samachara
www.samachara.com
‘ನಿಷೇಧದ ಸುತ್ತ’: ಮದ್ಯಪಾನ ಆರೋಗ್ಯಕ್ಕೆ ಹಾನಿಕರ; ವಾಸ್ತವದಲ್ಲಿ ಮದ್ಯಪಾನ ಬೊಕ್ಕಸಕ್ಕೆ ಲಾಭಕರ!
COVER STORY

‘ನಿಷೇಧದ ಸುತ್ತ’: ಮದ್ಯಪಾನ ಆರೋಗ್ಯಕ್ಕೆ ಹಾನಿಕರ; ವಾಸ್ತವದಲ್ಲಿ ಮದ್ಯಪಾನ ಬೊಕ್ಕಸಕ್ಕೆ ಲಾಭಕರ!

ಕಳೆದ ವರ್ಷ ಮದ್ಯಪಾನ ಮಾರಾಟದಿಂದ ತೆರಿಗೆ ರೂಪದಲ್ಲಿ ಸರಕಾರಕ್ಕೆ ಬಂದ ಆದಾಯ 18.5 ಸಾವಿರ ಕೋಟಿ. ಅಬಕಾರಿ ಇಲಾಖೆ ಒಂದು ವರ್ಷದ ವಹಿವಾಟು ಏನಿಲ್ಲವೆಂದರು 2.5 ಲಕ್ಷ ಕೋಟಿಯನ್ನು ಮೀರುತ್ತದೆ. ಇದು ರಾಜ್ಯ ಸರಕಾರದ ವಾರ್ಷಿಕ ಬಜೆಟ್‌ಗಿಂತ ಅಧಿಕ.

ಅಶೋಕ್ ಎಂ ಭದ್ರಾವತಿ

ಅಶೋಕ್ ಎಂ ಭದ್ರಾವತಿ

ಇಡೀ ವಿಶ್ವದಲ್ಲೇ ಅತಿಹೆಚ್ಚು ಯುವ ಸಮುದಾಯವನ್ನು ಹೊಂದಿರುವ ದೇಶ ಭಾರತ. ಭಾರತದಲ್ಲಿ 20 ವಯಸ್ಸಿನಿಂದ 35 ವಯಸ್ಸಿನ ಯುವಕರ ಸಂಖ್ಯೆ ಶೇ. 40ಕ್ಕೂ ಹೆಚ್ಚು. ದೇಶದ ಅಭಿವೃದ್ಧಿಯಲ್ಲಿ ಯುವ ಸಮುದಾಯದ ಪಾತ್ರ ಅನನ್ಯವಾದದ್ದು. ಆದರೆ ಅಷ್ಟೇ ಆಘಾತ ಮೂಡಿಸುವ ವಿಚಾರವೆಂದರೆ ಭಾರತದಲ್ಲಿ, ಕರ್ನಾಟಕದಲ್ಲಿ ಇದೇ ಮಯೋಮಾನದ ಶೇ.40 ರಷ್ಟು ಯುವಕರು ಮದ್ಯದ ವ್ಯಸನಿಗಳಾಗಿದ್ದಾರೆ ಎನ್ನುತ್ತಿವೆ ವರದಿಗಳು. ಯುವ ಪೀಳಿಗೆ ದಾರಿ ತಪ್ಪುತ್ತಿದೆ ನಿಜ. ಆದರೆ ಇವರನ್ನು ಸರಿದಾರಿಗೆ ತರಬೇಕಿರುವ ಪ್ರಭುತ್ವವೂ ದಾರಿ ತಪ್ಪುತ್ತಿದೆಯಾ?

