samachara
www.samachara.com
ಆಪರೇಷನ್ ಕಮಲ ಎಂಬ ‘ಹುಲಿ ಬಂತು ಹುಲಿ’ ಕತೆ; ಯಡಿಯೂರಪ್ಪ ಕನಸು ಭಗ್ನವಾಗಿದ್ದೇಗೆ? 
COVER STORY

ಆಪರೇಷನ್ ಕಮಲ ಎಂಬ ‘ಹುಲಿ ಬಂತು ಹುಲಿ’ ಕತೆ; ಯಡಿಯೂರಪ್ಪ ಕನಸು ಭಗ್ನವಾಗಿದ್ದೇಗೆ? 

ಬಿಜೆಪಿ ನಾಯಕರು ಸರಕಾರ ಬೀಳಿಸಲು ಹತ್ತಾರು ದಿನಾಂಕಗಳನ್ನು ನಿಗದಿ ಪಡಿಸಿದ್ದರು. ಯಾವುದೂ ಕೈಗೂಡಲಿಲ್ಲ. ಸಂಕ್ರಾಂತಿಗೆ ಸರಕಾರವನ್ನು ಬೀಳಿಸುವ ಪಣ ತೊಟ್ಟವರಂತೆ ಬಿಜೆಪಿ ಶಾಸಕರನ್ನು ದೂರದ ಹರಿಯಾಣದಲ್ಲಿ ಕೂಡಿಹಾಕಲಾಗಿತ್ತು.

ಅಶೋಕ್ ಎಂ ಭದ್ರಾವತಿ

ಅಶೋಕ್ ಎಂ ಭದ್ರಾವತಿ

ಕಳೆದ 48 ಗಂಟೆಗಳ ಹಿಂದೆ ಶುರುವಾದ ರಾಜ್ಯ ರಾಜಕಾರಣದ ಕೃತಕ ಬಿಕ್ಕಟ್ಟೊಂದು ಆರಂಭವಾದಲ್ಲಿಗೇ ಬಂದು ನಿಂತಿದೆ. ಗೋಕಾಕ್‌ ಶಾಸಕ ರಮೇಶ್ ಜಾರಕಿಹೊಳಿ ದಿಲ್ಲಿಯಿಂದ ವಾಪಾಸ್ ಅಗುವ ಮೂಲಕ ‘ಆಪರೇಷನ್ ಕಮಲ’ ಈ ಬಾರಿಯೂ ವಿಫಲವಾಗುವ ಮುನ್ಸೂಚನೆ ನೀಡಿದ್ದಾರೆ. ಅಲ್ಲಿಗೆ, ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದ ಕರ್ನಾಟಕದ ಸಮ್ಮಿಶ್ರ ಸರಕಾರದ ಪತನದ ಬೆಳವಣಿಗೆಗಳಿಗೆ ವಿರಾಮ ಬಿದ್ದಂತಾಗಿದೆ.

ಹುಲಿ ಬಂತು ಹುಲಿ ಕಥೆ:

‘ಅಪರೇಷನ್ ಕಮಲ’ ಕರ್ನಾಟಕ ಹಾಗೂ ಕನ್ನಡಿಗರಿಗೆ ಹೊಸ ವಿಚಾರವೇನಲ್ಲ. 2008ರಲ್ಲಿ ಸರಕಾರ ರಚಿಸಲು ಬಿಜೆಪಿ ಹಾಗೂ ಬಿ. ಎಸ್. ಯಡಿಯೂರಪ್ಪ ನಡೆಸಿದ ಕಸರತ್ತಿನ ಹೆಸರೇ 'ಅಪರೇಷನ್ ಕಮಲ'. ರಾಜ್ಯಕ್ಕೆ ಅಪರೇಷನ್ ಕಮಲವನ್ನು ಪರಿಚಯಿಸಿದ ಕೀರ್ತಿ ಯಡಿಯೂರಪ್ಪನವರಿಗೆ ಸಲ್ಲುತ್ತದೆ. ಆದರೆ ಅಂದು ಅಪರೇಷನ್ ಕಮಲದ ಮೂಲಕ ಸರಕಾರ ರಚಿಸಿದ ಯಡಿಯೂರಪ್ಪನವರು ತುಂಬಾ ದಿನ ಆ ಕುರ್ಚಿಯಲ್ಲಿ ಕೂರಲಾಗಲಿಲ್ಲ. ಕೇವಲ ಎರಡೂವರೆ ವರ್ಷಕ್ಕೆ ಅಧಿಕಾರ ಕಳೆದುಕೊಂಡು ಭ್ರಷ್ಟಾಚಾರದ ಆರೋಪ ಹೊತ್ತು ಜೈಲು ಪಾಲಾದರು. ಆನಂತರ ಸದಾನಂದಗೌಡ, ಜಗದೀಶ್ ಶೆಟ್ಟರ್ ಕ್ರಮವಾಗಿ ಸಿಎಂ ಆದರು.

