samachara
www.samachara.com
‘ಸಂಘಿ ಪುತ್ರ’-1: ಮೋದಿಗೇ ಪರ್ಯಾಯ; ಆರ್‌ಎಸ್‌ಎಸ್ ಆಪ್ತ, ಯಾರೀತ ನಿತಿನ್ ಗಡ್ಕರಿ? 
COVER STORY

‘ಸಂಘಿ ಪುತ್ರ’-1: ಮೋದಿಗೇ ಪರ್ಯಾಯ; ಆರ್‌ಎಸ್‌ಎಸ್ ಆಪ್ತ, ಯಾರೀತ ನಿತಿನ್ ಗಡ್ಕರಿ? 

ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ 2 ತಿಂಗಳು ಕಳೆದಿತ್ತಷ್ಟೇ. ‘ಸಂಡೇ ಗಾರ್ಡಿಯನ್‌’ ಮೋದಿ ಸಂಪುಟದ ಸಚಿವರಾಗಿದ್ದ ನಿತಿನ್‌ ಗಡ್ಕರಿ ನಿವಾಸದಲ್ಲಿ ಅತ್ಯಾಧುನಿಕ ಹಿಯರಿಂಗ್ ಡಿವೈಸ್‌ಗಳು ಪತ್ತೆಯಾಗಿವೆ ಎಂದು ವರದಿ ಮಾಡಿತ್ತು.

ಕಾಲ ಬದಲಾಗಿದೆ; ನಾಲ್ಕೂವರೆ ವರ್ಷಗಳ ಹಿಂದೆ ಇದ್ದ ಮೋದಿ ಇಮೇಜ್ ಇವತ್ತಿಗೆ ದೊಡ್ಡಮಟ್ಟದಲ್ಲಿ ಘಾಸಿಗೊಂಡಿದೆ. ಹೊರಗೂ, ಪಕ್ಷದೊಳಗೂ ಇವತ್ತು ಗುಜರಾತ್ ಮೂಲದ ನರೇಂದ್ರ ಮೋದಿ ಪ್ರಶ್ನಾತೀತ ನಾಯಕರಾಗಿ ಉಳಿದಿಲ್ಲ. ಇವತ್ತು ಮೋದಿ ಸ್ಥಾನಕ್ಕೆ ಪಕ್ಷದ ಒಳಗೇ ಕೇಳಿ ಬರುತ್ತಿರುವ ಹೆಸರು ನಿತಿನ್ ಗಡ್ಕರಿ. ಯಾರಿವರು? ಅದು ಹೇಗೆ ಮೋದಿಯಂತಹ ಜನಪ್ರಿಯ, ಪ್ರಭಾವಿ ನಾಯಕರಿಗೆ ಪರ್ಯಾಯದ ರೂಪದಲ್ಲಿ ಬೆಳೆದು ಬರಲು ಸಾಧ್ಯವಾಯಿತು? ನಿತಿನ್ ಗಡ್ಕರಿ ಎಂಬ ನಾಗಪುರ ಮೂಲದ ರಾಜಕಾರಣಿಯ ಅತ್ಯಂತ ಕುತೂಹಲಕಾರಿಯಾದ ರಾಜಕೀಯ ಬೆಳವಣಿಗೆಯನ್ನು ಕಟ್ಟಿಕೊಟ್ಟಿದೆ ‘ದಿ ಕ್ಯಾರವಾನ್’ ಮ್ಯಾಗ್ಸೀನ್. ವಿಶೇಷ ಸರಣಿ ರೂಪದಲ್ಲಿ ‘ಸಮಾಚಾರ’ ಅದನ್ನು ಕನ್ನಡದ ಓದುಗರಿಗಾಗಿ ಇಲ್ಲಿ ನೀಡುತ್ತಿದೆ. ನಿಮ್ಮ ಓದಿನ ಖುಷಿಗಾಗಿ...

