹಿರಿಯ ಪತ್ರಕರ್ತರೊಬ್ಬರು. ಹೀಗಿರುವಾಗ ಮೋದಿ ನಡೆಯನ್ನು, "ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದುಕೊಂಡಿತು ಆರ್‌ಎಸ್‌ಎಸ್. ಅವತ್ತು ಭಾಗವತ್‌ ಮತ್ತು ಇತರ ನಾಯಕರು ಮೋದಿಯನ್ನು ಆಲಕ್ಷಿಸಿ ಪ್ರವಾಸ ಹೊರಟು ಹೋದರು," ಎಂದು ನೆನಪಿಸಿಕೊಳ್ಳುತ್ತಾರೆ ಅವರು. ಹೀಗೆ ಮೋದಿಗೂ ಒಂದು ಸಂದೇಶ ರವಾನಿಸಲಾಯಿತು.

ನಾಗಪುರದಲ್ಲಿರುವ ಆರ್‌ಎಸ್‌ಎಸ್‌ ಕೇಂದ್ರ ಕಚೇರಿ. 
ನಾಗಪುರದಲ್ಲಿರುವ ಆರ್‌ಎಸ್‌ಎಸ್‌ ಕೇಂದ್ರ ಕಚೇರಿ. 
/ಇಂಡಿಯಾ ಟುಡೆ. 

ಆದರೆ ಗಡ್ಕರಿ ಯಾವತ್ತೂ ಹಾಗೆ ನಡೆದುಕೊಳ್ಳುವುದಿಲ್ಲ. ಸಂಘದ ಕೇಂದ್ರ ಕಚೇರಿಯನ್ನು ಎತ್ತರದಲ್ಲಿ ಇಟ್ಟುಕೊಂಡೇ ನಡೆದು ಬಂದವರು ಅವರು. ಮೋದಿ ಹಾಗಲ್ಲ. ಅವರು ಸಂಘದ ತಾಳ್ಮೆಯನ್ನು ಪರೀಕ್ಷೆ ಮಾಡಿದರು. ಪರಿಣಾಮ ಮೋದಿ ಮತ್ತು ಅಮಿತ್‌ ಶಾ ಬಗ್ಗೆ ಆರ್‌ಎಸ್‌ಎಸ್‌ನಲ್ಲಿ ತೀವ್ರ ಅಸಮಧಾನವಿದೆ. ಸಂಘಕ್ಕೆ ಇದಕ್ಕಿಂತ ರಾಜನಾಥ್‌, ಗಡ್ಕರಿ ಹೆಚ್ಚು ಹೊಂದಿಕೆಯಾಗುತ್ತಾರೆ. ಗಡ್ಕರಿ ಪರವಾಗಿರುವ ಹಲವು ಅಂಶಗಳಲ್ಲಿ ಇದು ಕೂಡ ಒಂದು.

ಇನ್ನೊಂದು ಅವರಿಗಿರುವ ಕಾರ್ಪೊರೇಟ್‌ ಜಗತ್ತಿನ ಸಂಪರ್ಕ. ಧೀರೂಭಾಯಿ ಅಂಬಾನಿ ಕಾಲದಲ್ಲಿ ರಿಲಯನ್ಸ್‌ಗೆ ಬೆನ್ನು ತೋರಿದ್ದ ಗಡ್ಕರಿ, ಮಗ ಮುಖೇಶ್‌ ಅಂಬಾನಿ ಜತೆ ಕೈಕುಲುಕಲು ಆರಂಭಿಸಿದ್ದರು. ಅದಾನಿ ಬಿಟ್ಟು ಉಳಿದೆಲ್ಲಾ ಉದ್ಯಮಿಗಳ ಜತೆಗೂ ಗಡ್ಕರಿಗೆ ಸಂಬಂಧಗಳಿವೆ. ಎಲ್ಲಿಯವರೆಗೆ ಅಂದರೆ ಅವರನ್ನು ಭೇಟಿಯಾಗಲು ರತನ್ ಟಾಟಾ, ಮುಖೇಶ್‌ ಅಂಬಾನಿ ನಾಗಪುರಕ್ಕೆ ಹೋಗಿ ಬರುತ್ತಾರೆ. ಕಾರಣ ಅವರಿಗೆ ಗಡ್ಕರಿಯಲ್ಲಿ ಭವಿಷ್ಯ ಕಾಣಿಸುತ್ತಿದೆ. ಸದ್ಯಕ್ಕೆ ಉದ್ಯಮಿಗಳೆಲ್ಲಾ ಮೋದಿ ಬೆನ್ನಿಗಿದ್ದಾರೆ. ಆದರೆ ಸಮಯ ಕಳೆದಂತೆ ಆರ್‌ಎಸ್‌ಎಸ್‌ ಸೂಚನೆ ನೀಡುತ್ತಿದ್ದಂತೆ ಇವರುಗಳು ತಮ್ಮ ಟ್ರಾಕ್‌ ಬದಲಿಸಲಿದ್ದಾರೆ ಎನ್ನುತ್ತಾರೆ ಇಲ್ಲಿನ ಪತ್ರಕರ್ತರು.

