samachara
www.samachara.com
ಸಂಘಿ ಪುತ್ರ - 4: ಮುಂಬೈನಿಂದ ಡೆಲ್ಲಿಗೆ ಬಂದ ಗಡ್ಕರಿ ಮೇಲಿತ್ತು 2 ಕೊಲೆ, ಹತ್ತಾರು ಭ್ರಷ್ಟಾಚಾರದ ಆರೋಪ!
COVER STORY

ಸಂಘಿ ಪುತ್ರ - 4: ಮುಂಬೈನಿಂದ ಡೆಲ್ಲಿಗೆ ಬಂದ ಗಡ್ಕರಿ ಮೇಲಿತ್ತು 2 ಕೊಲೆ, ಹತ್ತಾರು ಭ್ರಷ್ಟಾಚಾರದ ಆರೋಪ!

ಗಡ್ಕರಿ ಹೆಸರು ಭ್ರಷ್ಟಾಚಾರದಾಚೆಗೆ ಎರಡು ಕೊಲೆ ಪ್ರಕರಣದಲ್ಲಿಯೂ ಕೇಳಿ ಬಂತು. ಮೊದಲನೆಯದ್ದು ನಡೆದಿದ್ದು 2009ರಲ್ಲಿ. 7 ವರ್ಷ ಪ್ರಾಯದ ಯೋಗಿತಾ ಠಾಕ್ರೆ ಎಂಬ ಬಾಲಕಿಯ ಮೃತದೇಹ ಗಡ್ಕರಿ ಮನೆಯ ಕಾರಿನಲ್ಲಿ ಪತ್ತೆಯಾಗಿತ್ತು.

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

  • ಭಾಗ- 4

ಗಡ್ಕರಿ ತಮ್ಮ ಇರಾದೆಗಳನ್ನು ಬಿಜೆಪಿ ಮೇಲೆ ಹೇರಲು ಹೊರಡುತ್ತಿದ್ದಂತೆ ಆರ್‌ಎಸ್‌ಎಸ್‌ ಮತ್ತು ಅಡ್ವಾಣಿ ನೇತೃತ್ವದ ಕಮಲ ಪಕ್ಷದ ನಡುವಿನ ಸಮತೋಲನ ತಪ್ಪಿ ಹೋಯಿತು. ದೆಹಲಿಯಲ್ಲಿರುವ ಬಿಜೆಪಿ ನಾಯಕರೆಲ್ಲಾ ಅಡ್ವಾಣಿ ಜತೆಗಿದ್ದರು. ಹಾಗಾಗಿ ಗಡ್ಕರಿ ಅಧ್ಯಕ್ಷರಾಗಿದ್ದ ಅವಧಿ ಸಂಪೂರ್ಣ ಬಿಕ್ಕಟ್ಟಿನಿಂದಲೇ ಕೂಡಿತ್ತು.

2011ರ ಹೊತ್ತಿಗೆ ಗಡ್ಕರಿಯನ್ನು ವಿರೋಧ ಪಕ್ಷದ ನಾಯಕನನ್ನಾಗಿ ಬಿಂಬಿಸುವುದು ಆ ಮೂಲಕ ಮುಂದಿನ ದಿನಗಳಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸುವುದು ಆರ್‌ಎಸ್‌ಎಸ್‌ ತಂತ್ರವಾಗಿತ್ತು. ಅದಕ್ಕಾಗಿ ಗಡ್ಕರಿ ತಯಾರಿಯನ್ನೂ ಆರಂಭಿಸಿದ್ದರು. ತೂಕ ಕಡಿಮೆ ಮಾಡಿಕೊಳ್ಳುವ ಶಸ್ತ್ರ ಚಿಕಿತ್ಸೆಯನ್ನು ಮುಗಿಸಿದ್ದರು. ವಾರ್ಧಾ ಮತ್ತು ನಾಗಪುರ ಎಂಬ ಭವಿಷ್ಯದ ಲೋಕಸಭಾ ಕ್ಷೇತ್ರಗಳಿಗೆ ನೀರೆರಯಲು ಆರಂಭಿಸಿದ್ದರು.

ಆದರೆ ಇದಕ್ಕೆ ನರೇಂದ್ರ ಮೋದಿಯ ರಂಗ ಪ್ರವೇಶ ಅಡ್ಡಗಾಲಾಯಿತು. ಆರ್‌ಎಸ್‌ಎಸ್‌ನ ಸುಸಜ್ಜಿತ ಯೋಜನೆಗಳೆಲ್ಲಾ ಬುಡ ಮೇಲಾದವು. ಅಧ್ಯಕ್ಷ ಹುದ್ದೆ ಕಳೆದುಕೊಂಡ ಗಡ್ಕರಿ ನಾಗಪುರಕ್ಕೆ ಹಿಂದುರುಗಿದರು. ಬಂದವರೇ ಇದೇ ನನ್ನ ಲೋಕಸಭಾ ಕ್ಷೇತ್ರ, ಇಲ್ಲಿಂದಲೇ ನಾನು ದೆಹಲಿಗೆ ಹಾರಬೇಕು ಎಂದು ನಿರ್ಧರಿಸಿದರು.

ವಿಮಾನದಲ್ಲಿ ನಾಗಪುರಕ್ಕೆ ಬಂದಿಳಿದ ಗಡ್ಕರಿ ಎದುರಿಗೆ ನಿಂತು ಮೈಕು ಹಿಡಿದವರಿಗೆ, 'ಈ ದಾಳಿಗಳ ಹಿಂದೆ ಯಾರ ಸಂಚಿದೆ ಎಂಬುದು ಗೊತ್ತಿದೆ' ಎಂದು ಅಬ್ಬರಿಸಿದರು. ಮರುಕ್ಷಣದಿಂದ ತಣ್ಣಗೆ ಲೋಕಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿದರು. ನೆನಪಿಡಿ ಬರೋಬ್ಬರಿ 29 ವರ್ಷಗಳ ನಂತರ ಗಡ್ಕರಿ ನೇರವಾಗಿ ಚುನಾವಣೆಯೊಂದನ್ನು ಎದುರಿಸಲು ಹೊರಟಿದ್ದರು. ದಲಿತ-ಮುಸ್ಲಿಂ-ಒಬಿಸಿ ಮತ ಬ್ಯಾಂಕ್‌ ಆಗಿದ್ದ ನಾಗಪುರದಲ್ಲಿ ಹೆಚ್ಚಿನವರು ಕಾಂಗ್ರೆಸ್‌ಗೆ ಮತ ಹಾಕುತ್ತಾ ಬಂದಿದ್ದರು. ಪರಿಣಾಮ ಇಲ್ಲಿ ಒಮ್ಮೆ ಮಾತ್ರ ಬಿಜೆಪಿ ಗೆದ್ದಿತ್ತು ಅದೂ ಪ್ರಭಾವಿ ಕಾಂಗ್ರೆಸ್‌ ಸಂಸದರೊಬ್ಬರು ಬಿಜೆಪಿಗೆ ಬಂದು ಸ್ಪರ್ಧಿಸಿದ್ದರಿಂದ. ಅದು ಬಿಟ್ಟರೆ ಮತ್ತೆಂದೂ ಕಮಲ ಅರಳದ ಜಾಗದಲ್ಲಿ ಗಡ್ಕರಿ ತಮ್ಮ ಜೀವಮಾನದ ನಿರ್ಣಾಯಕ ಹೋರಾಟಕ್ಕೆ ಇಳಿದಿದ್ದರು.