  • ಭಾಗ-1:

26 ಜುಲೈ 2014…

ನರೇಂದ್ರ ಮೊದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ ಎರಡು ತಿಂಗಳು ಕಳೆದಿತ್ತಷ್ಟೇ. ಈ ಸಂದರ್ಭದಲ್ಲಿ ‘ಸಂಡೇ ಗಾರ್ಡಿಯನ್‌’ ಮೋದಿ ಸಂಪುಟದ ಸಚಿವರಾಗಿದ್ದ ನಿತಿನ್‌ ಗಡ್ಕರಿ ಅಧಿಕೃತ ನಿವಾಸದಲ್ಲಿ ಅತ್ಯಾಧುನಿಕ ಹಿಯರಿಂಗ್ ಡಿವೈಸ್‌ಗಳು ಪತ್ತೆಯಾಗಿವೆ ಎಂದು ವರದಿ ಮಾಡಿತ್ತು. ಸುದ್ದಿ ಹೊರಬಿದ್ದ ತಕ್ಷಣ ‘ಅಮೆರಿಕಾದ ಗುಪ್ತಚರರು ಈ ಡಿವೈಸ್‌ ಇಟ್ಟಿದ್ದಾರೆ; ಇದು ಹಳೆಯ ಕಾಂಗ್ರೆಸ್‌ ಸರಕಾರದ ಕೃತ್ಯ’ ಎಂಬ ಮಾತುಗಳ ಕೇಳಿ ಬಂದವು. ಮರು ದಿನ ಮುಂಜಾನೆ ಮೊಬೈಲ್‌ ಕೈಗೆತ್ತಿಕೊಂಡ ಗಡ್ಕರಿ, ಇದು ‘ಊಹಾತ್ಮಕ ಸುದ್ದಿ’ ಎಂದು ಟ್ಟೀಟ್‌ ಮಾಡಿದರು. ಅಷ್ಟೇ, ಅವರೇನು ಸುದ್ದಿಯನ್ನು ತಳ್ಳಿ ಹಾಕಲಿಲ್ಲ.

ಈ ಘಟನೆ ಭಾರತದ ರಾಜಕೀಯದಲ್ಲಿ ಅಪರೂಪದ ಬೆಳವಣಿಗೆಗೆ ಕಾರಣವಾಯಿತು. ಆಳುವ ಸರಕಾರದ ಸಚಿವರ ಬೆನ್ನಿಗೆ ನಿಂತ ವಿರೋಧ ಪಕ್ಷಗಳು ಈ ಬಗ್ಗೆ ತನಿಖೆಗೆಯಾಗಬೇಕು ಎಂದು ಆಗ್ರಹಿಸಿದವು. ಅಷ್ಟೇ ಅಲ್ಲ ಈ ಬಗ್ಗೆ ಪ್ರಧಾನಿ ಪ್ರತಿಕ್ರಿಯೆ ಕೋರಿ ಎರಡು ದಿನ ಪೂರ್ತಿ ಕಲಾಪ ನಡೆಸಲು ಅವಕಾಶವನ್ನೇ ನೀಡಲಿಲ್ಲ.

ಇದೊಂದು ಅಚ್ಚರಿಯ ಬೆಳವಣಿಗೆಯಾಗಿತ್ತು. ಸಚಿವರೊಬ್ಬರ ವಿರುದ್ಧ ಅದೇ ಸರಕಾರ ಗೂಢಚರ್ಯೆ ನಡೆಸಿದ ಆಪಾದನೆಯನ್ನು ವಿರೋಧ ಪಕ್ಷಗಳು ಮಾಡುತ್ತಿದ್ದರೆ, ಆಡಳಿತ ಪಕ್ಷ ಮಾತನಾಡಲು ಹೆದರುತ್ತಿತ್ತು. ಕೊನೆಗೆ ಸರಕಾರ ಗೃಹ ಸಚಿವ ರಾಜನಾಥ್‌ ಸಿಂಗ್‌ ಕೈಯಲ್ಲಿ ಇದೊಂದು ‘ಸುಳ್ಳು ಸುದ್ದಿ’ ಎಂದು ಹೇಳಿಸಿ ಸ್ವಂತ ಮನೆಯಲ್ಲೇ ಬೀಸಿದ ದೊಣ್ಣೆಯಿಂದ ತಪ್ಪಿಸಿಕೊಂಡಿತು.