ಪ್ರಜಾಪ್ರಭುತ್ವದ ಪರಿಕಲ್ಪನೆಯ ಅಡಿಯಲ್ಲಿ ಪ್ರತಿಯೊಬ್ಬರ ಸರ್ವಾಂಗೀಣ ಬೆಳವಣಿಗೆ ಹಾಗೂ ಅಭಿವೃದ್ಧಿ ಸರಕಾರದ ಕರ್ತವ್ಯ. ಪ್ರಜೆಗಳಿಗಾಗಿ ಸರಕಾರವೇ ಹೊರತು ಸರಕಾರಕ್ಕಾಗಿ ಪ್ರಜೆಗಳಲ್ಲ. ಜನರ ಅಭಿವೃದ್ಧಿ ಬೇಕಾದ ನೀತಿ ನಿಯಮಗಳನ್ನು ರೂಪಿಸಬೇಕಾದ ಸರಕಾರಗಳು ತನ್ನದೇ ಪ್ರಜೆಗಳಿಗೆ ಮದ್ಯಪಾನ ಮಾಡಿಸಿ ಆ ಹಣದಲ್ಲಿ ಸರಕಾರ ನಡೆಸಬೇಕೆ? ಎಂಬ ಪ್ರಶ್ನೆ ಇಂದು ಮೂಡಿದೆ. ಇದೇ ಪ್ರಶ್ನೆಯನ್ನು ಮುಂದಿರಿಸಿ ಜನವರಿ 19ರಿಂದ ಸುಮಾರು 45 ಸಾವಿರ ಮಹಿಳೆಯರು ಚಿತ್ರದುರ್ಗದಿಂದ ಬೆಂಗಳೂರಿಗೆ ಪಾದಯಾತ್ರೆ ಹೊರಟಿದ್ದಾರೆ. ಜನವರಿ 30ರಂದು ಬೆಂಗಳೂರು ತಲುಪುವ ಇವರು ವಿಧಾನ ಸೌಧಕ್ಕೆ ಮುತ್ತಿಗೆ ಹಾಕುವ ಘೋಷಣೆ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮದ್ಯಪಾನ ನಿಷೇಧದ ಹೋರಾಟದ ಇತಿಹಾಸವೇನು? ಮದ್ಯಪಾನದಿಂದ ಸರಕಾರದ ಆದಾಯವೆಷ್ಟು? ಮದ್ಯಪಾನದಿಂದಾಗುತ್ತಿರುವ ಅಪರಾಧ ಪ್ರಕರಣಗಳ ಸರಾಸರಿ ಏನು? ಮದ್ಯಪಾನ ಸಂಪೂರ್ಣ ನಿಷೇಧ ಸಾದ್ಯವೆ? ಈ ಕುರಿತಾದ ವಿಸ್ತೃತ ವರದಿ ಇಲ್ಲಿದೆ.

ಮದ್ಯ ನಿಷೇಧ ಹೋರಾಟ:

ರಾಜ್ಯದಲ್ಲಿ ಹಲವಾರು ವರ್ಷಗಳಿಂದ ಮಹಿಳೆಯರು ಮದ್ಯ ಮಾರಾಟವನ್ನು ನಿಷೇಧಗೊಳಿಸುವಂತೆ ಹೋರಾಟ ನಡೆಸುತ್ತಿದ್ದಾರೆ. ಆದರೆ ಮೊಟ್ಟ ಮೊದಲ ಬಾರಿಗೆ ಎಲ್ಲಾ ಮಹಿಳೆಯರು ಒಟ್ಟಾಗಿ ಜನಾಂದೋಲನ ರೂಪಿಸಿದ್ದು 2016ರ ಅಕ್ಟೋಬರ್2 ರಂದು. ಗಾಂಧಿ ಜಯಂತಿಯ ದಿನ ಮಹಿಳೆಯರು ಉತ್ತರ ಕರ್ನಾಟಕದ ಐದು ರಾಜ್ಯಗಳಲ್ಲಿ 'ಜೈಲ್ ಬರೋ' ಚಳುವಳಿ ನಡೆಸಿದ್ದರು.

ಆದರೆ ಅಳುವ ಸರಕಾರ ಈ ಕುರಿತು ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. 2017 ಜನವರಿ.30 ರಂದು ಗಾಂಧಿ ಸ್ಮರಣಾ ದಿನವೂ ಸಹ ಈ ಚಳುವಳಿಯನ್ನು ಹಮ್ಮಿಕೊಳ್ಳಲಾಗಿತ್ತು. 2017 ಅ.2 ರಂದು 5 ಲಕ್ಷ ಮಹಿಳೆಯರು ವಿಧಾನಸೌಧದ ಎದುರು ಪ್ರತಿಭಟಿಸಿದ್ದರು. ಆದರೆ ಚುನಾವಣಾ ರಾಜಕಾರಣದಲ್ಲಿ ಪುರುಷರಿಗೆ ಮೊದಲ ಆದ್ಯತೆಯಾದ ಕಾರಣ ಮಹಿಳೆಯರ ಕೂಗನ್ನು ಕೇಳಿಸಿಕೊಳ್ಳುವ ಗೋಜಿಗೂ ಯಾವ ಪ್ರಜಾಪ್ರತಿನಿಧಿಯೂ ಮುಂದಾಗಲಿಲ್ಲ.

ಆದರೆ ಈ ಬಾರಿ 30 ಹೆಚ್ಚು ಮಹಿಳಾ ಅಭಿವೃದ್ಧಿ ಸಮಾಜಮುಖಿ ಸಂಘಟನೆಗಳು ಒಂದಾಗಿವೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಎಚ್‌. ಎಸ್. ದೊರೆಸ್ವಾಮಿಯಂತವರು ಈ ಚಳುವಳಿಗೆ ಬೆಂಬಲ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ, “ಈ ಬಾರಿಯ ಚಳುವಳಿ ದೊಡ್ಡ ಮಟ್ಟದ ಗೆಲುವು ಸಾಧಿಸುವ ನಿರೀಕ್ಷೆ ಇದೆ,” ಎನ್ನುತ್ತಾರೆ ಕರ್ನಾಟಕ ಮದ್ಯಪಾನ ನಿಷೇಧ ಆಂದೋಲನದ ಸಂಚಾಲಕಿ ಹಾಗೂ ಹೋರಾಟಗಾರ್ತಿ ವಿದ್ಯಾ ಪಾಟೀಲ್.

