samachara
www.samachara.com
ಹಳಿ ತಪ್ಪಿದ ಬಿಎಸ್‌ಎನ್‌ಎಲ್‌ ಹುಳುಕುಗಳಿಗೆ ಕನ್ನಡಿ ಹಿಡಿದ ಐಐಎಂ ವರದಿಯಲ್ಲೇನಿದೆ? 
COVER STORY

ಹಳಿ ತಪ್ಪಿದ ಬಿಎಸ್‌ಎನ್‌ಎಲ್‌ ಹುಳುಕುಗಳಿಗೆ ಕನ್ನಡಿ ಹಿಡಿದ ಐಐಎಂ ವರದಿಯಲ್ಲೇನಿದೆ? 

ಬಿಎಸ್‌ಎನ್‌ಎಲ್‌ ಮುಖ್ಯವಾಗಿ ತಾಂತ್ರಿಕವಾಗಿ ಮತ್ತು ಮಾರುಕಟ್ಟೆ ವಿಚಾರದಲ್ಲಿ ಹಿಂದುಳಿದಿದೆ. ಅದರಲ್ಲೂ 5ಜಿ, ಐಒಟಿಯಂತ ತಂತ್ರಜ್ಞಾನಗಳ ವಿಚಾರದಲ್ಲಿ ಬಿಎಸ್‌ಎನ್‌ಎಲ್‌ ಬಹಳ ಹಿಂದುಳಿದಿದೆ ಎಂದು ವರದಿ ವಿವರಿಸಿದೆ.

Team Samachara

ಒಂದು ಕಾಲದಲ್ಲಿ ಭಾರತದಲ್ಲಿ ಸಂಪರ್ಕ ಕ್ರಾಂತಿ ಸೃಷ್ಟಿಸಿದ್ದ ಸರಕಾರಿ ಸ್ವಾಮ್ಯದ ಸಂಸ್ಥೆ ಬಿಎಸ್‌ಎನ್‌ಎಲ್‌ ನಷ್ಟದ ಹಾದಿ ಹಿಡಿದು ಹಲವು ವರ್ಷಗಳೇ ಕಳೆದಿವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಜಿಯೋ ಪ್ರವೇಶದ ನಂತರ ಭಾರತ್‌ ಸಂಚಾರ ನಿಗಮ ಲಿಮಿಟೆಡ್‌ (ಬಿಎಸ್‌ಎನ್‌ಎಲ್‌) ಹೇಳ ಹೆಸರಿಲ್ಲದಂತಾಗಿದೆ. ಯಾಕೆ ಹೀಗಾಯ್ತು? ಎಂಬ ಪ್ರಶ್ನೆಗೆ ಅಹಮದಾಬಾದ್‌ನ ಐಐಎಂನ ವರದಿ ಕನ್ನಡಿ ಹಿಡಿದಿದೆ.

ಬಿಎಸ್‌ಎನ್‌ಎಲ್‌ಗೆ ಯಾವ ರೀತಿಯಲ್ಲಿ ಪುನರ್ಜನ್ಮ ನೀಡಬಹುದು ಎಂಬುದರ ಕುರಿತಾಗಿ ಈ ವರದಿ ತಯಾರಿಸಲಾಗಿದೆ. ಹೀಗೆ ವರದಿ ಸಿದ್ಧಪಡಿಸಲು ಹೋದಾಗ ಸಂಸ್ಥೆಯ ಹುಳುಕುಗಳು ತಜ್ಞರಿಗೆ ಎದುರಾಗಿವೆ. ಸಂಸ್ಥೆಯ ನೀತಿಗಳಿಂದ ಹಿಡಿದು, ವ್ಯವಸ್ಥೆಗೆ ಸಂಬಂಧಿಸಿದ ಗಂಭೀರ ಲೋಪಗಳು ಬಿಎಸ್‌ಎನ್‌ಎಲ್‌ನಲ್ಲಿ ಇದೆ ಎಂದು ಈ ವರದಿ ಹೇಳಿದೆ.

