samachara
www.samachara.com
ಬಣ್ಣ ಬಯಲಿಗಿಟ್ಟ ಬಿಕ್ಕಟ್ಟು: ಮೈತ್ರಿ ಸರಕಾರವನ್ನು ನಡೆಸುವುದು ಹೇಗೆ? 
COVER STORY

ಬಣ್ಣ ಬಯಲಿಗಿಟ್ಟ ಬಿಕ್ಕಟ್ಟು: ಮೈತ್ರಿ ಸರಕಾರವನ್ನು ನಡೆಸುವುದು ಹೇಗೆ? 

ರಾಜಕಾರಣ, ತಂತ್ರಗಾರಿಕೆ, ರೆಸಾರ್ಟ್‌ ವಾಸ್ತವ್ಯಗಳು ಎಂಬುದು ಅಧಿಕಾರ ಬದಲಾವಣೆಗೆ ನಾಂದಿ ಹಾಡಬಹುದೇ ಹೊರತು, ಜನರಿಗೆ ಇದರಿಂದ ಕನಿಷ್ಟ ಉಪಯೋಗ ಇಲ್ಲ.

Team Samachara

ಮೈತ್ರಿ ಸರಕಾರಗಳು; ಜನ ಒಂದು ಪಕ್ಷದ ಬಗ್ಗೆ ನಂಬಿಕೆ ಕಳೆದುಕೊಂಡ ಕಾಲದಲ್ಲಿ ಹುಟ್ಟಿದ ರಾಜಕೀಯ ಅನಿವಾರ್ಯತೆ ಇದು. ಕರ್ನಾಟಕದ ಮಟ್ಟಿಗೆ ಹೀಗೊಂದು ಸಾಧ್ಯತೆಯನ್ನು ತೋರಿಸಿದ್ದು 80ರ ದಶಕ ಮತ್ತು ರಾಮಕೃಷ್ಣ ಹೆಗಡೆ. ಅವತ್ತಿಂದ ಇಲ್ಲೀವರೆಗೆ ಕರ್ನಾಟಕದಲ್ಲಿ ಒಟ್ಟು ಮೂರು ಮೈತ್ರಿ ಸರಕಾರಗಳು ಆಡಳಿತ ನಡೆಸಿವೆ ಮತ್ತು ನಾಲ್ಕನೇಯದು ಕಳೆದ 7 ತಿಂಗಳುಗಳಿಂದ ಅಸ್ಥಿತ್ವದಲ್ಲಿದೆ.

ಸ್ವಾತಂತ್ರ ನಂತರ ದೇಶದಲ್ಲಿ ಪ್ರಶ್ನಾತೀತ ಅಧಿಕಾರವನ್ನು ನಾಲ್ಕು ದಶಕಗಳ ಕಾಲ ಅನುಭವಿಸಿದ್ದು ಕಾಂಗ್ರೆಸ್. ಅಷ್ಟೊತ್ತಿಗೆ ಹೆಮ್ಮರವಾಗಿ ಬೆಳೆದಿದ್ದ ಕಾಂಗ್ರೆಸ್‌ಗೆ ಪರ್ಯಾಯವೊಂದು ಅಗತ್ಯ ಅಂತ ಅನ್ನಿಸಿತು. ಈ ಸಮಯದಲ್ಲಿ ಕರ್ನಾಟಕದಲ್ಲಿ ಮೊಟ್ಟ ಮೊದಲ ಕಾಂಗ್ರೆಸ್ ಹೊರತಾದ ಮುಖ್ಯಮಂತ್ರಿ ಆಯ್ಕೆಗೆ ಕಾರಣವಾಯಿತು 1983ರ ಚುನಾವಣೆ. ಅವತ್ತಿಗೆ ಗೆದ್ದಿದ್ದ ಸುಮಾರು 16 ಸ್ವತಂತ್ರ ಶಾಸಕರು, ಬಿಜೆಪಿ ಹಾಗೂ ಎಡಪಕ್ಷಗಳ ಬಾಹ್ಯ ಬೆಂಬಲದೊಂದಿದೆ ರಾಮಕೃಷ್ಣ ಹೆಗಡೆ ಸರಕಾರ ರಚಿಸಿದರು. ಅದು ಹೆಚ್ಚು ದಿನ ಬಾಳಿಕೆ ಬರಲಿಲ್ಲ. ಒಂದು ವರ್ಷ, 354 ದಿನಗಳಿಗೆ ಸರಕಾರ ಬಿದ್ದು ಹೋಯಿತು. ಮತ್ತೆ ಚುನಾವಣೆ ನಡೆದು ಹೆಗಡೆ ಎರಡನೇ ಬಾರಿಗೆ ಮುಖ್ಯಮಂತ್ರಿಯಾದರು. ಹಾಗೆ ನೋಡಿದರೆ, ಈ ಪ್ರಕ್ರಿಯೆ ಸ್ವಾತಂತ್ರ ನಂತರದ ರಾಜಕೀಯ ಬೆಳವಣಿಗೆಯಲ್ಲಿ, ಕರ್ನಾಟಕ ಪಾಲಿಗೆ ಬಹುಮತ ಇಲ್ಲದೆಯೂ ಅಧಿಕಾರ ನಡೆಸಲು ಇರುವ ಸಾಧ್ಯತೆಯನ್ನು ತೋರಿಸಿತು.