ಸರಕಾರದ ಆದಾಯವೆಷ್ಟು ಗೊತ್ತಾ..?

ಒಂದು ಕಡೆ ಮಹಿಳಾ ಸಂಘಟನೆಗಳು ಸಂಘಟಿತ ಹೋರಾಟಕ್ಕೆ ಮುಂದಾಗಿವೆ. ಸರಕಾರ ಇದೇ ಮದ್ಯದ ಹಣವನ್ನು ನೆಚ್ಚಿಕೊಂಡು ಸರಕಾರ ನಡೆಸುತ್ತಿದೆ. ಆದಾಯವಿಲ್ಲದೆ ಯಾವುದೇ ಸರಕಾರದ ಆಡಳಿತ ಯಂತ್ರ ಸರಾಗವಾಗಿ ನಡೆಯುವುದು ಸಾಧ್ಯವೇ ಇಲ್ಲ. ತೆರಿಗೆ ಸರಕಾರದ ಆದಾಯದ ಮೂಲ. ವಿವಿಧ ರೂಪದಲ್ಲಿ ಸಂಗ್ರಹಿಸಲಾದ ತೆರಿಗೆಯಿಂದಲೇ ಪ್ರಜಾಪ್ರತಿನಿಧಿಗಳು ಸರಕಾರವನ್ನು ನಡೆಸುತ್ತಿದ್ದಾರೆ. ಅಬಕಾರಿ ಇಲಾಖೆ ಅಂದರೆ ಅರ್ಥಾತ್ ಎಣ್ಣೆ ಮಾರುವುದರಿಂದ ನಮ್ಮ ಸರಕಾರ ಎಷ್ಟು ಲಾಭ ಗಳಿಸುತ್ತದೆ ಎಂಬ ಅಂಕಿ ಅಂಶಗಳ ಕಡೆಗೆ ಒಮ್ಮೆ ಕಣ್ಣಾಯಿಸಿದರೆ ಬೆಚ್ಚಿ ಬೀಳುವ ಸರದಿ ನಿಮ್ಮದಾಗುತ್ತದೆ.

2016-17ರ ವಾರ್ಷಿಕ ಆದಾಯದ ಕುರಿತು ಅಬಕಾರಿ ಇಲಾಖೆಯೇ ನೀಡಿರುವ ವರದಿಯ ಪ್ರಕಾರ, ಮದ್ಯ ಪಾನ ಮಾರಾಟದಿಂದ ತೆರಿಗೆ ರೂಪದಲ್ಲಿ ಸರಕಾರಕ್ಕೆ ಬಂದ ವಾರ್ಷಿಕ ಆದಾಯ ಬರೋಬ್ಬರಿ 18.5 ಸಾವಿರ ಕೋಟಿ. ಸರಿಯಾಗಿ 8 ವರ್ಷಗಳ ಹಿಂದೆ ವಾರ್ಷಿಕ 9 ಸಾವಿರ ಕೋಟಿ ಆದಾಯ ಹೊಂದಿದ್ದ ಅಬಕಾರಿ ಇಲಾಖೆ ಇಂದು 18.5 ಸಾವಿರ ಕೋಟಿ ಆದಾಯ ಗಳಿಸುತ್ತಿದೆ ಎಂದರೆ ಅದು ಸುಮ್ಮನೆ ಮಾತಲ್ಲ.

ಇನ್ನೂ ತೆರಿಗೆ ರೂಪದ ಆದಾಯ ಇಷ್ಟಾದರೆ, ಅಬಕಾರಿ ಇಲಾಖೆ ಒಂದು ವರ್ಷದ ವಹಿವಾಟು ಏನಿಲ್ಲವೆಂದರು 2.5 ಲಕ್ಷ ಕೋಟಿಯನ್ನು ಮೀರುತ್ತದೆ ಎನ್ನುತ್ತವೆ ವರದಿಗಳು. ಇದು ರಾಜ್ಯ ಸರಕಾರದ ವಾರ್ಷಿಕ ಬಜೆಟ್‌ಗಿಂತ ಅಧಿಕ. ಪ್ರಸ್ತುತ ರಾಜ್ಯದಲ್ಲಿ ಅಧಿಕ ಆದಾಯ ಹೊಂದಿರುವ ಟಾಪ್ 3 ಇಲಾಖೆಗಳಲ್ಲಿ ಅಬಕಾರಿ ಇಲಾಖೆಯೂ ಒಂದು.

