ರಾಜಕೀಯ ಅಜೆಂಡಾ; ಸಿನಿಮಾ ಮಂತ್ರದಂಡ: ಬೆಳ್ಳಿ ಪರದೆಯ ಬದಲಾವಣೆ ‘ಆಕ್ಸಿಡೆಂಟಲ್’ ಅಲ್ಲ ಬಿಡಿ!
COVER STORY

ರಾಜಕೀಯ ಅಜೆಂಡಾ; ಸಿನಿಮಾ ಮಂತ್ರದಂಡ: ಬೆಳ್ಳಿ ಪರದೆಯ ಬದಲಾವಣೆ ‘ಆಕ್ಸಿಡೆಂಟಲ್’ ಅಲ್ಲ ಬಿಡಿ!

ಹಾಗಂಥ ಭಾರತೀಯ ಚಿತ್ರ ರಂಗದಲ್ಲಿ ಅದರಲ್ಲೂ ಮುಖ್ಯವಾಗಿ ಬಾಲಿವುಡ್‌ನಲ್ಲಿ ರಾಜಕೀಯ ಕಥೆಯಾಧಾರಿಯ ಸಿನಿಮಾಗಳು ಹೊಸದಲ್ಲ.

ಸಿನಿಮಾ ಜಗತ್ತಿನ ಅತ್ಯಂತ ಪ್ರಬಲ ಮಾಧ್ಯಮ. ಭಾಷೆ, ದೇಶ, ಸಂಸ್ಕೃತಿಯನ್ನು ಮೀರುವ ಸಾಧ್ಯತೆಗಳಿರುವ ಈ ಮಾಧ್ಯಮವನ್ನು ಪ್ರಚಾರದ ಸರಕಾಗಿ ಭಿನ್ನ ವಿಭಿನ್ನ ರೀತಿಗಳಲ್ಲಿ ಬಳಸಿದ ಉದಾಹರಣೆಗಳು ಇತಿಹಾಸದ ತುಂಬಾ ಇವೆ.

ಅಮೆರಿಕಾದ ಘನತೆಯನ್ನು ಎಚ್‌ಬಿಒ ನಿರ್ಮಾಣದ ಸಿನಿಮಾಗಳು ಜಗತ್ತಿನಾದ್ಯಂತ ಪಸರಿಸಿದರೆ, ಸದ್ಯ ಇನ್ನೊಂದು ಪ್ರಬಲ ದೇಶ ರಷ್ಯಾದಲ್ಲಿ ದೇಶಭಕ್ತಿಯ ಸಿನಿಮಾಗಳ ಕಂಪು ಜೋರಾಗಿದೆ. ದೇಶಾಭಿಮಾನ ಹರಡುವ ಸಿನಿಮಾಗಳಿಗೆ ನೆರವು ನೀಡುವ ಪರಿಪಾಠವನ್ನು ವ್ಲಾಡಿಮಿರ್ ಪುಟಿನ್‌ ಸರಕಾರ ಅಧಿಕೃತವಾಗಿ ಆರಂಭಿಸಿದೆ. ಇಲ್ಲಿ ಡಿಸೆಂಬರ್‌ 27ರಂದು ಬಿಡುಗಡೆಯಾದ ಟಿ-34 ಎಂಬ ಮಿಲಿಟರಿ ಟ್ಯಾಂಕ್‌ ಆಧಾರಿತ ದೇಶಪ್ರೇಮದ ಸಿನಿಮಾ ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದು ಹೊಸ ದಾಖಲೆ ಬರೆದಿದೆ.