ಹಾಗೆ ನೋಡಿದರೆ 2009ರಲ್ಲೇ ಇಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆ ಇತ್ತು. ಆದರೆ ಸ್ಥಳೀಯ ಅಭ್ಯರ್ಥಿ ಗಡ್ಕರಿ ವಿರೋಧಿಯಾಗಿದ್ದರು. ಹಾಗಾಗಿ ಅವರು ಸೋಲಬೇಕಾಯಿತು. ಆದರೆ ಈ ಬಾರಿ ಅವರೇ ಕಣಕ್ಕಿಳಿಯಲು ಹೊರಟಿದ್ದರು. ಅದಕ್ಕೆ ಬೇಕಾದ ಸಿದ್ಧತೆಗಳನ್ನು ಅವರು ರಾಷ್ಟ್ರಾಧ್ಯಕ್ಷರಾಗಿದ್ದಾಗಲೇ ಮಾಡಿದ್ದರು. ವಿದರ್ಭದ ಭಾಗದ ಎಲ್ಲಾ ಜಿಲ್ಲೆಗಳ ಅಧ್ಯಕ್ಷರಿಗೂ ಓಡಾಟಕ್ಕೆ ಕಾರುಗಳನ್ನು ಕೊಡಿಸಿದ್ದರು. ತಾವು ಸಚಿವರಾಗಿದ್ದಾಗ ತಮ್ಮಿಂದ ಸಹಾಯ ಪಡೆದಿದ್ದ ಉದ್ಯಮಿಗಳಿಂದ ಈಗ ವಸೂಲಿ ಮಾಡಿದ್ದರು. ಹೀಗೆ ಸ್ಥಳೀಯ ಮಟ್ಟದಲ್ಲಿ ಪಕ್ಷವನ್ನು ಆರ್ಥಿಕವಾಗಿ, ಸಂಘಟನಾತ್ಮಕವಾಗಿ ಗಟ್ಟಿಗೊಳಿಸಿ ಮತ ಬ್ಯಾಂಕ್‌ ಬುಟ್ಟಿಗೆ ಕೈಹಾಕಲು ಹೊರಟರು. ಆಗ ಅವರಿಗೆ ಮಾಜಿ ವೈರಿಗಳೂ ಸಾಥ್‌ ನೀಡಿದರು. ಉದಾಹರಣೆಗೆ ವಿದರ್ಭದ ಎಲ್ಲಾ ಪ್ರಮುಖ ಕಾಂಗ್ರೆಸ್‌ ಮತ್ತು ಎನ್‌ಸಿಪಿ ಕುಟುಂಬಗಳು ಈಗ ಬಿಜೆಪಿಯಲ್ಲಿದ್ದವು.

ಅದೇ ಕಾಲಕ್ಕೆ ತಮ್ಮ ವಿರೋಧಿಗಳನ್ನು ಬಿಜೆಪಿಯಿಂದ ಹೊರಗಟ್ಟಿದ್ದರು ಗಡ್ಕರಿ. '1999ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ತಂದೆ ಸೋಲಲು ಗಡ್ಕರಿ ಕಾರಣ’ ಎನ್ನುತ್ತಾರೆ ಮಾಜಿ ಬಿಜೆಪಿ ನಾಯಕ ವಿನೋದ್‌ ಗುಡಾಧೆ ಪಾಟೀಲ್‌ ಪುತ್ರ ಪ್ರಫುಲ್‌ ಪಾಟೀಲ್‌. 1990ರಲ್ಲಿ ನಾಗಪುರದಿಂದ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದವರು ಬಿಜೆಪಿಯ ಈ ವಿನೋದ್‌ ಪಾಟೀಲ್. ಅವರು 1995ರಲ್ಲಿಯೂ ಕ್ಷೇತ್ರವನ್ನೂ ಉಳಿಸಿಕೊಂಡಿದ್ದರು. ಒಬಿಸಿ ನಾಯಕರಾದ ಅವರು ಬಿಜೆಪಿಯತ್ತ ಹಿಂದುಳಿದ ವರ್ಗಗಳು ಬರುವಂತೆ ನೋಡಿಕೊಂಡಿದ್ದರು. ಆದರೆ ಗಡ್ಕರಿ ಜತೆಗಿನ ಮುನಿಸು ಅವರನ್ನು ಪಕ್ಷ ಬಿಡುವಂತೆ ಪ್ರೇರೇಪಿಸಿತ್ತು. "ಗಡ್ಕರಿ ಪಕ್ಷವನ್ನು ತಮ್ಮ ಮನೆಯೆಂದುಕೊಂಡಿದ್ದಾರೆ. ನಾವೆಲ್ಲಾ ಅಲ್ಲಿ ಸೇವಕರು," ಎನ್ನುತ್ತಾರೆ ತಂದೆ ಜತೆ ಬಿಜೆಪಿ ಬಿಟ್ಟ ಪ್ರಫುಲ್‌ ಪಾಟೀಲ್‌. ಮುಂದೆ ಈ ಪಾಟೀಲ್‌ ಜಾಗಕ್ಕೆ ಬಂದವರು ಹಾಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌; ಬ್ರಾಹ್ಮಣರು. ಮೇಲಾಗಿ ಭಾಗವತ್‌ ಆಪ್ತರು. ಆರ್‌ಎಸ್‌ಎಸ್‌ಗೆ ತೀರಾ ಸಮೀಪದವರು.

