samachara
www.samachara.com
 ಕಾಯ್ದೆಯಾಗದ ‘ಮಕ್ಕಳ ಹಕ್ಕುಗಳ ಮಸೂದೆ’; ಇನ್ನೂ ಜೀವಂತವಾಗಿದೆ ಮಕ್ಕಳ ಕಳ್ಳಸಾಗಣೆ ದಂದೆ
COVER STORY

ಕಾಯ್ದೆಯಾಗದ ‘ಮಕ್ಕಳ ಹಕ್ಕುಗಳ ಮಸೂದೆ’; ಇನ್ನೂ ಜೀವಂತವಾಗಿದೆ ಮಕ್ಕಳ ಕಳ್ಳಸಾಗಣೆ ದಂದೆ

ಭಾರತದಲ್ಲಿ ಮಕ್ಕಳ ರಕ್ಷಣೆಗೆ ಶಾಸನ ರೂಪಿಸಬೇಕಾದವರ ಬೇಜವಾಬ್ದಾರಿಗೆ ಅರಳಬೇಕಿರುವ ಮಕ್ಕಳ ಬಾಲ್ಯ ಕಮರುತ್ತಿರುವುದು ಮಾತ್ರ ವಿಪರ್ಯಾಸ.

ಜಗತ್ತಿನ ದೊಡ್ಡ ಮಾಫಿಯಾಗಳ ಪೈಕಿ ಮಾನವ ಕಳ್ಳ ಸಾಗಣೆಗೆ 3ನೇ ಸ್ಥಾನ. ಯುನಿಸೆಫ್‌ನ ಪ್ರಕಾರ ಪ್ರತಿ ವರ್ಷ ವಿಶ್ವದಲ್ಲಿ 1.2 ಮಿಲಿಯನ್ ಮಕ್ಕಳನ್ನು ಕಳ್ಳ ಸಾಗಾಣೆ ಮಾಡಲಾಗುತ್ತಿದೆ. ಈ ಪೈಕಿ ಭಾರತದ ಪಾಲು ಶೇ.10ರಷ್ಟಿದೆ.

ಉತ್ತರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ತಾನ್ ಹಾಗೂ ಮಹಾರಾಷ್ಟ್ರದ ವಿದರ್ಭ ಹಾಗೂ ಆಂಧ್ರ ಪ್ರದೇಶದಲ್ಲಿ ಹೆಣ್ಣು ಮಕ್ಕಳ ಮಾರಾಟ ಹೆಚ್ಚಾಗಿ ನಡೆಯುತ್ತಿದೆ. ಕದ್ದೊಯ್ದ ಹಾಗೂ ಮಾರಾಟ ಮಾಡಲಾದ ಮಕ್ಕಳ ಪೈಕಿ ಗಂಡು ಮಕ್ಕಳನ್ನು ಜೀತಕ್ಕೆ ಬಳಸಿಕೊಂಡರೆ, ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಗೆ ಬಳಸಿಕೊಳ್ಳಲಾಗುತ್ತಿದೆ. ಇದಕ್ಕಾಗಿಯೇ ದೇಶದಲ್ಲಿ ಸೆಕ್ಸ್ ರಾಕೆಟ್ ಜಾಲಗಳಿವೆ.

ಮಕ್ಕಳ ಕಳ್ಳ ಸಾಗಾಣೆಯನ್ನು ತಡೆಯುವ ನಿಟ್ಟಿನಲ್ಲಿ ‘ಮಕ್ಕಳ ಕಳ್ಳ ಸಾಗಾಣೆ ತಡೆ’ ಮಸೂದೆಯನ್ನು ಕೇಂದ್ರ ಸರಕಾರ 2018 ಜುಲೈನಲ್ಲೇ ಲೋಕಸಭೆಯ ಮುಂಗಾರು ಅಧಿವೇಶನದಲ್ಲಿ ಮಂಡಿಸಿ ಅಂಗೀಕಾರ ಪಡೆದಿತ್ತು. ಆದರೆ, ಲೋಕಸಭೆಯಲ್ಲಿ ಅನುಮೋಧನೆಯಾದ ಈ ಮಸೂದೆಯನ್ನು ರಾಜ್ಯಸಭೆಯಲ್ಲಿ ಇನ್ನೂ ಚರ್ಚೆಗೆ ತೆಗೆದುಕೊಂಡಿಲ್ಲ.