ಇದಾದ ನಂತರ ಇಂತಹದ್ದೊಂದು ರಾಜಕೀಯ ಪರಿಸ್ಥಿತಿಗಳಿಗೆ ಕರ್ನಾಟಕ ಸಾಕ್ಷಿಯಾಗಿದ್ದು 2004ರ ಚುನಾವಣೆ ನಂತರ. ಫಲಿತಾಂಶ ಹೊರಬಿತ್ತು. ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ 132 ಸ್ಥಾನಗಳಿಂದ 65 ಸ್ಥಾನಗಳಿಗೆ ಕುಸಿಯಿತು. ಇತ್ತ ಜೆಡಿಎಸ್‌ 58 ಸ್ಥಾನಗಳಿಸುವ ಮೂಲಕ ಮೂರನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಕಾಂಗ್ರೆಸ್‌ನಿಂದ ಧರಂ ಸಿಂಗ್, ಜೆಡಿಎಸ್‌ನಿಂದ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾದರು.

ಆದರೆ ಜೆಡಿಎಸ್‌ ಒಳಗೆ ಎದ್ದ ಆಂತರಿಕ ಸಂಘರ್ಷ ಕುಮಾರಸ್ವಾಮಿ ರಾತ್ರೋರಾತ್ರಿ ಕಾರ್ಯಾಚರಣೆಗೆ ಅನುವು ಮಾಡಿಕೊಟ್ಟಿತು. ಮೈತ್ರಿ ಸರಕಾರ ಬಿದ್ದು ಹೋಗಿ, ಜೆಡಿಎಸ್‌- ಬಿಜೆಪಿ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂತು.

ಇಲ್ಲಿಯೂ ಕೂಡ 20 ತಿಂಗಳ ನಂತರ ಅಧಿಕಾರ ಹಸ್ತಾಂತರ ಪ್ರಕ್ರಿಯೆಯಲ್ಲಿ ಕಿತ್ತಾಟವಾಗಿ ಬಿಜೆಪಿ ಕಡೆಯಿಂದ ಯಡಿಯೂರಪ್ಪ ಮುಖ್ಯಮಂತ್ರಿಯಾದರೂ 7 ದಿನಗಳಿಗೆ ಸರಕಾರ ಬಿದ್ದು ಹೋಯಿತು. ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆಗೆ ಈ ರಾಜಕೀಯ ಬಿಕ್ಕಟ್ಟು ಕಾರಣವಾಯಿತು.

ಇದಾದ ನಂತರ ಚುನಾವಣೆ ನಡೆದು ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. 'ಆಪರೇಷನ್ ಕಮಲ' ಎಂಬ ಹೊಸ ರಾಜಕೀಯ ಸಾಧ್ಯತೆಯ ಮೂಲಕ ಅಧಿಕಾರ ನಡೆಸಿತು. ಮುಂದಿನ ಅವಧಿಗೆ ಜನ ಕಾಂಗ್ರೆಸ್‌ಗೆ ನಿಚ್ಚಳ ಬಹುಮತ ನೀಡಿ ಪೂರ್ಣಾವಧಿ ಸರಕಾರ ರಚನೆಗೆ ಕಾರಣರಾದರು. ಇದಾದ ನಂತರ 7 ತಿಂಗಳ ಹಿಂದೆ ಹೊರಬಿದ್ದ ಚುನಾವಣೆ ಫಲಿತಾಂಶ ಮತ್ತೆ ಸಮ್ಮಿಶ್ರ ತಳಿಯ ಸರಕಾರದ ಅನಿವಾರ್ಯತೆಯನ್ನು ಸೃಷ್ಟಿಸಿತು.