ಪಕ್ಷ ಬಿಟ್ಟು ಕಾಂಗ್ರೆಸ್‌ ಸೇರಿದ ಪ್ರಫುಲ್‌ ಪಾಟೀಲ್‌ ಬಿಜೆಪಿಗೆ ಯಾರೂ ಒಬಿಸಿ ನಾಯಕರು ಬರದಂತೆ ನೋಡಿಕೊಂಡಿದ್ದರು. ನಿಮ್ಮನ್ನು ಬಳಸಿ ಬಿಸಾಕುತ್ತಾರೆ ಎಂಬುದನ್ನು ಈ ನಾಯಕರಿಗೆ ಮನವರಿಕೆ ಮಾಡಿದ್ದರು. ಆದರೆ ಗಡ್ಕರಿ ಇನ್ನೂ ಚಾಣಾಕ್ಷರಾಗಿದ್ದರು. ಒಬಿಸಿ ನಾಯಕರನ್ನು ಹೊರಗಟ್ಟಿದ್ದರೂ ಅವರ ಮತಗಳನ್ನು ಬಿಜೆಪಿಯಲ್ಲಿ ಉಳಿಯುವಂತೆ ನೋಡಿಕೊಂಡಿದ್ದರು.

ನಾಗಪುರದಲ್ಲಿ ಮುಸ್ಲಿಂ ಮಹಿಳೆಯೊಂದಿಗೆ ಪ್ರಚಾರ ನಿರತ ನಿತಿನ್‌ ಗಡ್ಕರಿ.
ನಾಗಪುರದಲ್ಲಿ ಮುಸ್ಲಿಂ ಮಹಿಳೆಯೊಂದಿಗೆ ಪ್ರಚಾರ ನಿರತ ನಿತಿನ್‌ ಗಡ್ಕರಿ.
/ಬಿಜೆಪಿ ಬ್ಲಾಗ್. 

ಒಬಿಸಿ ನಂತರ ಮುಸ್ಲಿಂ ಮತಗಳಿಗೂ ಕಣ್ಣು ಹಾಕಿದ ಗಡ್ಕರಿ 2013ರಲ್ಲಿ ಮುಸ್ಲಿಂ ಮಹಿಳೆಯನ್ನು ನಾಗಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬೆಂಬಲಿಸಿದರು. ಗಡ್ಕರಿ ಬೆಂಬಲದ ಮೇರೆಗೆ ಜೈಟುಂಬಿ ಅಶ್ಫಖ್‌ ಪಟೇಲ್‌ ಎಂಬಾಕೆ ನಾಗಪುರ ಉಪ ಮಹಾಪೌರರಾಗಿ ಆಯ್ಕೆಯಾದರು. ಅಷ್ಟೇ ಅಲ್ಲ, ಮೋದಿಯನ್ನು ನಾಗಪುರಕ್ಕೆ ಕಾಲಿಡದಂತೆ ಗಡ್ಕರಿ ನೋಡಿಕೊಂಡರು. ಕಾರಣ ಗಡ್ಕರಿಗೆ ಮೋದಿಯ ಮತಗಳ ಧ್ರುವೀಕರಣ ಬೇಕಾಗಿರಲಿಲ್ಲ. ಅಷ್ಟೇ ಅಲ್ಲದೆ ಗೆಲುವಿನ ಕ್ರೆಡಿಟ್‌ನ್ನು ಇನ್ನೊಬ್ಬರಿಗೆ ನೀಡಲೂ ಅವರು ಸಿದ್ಧರಿರಲಿಲ್ಲ.

ಒಬಿಸಿ-ಮುಸ್ಲಿಂ ಮಿಷನ್‌ಗಳು ಪೂರ್ಣಗೊಳ್ಳುತ್ತಿದ್ದಂತೆ ಬಾಕಿ ಉಳಿದಿದ್ದ ದಲಿತ ಮತಬ್ಯಾಂಕ್‌ಗೆ ಗಡ್ಕರಿ ಕನ್ನ ಕೊರೆದರು. ದಲಿತ ನಾಯಕರನ್ನು ಪಕ್ಷದೊಳಕ್ಕೆ ಎಳೆದು ತರಲು ಆರಂಭಿಸಿದರು. ಅವರಲ್ಲಿ ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾದ ಮಿಲಿಂದ್‌ ಮಾನೆ ಪ್ರಮುಖರು. ಹೀಗೆ ಬಿಜೆಪಿಯ 'ಬ್ರಾಹ್ಮಣರ ಪಕ್ಷ' ಹಣೆಪಟ್ಟಿ ಕಿತ್ತೊಗೆದು ಜನಸಾಮಾನ್ಯರ ಪಕ್ಷ ಎಂಬ ಹೆಸರು ಬರುವಂತೆ ನೋಡಿಕೊಂಡರು ಎನ್ನುತ್ತಾರೆ ತರುಣ್‌ ಭಾರತ್‌ ಸಂಪಾದಕ ಗಜಾನನ್‌ ನಿಮ್‌ದೇವೋ.

ಇದೆಲ್ಲದಕ್ಕಿಂತ ಒಂದು ಹೆಜ್ಜೆ ಮುಂದೆ ಹೋದ ಗಡ್ಕರಿ ವಿದರ್ಭ ಪ್ರತ್ಯೇಕ ರಾಜ್ಯ ಬೇಡಿಕೆಯನ್ನು ಬೆಂಬಲಿಸಿದರು. ಇವೆಲ್ಲದರ ಒಟ್ಟು ಪರಿಣಾಮ 2014ರ ಲೋಕಸಭೆ ಚುನಾವಣೆಯ ಫಲಿತಾಂಶ ಬಂದಾಗ 3 ಲಕ್ಷಕ್ಕಿಂತ ಹೆಚ್ಚು ಮತಗಳಿಂದ ಗಡ್ಕರಿ ಜಯಭೇರಿ ಬಾರಿಸಿದರು.

ಚುನಾವಣೆ ಗೆದ್ದ ಗಡ್ಕರಿ ಎಲ್ಲರ ಕೈಗೂ ಸಿಗುತ್ತಿದ್ದರು. ಅವರ ಮನೆಗೆ ಮುಕ್ತ ಪ್ರವೇಶವಿತ್ತು. ಜತೆಗೊಂದಿಷ್ಟು ಅಭಿವೃದ್ಧಿ ಕಾರ್ಯಗಳು ಗಡ್ಕರಿಯನ್ನು ಯಶಸ್ವಿ ರಾಜಕಾರಣಿಯನ್ನಾಗಿಸಿದ್ದವು. ಆದರೆ ಅವರ ವಿರುದ್ಧ ಕೇಳಿ ಬಂದ ಹಗರಣಗಳೇ ಗಡ್ಕರಿಗೆ ಕಪ್ಪು ಚುಕ್ಕೆಗಳಾಗಿದ್ದವು.

