samachara
www.samachara.com
‘ಸಂಘಿ ಪುತ್ರ’- 3: ಪವಾರ್ ಅನುಕರಣೆ ಮಾಡುತ್ತಿದ್ದ ಗಡ್ಕರಿ ಹಗರಣವನ್ನು ‘ಪ್ಲಾಂಟ್’ ಮಾಡಿದ್ದರು ಜೇಟ್ಲಿ!
COVER STORY

‘ಸಂಘಿ ಪುತ್ರ’- 3: ಪವಾರ್ ಅನುಕರಣೆ ಮಾಡುತ್ತಿದ್ದ ಗಡ್ಕರಿ ಹಗರಣವನ್ನು ‘ಪ್ಲಾಂಟ್’ ಮಾಡಿದ್ದರು ಜೇಟ್ಲಿ!

ಬಿಜೆಪಿ ಅಧ್ಯಕ್ಷರಾಗುತ್ತಿದ್ದಂತೆ ‘ಪೂರ್ತಿ ಗ್ರೂಪ್’ ಜತೆಗಿನ ಎಲ್ಲಾ ಸಂಬಂಧಗಳನ್ನು ಮುರಿದುಕೊಳ್ಳುವಂತೆ ಪವಾರ್‌ ಗಡ್ಕರಿಗೆ ಸೂಚಿಸಿದ್ದರು. ಆದರೆ ಅವರದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಪರಿಣಾಮ ಏನಾಯಿತು? ಸ್ಟೋರಿ ಓದಿ.

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

  • ಭಾಗ- 3

ಅದು 2009 ಬೇಸಿಗೆಯ ಸಮಯ. ಕೇಂದ್ರ ರೈಲ್ವೇ ಸಚಿವೆಯಾಗಿದ್ದ ಮಮತಾ ಬ್ಯಾನರ್ಜಿಯನ್ನು ಕರ್ನಾಟಕದ ಅನಂತ್‌ ಕುಮಾರ್‌ ನೇತೃತ್ವದ ನಿಯೋಗ ಯಾವುದೋ ವಿಚಾರಕ್ಕೆ ಭೇಟಿಯಾಗಿತ್ತು. ಆಗ ಬಿಜೆಪಿ ಅಧ್ಯಕ್ಷರ ಆಯ್ಕೆ ಸುದ್ದಿ ಕೇಂದ್ರದಲ್ಲಿತ್ತು. ಗಡ್ಕರಿ ಹೆಸರು ಆಗಾಗ ಕೇಳಿ ಬರುತ್ತಿತ್ತು. ಅನಂತ್‌ ಕುಮಾರ್‌ ಬಿಜೆಪಿ ಹೈಕಮಾಂಡ್‌ ಮಟ್ಟದ ಪ್ರಮುಖ ನಾಯಕರಾಗಿದ್ದರಿಂದ ಅವರ ಬಳಿ ಈ ಮೇಲಿನ ಪ್ರಶ್ನೆಯನ್ನು ಕೇಳಿದ್ದರು ಮಮತಾ ಬ್ಯಾನರ್ಜಿ. ಆಗ ಅನಂತ್‌ ಕುಮಾರ್, 'ಗಡ್ಕರಿ ಮಹಾರಾಷ್ಟ್ರದ ಜನಪ್ರಿಯ ನಾಯಕ, ಯಶಸ್ವೀ ಪಿಡಬ್ಲ್ಯೂಡಿ ಸಚಿವರು' ಎಂದು ವಿವರಿಸಿದರು. ಆದರೆ ಬ್ಯಾನರ್ಜಿಗೆ ಈ ಉತ್ತರ ತೃಪ್ತಿ ತರಲಿಲ್ಲ. "ರಾಜನಾಥ್‌ ಸಿಂಗ್‌, ಸುಷ್ಮಾ ಸ್ವರಾಜ್‌, ಅರುಣ್‌ ಜೇಟ್ಲಿಯಂಥ ಹಿರಿಯರು ಮತ್ತು ಅರ್ಹ ನಾಯಕರಿರುವಾಗ ಯಾಕೆ ಆತ?" ಎಂದು ಪ್ರಶ್ನಿಸಿದರು. ಅನಂತ್‌ ಕುಮಾರ್ ಮುಗುಳ್ನಗೆ ಬೀರಿ ಪ್ರಶ್ನೆಯಿಂದ ತಪ್ಪಿಸಿಕೊಂಡರು.

ಬಿಜೆಪಿ ಅಧ್ಯಕ್ಷರಾದಾಗ ಗಡ್ಕರಿ ಪರಿಸ್ಥಿತಿ ಹೀಗಿತ್ತು. ಗಡ್ಕರಿ ಬಗ್ಗೆ ಹಲವು ದೂರುಗಳಿದ್ದವು. ಚುನಾವಣಾ ರಾಜಕೀಯದ ಅನುಭವ ಕಡಿಮೆ, ವಿರೋಧಿ ಗುಂಪಿನ ಜತೆಗಿನ ಅವರ ಸ್ನೇಹ ಹಲವರ ಆಕ್ಷೇಪಕ್ಕೆ ಕಾರಣವಾಗಿತ್ತು. ಆದರೆ ಅವರ ಕೆಲಸನ್ನು ಭಾಗವತ್‌ ನೋಡಿ ಮೆಚ್ಚಿಕೊಂಡಿದ್ದರು. "ಗಡ್ಕರಿ ಹೆಚ್ಚು ಬಿಡುವು ಇರುವ, ಸತ್ಯವಂತ ಮನುಷ್ಯ. ನಾಗಪುರದಲ್ಲೇ ಬೆಳೆದವ. ಎಲ್ಲರಿಗೂ ಕೈಗೆ ಸಿಕ್ಕುವಾತ," ಎಂದು ಎಂಜಿ ವೈದ್ಯ ಆಗ ತರುಣ್‌ ಭಾರತ್‌ನಲ್ಲಿ ಬರೆದಿದ್ದರು.