“ಮಕ್ಕಳು ಚುನಾವಣಾ ಸರಕಲ್ಲದ ಕಾರಣ ಸರಕಾರ ಈ ಕುರಿತು ಕಾಳಜಿ ವಹಿಸುತ್ತಿಲ್ಲ” ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಮಕ್ಕಳ ಹಕ್ಕುಗಳ ಹೋರಾಟಗಾರ ಕೈಲಾಶ್ ಸತ್ಯಾರ್ಥಿ ಈ ಕುರಿತು ವಿಷಾದ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಭಾರತದಲ್ಲಿನ ಮಕ್ಕಳ ಕಳ್ಳ ಸಾಗಾಣೆ ಜಾಲ ಹಾಗೂ ಕಳ್ಳ ಸಾಗಾಣೆಯ ನಂತರದ ಮಕ್ಕಳ ಬದುಕಿನ ಕುರಿತ ಕಂಪ್ಲೀಟ್ ಡೀಟೆಲ್ ಇಲ್ಲಿದೆ.

ಟ್ರಾಫಿಕ್ ಸಿಗ್ನಲ್ ಗಳಲ್ಲಿ ಭಿಕ್ಷಾಟನೆಗೆ ಇಳಿದಿರುವ ಮಕ್ಕಳು (ಸಾಂದರ್ಭಿಕ ಚಿತ್ರ)
ಟ್ರಾಫಿಕ್ ಸಿಗ್ನಲ್ ಗಳಲ್ಲಿ ಭಿಕ್ಷಾಟನೆಗೆ ಇಳಿದಿರುವ ಮಕ್ಕಳು (ಸಾಂದರ್ಭಿಕ ಚಿತ್ರ)

ಭಾರತದಲ್ಲಿ ಮಕ್ಕಳ ಕಳ್ಳ ಸಾಗಾಣೆ:

ಭಾರತದಲ್ಲಿ ಮಕ್ಕಳನ್ನು ಮಾರುವ ಪದ್ಧತಿ ಇಂದು ನಿನ್ನೆಯದಲ್ಲ. ರಾಜಸ್ತಾನ್, ಉತ್ತರಪ್ರದೇಶ, ಮಧ್ಯಪ್ರದೇಶ, ಕೋಲ್ಕತಾ, ಛತ್ತೀಸ್‌ ಘಡ್, ಜಾರ್ಖಂಡ್, ಒರಿಸ್ಸಾ ಪಂಜಾಬ್, ಬಿಹಾರ, ಹರಿಯಾಣ, ಮಹಾರಾಷ್ಟ್ರದ ವಿದರ್ಭ ಹಾಗೂ ಆಂಧ್ರಪ್ರದೇಶದ ಹಲವು ಭಾಗಗಳಲ್ಲಿ ಈಗಲೂ ಮಕ್ಕಳ, ಅದರಲ್ಲೂ ಹೆಣ್ಣು ಮಕ್ಕಳ ಮಾರಾಟದ ದೊಡ್ಡ ಜಾಲವೇ ಕಾರ್ಯನಿರ್ವಹಿಸುತ್ತಿದೆ. ಈ ಜಾಲದ ಮೊದಲ ಟಾರ್ಗೆಟ್ ಬಡವರು ಹಾಗೂ ನಿಗರ್ತಿಕರು.

ಭಾರತ ಹಳ್ಳಿಗಳ ರಾಷ್ಟ್ರ ಎಂಬುದೇ ನಮ್ಮ ಹೆಮ್ಮೆ. ಭಾರತೀಯ ಹಳ್ಳಿಗಳ ಕುರಿತಂತೆ ಕೃಷಿ, ಮಳೆ, ಅತಿವೃಷ್ಟಿ, ಅನಾವೃಷ್ಟಿ, ರೈತರ ಆತ್ಮಹತ್ಯೆ ಹಾಗೂ ಸಾಲಮನ್ನಾ ಬಿಟ್ಟು ಮಾತುಕತೆ ಬೇರೆ ಕಡೆಗೆ ಹೊರಳುವುದಿಲ್ಲ. ಆದರೆ, ಇದರ ಆಚೆಗೂ ಗ್ರಾಮೀಣ ಭಾರತಕ್ಕೊಂದು ಕತ್ತಲ ಬದುಕಿದೆ.

ಹಳ್ಳಿಗಳಲ್ಲಿ ಕೃಷಿ ನೆಲಕಚ್ಚಿ ರೈತರ ಬದುಕು ಬೀದಿಗೆ ಬೀಳುವ ಪರಿಸ್ಥಿತಿ ಎದುರಾದಾಗ, ಗ್ರಾಮೀಣ ಬದುಕಿನ ಸಾಮಾಜಿಕ ಬದುಕಿನ ಒಳಗೆ ನುಸುಳಿ ಬಡವರನ್ನು ಹರಿದು ತಿನ್ನುವುದಕ್ಕಾಗಿಯೇ ಹತ್ತಾರು ರಣಹದ್ದುಗಳು ಕೆಲಸ ಮಾಡುತ್ತಿರುತ್ತವೆ. ಆದರೆ, ಈ ಇದು ಹೊರ ಜಗತ್ತಿಗೆ ದೊಡ್ಡದಾಗಿ ಕಾಣುತ್ತಿಲ್ಲ ಎಂಬುದೇ ವಿಪರ್ಯಾಸ.