2008ರಲ್ಲಿ ಸರಕಾರಿ ಭೂಮಿಯನ್ನು ಹೆಚ್ಚುವರಿ ಹಂಚಿಕೆ ಮಾಡಿದ ಸಂಬಂಧ ತನಿಖಾ ಆಯೋಗವನ್ನು ರಚಿಸಲಾಗಿತ್ತು. ಇದರಲ್ಲಿ 1990ರಿಂದ 2006ರ ನಡುವಿನ ಈ ರೀತಿಯ ಹಂಚಿಕೆಗಳನ್ನು ತನಿಖೆಗೆ ಒಳಪಡಿಸಲಾಗಿತ್ತು. 'ಹೆಚ್ಚಿನ ಭೂ ಹಂಚಿಕಗಳನ್ನು ಶಾಸಕ/ಸಚಿವ ನಿತಿನ್‌ ಗಡ್ಕರಿ ಶಿಫಾರಸ್ಸು ಮಾಡಿದ್ದಾರೆ. ಅವರು ಶಿಫಾರಸ್ಸು ಮಾಡಿದ ಭೂಮಿಗಳ ಸಂಖ್ಯೆ 16’ ಎಂದು ಆಯೋಗ ವರದಿ ನೀಡಿತ್ತು. ಮುಂದೆ 2012ರಲ್ಲಿ ಬಿಜೆಪಿ ರಾಜ್ಯಸಭಾ ಸದಸ್ಯ ಅಜಯ್ ಸಂಚೇಟಿ ಹೆಸರು ಕೋಲ್‌ಗೇಟ್‌ನಲ್ಲಿ ಕೇಳಿ ಬಂತು. 1,000 ಕೋಟಿ ರೂಪಾಯಿಗಳ ಈ ಹಗರಣದಲ್ಲಿ ಗಡ್ಕರಿ ಮತ್ತು ಸಂಚೇಟಿ ನಡುವಿನ ಸಂಬಂಧ ಚರ್ಚೆಗೆ ಗ್ರಾಸವಾಯಿತು. ಈ ಸಂದರ್ಭದಲ್ಲಿ ಗಡ್ಕರಿ ಪಕ್ಷದ ಅಧ್ಯಕ್ಷರಾಗಿರಲಿಲ್ಲ, ಸಂಚೇಟಿ ರಾಜ್ಯಸಭೆ ಪ್ರವೇಶಿಸಿರಲಿಲ್ಲ ಅಷ್ಟೇ.

ಮುಂದೆ ನಾಗಪುರದ ಆರೆಂಜ್‌ ಸಿಟಿ ವಾಟರ್‌ ಯೋಜನೆಯನ್ನು ಖಾಸಗಿಯವರಿಗೆ ನೀಡಲಾಯಿತು. ಆಗ ನಾಗಪುರದ ಮಹಾನಗರ ಪಾಲಿಕೆ ಬಿಜೆಪಿ ಹಿಡಿತದಲ್ಲಿತ್ತು. ಈ ಯೋಜನೆಯ ಗುತ್ತಿಗೆ ತೆಗೆದುಕೊಂಡ ವಿಶ್ವರಾಜ್‌ ಎನ್ವಿರಾನ್‌ಮೆಂಟ್‌ ನಿರ್ದೇಶಕ ಅರಣ್‌ ಲಖಾನಿ ಕೂಡ ಗಡ್ಕರಿ ಆಪ್ತ ಗುಂಪಿನಲ್ಲಿದ್ದರು. ಹಾಗಾಗಿ ಅವರು ಈ ಯೋಜನೆಯ ಖಾಸಗೀಕರಣವನ್ನು ಬೆಂಬಲಿಸಿದರು. ವಿಶೇಷವೆಂದರೆ ಒಂದು ವರ್ಷ ಮೊದಲು ಇದನ್ನು ಆರ್‌ಎಸ್‌ಎಸ್‌ ವಿರೋಧಿಸಿತ್ತು. ಆದರೆ ಈಗ ಗಡ್ಕರಿಗಾಗಿ ಸಂಘವೂ ಮೌನಕ್ಕೆ ಜಾರಿತು. ಮುಂದೆ ಈ ಯೋಜನೆ ಜಾರಿಯಾದ ನಂತರ ಕಂಪನಿ ಕಲುಷಿತ ನೀರು ಪೂರೈಕೆ, ನೀರು ಸರಿಯಾಗಿ ಬಿಡುಗಡೆ ಮಾಡದೇ ಇರುವುದು ಮೊದಲಾದ ದೂರುಗಳಿಗೆ ಗುರಿಯಾದರೂ ಗಡ್ಕರಿ, ಕಾಂಗ್ರೆಸ್‌ ಎಲ್ಲರೂ ಸುಮ್ಮನಿದ್ದರು.

‘ಭಾವ-ಭಂಗಿ’: ಝೀ ಗ್ರೂಪ್‌ ಅಧ್ಯಕ್ಷ ಸುಭಾಷ್‌ ಚಂದ್ರ ಆತ್ಮಕಥೆ ಬಿಡುಗಡೆ ಕಾರ್ಯಕ್ರಮದಲ್ಲಿ ನಿತಿನ್‌ ಗಡ್ಕರಿ ಮತ್ತು ಶರದ್‌ ಪವಾರ್‌.
‘ಭಾವ-ಭಂಗಿ’: ಝೀ ಗ್ರೂಪ್‌ ಅಧ್ಯಕ್ಷ ಸುಭಾಷ್‌ ಚಂದ್ರ ಆತ್ಮಕಥೆ ಬಿಡುಗಡೆ ಕಾರ್ಯಕ್ರಮದಲ್ಲಿ ನಿತಿನ್‌ ಗಡ್ಕರಿ ಮತ್ತು ಶರದ್‌ ಪವಾರ್‌.
/ಡಿಎನ್‌ಎ

