samachara
www.samachara.com
‘ಸಂಘಿ ಪುತ್ರ’- 2: ಅಡ್ವಾಣಿಯ ‘ಡೆಲ್ಲಿ 4’ ಗ್ಯಾಂಗ್‌ ಹಿಂದಿಕ್ಕಿದ ಗಡ್ಕರಿ; ಅಂಬಾನಿ ವಿರೋಧಿಯಾಗಿದ್ದರು!
COVER STORY

‘ಸಂಘಿ ಪುತ್ರ’- 2: ಅಡ್ವಾಣಿಯ ‘ಡೆಲ್ಲಿ 4’ ಗ್ಯಾಂಗ್‌ ಹಿಂದಿಕ್ಕಿದ ಗಡ್ಕರಿ; ಅಂಬಾನಿ ವಿರೋಧಿಯಾಗಿದ್ದರು!

ಅಂದಿಗೆ ಈ ರಸ್ತೆನಿರ್ಮಾಣಗಳೆಲ್ಲಾ ಸರಕಾರದ ಕರ್ತವ್ಯ ಎಂಬ ವಾತಾವರಣ ಇದ್ದ ದಿನಗಳು. ಭಾರತ ಜಾಗತೀಕರಣಕ್ಕೆ ತೆರೆದುಕೊಂಡು ಕೇವಲ 3 ವರ್ಷಗಳಷ್ಟೇ ಕಳೆದಿತ್ತು. ಹೀಗಿರುವಾಗಲೇ ‘ಸರಕಾರಿ ಖಾಸಗಿ ಪ್ರಾಯೋಜಕತ್ವ’ ಎಂಬ ಕಲ್ಪನೆಯನ್ನು ಕೊಟ್ಟರು ಗಡ್ಕರಿ.

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

  • ಭಾಗ- 2

ನಾಗ್ಪುರದ ಧಪೆವಾಡ ಗ್ರಾಮದಲ್ಲಿ ಜೈರಾಮ್‌ ಮತ್ತು ಭಾನುತಾಯಿ ಗಡ್ಕರಿ ಎಂಬ ಕೃಷಿಕ ದಂಪತಿಗಳ ಪುತ್ರನಾಗಿ ನಿತಿನ್‌ ಗಡ್ಕರಿ ಜನಿಸಿದಾಗ ಇಸವಿ 1957. ದೇಶಸ್ಥ ಬ್ರಾಹ್ಮಣಸ್ಥರಾದ ಗಡ್ಕರಿ ಕುಟುಂಬದವರು ಹಳೆ ನಾಗಪುರದ ಮಹಲ್‌ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಗಡ್ಕರಿ ತಾಯಿ ಭಾರತೀಯ ಜನಸಂಘದಲ್ಲಿ ಗುರುತಿಸಿಕೊಂಡಿದ್ದವರು. ಅವರ ಮನೆಯೂ ಆರ್‌ಎಸ್‌ಎಸ್‌ ಕೇಂದ್ರ ಕಚೇರಿಗೆ ಸಮೀಪದಲ್ಲಿತ್ತು. ತಾಯಿ ಇಲ್ಲಿನ ಸಭೆಗಳಿಗೆ ಬರುವಾಗ ಐದರ ಹರೆಯದ ಪುಟ್ಟ ಬಾಲಕ ಗಡ್ಕರಿಯೂ ಬರುತ್ತಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ ಆರ್‌ಎಸ್‌ಎಸ್‌ ಹಿರಿಯ ನಾಯಕ ಎಂಜಿ ವೈದ್ಯ. ಸಂಘದ ನಂಟು ಬೆಳೆಸಿಕೊಂಡ ಬಾಲಕ ಗಡ್ಕರಿ ಮುಂದೆ ತುಳಸಿಭಾಗ್‌ನಲ್ಲಿ ನಡೆಯುತ್ತಿದ್ದ ಶಾಖೆಗೆ ನಿತ್ಯ ಹಾಜರಾಗುತ್ತಿದ್ದರು.

ಹೀಗೆ ಸಂಘದ ವಾತಾವರಣದಲ್ಲೇ ಬೆಳೆದ ಗಡ್ಕರಿ ಮುಂದೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ ಸೇರಿದರು. ಇಲ್ಲಿನ ಜಿಎಸ್‌ ಕಾಲೇಜಿನಿಂದ ಕಾಮರ್ಸ್‌ ಮತ್ತು ಎಕನಾಮಿಕ್ಸ್‌ ಪದವಿ ಪಡೆದು, ನಾಗಪುರ ಯುನಿವರ್ಸಿಟಿಯಲ್ಲಿ ಕಾನೂನು ಅಧ್ಯಯನಕ್ಕೆ ಗಡ್ಕರಿ ಸೇರಿಕೊಂಡಾಗ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಲ್ಲಿತ್ತು. ಮುಂದೆ ತುರ್ತು ಪರಿಸ್ಥಿತಿ ಕೊನೆಗೊಂಡು, ನಾಗಪುರ ವಿವಿಗೆ ಚುನಾವಣೆ ನಡೆದಾಗ ಗಡ್ಕರಿ ಸ್ಪರ್ಧೆಗೆ ಇಳಿದರು. ಆದರೆ ಮೊದಲ ಬಾರಿಗೆ ಅವರಿಗೆ ಸೋಲು ಕಾದಿತ್ತು. ಕೇವಲ ಆರು ಮತಗಳಿಂದ ಗಡ್ಕರಿ ಸೋಲು ಕಂಡರು.

ಕಾಲೇಜಿನಿಂದ ಹೊರ ಬಿದ್ದ ಗಡ್ಕರಿ ಜೀವನೋಪಾಯಕ್ಕೆ ತಮ್ಮ ಗೆಳೆಯನ ಜತೆ ಸೇರಿ ಅಲ್ಲೇ ಒಂದು ಗೃಹೋಪಕರಣಗಳ ಅಂಗಡಿಯನ್ನು ಆರಂಭಿಸಿದರು. ಪ್ರವೃತ್ತಿಗೆ ಬಿಜೆಪಿ ಸೇರಿಕೊಂಡು ನಾಗಪುರದ ಯುವ ಮೋರ್ಚ ಅಧ್ಯಕ್ಷರಾದರು. ಮುಂದೆ ನಾಗಪುರ ಬಿಜೆಪಿಯ ಕಾರ್ಯದರ್ಶಿ ಸ್ಥಾನ ಒಲಿದು ಬಂತು. ಹೀಗಿರುವಾಗಲೇ 1984ರಲ್ಲಿ ವಿವಾಹವಾದರು.

ಮದುವೆ ಆದ ತರುವಾಯ ಗಡ್ಕರಿ ಸಕ್ರಿಯ ರಾಜಕಾರಣದ ಚುನಾವಣಾ ಅಗ್ನಿಪರೀಕ್ಷೆಗೆ ಸಜ್ಜಾದರು. ಅವತ್ತು‘ಬ್ರಾಹ್ಮಣ ಮತ್ತು ಬನಿಯಾ’ಗಳ ಪಕ್ಷ ಎಂದು ಹೆಸರಾಗಿದ್ದ ಬಿಜೆಪಿಯಿಂದ ದಲಿತರು ಹಿಂದುಳಿದವರೇ ತುಂಬಿದ್ದ ನಾಗಪುರ ಪಶ್ಚಿಮ ಕ್ಷೇತ್ರದಿಂದ ಸ್ಪರ್ಧಿಸಿದರು ಗಡ್ಕರಿ. ಇಲ್ಲೂ ಅವರಿಗೆ ಹೀನಾಯ ಸೋಲಾಯಿತು. ಹೀಗೆ ಕಾಲೇಜು ಚುನಾವಣೆಯೂ ಸೋತು, ಮೊದಲ ವಿಧಾನಸಭೆ ಚುನಾವಣೆಯನ್ನೂ ಸೋತ ಗಡ್ಕರಿ ಮುಂದೆಂದೂ ನೇರಾ ನೇರ ಚುನಾವಣೆಗೆ ನಿಲ್ಲಬಾರದು ಎಂದು ನಿರ್ಧರಿಸಿದರು. ಹಾಗೆಯೇ ನಡೆದುಕೊಂಡರು ಕೂಡ!