ಜಾಗತಿಕ ಮಟ್ಟದಲ್ಲಿ ಸಿನೆಮಾ ಮಾಧ್ಯಮದ ಸುತ್ತ ಹೀಗೊಂದು ಬೆಳವಣಿಗೆಗಳು ನಡೆಯುತ್ತಿರುವಾಗ ಮುಕ್ತ ಮಾರುಕಟ್ಟೆಗೆ ತೆರೆದುಕೊಂಡ ಭಾರತ ಇದರಿಂದ ದೂರವಿರುವುದು ಅಸಾಧ್ಯ. ಹಾಗಾಗಿ ಇಲ್ಲೂ ವ್ಯವಸ್ಥಿತ ಪ್ರಚಾರಕ್ಕೆ ಸಿನಿಮಾಗಳ ಬಳಕೆ ಆರಂಭವಾಗಿದೆ. ತಮ್ಮ ಅಜೆಂಡಾಗಳನ್ನು ಹರಡಲು ರಾಜಕೀಯ ಪಕ್ಷಗಳು ಸಿನಿಮಾಗಳ ಮೊರೆ ಹೋಗಿವೆ. ಈ ವಾರ ತೆರೆಕಂಡ ‘ಆಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌’ ಮತ್ತು ‘ಉರಿ: ದಿ ಸರ್ಜಿಕಲ್‌ ಸ್ಟ್ರೈಕ್‌’ ಆ ಸಾಲಿಗೆ ಸೇರುತ್ತವೆ.

‘ಆಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌’ ಸಿನಿಮಾದ ಕಥೆ ಮಾಜಿ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ರ ಅಧಿಕಾರದ ದಿನಗಳ ವೃತ್ತಾಂತವಾಗಿದ್ದು ವಿವಾದಗಳ ಮಧ್ಯೆಯೂ ಶುಕ್ರವಾರ ಬಿಡುಗಡೆ ಕಂಡಿದೆ. ಬಿಜೆಪಿಯ ಬೆಂಬಲ ಗಿಟ್ಟಿಸಿಕೊಂಡ ಈ ಸಿನಿಮಾದಲ್ಲಿ ಕಾಂಗ್ರೆಸ್‌ನ ಗಾಂಧಿ ಕುಟುಂಬವನ್ನು ಮತ್ತು ಮನಮೋಹನ್‌ ಸಿಂಗ್‌ ಅವರನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ ಎಂಬುದು ಕೈ ಪಾಳಯದ ದೂರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆ, ದೂರು, ನ್ಯಾಯಾಲಯ ಬಾಗಿಲುಗಳನ್ನು ತಟ್ಟಿದ ಕಾಂಗ್ರೆಸ್‌ ಕೊನೆಗೆ ಸುಮ್ಮನಾಗಿತ್ತು. ಈ ವಿವಾದದ ನಡುವೆ ಬಿಡುಗಡೆ ಕಂಡ ಸಿನಿಮಾ ತೀಕ್ಷ್ಣ ಪದಗಳ ವಿಮರ್ಶೆಗೆ ಆಹಾರವಾಗಿದೆ.

ಇನ್ನು ಈ ವಾರ ಬಿಡುಗಡೆಯಾದ ಇನ್ನೊಂದು ಸಿನಿಮಾ ‘ಉರಿ: ದಿ ಸರ್ಜಿಕಲ್‌ ಸ್ಟ್ರೈಕ್‌’; ಇದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದ ‘ಸರ್ಜಿಕಲ್‌ ಸ್ಟ್ರೈಕ್‌’ ಕಥೆಯನ್ನಾಧರಿಸಿದೆ. ಈ ಮೂಲಕ ಆಳುವ ಸರಕಾರದ ಪ್ರಚಾರದ ಸರಕಾಗಿ, ದೇಶಭಕ್ತಿಯ ನೆಲೆಯಲ್ಲಿ ಸಿನಿಮಾ ನಿಂತಿದೆ. ಸರಣಿ ಇಲ್ಲಿಗೇ ಕೊನೆಯಾಗಿಲ್ಲ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಮೇಲೆಯೇ ಸಿನಿಮಾ ಬರುತ್ತಿದೆ. ‘ಪಿಎಂ ನರೇಂದ್ರ ಮೋದಿ’ ಹೆಸರಿನ ಈ ಸಿನಿಮಾದಲ್ಲಿ ವಿವೇಕ್‌ ಒಬೆರಾಯ್‌ ಮೋದಿ ಪಾತ್ರ ಮಾಡುತ್ತಿದ್ದಾರೆ.

ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳಿರುವಾಗ ಬರುತ್ತಿರುವ ಈ ಸಿನಿಮಾಗಳು ಸಹಜವಾಗಿಯೇ ಚರ್ಚೆಗೆ ಗ್ರಾಸವಾಗಿವೆ. ಜತೆಗೆ ಚುನಾವಣೆಗೂ ಮುನ್ನ ವ್ಯವಸ್ಥಿತ ಪ್ರಚಾರಕ್ಕೂ ಭರ್ಜರಿಯಾಗಿ ಬಳಕೆಯಾಗುತ್ತಿವೆ.

ಹಾಗಂಥ ಭಾರತೀಯ ಚಿತ್ರ ರಂಗದಲ್ಲಿ ಅದರಲ್ಲೂ ಮುಖ್ಯವಾಗಿ ಬಾಲಿವುಡ್‌ನಲ್ಲಿ ರಾಜಕೀಯ ಕಥೆಯಾಧಾರಿಯ ಸಿನಿಮಾಗಳು ಹೊಸದಲ್ಲ. “ಆದರೆ ಈ ಬಾರಿ ಬರುತ್ತಿರುವ ಸಿನಿಮಾಗಳು ಕೊಂಚ ವಿಭಿನ್ನ. ಈ ಚಿತ್ರಗಳಲ್ಲಿ ಕೆಲವು ಜೀವನಚರಿತ್ರೆಗಳಾಗಿವೆ. ಇವು ಸ್ಪಷ್ಟವಾಗಿ ನಿರ್ದಿಷ್ಟ ಪಕ್ಷದ ಕಾರ್ಯಸೂಚಿ, ಅದರ ನೀತಿಗಳು ಮತ್ತು ರಾಜಕೀಯ ತತ್ತ್ವಗಳನ್ನು ಹರಡುತ್ತಿವೆ,” ಎನ್ನುತ್ತಾರೆ ಸಿನಿಮಾ ವಿಮರ್ಶಕಿ ನಂದಿನ ರಾಮ್‌ನಾಥ್‌.

ಭಾರತದ ಸಿನಿಮಾ ಕ್ಷೇತ್ರ ಯಾವತ್ತೂ ಹೀಗಿರಲಿಲ್ಲ ಎಂಬುದನ್ನು ಅವರ ಮಾತುಗಳು ಧ್ವನಿಸುತ್ತವೆ. ಈ ದೇಶದಲ್ಲಿ ಸಿನಿಮಾ ಕ್ಷೇತ್ರದಿಂದ ರಾಜಕಾರಣಕ್ಕೆ ಬಂದವರು, ರಾಜಕಾರಣಿಗಳ ಮಕ್ಕಳು ನಟರಾದ ಸಾವಿರ ಉದಾಹರಣೆಗಳಿವೆ. ದೇಶದಲ್ಲಿ ಸಿನಿಮಾ-ರಾಜಕೀಯದ ನಡುವೆ ಎಣ್ಣೆ ಸೀಗೆಕಾಯಿ ಸಂಬಂಧ ಯಾವತ್ತೂ ಇರಲಿಲ್ಲ. ಇಲ್ಲಿ ‘ಜಾನೆ ಭಿ ದೊ ಯಾರೋ’, ‘ಪೀಪ್ಲಿ ಲೈವ್‌’ನಂಥ ಸಿನಿಮಾಗಳು ಇದೇ ವ್ಯವಸ್ಥೆಯ ಭ್ರಷ್ಟಾಷಾರ, ರೈತರ ಆತ್ಮಹತ್ಯೆಯಂಥ ಸೂಕ್ಷ್ಮ ವಿಷಯಗಳನ್ನು ಹೊತ್ತು ಜನರ ಮುಂದೆ ಬಂದ ಉದಾಹರಣೆಗಳಿವೆ. ತೆಲುಗಿನಲ್ಲಿ ಇತ್ತೀಚೆಗೆ ಬಂದ ‘ನೋಟಾ’, ‘ಭರತ್‌ ಆನೆ ನೇನು’ ಮೊದಲಾದವು ಕೂಡ ಇದೇ ರಾಜಕೀಯ ಕಥೆಯಾಧರಿಸಿದ ಸಿನಿಮಾಗಳ. ಆದರೆ ಅವೆಲ್ಲಾ ವ್ಯವಸ್ಥೆಯ ವಿರುದ್ಧ ಮತ್ತು ಸ್ವಷ್ಟವಾಗಿ ರಾಜಕೀಯ ಪಕ್ಷಗಳಿಂದ ಅಂತರವನ್ನು ಕಾಯ್ದುಕೊಂಡಿದ್ದವು.

