samachara
www.samachara.com
‘ಎನ್‌ಕೌಂಟರ್‌ ರಾಜ್‌’, ಗುಜರಾತ್‌ to ಉತ್ತರ ಪ್ರದೇಶ; ಯೋಗಿ ನಾಡಲ್ಲಿ  59 ಎನ್‌ಕೌಂಟರ್‌
COVER STORY

‘ಎನ್‌ಕೌಂಟರ್‌ ರಾಜ್‌’, ಗುಜರಾತ್‌ to ಉತ್ತರ ಪ್ರದೇಶ; ಯೋಗಿ ನಾಡಲ್ಲಿ 59 ಎನ್‌ಕೌಂಟರ್‌

ಯುಪಿಯ ಹಲವು ಎನ್‌ಕೌಂಟರ್‌ಗಳ ಬಗ್ಗೆ ವಿಶ್ವಸಂಸ್ಥೆ ಗಂಭೀರ ಅನುಮಾನಗಳನ್ನು ವ್ಯಕ್ತಪಡಿಸಿದ್ದು ಇದರಲ್ಲಿ ಹೆಚ್ಚಿನವು ಕಸ್ಟಡಿಯಲ್ಲಿ ನಡೆದಿರುವ ಹತ್ಯೆಗಳು ಎಂದು ಹೇಳಿದೆ.

ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅಲ್ಲಿನ ಗೃಹ ಸಚಿವರಾಗಿದ್ದ ಅವಧಿಯಲ್ಲಿ ರಾಜ್ಯದಲ್ಲಿ ಎನ್‌ಕೌಂಟರ್‌ಗಳು ದೊಡ್ಡ ಮಟ್ಟಕ್ಕೆ ಸದ್ದು ಮಾಡಿದ್ದವು. ಅವುಗಳಲ್ಲಿ ಕೆಲವು ನಕಲಿ ಎನ್‌ಕೌಂಟರ್‌ ಪ್ರಕರಣಗಳು ಎಂಬ ಅನುಮಾಗಳಿದ್ದು ಅವುಗಳಿನ್ನೂ ನ್ಯಾಯಾಲಯಗಳಲ್ಲಿವೆ. ಇನ್ನು ಕೆಲವು ನಕಲಿ ಎಂದು ಸಾಬೀತಾಗಿದ್ದು ಅವುಗಳ ವರದಿಯನ್ನು ಸಾರ್ವಜನಿಕರ ಮುಂದಿಡುವಂತೆ ಸ್ವತಃ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ.

ಇದೀಗ ಅದೇ ಪರಿಪಾಠ ಉತ್ತರ ಪ್ರದೇಶದಲ್ಲಿ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯ ಯೋಗಿ ಆದಿತ್ಯನಾಥ್‌ ಮುಖ್ಯಮಂತ್ರಿಯಾಗಿರುವ ಯುಪಿಯ ಪೊಲೀಸ್‌ ಕಸ್ಟಡಿಯಲ್ಲಿ ಸಾವನ್ನಪ್ಪಿದ 15 ಪ್ರಕರಣಗಳು ಮತ್ತು 59 ಅನುಮಾನಿತ ನಕಲಿ ಎನ್‌ಕೌಂಟರ್‌ಗಳ ಬಗ್ಗೆ ವಿಶ್ವಸಂಸ್ಥೆ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದೆ.

ಈ ಕುರಿತು ಶುಕ್ರವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ವಿಶ್ವಸಂಸ್ಥೆ ಘಟನೆಯ ಬಗ್ಗೆ ‘ಎಚ್ಚರಿಕೆಯ ದನಿ’ ಎತ್ತಿದ್ದು, ಅತ್ಯಂತ ಕಳವಳ ವ್ಯಕ್ತಪಡಿಸಿದೆ. ನಾವು ಬರೆದಿರುವ ಪತ್ರಕ್ಕೆ ಭಾರತ ಸರಕಾರ ಇನ್ನೂ ಉತ್ತರಿಸಿಲ್ಲ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮಿಷನರ್‌ (ಒಎನ್‌ಸಿಎಚ್‌ಆರ್‌) ಹೇಳಿದ್ದಾರೆ. ಈ ಕೊಲೆಗಳ ಬಗ್ಗೆ ನಾವು ಇನ್ನೂ ಹೆಚ್ಚಿನ ಮಾಹಿತಿಗಳನ್ನು ಕಲೆ ಹಾಕಲಿದ್ದೇವೆ ಎಂದು ಅವರು ವಿವರಿಸಿದ್ದಾರೆ.