ಇಷ್ಟೆಲ್ಲಾ ಬೆಳವಣಿಗೆ ನಡೆಯಲು ನರೇಂದ್ರ ಮೋದಿ ಇತಿಹಾಸವೂ ಕಾರಣವಾಗಿತ್ತು. ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಅವರು ಯಾವುದೇ ಗಂಭೀರ ಕಾರಣಗಳಿಲ್ಲದೆ, ಬೆಂಗಳೂರು ಮೂಲದ ಮಹಿಳೆಯ ಹಿಂದೆ ಗೂಢಚರರನ್ನು ಬಿಟ್ಟಿದ್ದರು. ಇಂಥಹ ಕಣ್ಗಾವಲು ನಡೆಸುವ ಹಿನ್ನೆಲೆ ಸ್ವತಃ ಮೋದಿ ಅವರಿಗಿತ್ತು. ಈಗ ಅವರು ಪ್ರಧಾನಿ ಬೇರೆ. ಅವರ ಕಚೇರಿ ನೇರವಾಗಿ ಗಡ್ಕರಿ ಮೇಲೆ ಕಣ್ಣಿಡುವ ಸಾಧ್ಯತೆ ಇತ್ತು. ಆದರೆ, ಮೋದಿ ಕೂಡ ಗಡ್ಕರಿ ಅವರನ್ನು ನಿಗಾದಲ್ಲಿ ಇಟ್ಟಿದ್ದಾರೆ ಎಂಬ ಸುದ್ದಿ ಹೊರಬಿದ್ದಾಗ ಸಹಜವಾಗಿಯೇ ಅದು ಬೇರೆಯದೇ ಆಯಾಮವನ್ನು ತೆಗೆದುಕೊಂಡಿತು. ಮೋದಿ ಸರಕಾರದಲ್ಲಿ ಮೋದಿ ಮಾತ್ರ ಅಲ್ಲ, ಗಡ್ಕರಿ ಕೂಡ ಶಕ್ತಿಶಾಲಿ ಎಂಬ ಸಂದೇಶವನ್ನು ಇದು ಕಳುಹಿಸಿತ್ತು. ಬಲಪಂಥೀಯ ಹಿನ್ನೆಲೆಯ ನಾಯಕರನ್ನು ಇದು ಮುಜುಗರಕ್ಕೀಡು ಮಾಡಿತ್ತು. ಕೊನೆಗೆ, ಗಡ್ಕರಿ ಟ್ವೀಟ್, ರಾಜನಾಥ್ ಸಿಂಗ್ ಹೇಳಿಕೆಗಳು ಒಟ್ಟಾರೆ ಬೆಳವಣಿಗೆಯನ್ನು ಕಾರ್ಪೆಟ್‌ ಕೆಳಗೆ ತೂರಿಸುವಲ್ಲಿ ಸಫಲವಾದವು.

ಈ ಎಲ್ಲಾ ಬೆಳವಣಿಗೆಗಳು ನಡೆದು ಒಂದು ತಿಂಗಳು ಕಳೆದಿತ್ತು. ಜನ ನಿಧಾನಕ್ಕೆ ವಿಚಾರವನ್ನು ಮರೆಯುತ್ತಿದ್ದರು. ಈ ಹೊತ್ತಲ್ಲಿ ‘ಔಟ್‌ಲುಕ್‌’ ನಿಯತಕಾಲಿಕೆಯಲ್ಲಿ ಬಿಜೆಪಿಯ ಮಾತೃ ಸಂಸ್ಥೆ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಸಂದರ್ಶನ ಪ್ರಕಟವಾಯಿತು. ಅದರಲ್ಲಿ ಅವರಿಗೆ ಗೂಢಚರ್ಯೆ ಉಪಕರಣ ಪತ್ತೆಯಾದ ಘಟನೆ ಕುರಿತು ಪ್ರಶ್ನೆಯನ್ನು ಇಡಲಾಗಿತ್ತು. ಆ ಸಂದರ್ಭದಲ್ಲಿ ಗಡ್ಕರಿಯ ಆಪ್ತರೂ ಆಗಿರುವ ಭಾಗವತ್‌,‘ಸಾರ್ವಜನಿಕವಾಗಿ ಗೂಢಚರ್ಯೆಯ ಆರೋಪವನ್ನು ನಿರಾಕರಿಸುವುದರಿಂದ ಪ್ರಧಾನಿ ಮತ್ತು ಬಿಜೆಪಿಯ ಇಮೇಜ್‌ಗೆ ಧಕ್ಕೆಯಾಗಲಿದೆ’ ಎಂದಿದ್ದರು. ಇನ್ನೊಂದು ಅರ್ಥದಲ್ಲಿ ಭಾಗವತ್ ಕೂಡ ಪರೋಕ್ಷವಾಗಿ ‘ಸಾಧ್ಯತೆ’ಗಳನ್ನು ಒಪ್ಪಿಕೊಂಡಿದ್ದರು ಅಥವಾ ನೇರ ಮಾತುಗಳಲ್ಲಿ ಅದನ್ನು ತಳ್ಳಿ ಹಾಕಲು ಹೋಗಲಿಲ್ಲ.