ಅಧ್ಯಕ್ಷ ಹುದ್ದೆ ವಹಿಸಿಕೊಂಡ ಗಡ್ಕರಿ ಬಗ್ಗೆ ಇಲ್ಲ ಸಲ್ಲದ ಹೊಗಳಿಕೆಗಳನ್ನು ಸೇರಿಸಿ ಬಿಜೆಪಿ ಅವರ ವ್ಯಕ್ತಿ ಚಿತ್ರ ಕಟ್ಟಿಕೊಟ್ಟಿತು. ಆದರೆ ಆ ಹೊಗಳಿಕೆಗಳೆಲ್ಲಾ ಅಧಿಕಾರ ವಹಿಸಿಕೊಂಡ ದಿನವೇ ಕಳಚಿ ಬಿದ್ದವು. ಗಡ್ಕರಿ ಮಾತು ಕೇಳಿಯೇ ದೆಹಲಿ ಮಾಧ್ಯಮಗಳು ಮುಸಿ ಮುಸಿ ನಕ್ಕವು. ರಾಜಕಾರಣಿಯ ಚಾಣಾಕ್ಷ ಮಾತುಗಾರಿಕೆ ಅವರಿಗಿರಲಿಲ್ಲ. ಸಾದಾ ಅಂಗಿ, ಪ್ಯಾಂಟ್‌ ತೊಡುತ್ತಿದ್ದರು. ಬಿಜೆಪಿ ಅಧ್ಯಕ್ಷರೊಬ್ಬರು ಇಂಥಹ ಬಟ್ಟೆ ತೊಟ್ಟಿದ್ದೂ ಅದೇ ಮೊದಲು. ಈ ಮೂಲಕ ಅವರು ಸಾಮಾನ್ಯ ಜನರ ಜತೆ ತಮ್ಮನ್ನು ಗುರುತಿಸಿಕೊಳ್ಳುತ್ತಿದ್ದರು.

ಬಿಜೆಪಿ ಶ್ರೀಮಂತರ ಪಕ್ಷ ಎಂಬ ಹಣೆಪಟ್ಟಿ ಹೊತ್ತ ಅವಧಿಯಲ್ಲಿ ಅವರ ಈ ನಡೆ ಪ್ರಶಂಸೆಗೆ ಪಾತ್ರವಾಯಿತು. ಅಧ್ಯಕ್ಷರ ಕುರ್ಚಿಯಲ್ಲಿ ಕುಳಿತವರೇ ಪಕ್ಷದ ವರಸೆಗಳನ್ನು ಬದಲಾಯಿಸಿದರು. ಅದಕ್ಕೆ ಸಾಕ್ಷಿಯಾಗಿದ್ದು 2010ರ ಫೆಬ್ರವರಿಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ. ಅಲ್ಲಿ ಎಲ್ಲಾ ಗಣ್ಯರಿಗೂ ಟೆಂಟ್‌ಗಳಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು. ಈ ಮೂಲಕ ಇತ್ತೀಚಿನ ವರ್ಷಗಳಲ್ಲಿ ಮೊದಲ ಬಾರಿಗೆ ಫೈವ್‌ ಸ್ಟಾರ್‌ ಹೋಟೆಲ್‌ ಬಿಟ್ಟು ಬಿಜೆಪಿಗರು ಬಯಲಿಗೆ ಬಂದಿದ್ದರು. ಈ ಟೆಂಟ್‌ಗಳಿಂದ ಅವರು ಜನರಿಂದ ದೂರ ಉಳಿಯಬೇಡಿ, ಜನರ ಜತೆಗಿರಿ ಎಂಬ ಸಂದೇಶವನ್ನು ರವಾನಿಸಿದ್ದರು.

ಭಾಷಣಕ್ಕೆ ನಿಂತ ಗಡ್ಕರಿ, “ಪಕ್ಷದಲ್ಲಿ ತಳಮಟ್ಟದ ಕಾರ್ಯಕರ್ತರಿಂದ ಯಾವುದೇ ಸಮಸ್ಯೆ ಇಲ್ಲ. ಬದಲಿಗೆ ಅವರಿಂದ ಲಾಭ ಪಡೆದುಕೊಂಡವರದ್ದೇ ಸಮಸ್ಯೆ,” ಎಂದರು. ಭಟ್ಟಂಗಿತನದ ಬಗ್ಗೆ ಕೆಂಡ ಕಾರಿದ ಗಡ್ಕರಿ, ಹಿರಿಯ ನಾಯಕರಿಗೆ ಗೌರವ ಬೇಕಿದ್ದರೆ, ಅವರದನ್ನು ಸಂಪಾದಿಸಿಕೊಳ್ಳಬೇಕು ಎಂದು ಚಾಟಿ ಬೀಸಿದರು. ಹೀಗೆ ಆರಂಭದಲ್ಲೇ ಗಡ್ಕರಿ ಎಲ್ಲರನ್ನೂ ಬೆಚ್ಚಿ ಬೀಳಿಸಿದರು.

ಸರಳತೆಯ ಪಾಠ ಮಾಡುತ್ತಿದ್ದ ಗಡ್ಕರಿ, 2010ರ ಅಂತ್ಯದಲ್ಲಿ ನಾಗ್ಪುರದಲ್ಲಿ ತಮ್ಮ ಹಿರಿಯ ಮಗನ ಮದುವೆಯನ್ನು ಹಮ್ಮಿಕೊಂಡಿದ್ದರು. ಅದು ಅವರು ಬೆಳೆಸಿಕೊಂಡು ಬಂದಿದ್ದ ಇಮೇಜ್‌ಗೆ ತದ್ವಿರುದ್ಧವಾಗಿತ್ತು. ಈ ಮದುವೆ ಕಂಡು ವಿರೋಧ ಪಕ್ಷಗಳಲ್ಲ ಬದಲಿಗೆ ಸ್ವತಃ ಆರ್‌ಎಸ್‌ಎಸ್‌, ಬಿಜೆಪಿ ನಾಯಕರೇ ಮೂಗಿನ ಮೇಲೆ ಬೆರಳಿಟ್ಟರು.

ಅಂಥಹದ್ದೊಂದು ಅದ್ಧೂರಿ ಮದುವೆಗೆ ನಾಗಪುರ ಎಂದೂ ಸಾಕ್ಷಿಯಾಗಿರಲಿಲ್ಲ. ಮದುವೆಗೂ ಮೊದಲು ನಾಗಪುರದ 136 ವಾರ್ಡ್‌ ಬಿಜೆಪಿ ಉಸ್ತುವಾರಿಗಳಿಗೆ ಕನಿಷ್ಠ 1,000 ಆಮಂತ್ರಣ ಹಂಚಲು ಹೇಳಲಾಗಿತ್ತು. ಇದೊಂದೇ ಕಡೆ ಸುಮಾರು 1.36 ಲಕ್ಷ ಮದುವೆ ಪತ್ರಿಕೆ ಹಂಚಲಾಗಿತ್ತು. ಉಳಿದ ಕಡೆಗಳಿಗೆ 76,000 ಆಮಂತ್ರಣ ಪತ್ರ ಹಂಚಲಾಯಿತು. ಗಣ್ಯರ ಆಗಮನಕ್ಕಾಗಿ ಹೆಲಿಕಾಪ್ಟರ್‌ಗಳನ್ನು ಬಾಡಿಗೆಗೆ ಪಡೆಯಲಾಗಿತ್ತು. ಇದೇ ಅದ್ಧೂರಿತನದಲ್ಲಿ 2012ರಲ್ಲಿ ತಮ್ಮ ಕಿರಿಯ ಪುತ್ರನ ಮದುವೆಯನ್ನೂ ಅವರು ಹಮ್ಮಿಕೊಂಡಿದ್ದರು. ಅದರಲ್ಲಿ ಅಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ಕೂಡ ಭಾಗವಹಿಸಿದ್ದರು. 2016ರಲ್ಲಿ ಮೂರನೇ ಮದುವೆ ನಡೆದಿತ್ತು. ಹೀಗೆ ತಾವೇನು, ತಮ್ಮ ತಾಕತ್ತೇನು ಎಂಬುದನ್ನು ಮದುವೆ ಮೂಲಕ ಜಗಜ್ಜಾಹೀರುಗೊಳಿಸಿದ್ದರು ಗಡ್ಕರಿ.

