samachara
www.samachara.com
‘ಭಿಕ್ಷಾ ಪಾತ್ರೆ ಹಿಡಿದಿದ್ದ ದೇಶ’ದ ಸಾಲ 37.5 ಲಕ್ಷ ಕೋಟಿ & ಸೂಲಿಬೆಲೆ ಹೇಳಿದ ಸುಳ್ಳು!
COVER STORY

‘ಭಿಕ್ಷಾ ಪಾತ್ರೆ ಹಿಡಿದಿದ್ದ ದೇಶ’ದ ಸಾಲ 37.5 ಲಕ್ಷ ಕೋಟಿ & ಸೂಲಿಬೆಲೆ ಹೇಳಿದ ಸುಳ್ಳು!

ಕಾಂಗ್ರೆಸ್‌ ಮಾಡಿದ್ದ ಸಾಲವನ್ನೂ ಮೋದಿ ತೀರಿಸಿಲ್ಲ. ಬದಲಿಗೆ ಮತ್ತಷ್ಟು ವಿದೇಶಿ ಸಾಲಗಳ ಪ್ರಮಾಣ ಹೆಚ್ಚಾಗಿದೆ. ಇದನ್ನು ಸ್ವತಃ ಆರ್‌ಬಿಐ ಬಿಡುಗಡೆ ಮಾಡಿದ ಅಂಕಿ ಅಂಶಗಳು ಹೇಳುತ್ತಿವೆ.

2019ರ ಲೋಕಸಭೆ ಚುನಾವಣೆಗೆ ಇನ್ನಿರುವುದು ನಾಲ್ಕೇ ತಿಂಗಳು. ಪರಿಣಾಮ ರಾಜಕೀಯ ಪ್ರಚಾರಗಳ ಭರಾಟೆ ಜೋರಾಗಿದೆ. ಅರ್ಧ ಸತ್ಯಗಳು, ಸುಳ್ಳುಗಳನ್ನು ಬೆರೆಸಿದ ಭಾಷಣಗಳು ಎಲ್ಲೆಂದರಲ್ಲಿ ಕಾಣಸಿಗುತ್ತವೆ. ಅವುಗಳಲ್ಲೊಂದು ನರೇಂದ್ರ ಮೋದಿ ಪ್ರಧಾನಿಯಾದ ನಂತರ ಈ ಹಿಂದೆ ಕಾಂಗ್ರೆಸ್‌ ಮಾಡಿದ ಸಾಲವನ್ನು ತೀರಿಸಿದ್ದಾರೆ ಎನ್ನುವುದು. ಈ ಮಾತನ್ನು ದೇಶದ ದೊಡ್ಡ ಸಮುದಾಯ ನಂಬಿಕೊಂಡಿದ್ದಾರೆ ಕೂಡ. ಆದರೆ ವಾಸ್ತವ ಬೇರೆಯದೇ ಇದೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ದಿನಗಳ ಹಿಂದೆ ಫೇಸ್‌ಬುಕ್‌ ಪೋಸ್ಟ್‌ ಹಾಕಿದ್ದ ನರೇಂದ್ರ ಮೋದಿ ಅಭಿಮಾನಿ ಬಳಗದ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ, “ಭಿಕ್ಷೆ ಬೇಡುವ ರಾಷ್ಟ್ರವಾಗಿದ್ದ ಭಾರತ ಮೋದಿಯವರ ಅಧಿಕಾರಾವಧಿಯಲ್ಲಿ ಸವಾಲನ್ನು ಸಮರ್ಥವಾಗಿ ಎದುರಿಸುವ ರಾಷ್ಟ್ರವಾಗಿ ಬೆಳೆದು ನಿಂತಿದೆ,” ಎಂದು ಹೇಳಿದ್ದರು. ಅವರ ಈ ಪೋಸ್ಟ್‌ಗೆ ಕಡು ಟೀಕೆಗಳು ವ್ಯಕ್ತವಾಗಿವೆ. ಭಾರತವನ್ನು ಭಿಕ್ಷೆ ಬೇಡುವ ದೇಶ ಎಂದು ಕರೆದಿದ್ದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಆದರೆ ಈ ಆಕ್ರೋಶಗಳು ಒತ್ತಟ್ಟಿಗಿರಲಿ; ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಸಾಲದ ವಿಚಾರದಲ್ಲಿ ಈ ದೇಶ ಸಮರ್ಥವಾಗಿದೆಯೇ? ಎಂಬುದನ್ನು ನೋಡಿದರೆ ಅಚ್ಚರಿಯ ಅಂಶಗಳು ಕಣ್ಣಿಗೆ ಬೀಳುತ್ತವೆ. ಕಾಂಗ್ರೆಸ್‌ ಮಾಡಿದ್ದ ಸಾಲವನ್ನೂ ಮೋದಿ ತೀರಿಸಿಲ್ಲ. ಬದಲಿಗೆ ಮತ್ತಷ್ಟು ವಿದೇಶಿ ಸಾಲಗಳ ಪ್ರಮಾಣ ಹೆಚ್ಚಾಗಿದೆ. ಇದನ್ನು ಸ್ವತಃ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) ಬಿಡುಗಡೆ ಮಾಡಿದ ಅಂಕಿ ಅಂಶಗಳು ಹೇಳುತ್ತಿವೆ.