ಹೆಚ್ಚು ಕಡಿಮೆ ಇದೇ ಮಾದರಿಯ ರಾಜಕಾರಣವನ್ನು ಈ ಬಾರಿಯೂ ಮತ್ತೆ ಕಾರ್ಯರೂಪಕ್ಕೆ ಇಳಿಸಲು ಹೊರಟಿತ್ತು ಪ್ರತಿಪಕ್ಷ ಬಿಜೆಪಿ. ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ಆರಂಭದಿಂದಲೂ ಶಾಸಕರನ್ನು ಸೆಳೆಯುವ ಪ್ರಯತ್ನವನ್ನು ಜಾರಿಯಲ್ಲಿ ಇಟ್ಟುಕೊಂಡೇ ಬಂದಿತ್ತು ರಾಷ್ಟ್ರೀಯ ಪಕ್ಷ. ಇದಕ್ಕೆ ಪೂರಕ ಎಂಬಂತೆ, “ಸರಕಾರ ಉರುಳಬೇಕು ಎಂಬುದೇ ನಮ್ಮ ಬಯಕೆ. ರಾಜ್ಯದ ಜನತೆಯ ಭಯಕೆಯೂ ಅದೇ ಆಗಿದೆ. ಆ ದಿನಕ್ಕಾಗಿ ಕಾಯುತ್ತಿದ್ದೇವೆ. ಸರಕಾರ ಉರುಳಿದರೆ ಸಂತೋಷ ಪಡುತ್ತೇವೆ,” ಎಂದು ಬಿಜೆಪಿ ಶಾಸಕ ಸಿ. ಟಿ. ರವಿ ತರಹದವರು ಹೇಳಿಕೆಗಳನ್ನು ನೀಡಿಕೊಂಡು ಬರುತ್ತಿದ್ದರು.

ಬಿಜೆಪಿ ನಾಯಕರು ಸರಕಾರ ಬೀಳಿಸಲು ಹತ್ತಾರು ದಿನಾಂಕಗಳನ್ನು ನಿಗದಿ ಪಡಿಸಿದ್ದರು. ಯಾವುದೂ ಕೈಗೂಡಲಿಲ್ಲ. ಸಂಕ್ರಾಂತಿಗೆ ಸರಕಾರವನ್ನು ಬೀಳಿಸುವ ಪಣ ತೊಟ್ಟವರಂತೆ ಬಿಜೆಪಿ ಶಾಸಕರನ್ನು ದೂರದ ಹರಿಯಾಣದಲ್ಲಿ ಕೂಡಿಹಾಕಲಾಗಿತ್ತು. ಇದರ ಜತೆಗೆ ಕಾಂಗ್ರೆಸ್‌ನ ಅಸಮಾಧಾನಿತರನ್ನು ಸೆಳೆಯುವ ಯತ್ನ ನಡೆಯುತ್ತಿತ್ತು. ರಮೇಶ್ ಜಾರಕಿಹೋಳಿ ಸಹಜವಾಗಿಯೇ ಬಿಜೆಪಿಯ ಇಂತಹ ಆಸೆಗೆ ಪೂರಕವಾಗಿ ನಡೆದುಕೊಂಡಿದ್ದರು. ಆದರೆ, ಇದೀಗ ಅವರು ವಾಪಾಸ್ ಮರಳುವ ಮೂಲಕ ಸರಕಾರ ಬೀಳಿಸುವ ಕತೆ, ಹುಲಿ ಬಂತು ಹಲಿ ಕಥೆ ಎಂಬಂತಾಯಿತು.