ಇವುಗಳ ನಡುವೆಯೇ ಈ ಬಾರಿ ರಾಜಕೀಯ ಪಕ್ಷಗಳಿಗೆ ಪೂರಕವಾದ ಸಿನಿಮಾಗಳೂ ಬಿಡುಗಡೆಯಾಗುತ್ತಿವೆ. ಪ್ರತಿ ಬಾರಿ ಇಂಥಹ ಸಿನಿಮಾಗಳು ಬಿಡುಗಡೆಯಾದಾಗಲೂ ವಿವಾದಕ್ಕೆ ಕಾರಣವಾಗಿವೆ. ಇದೆಲ್ಲಾ ಹೊಸದೇನೂ ಅಲ್ಲ. ‘ಕಿಸ್ಸಾ ಕುರ್ಸಿ ಕಾ’ ಮತ್ತು ‘ಆಂಧಿ’ ಎಂಬ ಎರಡು ಸಿನಿಮಾಗಳನ್ನು 1970ರ ದಶಕದಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಕೂಡ ನಿಷೇಧ ಮಾಡಿದ್ದರು.

ಈ ಬಾರಿ ಅದೇ ಇಂದಿರಾ ಗಾಂಧಿಯ ಕಾಂಗ್ರೆಸ್‌ ಚಿತ್ರ ಪ್ರದರ್ಶನಕ್ಕೆ ತಡೆಯೊಡ್ಡಲು ಯತ್ನಿಸಿ ಸುಮ್ಮನಾಗಿದೆ. ಚಿತ್ರದಲ್ಲಿ ಅನುಪಮ್‌ ಖೇರ್‌ ನಟನೆ ಮನಮೋಹನ್‌ ಸಿಂಗ್ ಅವರನ್ನು ಅಪಹಾಸ್ಯ ಮಾಡುವಂತಿದೆ, ಗಾಂಧಿ ಕುಟುಂಬವನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ ಎಂಬುದು ಈ ಪ್ರತಿರೋಧದ ಹಿಂದಿದ್ದ ಕಾರಣವಾಗಿತ್ತು.ಆದರೆ ತಾವು ಪರಿಪೂರ್ಣವಾಗಿ ಸಿಂಗ್‌ ಅವರನ್ನು ಅನುಕರಣೆ ಮಾಡಿದ್ದೇನೆ ಎಂದು ಖೇರ್‌ ಹೇಳಿಕೊಂಡಿದ್ದು, ತಮಗೆ ಆಸ್ಕರ್‌ ಪ್ರಶಸ್ತಿ ಬರಬೇಕು ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದಾರೆ.

ಆದರೆ ಸಿನಿಮಾದ ವಿಮರ್ಶೆ ಬರೆದಿರುವ ಹೆಚ್ಚು ಕಡಿಮೆ ಎಲ್ಲಾ ರಾಷ್ಟ್ರೀಯ ಮಾಧ್ಯಮಗಳು, ‘ಸಿನಿಮಾವನ್ನು ಕಳಪೆ ಸರಕು ಎಂದೂ, ಮಾಜಿ ಪ್ರಧಾನಿಯನ್ನು ಬೆನ್ನು ಮೂಳೆ ಇಲ್ಲದ, ದುರ್ಬಲ ಎಂಬು ಬಿಂಬಿಸುವ ನಿರ್ಧಿಷ್ಟ ಕಾರ್ಯಸೂಚಿಯ ಸಿನಿಮಾ’ ಎಂದು ಕರೆದಿವೆ.