2018ರ ಮಾರ್ಚ್‌ ಅಂತ್ಯಕ್ಕೆ ಭಾರತದ ವಿದೇಶಿ ಸಾಲದ ಸ್ಥಿತಿಗತಿಗಳನ್ನು ಆರ್‌ಬಿಐ ಪಟ್ಟಿ ಮಾಡಿದ್ದು, ಅದರಲ್ಲಿ ಸಾಲದ ಪ್ರಮಾಣ ಏರಿಕೆಯಾಗಿರುವುದು ದಾಖಲಾಗಿದೆ. 2014ರಲ್ಲಿ ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿ ಚುಕ್ಕಾಣಿ ಹಿಡಿದ ದಿನ ದೇಶ 31.60 (446.2 ಬಿಲಿಯನ್‌ ಡಾಲರ್‌)ಲಕ್ಷ ಕೋಟಿ ರೂಪಾಯಿ ಸಾಲದಲ್ಲಿತ್ತು. ಕಳೆದ ನಾಲ್ಕು ವರ್ಷಗಳಲ್ಲಿ ಇವುಗಳನ್ನು ಕಟ್ಟುವುದರ ಬದಲಿಗೆ ಮತ್ತಷ್ಟು ಸಾಲವನ್ನು ತಂದಿದ್ದಾರೆ ಮೋದಿ. ಪರಿಣಾಮ ದೇಶದ ವಿದೇಶಿ ಸಾಲದ ಹೊರೆ ಮತ್ತಷ್ಟು ದೊಡ್ಡದಾಗಿದೆ. 2018ರ ಮಾರ್ಚ್‌ ಅಂತ್ಯಕ್ಕೆ ಭಾರತದ ಮೇಲಿರುವ ಸಾಲದ ಪ್ರಮಾಣ 37.50 (529.7 ಬಿಲಿಯನ್‌ ಡಾಲರ್‌) ಲಕ್ಷ ಕೋಟಿ ರೂಪಾಯಿ.