ಬಿಜೆಪಿಗೆ ಅಧಿಕಾರದ ಆಸೆ ತೋರಿಸಿದ್ದ ಗೋಕಾಕ್‌ ಶಾಸಕ ರಮೇಶ್‌ ಜಾರಕಿಹೊಳಿ
ಬಿಜೆಪಿಗೆ ಅಧಿಕಾರದ ಆಸೆ ತೋರಿಸಿದ್ದ ಗೋಕಾಕ್‌ ಶಾಸಕ ರಮೇಶ್‌ ಜಾರಕಿಹೊಳಿ
/ಡೆಕ್ಕನ್‌ ಹೆರಾಲ್ಡ್‌

ಸಂಪುಟ ವಿಸ್ತರಣೆ ತಂದ ಆಪತ್ತು:

ಹಾಗೆ ನೋಡಿದರೆ, ಕರ್ನಾಟಕದಲ್ಲಿ ಇಂತಹದ್ದೊಂದು ಬಿಕ್ಕಟ್ಟು ಸೃಷ್ಟಿಯಾಗಲು ಕಾರಣ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್‌ ನಾಯಕರು. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ರಚನೆಯಾಗಿ 7 ತಿಂಗಳು ಕಳೆದಿದ್ದರು ಸಂಪುಟ ವಿಸ್ತರಣೆ ಮಾಡಲು ಎರಡೂ ಪಕ್ಷಗಳು ಮೀನಾಮೇಷ ಎಣಿಸುತ್ತಿದ್ದವು. ಇದರಿಂದ ಮಂತ್ರಿಗಿರಿ ಮೇಲೆ ಕಣ್ಣಿಟ್ಟಿದ್ದ ಕೆಲ ಶಾಸಕರಿಗೆ ಅತೃಪ್ತಿ ಕಾಡಿತ್ತು. ಕೊನೆಗೂ ಕಳೆದ ತಿಂಗಳು ಸಂಪುಟ ವಿಸ್ತರಣೆಗೆ ಮುಂದಾದ ಮೈತ್ರಿ ಸರಕಾರ ಕೆಪಿಜೆಪಿ ಶಾಸಕರಾದ ರಾಣಿ ಬೆನ್ನೂರಿನ ಆರ್.ಶಂಕರ್‌ರನ್ನು ಸಂಪುಟದಿಂದ ಕೈಬಿಟ್ಟಿತ್ತು. ಪರಿಣಾಮ ಇವರು ಸರಕಾರಕ್ಕೆ ತಾವು ನೀಡಿದ್ದ ಬೆಂಬಲವನ್ನು ವಾಪಾಸ್ ಪಡೆದಿದ್ದಾರೆ. ಈ ಕುರಿತು ಮುಂಬೈನಿಂದಲೇ ಸಭಾಧ್ಯಕ್ಷರಿಗೆ ಪತ್ರ ಬರೆದು ತಿಳಿಸಿದ್ದರು.

ಇದರ ಜತೆಗೆ, ಬಿಜೆಪಿಯ ಕೆಲವು ಶಾಸಕರನ್ನು ಸಮ್ಮಿಶ್ರ ಪಕ್ಷಗಳು ಸೆಳೆಯುವ ತಯಾರಿ ನಡೆಸುತ್ತಿವೆ ಎಂಬುದು ಸುದ್ದಿಯಾಗಿತ್ತು. ಹೀಗೇನಾದರೂ ನಡೆದರೆ ಮೊದಲೇ ಬಿಕ್ಕಟ್ಟಿನಲ್ಲಿರುವ ಬಿಜೆಪಿಗೆ ಮರ್ಮಾಘಾತವಾಗುವ ಸಾಧ್ಯತೆಗಳಿದ್ದವು.

ಜತೆಗೆ, ಉತ್ತರ ಭಾರತದ 5 ರಾಜ್ಯಗಳಲ್ಲಿ ಸೋಲನುಭವಿಸಿರುವ ಬಿಜೆಪಿ ಲೋಕಸಭಾ ಚುನಾವಣೆಯನ್ನು ಗೆಲ್ಲಲೇಬೇಕು ಎಂಬ ಅನಿವಾರ್ಯತೆಯಲ್ಲಿದೆ. ಕರ್ನಾಟಕದಿಂದ 20ಕ್ಕೂ ಅಧಿಕ ಸಂಸದರ ನಿರೀಕ್ಷೆಯಲ್ಲಿದೆ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಮುಂದುವರಿದರೆ, ಲೋಕಸಭೆಯಲ್ಲಿಯೂ ಇದು ಪರಿಣಾಮ ಬೀರಲಿದೆ. ಹೀಗಾಗಿ ಸಮ್ಮಿಶ್ರ ಸರಕಾರವೊಂದನ್ನು ಉರುಳಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ಸಂದೇಶವನ್ನು ಕಳುಹಿಸುವ ಮನಸ್ಸು ಮಾಡಿತ್ತು ಬಿಜೆಪಿ. ಆದರೆ ಅಂತಹದೊಂದು ಯತ್ನವೂ ಈಗ ವಿಫಲವಾದಂತೆ ಕಾಣಿಸುತ್ತಿದೆ.