2012ರಲ್ಲಿ ಗಡ್ಕರಿ ಕಿರಿಯ ಪುತ್ರನ ಮದುವೆಯಲ್ಲಿ ಅಂದಿನ ಪ್ರಧಾನಿ ಡಾ. ಮನಮೋಹನ್‌ ಸಿಂಗ್.
2012ರಲ್ಲಿ ಗಡ್ಕರಿ ಕಿರಿಯ ಪುತ್ರನ ಮದುವೆಯಲ್ಲಿ ಅಂದಿನ ಪ್ರಧಾನಿ ಡಾ. ಮನಮೋಹನ್‌ ಸಿಂಗ್.
/ಹಿಂದೂಸ್ಥಾನ್‌ ಟೈಮ್ಸ್‌

ಸಾಮ್ರಾಜ್ಯದ ಪತನ ಆರಂಭ

ಮದುವೆ ಮುಗಿಸಿದ ಗಡ್ಕರಿ ಹೊಸ ಉತ್ಸಾಹದಲ್ಲಿದ್ದರು. ಈ ಬಾರಿ ಅವರು ನರೇಂದ್ರ ಮೋದಿಯನ್ನು ಎದುರು ಹಾಕಿಕೊಳ್ಳಲು ಹೊರಟಿದ್ದರು, 2012ರ ಉತ್ತರ ಪ್ರದೇಶ ಚುನಾವಣೆಗೂ ಮುನ್ನ 2011ರ ಆಗಸ್ಟ್‌ನಲ್ಲಿ ಅವರು ಮೋದಿ ವಿರೋಧಿ ಸಂಜಯ್‌ ಜೋಶಿಯನ್ನು ಪಕ್ಷಕ್ಕೆ ಮತ್ತೆ ಕರೆ ತಂದರು. 2005ರಲ್ಲಿ ಲೈಂಗಿಕ ಹಗರಣದಲ್ಲಿ ಆರ್‌ಎಸ್‌ಎಸ್‌ನಿಂದ ಹೊರ ಬಿದ್ದಿದ್ದ ಸಂಜಯ್‌ ಜೋಶಿಯನ್ನು ಉತ್ತರ ಪ್ರದೇಶದ ಉಸ್ತುವಾರಿಯಾಗಿ ನೇಮಕಗೊಳಿಸಿದರು. ಗಡ್ಕರಿ ದಾಳಗಳು ಸರಿಯಾಗಿ ಕೆಲಸ ಮಾಡುತ್ತಿದ್ದವು. ಆದರೆ ಅಷ್ಟೊತ್ತಿಗೆ ನಡೆದ ಒಂದು ಬೆಳವಣಿಗೆ ಅವರ ಪತನಕ್ಕೆ ಮುನ್ನುಡಿ ಬರೆಯಿತು.

2012ರಲ್ಲಿ ರಾಜ್ಯಸಭೆ ಚುನಾವಣೆ ಸಮೀಪಿಸಿತ್ತು. ಲಂಡನ್‌ ಮೂಲದ ಉದ್ಯಮಿ ಅಂಶುಮಾನ್‌ ಮಿಶ್ರಾರನ್ನು ಎಸ್‌ಎಸ್‌ ಅಹ್ಲುವಾಲಿಯಾ ಬದಲಿಗೆ ರಾಜ್ಯಸಭೆಗೆ ಕಳುಹಿಸಲು ಹೊರಟಿದ್ದರು ಗಡ್ಕರಿ. ಮಿಶ್ರಾ- ಗಡ್ಕರಿ ಆಪ್ತರಾಗಿದ್ದರು; ಅಷ್ಟೇ ಅಲ್ಲದೆ ಅವರ ಅಧಿಕಾರವಧಿಯಲ್ಲಿ ಪಕ್ಷದ ನೈಜ ಖಜಾಂಚಿಯಾಗಿದ್ದರು. ಅವರನ್ನು ಮೇಲ್ಮನೆಗೆ ಕಳುಹಿಸುವ ಗಡ್ಕರಿ ನಿರ್ಧಾರಕ್ಕೆ ಪಕ್ಷದಲ್ಲಿ ತೀವ್ರ ವಿರೋಧ ಕೇಳಿ ಬಂತು. ರಾಜ್ಯಸಭೆಗೆ ಅವರನ್ನು ಕಳುಹಿಸುವುದು ಸಾಧ್ಯವಾಗಲಿಲ್ಲ. ಇದರಿಂದ ಮಿಶ್ರಾ ಕೋಪಗೊಂಡರು. ಹೀಗಿದ್ದೂ ಗಡ್ಕರಿ ಪಕ್ಷದ ತೀರ್ಮಾನವನ್ನು ಒಪ್ಪಿಕೊಳ್ಳಲೇಬೇಕಿತ್ತು. ಮುಂದೆ ಮಿಶ್ರಾ ಬಳಿ ಕ್ಷಮೆ ಕೇಳಿ ಸುಮ್ಮನಾದರು. ಇದು ಇಲ್ಲಿಗೇ ನಿಲ್ಲಲಿಲ್ಲ. ಗಡ್ಕರಿಯ ಮೊದಲ ಸೋಲಿನೊಂದಿಗೆ ಅವರ ಪತನ ಆರಂಭವಾಯಿತು.