ಚುನಾವಣೆಗೂ ಮುನ್ನ ನೇರಾ ನೇರ ಒಂದು ಪಕ್ಷದ ಪರ ಮತ್ತು ವಿರುದ್ಧದ ಪ್ರಚಾರಕ್ಕೆ ಬಿಡುಗಡೆಯಾದ ಸಿನಿಮಾವೊಂದು ಈ ರೀತಿಯ ವಿಮರ್ಶೆಯನ್ನು ಪಡೆದುಕೊಂಡಿದ್ದು ಇಲ್ಲಿ ಮುಖ್ಯವಾಗುತ್ತದೆ. ಈ ಹಿಂದೆ 2014ರ ಲೋಕಸಭೆ ಚುನಾವಣೆಗೂ ಮುನ್ನ ‘ಯಂಗಿಸ್ತಾನ್‌’, ‘ಭೂತ್‌ನಾತ್ ರಿಟರ್ನ್ಸ್‌’ ಎಂಬ ಸಿನಿಮಾಗಳು ಬಂದಿತ್ತು. ಭೂತ್‌ನಾತ್‌ನಲ್ಲಿ ಅಮಿತಾಭ್‌ ಬಚ್ಚನ್‌ ನಟಿಸಿದ್ದರು. ಕೆಟ್ಟ ಅಭ್ಯರ್ಥಿಯ ವಿರುದ್ಧ ಹೋರಾಡುವ ಭೂತವೊಂದರ ಕಥೆ ಇದಾಗಿತ್ತು. ಚುನಾವಣೆಗಳು ಹತ್ತಿರ ಬಂದಾಗ, ಜನರಲ್ಲಿ ಚುನಾವಣೆಗಳ ಬಗ್ಗೆ ಆಸಕ್ತಿಯೊಂದು ರೂಪುಗೊಂಡಾಗ ಲಾಭದ ಉದ್ದೇಶ ಇಟ್ಟುಕೊಂಡು ಈ ರೀತಿಯಾ ಸಿನಿಮಾಗಳು ಬರುವುದರಲ್ಲಿ ವಿಶೇಷವೇನಿಲ್ಲ. ಇದು ಸರಳ ಲೆಕ್ಕಾಚಾರ.

ಆದರೆ ಗಳಿಕೆಯಾಚೆಗೆ ಈ ಬಾರಿ ಸಿನಿಮಾಗಳು ಸದ್ದು ಮಾಡುತ್ತಿವೆ. ಕಾರಣ ಅವುಗಳು ಪಕ್ಷವೊಂದರ ನಿರ್ಧಿಷ್ಟ ಗುರಿ ಸಾಧನೆಗೆ ಹೊರಟಿವೆ. ಉರಿ: ದಿ ಸರ್ಜಿಕಲ್‌ ಸ್ಟ್ರೈಕ್‌, ಆಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌, ಪಿಎಂ ನರೇಂದ್ರ ಮೋದಿ ಸಿನಿಮಾಗಳು ಆಳುವ ಬಿಜೆಪಿ ಪಕ್ಷದ ಗುರಿ ಸಾಧನೆಗೆ ಬೆಳ್ಳಿ ತೆರೆ ಮೇಲೆ ಬಂದಿವೆ.

