samachara
www.samachara.com
ಸೈನ್ಯದಲ್ಲಿ ಹನಿಟ್ರ್ಯಾಪ್: ರಾಜೀವ್‌ಗಾಂಧಿ ಹತ್ಯೆಯಿಂದ ಸೋಮವೀರ್‌ಸಿಂಗ್ ಬಂಧನದವರೆಗೆ
COVER STORY

ಸೈನ್ಯದಲ್ಲಿ ಹನಿಟ್ರ್ಯಾಪ್: ರಾಜೀವ್‌ಗಾಂಧಿ ಹತ್ಯೆಯಿಂದ ಸೋಮವೀರ್‌ಸಿಂಗ್ ಬಂಧನದವರೆಗೆ

ಯೋಧರನ್ನು ಸೆಕ್ಸ್ ಸಂಬಂಧಿ ವಿಚಾರಗಳ ಲೋಭೆಗೆ ಒಳಗಾಗುವಂತೆ ಮಾಡುವುದು ಎದುರಾಳಿಗಳಿಗೆ ತೀರಾ ಸುಲಭದ ಕೆಲಸ. ಹೀಗಾಗಿ ಸೈನ್ಯದಲ್ಲಿ ಹನಿಟ್ರ್ಯಾಪ್ ಅನ್ನು ಬುಡ ಸಮೇತ ಕೀಳುವುದು ಸುಲಭದ ಮಾತಲ್ಲ.

ರಾಜಸ್ತಾನದ ಜೈಸಲ್ಮೇರ್ ಸಶಸ್ತ್ರ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ಯೋಧ ರೋಹಟಕ್ ನಿವಾಸಿ ಸೋಮವೀರ್ ಸಿಂಗ್ ಎಂಬಾತ ಪಾಕಿಸ್ತಾನ ಬೀಸಿದ ಹನಿಟ್ರ್ಯಾಪ್‌ ಎಂಬ ಮೋಹದ ಜಾಲದ ಖೆಡ್ಡಾಕ್ಕೆ ಬಿದ್ದಿದ್ದಾನೆ. ಅಲ್ಲದೆ ಪಾಕಿಸ್ತಾನದ ಬೇಹುಗಾರಿಕಾ ದಳವಾದ ಐಎಸ್‌ಐಗೆ ಭಾರತೀಯ ಸೇನೆಯ ರಹಸ್ಯ ಮಾಹಿತಿಗಳನ್ನು ಹಂಚಿಕೊಂಡಿದ್ದಾನೆ ಎಂಬುದು ಇಂದು ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿದೆ.

ಈತನನ್ನು ವಶಕ್ಕೆ ಪಡೆದಿರುವ ರಾಜಸ್ತಾನ್ ಪೊಲೀಸ್ ಹಾಗೂ ಗುಪ್ತಚರ ಇಲಾಖೆ ಅಧಿಕಾರಿಗಳು ನಾಲ್ಕು ದಿನಗಳಿಂದ ಸತತವಾಗಿ ವಿಚಾರಣೆ ನಡೆಸುತ್ತಿದ್ದಾರೆ. 2016 ರಿಂದ ಚಾಲ್ತಿಯಲ್ಲಿರುವ ‘ಅಂಕಿತಾ ಛೋಪ್ರಾ’ ಎಂಬ ಹೆಸರಿನ ಫೇಸ್‌ಬುಕ್ ಅಕೌಂಟ್‌ನೊಂದಿಗೆ ಆತ ನಿತ್ಯ ಸಂಪರ್ಕದಲ್ಲಿದ್ದಾನೆ. ಇಬ್ಬರ ನಡುವೆ ಸೆಕ್ಸ್ ಸಂಬಂಧಿತ ವಿಷಯಗಳ ಚಾಟಿಂಗ್ ಎಗ್ಗಿಲ್ಲದೆ ನಡೆದಿದೆ. ಈ ಸಂದರ್ಭದಲ್ಲಿ ಆತ ಸೇನೆಯ ಅನೇಕ ರಹಸ್ಯ ಮಾಹಿತಿಗಳನ್ನು ಆಕೆಯ ಜೊತೆಗೆ ಹಂಚಿಕೊಂಡಿದ್ದಾನೆ ಎಂಬ ಆರೋಪವಿದೆ. ಇದಲ್ಲದೆ ಭಾರತೀಯ ಸೇನೆಯ ಸುಮಾರು 50ಕ್ಕೂ ಹೆಚ್ಚು ಸೈನಿಕರು ಹನಿಟ್ರ್ಯಾಪ್‌ಗೆ ಒಳಗಾಗಿರುವ ಸಾಧ್ಯತೆ ಇದೆ ಎಂದು ಭಾರತೀಯ ಗೂಢಚರ್ಯ ಸಂಸ್ಥೆ (RAW-research and analysis service ) ಶಂಕೆ ವ್ಯಕ್ತಪಡಿಸಿದೆ.