ಗಡ್ಕರಿ ಮತ್ತು ಭಾಗವತ್‌ ಒಡನಾಟ ಗಳಸ್ಯ ಕಂಠಸ್ಯವಾದುದು. ಆಪ್ತ ಸಂಬಂಧವನ್ನು ಆರ್‌ಎಸ್‌ಎಸ್‌ ಜತೆಗೆ ಇಟ್ಟುಕೊಂಡವರು ನಿತಿನ್‌ ಗಡ್ಕರಿ. ಆರ್‌ಎಸ್‌ಎಸ್‌ನ ಕೇಂದ್ರ ಕಚೇರಿ ಇರುವ ನಾಗಪುರದಿಂದಲೇ ಬಂದವರು ಗಡ್ಕರಿ. ಕೇಂದ್ರ ಕಚೇರಿಯಲ್ಲಂತೂ ಅವರನ್ನು ‘ಸಂಘದ ಅಚ್ಚುಮೆಚ್ಚಿನ ಪುತ್ರ’ ಎಂದೇ ಕರೆಯಲಾಗುತ್ತದೆ. ಕರೆಯುವುದು ಮಾತ್ರವಲ್ಲ ಹಲವು ಸಂದರ್ಭಗಳಲ್ಲಿ ಈ ಮಾತುಗಳು ಸಾಬೀತಾಗಿವೆ.

2009ರಲ್ಲಿ ಅವರು ಬಿಜೆಪಿ ಅಧ್ಯಕ್ಷರಾದಾಗ ಈ ಹುದ್ದೆಗೇರಿದ ಅತ್ಯಂತ ಕಿರಿಯ ವ್ಯಕ್ತಿಯಾಗಿದ್ದರು. 2012ರಲ್ಲಿ ಪಕ್ಷದ ಸಂವಿಧಾನವನ್ನೇ ಬದಲು ಮಾಡಿ ಅವರಿಗೆ ಎರಡನೇ ಅವಧಿಗೆ ಅವಕಾಶ ನೀಡಲಾಗಿತ್ತು. 2014ರಲ್ಲಿ ನಾಗ್ಪುರದಿಂದ ಲೋಕಸಭೆ ಚುನಾವಣೆಗೆ ನಿಂತು ಸಂಸತ್‌ ಪ್ರವೇಶಿಸಿದ ಗಡ್ಕರಿ ಮೋದಿ ಸಂಪುಟದಲ್ಲಿ ಪ್ರಮುಖ ಖಾತೆಗಳಾದ ರಸ್ತೆ ಮತ್ತು ಹೆದ್ದಾರಿ ಹಾಗೂ ಬಂದರು ಸಚಿವಾಲಯಗಳ ಹೊಣೆ ಹೊತ್ತುಕೊಂಡರು. 2017ರಲ್ಲಿ ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಶುದ್ಧೀಕರಣ ಖಾತೆಯನ್ನೂ ಅವರಿಗೆ ವಹಿಸಲಾಯಿತು. ಇವೆಲ್ಲದರ ಹಿಂದೆ ಇದ್ದಿದ್ದು ಮತ್ಯಾರೂ ಅಲ್ಲ. ಇದೇ ಆರ್‌ಎಸ್ಎಸ್‌ ಮತ್ತು ಗಡ್ಕರಿ ಆಪ್ತ ಮೋಹನ್‌ ಭಾಗವತ್‌.

