samachara
www.samachara.com
ಮಣ್ಣಿಗೆ ಮರಳಿದ ‘ಸಹಜ, ಸುಸ್ಥಿರ ಕೃಷಿಯ ವಿಶ್ವವಿದ್ಯಾಲಯ’ ಎಲ್‌.ನಾರಾಯಣ ರೆಡ್ಡಿ
COVER STORY

ಮಣ್ಣಿಗೆ ಮರಳಿದ ‘ಸಹಜ, ಸುಸ್ಥಿರ ಕೃಷಿಯ ವಿಶ್ವವಿದ್ಯಾಲಯ’ ಎಲ್‌.ನಾರಾಯಣ ರೆಡ್ಡಿ

ನಾರಾಯಣ ರೆಡ್ಡಿ ಕೇವಲ ಸಾವಯವ ಕೃಷಿಯ ಪಾಠ ಮಾಡದೆ ತಾವೂ ಅದರಲ್ಲಿ ಯಶಸ್ವಿಯಾಗಿರುವ ಉದಾಹರಣೆಯನ್ನೇ ಮುಂದಿಟ್ಟುಕೊಂಡು ಅದೆಷ್ಟೋ ರೈತರಿಗೆ ಮಾದರಿಯಾಗಿದ್ದರು.

“ನಾನು ಹೇಳುವುದು ಒಂದು, ಮಾಧ್ಯಮದವರು ಬರೆಯುವುದು ಮತ್ತೊಂದು. ಅದಕ್ಕೇ ನಾನು ಯಾವ ಮಾಧ್ಯಮಗಳಿಗೂ, ಯಾವ ವಿಚಾರಗಳಿಗೂ ಹೇಳಿಕೆ ನೀಡುವುದಿಲ್ಲ...”

ಕರ್ನಾಟಕದಲ್ಲಿ ಕೃಷಿ ಬಿಕ್ಕಟ್ಟಿನ ಬಗ್ಗೆ ಕೆಲ ತಿಂಗಳ ಹಿಂದೆ ‘ಸಮಾಚಾರ’ ವಿಶೇಷ ವರದಿಯೊಂದನ್ನು ಸಿದ್ಧಪಡಿಸುತ್ತಿದ್ದ ಹೊತ್ತಿನಲ್ಲಿ ಎಲ್‌. ನಾರಾಯಣ ರೆಡ್ಡಿ ಅವರ ಅಭಿಪ್ರಾಯಕ್ಕೆಂದು ಕರೆ ಮಾಡಿದ್ದಾಗ ಅವರು ಹೇಳಿದ್ದ ಮಾತುಗಳಿವು. ಮುಖ್ಯವಾಹಿನಿ ಮಾಧ್ಯಮಗಳ ವೈರುಧ್ಯದ ಬಗ್ಗೆ ಅಷ್ಟರ ಮಟ್ಟಿಗೆ ನಿಷ್ಠುರರಾಗಿದ್ದ ನಾರಾಯಣ ರೆಡ್ಡಿ ಇಂದು ಮಣ್ಣಿಗೆ ಮರಳಿದ್ದಾರೆ.

