samachara
www.samachara.com
‘ಈ 239 ದಿನಗಳು’: ಆಡಳಿತ ಮರೆತ ಸರಕಾರ; ಹೊಣೆಗೇಡಿತನ ಮೆರೆದ ವಿರೋಧ ಪಕ್ಷ
COVER STORY

‘ಈ 239 ದಿನಗಳು’: ಆಡಳಿತ ಮರೆತ ಸರಕಾರ; ಹೊಣೆಗೇಡಿತನ ಮೆರೆದ ವಿರೋಧ ಪಕ್ಷ

ಈವರೆಗಿನ ವ್ಯರ್ಥ ರಾಜಕೀಯ ಕಸರತ್ತುಗಳಿಗೆ ಜನರ ತೆರಿಗೆ ಹಣ ಪೋಲಾಗಿದೆ. ಇನ್ನಾದರೂ ಹೊಣೆಗಾರಿಕೆ ಇರುವ ಆಡಳಿತ ಸಿಗಲಿ, ವಿರೋಧ ಪಕ್ಷವೂ ತನ್ನ ಕರ್ತವ್ಯ ಮೆರೆಯಲಿ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇರಿಸಿಕೊಳ್ಳಬಹುದಾದ ಆಶಯ ಅಷ್ಟೆ. 

Team Samachara

ಸ್ವಂತ ಬಲದ ಸರಕಾರ ಅಥವಾ ಮೈತ್ರಿ ಸರಕಾರ ಯಾವುದೇ ಆಗಿರಲಿ; ಜನರ ಆಶೋತ್ತರಗಳನ್ನು ಈಡೇರಿಸುವುದು, ಆ ಮೂಲಕ ಅಭಿವೃದ್ಧಿಯ ಪಥದೆಡೆಗೆ ಕೊಂಡೊಯ್ಯುವುದು ಅವುಗಳ ಮೂಲ ಕರ್ತವ್ಯ. ವಿರೋಧ ಪಕ್ಷ ಎಂಬುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಕಾರದ ಕಾವಲು ನಾಯಿ ಇದ್ದಂತೆ. ಆಡಳಿತದ ಯಂತ್ರದಲ್ಲಿ ಯಾವುದೇ ಭಾಗದಲ್ಲಿ ಸರಕಾರ ತಪ್ಪೆಸಗಿದರೂ ಅದನ್ನು ಪ್ರಶ್ನಿಸುತ್ತಾ, ಹೆಜ್ಜೆ ಹೆಜ್ಜೆಗೂ ಎಚ್ಚರಿಸುವುದು ಆಡಳಿತ ಭಾಗವೇ ಆಗಿರುವ ವಿರೋಧ ಪಕ್ಷದ ಕೆಲಸ. ಇದು ಪ್ರಜಾಪ್ರಭುತ್ವ ಹೇಳುವ ಮೊದಲ ಪಾಠ. ಆದರೆ ಸದ್ಯ ಕರ್ನಾಟಕದಲ್ಲ ಕಳೆದ ಎರಡು ದಿನಗಳ ಅಂತರದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳು ಇಂತಹ ಯಾವ ಆಶಯಕ್ಕೆ ಹತ್ತಿರವಾಗಿದ್ದವು? ಸರಕಾರ ಇರಲಿ, ವಿರೋಧ ಪಕ್ಷವಿರಲಿ, ಮೇಲಿನ ಯಾವ ಮೌಲ್ಯಗಳನ್ನು ಪ್ರತಿಪಾದಿಸಲು ರೆಸಾರ್ಟ್‌ನಲ್ಲಿ ಬೀಡು ಬಿಟ್ಟಿದ್ದವು?