ಮಹಾರಾಷ್ಟ್ರ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಗಡ್ಕರಿ ಮತ್ತು ಭಾಗವತ್‌ ಒಡನಾಟ ಗಳಸ್ಯ ಕಂಠಸ್ಯವಾದುದು.
ಮಹಾರಾಷ್ಟ್ರ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಗಡ್ಕರಿ ಮತ್ತು ಭಾಗವತ್‌ ಒಡನಾಟ ಗಳಸ್ಯ ಕಂಠಸ್ಯವಾದುದು.
/ಝೀನ್ಯೂಸ್

ಹೆಚ್ಚು ಕಡಿಮೆ ಹೆಡ್‌ಮಾಸ್ಟರ್‌ ರೀತಿಯಲ್ಲಿ ವರ್ತಿಸುತ್ತಾ ಪ್ರಧಾನಿ ಮೋದಿ ಎಲ್ಲಾ ಖಾತೆಗಳ ಮೇಲೆ ಹಿಡಿತ ಹೊಂದಿದ್ದರೂ, ಗಡ್ಕರಿ ಮಾತ್ರ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ. ಮತ್ತು ಕಣ್ಣಿಗೆ ಕಾಣಿಸುವ ಫಲಿತಾಂಶಗಳನ್ನು ನೀಡುವಲ್ಲಿ ನಿರತರಾಗಿದ್ದಾರೆ. ಹೀಗಾಗಿ ಮೋದಿ ಸಂಪುಟದ ವಿಶೇಷ ವ್ಯಕ್ತಿಯಾಗಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.

“ಹೆಚ್ಚಿನ ಸಚಿವರು ಪ್ರಧಾನಿ ನೋಡುತ್ತಿದ್ದಾರೆ ಎಂಬ ಹೆದರಿಕೆಯಲ್ಲಿರುತ್ತಾರೆ. ಆದರೆ ಅವರಿಗೆ (ಗಡ್ಕರಿ) ಯಾವುದೇ ಭಯವಿಲ್ಲ. ಕಾರಣ ಆರ್‌ಎಸ್‌ಎಸ್‌ನ ಬೆಂಬಲ. ಅವರು ಪ್ರಧಾನಿಯನ್ನು ಗೌರವಿಸಬಹುದು. ಆದರೆ ಅವರ ಬಗ್ಗೆ ಭಯವಿಲ್ಲ,” ಎನ್ನುತ್ತಾರೆ ದೆಹಲಿ ಶಕ್ತಿ ಕೇಂದ್ರಗಳ ಕಾರುಡಾರುಗಳಲ್ಲಿ ದೊಡ್ಡ ದೊಡ್ಡ ಸಂಸ್ಥೆಗಳ ಪರವಾಗಿ ಲಾಬಿ ಮಾಡುವ ಮಧ್ಯವರ್ತಿಯೊಬ್ಬರು.

ಹಾಗೆ ನೋಡಿದರೆ ರಾಷ್ಟ್ರ ರಾಜಧಾನಿಯಲ್ಲಿ ಗಡ್ಕರಿಯವರ ಪ್ರಾಮುಖ್ಯತೆ ಅಷ್ಟಾಗಿ ಗೋಚರಿಸುವುದಿಲ್ಲ. ಅಲ್ಲಿ ಅವರೊಬ್ಬ ಬಜೆಪಿ ಮತ್ತು ಆರ್‌ಎಸ್‌ಎಸ್‌ ನಡುವಿನ ಸೇತುವೆಯಾಗಿಯಷ್ಟೇ ಕಾಣಿಸಿಕೊಳ್ಳುತ್ತಾರೆ.