84 ವರ್ಷದ ಸಾವಯವ ಕೃಷಿಕ, ಸಹಜ ಕೃಷಿಕರ ಪಾಲಿನ ವಿಶ್ವವಿದ್ಯಾಲಯ ಎಲ್‌. ನಾರಾಯಣ ರೆಡ್ಡಿ ಸೋಮವಾರ ಬೆಳಗಿನ ಜಾವ ದೊಡ್ಡಬಳ್ಳಾಪುರ ತಾಲ್ಲೂಕಿನ ಸ್ವಗ್ರಾಮ ಮರಳೇನಹಳ್ಳಿಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಫ ಮತ್ತು ಕೆಮ್ಮಿನ ಸಮಸ್ಯೆಯಿಂದ ಬಳಲುತ್ತಿದ್ದ ಅವರು ತಮ್ಮ ಆರೋಗ್ಯ ಸಮಸ್ಯೆಯನ್ನೂ ಮನೆಮದ್ದಿನ ಸಹಜ ವಿಧಾನದಲ್ಲೇ ಪರಿಹರಿಸಿಕೊಳ್ಳುವ ಪ್ರಯತ್ನ ನಡೆಸಿದ್ದರು. ಒಂದು ವಾರದಿಂದ ಹೆಚ್ಚಾಗಿದ್ದ ಕೆಮ್ಮು ಹತೋಟಿಗೆ ಬಾರದ ಕಾರಣ ಸೋಮವಾರ ಬೆಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಬರಲು ಅವರ ಕುಟುಂಬ ಸದಸ್ಯರು ಮುಂದಾಗಿದ್ದರು. ಆದರೆ, ಸೋಮವಾರ ಬೆಳಿಗ್ಗೆ ಹೊತ್ತಿಗೆ ಅವರೇ ಇಲ್ಲವಾಗಿದ್ದಾರೆ.

ತಮ್ಮ ತೋಟವನ್ನು ಸಹಜ ಕೃಷಿಯ ಪ್ರಯೋಗ ಶಾಲೆ ಮಾಡಿಕೊಂಡಿದ್ದ ನಾರಾಯಣ ರೆಡ್ಡಿ, ಮನುಷ್ಯ ಭೂಮಿಯ ಮೇಲೆ ನಡೆಸುತ್ತಿರುವ ದೌರ್ಜನ್ಯಕ್ಕೆ ಪ್ರಾಯಶ್ಚಿತ್ತವಾಗಿ ಸಾಧ್ಯವಾದಷ್ಟೂ ಗಿಡಮರಗಳನ್ನು ಬೆಳೆಸಬೇಕು ಎನ್ನುತ್ತಿದ್ದರು. ಅದೇ ಮಾತಿನಂತೆ ತಮಿಳುನಾಡಿನಲ್ಲಿ ಅವರು ಸರಕಾರದಿಂದ ಜಾಗ ಪಡೆದು ಬರಡು ಭೂಮಿಯಲ್ಲಿ ಕಾಡು ಬೆಳೆಸಿದ್ದರು.

ದೊಡ್ಡಬಳ್ಳಾಪುರ ಮೂಲದ ನಾರಾಯಣ ರೆಡ್ಡಿ ಸಹಜ ಕೃಷಿ ಪ್ರಯೋಗದ ವಿಷಯದಲ್ಲಿ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿದ್ದವರಲ್ಲ. ಭಾರತದ ಸಹಜ ಕೃಷಿ ಸಂಘಟನೆಗಳ ಹಾಗೂ ದಕ್ಷಿಣ ಭಾರತದ ಬಹುತೇಕ ಸಹಜ ಕೃಷಿಕರಿಗೆ ನಾರಾಯಣ ರೆಡ್ಡಿ ಅವರ ನೇರ ಪರಿಚಯವಿತ್ತು. ಫುಕುವೊಕ ಅವರ ‘ಒಂದು ಹುಲ್ಲಿನ ಕ್ರಾಂತಿ’ (ಒನ್ ಸ್ಟ್ರಾ ರೆವಲ್ಯೂಷನ್) ಪುಸ್ತಕದ ಪರಿಚಯದಿಂದ ಸಹಜ ಕೃಷಿ ಆರಂಭಿಸಿದ ನಾರಾಯಣ ರೆಡ್ಡಿ ಅವರ ತೋಟಕ್ಕೆ ಖುದ್ದು ಫುಕುವೊಕ ಬಂದಿದ್ದರು!