ಇವತ್ತಿಗೆ ಹಣ ಎತ್ತುವುದು ಗಡ್ಕರಿ ಪಾಲಿಗೆ ದೊಡ್ಡ ವಿಚಾರವಾಗಿ ಉಳಿದಿಲ್ಲ. ಹಾಗೆ ನೋಡಿದರೆ ಇವತ್ತು ಮುಂಬೈನಿಂದ ಚುನಾವಣೆಗಳಿಗಾಗಿ ಹಣ ಸಂಗ್ರಹಿಸುತ್ತಿರುವವರು ಪಿಯೂಷ್‌ ಗೋಯಲ್‌ ಎನ್ನುತ್ತಾರೆ ದೆಹಲಿಯ ಲಾಬಿಕಾರರೊಬ್ಬರು. ಆದರೆ ಗಡ್ಕರಿಗೆ ಅವರದ್ದೇ ಆದ ಶೈಲಿಯಿದೆ. ಬೇಕೆಂದಾಗ ಅವರದನ್ನು ಜಾರಿಗೆ ತರುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ.

ಇದರ ಜತೆಗೆ ನಾನು ಸಂಘದ ನಿಯತ್ತಿನ ಬ್ರಾಹ್ಮಣ ಎಂದು ಗುರುತಿಸಿಕೊಳ್ಳಲು ಗಡ್ಕರಿ ಇಷ್ಟಪಡುತ್ತಾರೆ. ಅಷ್ಟಲ್ಲದೆ ಉದ್ಯಮ ಪರಿಣತ, ತಂತ್ರಜ್ಞಾನ ಸ್ನೇಹಿ, ಹೊಸ ತಲೆಮಾರಿನ ರಾಜಕಾರಣಿಯಾಗಿ ಅವರು ಕಾಣಿಸಿಕೊಳ್ಳುತ್ತಾರೆ ಎಂಬುದು ಹಿರಿಯ ಪತ್ರಕರ್ತೆ ಸ್ಮೃತಿ ಕೊಪ್ಪಿಕರ್ ಅಭಿಪ್ರಾಯ. ಈ ಗುಣಗಳಿಂದಲೇ ಅವರು ಮುಂಬೈನ ಉದ್ಯಮ ವಲಯಕ್ಕೆ ಟಿಪಿಕಲ್‌ ನಾಗಪುರದ ಸಂಘದ ಮನುಷ್ಯರಿಗಿಂತ ಭಿನ್ನವಾಗಿ ಕಾಣಿಸುತ್ತಾರೆ. ಇಲ್ಲಿನ ಬೋರ್ಡ್‌ ರೂಂಗಳಲ್ಲಿ ತಮ್ಮ ಚಡ್ಡಿ ಕಾಣದಂತೆ ಕೋಟ್‌ ತೊಡುವ ಗಡ್ಕರಿ, ನಾಗಪುರಕ್ಕೆ ಮರಳುತ್ತಿದ್ದಂತೆ ಕೋಟ್‌ ಕಳಚಿಟ್ಟು ಖಾಕಿ ಚಡ್ಡಿಗೆ ಬರುತ್ತಾರೆ. ಹೀಗೆ ಕೋಟ್‌ ಮತ್ತು ಖಾಕಿ ಚಡ್ಡಿಯ ಸಮತೋಲನವನ್ನು ಅವರು ಅರಿತಿದ್ದಾರೆ ಎನ್ನುತ್ತಾರೆ ದಿಲೀಪ್‌ ದೇವೋಧರ್‌. ಅವರು ಬ್ರಾಹ್ಮಣರಾದರೂ ಅವರ ಕೆಲಸದ ರೀತಿ ಭಿನ್ನವಾಗಿದೆ ಎನ್ನುವುದು ಅವರ ಅಂಬೋಣ.

