samachara
www.samachara.com
ಪದ ಬಳಕೆಯ ಸೂಕ್ಷ್ಮತೆ ಮರೆತ ‘ಜನ ಸೇವಕರು’; ಗುಮಾಸ್ತರ ಬಗ್ಗೆ ಎಲುಬಿಲ್ಲದ ನಾಲಿಗೆ ಹರಿಬಿಟ್ಟರು!
COVER STORY

ಪದ ಬಳಕೆಯ ಸೂಕ್ಷ್ಮತೆ ಮರೆತ ‘ಜನ ಸೇವಕರು’; ಗುಮಾಸ್ತರ ಬಗ್ಗೆ ಎಲುಬಿಲ್ಲದ ನಾಲಿಗೆ ಹರಿಬಿಟ್ಟರು!

ತಾವು ಹೋಲಿಕೆಗೆ ತೆಗೆದುಕೊಳ್ಳುತ್ತಿರುವ ಪದ ಬಳಸುವ ಸೂಕ್ಷ್ಮತೆ ಈ ಮೂವರಲ್ಲೂ ಇದ್ದಂತಿಲ್ಲ. ಗುಮಾಸ್ತ ಹುದ್ದೆಯ ಬಗ್ಗೆ ಸಾಮಾನ್ಯ ಗ್ರಹಿಕೆಯೇ ಮೂವರಲ್ಲೂ ಇದ್ದಂತಿದೆ.

ಬಿಜೆಪಿ ವಿರುದ್ಧದ ಮಹಾಮೈತ್ರಿ ಹುಸಿ ಪ್ರಯೋಗ ಎಂದು ಶನಿವಾರ ಮೂದಲಿಸಿದ್ದ ಪ್ರಧಾನಿ ಮೋದಿ, “ಕರ್ನಾಟಕದಲ್ಲಿ ಕಾಂಗ್ರೆಸ್‌ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಗುಮಾಸ್ತನಂತೆ ನಡೆಸಿಕೊಳ್ಳುತ್ತಿದೆ” ಎಂದಿದ್ದರು. ಮೋದಿ ಮಾತಿಗೆ ತಿರುಗೇಟು ನೀಡಲು ರಾಜ್ಯ ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, “ಸಂಘ ಪರಿವಾರದ ‘ಕ್ಲರ್ಕ್’ ಆಗಿರುವ ನರೇಂದ್ರ ಮೋದಿ ತಮ್ಮ ಅನುಭವದ ಮಾತಿನಲ್ಲಿಯೇ ಕುಮಾರಸ್ವಾಮಿ ಅವರನ್ನು ಟೀಕಿಸಿದ್ದಾರೆ. ಹುಟ್ಟುಗುಣ ಸುಟ್ಟರೂ....” ಎಂದು ಟ್ವೀಟ್‌ ಮಾಡಿದ್ದಾರೆ.

ಒಬ್ಬರು ದೇಶದ ಪ್ರಧಾನಿ, ಮತ್ತೊಬ್ಬರು ಮಾಜಿ ಮುಖ್ಯಮಂತ್ರಿ ಹಾಗೂ ಸಮ್ಮಿಶ್ರ ಸರಕಾರದ ಪ್ರಭಾವಿ ಸ್ಥಾನದಲ್ಲಿರುವವರು. ಮತ್ತೊಬ್ಬರು ತಾವು ಕ್ಲರ್ಕ್‌ನಂತೆ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಂಡ ಹಾಲಿ ಮುಖ್ಯಮಂತ್ರಿ ಕುಮಾರಸ್ವಾಮಿ. ಈ ಮೂವರ ಮಾತಿನಲ್ಲೂ ಕಾಣುತ್ತಿರುವುದು ಕ್ಲರ್ಕ್‌/ ಗುಮಾಸ್ತ ಹುದ್ದೆಯ ಬಗೆಗಿನ ತಾತ್ಸಾರ. ಗುಮಾಸ್ತ ಹುದ್ದೆ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದಲ್ಲ ಎಂಬ ಅರ್ಥದಲ್ಲೇ ಮೂವರೂ ಮಾತನಾಡಿದ್ದಾರೆ. ಅಲ್ಲದೆ ಪದ ಬಳಕೆಯಲ್ಲಿ ತಾವೆಷ್ಟು ಅಸೂಕ್ಷ್ಮರಾಗಿದ್ದೇವೆ ಎಂಬುದನ್ನೂ ಮೂವರೂ ಸಾಬೀತುಪಡಿಸಿದ್ದಾರೆ.