ಒಂದು ದೇಶದ ಸೇನೆಯ ರಹಸ್ಯಗಳನ್ನು ನೆರೆಯ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳುವುದು ಯಾವುದೇ ದೇಶದ ಆಂತರಿಕೆ ಭದ್ರತೆಗೆ ಅಪಾಯಕಾರಿ. ಎಲ್ಲಾ ರಾಷ್ಟ್ರಗಳು ನೆರೆಯ ರಾಷ್ಟ್ರಗಳ ಸೇನಾ ರಹಸ್ಯಗಳನ್ನು ಕಲೆಹಾಕಲು ಸಾಕಷ್ಟು ತಂತ್ರಗಳನ್ನು ಬಳಸುತ್ತಿರುತ್ತವೆ. ಅಂತಹ ತಂತ್ರಗಳ ಪೈಕಿ ಹನಿ ಟ್ರ್ಯಾಪ್ (ಮೋಹ ಜಾಲ) ಸಹ ಒಂದು.

ಹಾಗೆ ನೋಡಿದರೆ ಹನಿಟ್ರ್ಯಾಪ್ ಎಂಬುದು ಹೊಸತಂತ್ರವಲ್ಲ. ಇದು ತೀರಾ ಹಳೆಯ ಯುದ್ಧ ತಂತ್ರಗಳಲ್ಲೊಂದು. ಮತ್ತು ಭಾರತದಲ್ಲಿ ಹನಿಟ್ರ್ಯಾಪ್‌ಗೆ ಒಳಗಾಗಿರುವ ಯೋಧರ ಪೈಕಿ ಸೋಮವೀರ್ ಸಿಂಗ್ ಮೊದಲಿಗನೇನಲ್ಲ, ಕೊನೆಯವನೂ ಅಲ್ಲ. ಹಾಗಾದ್ರೆ ಏನಿದು ಸೇನೆಯಲ್ಲಿ ಹನಿಟ್ರ್ಯಾಪ್‌? ಯೋಧರನ್ನು ಹೇಗೆ ಹನಿಟ್ರ್ಯಾಪ್ ಖೆಡ್ಡಾಕ್ಕೆ ಬೀಳಿಸುತ್ತಾರೆ..? ಈವರೆಗೆ ಭಾರತದಲ್ಲಿ ಸದ್ದು ಮಾಡಿದ ಹನಿಟ್ರ್ಯಾಪ್ ಪ್ರಕರಣಗಳ ವಿವರ ಏನು? ಇಲ್ಲಿದೆ ಕಂಪ್ಲೀಟ್‌ ಡೀಟೆಲ್:

ಸೈನ್ಯದಲ್ಲಿ ಹನಿಟ್ರ್ಯಾಪ್: ರಾಜೀವ್‌ಗಾಂಧಿ ಹತ್ಯೆಯಿಂದ ಸೋಮವೀರ್‌ಸಿಂಗ್ ಬಂಧನದವರೆಗೆ

ಸೈನ್ಯದಲ್ಲಿ ಹನಿಟ್ರ್ಯಾಪ್

ಯುದ್ಧ ಎಂಬುದು ವ್ಯಾಪಾರವಾಗಿರುವ ಇಂದಿನ ದಿನಗಳಲ್ಲಿ ಎಲ್ಲಾ ರಾಷ್ಟ್ರಗಳಿಗೂ ನೆರೆ ರಾಷ್ಟ್ರಗಳ ಜೊತೆಗೆ ಒಂದಲ್ಲಾ ಒಂದು ವಿಚಾರಕ್ಕೆ ತಂಟೆ ತಕರಾರುಗಳು ಸಾಮಾನ್ಯ. ಹೀಗಾಗಿ ನೆರೆ ರಾಷ್ಟ್ರಗಳ ಯುದ್ಧ ತಂತ್ರ, ಸೇನೆಯ ರಹಸ್ಯ ಮಾಹಿತಿಗಳನ್ನು ಕಲೆಹಾಕಲು ಎಲ್ಲಾ ದೇಶಗಳ ಗೂಢಚಾರ ಸಂಸ್ಥೆಗಳು ಸಾಕಷ್ಟು ಪ್ರಯತ್ನ ನಡೆಸುತ್ತಿರುತ್ತವೆ. ಹೀಗೆ ನೆರೆ ರಾಷ್ಟ್ರಗಳ ಸೇನಾ ರಹಸ್ಯವನ್ನು ಕದಿಯಲು ಸಾಮಾನ್ಯವಾಗಿ ಬಳಸಲ್ಪಡುವ ಪ್ರಭಾವಿ ತಂತ್ರವೇ ಹನಿಟ್ರ್ಯಾಪ್ ಎಂಬ ಮೋಹದ ಜಾಲ.

ಪ್ರತಿಯೊಂದು ದೇಶಕ್ಕೂ ಅದರದೇಯಾದ ಯುದ್ಧ ತಂತ್ರಗಳಿರುತ್ತವೆ. ಹಾಗೆ ನೋಡಿದರೆ ಹನಿಟ್ರ್ಯಾಪ್ ಸಹ ಅಂತಹ ಒಂದು ಯುದ್ಧ ತಂತ್ರವೇ. ರಕ್ತವಿಲ್ಲದೆ, ಹಿಂಸೆ ಇಲ್ಲದೆ, ಆಯುಧಗಳಿಲ್ಲದೆ ವಿರೋಧಿ ಪಡೆಯ ರಹಸ್ಯ ಮಾಹಿತಿಯನ್ನು ಕಲೆ ಹಾಕುವ ಯುದ್ಧ ತಂತ್ರ ಹನಿ ಟ್ರ್ಯಾಪ್.

ಹೇಗೆ ಕಾರ್ಯನಿರ್ವಹಿಸುತ್ತದೆ ಈ ಹನಿಟ್ರ್ಯಾಪ್?

ಪಾಕಿಸ್ತಾನ ಹಾಗೂ ಚೀನಾ ಬೇಹುಗಾರಿಕಾ ಸಂಸ್ಥೆಗಳು ಭಾರತದಲ್ಲಿ ಸೈನಿಕರನ್ನು ಹನಿಟ್ರ್ಯಾಪ್‌ ಖೆಡ್ಡಾಕ್ಕೆ ಬೀಳಿಸಲು ದೊಡ್ಡ ತಂತ್ರವನ್ನೇ ರೂಪಿಸಿದೆ ಎಂದು ಜ.12 ರಂದು ಭಾರತೀಯ ಬೇಹುಗಾರಿಕಾ ದಳ ನೀಡಿದ ವರದಿ ಇದೀಗ ಸಾರ್ವಜನಿಕವಾಗಿ ದೊಡ್ಡ ಚರ್ಚೆ ಸೃಷ್ಟಿಮಾಡಿದೆ. ಅಷ್ಟಕ್ಕೂ ಇಂದಿನ ದಿನಗಳಲ್ಲಿ ಸೈನಿಕರನ್ನು ಹನಿ ಟ್ರ್ಯಾಪ್‌ ಕೆಡ್ಡಾಕ್ಕೆ ಬೀಳಿಸುವುದು ದೊಡ್ಡ ವಿಷಯವೇನಲ್ಲ.