ಲೋಕಸಭಾ ಚುನಾವಣೆಗೆ ಮುಂಚೆ ಸರಕಾರವನ್ನು ಬೀಳಿಸಿಯೇ ತೀರುತ್ತೇವೆ ಎಂದು ಪಣತೊಟ್ಟಂತೆ ಕಳೆದ 7 ತಿಂಗಳಿನಿಂದ ಕೆಲಸ ಮಾಡಿದ ಬಿಜೆಪಿ ಒಂದೆಡೆ, ಹೇಗಾದರೂ ಸರಿ ಸರಕಾರವನ್ನು ಉಳಿಸಿಕೊಳ್ಳಬೇಕು ಎಂಬ ಪರಮಧ್ಯೇಯ ಮಾಡಿಕೊಂಡ ಕಾಂಗ್ರೆಸ್-ಜೆಡಿಎಸ್ ಮತ್ತೊಂದೆಡೆ. ಗಂಡ-ಹೆಂಡಿರ ಜಗಳದ ನಡುವೆ ಕೂಸು ಬಡವಾಯ್ತು ಎಂಬಂತೆ ಆಡಳಿತ-ವಿರೋಧ ಪಕ್ಷಗಳ ಅಧಿಕಾರದ ಲಾಲಸೆಗೆ ಬಡವಾಗಿದ್ದು ಮಾತ್ರ ರಾಜ್ಯದ ಜನ; ಪ್ರಜ್ಞಾವಂತ ಕರ್ನಾಟಕದ ಪ್ರಜೆಗಳು. ಕಳೆದ 7 ತಿಂಗಳಿನಿಂದ ರಾಜ್ಯದ ಅಭಿವೃದ್ಧಿ ಅಕ್ಷರಶಃ ಸ್ತಬ್ಧವಾಗಿದೆ. ಮುನ್ನಲೆಗೆ ಬರಬೇಕಿದ್ದ ರೈತರ, ಬಡವರ, ನಿರುದ್ಯೋಗಿಗಳ ಸಮಾಜದ ಮಧ್ಯಮ ಹಾಗೂ ಕೆಳವರ್ಗದ ಜನರ ಸಮಸ್ಯೆ ತೆರೆಮರೆಗೆ ಸರಿದಿದೆ. ಕಳೆದ ಏಳು ದಶಕಗಳಲ್ಲಿ ಕಾಣದ ಬರವನ್ನು ರಾಜ್ಯ ಎದುರಿಸುತ್ತಿದೆ. ಇಂತಹ ಸಮಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಸಾಮಾನ್ಯ ಜನರಿಗೂ ಅಸಹ್ಯ ಹುಟ್ಟು ಹಾಕಿದೆ.

ವಿರೋಧ ಪಕ್ಷವಾಗಿ ಬಿಜೆಪಿ:

ಸಾಮಾನ್ಯವಾಗಿ ವಿರೋಧ ಪಕ್ಷಗಳನ್ನು ಸರಕಾರದ ಹೊಣೆಗೇಡಿತನಗಳನ್ನು ಪ್ರಶ್ನಿಸಬೇಕು ಎಂದು ಜನ ಆರಿಸಿ ಕಳುಹಿಸಿರುತ್ತಾರೆ. ಯಾವುದೇ ಸರಕಾರ ಇರಲಿ, ನಿಷ್ಠೆಯಿಂದ ಅವುಗಳ ನೀತಿ ನಿರೂಪಣೆಗಳನ್ನು ಹಿಂಬಾಲಿಸುವುದು, ತಪ್ಪಾದಾಗ ಗುಡುಗುವ ಕೆಲಸವನ್ನು ವಿರೋಧ ಪಕ್ಷ ಮಾಡಬೇಕು. ಅದು ಸದನದ ಒಳಗಿರಲಿ, ಹೊರಗಿರಲಿ ವಿರೋಧ ಪಕ್ಷ ಜೀವಂತವಾಗಿದ್ದರೆ ಮಾತ್ರವೇ ಆಡಳಿತ ಸೂತ್ರ ಸರಿಯಾಗಿರಲು ಸಾಧ್ಯ ಎಂಬುದು ಒಟ್ಟಾರೆ ಸಂರಚನೆಯ ಸಾರಾಂಶ ಕೂಡ. ಆದರೆ, ಕರ್ನಾಟಕದಲ್ಲಿ ಇಷ್ಟವಿದ್ದೋ, ಇಲ್ಲದೆಯೋ ವಿರೋಧ ಪಕ್ಷದಲ್ಲಿ ಬಂದು ಕುಳಿತ ಬಿಜೆಪಿ ನಡೆಗಳು ಹೇಗಿವೆ?. “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಆಶೋತ್ತರಗಳಿಗೆ ವಿರುದ್ಧವಾಗಿ ಬಹುಮತ ಸರಕಾರವನ್ನು ಬೀಳಿಸಲು ಕಸರತ್ತು ನಡೆಸುವುದು ಪ್ರಜಾಪ್ರಭುತ್ವದ ತತ್ವಕ್ಕೆ ವಿರುದ್ಧವಾದ ನಡೆ. ಬಿಜೆಪಿ ಇಂತಹ ಹೆಜ್ಜೆಗೆ ಮುಂದಾಗಿದ್ದು ಅಕ್ಷಮ್ಯ. ಬಿಜೆಪಿಯ ಈ ನಡೆ ಜನರಿಗೆ ಆ ಪಕ್ಷದ ಕುರಿತು ತಪ್ಪು ಸಂದೇಶ ರವಾನಿಸುತ್ತದೆ,’’ ಎನ್ನುತ್ತಾರೆ ಸತ್ಯನಾರಾಯಣ್. ರಾಜ್ಯಶಾಸ್ತ್ರ ಉಪನ್ಯಾಕರಾಗಿರುವ ಇವರು ಕರ್ನಾಟಕದಲ್ಲಿ ಬಿಜೆಪಿ ಹಾಗೂ ಅದರ ನಾಯಕ ಯಡಿಯೂರಪ್ಪ ಅವರ ಬೆಳವಣಿಗೆ ಕುರಿತು ಸಂಶೋಧನೆ ನಡೆಸಿದ್ದಾರೆ. ಇವರೀಗ ಬಿಜೆಪಿಯ ಈ ‘ಆಪರೇಷನ್ ಕಮಲ’ದ ವ್ಯರ್ಥ ಪ್ರಯತ್ನಗಳು ಜನರಿಗೆ ತಪ್ಪು ಸಂದೇಶ ನೀಡುತ್ತಿದೆ ಎನ್ನುತ್ತಿದ್ದಾರೆ. ಬಹುಶಃ ಬಿಜೆಪಿಗೂ ಇದು ಅರ್ಥವಾದಂತೆ ಕಾಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಪಕ್ಷ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ.