‘ಗಡ್ಕರಿ ಅವರೆಂದೂ ಮೋದಿಯಂತೆ ಕೋಮುವಾದಿ ಭಾಷಣ ಮಾಡಿದವರಲ್ಲ’ ಎನ್ನುತ್ತಾರೆ ಕನಾಟೆ. ಈ ಕಾರಣಕ್ಕೆ ದೆಹಲಿಯಲ್ಲಿರುವ ಒಂದಷ್ಟು ಜನರೂ ಗಡ್ಕರಿ ಕೈಗೆ ಅಧಿಕಾರ ಸಿಗಬೇಕು ಎಂಬ ಮಾತುಗಳನ್ನಾಡುತ್ತಿದ್ದಾರೆ.

ನಾಗಪುರದಲ್ಲಿ 2017ರಲ್ಲಿ ನಡೆದ ತಮ್ಮ ಹುಟ್ಟುಹಬ್ಬದ ದಿನ ಭಾರೀ ಜನಸ್ತೋಮವನ್ನು ಉದ್ದೇಶಿಸಿ ಮಾತು ಆರಂಭಿಸಿದ್ದ ಗಡ್ಕರಿ, ತಮ್ಮ ಪ್ರಸಕ್ತ ಸ್ಥಿತಿಯನ್ನು ವಿವರಿಸಿದ್ದರು. ಅಮೆರಿಕಾ ಅಧ್ಯಕ್ಷ ರಿಚರ್ಡ್‌ ನಿಕ್ಸನ್‌ ಮಾತುಗಳನ್ನು ಉಲ್ಲೇಖಿಸಿದ್ದ ಗಡ್ಕರಿ, ‘ಸೋತ ತಕ್ಷಣ ಮನುಷ್ಯ ಅಂತ್ಯವಾಗುವುದಿಲ್ಲ. ಕೊನೆಯಾಗುವುದು ಆತ ಸ್ಪರ್ಧೆಯನ್ನು ಬಿಟ್ಟುಕೊಟ್ಟಾಗ ಮಾತ್ರ’ ಎಂದಿದ್ದರು. ತಮ್ಮ ಬದುಕಿನ ಸೂತ್ರವನ್ನು ತೆರೆದಿಟ್ಟಿದ್ದ ಅವರು, ‘ನಿಯಮವನ್ನು ಮುರಿಯಬೇಡಿ, ನಿಯಮಗಳನ್ನು ಬಾಗಿಸಿ’ ಎಂದಿದ್ದರು. ‘ಎಲ್ಲಾ ರಾಜ್ಯದವರು ನಮ್ಮ ರಾಜ್ಯಕ್ಕೆ ಗಡ್ಕರಿ ಒಳ್ಳೆಯದು ಮಾಡುತ್ತಾನೆ ಎನ್ನುತ್ತಾರೆ’ ನನಗೆ ಅದೇ ಖುಷಿ ಎಂದು ಸಭೆಯಲ್ಲಿ ಬೀಗಿದ್ದರು.

ಅದೇ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಶರದ್‌ ಪವಾರ್‌, ‘ಆರ್‌ಎಸ್‌ಎಸ್‌ ಹಿನ್ನೆಲೆಯಿಂದ ಬಂದು ಅದರ ಸಿದ್ಧಾಂತಗಳಿಂದ ಹೊರ ಬಂದಿರುವ, ಎಲ್ಲಾ ಪಕ್ಷಗಳ ಮತ್ತು ರಾಜಕಾರಣಿಗಳ ಜತೆ ಉತ್ತಮ ಸಂಬಂಧ ಹೊಂದಿರುವ ಮೊದಲ ಬಿಜೆಪಿ ನಾಯಕ ನಿತಿನ್‌ ಗಡ್ಕರಿ’ ಎಂದು ಹೊಗಳಿದ್ದರು.