ಗಡ್ಕರಿ ಕಥೆಗಳು ಇಲ್ಲಿಗೇ ನಿಲ್ಲುವುದಿಲ್ಲ. 2016ರಲ್ಲಿ ಬಿಡುಗಡೆಯಾದ ತಮ್ಮ ಆತ್ಮಚರಿತ್ರೆಯಲ್ಲಿ ಮಾಧ್ಯಮ ಕುಳ ಸುಭಾಷ್‌ ಚಂದ್ರ, 'ಅರುಣ್‌ ಲಖಾನಿಗೆ ನನ್ನನ್ನು ಗಡ್ಕರಿ ಪರಿಚಯಿಸಿದ್ದರು. ಲಖಾನಿ ಮಹಾರಾಷ್ಟ್ರದಲ್ಲಿ ಹೆದ್ದಾರಿಗಳನ್ನು ಸರಕಾರಿ-ಖಾಸಗಿ ಪ್ರಾಯೋಜಕತ್ವದಲ್ಲಿ ನಿರ್ಮಿಸುತ್ತಿದ್ದರು. ನಾವು ಅವರ ಕಂಪನಿಯಲ್ಲಿ ಹಣ ಹೂಡಿದೆವು,' ಎಂದು ಬರೆದುಕೊಂಡಿದ್ದಾರೆ. ಗಡ್ಕರಿ ಮತ್ತು ಅವರು ಉದ್ಯಮ ಸಂಬಂಧಗಳು ಹೇಗಿರುತ್ತವೆ ಎಂಬುದಕ್ಕೆ ಈ ಉದಾಹರಣೆಯೇ ಸಾಕು.

ಮುಂದೆ ನಾಗಪುರದ ಕಸ ವಿಲೇವಾರಿ, ಬಸ್‌ ಸೇವೆಗಳು ಮತ್ತು ವಿದ್ಯುತ್‌ ಪೂರೈಕೆಯನ್ನು ಖಾಸಗಿಯವರಿಗೆ ನೀಡಲಾಯಿತು. ಕಸ ಸಂಗ್ರಹಣೆಯಲ್ಲಿ 2015ರಲ್ಲಿ 10 ಕೋಟಿ ರೂ, 2017ರಲ್ಲಿ 25 ಕೋಟಿ ರೂ, ಬಸ್‌ ಖರೀದಿಯಲ್ಲಿ 40 ಕೋಟಿ ರೂ ಹಗರಣ ಕೇಳಿ ಬಂತು. ಮುಂದಿನ ದಿನಗಳಲ್ಲಿ ನಾಗಪುರದ ಪ್ರತಿ ಕ್ಷೇತ್ರಗಳಲ್ಲೂ ಭ್ರಷ್ಟಾಚಾರ, ಹಗರಣಗಳು ಕೇಳಿ ಬಂದವು. ಹೀಗಿದ್ದೂ ಅಲ್ಲಿ ಖಾಸಗಿ ಕಂಪನಿಗಳು ತಮ್ಮ ಸುಲಿಗೆ ಮುಂದುವರಿಸಿದ್ದರು. ಇದಕ್ಕೆಲ್ಲಾ ಬೆನ್ನೆಲುಬಾಗಿ ಇರುವವರು ಗಡ್ಕರಿ ಎಂದು ಅಲ್ಲಿನವರು ನಂಬಿದ್ದಾರೆ.

ಗಡ್ಕರಿಯ ಕಾರ್ಯಶೈಲಿಯೇ ಹಾಗೆ; ವಿಚಿತ್ರವಾದುದು. ಉದಾಹರಣೆಗೆ ನಾಗಪುರದಲ್ಲಿ 20 ಎಕರೆ ಕೈಗಾರಿಕಾ ಭೂಮಿಯನ್ನು ತಮಗೆ ಬೇಕಾದ ಕಂಪನಿಯೊಂದಕ್ಕೆ ಕೊಡಿಸಲು ಅವರು ಮುಂದಾಗಿದ್ದರು. ಆದರೆ ಇದು ಸಾಧ್ಯವಾಗಲಿಲ್ಲ. ಆಗ ದಾಳ ಉರುಳಿಸಿದ ಗಡ್ಕರಿ ಈ ಭೂಮಿಯನ್ನು ಕಾಲೋನಿ ರೀತಿ ಪರಿವರ್ತಿಸಿ ಚದರ ಅಡಿಗೆ 400 ರೂಪಾಯಿಯಂತೆ ಕಡು ಬಡವರಿಗೆ ಮಾರಾಟ ಮಾಡಲು ಮುಂದಾದರು. ಇದಕ್ಕವರು ಕಾಂಗ್ರೆಸ್‌ನ ನಾರಾಯಣ ರಾಣೆ ಸಹಾಯ ಪಡೆದುಕೊಂಡರು. ಶಾಸಕರು ಮತ್ತು ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ಒಂದಷ್ಟು ಅನುದಾನ ಕೊಡಿಸಿದರು. ಒಂದಷ್ಟನ್ನು ಅನುದಾನವನ್ನು ತಾವೇ ತಂದರು.

ಇವುಗಳ ನೆರವಿನೊಂದಿಗೆ ಆರ್‌ಎಸ್‌ಎಸ್‌ಗೆ ಸೇರಿದ ಕಾರ್ಮಿಕ ಸಂಘಟನೆ ಸದಸ್ಯರನ್ನು ಒಟ್ಟು ಹಾಕಿ ಸಹಕಾರಿ ಹೌಸಿಂಗ್‌ ಸೊಸೈಟಿ ಕಟ್ಟಿ ಕಡಿಮೆ ದರದಲ್ಲಿ ಮನೆ ನಿವೇಶನಗಳನ್ನು ಸಿಗುವಂತೆ ಮಾಡಿದರು. ಅದನ್ನು ರಾಣೆ ಕೈಯಿಂದಲೇ 2013ರ ಆರಂಭದಲ್ಲಿ ಉದ್ಘಾಟಿಸಿದರು. ಅದಕ್ಕೆ ವಿಡಿ ಸಾವರ್ಕರ್‌ ಹೆಸರಿಟ್ಟರು. ಪ್ರತಿ ಮನೆಗೆ 2.3 ಲಕ್ಷ ದರ ನಿಗದಿ ಮಾಡಲಾಗಿತ್ತು. ಮುಂದೆ ದರ ಏರಿಕೆಯಾಗಿ ಇದು 6.25 ಲಕ್ಷ ತಲುಪಿತು. ಇದಕ್ಕೆ ನಾಗಪುರ ನಾಗರಿಕ ಸಹಕಾರಿ ಬ್ಯಾಂಕ್‌ನಿಂದ ಸಾಲಗಳನ್ನು ವಿತರಿಸಲಾಯಿತು. ಈ ಬ್ಯಾಂಕ್‌ ಇರುವುದು ಆರ್‌ಎಸ್‌ಎಸ್‌ ನಿಯಂತ್ರಣದಲ್ಲಿ. ಹೀಗಾಗಿ ನಾನು ಬಡವರಿಗಾಗಿ ಮನೆಗಳನ್ನು ಕಟ್ಟಿಕೊಟ್ಟೆ ಎಂಬ ಕ್ರೆಡಿಟ್‌ನ್ನು ಅವರು ಪಡೆದುಕೊಂಡರು. ಆದರೆ ಮನೆಗಳ ಸ್ಥಿತಿ ಕಳಪೆಯಾಗಿತ್ತು. ಜತೆಗೆ ಅವರು ಕ್ರೆಡಿಟ್‌ ಮಾತ್ರ ತೆಗೆದುಕೊಂಡಿದ್ದಲ್ಲ, ಬಡವರ ಹೆಸರಿನ ಹಣವನ್ನೂ ಕಿತ್ತುಕೊಂಡರು ಎನ್ನುತ್ತಾರೆ ಇಲ್ಲಿನ ನಿವಾಸಿ ಪಂಕಜ್‌ ಠಾಕ್ರೆ.