ಸರಕಾರದ ನೀತಿ ನಿರೂಪಣೆಯ ಅತ್ಯಂತ ಪ್ರಮುಖ ಹುದ್ದೆಗಳಲ್ಲಿರುವವರು ರಾಜಕೀಯವಾಗಿ ಟೀಕಿಸಿಕೊಳ್ಳಲು ಎಳೆತಂದಿರುವುದು ಗುಮಾಸ್ತ ಹುದ್ದೆಯನ್ನು. ಗುಮಾಸ್ತ ಹುದ್ದೆಯ ಬಗ್ಗೆ ಇವರಿಗೆ ಇರುವ ಗೌರವ ಎಂಥದ್ದು ಎಂಬುದು ಇವರ ಮಾತುಗಳಲ್ಲೇ ಸ್ಪಷ್ಟವಾಗುತ್ತಿದೆ. ತಾವು ಹೋಲಿಕೆಗೆ ತೆಗೆದುಕೊಳ್ಳುತ್ತಿರುವ ಪದ ಬಳಸುವ ಸೂಕ್ಷ್ಮತೆ ಮೂವರಲ್ಲೂ ಇದ್ದಂತಿಲ್ಲ. ಸರಕಾರದ ಮಟ್ಟದಲ್ಲಿ ಗುಮಾಸ್ತ ಎಂದರೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಹುದ್ದೆ ಎಂಬ ಸಾಮಾನ್ಯ ಗ್ರಹಿಕೆಯೇ ಮೂವರಲ್ಲೂ ಇದ್ದಂತಿದೆ.

ಸರಕಾರಿ ಹಾಗೂ ಖಾಸಗಿ ವಲಯದಲ್ಲಿ ಗುಮಾಸ್ತ ಹುದ್ದೆಗೆ ಅದರದ್ದೇ ಆದ ಗೌರವವಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳಲ್ಲಿ ಕೋಟಿಗಳ ಲೆಕ್ಕದಲ್ಲಿ ಗುಮಾಸ್ತರಿದ್ದಾರೆ. ಬಹುತೇಕ ಗ್ರೂಪ್‌ ‘ಸಿ' ಹುದ್ದೆಗಳಲ್ಲಿರುವವರು ಗುಮಾಸ್ತರೆ. ಕೆಲ ವರ್ಷಗಳ ಹಿಂದೆ ‘ಸಹಾಯಕ’ ಎಂದು ಪದನಾಮ ಬದಲಿಸುವವರೆಗೂ FDA, SDA ಹುದ್ದೆಗಳನ್ನು ಹೆಸರಿಸುತ್ತಿದ್ದುದು ಗುಮಾಸ್ತ ಎಂದೇ. ಸರಕಾರದ ಸೇವೆಗಳು ಜನರಿಗೆ ತಲುಪುವ ಹಾಗೂ ಸರಕಾರ ನಡೆಯುವ ಕಾರ್ಯಾಂಗದಲ್ಲಿ ದೊಡ್ಡ ಸಂಖ್ಯೆಯಲ್ಲಿ ಗುಮಾಸ್ತರಿದ್ದಾರೆ. ಗುಮಾಸ್ತರಿಲ್ಲದೆ ಮೋದಿಯಾಗಲೀ, ಸಿದ್ದರಾಮಯ್ಯ ಆಗಲೀ ಅಥವಾ ಕುಮಾರಸ್ವಾಮಿಯಾಗಲೀ ಸರಕಾರ ನಡೆಸುವುದು ಸಾಧ್ಯವಿಲ್ಲ.