ಹನಿ ಟ್ರಾಪ್‌ಗೆ ಈಗ ಸಾಮಾಜಿಕ ಜಾಲತಾಣಗಳೇ ಬಹುದೊಡ್ಡ ಆಯುಧವಾಗಿ ಬದಲಾಗಿವೆ. ಸಾಮಾಜಿಕ ಜಾಲತಾಣಗಳ ಮೂಲಕ ಸುಂದರ ಹುಡುಗಿಯರ ಹೆಸರಿನಲ್ಲಿ ಫೇಸ್‌ಬುಕ್ ಪ್ರೊಫೈಲ್‌ಗಳನ್ನು ಕ್ರಿಯೇಟ್ ಮಾಡಲಾಗುತ್ತದೆ. ಈ ಪ್ರೊಫೈಲ್ ಮೂಲಕ ಮೊದಲು ಸೈನಿಕರನ್ನು, ಅಧಿಕಾರಿಗಳನ್ನು ಪರಿಚಯ ಮಾಡಿಕೊಳ್ಳಲಾಗುತ್ತದೆ. ಪರಿಚಯವಾಗಿ ಹುಡುಗಿಯ ಹೆಸರಲ್ಲೇ ಸಲುಗೆಯ ಮಾತುಕತೆಯೂ ನಡೆಯುತ್ತದೆ. ಮಾತುಕತೆ ಸೆಕ್ಸ್ ಸಂಬಂಧಿತ ವಿಚಾರಕ್ಕೆ ತಿರುಗುತ್ತಿದ್ದಂತೆ ಗೂಢಚಾರಿಗಳ ಮೊದಲ ತಂತ್ರ ಫಲ ನೀಡಿದಂತೆ.

ಸೈನಿಕರ ಮೇಲೆ ಮೋಹದ ಜಾಲ ಬೀಸುವ ಗೂಢಚಾರಿಗಳು ಮಾತನಾಡುತ್ತಾ, ಮಾತನಾಡುತ್ತಾ ಸೈನಿಕರು ಇರುವ ಸ್ಥಳದ ಪೋಟೋ ಸೇರಿದಂತೆ ಅನೇಕ ಮಾಹಿತಿಗಳನ್ನು ಕೇಳುತ್ತಾರೆ. ಸೈನಿಕರು ತಾವು ಮಾತನಾಡುತ್ತಿರುವುದು ಹುಡುಗಿಯ ಜೊತೆ ಎಂದು ನಂಬಿ ತಮ್ಮ ಸೇನಾ ಶಿಬಿರದ ಪೋಟೋ ಕಳುಹಿಸದರೆ ಸಾಕು ಎದುರಾಳಿ ಪಡೆ ದಾಳಿ ಮಾಡಲು ಸಜ್ಜಾಗಿ ಬಿಡುತ್ತದೆ.

ಇದೀಗ ಭಾರತೀಯ ಗೂಢಾಚಾರ ಸಂಸ್ಥೆ ನೀಡಿರುವ ವರದಿಯಂತೆ ಪಾಕಿಸ್ತಾನ ಹಾಗೂ ಚೀನಾ ಇದೇ ರೀತಿ ಸಾಮಾಜಿಕ ಜಾಲತಾಣಗಳ ಮೂಲಕ ಭಾರತದ ಸುಮಾರು 50 ಕ್ಕೂ ಹೆಚ್ಚು ಯೋಧರನ್ನು ಖೆಡ್ಡಾಕ್ಕೆ ಬೀಳಿಸಿವೆ. ಮೋಹದ ಜಾಲದ ಪರಿಣಾಮ ದೇಶದ ರಕ್ಷಣಾ ವ್ಯವಸ್ಥೆಯ ರಹಸ್ಯ ಮಾಹಿತಿಗಳನ್ನು ಸೈನಿಕರು ಹಂಚಿಕೊಂಡಿದ್ದಾರೆ ಎಂದು ವರದಿ ನೀಡಿದೆ. ಬೇಹುಗಾರಿಕೆ ಸಂಸ್ಥೆ ನೀಡಿರುವ ಈ ವರದಿ ದೇಶದ ಭದ್ರತೆಗೆ ಆತಂಕವನ್ನು ತಂದೊಡ್ಡಿರುವುದು ಸುಳ್ಳಲ್ಲ.

ಕಠಿಣ ಕಾನೂನುಗಳ ನಡುವೆಯೂ ತಪ್ಪಾಗಿದ್ದೆಲ್ಲಿ?