ಬುಧವಾರದ ಪ್ರಹಸನದ ನಂತರ ಬಿಜೆಪಿ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆ.
ಬುಧವಾರದ ಪ್ರಹಸನದ ನಂತರ ಬಿಜೆಪಿ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆ.

ಕೇವಲ ಒಂದು ಪುಟದ ಈ ಪತ್ರಿಕಾ ಪ್ರಕಟಣೆಯಲ್ಲಿ 6 ಪ್ರಮುಖ ವಿಚಾರಗಳನ್ನು ತೇಲಿಸಿದೆ ರಾಷ್ಟ್ರೀಯ ಪಕ್ಷ ಬಿಜೆಪಿ. 'ಕಾಂಗ್ರೆಸ್ ನಡವಳಿಕೆಯ ಬಗ್ಗೆ ಹಲವು ಅನುಮಾನಗಳಿವೆ. ಕಾಂಗ್ರೆಸ್ ನಾಯಕರೆ ಮಗುವನ್ನು ಚಿವುಟುತ್ತಾ, ತೊಟ್ಟಿಲನ್ನು ತೂಗುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಪಕ್ಷದ ನಾಯಕರು ಯಾವ ಶಾಸಕರೂ ರಾಜೀನಾಮೆ ನೀಡುವುದಿಲ್ಲ ಎಂದು ಹೇಳುತ್ತಲೇ ಬಿಜೆಪಿ ಕುದುರೆ ವ್ಯಾಪಾರ ಮಾಡುತ್ತಿದೆ ಎಂದು ದೂರುತ್ತಾರೆ. ಅತೃಪ್ತ ಶಾಸಕರಿಗೆ ಸಮ್ಮಿಶ್ರ ಸರಕಾರದಲ್ಲಿ ಆಮಿಷ ತೋರಿಸಿ ಮೋಸ ಮಾಡಿದ್ದರಿಂದಲೇ ಈಗ ಅವರು ಬಂಡಾಯವೆದ್ದಿದ್ದಾರೆ. ಈಗಿನ ಬೆಳವಣಿಗೆಗೆ ಬಿಜೆಪಿ ಕಾರಣವಲ್ಲ. ಕಳೆದ 7 ತಿಂಗಳಿಂದಲೂ ಸಮ್ಮಿಶ್ರ ಸರಕಾರದಲ್ಲಿ ಉಂಟಾದ ಸಮಸ್ಯೆಗಳಿಗೆಲ್ಲ ಬಿಜೆಪಿಯನ್ನು ದೂರುವ ಏಕೈಕ ಕಾರ್ಯಸೂಚಿ ಕಾಂಗ್ರೆಸ್ ಪಕ್ಷದ್ದು. ಇವರು ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ,’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ದೂರಿದ್ದಾರೆ.