ಸರಕಾರಕ್ಕೆ ಭರ್ಜರಿ ಆದಾಯ ತರುವ ಇಲಾಖೆಗಳಲ್ಲಿ ಅಬಕಾರಿಯೂ ಒಂದು.
ಸರಕಾರಕ್ಕೆ ಭರ್ಜರಿ ಆದಾಯ ತರುವ ಇಲಾಖೆಗಳಲ್ಲಿ ಅಬಕಾರಿಯೂ ಒಂದು.
/ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್

ನಿಮ್ಹಾನ್ಸ್ ವರದಿಯ ಪ್ರಕಾರ ಭಾರತದಲ್ಲಿ ಮದ್ಯ ಮಾರಾಟದಿಂದ ಹೆಚ್ಚು ಅದಾಯ ಗಳಿಸುತ್ತಿರುವ ರಾಜ್ಯಗಳ ಪೈಕಿ ಕರ್ನಾಟಕಕ್ಕೆ ಮೂರನೇ ಸ್ಥಾನವಿದೆ. ಹಿಮಾಚಲ ಪ್ರದೇಶ ಹಾಗೂ ಪಂಜಾಬ್ ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿವೆ.

ಆದಾಯಕ್ಕಿಂತ ತೊಂದರೆಗಳೇ ಹೆಚ್ಚು:

ಮದ್ಯ ಮಾರಾಟದಿಂದ ಸರಕಾರಿ ವಾರ್ಷಿಕ ಉತ್ತಮ ಆದಾಯವಿದೆ ನಿಜ. ಆದರೆ ಮದ್ಯ ಮಾರಾಟದಿಂದ ಸರಕಾರಕ್ಕೆ, ಪ್ರಜೆಗಳಿಗೆ ಹಾಗೂ ಸಮಾಜಕ್ಕೆ ಉಂಟಾಗುತ್ತಿರುವ ಹಾನಿಯೇ ಅಧಿಕ ಎನ್ನುತ್ತಿದೆ ಸರಕಾರದ ಅಂಗಸಂಸ್ಥೆ ನಿಮ್ಹಾನ್ಸ್ ವರದಿ.

ಭಾರತದಲ್ಲಿ ಎಲ್ಲಾ ರಾಜ್ಯಗಳಲ್ಲೂ ಕುಡುಕರಿಗೆ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಅದರಂತೆ ಕರ್ನಾಟಕದಲ್ಲಿ ಕುಡುಕರ ವಯೋಮಿತಿ 21. 1980 ರಲ್ಲಿ ಕರ್ನಾಟಕದಲ್ಲಿ ಓರ್ವ ವ್ಯಕ್ತಿ ಕುಡಿತ ಆರಂಭಿಸುವ ಸರಾಸರಿ ವಯಸ್ಸು 28 ವರ್ಷವಾಗಿತ್ತು. ಆದರೆ 2016 ಕ್ಕೆ ರಾಜ್ಯದಲ್ಲಿ ಕುಡುಕನ ಆರಂಭಿಕ ವಯಸ್ಸು 17 ವರ್ಷ ಎಂಬುದು ಸಮಾಜ ಎತ್ತಕಡೆ ಮುಖ ಮಾಡಿದೆ ಎಂಬುದರ ಸೂಚನೆ ನೀಡುತ್ತದೆ.

ಇನ್ನೂ ರಾಜ್ಯದಲ್ಲಿ ಶೇ.30 ರಷ್ಟು ವಯಸ್ಕ ಪುರುಷರು ಹಾಗೂ ಶೇ.5 ರಷ್ಟು ಮಹಿಳೆಯರು ದಿನನಿತ್ಯ ಮದ್ಯಪಾನದ ವ್ಯಸನಿಗಳಾಗಿದ್ದಾರೆ. ಅಂಕಿಅಂಶಗಳ ಪ್ರಕಾರ 15 ರಿಂದ 25 ವರ್ಷದೊಳಗಿನ ಶೇ.40 ರಷ್ಟು ಯುವಕರು ಇಂದು ಮಾದಕವಸ್ತುಗಳ ದಾಸರಾಗುತ್ತಿದ್ದಾರೆ. ಕಳೆದ 20 ವರ್ಷದಲ್ಲಿ ರಾಜ್ಯದಲ್ಲಿ ಕುಡುಕರ ಸಂಖ್ಯೆ ಶೇ.55 ರಷ್ಟು ಏರಿಕೆಯಾಗುತ್ತಿವೆ.

ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಮಾನ ಸಂಖ್ಯೆಯ ಕುಡುಕರನ್ನು ಹೊಂದಿರುವ ದೇಶ ಭಾರತ. ಈ ವಿಚಾರದಲ್ಲಿ ಕರ್ನಾಟಕವೂ ಹಿಂದುಳಿದಿಲ್ಲ. ರಾಜ್ಯದ ಗ್ರಾಮೀಣ ಭಾಗದಲ್ಲಿ ಕೂಲಿಕಾರರ ಒಂದು ದಿನದ ಕನಿಷ್ಟ ಕೂಲಿ 200ರೂ. ಅದರಲ್ಲಿ ದುಡಿತದ ಶೇ.70 ರಷ್ಟು ಭಾಗವನ್ನು ಆತ ಕುಡಿತಕ್ಕೆ ಮೀಸಲಿಡುತ್ತಿದ್ದಾನೆ ಎನ್ನುತ್ತಿವೆ ವರದಿಗಳು. ಉಳಿದ ಶೇ.30 ರಷ್ಟು ಹಣದಲ್ಲಿ ಮಹಿಳೆಯರು ಸಂಸಾರ ನಡೆಸಬೇಕಾದ ಪರಿಸ್ಥಿತಿ ಇದೆ.