ಈ ಹಂತದಲ್ಲಿ ಅವರಿಗೆ ಗುರುಗಳಾಗಿ ಬೆನ್ನಿಗೆ ನಿಂತಿದ್ದವರು ಹಾಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ತಂದೆ ಗಂಗಾಧರ್‌ ರಾವ್‌ ಫಡ್ನವೀಸ್‌. ಆಗ ಅವರು ಪದವೀಧರ ಕ್ಷೇತ್ರದ ವಿಧಾನಪರಿಷತ್‌ ಸದಸ್ಯರಾಗಿದ್ದರು. 1987ರಲ್ಲಿ ಗಂಗಾಧರ್‌ ರಾವ್‌ ಕ್ಯಾನ್ಸರ್‌ನಿಂದ ಅಸುನೀಗಿದರು. ಆಗ ಅವರ ಸ್ಥಾನಕ್ಕೆ ಚುನಾವಣೆಗೆ ನಿಲ್ಲುವಂತೆ ಗಡ್ಕರಿಗೆ ಸೂಚಿಸಲಾಯಿತು. ಹೀಗೆ 1989ರಲ್ಲಿ ಪದವೀಧರ ಕ್ಷೇತ್ರದಿಂದ ಚುನಾವಣೆಗೆ ನಿಂತು ಮೊದಲ ಬಾರಿ ಅವರು ವಿಧಾನಸಭೆ ಪ್ರವೇಶಿಸಿದರು. ಗಡ್ಕರಿಗೆ ಆಗ ಕೇವಲ 31 ವರ್ಷ ವಯಸ್ಸಾಗಿತ್ತು. ಮೇಲ್ಮನೆಯ ಅತ್ಯಂತ ಕಿರಿಯ ಸದಸ್ಯರು ಅವರಾಗಿದ್ದರು. ಮುಂದೆ 2014ರವರೆಗೂ ಅವರೆಂದೂ ಈ ಸ್ಥಾನವನ್ನು ಬಿಟ್ಟು ಕೊಡಲಿಲ್ಲ. ಕೆಳಮನೆಗೆ ಪ್ರವೇಶಿಸುವ ಪ್ರಯತ್ನವನ್ನೂ ಮಾಡಲಿಲ್ಲ.

ಸಂಘದ ಕಾರ್ಯಕ್ರಮವೊಂದರಲ್ಲಿ ದೇವೇಂದ್ರ ಫಡ್ನವೀಸ್‌ ಮತ್ತು ನಿತಿನ್‌ ಗಡ್ಕರಿ
ಸಂಘದ ಕಾರ್ಯಕ್ರಮವೊಂದರಲ್ಲಿ ದೇವೇಂದ್ರ ಫಡ್ನವೀಸ್‌ ಮತ್ತು ನಿತಿನ್‌ ಗಡ್ಕರಿ
/ಪಿಟಿಐ

ಆದರೆ ಮೇಲ್ಮನೆಯಲ್ಲಿದ್ದೇ ಅವರಿಗೆ ಬೇಕಾಗಿದ್ದೆಲ್ಲಾ ಸಿಗುತ್ತಾ ಹೋಯಿತು. ಸಾಮಾನ್ಯವಾಗಿ ವಿಧಾನ ಪರಿಷತ್‌ ಕಲಾಪದ ಮೂಲಕ ಯಾರೂ ಸುದ್ದಿ ಮಾಡದ ಹೊತ್ತಲ್ಲಿ ಗಡ್ಕರಿ ಜನರ ಕಣ್ಣಿಗೆ ಕಾಣಿಸಿಕೊಂಡರು. ಅವತ್ತಿಗೆ ಯುವಕರಾಗಿದ್ದ ಶರದ್‌ ಪವಾರ್‌ ವ್ಯಕ್ತಿತ್ವಕ್ಕೆ ಮಾರು ಹೋದ ಗಡ್ಕರಿ ನಡತೆಯಲ್ಲಿ, ಕಲಾಪಗಳಲ್ಲಿ ಮಾತನಾಡುವಾಗ ಅವರನ್ನೇ ಅನುಕರಣೆಗೆ ಇಳಿದರು.

ಬಹಿರಂಗ ರಾಜಕಾರಣದಲ್ಲಿ ಅವರ ಈ ನಡವಳಿಕೆಗಳು ಅವರಿಗೆ ಸಿಗಬೇಕಾದ ಸ್ಥಾನವನ್ನು ಕೊಡಿಸಿತು. ಆದರೆ ಪಕ್ಷದಲ್ಲಿ ಅವರಿಗೆ ಕೆಲವು ಸಮಸ್ಯೆಗಳಿತ್ತು. ಅವತ್ತಿಗೆ, ಪೇಶ್ವೆಗಳ ಒಂದು ಕಾಲದ ಹಿಂಸಾತ್ಮಕ ಆಡಳಿತದಿಂದಾಗಿ ಬ್ರಾಹ್ಮಣ ಜಾತಿ ಬಗ್ಗೆಯೇ ಒಂದು ರೀತಿಯ ಸಿನಿಕತೆಗಳು ಮಹಾರಾಷ್ಟ್ರದಲ್ಲಿದ್ದವು. ಈ ಸಂದರ್ಭದಲ್ಲಿ ಬ್ರಾಹ್ಮಣರ ಪಕ್ಷ ಎಂದು ಹೆಸರಾಗಿದ್ದ ಪಕ್ಷದ ಇಮೇಜ್‌ ಬದಲಿಸಲು ಆಗಿನ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಪ್ರಮೋದ್ ಮಹಾಜನ್‌ ನಿಂತಿದ್ದರು. ಇದು ಸ್ವಲ್ಪ ಗಡ್ಕರಿ ಪಾಲಿಗೆ ಋಣಾತ್ಮಕವಾಗಿತ್ತು.

ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಗಡ್ಕರಿ ನೇಮಕವಾಗಿದ್ದರೂ, ಮಹಾಜನ್‌ ತಮ್ಮ ಭಾವ ಗೋಪಿನಾಥ್‌ ಮುಂಡೆಯನ್ನು ಮುಂದೆ ಬಿಟ್ಟರು. ಕಾರಣ ಅವರು ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದರು. ಗಡ್ಕರಿಯ ತವರು ನಾಗಪುರ, ಸುತ್ತಮುತ್ತಲಿನ ವಿದರ್ಭ ಪ್ರದೇಶದಲ್ಲಿ ಮಹಾಜನ್‌ ಶಿಷ್ಯ ಅರ್ವಿಂದ್‌ ಶಹರ್ಪುರ್‌ಕರ್‌ ಪ್ರಾಬಲ್ಯ ಸ್ಥಾಪಿಸಲು ಆರಂಭಿಸಿದ್ದರು. ಗಡ್ಕರಿಗೆ ಪಾಲಿಗೆ ಇದು ಎಚ್ಚರಿಕೆಯ ಕರೆಗಂಟೆಯಾಗಿತ್ತು. ರಾಜ್ಯ ಬಿಜೆಪಿಯಿಂದ ತವರಿನವರೆಗೆ ಎಲ್ಲೆಲ್ಲೂ ವಿರೋಧಿಗಳ ಆರ್ಭಟ ಜೋರಾಗಿತ್ತು.