ತಿಂಗಳಿಗೆ ಸುಮಾರು 20 ಸಾವಿರದಿಂದ 30 ಸಾವಿರ ರೂಪಾಯಿವರೆಗೆ ಸಂಬಳ ಪಡೆಯುವ ಗುಮಾಸ್ತರು ಸರಕಾರದ ಕಡತ ವಿಲೇವಾರಿಯಲ್ಲಿ ಪ್ರಮುಖ ಪಾತ್ರ ನಿರ್ವಸುವವರು. ಭ್ರಷ್ಟಾಚಾರ, ಮೈಗಳ್ಳತನ, ವಿಳಂಬ ನೀತಿ ಎಂಬ ಗುಡ್ಡದಷ್ಟು ಮಿತಿಗಳಿದ್ದರೂ ಇಂದಿಗೂ ಸರಕಾರಿ ವ್ಯವಸ್ಥೆ ನಿಲ್ಲದೇ ಸಾಗುತ್ತಿರುವುದಕ್ಕೆ ಗುಮಾಸ್ತರ ಸೇವೆಯೇ ಕಾರಣ. ಗುಮಾಸ್ತರಿಲ್ಲದೇ ಸರಕಾರಿ ವ್ಯವಸ್ಥೆ ನಡೆಯದು ಹಾಗೂ ಗುಮಾಸ್ತರು ದೇಶದ ಮಧ್ಯಮ ವರ್ಗದ ಜನರೂ ಹೌದು ಎಂಬುದನ್ನೇ ರಾಜಕಾರಣಿಗಳು ಮರೆತಿದ್ದಾರೆ ಎಂಬುದಕ್ಕೆ ಉದಾಹರಣೆ ಈ ಮೂವರೂ ‘ನೇತಾರ’ರ ಮಾತುಗಳು.

ಶ್ರೇಣೀಕೃತ ವ್ಯವಸ್ಥೆಯಲ್ಲಿ ಆಳು ಅರಸ ಎಂಬ ಅಂತರ ಹಿಂದಿನಿಂದಲೂ ಬಂದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಆ ಮನಸ್ಥಿತಿಯೇನೂ ಬದಲಾಗಿಲ್ಲ. ಆದರೆ, ಸಂವಿಧಾನದ ಆಶಯಗಳ ಪ್ರಕಾರ ಪ್ರಜಾಪ್ರಭುತ್ವದಲ್ಲಿ ಆಳುವವರೂ ಸೇವಕರೇ. ಚುನಾವಣೆಗೂ ಮುನ್ನಾ ಜನರ ಮನೆ ಬಾಗಿಲಿಗೆ ಬಂದು, “ನಿಮ್ಮ ಸೇವೆಗೆ ಮಾಡಲು ಅವಕಾಶ ಕೊಡಿ” ಎಂದು ಗೋಗರೆಯುವ ರಾಜಕಾರಣಿಗಳು ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರುತ್ತಿದ್ದಂತೆ ತಮ್ಮನ್ನು ಸೇವಕರು ಎಂಬುದನ್ನು ಮರೆತು ಅರಸರಂತೆ ವರ್ತಿಸಲು ಶುರು ಮಾಡುತ್ತಾರೆ. ಹೀಗಾಗಲೇ 'ಸರಕಾರದ ಕೆಲಸ ದೇವರ ಕೆಲಸ' ಎಂಬುದು ವಿಧಾನಸೌಧದ ಹಣೆಗೆ ಅಂಟಿಸಿರುವ ಸೊಬಗಿನ ವಾಕ್ಯವಾಗಿ ಮಾತ್ರ ಉಳಿಯುವುದು.

ಐದು ವರ್ಷಕ್ಕೊಮ್ಮೆ ಸೇವೆ ಮಾಡಲು ಆಯ್ಕೆಯಾಗುವ ಸೇವಕರು ತಾವೆಂಬುದನ್ನು ಮರೆತು ಅಧಿಕಾರದಲ್ಲಿ ಯಾರೂ ಪ್ರಶ್ನಿಸದ, ಪ್ರಶ್ನಾತೀತ ಅರಸನಾಗಲು ಹಂಬಲಿಸುವ ಮನಸ್ಸೇ ಕುಮಾರಸ್ವಾಮಿ ಮತ್ತೆ ಮತ್ತೆ ಆಡುತ್ತಿರುವ ‘ನೋವಿನ’ ಮಾತುಗಳ ಹಿಂದೆಯೂ ಇದೆ. ಸಮನ್ವಯ ಸಮಿತಿಯ ಸದಸ್ಯರೊಂದಿಗೆ ಮಾತನಾಡಿ ಬಗೆಹರಿಸಿಕೊಳ್ಳಬೇಕಾದ ವಿಷಯಗಳನ್ನು ಬೇಕೆಂದೇ ಸಾರ್ವಜನಿಕವಾಗಿ ಆಡಿ ಜನರ ಅನುಕಂಪ ಗಿಟ್ಟಿಸಿಕೊಳ್ಳುವ ರಾಜಕೀಯ 'ಮನೋಧರ್ಮ'ವನ್ನು ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಮೇಲೂ ಬಿಟ್ಟಿಲ್ಲ.