ಗ್ರಾಮೀಣ ಭಾಗದಲ್ಲಿ ಮಹಿಳೆಯರ ಮೇಲಾಗುತ್ತಿರುವ ಶೇ.75 ಕ್ಕೂ ಅಧಿಕ ದೌರ್ಜನ್ಯ ಪ್ರಕರಣಗಳು, ಶೇ.80 ರಷ್ಟು ಕೌಟುಂಬಿಕ ಹಿಂಸಾಚಾರ ಪ್ರಕರಣಗಳಿಗೆ ಮದ್ಯಪಾನವೇ ಕಾರಣ ಎನ್ನುತ್ತಿವೆ ಸರಕಾರಿ ಪ್ರಾಯೋಜಿತ ವರದಿಗಳು.

ನಗರ ಪ್ರದೇಶಗಳಲ್ಲಿ ದಾಖಲಾಗುತ್ತಿರುವ ಅಪಘಾತ ಪ್ರಕರಣಗಳಲ್ಲಿ ಶೇ.60 ರಷ್ಟು ಪ್ರಕರಣಗಳು ಕುಡಿತದ ಕಾರಣದಿಂದಲೇ ಸಂಭವಿಸುತ್ತಿವೆ. ಅಲ್ಲದೆ ಕೊಲೆ- ಸುಲಿಗೆ, ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ, ಅತ್ಯಾಚಾರದಂತಹ ವಿಕೃತ ಮನಸ್ಸಿನ ಅಪರಾಧ ಪ್ರಕರಣಗಳಿಗೆ ಬಹುತೇಕ ಕುಡಿತವೇ ಕಾರಣ.

ಮದ್ಯಪಾನ ಅನೇಕ ಕಾಯಿಲೆಗಳನ್ನು ಧಾರಾಳವಾಗಿ ಕರುಣಿಸುತ್ತದೆ. ಸಕ್ಕರೆ ಖಾಯಿಲೆ, ಯಕೃತ್ತಿನ ಖಾಯಿಲೆ, ಜಠರ ರೋಗ, ಅಜೀರ್ಣತೆ, ನರಮಂಡಲ ಹಾನಿ, ಲೈಂಗಿಕ ಶಕ್ತಿ ಕುಸಿತ, ಮರೆವಿನ ಖಾಯಿಲೆ, ನಿಶ್ಯಕ್ತಿ, ಮೆದುಳಿನ ಮೇಲೆ ಪರಿಣಾಮ, ಮನೋವ್ಯಾಧಿಗಳ ಜೊತೆಗೆ ಅನೇಕ ಕಾಯಿಲೆಗಳು ಕುಡುಕರನ್ನು ಆವರಿಸಿಕೊಳ್ಳುತ್ತವೆ. ರಾಜ್ಯದ ಗ್ರಾಮೀಣ ಭಾಗದಲ್ಲಿ ಶೇ.52 ಕ್ಕೂ ಹೆಚ್ಚು ಜನ ಕುಡಿತದಿಂದಾಗಿ ಇಂತಹ ಖಾಯಿಲೆ ಒಳಗಾಗಿದ್ದಾರೆ. ಇಂತವರು ಚಿಕಿತ್ಸೆಗಾಗಿ ಲಕ್ಷಾಂತರ ಸಾಲ ಮಾಡಿಕೊಂಡಿದ್ದರೆ, ಹೆಚ್ಚಿನ ಚಿಕಿತ್ಸೆಗೆ ಹಣವಿಲ್ಲದೆ ಸಾವನ್ನು ಎದುರು ನೋಡುತ್ತಾ ಕುಳಿತಿರುವ ಜನರ ಸಂಖ್ಯೆ ಶೇ. 15.

ಒಟ್ಟಿನಲ್ಲಿ ಕುಡಿತ ಎಂಬುದು ಗ್ರಾಮೀಣ ಭಾಗದ ಸಾಮಾಜಿಕ ಜೀವನವನ್ನು ಹೇಗೆ ಹರಿದು ಮುಕ್ಕಿದೆ ಎಂಬುದಕ್ಕೆ ಈ ಮೇಲಿನ ಅಂಕಿಅಂಶಗಳೇ ಸಾಕ್ಷಿ ನುಡಿಯುತ್ತವೆ.