ವಿಶೇಷವೆಂದರೆ ಭಾರತ ಸರಕಾರದ ಜತೆ ಒಎನ್‌ಸಿಎಚ್‌ಆರ್‌ ತಕರಾರು ಎತ್ತಿರುವ ಹೆಚ್ಚಿನ ಪ್ರಕರಣಗಳಲ್ಲಿ ಮುಸ್ಲಿಮರು ಸಂತ್ರಸ್ತರಾಗಿದ್ದಾರೆ. “ಘಟನೆಗಳ ಮಾದರಿಗಳ ಬಗ್ಗೆ ನಾವು ತೀವ್ರ ಕಳವಳ ವ್ಯಕ್ತಪಡಿಸುತ್ತಿದ್ದೇವೆ. ವ್ಯಕ್ತಿಗಳನ್ನು ಕೊಲೆ ಮಾಡುವ ಮೊದಲು ಒಂದೋ ಅಪಹರಣಗೊಂಡಿರುತ್ತಾರೆ ಇಲ್ಲವೇ ಬಂಧಿಸಲ್ಪಟ್ಟಿರುತ್ತಾರೆ. ಮತ್ತು ಅವರ ದೇಹದ ಮೇಲಿನ ಗಾಯದ ಗುರುತುಗಳು ಹಿಂಸೆ ನೀಡಿರುವುದನ್ನು ಸೂಚಿಸುತ್ತಿರುತ್ತವೆ,” ಎಂದು ವಿಶ್ವಸಂಸ್ಥೆಯ ತಜ್ಞರು ತಿಳಿಸಿದ್ದಾರೆ.

ಯೋಗಿ ಆದಿತ್ಯನಾಥ್‌ ಅಧಿಕಾರ ಸ್ವೀಕರಿಸಿದ ಆರು ತಿಂಗಳಲ್ಲಿ 420 ಎನ್‌ಕೌಂಟರ್‌ಗಳು ನಡೆದಿವೆ, ಇದರಲ್ಲಿ 15 ಜನರು ಸಾವನ್ನಪ್ಪಿದ್ದಾರೆ ಎಂದು ಉತ್ತರ ಪ್ರದೇಶ ಪೊಲೀಸರು 2017ರಲ್ಲಿ ಮಾಹಿತಿ ನೀಡಿದ್ದರು. 2018ರ ಅಂತ್ಯಕ್ಕೆ 1,038 ಎನ್‌ಕೌಂಟರ್‌ಗಳು ನಡೆದಿದ್ದು 32 ಜನರು ಕೊಲೆಯಾಗಿದ್ದಾರೆ ಎಂದು ಪೊಲೀಸರು ವಿವರ ನೀಡಿದ್ದಾರೆ. ಈ ಹಿಂದೆ ಇವುಗಳ ಬಗ್ಗೆ ತನಿಖೆ ನಡೆಸಿದ್ದ ‘ದಿ ವೈರ್‌’, 14 ಸಂತ್ರಸ್ತರ ಕುಟುಂಬಗಳಿಗೆ ಭೇಟಿ ನೀಡಿತ್ತು. ಈ ಸಂದರ್ಭದಲ್ಲಿ ಕುಟುಂಬಸ್ಥರು ಇದು ಪೂರ್ವ ನಿಯೋಜಿತ ಕೃತ್ಯ ಎಂದು ಆರೋಪಿಸಿದ್ದರು.