ಮೂಲ: ಆರ್‌ಬಿಐ
ಮೂಲ: ಆರ್‌ಬಿಐ

1947ರಿಂದ 2014ರವರೆಗೆ 67 ವರ್ಷಗಳಲ್ಲಿ ಭಾರತ 31.60 ಲಕ್ಷ ಕೋಟಿ ರೂಪಾಯಿ ವಿದೇಶಿ ಸಾಲಗಳನ್ನು ಪಡೆದುಕೊಂಡಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಮತ್ತೆ 5.90 ಲಕ್ಷ ಕೋಟಿ ರೂಪಾಯಿ ಸಾಲವನ್ನು ಪಡೆದುಕೊಳ್ಳಲಾಗಿದೆ. ಅದರಲ್ಲೂ 2017ರ ಮಾರ್ಚ್‌ನಿಂದ 2018ರ ಮಾರ್ಚ್‌ ನಡುವಿನ ಕೇವಲ ಒಂದು ವರ್ಷದ ಅವಧಿಯಲ್ಲಿ 4.13 ಲಕ್ಷ ಕೋಟಿ ರೂಪಾಯಿ ಸಾಲ ಪಡೆದುಕೊಳ್ಳಲಾಗಿದೆ. ಇದು ಪ್ರಾಥಮಿಕ ಲೆಕ್ಕವಾಗಿದ್ದು ಇದು ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ಸದ್ಯದ ಲೆಕ್ಕಾಚಾರದ ಪ್ರಕಾರ ಭಾರತದ ಜಿಡಿಪಿಯ ಶೇಕಡಾ 20.5ರಷ್ಟು ವಿದೇಶಿ ಸಾಲವೇ ಭಾರತದ ಖಾಲೆಯಲ್ಲಿದೆ. ಸಾಲಕ್ಕೆ ಹೋಲಿಕೆ ಮಾಡಿದರೆ ಭಾರತದ ವಿದೇಶಿ ವಿನಿಮಯ ಮೀಸಲು ಕೂಡ ಕುಸಿದಿದೆ. ಒಂದು ಕಾಲದಲ್ಲಿ ಡಾ. ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದಾಗ 2008ರಲ್ಲಿ ಈ ಪ್ರಮಾಣ ಶೇಕಡಾ 138ನ್ನು ತಲುಪಿತ್ತು. ಅಂದರೆ ಸಾಲಕ್ಕಿಂತ ಶೇಕಡಾ 38ರಷ್ಟು ಹೆಚ್ಚು ವಿದೇಶಿ ವಿನಿಮಯ ಮೀಸಲು ನಿಧಿ ಭಾರತದ ಬಳಿಯಲ್ಲಿತ್ತು. ಆದರೆ ಈ ಮೀಸಲು ನಿಧಿಯನ್ನು ಕಾಪಾಡಲು ನಂತರದ ಯುಪಿಎ ಮತ್ತು ಎನ್‌ಡಿಎ ಸರಕಾರಗಳು ವಿಫಲವಾಗಿದ್ದು ಮತ್ತು ಸಾಲದ ಪ್ರಮಾಣ ಏರಿಕೆಯಾಗಿದೆ. ಜತೆಗೆ, ಇವತ್ತು ಕೇವಲ ಶೇಕಡಾ 80ರಷ್ಟು ವಿದೇಶಿ ಮೀಸಲು ವಿನಿಮಯ ಮಾತ್ರ ಭಾರತದ ಬಳಿ ಉಳಿದುಕೊಂಡಿದೆ.

ಪರಿಸ್ಥಿತಿ ಹೀಗಿರುವಾಗ 'ಭಿಕ್ಷೆ ಬೇಡುವ ರಾಷ್ಟ್ರವಾಗಿದ್ದ ಭಾರತ ಮೋದಿಯವರ ಅಧಿಕಾರಾವಧಿಯಲ್ಲಿ ಸವಾಲನ್ನು ಸಮರ್ಥವಾಗಿ ಎದುರಿಸುವ ರಾಷ್ಟ್ರವಾಗಿ ಬೆಳೆದು ನಿಂತಿದೆ' ಎಂಬುದನ್ನು ನಂಬಿಸಲು ಹೊರಟರೆ ಅದು ರಾಜಕೀಯ ಲಾಭ- ನಷ್ಟದ ವಿಚಾರಕ್ಕೆ ಸೀಮಿತವಾಗುತ್ತದೆ. ಹೊರತು, ಇದರಲ್ಲಿ ‘ರಾಷ್ಟ್ರ ಚಿಂತನೆ’ ಯಾವ ಗಂಧಗಾಳಿಯೂ ಕಾಣಿಸುತ್ತಿಲ್ಲ ಎಂಬುದು ಕಹಿ ಸತ್ಯ.