ಠಾಕ್ರೆ ಸಿನಿಮಾದ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ, ವಕ್ತಾರ ಹಾಗೂ ನಿರ್ಮಾಪಕ ಸಂಜಯ್‌ ರಾವತ್‌ ಹಾಗೂ ಠಾಕ್ರೆ ಪಾತ್ರಧಾರಿ ನವಾಜುದ್ಧೀನ್‌ ಸಿದ್ಧಿಕಿ ಮತ್ತು ಇತರರು.
ಠಾಕ್ರೆ ಸಿನಿಮಾದ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ, ವಕ್ತಾರ ಹಾಗೂ ನಿರ್ಮಾಪಕ ಸಂಜಯ್‌ ರಾವತ್‌ ಹಾಗೂ ಠಾಕ್ರೆ ಪಾತ್ರಧಾರಿ ನವಾಜುದ್ಧೀನ್‌ ಸಿದ್ಧಿಕಿ ಮತ್ತು ಇತರರು.

ಅದೇ ಕಾಲಕ್ಕೆ ‘ಠಾಕ್ರೆ’ ಸಿನಿಮಾ ಮರಾಠಿ ಮತ್ತು ಹಿಂದಿಯಲ್ಲಿ ತಯಾರಾಗಿದೆ. ಶಿವಸೇನೆ ಸಂಸ್ಥಾಪಕ, ಮಹಾರಾಷ್ಟ್ರದ ಮೇರು ರಾಜಕಾರಣಿ ಬಾಳಾಸಾಹೇಬ್‌ ಠಾಕ್ರೆಯ ಜೀವನ ಕಥೆಯನ್ನು ಆಧರಿಸಿ ಈ ಸಿನಿಮಾ ನಿರ್ಮಾಣ ಮಾಡಲಾಗಿದ್ದು, ಸ್ವತಃ ಶಿವಸೇನೆ ಸಂಸದ ಮತ್ತು ವಕ್ತಾರ ಸಂಜಯ್‌ ರಾವತ್‌ ಇದಕ್ಕೆ ಹಣ ಹೂಡಿ, ಚಿತ್ರಕಥೆ ಬರೆದಿದ್ದಾರೆ. ಮೇಲಿನ ಮೂರು ಸಿನಿಮಾಗಳಿಗೆ ಹೋಲಿಸಿದರೆ ಠಾಕ್ರೆ ಸಿನಿಮಾ ಹೆಚ್ಚು ವೃತ್ತಿಪರವಾಗಿ ಮೂಡಿ ಬಂದಿದೆ. ಮಹಾರಾಷ್ಟ್ರ ಎನ್‌ಸಿಪಿ, ಕಾಂಗ್ರೆಸ್‌ ಎರಡರಿಂದಲೂ ಸ್ಪರ್ಧೆ, ಬಿಜೆಪಿ ಜತೆಗಿನ ಮುನಿಸನ್ನು ಎದುರಿಸುತ್ತಿರುವ ಶಿವಸೇನೆ ಈ ಸಿನಿಮಾದ ಮೂಲಕ ಒಂದಷ್ಟು ಚಿಗಿತುಕೊಳ್ಳಬಹುದು ಎಂದುಕೊಂಡಿದೆ. ಠಾಕ್ರೆ 93ನೇ ಹುಟ್ಟುಹಬ್ಬವಾದ ಜನವರಿ 25ರಂದೇ ಸಿನಿಮಾ ಬಿಡುಗಡೆಯಾಗಲಿದೆ.

ಹಾಗಂಥ ರಾಜಕೀಯ ಕಥೆಯಾಧಾರಿತ ಸಿನಿಮಾಗಳು ಬಾಲಿವುಡ್‌ಗೆ ಮಾತ್ರ ಸೀಮಿತವಾಗಿಲ್ಲ. ಚಿತ್ರ ರಂಗದಿಂದ ಬಂದು ತೆಲುಗುದೇಶಂ ಪಕ್ಷ ಕಟ್ಟಿ ಸಿನಿಮೀಯ ರೀತಿಯಲ್ಲಿ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾದ ಎನ್‌ಟಿ ರಾಮರಾವ್‌ ಕುರಿತಾದ ‘ಎನ್‌ಟಿಆರ್‌ ಕಥಾನಾಯಕುಡು’ ಸಿನಿಮಾ ಕಳೆದ ಗುರುವಾರ ಬಿಡುಗಡೆಯಾಗಿದೆ. ಇದು ಎರಡು ಭಾಗಗಳ ಸಿನಿಮಾವಾಗಿದ್ದು ಅದರಲ್ಲಿ ಮೊದಲ ಭಾಗ ಬಿಡುಗಡೆಯಾಗಿದೆ.