ಇದೇ ರೀತಿ 6 ತಿಂಗಳ ಹಿಂದೆ ‘ಒಎಚ್‌ಸಿಎಚ್‌ಆರ್‌’ನವರು ಭಾರತ ಸರಕಾರಕ್ಕೆ ಮಣಿಪುರದಲ್ಲಿ ನಡೆದ ನಕಲಿ ಎನ್‌ಕೌಂಟರ್‌ಗಳ ಬಗ್ಗೆ ಮತ್ತು ಸುಪ್ರಿಂ ಕೋರ್ಟ್‌ನ ಗಡುವಿಗೂ ಮೊದಲು ತನಿಖೆ ನಡೆಸಲು ಸರಕಾರ ವಿಫಲವಾದ ಬಗ್ಗೆ ಪತ್ರವನ್ನು ಬರೆದಿತ್ತು. “ತನಿಖೆಯಲ್ಲಾಗುತ್ತಿರುವ ವಿಳಂಬ ಉದ್ದೇಶಪೂರ್ವಕ, ಅನಪೇಕ್ಷಿತ ಮತ್ತು ಅವಿವೇಕದ್ದೆಂದು ಕಾಣುತ್ತದೆ. ಮತ್ತು ಈ ತನಿಖೆಯಲ್ಲಿ ಪ್ರಗತಿಯಾಗದೇ ಇರುವುದನ್ನು ನಾವು ಖಂಡಿಸುತ್ತೇವೆ," ಎಂದು ಈ ಪತ್ರದಲ್ಲಿ ಹೇಳಲಾಗಿತ್ತು.

ಇದೀಗ ಉತ್ತರ ಪ್ರದೇಶದ ನಕಲಿ ಎನ್‌ಕೌಂಟರ್‌ ಪ್ರಕರಣಗಳು ಇದೇ ಪರಿಸ್ಥಿತಿ ತಲುಪಿವೆ. ಹೀಗಾಗಿ ಇವುಗಳ ಬಗ್ಗೆ ನ್ಯಾಯಾಲಯದ ನಿರ್ದೇಶನದಲ್ಲಿ ತನಿಖೆ ನಡೆಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದ್ದು, ಈ ತಿಂಗಳು ವಿಚಾರಣೆಗೆ ಬರಲಿದೆ. ಈಗಾಗಲೇ ಮಣಿಪುರದ ಎನ್‌ಕೌಂಟರ್‌ಗಳ ಬಗ್ಗೆ ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯಲ್ಲಿ ನಿಧಾನಗತಿಯ ತನಿಖೆ ನಡೆಸುತ್ತಿದೆ.

ಯುಪಿಯ ಹಲವು ಎನ್‌ಕೌಂಟರ್‌ಗಳ ಬಗ್ಗೆ ಒಎಚ್‌ಸಿಎಚ್‌ಆರ್‌ ಗಂಭೀರ ಅನುಮಾನಗಳನ್ನು ವ್ಯಕ್ತಪಡಿಸಿದ್ದು ಇದರಲ್ಲಿ ಹೆಚ್ಚಿನವು ಕಸ್ಟಡಿಯಲ್ಲಿ ನಡೆದಿರುವ ಹತ್ಯೆಗಳು ಎಂದು ಹೇಳಿದೆ. ಆದರೆ ಪೊಲೀಸರು ಮಾತ್ರ ಗಾಯದ ಗುರುತು ಮೊದಲಾದುವನ್ನು, ‘ಎನ್‌ಕೌಂಟರ್‌ ವೇಳೆ ಮತ್ತು ಸ್ವ ರಕ್ಷಣೆ’ ಸಂದರ್ಭದಲ್ಲಿ ನಡೆದಿದ್ದು ಎಂದು ಪ್ರತಿಪಾದಿಸುತ್ತಾ ಬಂದಿದ್ದಾರೆ. ಇದರ ಬಗ್ಗೆ ಸರಿಯಾದ ತನಿಖೆ ನಡೆಸಿಲ್ಲ ಎನ್ನುವ ಆಕ್ಷೇಪಣೆ ವಿಶ್ವಸಂಸ್ಥೆಯಿಂದ ಕೇಳಿ ಬಂದಿದೆ.