ಬೆಂಗಳೂರು ಹೊರವಲಯದ ಸೋರಹುಣಸೆ ಗ್ರಾಮದ ನಾರಾಯಣ ರೆಡ್ಡಿ ಅವರದು ಮೂಲತಃ ರೈತ ಕುಟುಂಬ. ಬಾಲ್ಯದಲ್ಲಿ ಒಮ್ಮೆ ಕುರಿ ಮೇಯಿಸಲು ಹೋಗಿದ್ದ ಬಾಲಕ ನಾರಾಯಣ ರೆಡ್ಡಿ, ರೈಲು ನೋಡುತ್ತಾ ನಿಂತು ಮನೆಗೆ ಕುರಿ ಹೊಡೆದುಕೊಂಡು ಬರುವುದು ತಡವಾದ ಕಾರಣಕ್ಕೆ ಅಪ್ಪನ ಕೋಪ ಎದುರಿಸಬೇಕಾಯಿತು. ಈ ಕಾರಣಕ್ಕೆ ಮನೆ ಬಿಟ್ಟು ಹೊರಟು ಹೋಟೆಲ್‌ನಲ್ಲಿ ಸಪ್ಲೇಯರ್‌ ಆಗಿ, ಕ್ಯಾಷಿಯರ್‌ ಆಗಿ, ಮುಂದೆ ಲಾರಿ ಕ್ಲೀನರ್‌ ಆಗಿ, ಟ್ರಾನ್ಸ್‌ಪೋರ್ಟ್‌ ಕಂಪನಿಯಲ್ಲಿ ಮ್ಯಾನೇಜರ್‌ ಆಗಿ ಕೆಲಸ ಮಾಡಿದ ನಾರಾಯಣ ರೆಡ್ಡಿ ಅವರಿಗೆ ಕೊನೆಗೆ ಸೆಳೆದುಕೊಂಡಿದ್ದು ಮಣ್ಣಿನ ಸಖ್ಯ.

ಸಹಜ ಜೀವನ ನಡೆಸಬೇಕೆಂದರೆ ಮೊದಲು ಹಳ್ಳಿಗಳಿಗೆ ಹಿಂದಿರುಗಿ. ಕೃಷಿ ಗೌರವಯುತ ವೃತ್ತಿ. ಇದರ ಬಗ್ಗೆ ಆಳವಾದ ತಿಳಿವಳಿಕೆ ಪಡೆದು, ಕೃಷಿ ಕಸುಬು ಆರಂಭಿಸಿ.
- ನಾರಾಯಣ ರೆಡ್ಡಿ 2017ರ ಡಿಸೆಂಬರ್‌ನಲ್ಲಿ ‘ಮನೆಯಂಗಳದಲ್ಲಿಮಾತುಕತೆ’ ಕಾರ್ಯಕ್ರಮದಲ್ಲಿ ಹೇಳಿದ್ದ ಮಾತುಗಳು

ಟ್ರಾನ್ಸ್‌ಪೋರ್ಟ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನಾರಾಯಣ ರೆಡ್ಡಿ ಅವರನ್ನು ಅವರ ಊರಿನ ಪರಿಚಿತರೊಬ್ಬರು ಮತ್ತೆ ಊರಿಗೆ ಕರೆದುಕೊಂಡು ಹೋಗದೇ ಇದ್ದಿದ್ದರೆ ನಾರಾಯಣ ರೆಡ್ಡಿ ಎಂಬ ಸಹಜ ಕೃಷಿ ಸಾಧಕ ನಾಡಿಗೆ ಸಿಗುತ್ತಿರಲಿಲ್ಲ. ಊರಿಗೆ ವಾಪಸ್ಸಾದ ನಾರಾಯಣ ರೆಡ್ಡಿ ಅವರಿಗೆ ಅಕ್ಕನ ಮಗಳ ಜೊತೆಗೆ ಮದುವೆಯಾಯಿತು. ಮದುವೆ ನಂತರ ವ್ಯವಸಾಯಕ್ಕೆ ನಿಂತ ನಾರಾಯಣ ರೆಡ್ಡಿ 70ರ ದಶಕದಲ್ಲೇ ಪ್ರಗತಿಪರ ಕೃಷಿಕ ಎಂದು ಹೆಸರು ಮಾಡಿದ್ದರು. 1976ರಲ್ಲಿ ರಾಗಿ ಬೆಳೆಯಲ್ಲಿ ಅಧಿಕ ಇಳುವರಿ ತೆಗೆದ ನಾರಾಯಣ ರೆಡ್ಡಿ ಆರಂಭದಲ್ಲಿ ರಾಸಾಯನಿಕ ಕೃಷಿಯನ್ನೇ ನಂಬಿದ್ದವರು.