ಹೀಗಿರುವಾಗಲೇ 1995ರಲ್ಲಿ ಎಲ್ಲರ ನಿರೀಕ್ಷೆ ಮೀರಿ ಬಿಜೆಪಿ-ಶಿವಸೇನೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂತು. ಈ ಗೆಲುವಿನ ಹಿಂದೆ ಶಿವಸೇನೆಯ ಬಾಳ್‌ ಠಾಕ್ರೆ ಜತೆ ಸೇರಿ ಮಹಾಜನ್‌ ಹೆಣದ ರಣತಂತ್ರಗಳ ಪಾಲು ಹೆಚ್ಚಾಗಿತ್ತು. ಈ ಗೆಲುವಿನೊಂದಿಗೆ ಮಹಾಜನ್‌ ಮಹಾರಾಷ್ಟ್ರ ಬಿಜೆಪಿಯನ್ನು ಪೂರ್ಣ ಪ್ರಮಾಣದಲ್ಲಿ ತಮ್ಮ ಹತೋಟಿಗೆ ತೆಗೆದುಕೊಂಡರು. ಗಡ್ಕರಿ ಬದಿಗೆ ಸರಿಯಲೇಬೇಕಿತ್ತು. ಆ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಮನೋಹರ್‌ ಜೋಶಿ ಬೇರೆ ಬ್ರಾಹ್ಮಣ ಸಮುದಾಯದವರು. ಹೀಗಾಗಿ ಬಿಜೆಪಿಯ ಮತ್ತೋರ್ವ ಬ್ರಾಹ್ಮಣರಿಗೆ ಸಂಪುಟದಲ್ಲಿ ಸ್ಥಾನವಿಲ್ಲ ಎಂದು ಬಿಟ್ಟರು ಮಹಾಜನ್‌. ಗಡ್ಕರಿ ಪೆಚ್ಚಾದರು. ಆದರೆ ಅವರ ಬೆನ್ನಿಗೆ ನಿಂತಿದ್ದ ಆರ್‌ಎಸ್‌ಎಸ್‌ ಸುಮ್ಮನಾಗಲಿಲ್ಲ.

ಈ ಸಂದರ್ಭದಲ್ಲಿ ಆರ್‌ಎಸ್‌ಎಸ್‌ ತೀರ್ಮಾನವೊಂದನ್ನು ತೆಗೆದುಕೊಂಡಿತು. “ಜಾತಿ ಕಾರಣಕ್ಕೆ ಗಡ್ಕರಿಗೆ ಹುದ್ದೆ ತಪ್ಪಬಾರದು ಎಂದು ನಿರ್ಧರಿಸಿದ ಆರ್‌ಎಸ್‌ಎಸ್‌ ಗಡ್ಕರಿಯನ್ನು ಸಚಿವರನ್ನಾಗಿ ಮಾಡಿತು,” ಎಂದು ನೆನಪಿಸಿಕೊಳ್ಳುತ್ತಾರೆ ಶಹರ್ಪುಕರ್‌. ಸಂಘಕ್ಕೆ ರಾಜ್ಯದಲ್ಲಿ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದರೂ ಮಹಾಜನ್‌ ಬಗ್ಗೆಯಾಗಲೀ, ಠಾಕ್ರೆ ಬಗ್ಗೆಯಾಗಲೀ ವಿಶೇಷ ಒಲವೇನೂ ಇರಲಿಲ್ಲ. ಅವತ್ತು ಗಡ್ಕರಿಯನ್ನು ಸಂಪುಟಕ್ಕೆ ಸೇರಿಸಿಕೊಲ್ಳಲು ಮಹಾಜನ್‌ ಮತ್ತು ಮುಂಡೆ ಇಬ್ಬರೂ ಅಡ್ಡಗಾಲಾಗಿ ನಿಂತಿದ್ದರು, ಪಟ್ಟು ಬಿಡದ ಸಂಘ ಅವರಿಗೆ ಸಚಿವ ಸ್ಥಾನ ಕೊಡಿಸಿತು. ಈ ಸಂದರ್ಭದಲ್ಲಿ ಗಡ್ಕರಿಯನ್ನು ಬೆಂಬಲಿಸುವಂತೆ ಸಂಘ ಅಡ್ವಾಣಿ ಬಳಿಯಲ್ಲೂ ಮನವಿ ಮಾಡಿಕೊಂಡಿತ್ತು. ಅದರಂತೆ ಅವರೂ ನಡೆದುಕೊಂಡಿದ್ದರು ಎನ್ನುತ್ತಾರೆ ಸಂಘದ ಹಿರಿಯ ನಾಯಕ ದಿಲೀಪ್‌ ದೇವಧರ್.

ಲೋಕೋಪಯೋಗಿ ಸಚಿವ ನಿತಿನ್‌ ಗಡ್ಕರಿ
ಲೋಕೋಪಯೋಗಿ ಸಚಿವ ನಿತಿನ್‌ ಗಡ್ಕರಿ
/ಇಂಡಿಯನ್‌ ಎಕ್ಸ್‌ಪ್ರೆಸ್‌ ಆರ್ಕೈವ್

1996ರಲ್ಲಿ ಲೋಕೋಪಯೋಗಿ ಇಲಾಖೆ ವಹಿಸಿಕೊಂಡಿದ್ದಲ್ಲದೆ ನಾಗಪುರದ ಉಸ್ತುವಾರಿ ಸಚಿವರಾದರು ಗಡ್ಕರಿ. ಅವತ್ತಿಗೆ ಪಿಡಬ್ಲ್ಯೂಡಿ ಎಂಬುದು ಭ್ರಷ್ಟಾಚಾರದ ಕೂಪ ಎಂಬಂತಾಗಿತ್ತು. ಇಂಥ ಇಲಾಖೆಯಲ್ಲಿ ಬದಲಾವಣೆ ತರಲು ಮುಂದಾದರು ಗಡ್ಕರಿ. ಮೈತ್ರಿ ಸರಕಾರ ತನ್ನ ಚಾರ್ಮ್‌ ಕಳೆದುಕೊಂಡ ಹೊತ್ತಲ್ಲಿ ಅವರು ಮುಂಬೈನಲ್ಲಿ ಏಕಕಾಲದಲ್ಲಿ 55 ಫ್ಲೈಓವರ್ ನಿರ್ಮಾಣಕ್ಕೆ ಅಡಿಗಲ್ಲಿಟ್ಟರು. ಮುಂಬೈ-ಪುಣೆ ಅಷ್ಟಪಥಗಳ ಎಕ್ಸ್‌ಪ್ರೆಸ್‌ ವೇ ನಿರ್ಮಾಣ ಆರಂಭಿಸಿದರು. ಈ ಯೋಜನೆಯ ರೂಪುರೇಷೆಯನ್ನು ಶರದ್‌ ಪವಾರ್‌ ರೂಪಿಸಿದ್ದರಾದರೂ ಅವರಿಗೆ ಅದನ್ನು ಜಾರಿಗೊಳಿಸುವ ಧೈರ್ಯವಿರಲಿಲ್ಲ. ಹಲವು ಸಿಕ್ಕುಗಳಲ್ಲಿ ಆ ಯೋಜನೆ ಸಿಕ್ಕಿ ನರಳಾಡುತ್ತಿತ್ತು. ಧೈರ್ಯ ತಂದುಕೊಂಡ ಗಡ್ಕರಿ ಕಣ್ಣು ಮುಚ್ಚಿ ಯೋಜನೆ ಆರಂಭಿಸಿದರು.