ಮುಖ್ಯವಾಗಿ ಸಾರ್ವಜನಿಕ ರಂಗದ ಸಂಸ್ಥೆ ತಾಂತ್ರಿಕವಾಗಿ ಮತ್ತು ಮಾರುಕಟ್ಟೆ ವಿಚಾರದಲ್ಲಿ ಹಿಂದುಳಿದಿದೆ ಎಂದು ವರದಿ ತಿಳಿಸಿದೆ. 5ಜಿ, ಐಒಟಿಯಂತ ತಂತ್ರಜ್ಞಾನಗಳ ವಿಚಾರದಲ್ಲಿ ಬಿಎಸ್‌ಎನ್‌ಎಲ್‌ ಬಹಳ ಹಿಂದುಳಿದಿದೆ ಎಂದು ವರದಿ ವಿವರಿಸಿದೆ.

“ಬಿಎಸ್‌ಎನ್‌ಎಲ್‌ನ ಬೆಳವಣಿಗೆಯಲ್ಲಿ ತಂತ್ರಜ್ಞಾನದ ಕ್ಷಿಪ್ರ ಬೆಳವಣಿಗೆ (5 ಜಿ, ಐಓಟಿ), ವೇಗವಾಗಿ ಬೆಳೆಯುತ್ತಿರುವ ಗ್ರಾಹಕರ ಡೇಟಾ ಬಳಕೆಯ ಅಗತ್ಯಗಳು, ಮಾರುಕಟ್ಟೆಯ ಮಾದರಿಗಳನ್ನು ಬದಲಾಯಿಸುವುದು ಹೆಚ್ಚಿನ ಪಾತ್ರವನ್ನು ವಹಿಸುತ್ತವೆ. ತಂತ್ರಜ್ಞಾನ/ ಮಾರುಕಟ್ಟೆ ಮಾದರಿಗಳಲ್ಲಿ ಸಂಸ್ಥೆ ಚುರುಕುತನ, ನಿರ್ಮಾಣ ಪಾಲುದಾರಿಕೆಗಳನ್ನು ಹೊಂದುವುದು, ವೆಚ್ಚಗಳನ್ನು ತಗ್ಗಿಸುವುದು ಮತ್ತು ಹೊಸತನಕ್ಕೆ ತೆರೆದುಕೊಳ್ಳುವುದು ಮುಖ್ಯವಾಗುತ್ತದೆ. ಈ ಎಲ್ಲಾ ಆಯಾಮಗಳಲ್ಲಿ ಬಿಎಸ್ಎನ್ಎಲ್‌ನ ಮುಂದೆ ಗಂಭೀರವಾದ ಸವಾಲುಗಳಿವೆ,” ಎಂದು ಮಧ್ಯಂತರ ವರದಿ ವಿವರಿಸಿದೆ.

ಇದರ ಜತೆಗೆ ಬಿಎಸ್‌ಎನ್‌ಎಲ್‌ ಸಂಪೂರ್ಣ ಸರಕಾರಿ ಸ್ವಾಮ್ಯದ್ದಾಗಿರುವುದರಿಂದ ಕಂಪನಿಯ ನೀತಿ ನಿರ್ಧಾರಗಳಲ್ಲಿ ವಿಳಂಬವಾಗುತ್ತಿದೆ. ಇದು ಕೂಡ ಕಂಪನಿ ಮೇಲೆ ಪರಿಣಾಮ ಬೀರುತ್ತಿದೆ. ಈಗಾಗಲೆ ಸರಕಾರ ತನ್ನ ಮಾನವ ಸಂಪನ್ಮೂಲವನ್ನು ಬಿಎಸ್ಎನ್‌ಎಲ್‌ಗೆ ಹಸ್ತಾಂತರಿಸಿದೆ. ಆದರೆ ಆಸ್ತಿಗಳನ್ನು ಹಸ್ತಾಂತರಿಸಿಲ್ಲ. ಹೀಗಾಗಿ ಬಿಎಸ್‌ಎನ್‌ಎಲ್‌ಗೆ ಸೇರಿದ ಭೂಮಿ ಮತ್ತು ಕಟ್ಟಡದ ಒಡೆತನದ ಬಗ್ಗೆ ಇನ್ನೂ ಗೊಂದಲಗಳಿವೆ.