ರಾಜ್ಯದ ಕಾಂಗ್ರೆಸ್- ಜೆಡಿಎಸ್‌ ಸಮ್ಮಿಶ್ರ ಸರಕಾರಕ್ಕೆ ಭೂಮಿಕೆ ಸಿದ್ಧವಾಗಿದ್ದೇ ಫಲಿತಾಂಶ ಹೊರಬಿದ್ದ ನಂತರ. ಯಾರಿಗೂ ನಿಚ್ಚಳ ಬಹುಮತ ಇಲ್ಲ ಎಂದು ಗೊತ್ತಾಗುತ್ತಿದ್ದಂತೆ ಕಾಂಗ್ರೆಸ್ 'ಷರತ್ತು ರಹಿತ' ಬೆಂಬಲ ನೀಡುವ ಮೂಲಕ ಕೇವಲ 37 ಸ್ಥಾನಗಳನ್ನು ಗಳಿಸಿದ್ದ ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಟ್ಟಿತು. ಸಮನ್ವಯದ ಹೆಸರಿನಲ್ಲಿ ಸಮಿತಿಯೊಂದನ್ನು ರಚಿಸಿತು. ಅದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಅಧ್ಯಕ್ಷರನ್ನಾಗಿ ಮಾಡಿತು.

ಒಂದು ಕಡೆ ಈ ಕಾಲಘಟ್ಟದ ರಾಜಕೀಯ ಅನಿವಾರ್ಯತೆಯಾದ 'ಮೈತ್ರಿ ಸರಕಾರ'ವೊಂದು ಸ್ಥಾಪನೆಯಾದರೆ, ಪ್ರತಿಪಕ್ಷ ಬಿಜೆಪಿ ಮೊದಲ ದಿನದಿಂದಲೇ ಇದನ್ನು ಕೆಡವಲು ತಂತ್ರಗಾರಿಕೆ ಹೆಣೆದುಕೊಂಡೇ ಬಂತು. ಇವೆಲ್ಲದರ ಒಟ್ಟು ಪರಿಣಾಮ ಕಳೆದ 48 ಗಂಟೆಗಳಿಂದ ನಡೆಯುತ್ತಿರುವ ರಾಜಕೀಯ ಅಸಹ್ಯಗಳು.

ಮುಖ್ಯಮಂತ್ರಿ ಹುದ್ದೆಗೇರಲು ಶತಾಯ ಗತಾಯ ಯತ್ನಿಸುತ್ತಲೇ ಇರುವ ಯಡಿಯೂರಪ್ಪ.
ಮುಖ್ಯಮಂತ್ರಿ ಹುದ್ದೆಗೇರಲು ಶತಾಯ ಗತಾಯ ಯತ್ನಿಸುತ್ತಲೇ ಇರುವ ಯಡಿಯೂರಪ್ಪ.
/ಲೈವ್‌ಮಿಂಟ್‌

ಇಲ್ಲಿ ಪ್ರತಿಪಕ್ಷ ಬಿಜೆಪಿ ಸರಕಾರವನ್ನು ಹೇಗೆ ಕೆಡವುತ್ತೆ, ಮೈತ್ರಿ ಪಕ್ಷಗಳು ತಮ್ಮ ಅಧಿಕಾರವನ್ನು ಹೇಗೆ ಉಳಿಸಿಕೊಳ್ಳುತ್ತವೆ, ಮೂರೂ ಪಕ್ಷಗಳ ರಾಜಕೀಯ ತಂತ್ರಗಾರಿಕೆಗಳು ಏನು, ರಾಜಕಾರಣದಲ್ಲಿ ನೈತಿಕತೆ ಕಳೆದು ಹೋಗಿರುವುದರ ಸಂಕೇತಗಳು ಇವಾ ಎಂಬ ಕ್ಲೀಷೆಯಂತಾಗಿರುವ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ನಡೆಯುತ್ತಿದೆ. ಇವುಗಳಿಗೆ ಉತ್ತರ ಸಿಕ್ಕರೂ, ಬಿಟ್ಟರೂ ಆಡಳಿತದಲ್ಲಿ ಅಂತಹ ವ್ಯತ್ಯಾಸ ಏನೂ ಕಾಣಿಸುವುದಿಲ್ಲ.

ಆದರೆ, ಇದರ ಆಚೆಗೆ ಯಾಕೆ ಸಮ್ಮಿಶ್ರ ಸರಕಾರ ಎಂಬ ರಾಜಕೀಯ ಪ್ರಯೋಗಗಳು ಯಶಸ್ವಿಯಾಗುತ್ತಿಲ್ಲ? ಇಂತಹದೊಂದು ರಾಜಕೀಯ ಸಾಧ್ಯತೆಯನ್ನು ಯಾಕೆ ನಮ್ಮ ರಾಜಕಾರಣಿಗಳು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಲು ಸಾಧ್ಯವಾಗುತ್ತಿಲ್ಲ? ಪ್ರತಿ ಸಮ್ಮಿಶ್ರ ಸರಕಾರವೂ ಬಿಕ್ಕಟ್ಟಿನಲ್ಲಿಯೇ ನಡೆಯುವುದಾರೆ ಭವಿಷ್ಯದ ರಾಜಕಾರಣದ ಕತೆ ಏನು? ಇಂತಹ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಿರುವುದು ಈ ಕಾಲದ ಅಗತ್ಯ.