ಅಸಲಿಗೆ ಭಾರತೀಯ ಸೈನ್ಯದಲ್ಲಿ ಕಠಿಣ ಕಾನೂನುಗಳಿವೆ. ಸೈನಿಕರು ಯಾವುದೇ ಕಾರಣಕ್ಕೂ ತಮ್ಮ ಸಮವಸ್ತ್ರದೊಂದಿಗೆ ಹಾಗೂ ತಾವು ಕಾರ್ಯನಿರ್ವಹಿಸುವ ಸ್ಥಳದ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವಂತಿಲ್ಲ ಎಂಬ ನಿಯಮವಿದೆ. ಸೈನಿಕರ ಕುಟುಂಬ ಸದಸ್ಯರಿಗೂ ಹಲವು ಸೇನಾ ಕಾನೂನುಗಳು ಅನ್ವಯಿಸುತ್ತದೆ. ಅಲ್ಲದೆ ಸೈನ್ಯದಲ್ಲಿ ಪೋರ್ನ್‌ ವೆಬ್‌ಸೈಟ್ ನೋಡುವಂತಿಲ್ಲ. ಪೋರ್ನ್ ವೆಬ್‌ಸೈಟ್‌ ಮೂಲಕವೂ ವಿದೇಶಿ ಗೂಢಾಚಾರಿಗಳು ಸೈನಿಕರನ್ನು ಸಂಪರ್ಕಿಸಿ, ಲೈಂಗಿಕ ಆಸೆ ತೋರಿಸಿ ಖೆಡ್ಡಾಕ್ಕೆ ಬೀಳಿಸುವ ಸಾಧ್ಯತೆ ಇದೆ. ಹೀಗಾಗಿ ಸೈನ್ಯದಲ್ಲಿ ಪೋರ್ನ್ ವೆಬ್‌ಸೈಟ್ ವೀಕ್ಷಿಸುವುದು ಶಿಕ್ಷಾರ್ಹ ಅಪರಾಧ.

ಅಲ್ಲದೆ ಸೈನ್ಯ ಪ್ರತಿಯೊಬ್ಬ ಯೋಧರ ಚಲನವಲನಗಳ ಮೇಲೆ, ಅವರು ಬಳಸುವ ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಗಾವಲು ಇಟ್ಟಿರುತ್ತದೆ. ಆದರೂ ಸೈನ್ಯದ, ಬೇಹುಗಾರಿಕಾ ದಳದ ಕಣ್ತಪ್ಪಿಸಿ ಯೋಧರು ಹೇಗೆ ಹನಿಟ್ರ್ಯಾಪ್ ಖೆಡ್ಡಾಕ್ಕೆ ಬಿದ್ದರು ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.

ಸೈನ್ಯದಲ್ಲಿ ಹನಿಟ್ರ್ಯಾಪ್: ರಾಜೀವ್‌ಗಾಂಧಿ ಹತ್ಯೆಯಿಂದ ಸೋಮವೀರ್‌ಸಿಂಗ್ ಬಂಧನದವರೆಗೆ

ಭಾರತೀಯ ಸೈನ್ಯದಲ್ಲಿ ಹನಿ ಟ್ರ್ಯಾಪ್ ಇತಿಹಾಸ:

1. ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಹನಿಟ್ರ್ಯಾಪ್ ದೊಡ್ಡ ಮಟ್ಟದ ಸದ್ದು ಮಾಡಿದ್ದು ರಾಜೀವ್ ಗಾಂಧಿ ಹತ್ಯೆ ಸಂದರ್ಭದಲ್ಲಿ. 90ರ ದಶಕದಲ್ಲಿ ಶ್ರೀಲಂಕಾದಲ್ಲಿ ಎಲ್‌ಟಿಟಿಇ ಹಾಗೂ ಲಂಕಾ ಸೈನ್ಯದ ನಡುವೆ ಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ರಾಜೀವ್ ಗಾಂಧಿ ಲಂಕಾ ಸೈನ್ಯದ ನೆರವಿಗಾಗಿ ಭಾರತದಿಂದ ಶಾಂತಿ ಪಾಲನಾ ಸೈನ್ಯ ಕಳುಹಿಸಿದ್ದರು. ರಾಜೀವ್‌ ಗಾಂಧಿಯ ಈ ಕ್ರಮದಿಂದ ಸಿಟ್ಟಾಗಿದ್ದ ಎಲ್‌ಟಿಟಿಇ ರಾಜೀವ್ ಗಾಂಧಿ ಹತ್ಯೆಗೆ ಸಂಚು ರೂಪಿಸಿತ್ತು.