‘ಕನೆಕ್ಟಿಂಗ್ ಇಂಡಿಯಾ’ ಎಂಬ ಟ್ಯಾಗ್‌ಲೈನ್‌ ಬಿಎಸ್‌ಎನ್‌ಎಲ್‌ ಹೊಂದಿದ್ದರೂ, ದೇಶದ ದೂರಸಂಪರ್ಕ ಕ್ರಾಂತಿಯಲ್ಲಿ ಹಿಂದುಳಿದೆ. 
‘ಕನೆಕ್ಟಿಂಗ್ ಇಂಡಿಯಾ’ ಎಂಬ ಟ್ಯಾಗ್‌ಲೈನ್‌ ಬಿಎಸ್‌ಎನ್‌ಎಲ್‌ ಹೊಂದಿದ್ದರೂ, ದೇಶದ ದೂರಸಂಪರ್ಕ ಕ್ರಾಂತಿಯಲ್ಲಿ ಹಿಂದುಳಿದೆ. 

ಇವೆಲ್ಲಾ ಅಲ್ಲದೆ ಕಂಪನಿಯ ಸೋಮಾರಿತನ ಸಂಸ್ಥೆಯನ್ನೇ ಮುಳುಗಿಸುತ್ತಿದೆ. ಮುಖ್ಯವಾಗಿ 4ಜಿ ತರಂಗಗಳನ್ನು ಪಡೆದುಕೊಂಡೂ ಅವುಗಳನ್ನು ಅನುಷ್ಠಾನಗೊಳಿಸಲು ಕಂಪನಿ ಮುಂದಾಗಲಿಲ್ಲ. 2500 ಮೆಗಾ ಹರ್ಟ್ಸ್‌ ತರಂಗವನ್ನು ಬಿಎಸ್‌ಎನ್‌ಎಲ್‌ಗೆ ನೀಡಲಾಗಿತ್ತು. ಆದರೆ ತನ್ನಲ್ಲಿ ಅದಕ್ಕೆ ಬೇಕಾದ ವಾತಾವರಣ ಇಲ್ಲ ಎಂಬ ಕಾರಣಕ್ಕೆ ಸಂಸ್ಥೆ ಅದನ್ನು ಹಿಂದಕ್ಕೆ ನೀಡಲು ಹೊರಟಿತ್ತು. ಜತೆಗೆ 2100 ಮೆಗಾ ಹರ್ಟ್ಸ್‌ ತರಂಗವನ್ನೂ ಯಾಕೆ ಬಿಎಸ್‌ಎನ್‌ಎಲ್‌ ಬಳಸಿಕೊಂಡಿಲ್ಲ ಎಂಬುದಕ್ಕೂ ಸರಿಯಾದ ಉತ್ತರಗಳಿಲ್ಲ. ಇದಕ್ಕೆ ಬೇಕಾದ ವಾತಾವರಣ ಈಗಾಗಲೇ ಅಭಿವೃದ್ಧಿಗೊಂಡಿದ್ದು ಹಲವು ಕಂಪನಿಗಳು ಇದನ್ನು 4ಜಿಗೆ ಬಳಸುತ್ತಿವೆ. ಆದರೆ ಬಿಎಸ್‌ಎನ್‌ಎಲ್‌ ಮಾತ್ರ ಅತ್ತ ಬೆನ್ನು ತೀರುಗಿಸಿ ನಿಂತಿದ್ದು ಇನ್ನೂ 3ಜಿಯಲ್ಲೇ ಹೆಣಗಾಡುತ್ತಿದೆ.