ಕರ್ನಾಟಕದಲ್ಲಿ 80ರ ದಶಕದಲ್ಲಿ ನಡೆದ ಪ್ರಯೋಗವಾಗಲಿ, 2004ರಲ್ಲಿ ನಡೆದ ಸಮ್ಮಿಶ್ರ ಸರಕಾರದ ಪ್ರಯೋಗಗಳು ಯಾಕೆ ವಿಫಲವಾದವು ಎಂಬುದು ಸದ್ಯಕ್ಕೆ ಅಪ್ರಸ್ತುತ. ಆದರೆ 2018ರಲ್ಲಿ ರಚನೆಯಾದ ಸಮ್ಮಿಶ್ರ ಸರಕಾರ ಯಾಕೆ ಬಿಕ್ಕಟ್ಟನ್ನು ಮೊದಲ ದಿನದಿಂದಲೂ ಎದುರಿಸಿಕೊಂಡು ಬರುತ್ತಿದೆ?

ಇದಕ್ಕಿರುವ ಪ್ರಮುಖ ಕಾರಣಗಳು ಇವು:

1. ಚುನಾವಣಾ ಫಲಿತಾಂಶದ ನಂತರ ಸೃಷ್ಟಿಯಾದ ಸರಕಾರ ಇದಾಗಿರುವುದರಿಂದ, ಸಮನ್ವಯದಲ್ಲಿ ನೀಡುವ ಆಡಳಿತ ಹೇಗಿರಲಿದೆ ಎಂಬುದರ ಬಗ್ಗೆ ಎರಡೂ ಪಕ್ಷಗಳಿಗೆ ಸ್ಪಷ್ಟತೆಯೊಂದು ಇವತ್ತಿಗೂ ಇದ್ದಂತಿಲ್ಲ.

2. ಇದಕ್ಕಾಗಿ 'ಸಾಮಾನ್ಯ ಕನಿಷ್ಟ ಕಾರ್ಯಕ್ರಮ'ವೊಂದನ್ನು ಎರಡೂ ಪಕ್ಷಗಳು ಅಧ್ಯಕ್ಷರು, ನಾಯಕರು ಕುಳಿತುಕೊಂಡು ರಚಿಸಬೇಕಿತ್ತು. ಇದನ್ನು ಸರಕಾರ ಅನುಷ್ಠಾನಕ್ಕೆ ತರುವ ಕೆಲಸ ಮಾಡಬೇಕಿತ್ತು. ಆದರೆ ಕಳೆದ 7 ತಿಂಗಳಲ್ಲಿ ಅಧಿಕಾರದಲ್ಲಿರುವ ಪಕ್ಷಗಳ ಅಧ್ಯಕ್ಷರು ನಾಮ್‌ ಕಾ ವಾಸ್ತೆ ಇದ್ದಾರೆ ಅಷ್ಟೆ. ಯಾವ ಕಾರ್ಯಕ್ರಮವೂ ಎದುರಿಗೆ ಇಲ್ಲ.

3. ಸಮ್ಮಿಶ್ರ ಸರಕಾರವನ್ನು ನಡೆಸುವುದು ಎಂದರೆ ಎರಡು ಭಿನ್ನ ರಾಜಕೀಯ ಪಕ್ಷಗಳ ನಾಯಕರನ್ನು ವಿಶ್ವಾಸದಲ್ಲಿ ಇಟ್ಟುಕೊಂಡು ಮುಂದುವರಿಯುವುದು ಎಂದರ್ಥ. ಈ ಕೆಲಸಕ್ಕೆ ಸಮನ್ವಯ ಸಮಿತಿ ಹೆಸರಿನಲ್ಲಿ ವೇದಿಕೆ ರಚನೆಯಾಗಿದೆ. ಆದರೆ ಇದರ ಕಾರ್ಯಸ್ವರೂಪ ಯಾರಿಗೂ ಅರ್ಥವಾಗುತ್ತಿಲ್ಲ. ಬದಲಿಗೆ ಹಲವು ಗೊಂದಲಗಳಿಗೆ ಇದೇ ಮೂಲವಾಗುತ್ತಿದೆ. ಉದಾಹರಣೆಗೆ, ಕನ್ನಡ ಮಾಧ್ಯಮ ಶಾಲೆಗಳ ವಿಚಾರದಲ್ಲಿ ಸರಕಾರದ ನಿಲುವು ಒಂದಾದರೆ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ನಿಲುವು ಬೇರೆಯದೇ ಇರುತ್ತದೆ.