1978ರ ಹೊತ್ತಿಗೆ ಜಮೀನು ಮಾರಾಟ ಮಾಡಿ ಬೇರೆ ಯಾವುದಾದರೂ ವ್ಯವಹಾರ ಮಾಡುವ ಮನಸ್ಸು ಮಾಡಿದ್ದರು ನಾರಾಯಣ ರೆಡ್ಡಿ. ಆದರೆ, ಮುಂದಿನ ದಿನಗಳು ಅವರ ನಿರೀಕ್ಷೆಗೂ ಮೀರಿದಂತೆ ಬದಲಾದವು. ನಾರಾಯಣ ರೆಡ್ಡಿ ಅವರ ಬೆಂಗಳೂರಿನ ವೈಟ್‌ಫೀಲ್ಡ್‌ ಜಮೀನಿನ ಬಳಿಯಲ್ಲೇ ಇದ್ದ ಸಾಯಿಬಾಬ ಆಶ್ರಮಕ್ಕೆ ಬಂದಿದ್ದ ಅಮೆರಿಕದ ಆಲ್ಬರ್ಟ ಟ್ರಕ್ಕಾರ್ ಎಂಬ ವಿಜ್ಞಾನಿ ಸಾವಯವ ಕೃಷಿ ಅನುಸರಿಸುವಂತೆ ನಾರಾಯಣ ರೆಡ್ಡಿ ಅವರಿಗೆ ಸಲಹೆ ನೀಡಿದ್ದರು. ಅಲ್ಲದೆ, ಫುಕುವೊಕ ಅವರ ‘ಒನ್ ಸ್ಟ್ರಾ ರೆವಲ್ಯೂಷನ್‌' ಪುಸ್ತಕವನ್ನೂ ಕೊಟ್ಟಿದ್ದರು . ಟ್ರಕ್ಕಾರ್‌ ಅವರ ಪ್ರವೇಶದಿಂದ ನಾರಾಯಣ ರೆಡ್ಡಿ ಅವರ ಕೃಷಿ ಮಾರ್ಗವೇ ಬದಲಾಯಿತು.

ಸಾವಯವ ಕೃಷಿಯಲ್ಲಿ ಕೃಷಿ ಮಾಡುತ್ತಾ, ಕೃಷಿಯಲ್ಲೇ ನಾನಾ ಪ್ರಯೋಗಗಳನ್ನು ಮಾಡುತ್ತಾ ತಮ್ಮ ತೋಟವನ್ನೇ ಪ್ರಯೋಗ ಶಾಲೆ ಮಾಡಿಕೊಂಡರು ನಾರಾಯಣ ರೆಡ್ಡಿ. ಸರಕಾರ ಒಂದು ಕಡೆಗೆ ದೇಶದ ರೈತರ ತಲೆಗೆ ರಸಾಯನಿಕ ಕೃಷಿಯ ಹಸಿರು ಕ್ರಾಂತಿಯ ಭ್ರಮೆಯನ್ನು ತುಂಬುತ್ತಿದ್ದರೆ, ನಾರಾಯಣ ರೆಡ್ಡಿ ರಸಾಯನಿಕ ಕೃಷಿಯ ವಿರುದ್ಧವಾಗಿ ನಿಂತರು. ಭಾರತದಲ್ಲಿ ರಸಾಯನಿಕ ಕೃಷಿಯ ವಿರುದ್ಧವಾಗಿ ನಿಂತು ಸಾವಯವ ಕೃಷಿಯಲ್ಲಿ ಯಶಸ್ಸು ಸಾಧಿಸಿ ತೋರಿಸಿದ ಕೆಲವೇ ಕೆಲವು ಕೃಷಿಕರಲ್ಲಿ ನಾರಾಯಣ ರೆಡ್ಡಿ ಪ್ರಮುಖರು.