ಸದ್ಯ ಕೇಳಿದರೆ ಟೆಲಿಕಾಂ ಇಲಾಖೆ ತರಂಗ ಹಂಚಿಕೆ ಮಾಡುವಲ್ಲಿ ವಿಳಂಬವಾಯಿತು ಎಂಬ ಉತ್ತರವನ್ನು ಬಿಎಸ್‌ಎನ್‌ಎಲ್‌ ನೀಡುತ್ತಿದೆ. ಆದರೆ ಇದು ಪೂರ್ತಿ ಸತ್ಯವಲ್ಲ. ಬದಲಿಗೆ ಹಂಚಿಕೆ ಮಾಡಿದ ತರಂಗವನ್ನು ಬಳಕೆಗೆ ಹೇಗೆ ತರಬೇಕು ಎಂಬುದರತ್ತ ಬಿಎಸ್‌ಎನ್‌ಎಲ್‌ ಚಿತ್ತ ಹರಿಸಲಿಲ್ಲ ಎನ್ನುತ್ತದೆ ಈ ವರದಿ.

ಈ ವರದಿ ಬಿಎಸ್ಎನ್ಎಲ್‌ನ ಪ್ರಗತಿಯ ನಿರ್ವಹಣೆ ಮತ್ತು ಪ್ರಚಾರ ನೀತಿ ಮೇಲೆ ಕಟುವಾದ ದಾಳಿ ಮಾಡಿದೆ. “ಸಂಸ್ಥೆ ಸ್ಥಾಪನೆಯಾಗಿ 19 ವರ್ಷಗಳ ನಂತರವೂ ಕಂಪನಿಗೊಂದು ಸರಿಯಾದ ನೀತಿಗಳೇ ಇಲ್ಲ. ಯಾವುದೋ ಒಂದು ಸಮಯದಲ್ಲಿ ಪ್ರಚಾರ ಮಾಡಲಾಗುತ್ತದೆ. ನಂತರ ಆ ಬಗ್ಗೆ ಏನೂ ನಡೆಯುವುದಿಲ್ಲ. ಸಂಸ್ಥೆಯಲ್ಲಿ ವೃತ್ತಿಪರ ನಾಯಕತ್ವದ ಕೊರತೆ ಇದೆ. ಇವತ್ತು ಕಳಪೆ ಗುಣಮಟ್ಟದ ಜನರೇ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ,” ಎಂದು ಅದು ಹೇಳಿದೆ.

ಕಂಪನಿಯ ಮೊಬೈಲ್‌ ಪ್ಲ್ಯಾನ್‌ಗಳೆಲ್ಲಾ ಕೇಂದ್ರೀಕೃತವಾಗಿರುವುದರಿಂದ ತಮಗೆ ಬೇಕಾದಂತೆ ಪ್ಲ್ಯಾನ್‌ಗಳನ್ನು ಆಯಾ ಪ್ರಾದೇಶಿಕ ಮಾರುಕಟ್ಟೆಯಲ್ಲಿ ನೀಡಲು ಸಾಧ್ಯವಾಗುತ್ತಿಲ್ಲ. ಜತೆಗೆ ಸಿಬ್ಬಂದಿಗಳನ್ನು ಉತ್ತೇಜಿಸಲು ಇನ್ಸೆಂಟಿವ್‌ ನೀಡುವಂತ ವ್ಯವಸ್ಥೆಗಳಿಲ್ಲ. ನಿರಂತರ ಸಿಬ್ಬಂದಿಗಳ ವರ್ಗಾವಣೆಗಳು ಸಂಸ್ಥೆಯ ಸೇವೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿವೆ. ಜತೆಗೆ ಪಾಲುದಾರಿಕೆ ಮತ್ತು ಮಾರುಕಟ್ಟೆ ನೀತಿಯನ್ನು ಹೊಂದುವಲ್ಲಿ ಸಂಸ್ಥೆ ವಿಫಲವಾಗಿದ್ದು ಅದರ ಮುಂದೆ ದೊಡ್ಡ ಸವಾಲೇ ಇದೆ.