ಅಂದರೆ, ಮದ್ಯ ಮಾರಾಟದಿಂದ ಆಗುತ್ತಿರುವ ಲಾಭಕ್ಕಿಂತ ನಷ್ಟವೇ ಅಧಿಕ ಎನ್ನುತ್ತಿವೆ ಅಂಕಿಅಂಶಗಳು. ಸಮಾಜದ ಶೇ.60 ಕ್ಕೂ ಹೆಚ್ಚು ಜನರ ಸವಾಂರ್ಗೀಣ ಬೆಳವಣಿಗೆಗೆ ಕುಡಿತದ ಚಟ ಅಡ್ಡಿಯಾಗಿದೆ. ಈ ಚಟದಿಂದಾಗಿ ಇಡೀ ರಾಜ್ಯವೇ ಇಂದು ತೀವ್ರ ನಿಗಾ ಘಟಕದಂತೆ ಭಾಸವಾಗುತ್ತಿದೆ.

ಸಂಪೂರ್ಣ ಮದ್ಯಪಾನ ನಿಷೇಧ ಸಾಧ್ಯವೇ?

ಗಾಂಧಿ ಜನಸಿದ ಕಾರಣಕ್ಕಾಗಿ ಗುಜರಾತ್ ರಾಜ್ಯದಲ್ಲಿ ಕಳೆದ 60 ವರ್ಷಗಳಿಂದ ಮದ್ಯಪಾನವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. 2005 ರಲ್ಲಿ ಬಿಹಾರದಲ್ಲಿ 2.5 ಕೋಟಿ ಮಹಿಳೆಯರು ನಡೆಸಿದ ದೊಡ್ಡ ಚಳುವಳಿಗೆ ಬೆದರಿದ್ದ ಬಿಹಾರದ ಸರಕಾರ 2007 ರಲ್ಲಿ ಮದ್ಯಪಾನವನ್ನು ಸಂಪೂರ್ಣವಾಗಿ ನಿಷೇಧಿಸಿತು. ನಾಗಾಲ್ಯಾಂಡ್, ಮಣಿಪುರದಲ್ಲೂ ಮದ್ಯಪಾನವನ್ನು ನಿಷೇಧಿಸಲಾಗಿದೆ. ಕೇರಳದಲ್ಲೂ ಬಹುತೇಕ ಮದ್ಯಮಾರಾಟವನ್ನು ನಿಷೇಧಿಸಲಾಗಿದೆ.

ಬಿಹಾರ ಮದ್ಯ ನಿಷೇಧ.
ಬಿಹಾರ ಮದ್ಯ ನಿಷೇಧ.
/ಮ್ಯಾಪ್ಸ್‌ ಆಫ್‌ ಇಂಡಿಯಾ

ಮದ್ಯ ಮಾರಾಟದಿಂದಾಗುವ ಅನಾಹುತಗಳನ್ನು ಗಮನಿಸಿ ರಾಜ್ಯ ಸರಕಾರಗಳು ಮದ್ಯ ಮಾರಾಟವನ್ನು ನಿಷೇಧ ಮಾಡಿದ್ದರೂ ಸಹ, ಬೇರೆಡೆಯಿಂದ ಕಳ್ಳತನದಲ್ಲಿ ಮದ್ಯ ತರಿಸಿ ಕುಡಿಯುವವರ ಸಂಖ್ಯೆ ಏನೂ ಕಡಿಮೆಯಾಗಿಲ್ಲ. ಇನ್ನೂ ದೇಸಿ ಹೆಂಡ, ನೀರಾ ಕುಡಿಯುವುದರ ಮೂಲಕವೂ ವ್ಯಸನಿಗಳು ತಮ್ಮ ಚಟವನ್ನು ನೀಗಿಸಿಕೊಳ್ಳುತ್ತಿದ್ದಾರೆ.

1986 ರಲ್ಲಿ ಆಂಧ್ರ ಪ್ರದೇಶದಲ್ಲಿ ಅಂದಿನ ಮುಖ್ಯಮಂತ್ರಿ ಎನ್‌.ಟಿ.ರಾಮಾರಾವ್ ಮದ್ಯಪಾನ ನಿಷೇಧಿಸಿದ್ದರು. ಆದರೆ ತಮಿಳುನಾಡು, ಮಹಾರಾಷ್ಟ್ರದ ಗಡಿಭಾಗಗಳಿಂದ ಆಂಧ್ರಕ್ಕೆ ಮದ್ಯವನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಇದನ್ನು ತಡೆಯುವುದು ಪೊಲೀಸರಿಂದಲೂ ಸಾಧ್ಯವಾಗದ ಪರಿಸ್ಥಿತಿಗೆ ತಲುಪಿತ್ತು. ಕೊನೆಗೆ ಬೇಸತ್ತ ಎನ್‌. ಟಿ. ರಾಮಾರಾವ್ ಒಲ್ಲದ ಮನಸ್ಸಿನಿಂದ ಮದ್ಯಪಾನದ ನಿಷೇಧವನ್ನು ತೆರವುಗೊಳಿಸಿ ಆದೇಶಿಸಿದ್ದರು.