ಏಪ್ರಿಲ್‌ -ಮೇ 2012ರಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲು ಕಂಡಿತು. ಜತೆಗೆ ಗಡ್ಕರಿಯ ಶುಕ್ರದೆಸೆಯೂ ಮುಗಿಯಿತು. ಮೋದಿ ಬ್ಲ್ಯಾಕ್‌ಮೇಲ್‌ಗೆ ಇಳಿದು ಬಿಟ್ಟರು. ಒಂದೊಮ್ಮೆ ಸಂಜಯ್‌ ಜೋಶಿಯನ್ನು ಹೊರಗಿಡದಿದ್ದಲ್ಲಿ ಮುಂಬೈನಲ್ಲಿ ನಡೆಯಲಿದ್ದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಗೆ ಗೈರು ಹಾಜರಾಗುವುದಾಗಿ ಮತ್ತು ಪಕ್ಷ ಬಿಡುವುದಾಗಿ ಬೆದರಿಕೆ ಹಾಕಿದರು.

ಜೋಶಿ ಮಹಾರಾಷ್ಟ್ರ ಬ್ರಾಹ್ಮಣರಾಗಿದ್ದರು. ಒಂದು ಕಾಲದಲ್ಲಿ ಹರೇನ್‌ ಪಾಂಡ್ಯ (ಮುಂದೆ ಕೊಲೆಯಾದರು)ರನ್ನು ಮೋದಿ ವಿರುದ್ಧ ವಾಜಪೇಯಿ ಎತ್ತಿಕಟ್ಟಿದ ಮಾದರಿಯಲ್ಲೇ ಜೋಶಿಯನ್ನು ಗಡ್ಕರಿ ಎತ್ತಿ ಕಟ್ಟುತ್ತಿದ್ದರು ಎಂದು ಬರೆಯುತ್ತಾರೆ ಪತ್ರಕರ್ತೆ ಶೈಲಜಾ ಜೋಶಿ. ಆದರೆ ಈಗ ಮೋದಿ ಓಡುವ ಕುದುರೆಯಾಗಿದ್ದರು. ಬೇರೆ ದಾರಿ ಇರಲಿಲ್ಲ. ಜೋಶಿಯನ್ನು ಕೈಬಿಟ್ಟರು. ಒಂದನ್ನು ಬಿಟ್ಟು ಇನ್ನೊಂದನ್ನು ಉಳಿಸಿಕೊಳ್ಳಬೇಕು ಎಂಬಂತೆ ಜೋಶಿಯನ್ನು ಬಿಟ್ಟು ಗಡ್ಕರಿ 2012ರಲ್ಲಿ ಎರಡನೇ ಅವಧಿಗೆ ಮತ್ತೆ ಪಕ್ಷದ ಅಧ್ಯಕ್ಷರಾದರು. ಅದಕ್ಕಾಗಿ ಪಕ್ಷದ ಸಂವಿಧಾನಕ್ಕೆ ತಿದ್ದುಪಡಿ ತರಲಾಯಿತು. ಮೋದಿಯೂ ಅನಿವಾರ್ಯವಾಗಿ ಇದನ್ನು ಒಪ್ಪಿಕೊಂಡರು.

ರಾಜಕೀಯ ಹಾದಿಯುದ್ಧಕ್ಕೂ ಮೋದಿ ವಿರೋಧಕ್ಕೆ ಗುರಿಯಾದ ಆರ್‌ಎಸ್‌ಎಸ್‌ ಮೂಲದ ನಾಯಕ ಸಂಜಯ್‌ ಜೋಶಿ.
ರಾಜಕೀಯ ಹಾದಿಯುದ್ಧಕ್ಕೂ ಮೋದಿ ವಿರೋಧಕ್ಕೆ ಗುರಿಯಾದ ಆರ್‌ಎಸ್‌ಎಸ್‌ ಮೂಲದ ನಾಯಕ ಸಂಜಯ್‌ ಜೋಶಿ.
/ಸ್ಕ್ರಾಲ್‌

ಆದರೆ ಎರಡನೇ ಅವಧಿಗೆ ಪಕ್ಷದ ಅಧ್ಯಕ್ಷರ ಹುದ್ದೆಯಲ್ಲಿ ಕುಳಿತುಕೊಂಡ ಗಡ್ಕರಿ ಮುಂದೆ ಹಲವು ಸವಾಲುಗಳು ಕಾದಿತ್ತು. ಶರದ್‌ ಪವಾರ್‌ ಸಂಬಂಧಿ ಅಜಿತ್‌ ಪವಾರ್‌ ಹೆಸರು ಥಳಕು ಹಾಕಿಕೊಂಡಿದ್ದ ನೀರಾವರಿ ಹಗರಣದಲ್ಲಿ ತಮಗೆ ಏನೂ ಮಾಡುವುದು ಇಷ್ಟವಿಲ್ಲ ಎಂದು ಗಡ್ಕರಿ ಹೇಳಿದ್ದಾಗಿ ಭ್ರಷ್ಟಾಚಾರ ವಿರೋಧಿ ಕಾರ್ಯಕರ್ತೆ ಅಂಜಲಿ ದಮಾನಿಯಾ 2012ರ ಸೆಪ್ಟೆಂಬರ್‌ನಲ್ಲಿ ಆರೋಪಿಸಿದರು. ಕಾರಣ ಅಜಿತ್‌ ಮತು ಗಡ್ಕರಿ ಇಬ್ಬರೂ ಪರಸ್ಪರರ ಹಿತಾಸಕ್ತಿಗಳನ್ನು ಕಾಪಾಡುತ್ತಿದ್ದರು.