ಇಬ್ಬರು ಪಕ್ಷೇತರ ಶಾಸಕರು ಸರಕಾರಕ್ಕೆ ಕೊಟ್ಟಿದ್ದ ಬೆಂಬಲವನ್ನು ಹಿಂಪಡೆಯುವಂತೆ ಮಾಡುವ ಮೂಲಕ ಮೊದಲ ಹಂತದ ಯಶಸ್ಸು ಗಳಿಸಿದ್ದರು ಯಡಿಯೂರಪ್ಪ. ಬಳ್ಳಾರಿಯ ಮೂವರು ಶಾಸಕರು ಎರಡು ದಿನಗಳಿಂದ ನನ್ನ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಬಳ್ಳಾರಿ ಸಂಸದ ವಿ.ಎಸ್‌. ಉಗ್ರಪ್ಪ ನೀಡಿರುವ ಹೇಳಿಕೆ ಅಪರೇಷನ್ ಕಮಲದ ಊಹಾಪೋಹಕ್ಕೆ ಇಂಬು ನೀಡಿತ್ತು. ಇದರ ಜತೆಗೆ ನಾನಾ ರಾಜ್ಯಗಳಲ್ಲಿ ರಾಷ್ಟ್ರೀಯ ಪಕ್ಷಗಳ ನಾಯಕರು ನೀಡುತ್ತಿದ್ದ ಹೇಳಿಕೆಗಳು, ಹೋಟೆಲ್‌ಗಳ ಎದುರಿಗೆ ನಡೆಯುತ್ತಿದ್ದ ಪ್ರತಿಭಟನೆಗಳು ಈ ಪ್ರಕ್ರಿಯೆಯನ್ನು ರೋಚಕಗೊಳಿಸಿದ್ದವು. ಈ ಮೂಲಕ ಕರ್ನಾಟಕ ರಾಜಕಾರಣ ಹೊಸ ಹಾದಿಗೆ ಹೊರಳಿಕೊಳ್ಳುವ ಸಾಧ್ಯತೆಗಳನ್ನು ತೋರಿಸಿದ್ದವು.

ಹೀಗೆ, ಎರಡು ದಿನಗಳ ಅಂತರದಲ್ಲಿ ಏನೆಲ್ಲಾ ರಾಜಕೀಯ ಬೆಳವಣಿಗೆಗಳು ನಡೆದವೋ ಅವೆಲ್ಲಾ ಸಮ್ಮಿಶ್ರ ಸರಕಾರದ ಅಧಿಕಾರದ ಬುಟ್ಟಿಗೆ ಕೈ ಹಾಕುವ ಸಾಧ್ಯತೆಯನ್ನು ಮುಂದೆ ಮಾಡಿದ್ದವು. ಆದರೆ, ಅಂಕಿ ಅಂಶಗಳು ಬಿಜೆಪಿಯ ಅಧಿಕಾರ ನಡೆಸುವ ಅವಕಾಶಕ್ಕೆ ಇರುವ ಅಡತಡೆಗಳನ್ನು ಸಾರಿ ಹೇಳುತ್ತಿದ್ದವು. ಹೀಗಿರುವಾಗ ಬುಧವಾರದ ಸಂಜೆ ಹೊತ್ತಿಗೆ ಒಂದಷ್ಟು ಬೆಳವಣಿಗೆಗಳನ್ನು ನಿರೀಕ್ಷಿಸಲಾಗಿತ್ತು. ಆದರೆ ಮಧ್ಯಾಹ್ನದ ಹೊತ್ತಿಗೆ ರಮೇಶ್ ಜಾರಕಿಹೊಳಿ ಯು-ಟರ್ನ್‌ ಒಟ್ಟಾರೆ ರಾಜಕೀಯ ಬೆಳವಣಿಗೆಗಳನ್ನು ಮತ್ತೆ ಆರಂಭವಾದಲ್ಲಿಗೇ ತಂದು ಬಿಟ್ಟಿದೆ. ಇದರಿಂದ ಲಾಭ ಯಾರಿಗಾಯಿತು? ಕಳೆದುಕೊಂಡವರು ಯಾರು? ಮುಂದಿನ ದಿನಗಳ ತೀರ್ಮಾನಗಳು ಉತ್ತರ ನೀಡಲಿವೆ.