ಕರ್ನಾಟದಲ್ಲೂ 2006 ರಲ್ಲಿ ಪ್ಯಾಕೇಟ್ ಸಾರಾಯಿಯನ್ನು ಸಂಪೂರ್ಣ ನಿಷೇಧಿಸಲಾಗಿತ್ತು. ನೀರಾ ಇಳಿಸುವುದು ಸೇಂದಿ ಮಾರುವುದನ್ನು ನಿಷೇಧಿಸಲಾಗಿದೆ. ಆದರೆ ಇದರಿಂದ ಯಾರಿಗೆ ಲಾಭವಾಯ್ತು ಎಂಬುದು ಓಪನ್ ಸೀಕ್ರೇಟ್.

ಇನ್ನೂ ಕೇರಳ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಆರೋಗ್ಯಕ್ಕೆ ಹಾನಿಯಾಗದಂತೆ ನೀರಾವನ್ನು ಟೆಟ್ರಾ ಪ್ಯಾಕ್‌ಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ನೀರಾದಿಂದ ಅನೇಕ ಖಾದ್ಯಗಳನ್ನು ತಯಾರಿಸುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಮಾತ್ರ ವಿದೇಶಿ ಮದ್ಯ ಮಾರಾಟಕ್ಕೆ ಅನುಕೂಲವಾಗಲಿ ಎಂದು ದೇಶಿ ಮದ್ಯಕ್ಕೆ ಸರಕಾರ ನಿಷೇಧ ಹೇರಿಕೊಂಡು ಕುಳಿತಿದೆ.

ಅದೇನೇ ಇದ್ದರು ಒಂದು ರಾಜ್ಯ ಸರಕಾರ ತೀರ್ಮಾನಿಸಿದರೆ, ಪ್ರಾಮಾಣಿಕವಾಗಿ ಪ್ರಯತ್ನ ನಡೆಸಿದರೆ ಎಲ್ಲಾ ರೀತಿಯ ಮದ್ಯಪಾನವನ್ನು ಸಂಪೂರ್ಣ ನಿಷೇಧಿಸುವುದು ದೊಡ್ಡ ವಿಷಯವೇನಲ್ಲ ಎನ್ನುತ್ತಿದ್ದಾರೆ ಕರ್ನಾಟಕ ಮದ್ಯ ನಿಷೇಧ ಹೋರಾಟ ಸಮಿತಿಯ ಸಂಚಾಲಕಿ ವಿದ್ಯಾ ಪಾಟೀಲ್.

ನಿಷೇಧದಿಂದ ಉಂಟಾಗುವ ಪರಿಣಾಮಗಳೇನು?

ಪ್ರತಿಯೊಬ್ಬ ಪ್ರಜೆಯ ಅಭಿವೃದ್ಧಿಯೇ ಸರಕಾರದ ಕೆಲಸವೇ ಹೊರತು, ಜನರಿಗೆ ಮದ್ಯ ಕುಡಿಸಿ ಆ ಹಣದಿಂದ ಸರಕಾರ ನಡೆಸುವುದಲ್ಲ ಪ್ರಭುತ್ವದ ಕೆಲಸ. ಹೀಗಾಗಿ ಮದ್ಯಪಾನ ನಿಷೇಧ ಸಮಾಜದ ಅಭಿವೃದ್ಧಿಗೆ ಅಗತ್ಯವಾದ ಆದೇಶ. ಯಾವುದೇ ಪ್ರಗತಿಪರ ಸರಕಾರದಿಂದ ನಿರೀಕ್ಷೆ ಮಾಡಬಹುದಾದ ಉತ್ತಮ ಕೆಲಸ. ಆದರೆ ಮದ್ಯವನ್ನು ನಿಷೇಧಿಸಿದ ಮಾತ್ರಕ್ಕೆ ಎಲ್ಲವೂ ಸುಸೂತ್ರವಾಗಿಬಿಡುತ್ತದೆ ಎಂಬ ಕಲ್ಪನೆ ಸುಳ್ಳು. ಮದ್ಯ ನಿಷೇಧಕ್ಕೂ, ಕುಡುಕರು ಕುಡಿತವನ್ನು ಬಿಡುವುದಕ್ಕೂ ಸಂಭಂದವೇ ಇಲ್ಲ. ಇದು ಸಾಧ್ಯವೂ ಇಲ್ಲ. ಹೀಗಾಗಿ ಸರಕಾರ ನಿಷೇಧದ ಜೊತೆಗೆ ಹತ್ತಾರು ಮುಂದಾಲೋಚನ ಕ್ರಮಗಳನ್ನೂ ತೆಗೆದುಕೊಳ್ಳಬೇಕಾಗುತ್ತದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
/ಮಿಲಿಟರಿ ಡಾಟ್‌ಕಾಂ