ಇದು ಇಷ್ಟಕ್ಕೇ ನಿಂತಿಲ್ಲ. ಆಂಧ್ರ ಪ್ರದೇಶದ ತುಂಬಾ 340 ದಿನಗಳ ಕಾಲ ಪಾದಯಾತ್ರೆ ನಡೆಸಿ ಭಾರತದ ರಾಜಕಾರಣದಲ್ಲಿ ಹೊಸ ಚರಿತ್ರೆ ಬರೆದಿರುವ ಜಗನ್‌ ಮೋಹನ್‌ ರೆಡ್ಡಿ ತಮ್ಮ ತಂದೆ ವೈಎಸ್‌ ರಾಜಶೇಖರ್‌ ರೆಡ್ಡಿಯವರ ಜೀವನಕಥೆ ಆಧಾರಿತ ಸಿನಿಮಾದೊಂದಿಗೆ ತಯಾರಾಗಿದ್ದಾರೆ. ಮಲಯಾಳಂ ಭಾಷೆಯ ಸೂಪರ್‌ಸ್ಟಾರ್‌ ಮಮ್ಮುಟ್ಟಿ ‘ಯಾತ್ರಾ’ ಹೆಸರಿನ ಈ ಸಿನಿಮಾದಲ್ಲಿ ರೆಡ್ಡಿ ಪಾತ್ರ ಮಾಡಿದ್ದು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಅತ್ತ ಪಾದಯಾತ್ರೆ ಇತ್ತ ಸಿನಿಮಾದ ಮೂಲಕ ಜನರನ್ನು ತಲುಪಿ ಆ ಮೂಲಕ ಅಧಿಕಾರದೆ ಗದ್ದುಗೆ ಹಿಡಿಯಲು ಜಗನ್‌ ಸಜ್ಜಾಗಿದ್ದಾರೆ.

Also read: ಆಂಧ್ರದಲ್ಲಿ ಜಗನ್‌ ಪಾದ‘ಯಾತ್ರಾ’: ಜ್ಯೂ. ರೆಡ್ಡಿ ಅಧಿಕಾರದ ನಡಿಗೆಗೆ ಮಮ್ಮುಟ್ಟಿಯ ಸಿನಿಮಾ ಸಾಥ್‌!

“ಇತರ ಮಾಧ್ಯಮಗಳಿಗಿಂತ ಅಭಿಪ್ರಾಯಗಳನ್ನು ಮತ್ತು ಕಲ್ಪನೆಗಳನ್ನು ಹರಡುವ ವಿಶಿಷ್ಠ ಸಾಮರ್ಥ್ಯದಿಂದಾಗಿ ಜನಪ್ರಿಯ ಸಿನಿಮಾಗಳು ವ್ಯವಸ್ಥಿತ ಪ್ರಚಾರದ ಕ್ಷೇತ್ರವಾಗಿ ಹೊರಹೊಮ್ಮಿದೆ,” ಎನ್ನುತ್ತಾರೆ ನಂದಿನಿ ರಾಮನಾಥ್‌. ಮತ್ತದು ನಿಜ ಕೂಡ. 2019ರ ಲೋಕಸಭೆ ಚುನಾವಣೆಗೂ ಮುನ್ನ ಜನರನ್ನು ತಲುಪಲು ಯತ್ನಿಸುತ್ತಿರುವ ಪ್ರಮುಖ 6 ಸಿನಿಮಾಗಳೇ ಇದಕ್ಕೆ ಸಾಕ್ಷಿ.