ಲಂಕಾದಲ್ಲಿ ಎಲ್‌ಟಿಇಇ ವಿರುದ್ಧ ಕಾರ್ಯಾಚರಣೆಗೆ ಇಳಿದಿದ್ದ ಭಾರತೀಯ ಸೈನ್ಯಕ್ಕೆ ಚೆನ್ನೈನಲ್ಲಿ ಗುಪ್ತಚರ ದಳ ಸಂಸ್ಥೆಯಿಂದ ಮಾಹಿತಿ ಹಾಗೂ ನಿರ್ದೇಶನ ರವಾನೆ ಮಾಡಲಾಗುತ್ತಿತ್ತು. ಆಗ ಚೆನ್ನೈ ಗುಪ್ತಚರ ದಳ ಸಂಸ್ಥೆಯ ಮುಖ್ಯಸ್ಥರಾಗಿದ್ದವರು ಕೆ.ವಿ.ಉನ್ನಿಕೃಷ್ಣನ್.

1987ರಲ್ಲಿ ಕೆ.ವಿ.ಉನ್ನಿಕೃಷ್ಣನ್ ಅವರನ್ನು ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಹನಿಟ್ರ್ಯಾಪ್ ಖೆಡ್ಡಾಕ್ಕೆ ಬೀಳಿಸಿತ್ತು. ಗಗನಸಖಿಯ ಜೊತೆಗೆ ಸಲುಗೆ ಬೆಳೆಸಿಕೊಂಡಿದ್ದ ಕೆ.ವಿ.ಉನ್ನಿಕೃಷ್ಣನ್ ಆಕೆಯೊಂದಿಗೆ ತುಂಬಾ ನಿಕಟ ಸಂಪರ್ಕ ಹೊಂದಿದ್ದರು. ಅಮೆರಿಕ ಗೂಢಚಾರ ಸಂಸ್ಥೆ ಆ ಗಗನಸಖಿಯ ಮೂಲಕ ಇವರನ್ನು ಬೆದರಿಸಿ ಭಾರತೀಯ ಸೇನೆಯ ಅನೇಕ ರಹಸ್ಯ ಮಾಹಿತಿಗಳನ್ನು ಪಡೆದಿತ್ತು. ಅಲ್ಲದೆ ಭಾರತದ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಸಂಚಿನ ವಿಷಯ ಕೆ.ವಿ.ಉನ್ನಿಕೃಷ್ಣನ್‌ಗೆ ಮೊದಲೇ ತಿಳಿದಿತ್ತು. ಆದರೂ ಅತ ಬಾಯಿ ಬಿಟ್ಟಿರಲಿಲ್ಲ.