ಮೇಲಿನ ಇಷ್ಟೂ ಉಲ್ಲೇಖಗಳಲ್ಲಿ ಒಂದು ವಿಚಾರವೂ ಸ್ಪಷ್ಟವಾಗಿಲ್ಲ. ಆಡಳಿತ ಪಕ್ಷಗಳನ್ನು ಯಾಕೆ ದೂರುತ್ತಿದ್ದೀವಿ ಎಂಬುದರ ಸ್ಪಷ್ಟತೆಗಳು ಕಾಣಿಸುತ್ತಿಲ್ಲ. "ಕರ್ನಾಟಕದ ದುರಾದೃಷ್ಟವೋ ಏನೋ ಇಲ್ಲಿ ಯಾವುದು ಮೂಲ ಪ್ರಶ್ನೆಯಾಗಬೇಕಿತ್ತೋ ಅದು ಈವರೆಗೆ ಮುನ್ನಲೆಗೆ ಬರಲೇ ಇಲ್ಲ. ನಿರುದ್ಯೋಗ, ರೈತರ ಸಾಲ ಮನ್ನಾ, ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ, ಸೇರಿದಂತೆ ರಾಜ್ಯದ ಅಭಿವೃದ್ಧಿ ಕುರಿತು ಹತ್ತಾರು ಪ್ರಶ್ನೆಗಳು ಸಮಸ್ಯೆಗಳು ನಮ್ಮ ಮುಂದಿವೆ. ಕಳೆದ 7 ತಿಂಗಳಿನಿಂದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಈ ಯಾವ ಪ್ರಶ್ನೆಗಳಿಗೂ ಪರಿಹಾರ ಕಂಡುಕೊಳ್ಳಲಿಲ್ಲ ಎಂಬುದು ಎಷ್ಟು ಸತ್ಯವೋ, ಇದೇ ಪ್ರಶ್ನೆಗಳನ್ನೂ ಗುಣಾತ್ಮಕವಾಗಿ ಬದಲಿಸಿಕೊಂಡು ಸದಸನ ಒಳಗೂ ಹೊರಗೂ ಸರಕಾರವನ್ನು ಪ್ರಶ್ನಿಸಬೇಕಾದ ವಿರೋಧ ಪಕ್ಷವೂ ತನ್ನ ಜವಾಬ್ದಾರಿಯನ್ನು ನಿರ್ವಹಿಸಿಲ್ಲ ಎಂಬುದು ಅಷ್ಟೇ ಸತ್ಯ. ,’’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಬೆಂಗಳೂರು ಕೇಂದ್ರ ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಕಿರಣ್ ಗಾಜನೂರ್.

ಕಿರಣ್ ಹೇಳುವಂತೆ, ಬಿಜೆಪಿ ತನ್ನ ಬಳಿ ಇರುವ ಪ್ರಮುಖ ಅಸ್ತ್ರವಾದ ‘ಅಧಿಕೃತ ವಿರೋಧ ಪಕ್ಷ’ ಎಂಬ ಸಾಧ್ಯತೆಯನ್ನೇ ಮರೆತಂತೆ ಕಾಣಿಸುತ್ತಿದೆ. ಕಳೆದ ಏಳು ತಿಂಗಳುಗಳ ಆಡಳಿತದಲ್ಲಿ ಸದನ ಒಳಗಾಗಲೀ, ಹೊರಗಾಗಲಿ ಬಿಜೆಪಿ ಆಡಳಿತ ನಡೆಸುವ ಮೈತ್ರಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ರಾಜ್ಯದ ಜ್ವಲಂತ ಸಮಸ್ಯೆಗಳನ್ನು ಇಟ್ಟುಕೊಂಡು ಜನಾಂದೋಲ ರೂಪಿಸಿದ್ದು ಕಾಣಿಸುತ್ತಿಲ್ಲ. ಬದಲಿಗೆ, ಇಡೀ ವ್ಯವಸ್ಥೆಯನ್ನೇ ಗಬ್ಬೆಬ್ಬಿಸುವ ಅಸಹ್ಯಕರ ರಾಜಕೀಯ ಅಧಿಕಾರದ ಆಸೆಗೆ ಬಿದ್ದಿದೆ ವಿರೋಧ ಪಕ್ಷ.

ಆಳುವವರ ಹೊಣೆಗಾರಿಕೆ:

‘ಈ 239 ದಿನಗಳು’: ಆಡಳಿತ ಮರೆತ ಸರಕಾರ; ಹೊಣೆಗೇಡಿತನ ಮೆರೆದ ವಿರೋಧ ಪಕ್ಷ

ವಿರೋಧ ಪಕ್ಷದ ಕತೆ ಹೀಗಿದ್ದರೆ, ಅಧಿಕಾರ ನಡೆಸಲು ಬಂದವರಿಗೆ ಮೂಲ ಆಶಯಗಳು ನೆನಪಿರುವ ಸಾಧ್ಯತೆಗಳು ಎಲ್ಲಿಯೂ ವ್ಯಕ್ತವಾಗುತ್ತಿಲ್ಲ. ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿಕಾರ ವರ್ಗಕ್ಕೆ ಚಾಟಿ ಬೀಸುವ ಮಾತುಗಳನ್ನು ಆಡುತ್ತಾರೆ. ಸರಕಾರವನ್ನು ಟೇಕ್‌ ಆಫ್‌ ಮಾಡುತ್ತೇವೆ ಎನ್ನುತ್ತಾರೆ. ಇನ್ನೊಂದೆಡೆ ‘ನಾನು ಸಾಂದರ್ಭಿಕ ಶಿಶು’ ಎಂದು ಕಣ್ಣೀರು ಹಾಕುತ್ತಾರೆ. ಭ್ರಷ್ಟಾಚಾರದ ವಿಚಾರದಲ್ಲಿ, ಆಡಳಿತವನ್ನು ಜನರ ಬಳಿ ತೆಗೆದುಕೊಂಡು ಹೋಗುವ ವಿಚಾರದಲ್ಲಿ ಅವರದ್ದು ಈವರೆಗೆ ಕೇವಲ ಬಾಯಿ ಮಾತುಗಳಷ್ಟೆ ಆಗಿವೆ, ಕಾರ್ಯಗತದ ವಿಚಾರದಲ್ಲಿ ಸರಕಾರ ತನ್ನ ಬದ್ಧತೆಯನ್ನು ತೋರಿಸಿದ್ದು ಕಾಣುವುದಿಲ್ಲ.

"ಕಳೆದ 7 ತಿಂಗಳಿನಲ್ಲಿ ಒಂದೇ ಒಂದು ಜನಪರವಾದ ಯೋಜನೆಯನ್ನು ಜಾರಿಗೆ ತರಲು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದಿಂದ ಸಾಧ್ಯವಾಗುತ್ತಿಲ್ಲ. ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್ ಅಭಿವೃದ್ಧಿಯ ವಿಚಾರದಲ್ಲಿ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಜೊತೆ ಜೊತೆಗೆ ಹೆಜ್ಜೆ ಹಾಕುವುದು ಅಸಾಧ್ಯವಾದ ಮಾತು. ಯಾವುದೇ ನಿರ್ಣಯವನ್ನೂ ಕಾಂಗ್ರೆಸ್ ಅಪ್ಪಣೆ ಇಲ್ಲದೆ ಕುಮಾರಸ್ವಾಮಿ ತೆಗೆದುಕೊಳ್ಳುವಂತಿಲ್ಲ. ಪರಿಸ್ಥಿತಿ ಹೀಗಿದ್ದರೆ ಅಭಿವೃದ್ಧಿ ಹೇಗೆ ಸಾಧ್ಯ? ಹೀಗಾಗಿ ಪ್ರಜಾಪ್ರಭುತ್ವದಲ್ಲಿ ಮೈತ್ರಿ ಸರಕಾರಗಳ ಸಾಧ್ಯಾಸಾಧ್ಯತೆಗಳ ಕುರಿತು ಮತ್ತೊಮ್ಮೆ ಪರಾಮರ್ಶೆಯಾಗಬೇಕು," ಎನ್ನುತ್ತಾರೆ ಕುವೆಂಪು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾದ ಪ್ರವೀಣ್ ಕೋಣಂದೂರು.

ಮೈತ್ರಿ ಸರಕಾರ ಅವಕಾಶಗಳು, ನ್ಯೂನ್ಯತೆಗಳ ಕುರಿತು ರಾಜಕೀಯ ಮತ್ಸದ್ಧಿಗಳು ಆಲೋಚನೆ ಮಾಡಬೇಕಾದ ವಿಚಾರ. ಆದರೆ ಇಂತಹ ಜಿಜ್ಞಾಸೆಗಳ ನಡುವೆಯೂ ದಿನಗಳು ಉರುಳುತ್ತಿವೆ. ಸರಕಾರ 7 ತಿಂಗಳು ಕಳೆದಿದೆ. ಈವರೆಗಿನ ವ್ಯರ್ಥ ರಾಜಕೀಯ ಕಸರತ್ತುಗಳಿಗೆ ಜನರ ತೆರಿಗೆ ಹಣ ಪೋಲಾಗಿದೆ. ಇನ್ನಾದರೂ ಹೊಣೆಗಾರಿಕೆ ಇರುವ ಆಡಳಿತ ಜನರಿಗೆ ಸಿಗಲಿ, ವಿರೋಧ ಪಕ್ಷವೂ ಕೂಡ ತನ್ನ ಕರ್ತವ್ಯ ಮೆರೆಯಲಿ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇರಿಸಿಕೊಳ್ಳಬಹುದಾದ ಆಶಯ ಅಷ್ಟೆ. ವಾಸ್ತವ ಮಾತ್ರ ಬೇರೆಯದೇ ಇರುತ್ತವೆ.