ಹೀಗೊಂದು ಬಹಿರಂಗ ಇಮೇಜ್‌ ಜತೆಗೆ ಸಂಘದ ಆಂತರಿಕ ವಿಚಾರಗಳೂ ತಮಗೆ ಪೂರಕವಾಗಿರುವಂತೆ ಅವರು ನೋಡಿಕೊಂಡಿದ್ದರು. 2018ರ ಫೆಬ್ರವರಿಯಲ್ಲಿ ‘ಭಯ್ಯಾಜಿ’ ಎಂದೇ ಜನಪ್ರಿಯರಾಗಿರುವ ಸುರೇಶ್‌ ರಾವ್‌ ಜೋಶಿಯನ್ನು ಮೂರು ವರ್ಷಗಳ ಅವಧಿಗೆ ನಾಲ್ಕನೇ ಬಾರಿಗೆ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿತ್ತು. ಈ ಸ್ಥಾನಕ್ಕೆ ಮೋದಿ ಆಪ್ತ ದತ್ತಾತ್ರೇಯ ಹೊಸಬಾಳೆ ನೇಮಕವಾಗಲಿದ್ದಾರೆ ಎಂದುಕೊಳ್ಳಲಾಗಿತ್ತು. ಆದರೆ ಹಾಗಾಗದೆ ಮೋದಿ ಮುಖಭಂಗಕ್ಕೀಡಾಗಿದ್ದರು. ಇದರ ಜತೆಗೆ ಹೊಸಬಾಳೆ ನಿರ್ವಹಿಸುತ್ತಿರುವ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಮನಮೋಹನ್‌ ವೈದ್ಯ ಕೂಡ ಇದ್ದಾರೆ. ಎಂಜಿ ವೈದ್ಯರ ಪುತ್ರರಾಗಿರುವ ಇವರು ಮೋದಿಯನ್ನು ವಿರೋಧಿಸುತ್ತಾ, ಗಡ್ಕರಿ ಪರವಾಗಿ ಬ್ಯಾಟಿಂಗ್‌ ಮಾಡುತ್ತಲೇ ಬಂದವರು. ತಂಡದ ಇನ್ನೋರ್ವ ಸದಸ್ಯ ಕೃಷ್ಣ ಗೋಪಾಲ್‌ ಅವರಿಗೂ ಗಡ್ಕರಿ ಜತೆಗಿನದ್ದು ಉತ್ತಮ ಬಾಂಧವ್ಯ. ಮೇಲೆ ಕುಳಿತ ಭಾಗವತ್‌ ಜತೆಗಂತೂ ಗಡ್ಕರಿ ಗಳಸ್ಯ ಕಂಠಸ್ಯ. ಈಗ ಸಂಘದಲ್ಲಿ ಮೋದಿ ಪೂರ್ಣ ಪ್ರಮಾಣದಲ್ಲಿ ಕಡೆಗಣನೆಗೆ ಒಳಗಾಗಿದ್ದರು.

ಒಂದೊಮ್ಮೆ ಮೋದಿ 2024ರವರೆಗೆ ಇದ್ದರೆ ಆಗ ಗಡ್ಕರಿ ಜಾಗದಲ್ಲಿ ಫಡ್ನವೀಸ್‌ ಮುಂದೆ ಬರಲಿದ್ದಾರೆ. ಇದಕ್ಕೆ ಗಡ್ಕರಿ ಮತ್ತು ಮೋದಿ ಇಬ್ಬರೂ ಬೆಂಬಲಿಸಲಿದ್ದಾರೆ ಎನ್ನುತ್ತಾರೆ ಗಡ್ಕರಿ ಸಹಾಯಕರು. ‘ಪ್ರಧಾನಿ ಯಾರಾಗಬೇಕು ಎಂಬುದನ್ನು ಮೋದಿ ನಿರ್ಧರಿಸಲಿದ್ದಾರೆ. ಇದಕ್ಕೆ ಸಂಘ ಮತ್ತು ಕಾರ್ಪೊರೇಟ್‌ಗಳು ತಮ್ಮ ಅಭಿಪ್ರಾಯ ಸೇರಿಸಲಿದ್ದಾರೆ. ಮೋದಿ ಬಹುಶಃ ಫಡ್ನವೀಸ್‌ರನ್ನು ಆಯ್ಕೆ ಮಾಡಬಹುದು. ಇದಕ್ಕೆ ಸಂಘ ಅಡ್ಡಿ ಪಡಿಸಲಾರದು,’ ಎನ್ನುತ್ತಾರೆ ಅವರು.