ಅವತ್ತಿಗೆ ಈ ಯೋಜನೆಗೆ 4,000 ಕೋಟಿ ರೂಪಾಯಿ ಹಣ ಬೇಕಾಗಿತ್ತು. ಅದರೆ ಅಷ್ಟೊಂದು ಹಣ ಸರಕಾರದ ಬಳಿಯಲ್ಲಿ ಇರಲಿಲ್ಲ; ಹಾಗಂಥ ಖಾಸಗಿಯವರನ್ನು ನೆಚ್ಚಿಕೊಳ್ಳುವಂತೆಯೂ ಇರಲಿಲ್ಲ. ಕಾರಣ ಅಂದಿಗೆ ಈ ರಸ್ತೆನಿರ್ಮಾಣಗಳೆಲ್ಲಾ ಸರಕಾರದ ಕರ್ತವ್ಯ ಎಂಬ ವಾತಾವರಣ ಇದ್ದ ದಿನಗಳು. ಭಾರತ ಜಾಗತೀಕರಣಕ್ಕೆ ತೆರೆದುಕೊಂಡು ಕೇವಲ 3 ವರ್ಷಗಳಷ್ಟೇ ಕಳೆದಿತ್ತು. ಹೀಗಿರುವಾಗಲೇ ‘ಸರಕಾರಿ ಖಾಸಗಿ ಪ್ರಾಯೋಜಕತ್ವ’ ಎಂಬ ಕಲ್ಪನೆಯನ್ನು ಕೊಟ್ಟರು ಗಡ್ಕರಿ. ಮಲೇಷ್ಯಾಗೆ ಅಧಿಕೃತ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಅವರು ಈ ಕಲ್ಪನೆಯನ್ನು ಹೆಕ್ಕಿ ತಂದಿದ್ದರು.

ಸರಿ, ಖಾಸಗಿ ಅಂದ ತಕ್ಷಣ ಟೆಂಡರ್‌ ಆಫರ್‌ಗಳು ಮುಂದೆ ಬಂದವು. ಅದರಲ್ಲಿ ಮೊದಲ ಸಾಲಿನಲ್ಲಿದ್ದದ್ದು ಧೀರೂಭಾಯಿ ಅಂಬಾನಿ ನೇತೃತ್ವದ ರಿಲಯನ್ಸ್‌ ಇಂಡಸ್ಟ್ರೀಸ್‌; ಕಂಪನಿ 3,200 ಕೋಟಿ ರೂಪಾಯಿಗಳಿಗೆ ರಸ್ತೆ ನಿರ್ಮಾಣ ಮಾಡಿ ಕೊಡುವುದಾಗಿ ಸರಕಾರದ ಮುಂದೆ ಪ್ರಸ್ತಾವನೆ ಇಟ್ಟಿತು. ಆದರೆ, “…ನಾನು ಸಂಪುಟ ಸಭೆಯಲ್ಲಿ ಬೇಕೆಂದೇ ರಿಲಯನ್ಸ್‌ ಪ್ರಸ್ತಾಪವನ್ನು ತಳ್ಳಿ ಹಾಕಿದೆ. ಇದರಿಂದ ಸರಕಾರ ಮತ್ತು ಜನರನ್ನು ಏಕಕಾಲದಲ್ಲಿ ಸೂರೆ ಮಾಡುವ ಅವಕಾಶವನ್ನು ಖಾಸಗಿಯವರಿಗೆ ನೀಡದಂತಾಗುತ್ತಿತ್ತು,” ಎಂದು ಈ ಬಗ್ಗೆ ಅವರು ತಮ್ಮ ‘ಇಂಡಿಯಾ ಅಸ್ಪೈರ್ಸ್‌’ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ ಗಡ್ಕರಿ. ಇದಕ್ಕೆ ರಾಜಕೀಯ ಕಾರಣಗಳೂ ಇತ್ತು ಎನ್ನುತ್ತಾರೆ ಆ ಕಾಲದಲ್ಲಿ ಈ ಟೆಂಡರ್‌ನ್ನು ಹತ್ತಿರದಿಂದ ಬಲ್ಲ ಪತ್ರಕರ್ತರು. ಮಹಾಜನ್‌ ರಿಲಯನ್ಸ್‌ಗೆ ಹತ್ತಿರವಾಗಿದ್ದರು, ಇದಕ್ಕಾಗಿ ಗಡ್ಕರಿ ಅವರನ್ನು ದೂರವಿಟ್ಟರು ಎನ್ನುವ ಮಾತುಗಳಿವೆ.

ಏನೇ ಆಗಲಿ, ಗಡ್ಕರಿ ರಿಲಯನ್ಸ್‌ ಬದಲಿಗೆ ಆಗಷ್ಟೇ ರಚನೆಯಾಗಿದ್ದ ‘ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ’ವನ್ನು ರಸ್ತೆ ನಿರ್ಮಾಣಕ್ಕೆ ಆಯ್ಕೆ ಮಾಡಿಕೊಂಡರು. ಸಂಸ್ಥೆ ಸಾಲ ತೆಗೆದುಕೊಂಡು ಈ ಯೋಜನೆಯನ್ನು ಮುಗಿಸುವುದು ಎಂದು ಗಡ್ಕರಿ ನೀಲನಕ್ಷೆ ಹಾಕಿಕೊಂಡಿದ್ದರು. ಇದಕ್ಕೆ ರಾಜ್ಯ ಸರಕಾರವೇ ಭದ್ರತೆ ನೀಡಿತು. ಅಂದುಕೊಂಡಿದ್ದಕ್ಕಿಂತ ಕಡಿಮೆ ಮೊತ್ತಕ್ಕೆ ಅಂತೂ ಯೋಜನೆ ಮುಗಿಯಿತು. ಆದರೆ ಯೋಜನೆ ಮುಗಿಯುವಾಗ ಗಡ್ಕರಿ ಸಚಿವ ಸ್ಥಾನ ಕಳೆದುಕೊಂಡಿದ್ದರು. ‘ಮೈತ್ರಿ ಸರಕಾರ ಇದರ ಕಾಲು ಭಾಗ ಮಾತ್ರ ಪೂರ್ತಿಗೊಳಿಸಿತ್ತು, ಎಲ್ಲಾ ಕೆಲಸ ಮುಗಿಸಿದವರು ನಾವು’ ಎಂದು ಮುಂದೆ ಕಾಂಗ್ರೆಸ್‌ ಹೇಳಿಕೊಂಡಿತು. ಜತೆಗೆ ಇವತ್ತು ಜನರ ರಕ್ತ ಹೀರುತ್ತಿರುವ ಈ ಖಾಸಗಿ-ಸರಕಾರಿ ಪಾಲುದಾರಿಕೆಯ ಯೋಜನೆಯನ್ನು ಭಾರತಕ್ಕೆ ಪರಿಚಯಿಸಿದ್ದ ಖ್ಯಾತಿ/ಕುಖ್ಯಾತಿ ಗಡ್ಕರಿಗೆ ಸಲ್ಲುತ್ತದೆ.