ಅರವಿಂದ ಕೇಜ್ರಿವಾಲ್ (ಹಾಲಿ ದೆಹಲಿ ಮುಖ್ಯಮಂತ್ರಿ), ‘ಅಣೆಕಟ್ಟಿಗಾಗಿ ಪರಭಾರೆ ಮಾಡಿಕೊಂಡ 100 ಎಕರೆ ಜಮೀನನ್ನು ಮಹಾರಾಷ್ಟ್ರ ಸರಕಾರ ಗಡ್ಕರಿಗೆ ಸಂಬಂಧಿಸಿದ ಉದ್ಯಮವೊಂದಕ್ಕೆ ನೀಡಿದೆ’ ಎಂದು ಆರೋಪಿಸಿದರು. ನೆನಪಿಡಿ ಆಗ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಸರಕಾರವಿತ್ತು. ಮಾಧ್ಯಮಗಳ ಮುಂದೆ ನಿಂತಿದ್ದ ಕೇಜ್ರಿವಾಲ್ “ಗಡ್ಕರಿ ರಾಜಕಾರಣಿಯಲ್ಲ. ಆತ ತನ್ನ ಉದ್ಯಮ ಹಿತಾಸಕ್ತಿಗಳ ಬೆಳವಣಿಗೆಗಾಗಿ ಬಿಜೆಪಿಯನ್ನು ಬಳಸಿಕೊಳ್ಳುತ್ತಿದ್ದಾರೆ. ಈಗ ಎರಡನೇ ಅವಧಿಗೆ ಅವರಿಗೆ ಅಧ್ಯಕ್ಷ ಸ್ಥಾನ ನೀಡಲು ಪಕ್ಷದ ಸಂವಿಧಾನವನ್ನೇ ಬದಲಾಯಿಸಲಾಗಿದೆ,” ಎಂದು ಆರೋಪಿಸಿದರು. ಆದರೆ ಈ ಆರೋಪವನ್ನು ತಳ್ಳಿ ಹಾಕಲು ಜೇಟ್ಲಿ ಮತ್ತು ಸುಷ್ಮಾ ಸ್ವರಾಜ್‌ರನ್ನು ಮಾಧ್ಯಮಗಳ ಮುಂದೆ ಬಿಟ್ಟರು ಗಡ್ಕರಿ. ಆದರೆ ಖ್ಯಾತ ವಕೀಲ ಮತ್ತು ಪಕ್ಷದ ನಾಯಕರಾಗಿದ್ದ ರಾಮ್‌ ಜೇಠ್ಮಲಾನಿ ಮಾತ್ರ ಗಡ್ಕರಿ ಹುದ್ದೆ ತೊರೆಯಬೇಕು ಎಂದು ಬಿಟ್ಟರು. ಆದರೆ ಆಗಿದ್ದೇ ಬೇರೆ, ಜೇಠ್ಮಲಾನಿ ಪಕ್ಷ ಬಿಡಬೇಕಾಯಿತು, ಗಡ್ಕರಿ ಅಧ್ಯಕ್ಷರಾಗೇ ಮುಂದುವರಿದರು.

2014ರ ಚುನಾವಣೆಗೂ ಮೊದಲು ಮೋದಿ ಬೆನ್ನಿಗೆ ನಿಂತಿದ್ದ ಖ್ಯಾತ ವಕೀಲ ರಾಮ್‌ಜೇಠ್ಮಲಾನಿ
2014ರ ಚುನಾವಣೆಗೂ ಮೊದಲು ಮೋದಿ ಬೆನ್ನಿಗೆ ನಿಂತಿದ್ದ ಖ್ಯಾತ ವಕೀಲ ರಾಮ್‌ಜೇಠ್ಮಲಾನಿ
/ಇಂಡಿಯಾ ಟಿವಿ

ಈ ಸಂದರ್ಭದಲ್ಲಿ 'ಪೂರ್ತಿ ಗ್ರೂಪ್‌' ಎಂಬ ಸುಮಾರು 300 ಕೋಟಿ ರೂಪಾಯಿ ಮೌಲ್ಯದ ಕಂಪನಿಯ ವಿರುದ್ಧ ಹಗರಣವೊಂದು ಕೇಳಿ ಬಂತು. ಹತ್ತಿ ಮತ್ತು ಭತ್ತವನ್ನು ಹೆಚ್ಚಾಗಿ ಬೆಳೆಯುವ ವಿದರ್ಭ ಭಾಗದಲ್ಲಿ ಸಕ್ಕರೆ ಕಾರ್ಖಾನೆಗಳನ್ನು ಈ ಕಂಪನಿ ನಡೆಸುತ್ತಿತ್ತು. ವಿದ್ಯುತ್‌ ಉತ್ಪಾದನಾ ಕೇಂದ್ರ, ಎಥೆನಾಲ್‌ ಉತ್ಪಾದನೆ, ಡಿಸ್ಟಿಲರಿಗಳು ಇದಕ್ಕಿದ್ದವು. ಈ ಕಂಪನಿ ಸ್ಥಾಪನೆಗೆ ಹಣ ಎಲ್ಲಿಂದ ಬಂತು ಎಂಬುದೇ ಹಗರಣದ ಮೂಲವಾಗಿತ್ತು.

ಕೆಲವು ಹೂಡಿಕೆದಾರರು ಮತ್ತು ಸಹಕಾರಿ ಬ್ಯಾಂಕ್‌ಗಳಿಂದ ಇದಕ್ಕೆ ಹಣ ಪಡೆದುಕೊಳ್ಳಲಾಗಿತ್ತು. ಇನ್ನೊಂದಷ್ಟು ಶೆಲ್‌ (ನಕಲಿ) ಕಂಪನಿಗಳೂ ಇದರಲ್ಲಿದ್ದವು. ಇವುಗಳಲ್ಲಿ ಹೆಚ್ಚಿನ ಕಂಪನಿಗಳ ವಿಳಾಸ ಸುಳ್ಳಾಗಿತ್ತು. ಗಡ್ಕರಿ ಚಾಲಕನೇ ಐದು ಕಂಪನಿಗಳಲ್ಲಿ ನಿರ್ದೇಶಕರಾಗಿದ್ದರು. ಗಡ್ಕರಿ ಸಚಿವರಾಗಿದ್ದಾಗ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಸುಧೀರ್‌ ಡಬ್ಲ್ಯೂ ದಿವೆ ಇದರ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.

ಈ ಕಂಪನಿಯ ವ್ಯವಹಾರಗಳು ಹೇಗಿದ್ದವೆಂದರೆ, ಪೂರ್ತಿ ಶುಗರ್‌ ಮತ್ತು ಪವರ್‌ ಲಿಮಿಟೆಡ್‌ಗೆ 164 ಕೋಟಿ ರೂಪಾಯಿಗಳ ಕಡಿಮೆ ಬಡ್ಡಿ ಸಾಲವನ್ನು ಗ್ಲೋಬಲ್‌ ಸೇಫ್ಟಿ ವಿಷನ್‌ ನೀಡಿತ್ತು. ಇದೊಂದು 2010ರ ಮಾರ್ಚ್‌ನಲ್ಲಿ ಸ್ಥಾಪನೆಯಾದ ಕಂಪನಿಯಾಗಿತ್ತು. ದತ್ತಾತ್ರೇಯ ಪಾಂಡುರಂಗ ಮೈಸ್ಕರ್‌ ಎಂಬ ವ್ಯಕ್ತಿ 36,000 ರೂಪಾಯಿಗಳೊಂದಿಗೆ ಈ ಕಂಪನಿ ಆರಂಭಿಸಿದ್ದರು.