2. 1980ರಲ್ಲಿ ಲಂಡನ್‌ನಲ್ಲಿದ್ದ ಭಾರತೀಯ ಗುಪ್ತಚರ ದಳದ ಫೀಲ್ಡ್ ಆಫೀಸರ್ ಅಶೋಕ್ ಸಾತೆ ವಿದೇಶಿ ಗುಪ್ತಚರ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಲಾಗಿತ್ತು. ಇದೇ ಸಂದರ್ಭದಲ್ಲಿ ಭಾರತದ ಕೌಂಟರ್ ಇಂಟಲಿಜೆನ್ಸ್ ಮುಖ್ಯಸ್ಥರಾಗಿದ್ದ ಮತ್ತೊಬ್ಬ ಹಿರಿಯ ಅಧಿಕಾರಿಯೂ ಹನಿಟ್ರ್ಯಾಪ್‌ಗೆ ಒಳಗಾಗಿದ್ದರು. ಅಮೆರಿಕ ಮೂಲದ ಯುವತಿಯ ಜೊತೆಗೆ ಸಂಬಂಧ ಹೊಂದಿದ್ದ ಅಧಿಕಾರಿ ಆಗಿಂದಾಗ್ಗೆ ಯುವತಿಯನ್ನು ಭೇಟಿಯಾಗುತ್ತಿದ್ದರು. ಇವರ ರಹಸ್ಯ ಭೇಟಿಯ ಚಿತ್ರ ತೆಗೆದಿದ್ದ ಯುವತಿ ಅವರಿಬ್ಬರ ನಡುವಿನ ಮಾತುಕತೆಯನ್ನು ಧ್ವನಿ ಮುದ್ರಿಸಿದ್ದಳು. ಆ ಮೂಲಕ ಅಧಿಕಾರಿಯನ್ನು ಬೆದರಿಸಲಾಯಿತು. ಕೊನೆಗೆ ಪೊಲೀಸ್ ಬಲೆಗೆ ಬಿದ್ದ ಅಧಿಕಾರಿ ವಿಚಾರಣೆ ಸಂದರ್ಭದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

3. ಭಾರತೀಯ ನೌಕಾದಳದ ಅಧಿಕಾರಿ ಕಮಾಂಡರ್ ಸುಖೀಂದರ್ ಸಿಂಗ್ 2005-07ರ ವರೆಗೆ ಎರಡು ವರ್ಷಗಳ ಕಾಲ ರಷ್ಯಾದ ಮಹಿಳೆಯ ಜೊತೆ ನಿಕಟ ಸಂಪರ್ಕದಲ್ಲಿದ್ದರು ಎಂಬ ಕಾರಣಕ್ಕೆ ತನಿಖೆ ಎದುರಿಸಿದ್ದರು. ರಷ್ಯಾಗೆ ತೆರಳಿದ್ದ ಭಾರತೀಯ ನೌಕಾದಳದ ಮುಖ್ಯಸ್ಥರಾಗಿದ್ದ ಸುಖೀಂದರ್ ಸಿಂಗ್ ಅವರನ್ನು ಹನಿಟ್ರ್ಯಾಪ್ ಖೆಡ್ಡಾಕ್ಕೆ ಬೀಳಿಸುವಲ್ಲಿ ರಷ್ಯಾ ಗುಪ್ತಚರ ದಳ ಯಶಸ್ವಿಯಾಗಿತ್ತು.

4. 2008ರಲ್ಲಿ ಭಾರತೀಯ ಗುಪ್ತಚರ ದಳದ ಹಿರಿಯ ಅಧಿಕಾರಿ ಮನಮೋಹನ್ ಶರ್ಮಾ ಅವರನ್ನು ಬೀಜಿಂಗ್‌ನ ಭಾರತೀಯ ರಾಯಭಾರ ಕಚೇರಿಯ ಮುಖ್ಯ ಹುದ್ದೆಗೆ ನೇಮಿಸಲಾಗಿತ್ತು. ಅವರು ಬೀಜಿಂಗ್‌ನಲ್ಲಿ ಜಪಾನಿ ಯುವತಿಯ ಜೊತೆಗೆ ಸಂಬಂಧ ಹೊಂದಿದ್ದ ಆರೋಪಕ್ಕೆ ಗುರಿಯಾಗಿದ್ದರು. ಆಕೆಯನ್ನು ಜಪಾನ್ ದೇಶದ ಗೂಢಚಾರಿಣಿ ಎಂದು ಶಂಕೆ ವ್ಯಕ್ತಪಡಿಸಿದ ಭಾರತ ಸರಕಾರ ಅಧಿಕಾರಿಯನ್ನು ವಾಪಾಸ್ ಭಾರತಕ್ಕೆ ಕರೆಸಿ ತನಿಖೆಗೆ ಒಳಪಡಿಸಿತ್ತು.