ಈ ಹೆದ್ದಾರಿಯಾಚೆಗೂ ಗಡ್ಕರಿ ಮಹಾರಾಷ್ಟ್ರದಲ್ಲಿ ಸಚಿವರಾಗಿ ತಮ್ಮ ಛಾಪು ಮೂಡಿಸಿದರು. ಅವರ ಕಾಲದಲ್ಲಿ ಒಂದು ಅಂದಾಜಿನ ಪ್ರಕಾರ 14,000 ಗ್ರಾಮಗಳಿಗೆ ರಸ್ತೆ ನಿರ್ಮಾಣಗೊಂಡವು. ಜತೆಗೆ ತವರು ನಾಗಪುರದಲ್ಲೂ ರಸ್ತೆ, ಫ್ಲೈ ಓವರ್‌ಗಳು ನಿರ್ಮಾಣಗೊಂಡವು. ಇದು ಅವರ ಪಾಲಿಗೆ ಬಹಳ ಮುಖ್ಯವಾಯಿತು. “ಅವರು ಸಚಿವರಾಗಿ ಅಧಿಕಾರ ವಹಿಸಿಕೊಂಡ ವಾರವೇ ನಾಗ್ಪುರಕ್ಕೆ ಬಂದಿದ್ದರು. ಆಗ ಅಲ್ಲಿ 5-6 ಫ್ಲೈ ಓವರ್‌ಗಳ ನಿರ್ಮಾಣ ನಡೆಯುತ್ತಿತ್ತು. ಇದರಲ್ಲಿ ಯಾವುದನ್ನು 4 ವರ್ಷ ಮೊದಲು ಮುಗಿಸಬೇಕು ಎಂದು ನೇರವಾಗಿ ಇಂಜಿನಿಯರ್‌ಗಳ ಬಳಿ ಕೇಳಿದರು. ಆಗ ಅವರು ವಾರ್ದಾ ರಸ್ತೆಯ ಫ್ಲೈಓವರ್‌ನತ್ತ ಬೆಟ್ಟು ಮಾಡಿದರು. ಅದನ್ನೇ ನಿರ್ಮಾಣ ಮಾಡುವುದೆಂದು ಆಯ್ಕೆ ಮಾಡಿದ ಗಡ್ಕರಿ ತಮ್ಮ ಸರಕಾರ ಪತನವಾಗುವುದಕ್ಕೂ ಮೊದಲು ನಿರ್ಮಾಣ ಮಾಡಿ ಮುಗಿಸಿದರು. ಇದರಿಂದ ನಗರದಲ್ಲಿ ಗಡ್ಕರಿ ಜನಪ್ರಿಯತೆ ಮತ್ತಷ್ಟು ಹೆಚ್ಚಳವಾಯಿತು,” ಎನ್ನುತ್ತಾರೆ ಮಾಜಿ ಪತ್ರಕರ್ತ ಮತ್ತು ಗಡ್ಕರಿ ಬಾಲ್ಯದ ಗೆಳೆಯ ಪಂಡರಿಪಾಂಡೆ. ಗಡ್ಕರಿ ಕೆಲಸ ನೋಡಿ ಅವರನ್ನು ಠಾಕ್ರೆ ‘ರಸ್ತೆ ಮತ್ತು ಸೇತುವೆಗಳ ಮನುಷ್ಯ’ ಎಂದು ಕರೆದರು.

ತಾವು ಅಧಿಕಾರದಲ್ಲಿದ್ದಷ್ಟು ದಿನ ಗಡ್ಕರಿ ಜನರ ಕಣ್ಣಿಗೆ ಕಾಣಿಸುವಂತೆ ಕೆಲಸ ಮಾಡಿದ್ದಲ್ಲದೆ, ತಮ್ಮ ಮಾತೃ ಸಂಸ್ಥೆಗೂ ಸೇವೆ ಸಲ್ಲಿಸಿದರು ಎನ್ನುತ್ತಾರೆ ಬಿಜೆಪಿ ಬೀಟ್‌ನಲ್ಲಿದ್ದ ದೆಹಲಿಯ ಹಿರಿಯ ಪತ್ರಕರ್ತರು. ಸಚಿವರಾಗಿದ್ದ ಅವಧಿಯಲ್ಲಿ ಅವರು ಆರ್‌ಎಸ್‌ಎಸ್‌ ಸಂಸ್ಥಾಪಕ ಕೇಶವ್‌ ಬಲಿರಾಮ್‌ ಹೆಡ್ಗೇವಾರ್‌ ಮನೆಯನ್ನು ಖರೀದಿಸಿ ಆರ್‌ಎಸ್‌ಎಸ್‌ಗೆ ಹಸ್ತಾಂತರಿಸಿದರು.

ಹೀಗೆ ಪಕ್ಷ ಮತ್ತು ಜನರ ಬೆಂಬಲ ಗಳಿಸುತ್ತಲೇ ‘ಟಿಪಿಕಲ್‌ ಮಹಾರಾಷ್ಟ್ರ’ದ ರಾಜಕಾರಣಿಯಾಗಿ ಬೆಳೆದರು ಗಡ್ಕರಿ. ಮಹಾರಾಷ್ಟ್ರದ ರಾಜಕಾರಣಿ ಅಂದರೆ, ಅದು ರಾಜಕಾರಣ ಮತ್ತು ಉದ್ಯಮದ ಹಾಸು ಹೊಕ್ಕಾದ ಸಂಬಂಧ ಎಂದರ್ಥ. ಇದನ್ನು ಅರ್ಥ ಮಾಡಿಕೊಂಡ ಅವರು ಪಕ್ಷದಾಚೆಗಿನ ಸಂಬಂಧಗಳ ಬೆಲೆಯನ್ನು ಅರಿತುಕೊಂಡಿದ್ದರು. ಕೆಲವೊಮ್ಮೆ ಈ ಸಂಬಂಧಗಳು ರಾಜಕಾರಣಿಗಳನ್ನು ಇಕ್ಕಟ್ಟಿನಲ್ಲಿ ಸಿಲುಕಿಸುವುದಿದೆ. ಅದನ್ನು ಗಡ್ಕರಿಯೂ ಎದುರಿಸಿದರು.

1998ರ ಲೋಕಸಭೆ ಚುನಾವಣೆಯಲ್ಲಿ ನಾಗ್ಪುರದ ಹೊರಗೆ ಪ್ರಚಾರಕ್ಕಾಗಿ ಗಡ್ಕರಿಯನ್ನು ಬಿಜೆಪಿ ಕಳುಹಿಸಿತು. ವಾರ್ಧಾದಲ್ಲಿ ಅವರು ಪಕ್ಷದ ವಿಜಯ್‌ ಮುಡೆ ಪರ ಪ್ರಚಾರ ನಡೆಸಬೇಕಾಗಿತ್ತು. ಆದರೆ ಅಲ್ಲಿ ಅವರ ಆಪ್ತ ಕಾಂಗ್ರೆಸ್‌ನ ಡತ್ತಾ ಮೆಘೆ ಸ್ಪರ್ಧಿಸುತ್ತಿದ್ದರು. ಈ ಸಂದರ್ಭದಲ್ಲಿ ಗಡ್ಕರಿ ಮೆಘೆಗೆ ಸಹಾಯ ಮಾಡುತ್ತಾರೆ ಎಂಬ ಭಯ ಬಿಜೆಪಿಯಲ್ಲೇ ಆರಂಭಗೊಂಡಿತ್ತು. ಯಾಕೆಂದರೆ ಈ ಹಿಂದೆ ಗಡ್ಕರಿ ಮೆಘೆಯವರಿಗೆ ತುಂಬಾ ಸಲ ಸಹಾಯವನ್ನೂ ಮಾಡಿದ್ದರು.ಹೀಗಾಗಿ ಈ ಬಾರಿ ಮುಡೆಯನ್ನು ಮತ್ತೊಮ್ಮೆ ಗೆಲ್ಲುವಂತೆ ನೋಡಿಕೊಳ್ಳಬೇಕೆಂದು ಸ್ಪಷ್ಟ ಸೂಚನೆ ನೀಡಲಾಯಿತು. ಆದರೂ ಗಡ್ಕರಿ ಪಕ್ಷದ ಮುಡೆ ಸೋತರು; ಮೆಘೆ ಭರ್ಜರಿ ಜಯ ದಾಖಲಿಸಿದರು.