ಈ ಕಂಪನಿಗೂ ಗಡ್ಕರಿಗೂ ಒಂದು ಸಂಬಂಧವಿತ್ತು. ಗಡ್ಕರಿ ಪಿಡಬ್ಲ್ಯೂಡಿ ಸಚಿವರಾಗಿದ್ದಾಗ 'ನಿರ್ಮಾಣ-ನಿರ್ವಹಣೆ-ವರ್ಗಾವಣೆ' ಅಡಿಯಲ್ಲಿ ಹಲವು ಯೋಜನೆಗಳ ನಿರ್ಮಾಣವನ್ನು ಈ ಕಂಪನಿ ಪಡೆದುಕೊಂಡಿತ್ತು. ಅದೇ ಕಂಪನಿಯೀಗ ಪೂರ್ತಿ ಶುಗರ್ಸ್‌ಗೆ ಹಣ ಹಾಕಿತ್ತು. ಸರಳವಾಗಿ ಹೇಳಬೇಕೆಂದರೆ ಈ 164 ಕೋಟಿ ರೂಪಾಯಿ ಕಿಕ್‌ಬ್ಯಾಕ್‌ ರೂಪದಲ್ಲಿ ಕಾಣಿಸಿಕೊಳ್ಳುತ್ತಿತ್ತು. ವಿಚಿತ್ರವೆಂದರೆ ಇದೇ ಮೈಸ್ಕರ್‌ ಕಂಪನಿಯಲ್ಲಿ 2011ರ ಮಾರ್ಚ್‌ವರೆಗೆ ಶರದ್‌ ಪವಾರ್‌ ಸಾವಿರಕ್ಕೂ ಹೆಚ್ಚಿನ ಶೇರುಗಳನ್ನು ಹೊಂದಿದ್ದರು.

ಸಹಜವಾಗಿಯೇ ಪ್ರಕರಣ ತುಸು ಹೆಚ್ಚೇ ಸದ್ದು ಮಾಡಿತು. ಹೀಗಾಗಿ ಈ ವಿಚಾರ ಹೊರ ಬಂದ ನಂತರ ಗಡ್ಕರಿ ಟಿವಿ ಮುಂದೆ ಬಂದವರು, 'ನಾನು ಏನೂ ತಪ್ಪು ಮಾಡಿಲ್ಲ' ಎಂದು ಸಮಜಾಯಿಷಿ ನೀಡಲು ಯತ್ನಿಸಿದರು. 'ಎಲ್ಲಾ ರೀತಿಯ ತನಿಖೆಗೆ ಸಿದ್ಧ' ಎಂದು ಹೇಳಿಕೆ ನೀಡಿದರು. ಅಷ್ಟೊತ್ತಿಗೆ ನಡೆಯಬೇಕಾಗಿದ್ದ ಹಾನಿ ನಡೆದಾಗಿತ್ತು.

ಸಚಿವರಾಗಿದ್ದಾಗ ಗಡ್ಕರಿಯನ್ನು ಹೊಗಳುವಲ್ಲಿ ಮೊದಲ ಸಾಲಿನಲ್ಲಿದ್ದ ಸುಚೇತಾ ದಲಾಲ್‌ ಇದೀಗ ಅವರ ವಿರುದ್ಧ ಲೇಖನಿ ಝಳಪಿಸಿದರು. ವಿರೋಧ ಪಕ್ಷಗಳ ಜತೆಗಿನ ಗಡ್ಕರಿ ನಂಟನ್ನು ಕಟು ಶಬ್ದಗಳಲ್ಲಿ ಟೀಕಿಸಿದರು. ಶರದ್‌ ಪವಾರ್‌ ಅಧಿಕಾರಕ್ಕೆ ಬಂದ ನಂತರ, ಕಾಂಗ್ರೆಸ್‌-ಎನ್‌ಸಿಪಿ ಸಮ್ಮಿಶ್ರ ಸರಕಾರ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ ವೇ (ಎಂಪಿಇ)ಯ ಟೋಲ್‌ ಸಂಗ್ರಹ ಮತ್ತು ನಿರ್ವಹಣೆಯನ್ನು ಖಾಸಗೀಕರಣಗೊಳಿಸಿತು. ಇದನ್ನು ಪಡೆದುಕೊಂಡಿದ್ದು ಮತ್ತದೇ ಮೈಸ್ಕರ್‌ಗೆ ಸೇರಿದ ಐಡಿಯಲ್‌ ರೋಡ್‌ ಬಿಲ್ಡರ್ಸ್‌ (ಐಆರ್‌ಬಿ). ಇದಕ್ಕಾಗಿ ಯೋಜನೆಯನ್ನೇ ಬದಲಾಯಿಸಲಾಗಿತ್ತು.

ಹೀಗಾಗಿ ವಿರೋಧ ಪಕ್ಷದ ನಾಯಕ ಗಡ್ಕರಿಗೆ ಒಂದಷ್ಟು ಪಾಲು ನೀಡಿ ಅವರನ್ನು ಮೌನವಾಗಿಸುವುದು ಐಆರ್‌ಬಿಗೆ ಅನಿವಾರ್ಯವಾಗಿತ್ತು. ತಕ್ಷಣವೇ ಮಹಾರಾಷ್ಟ್ರದಾದ್ಯಂತ ಟೋಲ್‌ ಕಾಂಟ್ರಾಕ್ಟ್‌ಗಳನ್ನು ಐಆರ್‌ಬಿ ಬುಟ್ಟಿಗೆ ಹಾಕಿಕೊಳ್ಳಲು ಆರಂಭಿಸಿತು. ಎಲ್ಲಿವರೆಗೆ ಎಂದರೆ ಒಂದು ಹಂತದಲ್ಲಿ ತನ್ನ ಶೇರುಗಳನ್ನು ಆಸ್ಟ್ರೇಲಿಯಾದ ಕಂಪನಿಗೆ ಮಾರಾಟ ಮಾಡಲು ಮುಂದಾಯಿತು. ಎಂಪಿಇಯ ವಿನ್ಯಾಸವನ್ನು 3000ಕ್ಕೂ ಹೆಚ್ಚು ಕೋಟಿ ರೂಪಾಯಿಗಳಲ್ಲಿ ಬದಲಾಯಿಸುವ ಯೋಜನೆ ಕೈಗೆತ್ತಿಕೊಂಡಿತು. ಇವೆಲ್ಲದರಲ್ಲೂ ಗಡ್ಕರಿಗೆ ಸಂಬಂಧವಿತ್ತು.

ಆದರೆ ಹೀಗೆಲ್ಲಾ ಮಾಡಬೇಡ ಎಂದು ಗಡ್ಕರಿಗೆ ತಮ್ಮ ಗುರು ಶರದ್‌ ಪವಾರ್‌ ಸೂಚಿಸಿದ್ದರು. ಇನ್ನೇನು ಬಿಜೆಪಿ ಅಧ್ಯಕ್ಷರಾಗಲಿದ್ದಾರೆ ಎನ್ನುವಾಗ 'ಪೂರ್ತಿ' ಜತೆಗಿನ ಎಲ್ಲಾ ಸಂಬಂಧಗಳನ್ನು ಮುರಿದುಕೊಳ್ಳುವಂತೆ ಪವಾರ್‌ ಹೇಳಿದ್ದರಂತೆ. ಆದರೆ ಸಲಹೆಯನ್ನು ಗಡ್ಕರಿ ಕಿವಿಗೆ ಹಾಕಿಕೊಳ್ಳಲಿಲ್ಲ ಎನ್ನುತ್ತಾರೆ ಆರ್‌ಎಸ್‌ಎಸ್‌ ಬೆಂಬಲಿಗ ದಿಲೀಪ್‌ ದೇವೋಧರ್‌.