5. 1975ರ ಬ್ಯಾಚಿನ್ ಭಾರತೀಯ ಗುಪ್ತಚರ ಸಂಸ್ಥೆ ಅಧಿಕಾರಿ (RAW-research and analysis service ) ರವಿ ನಾಯರ್ ಅವರನ್ನು 2007ರಲ್ಲಿ ಹಾಂಕಾಂಗ್‌ಗೆ ನಿಯೋಜಿಸಲಾಗಿತ್ತು. ಆದರೆ ಅವರು ಹಾಂಕಾಂಗ್‌ನಲ್ಲಿ ಚೈನಾ ಮಹಿಳೆಯೊಬ್ಬರ ಜೊತೆಗೆ ತುಂಬಾ ನಿಕಟವಾಗಿರುವ ಸುದ್ದಿ ಭಾರತಕ್ಕೆ ತಲುಪಿತ್ತು. ತನಿಖೆ ನಡೆಸಿದಾದ ಆಕೆ ಚೀನಾದ ಗುಪ್ತಚರ ದಳಕ್ಕೆ ಸೇರಿದವಳು ಎಂದು ಗೊತ್ತಾಗಿತ್ತು. ರವಿ ನಾಯರ್ ಅವರನ್ನು ಭಾರತಕ್ಕೆ ವಾಪಾಸ್ ಕರೆಸಿ ವಿಚಾರಣೆಗೆ ಒಳಪಡಿಸಲಾಗಿತ್ತು.

6. ರಣಬೀರ್ ಸಿಂಗ್ ಎಂಬ ಮತ್ತೊಬ್ಬ ಬೇಹುಗಾರಿಕಾ ದಳದ ಅಧಿಕಾರಿಯನ್ನು 2004ರಲ್ಲಿ ಅಮೆರಿಕಾಗೆ ನಿಯೋಜಿಸಲಾಗಿತ್ತು. ಆದರೆ ಅಮೆರಿಕಾದ ಹನಿಟ್ರ್ಯಾಪ್‌ ಖೆಡ್ಡಾಕ್ಕೆ ಬಿದ್ದ ಆತ ಭಾರತದ ವಿರುದ್ಧವೇ ಕೆಲಸ ಮಾಡುತ್ತಿದ್ದ ಆರೋಪವಿತ್ತು. ಈ ಕುರಿತು ಅನುಮಾನ ವ್ಯಕ್ತಪಡಿಸಿದ್ದ ಭಾರತೀಯ ಬೇಹುಗಾರಿಕಾ ಸಂಸ್ಥೆ ಆತನ ವಿರುದ್ಧ ತನಿಖೆಗೆ ಆದೇಶಿಸಿತ್ತು. ಆದರೆ ಆತ ನೇಪಾಳದ ಮೂಲಕ ಅಮೆರಿಕಕ್ಕೆ ಪಲಾಯನ ಮಾಡಿದ್ದ. ಈಗಲೂ ಅಲ್ಲೇ ನೆಲೆಸಿದ್ದಾನೆ.

ಈ ಎಲ್ಲಾ ಪ್ರಕರಣಗಳು ಹನಿಟ್ರ್ಯಾಪ್ ವಿಚಾರದಲ್ಲಿ ಬಯಲಾದ ಕೆಲ ಪ್ರಕರಣಗಳಷ್ಟೇ. ಇನ್ನೂ ಬಯಲಾಗಬೇಕಿರುವ ಪ್ರಕರಣಗಳ ಸಂಖ್ಯೆ ದೊಡ್ಡದಿದೆ ಎಂಬ ಅಂದಾಜಿದೆ. ಗಡಿಭಾಗಗಳಲ್ಲಿ ಕಷ್ಟಕರವಾದ ಕೆಲಸಕ್ಕೆ ನಿಯೋಜನೆಯಾಗುವ ಯೋಧರನ್ನು ಸೆಕ್ಸ್ ಸಂಬಂಧಿ ವಿಚಾರಗಳ ಲೋಭೆಗೆ ಒಳಗಾಗುವಂತೆ ಮಾಡುವುದು ಎದುರಾಳಿಗಳಿಗೆ ತೀರಾ ಸುಲಭದ ಕೆಲಸ. ಹೀಗಾಗಿ ಸೈನ್ಯದಲ್ಲಿ ಹನಿಟ್ರ್ಯಾಪ್ ಅನ್ನು ಬುಡ ಸಮೇತ ಕೀಳುವುದು ಸುಲಭದ ಮಾತಲ್ಲ.