ಕುಡುಕರಲ್ಲಿ ಮೂರು ವಿಧ. 1.ಸಾಮಾಜಿಕ ಕುಡುಕರು. 2.ಕುಡಿತದ ಚಟಕ್ಕೆ ದಾಸರಾದವರು ಹಾಗೂ 3.ಮಾನಸಿಕ ರೋಗಿಗಳು. ಅಪರೂಪಕ್ಕೆ ಸಮಾರಂಭಗಳಲ್ಲಿ ಗೆಳೆಯರ ಜೊತೆಗೆ ಕುಡಿಯುವ ಮೊದಲ ಹಂತದ ಸಾಮಾಜಿಕ ಕುಡುಕರ ಮೇಲೆ ಈ ಮದ್ಯ ನಿಷೇಧದಂತಹ ಆದೇಶಗಳು ಪರಿಣಾಮ ಬೀರದು. ಆದರೆ ಎರಡು ಹಾಗೂ ಮೂರನೇ ಬಗೆಯ ಕುಡುಕರನ್ನು ಇಂತಹ ಕಾನೂನುಗಳಿಂದ ಹದ್ದುಬಸ್ತಿಗೆ ತರಲು ಸಾಧ್ಯವೇ ಇಲ್ಲ. ಇದು ಕುಡುಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಮದ್ಯದ ಚಟಕ್ಕೆ ದಾಸರಾದವರಿಗೆ ದಿನನಿತ್ಯ ಎಣ್ಣೆ ಬೇಕೆ ಬೇಕು. ಅವರಿಗೆ ಒಂದು ದಿನ ಮದ್ಯ ಸಿಗದಿದ್ದರೂ ಆತ್ಮಹತ್ಯೆಗೆ ಪ್ರಯತ್ನಿಸುವ ಸಾಧ್ಯತೆ ಇರುತ್ತದೆ. ಇನ್ನೂ ಮೂರನೇ ಬಗೆಯವರು ತೀರಾ ಅಪಾಯಕಾರಿ. ಇವರು ಕುಡಿತದ ಕಾರಣಕ್ಕೆ ಮಾನಸಿಕ ಖಾಯಿಲೆಗೆ ಖಿನ್ನತೆಗೆ ಒಳಗಾಗಿರುತ್ತಾರೆ. ಇಂತಹವರು ಅಪರಾಧ ಪ್ರಕರಣಕ್ಕೆ ಇಳಿಯುವ ಸಾಧ್ಯತೆ ಇರುತ್ತದೆ. ಈ ಎರಡೂ ಬಗೆಯವರಿಗೆ ಚಿಕಿತ್ಸೆ ಅತೀ ಅಗತ್ಯ.

“ಸರಕಾರ ಇಂತಹ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಕುಡಿತದ ಚಟಕ್ಕೆ ದಾಸರಾದವರಿಗೆ ವಿಶೇಷ ಚಿಕಿತ್ಸಾ ಶಿಬಿರಗಳನ್ನು ಆರಂಭಿಸಬೇಕು. ಅಲ್ಲದೆ ರಾಜ್ಯದ ಪ್ರತಿ ಹಳ್ಳಿಗಳಲ್ಲೂ ಕುಡಿತದಿಂದಾಗುವ ದುಷ್ಟರಿಣಾಮದ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸಬೇಕು,” ಎನ್ನುತ್ತಾರೆ ಮಾನಸಿಕ ವೈದ್ಯೆ ಸಂಧ್ಯಾ ಕಾವೇರಿ.

ಮದ್ಯ ನಿಷೇಧವಾಗಬೇಕು. ರಾಜ್ಯದ ಯುವ ಜನತೆ ಈ ಚಟದಿಂದ ಮುಕ್ತಿ ಹೊಂದಿ ತಮ್ಮ ಗುರಿಯತ್ತ ನಡೆಬೇಕು. ಹಳಿ ತಪ್ಪಿರುವ ಗ್ರಾಮೀಣ ಭಾಗದ ಕೌಟುಂಬಿಕ ಜೀವನ ಮತ್ತೆ ಹಳಿಗೆ ಮರಳಬೇಕಿರುವುದು ತುರ್ತು ಅಗತ್ಯ. ಇದು ಸರಕಾರದ ಕರ್ತವ್ಯವೂ ಹೌದು. ಈ ಕೆಲಸವನ್ನು ಸಾಧ್ಯಗೊಳಿಸಲು ಕೊನೆಗೂ ರಾಜ್ಯದ ಮಹಿಳೆಯರೇ ಬೀದಿಗಿಳಿದಿರುವುದು ನಿಜಕ್ಕೂ ಶ್ಲಾಘನೀಯ. ಮಹಿಳೆಯರ ಈ ಪ್ರಯತ್ನ ಯಶಸ್ವಿಯಾಗಲಿ ಎಂಬುದು ಆಶಯ.