ಆರಂಭದಲ್ಲಿ ರಸಾಯನಿಕ ಕೃಷಿ ಮಾಡಿ ಹೆಚ್ಚು ಇಳುವರಿ ಪಡೆದು ಪ್ರಗತಿಪರ ಕೃಷಿಕ ಎನಿಸಿಕೊಂಡಿದ್ದ ನಾರಾಯಣ ರೆಡ್ಡಿ ಮುಂದೆ ರಸಾಯನಿಕ ಕೃಷಿಯ ವಿರುದ್ಧವಾಗಿ ನಿಂತು ರೈತರಲ್ಲಿ ಸಾವಯವ ಹಾಗೂ ಸುಸ್ಥಿರ ಕೃಷಿಯ ಮಹತ್ವ ಸಾರುತ್ತಾ ಹೋದರು. ಕೇವಲ ಸಾವಯವ ಕೃಷಿಯ ಪಾಠ ಮಾಡದೆ ತಾವೂ ಅದರಲ್ಲಿ ಯಶಸ್ವಿಯಾಗಿರುವ ಉದಾಹರಣೆಯನ್ನೇ ಮುಂದಿಟ್ಟುಕೊಂಡು ಅದೆಷ್ಟೋ ರೈತರಿಗೆ ಮಾದರಿಯಾದರು. ಕರ್ನಾಟಕ ಹಾಗೂ ದಕ್ಷಿಣ ಭಾರತದಲ್ಲಿ ಸಾವಯವ ಕೃಷಿಗೆ ಬುನಾದಿ ಹಾಕಿಕೊಟ್ಟ ಸಹಜ ಕೃಷಿಯ ನೇತಾರ ನಾರಾಯಣ ರೆಡ್ಡಿ.

ಸಹಜ ಹಾಗೂ ಸಾವಯವ ಕೃಷಿಯನ್ನು ಯಶಸ್ವಿಯಾಗಿ ನಡೆಸಬಹುದು ಎಂಬುದನ್ನು ಖುದ್ದು ತಾವೇ ಕಾರ್ಯರೂಪಕ್ಕೆ ತಂದು ತೋರಿಸಿದ್ದವರು ನಾರಾಯಣ ರೆಡ್ಡಿ. ಅವರ ಅಪಾರ ಕೃಷಿ ಜ್ಞಾನವನ್ನು ರೈತರಿಗೆ ತಲುಪಿಸುವ ಸರಿಯಾದ ಕೆಲಸವನ್ನು ಸರಕಾರ, ಕೃಷಿ ವಿಶ್ವವಿದ್ಯಾಲಯಗಳು, ಕೃಷಿವಿಜ್ಞಾನಿಗಳು ಮಾಡಲಿಲ್ಲ.
- ಆನಂದತೀರ್ಥ ಪ್ಯಾಟಿ, ಸಹಜ ಕೃಷಿಕ, ಕೃಷಿ ಪತ್ರಕರ್ತ