“ಪವಾರ್‌ ಮಾದರಿಯಿಂದ ಗಡ್ಕರಿ ಪ್ರಭಾವಿತರಾಗಿದ್ದರು. ಹಾಗಂಥ ಎಲ್ಲವನ್ನೂ ಪವಾರ್‌ ರೀತಿಯಲ್ಲೇ ಗಡ್ಕರಿ ನಡೆದುಕೊಳ್ಳುತ್ತಿರಲಿಲ್ಲ. ಪವಾರ್‌ ಎಂದೂ ಬಹಿರಂಗವಾಗಿ ಉದ್ಯಮಿಗಳ ಜತೆ ಗುರುತಿಸಿಕೊಂಡವರಲ್ಲ. ಅಂತರವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ; ಆದರೆ ಗಡ್ಕರಿಗೆ ಅವೆಲ್ಲಾ ಬರುವುದಿಲ್ಲ," ಎನ್ನುತ್ತಾರೆ ಗಡ್ಕರಿಗೆ ಆಪ್ತರಾದ ಮಾಜಿ ಪತ್ರಕರ್ತ ಗನೇಶ್‌ ಕನಾಟೆ.

ಗಡ್ಕರಿ ವಿರುದ್ಧ ಹೀಗೊಂದು ಆರೋಪ ಕೇಳಿ ಬಂದಾಗ ಆರ್‌ಎಸ್‌ಎಸ್‌, ಚಾರ್ಟಡ್‌ ಅಕೌಂಟೆಂಟ್‌ ಎಸ್‌. ಗುರುಮೂರ್ತಿಯನ್ನು ಪೂರ್ತಿ ಗ್ರೂಪ್‌ ದಾಖಲೆಗಳ ಮೇಲೆ ಕಣ್ಣಾಡಿಸಲು ಕಳುಹಿಸಿಕೊಟ್ಟಿತು. ಗುರುಮೂರ್ತಿ ಇದರಲ್ಲಿ ಏನೂ ತಪ್ಪು ನಡೆದಿಲ್ಲ ಎಂದು ಷರಾ ಬರೆದರು. ಹೀಗಿದ್ದೂ ಅದರ ಕಂಪನಗಳು ನಿಲ್ಲಲಿಲ್ಲ. ಹಗರಣ ಹೊಗೆಯಾಡುತ್ತಿದ್ದಾಗಲೆ ಬ್ಲಾಗ್‌ನಲ್ಲಿ ಪ್ರತ್ಯಕ್ಷರಾದ ಎಂಜಿ ವೈದ್ಯ, ಇದೆಲ್ಲಾ ಮೋದಿ ಕೃತ್ಯ ಎಂದು ಘೋಷಿಸಿದರು. ಅದಕ್ಕವರು ಕಾರಣವನ್ನೂ ನೀಡಿದ್ದರು. ರಾಮ್‌ ಜೇಠ್ಮಲಾನಿ ಗಡ್ಕರಿ ರಾಜೀನಾಮೆ ಕೇಳಿದ್ದರು. ಅದೇ ಸಂದರ್ಭದಲ್ಲಿ ಅವರು ಮೋದಿಯನ್ನು ಪ್ರಧಾನಿ ಅಭ್ಯರ್ಥಿಯಾಗಿಸುವಂತೆ ಕೇಳಿಕೊಂಡಿದ್ದರು ಎಂಬ ಊಹಾತ್ಮಕ ಸಾಕ್ಷ್ಯವನ್ನು ಮುಂದಿಟ್ಟಿದ್ದರು.

“ನಿತಿನ್‌ ಗಡ್ಕರಿ ಬಿಜೆಪಿ ಅಧ್ಯಕ್ಷರಾಗಿಯೇ ಇದ್ದರೆ ಪ್ರಧಾನಿಯಾಗಲು ತಮಗಿದ್ದ ಅವಕಾಶವನ್ನು ಕಸಿದುಕೊಳ್ಳುತ್ತಾರೆ ಎನ್ನುವುದು ಮೋದಿ ಚಿಂತೆಯಾಗಿದ್ದರಬಹುದು. ಅವರು ತಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಲು ಜೇಠ್ಮಲಾನಿಯನ್ನು ಬಳಸುತ್ತಿದ್ದಾರೆ,” ಎಂದು ವೈದ್ಯರು ಬರೆದಿದ್ದರು. ಆಗ ಗುಜರಾತ್‌ನಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿತ್ತು. ಗಡ್ಕರಿ ರಾಷ್ಟ್ರಾಧ್ಯಕ್ಷರಾದರೂ ಅವರು ಗುಜರಾತ್‌ಗೆ ಭೇಟಿ ನೀಡುವುದು ಮೋದಿಗೆ ಬೇಕಾಗಿರಲಿಲ್ಲ. ಅವರು ಗಡ್ಕರಿ ಭೇಟಿಯನ್ನು ವಿರೋಧಿಸುತ್ತಿದ್ದರು.

ಮೋದಿ-ಜೇಟ್ಲಿ ದಾಳಕ್ಕೆ ನಲುಗಿದ ನಿತಿನ್‌ ಗಡ್ಕರಿ.
ಮೋದಿ-ಜೇಟ್ಲಿ ದಾಳಕ್ಕೆ ನಲುಗಿದ ನಿತಿನ್‌ ಗಡ್ಕರಿ.
/ಇಂಡಿಯಾ ಟುಡೇ