ಸರಿಯಾದ ಪೂರ್ವ ತಯಾರಿಗಳಿಲ್ಲದೆ ಈ ಕಾಲೊನಿ ನಿರ್ಮಿಸಿದ್ದರಿಂದ ಇಲ್ಲಿ ನೀರಿಲ್ಲ, ಸರಿಯಾದ ಚರಂಡಿ ವ್ಯವಸ್ಥೆಯಿಲ್ಲ ಎನ್ನುತ್ತಾರೆ ಸ್ಥಳೀಯರು. ಆದರೆ ಈ ಬಗ್ಗೆ ದೂರು ನೀಡಿದರೆ ಯಾರೂ ಸ್ವೀಕರಿಸುವುದಿಲ್ಲ. ಈ ಸಂದರ್ಭದಲ್ಲಿ ಬಂದ ಗಡ್ಕರಿ ಪ್ರತಿನಿಧಿ ವಿಷಯವನ್ನು ಸೆಟಲ್‌ ಮಾಡಲು ಮುಂದಾದರು. ಆದರೆ ನಾಗರೀಕರು ಪಟ್ಟು ಬಿಡದೆ ನ್ಯಾಯಾಲಯದ ಹಾದಿ ಹಿಡಿದರು. ಅಷ್ಟೇ ಅಲ್ಲ ಭವಿಷ್ಯದಲ್ಲಿ ಮನೆಗಾಗಿ ಹಣ ಹಾಕಿದವರಿಗೆ ನಿವೇಶನ ನೀಡಲಿಲ್ಲ. ಈಗ ಮನೆ ಕೇಳಲು ಗಡ್ಕರಿ ಬಾಗಿಲಿಗೆ ಹೋದರೆ, 'ನನಗೆ ತಿಂಗಳಿಗೆ 8 ಕೋಟಿ ರೂಪಾಯಿ ವಹಿವಾಟಿದೆ. ನಿಮ್ಮ ಸಣ್ಣ ಸೊಸೈಟಿ ಇಟ್ಟುಕೊಂಡು ನನಗೇನಾಗಬೇಕು' ಎಂಬ ಉಡಾಫೆ ಉತ್ತರ ನೀಡುತ್ತಿದ್ದರು. ಗಡ್ಕರಿ ಹಿನ್ನಲೆ ಹೀಗಿತ್ತು.

ಇಷ್ಟಕ್ಕೇ ಮುಗಿದಿಲ್ಲ. ಗಡ್ಕರಿ ಹೆಸರು ಭ್ರಷ್ಟಾಚಾರದಾಚೆಗೆ ಎರಡು ಕೊಲೆ ಪ್ರಕರಣದಲ್ಲಿಯೂ ಕೇಳಿ ಬಂತು. ಮೊದಲನೆಯದ್ದು ನಡೆದಿದ್ದು 2009ರಲ್ಲಿ. 7 ವರ್ಷ ಪ್ರಾಯದ ಯೋಗಿತಾ ಠಾಕ್ರೆ ಎಂಬ ಬಾಲಕಿಯ ಮೃತದೇಹ ಗಡ್ಕರಿ ಮನೆಯ ಕಾರಿನಲ್ಲಿ ಪತ್ತೆಯಾಗಿತ್ತು. ಆಗ ಅವರು ನಗರದ ಹೊರಗೆ ಯಾವುದೋ ಪ್ರವಾಸಕ್ಕೆ ಹೋಗಿದ್ದರು. ಬಾಲಕಿಯ ತಾಯಿ ಆ ಸಂದರ್ಭದಲ್ಲಿ ಗಡ್ಕರಿ ಮನೆಯಲ್ಲಿ ಕೆಲಸಕ್ಕಿದ್ದರು. ಆರಂಭದಲ್ಲಿ ಈಕೆಯ ಸಾವಿನ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲೂ ಪೊಲೀಸರು ಸಿದ್ಧವಿರಲಿಲ್ಲ ಎನ್ನುತ್ತಾರೆ ಆಕೆಯ ಸಹೋದರಿ ಕಿರಣ್‌ ಠಾಕ್ರೆ. ಮುಂದೆ ಆಕಸ್ಮಿಕ ಸಾವು ಎಂದು ದಾಖಲಿಸಿಕೊಂಡು ಪ್ರಕರಣಕ್ಕೆ ಅಂತ್ಯ ಹಾಡಿದರು.

ಮುಂದೆ ನ್ಯಾಯಾಲಯಕ್ಕೆ ಹೋದಾಗ ಬಾಂಬೆ ಹೈಕೋರ್ಟ್‌ ಪ್ರಕರಣವನ್ನು ಸಿಐಡಿಗೆ ವಹಿಸಿತು. ಒಂದು ವರ್ಷದ ನಂತರ ಸಿಐಡಿ ಕೂಡ ಇದು ಆಕಸ್ಮಿಕ ಎಂದು ವರದಿ ಸಲ್ಲಿಸಿತು. ಮುಂದೆ 2013ರಲ್ಲಿ ಸಿಐಡಿ ಮತ್ತೊಂದು ವರದಿ ಸಲ್ಲಿಸಿತು. ಅದರಲ್ಲಿ ಸರಿಯಾದ ಮಾಹಿತಿಗಳಿಲ್ಲದ್ದರಿಂದ ನ್ಯಾಯಾಲಯ ಇದನ್ನು ತಿರಸ್ಕರಿಸಿತು. ಸದ್ಯ ಪ್ರಕರಣ ನ್ಯಾಯಾಲಯದಲ್ಲಿದೆ. ಆದರೆ ನ್ಯಾಯ ಪ್ರಕ್ರಿಯೆಯಲ್ಲಿ ಯಾವುದೇ ಸುಧಾರಣೆಯಾಗಿಲ್ಲ.