ಮುಂದೆ 1999ರಲ್ಲಿ ಮೈತ್ರಿ ಸರಕಾರ ಚುನಾವಣೆ ಸೋತು ಎನ್‌ಸಿಪಿ-ಕಾಂಗ್ರೆಸ್‌ ಮೈತ್ರಿ ಸರಕಾರ ರಚನೆಯಾಗಿ ಶರದ್‌ ಪವಾರ್‌ ಮುಖ್ಯಮಂತ್ರಿಯಾದರು. ಆಗ ಗಡ್ಕರಿ ಮೇಲ್ಮನೆಯಲ್ಲಿ ವಿರೋಧ ಪಕ್ಷದ ನಾಯಕ. ಈ ಸಂದರ್ಭದಲ್ಲಿ ‘ಗಡ್ಕರಿ ವಿರೋಧ ಪಕ್ಷಗಳ ಜತೆ ಬಹಿರಂಗವಾಗಿ ಬಡಿದಾಡುತ್ತಾರೆ; ಖಾಸಗಿಯಾಗಿ ಕೈಕುಲುಕುತ್ತಾರೆ’ ಎಂಬ ಆರೋಪಕ್ಕೆ ಗುರಿಯಾಗಿದ್ದರು ಎನ್ನುತ್ತಾರೆ ನಾಗಪುರದ ಹಿರಿಯ ಪತ್ರಕರ್ತರೊಬ್ಬರು.

"ಪರಿಷತ್‌ನಲ್ಲೊಮ್ಮೆ ಅವರು ಸರಕಾರದ ಮೇಲೆಹಣಕಾಸು ಅವ್ಯವಹಾರದ ಆರೋಪವನ್ನು ಮಾಡಿದ್ದರು. ಅದರ ಬಗ್ಗೆ ಅವರ ಬಳಿಯಲ್ಲಿ ದಾಖಲೆಗಳಿತ್ತು. ಹೀಗಂತ ನಾನು ಅದರ ಬಗ್ಗೆ ಕೇಳಲು ಹೋದಾಗ ಅವರು ನನಗದನ್ನು ನೀಡಲಿಲ್ಲ. ಈ ಸ್ಟೋರಿ ಮುಂದೆಂದೂ ಹೊರಗೆ ಬರಲೇ ಇಲ್ಲ," ಎಂದು ಹೇಳುತ್ತಾರೆ ಆ ಪತ್ರಕರ್ತರು.

ಹಾಗೆ ನೋಡಿದರೆ ನಾಗಪುರ ಕಾಂಗ್ರೆಸ್‌ ಹಿಡಿತದಲ್ಲಿದ್ದ ಕ್ಷೇತ್ರ. ಇಲ್ಲಿ ವಿರೋಧಿ ಗುಂಪಿನ ಜತೆ ಗಡ್ಕರಿ ಕೈ ಕುಲುಕಿದ ಹಲವು ನಿದರ್ಶನಗಳಿವೆ. ಅವರುಗಳಿಗೆ ಸಹಾಯ ಮಾಡಿ ಸ್ನೇಹ ಸಂಪಾದಿಸಿದ್ದು ಒಂದು ಕಡೆಯಾದರೆ, ಪಕ್ಷದೊಳಗೇ ಇರುವ ವಿರೋಧಿಗಳನ್ನು ಮುಗಿಸಲು ಅವರು ವಿರೋಧಿ ಪಕ್ಷಗಳನ್ನು ಎತ್ತಿ ಕಟ್ಟಿದ್ದೂ ಇದೆ. ಗಡ್ಕರಿ ನಡೆದು ಬಂದಿದ್ದೇ ಹಾಗೆ. ಎಲ್ಲರನ್ನೂ ಎಲ್ಲವನ್ನೂ ಜತೆಗಿಟ್ಟುಕೊಂಡೇ ಬೆಳೆದವರು ಅವರು.

ಟಿಪಿಕಲ್‌ ಮಹಾರಾಷ್ಟ್ರದ ರಾಜಕಾರಣಿಗಳು: ನಿತಿನ್‌ ಗಡ್ಕರಿ ಮತ್ತು ಶರದ್‌ ಪವಾರ್‌
ಟಿಪಿಕಲ್‌ ಮಹಾರಾಷ್ಟ್ರದ ರಾಜಕಾರಣಿಗಳು: ನಿತಿನ್‌ ಗಡ್ಕರಿ ಮತ್ತು ಶರದ್‌ ಪವಾರ್‌
/ಔಟ್‌ಲುಕ್‌

ರಾಜಕಾರಣದಲ್ಲಿ ಒಂದು ಹಂತಕ್ಕೆ ಬೆಳೆದು ಬಂದ ನಂತರ ಸಹಕಾರಿ ಕ್ಷೇತ್ರಕ್ಕೆ ಕೈ ಹಾಕಿದರು ಗಡ್ಕರಿ. ಅಲ್ಲೂ ಶರದ್‌ ಪವಾರ್‌ ಅನುಕರಣೆ ಮಾಡಲು ಮುಂದಾದರು. ಅವತ್ತಿಗೆ ಪಶ್ಚಿಮ ಮಹಾರಾಷ್ಟ್ರದ ಸಹಕಾರಿ ಕ್ಷೇತ್ರದ ಮೇಲೆ ಎನ್‌ಸಿಪಿ ಮತ್ತು ಶರದ್‌ ಪವಾರ್ ಬಲವಾದ ಹಿಡಿತ ಹೊಂದಿದ್ದರು. ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡ ನಂತರವೂ ಪವಾರ್‌ ಸಹಕಾರಿ ಕ್ಷೇತ್ರದ ಮೇಲಿನ ತಮ್ಮ ಹಿಡಿತವನ್ನು ಮಾತ್ರ ಇಂದಿಗೂ ಬಿಟ್ಟುಕೊಟ್ಟಿಲ್ಲ. ಈ ಮಾದರಿಯಲ್ಲಿ ಸಹಕಾರಿ ಬ್ಯಾಂಕ್‌ಗಳನ್ನು ತಮ್ಮ ಲಾಭಕ್ಕೆ ಹೇಗೆ ಬಳಸಿಕೊಳ್ಳುವುದು ಎಂಬುದನ್ನು ಗಡ್ಕರಿ ಅರಿತುಕೊಂಡು ಜಾರಿಗೆ ತಂದರು. ತಮ್ಮ ಊರಿನ ಸಹಕಾರಿ ಬ್ಯಾಂಕ್‌ಗಳನ್ನು ತೆಕ್ಕೆಗೆ ತೆಗೆದುಕೊಳ್ಳಲು ಪತ್ನಿ ಕಾಂಚನಾ ಮತ್ತು ಅನಿಲ್‌ ಸೊಳೆಯನ್ನು ಮುಂದೆ ಬಿಟ್ಟರು. ಇವತ್ತಿಗೂ ನಾಗ್ಪುರದ ಅತೀ ದೊಡ್ಡ ಸಹಕಾರಿ ಬ್ಯಾಂಕ್‌ಗಳ ಚುಕ್ಕಾಣಿ ಇವರಿಬ್ಬರ ಕೈಯಲ್ಲಿದೆ. ಹೀಗೆ ನಾಗಪುರ ಮತ್ತು ಮಹಾರಾಷ್ಟ್ರದಲ್ಲಿ ತಮ್ಮ ಪ್ರಭುತ್ವ ಗಟ್ಟಿಯಾಗುತ್ತಿದ್ದಂತೆ ಅವರಿಗೆ ರಾಷ್ಟ್ರ ರಾಜಕಾರಣದ ಬಾಗಿಲು ತೆರೆದುಕೊಂಡಿತು.