ಆದರೆ ನಾಗಪುರದಲ್ಲಿ ಹಾಗಲ್ಲ. ಅಲ್ಲಿ ಅವರ ಬಗೆಗಿನ ಅಭಿಪ್ರಾಯಗಳು ಬೇರೆಯೇ ಇವೆ. ಉದ್ಯಮಿಗಳು, ಆರ್‌ಎಸ್‌ಎಸ್‌ ಜತೆ ಸಂಬಂಧ ಹೊಂದಿರುವ ಮಾಜಿ ಅಧಿಕಾರಿಗಳು, ಆರ್‌ಎಸ್‌ಎಸ್‌ ಬಗ್ಗೆ ವರದಿ ಮಾಡುವ ವರದಿಗಾರರು, ಸಂಸ್ಥೆಯ ಪತ್ರಿಕೆಗಳಿಗಾಗಿ ಕೆಲಸ ಮಾಡುವವರು, ಆರ್‌ಎಸ್‌ಎಸ್‌ ಮತ್ತು ಬಿಜೆಪಿಯ ನಾಯಕರು ಎಲ್ಲರೂ ಗಡ್ಕರಿಗೆ ಬಗ್ಗೆ ಗೌರವಯುಕ್ತ ದೊಡ್ಡ ದೊಡ್ಡ ಮಾತುಗಳನ್ನಾಡುತ್ತಾರೆ. ಒಂದೊಮ್ಮೆ ಆರ್‌ಎಸ್‌ಎಸ್‌ ಮೋದಿಯನ್ನು ಬದಲಿಸಬೇಕು ಎಂದು ನಿರ್ಧರಿಸಿದರೆ ಅವರ ಸ್ಥಾನಕ್ಕೆ ಗಡ್ಕರಿಯವರನ್ನು ಆಯ್ಕೆ ಮಾಡುತ್ತದೆ ಎನ್ನುತ್ತಾರೆ ಈ ವ್ಯಕ್ತಿಗಳು.

ನಾಗಪುರದ ಮನುಷ್ಯ ಗಡ್ಕರಿ ಜನಪ್ರಿಯ ರಾಜಕಾರಣಿ ಅಲ್ಲದೇ ಇರಬಹುದು. ಆದರೆ ರಾಜಕೀಯಕ್ಕೆ ಅತ್ಯಗತ್ಯವಾಗಿ ಬೇಕಾದ ಹಲವು ಬಾಣಗಳು ಅವರ ಬತ್ತಳಿಕೆಯಲ್ಲಿವೆ. ತಮ್ಮ ಬ್ರಾಹ್ಮಣ ಜಾತಿಯ ಹಿನ್ನೆಲೆ, ಪಕ್ಷ ನಿಷ್ಠೆ, ಮುಂಬೈನ ಪ್ರಮುಖ ಉದ್ದಿಮೆದಾರರ ಜತೆಗಿನ ಸಂಬಂಧ, ಹಣ ಹೊಂದಿಸುವ ತಾಕತ್ತು, ಪಕ್ಷದಾಚೆಗಿನ ರಾಜಕಾರಣಿಗಳ ನಂಟು, ಮೋದಿಯಂತೆ ‘ಕೋಮುವಾದಿ’ ಎಂದು ಚಿತ್ರಿತವಾಗದೇ ಇರುವುದು ಅವರನ್ನು ಓರ್ವ ಮಾರಾಟಗೊಳ್ಳಬಹುದಾದ ಭವಿಷ್ಯದ ರಾಜಕೀಯ ಸರಕನ್ನಾಗಿಸಿದೆ.

ಜತೆಗೆ ಅವರು ಅಧಿಕಾರದಲ್ಲಿದ್ದಾಗ ಉತ್ತಮ ಆಡಳಿತಗಾರರು ಎಂಬ ಹೆಸರನ್ನೂ ಸಂಪಾದಿಸಿದ್ದಾರೆ. ಹಲವರು ಅವರನ್ನು ಮಹಾರಾಷ್ಟ್ರ ಖ್ಯಾತ ರಾಜಕೀಯ ನಾಯಕರಾದ ಪ್ರಮೋದ್‌ ಮಹಾಜನ್‌, ಶರದ್‌ ಪವಾರ್‌ ಮತ್ತು ಪ್ರಫುಲ್ಲ ಪಟೇಲ್‌ ಜತೆ ಹೋಲಿಸುತ್ತಾರೆ. ಈ ಮೂವರೂ ನಾಯಕರು ತಮ್ಮ ಪಕ್ಷದಾಚೆಗೆ ಹೊಂದಿರುವ ಉತ್ತಮ ಬಾಂಧವ್ಯಕ್ಕೆ ಹೆಸರುವಾಸಿಯಾಗಿರುವವರು. ಜತೆಗೆ ದೊಡ್ಡ ದೊಡ್ಡ ಕಂಪನಿಗಳ ಜತೆ ಉತ್ತಮ ಸಂಬಂಧವಿಟ್ಟುಕೊಂಡವರು. ಈ ಮೂಲಕ ಪಕ್ಷದ ಪಾಲಿಗೆ ನಿಧಿಯಾಗಿದ್ದವರು. ಅಂತಹ ಸಾಲಿನಲ್ಲಿ ಬಿಜೆಪಿಗೆ ಸಿಕ್ಕರುವ ನಾಯಕ ಗಡ್ಕರಿ.