ಪ್ರಕರಣ ದಾಖಲಾದ ಸಂದರ್ಭದಲ್ಲಿ ಮೊದಲ 14 ದಿನ ರೌಡಿಗಳು ಮನೆಗೆ ಬಂದು ಪ್ರಕರಣ ಹಿಂಪಡೆಯುವಂತೆ ಬೆದರಿಕೆ ಹಾಕುತ್ತಿದ್ದರು. ಅಪರಿಚಿತ ಕರೆಗಳಿಂದ ಬೆದರಿಕೆಗಳು ಬರುತ್ತಿತ್ತು ಎನ್ನುತ್ತಾರೆ ಕಿರಣ್‌. ಈ ಬೆಳವಣಿಗೆ ನಂತರ ನನ್ನ ತಾಯಿಯನ್ನು ಕೆಲಸದಿಂದ ತೆಗೆದುಹಾಕಿದರು. ಅವರಿಗೆ ಮುಂದೆ ತಲೆ ಸರಿ ಇಲ್ಲದಂತಾಯಿತು. ತಂದೆಯನ್ನು ಕುಡಿತ ಕಲಿಸಿದರು ಎಂದು ವಿವರಿಸುತ್ತಾರೆ ಕಿರಣ್‌. ಆದರೆ ಅವರಿನ್ನೂ ಪ್ರಕರಣವನ್ನು ಬಿಟ್ಟಿಲ್ಲ. ಒಂದಲ್ಲ ಒಂದು ದಿನ ನನ್ನ ತಂಗಿಯ ಸಾವಿಗೆ ನ್ಯಾಯ ಸಿಗುತ್ತದೆ ಎಂದು ಕಾಯುತ್ತಾ ಕುಳಿತಿದ್ದಾರೆ.

ಎರಡನೇ ಸಾವು 2004ರಲ್ಲಿ ನಡೆದಿತ್ತು. ಗಡ್ಕರಿ ಆಪ್ತ ಸಹಾಯಕ ಪ್ರಕಾಶ್‌ ದೇಶಪಾಂಡೆ ಮುಂಬೈನಿಂದ ನಾಗಪುರಕ್ಕೆ ಬರುವಾಗ ರೈಲ್ವೇ ಪ್ಲಾಟ್‌ಫಾರಂ ಮೇಲೆ ಶವವಾಗಿದ್ದರು. ಅವರು ದೊಡ್ಡ ಮೊತ್ತದ ಪಾರ್ಟಿ ಫಂಡ್‌ ಹೊತ್ತು ತರುತ್ತಿದ್ದರು. ಇದೇ ಕೊಲೆಗೆ ಕಾರಣವಿರಬಹುದು ಎನ್ನಲಾಗಿದೆ. ಬಿಟ್ಟರೆ ಈ ಬಗ್ಗೆ ಹೆಚ್ಚಿನ ಮಾಹಿತಿಗಳು ಸಿಕ್ಕಿಲ್ಲ. ಈ ಬಗ್ಗೆ ದೇಶಪಾಂಡೆ ಕುಟುಂಬಸ್ಥರು ಇಂದು ಮಾತುಕತೆಗೇ ಸಿದ್ಧವಿಲ್ಲ. ಈ ಸಂಬಂಧ ಪ್ರತಿಕ್ರಿಯೆ ಕೋರಿ ಗಡ್ಕರಿ ಕಚೇರಿಯನ್ನು ಸಂಪರ್ಕಿಸಲಾಯಿತಾದರೂ ಉತ್ತರ ಸಿಕ್ಕಿಲ್ಲ.

ಹೀಗೊಂದು ಇತಹಾಸವಿದ್ದ ವ್ಯಕ್ತಿ 2014ರಲ್ಲಿ ನಾಗಪುರದಿಂದ ಗೆದ್ದು ಲೋಕಸಭೆ ಪ್ರವೇಶಿಸಿದರು. ಇದಾದ ನಾಲ್ಕು ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ ಚುನಾವಣೆ ನಡೆಯಿತು. ಶಿವಸೇನೆ ಜತೆಗಿನ 25 ವರ್ಷಗಳ ಸಂಬಂಧ ಕಡಿದುಕೊಂಡರೂ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ವಿದರ್ಭ ಭಾಗದಲ್ಲಂತೂ 62ರಲ್ಲಿ 44 ಸ್ಥಾನಗಳನ್ನು ಬಿಜೆಪಿ ಬುಟ್ಟಿಗೆ ಹಾಕಿಕೊಂಡಿತು. ಆಗ ಗಡ್ಕರಿ ಹೆಸರು ಮುಖ್ಯಮಂತ್ರಿ ಸ್ಥಾನಕ್ಕೆ ಕೇಳಿ ಬಂತು. ವಿಶೇಷವೆಂದರೆ ಗಡ್ಕರಿ ಮುಖ್ಯಮಂತ್ರಿಯಾವುದಾದರೆ ನಾನು ಬೆಂಬಲಿಸಲು ಸಿದ್ಧ ಎಂದು ಬಿಟ್ಟರು ಶರದ್‌ ಪವಾರ್‌.

ಅಷ್ಟೊತ್ತಿಗಾಗಲೇ ಗೋಪಿನಾಥ್‌ ಮುಂಡೆ ಸಾವನ್ನಪ್ಪಿದ್ದರು. 2014ರ ಜೂನ್‌ನಲ್ಲಿ ಮೋದಿ ಸಂಪುಟ ಸೇರಿದ ಕೆಲವೇ ದಿನಗಳಲ್ಲಿ ದೆಹಲಿಯಲ್ಲಿ ನಡೆದ ಅಪಘಾತದಲ್ಲಿ ಅವರು ಸಾವನ್ನಪ್ಪುತ್ತಿದ್ದಂತೆ ಗಡ್ಕರಿ ಮಹಾರಾಷ್ಟ್ರದ ಅನಭಿಷಿಕ್ತ ದೊರೆಯಾಗಿದ್ದರು. ಹೀಗಿದ್ದೂ ಅವರು ಮುಖ್ಯಮಂತ್ರಿಯಾಗಲಿಲ್ಲ. ಬದಲಿಗೆ ಆದವರು ಗಡ್ಕರಿಯ ಒಂದು ಕಾಲದ ಗುರು ಗಂಗಾಧರ್‌ ಫಡ್ನವೀಸ್‌ ಪುತ್ರ ದೇವೇಂದ್ರ ಫಡ್ನವೀಸ್. ಇವರೂ ಕೂಡ ಮಹಾರಾಷ್ಟ್ರದ ಬ್ರಾಹ್ಮಣ, ಜತೆಗೆ ಆರ್‌ಎಸ್‌ಎಸ್‌ ವ್ಯಕ್ತಿ.