4. ಪ್ರತಿಪಕ್ಷವನ್ನು ಅಧಿಕಾರದಿಂದ ದೂರ ಇಡುವುದಕ್ಕಾಗಿಯೇ ಸಮ್ಮಿಶ್ರ ಸರಕಾರದ ಆಡಳಿತ ನಡೆಸುವಂತಾದರೆ ಅದಕ್ಕಿಂತ ವ್ಯಂಗ್ಯ ಮತ್ತೊಂದಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸುವ, ಬರದಂತಹ ಜ್ವಲಂತ ವಿಚಾರಗಳಿಗೆ ಪರಿಹಾರ ನೀಡಬೇಕಾದ ಕೆಲಸಗಳ ಕಡೆಗೆ ಗಮನ ಹರಿಸಲು ಸಾಧ್ಯವಾಗದ ಆಡಳಿತವನ್ನು ಜನ ನಿರೀಕ್ಷೆ ಮಾಡುವುದಿಲ್ಲ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು.

5. ಇವೆಲ್ಲದರ ಜತೆಗೆ, ಮೈತ್ರಿ ಸರಕಾರ ಎಂಬುದು ಈ ಕಾಲಘಟ್ಟದ ರಾಜಕೀಯ ಅನಿವಾರ್ಯತೆ. ಕರ್ನಾಟಕ ಬಿಡಿ, ಭಾರತ ಬಿಡಿ, ಪ್ರಪಂಚದ ಹಲವು ದೇಶಗಳಲ್ಲಿ ಇಂತಹ ಕೂಡಿಕೆ ಸರಕಾರಗಳು ಇವತ್ತು ಅಧಿಕಾರದಲ್ಲಿವೆ. ಹೀಗಾಗಿ, ಇಂತಹ ಸರಕಾರಗಳನ್ನು ನಡೆಸಲು ಹೊಸ ಮಾದರಿಯ ಕೌಶಲ್ಯಗಳನ್ನು ಹುಡುಕುವ ಪ್ರಕ್ರಿಯೆ ಕಾಣಿಸುತ್ತಿದೆ. ಇದನ್ನು ಕರ್ನಾಟಕದ ಸಮ್ಮಿಶ್ರ ಸರಕಾರದ ಹೊಣೆ ಹೊತ್ತವರು ಗಮನಿಸಬೇಕಿದೆ. ವ್ಯಕ್ತಿಗತ ರಾಜಕೀಯ ಲೆಕ್ಕಾಚಾರಗಳನ್ನು ಪಕ್ಕಕ್ಕಿಟ್ಟು ಇರುವ ಅವಕಾಶವನ್ನು ಬಳಸಿಕೊಂಡು ಹೊಸ ಮಾದರಿಯ ಸಮ್ಮಿಶ್ರ ರಾಜಕಾರಣವನ್ನು ಕಟ್ಟುವ ಕೆಲಸ ಇಲ್ಲಿ ಕಾಣಿಸುತ್ತಿಲ್ಲ. ಜನರ ತೆರಿಗೆ ಹಣದಲ್ಲಿ ನಡೆಯುವ ರಾಜಕಾರಣ, ಆಡಳಿತ ಪ್ರಜೆಗಳ ಅನುಕೂಲಕ್ಕೆ ಎಂಬುದನ್ನು ಸಾರಿ ಹೇಳುವ ಕೆಲಸ ಕಳೆದ 7 ತಿಂಗಳಲ್ಲಿ ನಡೆದಿಲ್ಲ.

ರಾಜಕಾರಣ, ತಂತ್ರಗಾರಿಕೆ, ರೆಸಾರ್ಟ್‌ ವಾಸ್ತವ್ಯಗಳು ಎಂಬುದು ಅಧಿಕಾರ ಬದಲಾವಣೆಗೆ ನಾಂದಿ ಹಾಡಬಹುದೇ ಹೊರತು, ಜನರಿಗೆ ಇದರಿಂದ ಕನಿಷ್ಟ ಉಪಯೋಗ ಇಲ್ಲ. ಇದು ಯಥಾ ಪ್ರಜಾ, ತಥಾ ರಾಜರ ಕತೆ ಅಷ್ಟೆ.