ಕಡಿಮೆ ನೀರಿನಲ್ಲಿ ಭತ್ತ ಬೆಳೆಯುವ ಶ್ರೀ (SRI – System of Rice Intensification) ಪದ್ಧತಿಯನ್ನು ಪ್ರಾಯೋಗಿಕವಾಗಿ ಜಾರಿಗೆ ತಂದು ಅದನ್ನು ಯಶಸ್ವಿಗೊಳಿಸಿದವರು ನಾರಾಯಣ ರೆಡ್ಡಿ. ಮುಂದೆ ಇದೇ ಕೃಷಿ ಪದ್ಧತಿಯನ್ನು ಕೃಷಿ ವಿಜ್ಞಾನಿಗಳು 'ಏರೋಬಿಕ್‌ ಪದ್ಧತಿ' ಹೆಸರಿನಲ್ಲಿ ಪರಿಚಯಿಸಿ ಅದು ತಮ್ಮ ಸಂಶೋಧನೆ ಎಂದು ಹೇಳಿಕೊಂಡರು! ಆಗಲೂ, “ಹೆಸರು ಯಾರದ್ದಾದರೇನು, ಕೃಷಿ ಜ್ಞಾನ ರೈತರಿಗೆ ತಲುಪಿದರೆ ಆಯಿತು” ಎಂಬ ಉದಾರತೆ ತೋರಿದ್ದರು ನಾರಾಯಣ ರೆಡ್ಡಿ.

ಕೃಷಿ ವಿಶ್ವವಿದ್ಯಾಲಯಗಳು ಹೇಳುವ ಕೃಷಿ ಜ್ಞಾನಕ್ಕಿಂತ ರೈತರು ಪ್ರಯೋಗದ ಮೂಲಕ ಅರಿತುಕೊಳ್ಳುವ ಕೃಷಿ ಜ್ಞಾನ ಮಹತ್ವದ್ದು ಎಂದು ಹೇಳುತ್ತಿದ್ದ ನಾರಾಯಣ ರೆಡ್ಡಿ ಕೊನೆಯವರೆಗೂ ತಾವು ಅಂತಹ ಪ್ರಯೋಗಗಳನ್ನು ನಡೆಸುತ್ತಲೇ ಬಂದವರು. ರಸಾಯನಿಕ ಕೃಷಿ ಪದ್ಧತಿಯಿಂದ ಮಣ್ಣಿನ ಫಲವತ್ತತೆ ನಾಶವಾಗುತ್ತದೆ ಎಂದು ಹೇಳುತ್ತಿದ್ದ ಅವರು, ಸಾವಯವ, ಸಹಜ ಕೃಷಿ ಪದ್ಧತಿ ಹಾಗೂ ದೇಸೀ ತಳಿಯ ಬೀಜಗಳಿಂದಲೂ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ ಎಂಬುದನ್ನು ಮಾಡಿತೋರಿಸಿದ್ದರು.

ರಾಸಾಯನಿಕ ಗೊಬ್ಬರ, ಔಷಧ ಕಂಪನಿ, ಬೀಜ ಕಂಪನಿಗಳ ಲಾಬಿಗೆ ಮಣಿಯುವ ಸರಕಾರಗಳು ಹಾಗೂ ಕೃಷಿ ವಿಶ್ವವಿದ್ಯಾಲಯಗಳು ನಾರಾಯಣ ರೆಡ್ಡಿ ಅವರ ಕೃಷಿ ಜ್ಞಾನವನ್ನು ರೈತರಿಗೆ ತಲುಪಿಸುವ ಗಂಭೀರ ಪ್ರಯತ್ನವನ್ನು ಮಾಡಲಿಲ್ಲ ಎಂಬುದು ವಿಪರ್ಯಾಸ. ಸಹಜ ಹಾಗೂ ಸಾವಯವ ಕೃಷಿಯ ವಿಶ್ವವಿದ್ಯಾಲಯದಂತಿದ್ದ ಅವರಿಗೆ ರೈತರು ನೀಡಿದ ಗೌರವದ ಮುಂದೆ ಸರಕಾರ ನೀಡಿದ ರಾಜ್ಯೋತ್ಸವ, ನಾಡೋಜ ಪ್ರಶಸ್ತಿ, ಬಿರುದುಗಳ ಕಿಮ್ಮತ್ತು ಕಡಿಮೆಯೇ.