ಇವತ್ತಿನ ಹೆಚ್ಚಿನ ಕಂಪನಿಗಳು ಉಪ ಕಂಪನಿಗಳನ್ನು ತೆರೆದು ಕೆಳ ಮಟ್ಟದ ಕೆಲಸಗಳನ್ನು ನಿರ್ವಹಣೆ ಮಾಡುತ್ತವೆ. ಅದರೆ ಬಿಎಸ್‌ಎನ್‌ಎಲ್‌ ಒಂದೇ ಕಂಪನಿಯಾಗಿ ಎಲ್ಲಾ ಕೆಲಸಗಳನ್ನು ನಿರ್ವಹಣೆ ಮಾಡುತ್ತಿರುವುದೂ ಸರಿ ಬರುತ್ತಿಲ್ಲ. ಇದಲ್ಲದೆ 1.71 ಲಕ್ಷ ಜನರು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಶೇಕಡಾ 70ರಷ್ಟು ಜನರು ಟೆಲಿಕಾಂ ಇಲಾಖೆಯಿಂದ 2000ನೇ ಇಸವಿಯಲ್ಲಿ ಬಿಎಸ್‌ಎನ್‌ಎಲ್‌ ರಚನೆಯಾದಾಗ ಕಂಪನಿಗೆ ಬಂದವರು. ಇವರ ಸರಾಸರಿ ವಯಸ್ಸು 55 ವರ್ಷ. ಸೇವೆಗಳ ಗುಣಮಟ್ಟ ಹೆಚ್ಚಿಸಲು ಇವರಿಗೆ ಆಸಕ್ತಿಯಿಲ್ಲ, ಜತೆಗೆ ತಾಂತ್ರಿಕ ಜ್ಞಾನದ ಕೊರತೆಯೂ ಇದೆ

ಸಿಬ್ಬಂದಿಗಳಲ್ಲಿ ಉತ್ಸಾಹದ ಕೊರತೆಯಿಂದ ಗ್ರಾಹಕ ಸೇವೆಗಳು ಕಳಪೆಯಾಗುತ್ತಿವೆ. ಪರಿಣಾಮ ಚಂದಾದಾರರ ಬೇರೊಂದು ನೆಟ್ವರ್ಕ್‌ ನೆಚ್ಚಿಕೊಳ್ಳುತ್ತಿದ್ದಾರೆ. ಹಲವು ಸಂದರ್ಭದಲ್ಲಿ ಚಂದಾದಾರರು ದೊಡ್ಡ ಮಟ್ಟಕ್ಕೆ ಕುಸಿತವಾದಾಗಲೂ ಸಂಸ್ಥೆ ಅಲ್ಲಿನ ಕೇಂದ್ರಗಳನ್ನು ಮುಚ್ಚುತ್ತಿಲ್ಲ. ಹೀಗಾಗಿ ಗೊತ್ತು ಗುರಿಗಳಿಲ್ಲದೆ ಅನಗತ್ಯ ಸಂಪನ್ಮೂಲದ ವಿನಿಯೋಗ ನಡೆಯುತ್ತಿದೆ. ಎಲ್ಲದರ ಪರಿಣಾಮ ಬಿಎಸ್‌ಎನ್‌ಎಲ್‌ ಎಂಬ ಐತಿಹಾಸಿಕ ಕಂಪನಿಯ ಬೆಳವಣಿಗೆಯ ಗ್ರಾಫ್‌ ಭಾರೀ ವೇಗದಲ್ಲಿ ಕೆಳಗಿಳಿಯುತ್ತಿದೆ. ಹೀಗೇ ಮುಂದುವರಿದರೆ ಮುಂದೊಂದು ದಿನ ಇದು ನೆನಪಿನ ಬುತ್ತಿ ಸೇರಲಿದೆ. ಜೀಯೋ ಜಾಹೀರಾತಿಗೆ ಮುಖಪುಟದಲ್ಲಿ ಮಿಂಚಿದವರು ಈ ಬಗ್ಗೆ ಗಮನ ಹರಿಸಬೇಕಿದೆ.