ಮೋದಿ ಮಾತಿನ ಬಳಿಕ ಹೀಗೆ ಟ್ವೀಟ್‌ ಮಾಡಿರುವ ಕುಮಾರಸ್ವಾಮಿ ತಾವು ಹಾಗೆ ಮಾತನಾಡಿಲ್ಲ ಎಂದು ಹೇಳಿದ್ದಾರೆ. ಹಾಗಾದರೆ ಜೆಡಿಎಸ್‌ ಶಾಸಕಾಂಗ ಸಭೆಯಲ್ಲಿ ಕುಮಾರಸ್ವಾಮಿ ಮೈತ್ರಿ ಸರಕಾರದಲ್ಲಿ ಸರಕಾರ ನಡೆಸಲು ಕಷ್ಟವಾಗುತ್ತಿದೆ ಎಂದು ಹೇಳಿರುವುದು ಸುಳ್ಳೇ? ಈ ಬಗ್ಗೆಯೂ ಕುಮಾರಸ್ವಾಮಿ ಸ್ಪಷ್ಟನೆ ಕೊಡಬೇಕಿದೆ.

ಇನ್ನು ತನ್ನನ್ನು ತಾನು ದೇಶದ ಪ್ರಧಾನ ಸೇವಕ ಎಂದು ಕರೆದುಕೊಳ್ಳುವ ಮೋದಿ, ಕುಮಾರಸ್ವಾಮಿ ಹಾಗೂ ಮೈತ್ರಿ ಸರಕಾರಗಳ ಹುಸಿ ಪ್ರಯೋಗದ ಬಗ್ಗೆ ಮಾತನಾಡುವಾಗ ಮಾಡಿರುವ ಕ್ಲರ್ಕ್‌ ಉಲ್ಲೇಖವೂ ಅಸೂಕ್ಷ್ಮತೆಯ ಪ್ರತಿಬಿಂಬ. ಪ್ರಧಾನ ಸೇವಕ ಎಂದು ಕರೆದುಕೊಳ್ಳುವ ಮೋದಿಗೂ ಸರಕಾರ ನಡೆಯುತ್ತಿರುವುದಕ್ಕೆ ಕಾಲಾಳುಗಳಂತೆ ಕೆಲಸ ಮಾಡುತ್ತಿರುವ ಗುಮಾಸ್ತರ ಬಗ್ಗೆ ಗೌರವ ಇಲ್ಲದಿರುವುದು ಅವರ ಮಾತುಗಳಲ್ಲೇ ಸ್ಪಷ್ಟವಾಗಿವೆ. ರಾಜಕೀಯವಾಗಿ ಕಾಲೆಳೆಯಲು ಬಳಸುತ್ತಿರುವ ಭಾಷೆ ಹಾಗೂ ಪದ ಪ್ರಯೋಗದ ಬಗ್ಗೆ ಪ್ರಧಾನ ಸೇವಕರೂ ಅಸೂಕ್ಷ್ಮವಾಗಿರುವುದು ಈ ದೇಶದ ದುರಂತ.

ಮೋದಿ ಹಾಗೂ ಕುಮಾರಸ್ವಾಮಿ ವಿಚಾರಗಳು ಒತ್ತಟ್ಟಿಗಿರಲಿ, ಸಾಮಾಜಿಕ ನ್ಯಾಯ ಹಾಗೂ ಕಾಯಕ- ದಾಸೋಹದ ಬಗ್ಗೆ ‘ಸೋದಾಹರಣ’ವಾಗಿ ಮಾತನಾಡುವ ಸಿದ್ದರಾಮಯ್ಯ ಕೂಡಾ ಈ ಸೂಕ್ಷ್ಮವನ್ನು ಮರೆತಂತೆ ಕ್ಲರ್ಕ್‌ ಪದ ಬಳಕೆ ಮಾಡಿದ್ದಾರೆ. ಇಲ್ಲಿ ಯಾರು ಯಾವುದರ ಕ್ಲರ್ಕ್‌ ಎಂಬುದಕ್ಕಿಂತ ಕ್ಲರ್ಕ್‌ ಎಂಬ ಹುದ್ದೆಗೂ ತನ್ನದೇ ಆದ ಜವಾಬ್ದಾರಿಗಳಿವೆ, ತನ್ನದೇ ಆದ ವೃತ್ತಿ ಘನತೆ ಇದೆ ಎಂಬುದನ್ನು ಮರೆತವರಂತೆ ಸಿದ್ದರಾಮಯ್ಯ ಕೂಡಾ ಮಾತನಾಡಿರುವುದು ವೈರುಧ್ಯ.