ಮೋದಿ-ಶಾ ದಾಳಕ್ಕೆ ಬಲಿಯಾದ ಗಡ್ಕರಿ; ಮುಖ್ಯಮಂತ್ರಿ ಸ್ಥಾನಕ್ಕೇರಿದ ದೇವೇಂದ್ರ ಫಡ್ನವೀಸ್‌.
ಮೋದಿ-ಶಾ ದಾಳಕ್ಕೆ ಬಲಿಯಾದ ಗಡ್ಕರಿ; ಮುಖ್ಯಮಂತ್ರಿ ಸ್ಥಾನಕ್ಕೇರಿದ ದೇವೇಂದ್ರ ಫಡ್ನವೀಸ್‌.
/ವಿಕಿಮೀಡಿಯಾ ಕಾಮನ್ಸ್‌

ಇದು ಮೋದಿ ಉರುಳಿಸಿದ ದಾಳವಾಗಿತ್ತು. ಯಾವಾಗ ಮಹಾಜನ್‌ ತಮ್ಮನಿಂದ ಗುಂಡು ತಿಂದು ಸಾವನ್ನಪ್ಪಿದರೋ, ಮುಂಡೆ ಅಪಘಾತದಲ್ಲಿ ಕೊನೆಯುಸಿರೆಳೆದರೋ ಆಗ ಮೋದಿ ಚುರುಕಾದರು. ಗಡ್ಕರಿ ಮಹಾರಾಷ್ಟ್ರದಲ್ಲೇ ಇದ್ದರೆ, ಉದ್ಯಮ ವಲಯವನ್ನು ಮತ್ತಷ್ಟು ತಮ್ಮ ಹತೋಟಿಗೆ ತೆಗೆದುಕೊಳ್ಳುತ್ತಾರೆ. ಆತನನ್ನು ಮುಂದೆ ನಿಯಂತ್ರಿಸುವುದು ಕಷ್ಟವಾಗುತ್ತದೆ ಎಂಬುದು ಮೋದಿ ಅರಿವಿಗೆ ಬಂತು. ಬದಲಿಗೆ ಆತ ದೆಹಲಿಯಲ್ಲಿದ್ದರೆ ಪ್ರತೀ ಚಲನವಲನದ ಮೇಲೂ ಕಣ್ಣಿಡಬಹುದು ಎಂಬುದು ಶಾ-ಮೋದಿ ಬಯಕೆಯಾಗಿತ್ತು. ಹೀಗಾಗಿ ಹಿರಿಯ ನಾಯಕರಿಬ್ಬರ ನಿರ್ಗಮನದ ಲಾಭ ಗಡ್ಕರಿಗೆ ಬದಲಿಗೆ ಫಡ್ನವೀಸ್‌ಗೆ ಸಿಕ್ಕಿತು.

ಹೀಗೆ ಅನಿವಾರ್ಯವಾಗಿ ವಿಮಾನ ಹತ್ತಿ ದೆಹಲಿಗೆ ಬಂದ ಗಡ್ಕರಿ ರೈಲ್ವೇ, ಹೆದ್ದಾರಿ ಮತ್ತು ಬಂದರು ಮೂರೂ ಖಾತೆಗಳ ಮೇಲೆ ಕಣ್ಣಿಟ್ಟಿದ್ದರು. ಆದರೆ ರೈಲ್ವೇ ಸಿಗಲಿಲ್ಲ; ಉಳಿದೆರಡು ಸಿಕ್ಕಿದವು. ಹೆದ್ದಾರಿ ಸಿಕ್ಕದ್ದೇ ತಡ ಗಡ್ಕರಿ ಚುರುಕಾದರು. ತಮ್ಮ ಮಹಾರಾಷ್ಟ್ರ ಸಚಿವರಾಗಿದ್ದ ಅನುಭವ ಅವರಿಗೆ ಇಲ್ಲಿ ಸಹಾಯಕ್ಕೆ ಬಂತು. ದೇಶದ ರಸ್ತೆ ನಿರ್ಮಾಣ ಹೇಗೆ ನಡೆಯುತ್ತದೆ ಎಂಬುದರ ಸ್ಪಷ್ಟ ಕಲ್ಪನೆ ಅವರಿಗಿತ್ತು.

ಮೊದಲ ವರ್ಷ ಎಥೆನಾಲ್‌ನಲ್ಲಿ ಬಸ್‌ ಓಡಿಸುವುದು ಮೊದಲಾದ ನವ ಅನ್ವೇಷಣೆಗಳ ಬಗ್ಗೆ ಮಾತನಾಡಿ ಗಡ್ಕರಿ, ಮರು ವರ್ಷದಿಂದ ತಮ್ಮ ದಾಳಗಳನ್ನು ಉರುಳಿಸಲು ಆರಂಭಿಸಿದರು.

ಆದರೆ ಅದಕ್ಕೆ ಮೋದಿ ಅಷ್ಟು ಸುಲಭದಲ್ಲಿ ಅವಕಾಶ ನೀಡುತ್ತಿರಲಿಲ್ಲ. ಗಡ್ಕರಿ ಪೆಚ್ಚಾದರು. ಫೋನೆತ್ತಿಕೊಂಡವರೇ ಅವರಿಗೆ ಕರೆ ಮಾಡಿದರು. ಯಾರವರು? ಮುಂದೇನಾಯ್ತು? ನಾಳೆ ಕಂತಿನಲ್ಲಿ ಇನ್ನಷ್ಟು ಕುತೂಹಲಕಾರಿ ವಿಚಾರಗಳಿವೆ.

ಕೃಪೆ: ದಿ ಕ್ಯಾರವಾನ್

Also read: ‘ಸಂಘಿ ಪುತ್ರ’-1: ಮೋದಿಗೇ ಪರ್ಯಾಯ; ಆರ್‌ಎಸ್‌ಎಸ್ ಆಪ್ತ, ಯಾರೀತ ನಿತಿನ್ ಗಡ್ಕರಿ?