2000ನೇ ಇಸವಿ ಹೊತ್ತಿಗೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರದಲ್ಲಿ ಅವರಿಗೊಂದು ಸ್ಥಾನ ಕಲ್ಪಿಸಲಾಯಿತು. ಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವ ಯೋಜನೆಗೆ ಚಾಲನೆ ನೀಡಿದ ವಾಜಪೇಯಿ, ‘ರಾಷ್ಟ್ರೀಯ ಗ್ರಾಮೀಣ ರಸ್ತೆ ಅಭಿವೃದ್ಧಿ ಸಮಿತಿ’ ಅಧ್ಯಕ್ಷರನ್ನಾಗಿ ಗಡ್ಕರಿಯವರನ್ನು ನೇಮಕ ಮಾಡಿದರು.

ಹೀಗಿರುವಾಗಲೇ 2004ರಲ್ಲಿ ಚುನಾವಣೆ ಬಂತು. ಮತ್ತೆ ಬಿಜೆಪಿ ಮಹಾರಾಷ್ಟ್ರದಲ್ಲಿ ಸೋಲು ಕಂಡಿತು. ಈ ಬಾರಿ ಪಕ್ಷದ ರಾಜ್ಯ ಚುಕ್ಕಾಣಿ ಬದಲಿಸುವ ಮಾತುಗಳು ಕೇಳಿ ಬಂದವು. ಪ್ರತೀ ಬಾರಿ ಮಹಾಜನ್‌ ವಾಜಪೇಯಿಯನ್ನೇ ಬೆಂಬಲಿಸುತ್ತಾರೆ ಎಂದು ಅಸೂಯೆಗೊಂಡಿದ್ದ ಅಡ್ವಾಣಿ, ಗಡ್ಕರಿಗೆ ಮಣೆ ಹಾಕಿದರು. ಅವತ್ತಿಗಿನ್ನೂ ಮಹಾರಾಷ್ಟ್ರ ಬಿಜೆಪಿ ಮಹಾಜನ್‌ ಭದ್ರ ಹಿಡಿತದಲ್ಲಿತ್ತು. ಅವರು ಮುಂಡೆಯನ್ನು ಅಧ್ಯಕ್ಷರನ್ನಾಗಿಸಲು ಹೊರಟಿದ್ದರು. ಆದರೆ ಆರ್‌ಎಸ್‌ಎಸ್‌ ಬೆಂಬಲದೊಂದಿಗೆ, ಅಡ್ವಾಣಿ ಕೃಪಾಕಟಾಕ್ಷದೊಂದಿಗೆ ಗಡ್ಕರಿ ಅನಾಯಸವಾಗಿ ಅಧ್ಯಕ್ಷ ಹುದ್ದೆಗೆ ನಡೆದು ಬಂದರು. 2006ರಲ್ಲಿ ಮತ್ತೆ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾದರು.

ಗಡ್ಕರಿ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷರಾಗಿದ್ದಾಗ ಕೆಲವು ನಿರ್ಣಾಯಕ ಬೆಳವಣಿಗೆಗಳು ಆರ್‌ಎಸ್‌ಎಸ್‌ ಒಳಗೆ ನಡೆದವು. ಇವು ಮುಂದೆ ಗಡ್ಕರಿ ಜೀವನದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳಿಗೆ ಕಾರಣವಾದವು.

2000ನೇ ಇಸವಿಯಲ್ಲಿ ಕೆಎಸ್‌ ಸುದರ್ಶನ್‌ ಸಂಘದ ಮುಖ್ಯಸ್ಥರಾದರು. ಈ ವೇಳೆ ಸಂಘದಿಂದಲೇ ಬಂದ ಅಟಲ್‌ ಬಿಹಾರಿ ವಾಜಪೇಯಿ ಮತ್ತು ಅಡ್ವಾಣಿ ಸರಕಾರವನ್ನು ನಡೆಸುತ್ತಿದ್ದರು. ಆದರೆ ಅವರು ಹೇಳಿದ್ದಕ್ಕೆಲ್ಲಾ ಸುದರ್ಶನ್‌ ತಲೆಯಾಡಿಸುತ್ತಿರಲಿಲ್ಲ. ಹೀಗಿದ್ದೂ ಅವರಿಬ್ಬರು ಇದ್ದಷ್ಟೂ ದಿನ ಸಂಘಕ್ಕೆ ಬಿಜೆಪಿಯಲ್ಲಿ ತಲೆ ಹಾಕುವುದು ಸ್ವಲ್ಪ ಕಷ್ಟವೇ ಇತ್ತು. ಆದರೆ ಯಾವಾಗ 2004ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮಕಾಡೆ ಮಲಗಿತೋ ಸುದರ್ಶನ್‌ ಅವಕಾಶವನ್ನು ಕೈವಶ ಮಾಡಿಕೊಂಡರು. ಪಾಕಿಸ್ತಾನಕ್ಕೆ ಹೋಗಿ ಮಹಮ್ಮದ್‌ ಅಲಿ ಜಿನ್ಹಾರನ್ನು ಹೊಗಳಿದ ಅಡ್ವಾಣಿ ಹುದ್ದೆ ಕಳೆದುಕೊಂಡರು. ವಾಜಪೇಯಿ ತೆರೆ ಮರೆಗೆ ಸರಿದರು. ಪಕ್ಷದ ಮುಖ್ಯಸ್ಥನ ಸ್ಥಾನಕ್ಕೆ ರಾಜನಾಥ್‌ ಸಿಂಗ್‌ ಬಂದು ಕುಳಿತುಕೊಂಡರು. ಬಿಜೆಪಿ ಸಂವಿಧಾನವನ್ನು ಬದಲಿಸಿ ಹೆಚ್ಚೆಚ್ಚು ಸಂಘದ ಕಾರ್ಯಕರ್ತರು, ನಾಯಕರನ್ನು ಪಕ್ಷದೊಳಕ್ಕೆ ಎಳೆದುಕೊಳ್ಳಲಾಯಿತು.

ಹೀಗಿರುವಾಗಲೇ 2009ರ ಚುನಾವಣೆಗೂ ಎರಡು ತಿಂಗಳು ಮೊದಲು ಸಂಘದ ಸರಸಂಘಚಾಲಕರ ಸ್ಥಾನಕ್ಕೆ ಬಂದು ಕುಳಿತರು ಮಹಾರಾಷ್ಟ್ರ ಮೂಲದ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ವ್ಯಕ್ತಿ ಮೋಹನ್‌ ಭಾಗವತ್. ಈ ಸಂದರ್ಭದಲ್ಲಿ ಮತ್ತೆ ಅಡ್ವಾಣಿ ಪ್ರಧಾನಿ ರೇಸ್‌ನಲ್ಲಿದ್ದರು. ಪಕ್ಷ ಮತ್ತು ಆರ್‌ಎಸ್‌ಎಸ್‌ ಸಂಬಂಧ ಹಳಸಿತ್ತು. ಪರಿಣಾಮ 2004ಕ್ಕಿಂತಲೂ ಕಡಿಮೆ ಸ್ಥಾನಗಳಲ್ಲಿ ಗೆಲುವು ಸಾಧಿಸಿತು ಬಿಜೆಪಿ.