ಈ ಹಿಂದೆ ಹಲವು ಬಾರಿ ಇಂಥಹ ಪ್ರಕರಣಗಳು ನಡೆದಿದ್ದರೂ, ಈ ರೀತಿಯ ಪ್ರಕರಣಗಳ ತನಿಖೆಯಲ್ಲಿ ಭಾರತ ಸರಕಾರ ಯಾವುದೇ ಮಾರ್ಗಸೂಚಿಗಳನ್ನು ಅನುಸರಿಸುತ್ತಿಲ್ಲ ಎಂದು ವಿಶ್ವಸಂಸ್ಥೆ ಆರೋಪಿಸಿದೆ. ಉದಾಹರಣೆಗೆ, 2014ರಲ್ಲಿ ಸುಪ್ರೀಂ ಕೋರ್ಟ್‌, ‘ಕೊಲೆಯ ಬಗ್ಗೆ ಮನೆಯವರಿಗೆ ಮಾಹಿತಿ ನೀಡಬೇಕು ಎಂದು ಹೇಳಿದೆ. ಮತ್ತು ಅವರಿಗೆ ಪೋಸ್ಟ್‌ ಮಾರ್ಟಂ ವರದಿಗಳನ್ನು ನೀಡಬೇಕು, ಪ್ರಕರಣಗಳನ್ನು ಸ್ವತಂತ್ರ ಸಂಸ್ಥೆಗಳಿಗೆ ವಹಿಸಬೇಕು’ ಎಂದು ಸೂಚಿಸಿದೆ. ಆದರೆ ಇದೆಲ್ಲಾ ನಡೆದಿಲ್ಲ ಎಂದು ತಜ್ಞರು ಹೇಳಿದ್ದಾರೆ.

“ಇದಕ್ಕೆ ಬದಲಾಗಿ ಕುಟುಂಬದವರಲ್ಲಿ ಕೊಲೆಗೂ ಮೊದಲು ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಮತ್ತು ಈ ಪ್ರಕರಣಗಳಲ್ಲಿ ಕುಟುಂಬಸ್ಥರನ್ನು, ಮಾನವ ಹಕ್ಕುಗಳ ಕಾರ್ಯಕರ್ತರನ್ನು ಬೆದರಿಕೆ, ಸುಳ್ಳು ಕೇಸುಗಳ ಹೆಸರಿನಲ್ಲಿ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಸಂತ್ರಸ್ಥರು ಹೇಳಿದ್ದಾರೆ. ಇವೆಲ್ಲಾ ತುಂಬಾ ಗಂಭೀರವಾದ ಪ್ರಕರಣಗಳಾಗಿದ್ದು, ತುರ್ತು ಕ್ರಮಗಳು ಬೇಕಾಗಿದೆ,” ಎಂದು ಪತ್ರದಲ್ಲಿ ಹೇಳಲಾಗಿದೆ.

ಈ ಎನ್‌ಕೌಂಟರ್‌ಗಳ ಬಗ್ಗೆ ತುರ್ತಾಗಿ ಪರಿಶೀಲನೆ ನಡೆಯಬೇಕಾಗಿದೆ ಮತ್ತು ಇವುಗಳ ಬಗ್ಗೆ ಅಂತರಾಷ್ಟ್ರೀಯ ಗುಣಮಟ್ಟದ ನೈಜ, ಸ್ವತಂತ್ರ ಮತ್ತು ಆಳವಾದ ತನಿಖೆ ನಡೆಯಬೇಕಾಗಿದ್ದು ನಿಜವಾದ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ವಿಶ್ವಸಂಸ್ಥೆ ಒತ್ತಾಯಿಸಿದೆ. ಜತೆಗೆ ಸಂತ್ರಸ್ಥರ ಮನೆಯವರಿಗೆ ಮತ್ತು ಮಾನವ ಹಕ್ಕು ಕಾರ್ಯಕರ್ತರಿಗೆ ರಕ್ಷಣೆ ನೀಡುವಂತೆಯೂ ಕೋರಿಕೊಂಡಿದೆ.

ಇದೇ ಪತ್ರದಲ್ಲಿ, ಸರಕಾರ ಮತ್ತು ಪೊಲೀಸ್‌ ಅಧಿಕಾರಗಳ ಹೇಳಿಕೆಯ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಲಾಗಿದ್ದು, ಇವರುಗಳ ಹೇಳಿಕೆಗಳು ಎನ್‌ಕೌಂಟರ್‌ನ್ನು ಪ್ರಚೋದಿಸುವ, ಸಮರ್ಥಿಸುವ ಅಥವಾ ಕೊಲ್ಲುವ ಅನುಮತಿಗಳನ್ನು ನೀಡುವಂತಿವೆ, ಎಂದು ಆತಂಕ ವ್ಯಕ್ತಪಡಿಸಿದೆ.