ಗಡ್ಕರಿಗೆ ಫಡ್ನವೀಸ್‌ ತಮ್ಮ ಪ್ರತಿ ಸ್ಪರ್ಧಿ ಎನ್ನುವುದು ಗೊತ್ತಿದೆ. ಈ ಕಾರಣಕ್ಕೆ ಅವರ ತಂಡ 2019ಕ್ಕೇ ಸಿದ್ಧತೆ ಆರಂಭಿಸಿದೆ. ಮೊದಲಿಗೆ 2019ರಲ್ಲಿ ನಾಗಪುರ ಸ್ಥಾನವನ್ನು ಉಳಿಸಿಕೊಳ್ಳುವುದು ಇವರ ಮೊದಲ ಯೋಜನೆ. ಮಾತ್ರವಲ್ಲದೆ ಬರೋಬ್ಬರಿ 7 ಲಕ್ಷ ಮತಗಳ ಅಂತರದಿಂದ ಇಲ್ಲಿ ಗೆಲುವು ಸಾಧಿಸಬೇಕು ಎಂಬ ಗುರಿ ಹಾಕಿಕೊಂಡಿದ್ದಾರೆ. ಜತೆಗೆ ಬಹಿರಂಗವಾಗಿ ಮೋದಿ ವಿರುದ್ಧ ಮೆಲ್ಲ ಮೆಲ್ಲನೆ ಅಪಸ್ವರ ಎತ್ತಲು ಆರಂಭಿಸಿದ್ದಾರೆ.

‘ಒಂದೊಮ್ಮೆ 2019ರಲ್ಲಿ ಮತ್ತೆ ಐದು ವರ್ಷಗಳ ಅಧಿಕಾರವನ್ನು ಮೋದಿ ಪಡೆದುಕೊಂಡರೂ ಗಡ್ಕರಿ ಕಾಯಲು ಸಿದ್ಧವಾಗಿದ್ದಾರೆ. ಅವರು ತಾಳ್ಮೆಯಿಂದ ಕಾಯಬಲ್ಲರು’ ಎನ್ನುತ್ತಾರೆ ಕನಾಟೆ. ಸದ್ಯಕ್ಕೆ ಈ ಸರಕಾರ ಅನುಭವದ ಕೊರತೆಯಿಂದ ಬಳಲುತ್ತಿದ್ದು ಗಡ್ಕರಿಗೆ ಹಾಗಾಗದಿರಲಿ ಎಂಬುದು ಆರ್‌ಎಸ್‌ಎಸ್‌ ಬಯಕೆಯಾಗಿದೆ. ಅದಕ್ಕಾಗಿ ಅವರೂ ಅನುಭವ ಪಡೆದುಕೊಳ್ಳಲಿ ಎಂದು ಸಂಘ ಕಾಯುತ್ತಿದೆ.

ಇನ್ನು, ಮೋದಿ ಜ್ವರ ಈಗ ಇಳಿದಿದೆ. ಈಗೇನಿದ್ದರೂ ಇರುವುದು ಕೃತಕ ಜ್ವರವಷ್ಟೇ. ಅದೆಲ್ಲಾ ಮುಂದೆ ಇಳಿದು ಹೋಗುತ್ತದೆ ಎನ್ನುತ್ತಾರೆ ಅವರು. ಆಗ ತಾವು ಪ್ರಧಾನಿಯಾಗಬಲ್ಲೆ ಎಂಬ ಯೋಜನೆಯನ್ನು ಗಡ್ಕರಿ ಹಾಕಿಕೊಂಡಂತಿದೆ. ಅದಕ್ಕೆ ಬೇಕಾದ ಸಿದ್ಧತೆಗಳನ್ನೂ ಅವರು ಮುಗಿಸಿದ್ದಾರೆ. ಆದರೆ ಮೋದಿ ಸುಮ್ಮನೆ ಕೂರುವ ಗಿರಾಕಿಯಲ್ಲ. ಹೀಗಿರುವಾಗ ಇವರ ಸಮರದಲ್ಲಿ ಗೆಲ್ಲುವವರಾರು? ಉತ್ತರಕ್ಕಾಗಿ 2019ರ ಲೋಕಸಭೆ ಚುನಾವಣೆವರೆಗೆ ಕಾಯಲೇಬೇಕು.

ಕೃಪೆ: ದಿ ಕ್ಯಾರವಾನ್

Also read: ‘ಸಂಘಿ ಪುತ್ರ’-1: ಮೋದಿಗೇ ಪರ್ಯಾಯ; ಆರ್‌ಎಸ್‌ಎಸ್ ಆಪ್ತ, ಯಾರೀತ ನಿತಿನ್ ಗಡ್ಕರಿ?