ಈ ಗಡ್ಕರಿ ಹೆಸರು 2019ರ ಲೋಕಸಭೆ ಚುನಾವಣೆಗೂ ಮುನ್ನ ಚಾಲ್ತಿಗೆ ಬರಲು ಒಂದು ಕಾರಣವಿದೆ. ಮೋದಿ ತಮ್ಮ ಜೀವಮಾನದುದ್ದಕ್ಕೂ ವೈರಿಯ ಹುಟ್ಟನ್ನು ಇಷ್ಟ ಪಟ್ಟರಲ್ಲ. ಹಾಗಿದ್ದೂ ಅವರಿಗೊಬ್ಬ ಪ್ರತಿಸ್ಪರ್ಧಿಯಾಗಿ ಗಡ್ಕರಿ ಬೆಳೆದು ಬಂದಿದ್ದಾರೆ. ಇದೇ ವಿಚಾರದಲ್ಲಿ ಮೋದಿ ಮತ್ತು ಆರ್‌ಎಸ್‌ಎಸ್‌ ನಡುವೆ ವೈರತ್ವ ಹುಟ್ಟಿಕೊಂಡಿದೆ ಎನ್ನುತ್ತಾರೆ ಗಡ್ಕರಿಯನ್ನು ಬಾಲ್ಯದಿಂದ ಬಲ್ಲ ಸುಜಾತಾ ಆನಂದನ್‌. ಇದೀಗ ಮೋದಿ ಜನಪ್ರಿಯತೆ ಕುಸಿಯಲು ಆರಂಭವಾಗುತ್ತಿದ್ದಂತೆ ಪಕ್ಷದಲ್ಲಿರುವ ಮೋದಿ ಮತ್ತು ಆರ್‌ಎಸ್‌ಎಸ್‌ ಬಣಗಳು ಸಂಘರ್ಷಕ್ಕಿಳಿದಿವೆ. ಇದರಲ್ಲಿ ಆರ್‌ಎಸ್‌ಎಸ್‌ ಬಣವನ್ನು ಮೋದಿ ವಿರುದ್ಧ ಎತ್ತಿಕಟ್ಟುತ್ತಾ, ಜೀವಂತವಿಟ್ಟವರು ಇದೇ ನಿತಿನ್‌ ಗಡ್ಕರಿ.

ಕೇವಲ ನಾಲ್ಕೂವರೆ ವರ್ಷಗಳ ಹಿಂದೆ ಬಿಜೆಪಿ ಹಿರಿಯ ನಾಯಕರನ್ನು ಪಕ್ಕಕ್ಕೆ ತಳ್ಳಿ ಅಧಿಕಾರದ ಗದ್ದುಗೆ ಏರಿದ್ದ ಮೋದಿ ಇವತ್ತಿಗೆ ಪ್ರಶ್ನಾತೀತ ನಾಯಕರಾಗಿ ಬಿಜೆಪಿಯಲ್ಲಿಯೇ ಉಳಿದಿಲ್ಲ. ಅವರ ಸ್ಥಾನಕ್ಕೆ ಈಗ ನಿತಿನ್ ಗಡ್ಕರಿ ಹೆಸರು ಕೇಳಿ ಬರುತ್ತಿದೆ. ಈ ಸಮಯದಲ್ಲಿ ನಿಜಕ್ಕೂ ಗಡ್ಕರಿ ಯಾರು? ಅವರ ಹಿನ್ನೆಲೆ ಏನು? ಗಡ್ಕರಿ ರಾಜಕೀಯ ಬೆಳವಣಿಗೆ ಹಾದಿಯಲ್ಲಿನ ಕುತೂಹಲಕಾರಿ ಹಾಗೂ ಅಗತ್ಯ ಮಾಹಿತಿಯನ್ನು ಸರಣಿಯ ಮುಂದಿನ ಲೇಖನಗಳು ನಿಮ್ಮ ಮುಂದಿಡಲಿವೆ.

ಗಮನಕ್ಕೆ: ಸಮಾಚಾರದ ವಿಶೇಷ ಸರಣಿ ಲೇಖನಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.