ಒಂದು ಕಡೆ ಗಡ್ಕರಿ ಹಗರಣ ಹೊರಬರಲು ಮೋದಿ ಕಾರಣ ಎಂಬ ಗುಮಾನಿಯ ನಡುವೆ ಇದಕ್ಕೆ ನೀರೆರೆದವರು ಅರುಣ್‌ ಜೇಟ್ಲಿ ಎಂದು ನಂತರ ಗೊತ್ತಾಯಿತು. ಅವತ್ತಿಗೆ ಈ ಸ್ಟೋರಿಯನ್ನು ಬ್ರೇಕ್‌ ಮಾಡಿದ್ದ ಗಣೇಶ್‌ ಕನಾಟೆ ‘ನ್ಯೂಸ್‌ ಎಕ್ಸ್‌’ನಲ್ಲಿ ಕೆಲಸ ಮಾಡುತ್ತಿದ್ದರು. ಆಗ ಜೆಹಂಗೀರ್‌ ಪೊಚ್ಚ ನ್ಯೂಸ್‌ ಎಕ್ಸ್‌ ಸಂಪಾದಕರಾಗಿದ್ದರು. ಅವರ ಪತ್ನಿ ರಂಹನಾ ಜೇಟ್ಲಿ ಅರುಣ್‌ ಜೇಟ್ಲಿ ಸಂಬಂಧಿ. ಒಂದು ಸಂಜೆ ಗಣೇಶ್‌ರನ್ನು ಫೈವ್‌ ಸ್ಟಾರ್‌ ಹೋಟೆಲ್‌ ಒಂದಕ್ಕೆ ಕರೆಸಿಕೊಂಡ ಜೇಟ್ಲಿ ದಾಖಲೆಗಳನ್ನು ನೀಡಿ ಕೈತೊಳೆದುಕೊಂಡಿದ್ದರು. ಆ ದಾಖಲೆಗಳನ್ನು ಅಧ್ಯಯನ ಮಾಡಿದ್ದ ಗಣೇಶ್‌, ಅವೆಲ್ಲಾ ನೈಜ ಎಂದು ತಿಳಿದು ಬರುತ್ತಿದ್ದಂತೆ ಸ್ಟೋರಿ ಬ್ರೇಕ್‌ ಮಾಡಿದ್ದರು. ಹೀಗೆ ಹಗರಣ ಹೊರಬಿದ್ದಿತ್ತು. ನಮ್ಮನ್ನು ಆ ಸಂದರ್ಭದಲ್ಲಿ ಬಳಸಿಕೊಳ್ಳಲಾಯಿತು ಎನ್ನುತ್ತಾರೆ ಗಡ್ಕರಿ ಗೆಳೆಯ ಎಂದು ಹೇಳಿಕೊಳ್ಳುವ ನಾಗಪುರ ಮೂಲದ ಗಣೇಶ್‌.

ಹಗರಣ ಹೊರಬಿದ್ದ ಮೇಲೆ ಆರ್‌ಎಸ್ಎಸ್‌ ಮತ್ತು ಬಿಜೆಪಿಯಲ್ಲಿ ಗಡ್ಕರಿ ಬೆಂಬಲಿಗರ ಸಂಖ್ಯೆ ಕುಸಿತವಾಯಿತು. ಹೀಗಿದ್ದೂ ಅವರ ಪರವಾಗಿ ವಕಾಲತ್ತು ವಹಿಸಲು ಭಾಗವತ್‌ ಮತ್ತು ವೈದ್ಯ ಇದ್ದರು. ಆದರೂ ಅದೊಂದು ಬೆಳವಣಿಗೆ ಅವರ ರಾಜೀನಾಮೆ ಪಡೆಯಿತು.

ಜನವರಿ 22, 2013; ಗಡ್ಕರಿ ಪಕ್ಷದ ಅಧ್ಯಕ್ಷರಾಗಿ ಮರು ಆಯ್ಕೆಯಾಗುವ ಬಗ್ಗೆ ಚರ್ಚೆ ಜಾರಿಯಲ್ಲಿತ್ತು. ಅದೇ ದಿನ ಮಧ್ಯಾಹ್ನ ಐಟಿ ಅಧಿಕಾರಿಗಳು ಪೂರ್ತಿ ಗ್ರೂಪ್‌ಗೆ ಸೇರಿದ ಮುಂಬೈನ ಕಚೇರಿಗಳ ಮೇಲೆ ದಾಳಿ ನಡೆಸಿದರು. ದಾಳಿ ಬೆನ್ನಿಗೆ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ ಬಿಜೆಪಿ ಇದೆಲ್ಲಾ ಕಾಂಗ್ರೆಸ್‌ ಕೃತ್ಯ ಎಂದು ಜರೆಯಿತು. ಆದರೆ ಇದು ಇಷ್ಟಕ್ಕೇ ನಿಲ್ಲಲಿಲ್ಲ. ಅಂದೇ ಎಲ್‌ಕೆ ಅಡ್ವಾಣಿ ಮತ್ತು ಆರ್‌ಎಸ್‌ಎಸ್‌ ಪ್ರಧಾನ ಕಾರ್ಯದರ್ಶಿ ಭಯ್ಯಾಜಿ ಜೋಶಿ ದೆಹಲಿಯಿಂದ ಮುಂಬೈಗೆ ಹಾರಿದರು. ಗಡ್ಕರಿ ಮುಂದೆ ಕುಳಿತವರೇ ರಾಜೀನಾಮೆ ನೀಡುವಂತೆ ಕೇಳಿಕೊಂಡರು. ಒಂದು ಗಂಟೆಯ ನಂತರ ತಿದ್ದುಪಡಿ ಮಾಡಿ ತನ್ನ ಹೇಳಿಕೆಯನ್ನು ಬಿಜೆಪಿ ಬಿಡುಗಡೆ ಮಾಡಿತು. ಅದೇ ದಿನ ರಾತ್ರಿ ನಾಟಕೀಯ ಬೆಳವಣಿಗೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಹುದ್ದೆಯಿಂದ ಕೆಳಗಿಳಿದರು. ತಮ್ಮ ಸ್ಥಾನಕ್ಕೆ ರಾಜನಾಥ್‌ ಸಿಂಗ್‌ ಹೆಸರು ಸೂಚಿಸಿ ಅವರು ನಾಗಪುರಕ್ಕೆ ಹೊರಟು ಹೋದರು. ಇಲ್ಲಿಂದ ಗಡ್ಕರಿ ರಾಜಕೀಯ ಅಧ್ಯಾಯ ಹೊಸ ತಿರುವು ಪಡೆಯಿತು.

ಕೃಪೆ: ದಿ ಕ್ಯಾರವಾನ್

Also read: ‘ಸಂಘಿ ಪುತ್ರ’-1: ಮೋದಿಗೇ ಪರ್ಯಾಯ; ಆರ್‌ಎಸ್‌ಎಸ್ ಆಪ್ತ, ಯಾರೀತ ನಿತಿನ್ ಗಡ್ಕರಿ? 

Also read: ‘ಸಂಘಿ ಪುತ್ರ’- 2: ಅಡ್ವಾಣಿಯ ‘ಡೆಲ್ಲಿ 4’ ಗ್ಯಾಂಗ್‌ ಹಿಂದಿಕ್ಕಿದ ಗಡ್ಕರಿ; ಅಂಬಾನಿ ವಿರೋಧಿಯಾಗಿದ್ದರು!