ಚುನಾವಣೆ ಸೋತರೂ, ಸಂಘದ ಜತೆ ಸಂಬಂಧ ಹಳಸಿದರೂ, ಅಧ್ಯಕ್ಷರು ಬೇರೆಯವರಾದರೂ ಅಡ್ವಾಣಿ ಇನ್ನೂ ಪಕ್ಷದ ಒಂದು ಗುಂಪನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದರು. ಅವರ ಶಿಷ್ಯರಾದ ಸುಷ್ಮಾ ಸ್ವರಾಜ್‌, ಅರುಣ್‌ ಜೇಟ್ಲಿ, ವೆಂಕಯ್ಯ ನಾಯ್ಡು ಮತ್ತು ಅನಂತ್‌ ಕುಮಾರ್ ಎಂಬ ‘ಡೆಲ್ಲಿ 4’ ಗ್ಯಾಂಗ್‌ ಪಕ್ಷದೊಳಗಿನ ಬಣ ರಾಜಕೀಯ ಸಮಸ್ಯೆಯ ಕೇಂದ್ರದಲ್ಲಿತ್ತು.

ಅಡ್ವಾಣಿಯ ಜನಪ್ರಿಯ ಡೆಲ್ಲಿ-4 ಗ್ಯಾಂಗ್‌; ಅನಂತ್ ಕುಮಾರ್‌, ವೆಂಕಯ್ಯ ನಾಯ್ಡು, ಸುಷ್ಮಾ ಸ್ವರಾಜ್‌ ಮತ್ತು ಅರುಣ್‌ ಜೇಟ್ಲಿ
ಅಡ್ವಾಣಿಯ ಜನಪ್ರಿಯ ಡೆಲ್ಲಿ-4 ಗ್ಯಾಂಗ್‌; ಅನಂತ್ ಕುಮಾರ್‌, ವೆಂಕಯ್ಯ ನಾಯ್ಡು, ಸುಷ್ಮಾ ಸ್ವರಾಜ್‌ ಮತ್ತು ಅರುಣ್‌ ಜೇಟ್ಲಿ

ಇದೇ ಸಂದರ್ಭದಲ್ಲಿ ಬಿಜೆಪಿಯೊಳಗೆ ಹೊಸ ಮುಖದ ತಲಾಷೆಯ ಮಾತುಗಳು ಕೇಳಿ ಬರುತ್ತಿದ್ದವು. 2009ರಲ್ಲಿ ಟಿವಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಭಾಗವತ್‌, ಪಕ್ಷದೊಳಗಿನ ಹೋರಾಟಗಳು, ಬಣ ರಾಜಕೀಯದ ಬಗ್ಗೆ ಅಸಮಧಾನ ಹೊರಹಾಕಿದರು. ಸಂದರ್ಶನ ನಡೆಸುತ್ತಿದ್ದ ಅರ್ನಬ್‌ ಗೋಸ್ವಾಮಿ ಮುಂದಿನ ಅಧ್ಯಕ್ಷರು ಯಾರು ಎಂಬ ಪ್ರಶ್ನೆ ಕೇಳಿ ಜೇಟ್ಲಿ, ನಾಯ್ಡು, ಸುಷ್ಮಾ, ಮೋದಿ ಹೆಸರು ಮುಂದಿಟ್ಟರು. ಅಥವಾ ಐದು, ಆರು, ಏಳನೇ ಆಯ್ಕೆಗಳಿವೆಯೇ ಎಂದು ಕೇಳಿದರು. ಆಗ ಭಾಗವತ್‌, ‘ಅಧ್ಯಕ್ಷರ ಆಯ್ಕೆ ಪಕ್ಷಕ್ಕೆ ಬಿಟ್ಟಿದ್ದು, ಆದರೆ ಈ ನಾಲ್ವರಾಚೆಗೂ ಬಿಜೆಪಿ ನೋಡಬೇಕು’ ಎಂದು ಹೇಳಿದರು.

ಅದೇ ವರ್ಷ ನವೆಂಬರ್ ಹೊತ್ತಿಗೆ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಸಂಘದ ಆಯ್ಕೆ ಗಡ್ಕರಿಎಂಬ ಮಾತುಗಳು ಕೇಳಿ ಬರುತ್ತಿದ್ದವು. ಅವತ್ತಿಗೆ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಮೊದಲ ಆಯ್ಕೆಮೋದಿಯಾಗಿತ್ತು. ಆದರೆ 2012ರ ಗುಜಾರಾತ್‌ ಚುನಾವಣೆಗೂ ಮೊದಲು ಕೇಂದ್ರಕ್ಕೆ ಬರಲು ಅವರು ಸಿದ್ಧವಿರಲಿಲ್ಲ. ಈ ಸಂದರ್ಭದಲ್ಲಿ ಮನೋಹರ್‌ ಪರಿಕ್ಕರ್‌ ಮತ್ತು ಗಡ್ಕರಿ ಹೆಸರು ತೇಲಿ ಬಂತು. ಇಬ್ಬರೂ ಮಹಾರಾಷ್ಟ್ರದ ಬ್ರಾಹ್ಮಣರಾಗಿದ್ದರು ಎನ್ನುತ್ತಾರೆ ನಾಗಪುರ ಮೂಲದ ಉದ್ಯಮಿ, ಆರ್‌ಎಸ್‌ಎಸ್‌ ನಾಯಕ ಮತ್ತು ಗಡ್ಕರಿ ಗೆಳೆಯ ದಿಲೀಪ್‌ ದೇವೋಧರ್‌.

ವಿಶೇಷವೆಂದರೆ ಗಡ್ಕರಿ ಅಡ್ವಾಣಿಗೂ ಆಪ್ತರಾಗಿದ್ದರು. ಹಾಗಾಗಿ ಮೊದಲಿಗೆ ಅಡ್ವಾಣಿ ಗಡ್ಕರಿ ಹೆಸರನ್ನು ಉಲ್ಲೇಖಿಸಿದರು. ಅದನ್ನು ಸಂಘ ಖುಷಿಯಿಂದ ಒಪ್ಪಿಕೊಂಡಿತು ಎನ್ನುತ್ತಾರೆ ಸಂಘದ ಮುಖವಾಣಿ ತರುಣ್‌ ಭಾರತ್‌ ಸಂಪಾದಕರಾಗಿದ್ದ ಸುಧೀರ್‌ ಪಾಠಕ್‌. ಮಹಾರಾಷ್ಟ್ರದಲ್ಲೂ ಬಿಜೆಪಿ ಅಧ್ಯಕ್ಷ ಹುದ್ದೆಗೆ ಗಡ್ಕರಿಯನ್ನು ಅಡ್ವಾಣಿ ಕೂರಿಸಿದ್ದರಿಂದ ಅವರು ತಮ್ಮ ಹಿಡಿತದಲ್ಲಿರುತ್ತಾರೆ ಎಂದು ಅಂದುಕೊಂಡಿದ್ದರು. ಹೀಗೆ ಡಿಸೆಂಬರ್‌ 2009ರಲ್ಲಿ ತಮ್ಮ 52ನೇ ವಯಸ್ಸಿಗೆ ಬಿಜೆಪಿಯ ಅಧ್ಯಕ್ಷರಾದರು ನಿತಿನ್‌ ಗಡ್ಕರಿ. ಮುಂದಿನ ಅವರ ರಾಜಕೀಯ ಬೆಳವಣಿಗೆಗಳು ಇನ್ನೊಂದು ಕುತೂಹಲಕಾರಿ ಹಂತವನ್ನು ತಲುಪಿದವು...

ಕೃಪೆ: ದಿ ಕ್ಯಾರವಾನ್.

Also read: ‘ಸಂಘಿ ಪುತ್ರ’-1: ಮೋದಿಗೇ ಪರ್ಯಾಯ; ಆರ್‌ಎಸ್‌ಎಸ್ ಆಪ್ತ, ಯಾರೀತ ನಿತಿನ್ ಗಡ್ಕರಿ?