ರಾಜಸ್ತಾನ ಶೇ. 80 ರಷ್ಟು ಒಣಭೂಮಿಯನ್ನು ಹೊಂದಿರುವ ರಾಜ್ಯ. ಇಲ್ಲಿ ಕೃಷಿ ಮಾಡಿ ಲಾಭ ಗಳಿಸುವುದು ಅಷ್ಟು ಸುಲಭದ ಮಾತಲ್ಲ. ಇನ್ನು ಉತ್ತರಪ್ರದೇಶ, ಜಾರ್ಖಂಡ್, ಛತ್ತೀಸ್‌ಘಡ್, ವಿದರ್ಭ ಹಾಗೂ ಆಂಧ್ರಪ್ರದೇಶದ ಕೆಲವು ಭಾಗಗಳಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಯೇನು ಇಲ್ಲ. ಈ ಭಾಗಗಳಲ್ಲಿ ಕೃಷಿ ಕೈಕೊಡುತ್ತಿದ್ದಂತೆ ಮಕ್ಕಳನ್ನು ಖರೀದಿಸುವ ಜಾಲ ಫೀಲ್ಡಿಗಿಳಿಯುತ್ತದೆ. ರೈತರ ಮಕ್ಕಳು ಚಿಲ್ಲರೆ ಕಾಸಿಗೆ ಅನಾಮತ್ತಾಗಿ ಮಕ್ಕಳ ಕಳ್ಳ ಸಾಗಾಣೆ ಜಾಲದೊಳಗೆ ಬೀಳುತ್ತಾರೆ.

ಯುಸಿಸೆಫ್‌ನ ಲೆಕ್ಕಾಚಾರಗಳ ಪ್ರಕಾರ ಭಾರತದಲ್ಲಿ 50 ರಿಂದ 80 ಸಾವಿರ ಮಕ್ಕಳು ಪ್ರತಿ ವರ್ಷ ಈ ಜಾಲದ ಪಾಲಾಗುತ್ತಿದ್ದಾರೆ. ಇದರಲ್ಲಿ ಹೆಣ್ಣು ಮಕ್ಕಳ ಸಂಖ್ಯೆಯೇ ಅಧಿಕ. 2010 ರಿಂದ 2014 ರ ಅವಧಿಯಲ್ಲಿ ಭಾರತದಲ್ಲಿ ಸುಮಾರು 3.85 ಲಕ್ಷ ಮಕ್ಕಳನ್ನು ಮಾರಾಟ ಮಾಡಲಾಗಿತ್ತು. ಇದರಲ್ಲಿ ಶೇ. 61 ರಷ್ಟು ಹೆಣ್ಣು ಮಕ್ಕಳು. ಈ ನಾಲ್ಕು ವರ್ಷದ ಅವಧಿಯಲ್ಲಿ ಆಂಧ್ರಪ್ರದೇಶದಲ್ಲಿ ಮಾತ್ರ ಸುಮಾರು 11,625 ಮಕ್ಕಳ ಅಪಹರಣ ಪ್ರಕರಣಗಳು ದಾಖಲಾಗಿದ್ದವು. ಇನ್ನು ದೇಶದಲ್ಲಿ ಪ್ರತಿ 8 ನಿಮಿಷಕ್ಕೆ ಒಂದು ಮಗು ಮರಾಟ ಅಥವಾ ಅಪಹರಣವಾಗುತ್ತಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆ ಸಂಸ್ಥೆ (ಎನ್‌ಸಿಆರ್‌ಬಿ) ಅಂಕಿಅಂಶ ನೀಡುತ್ತದೆ.

ಟ್ರಾಫಿಕ್ ಸಿಗ್ನಲ್ ಗಳಲ್ಲಿ  ಮಗುವೊಂದಿಗೆ ಭಿಕ್ಷಾಟನೆಗೆ ಇಳಿದಿರುವ ಮಹಿಳೆ (ಸಾಂದರ್ಭಿಕ ಚಿತ್ರ)
ಟ್ರಾಫಿಕ್ ಸಿಗ್ನಲ್ ಗಳಲ್ಲಿ ಮಗುವೊಂದಿಗೆ ಭಿಕ್ಷಾಟನೆಗೆ ಇಳಿದಿರುವ ಮಹಿಳೆ (ಸಾಂದರ್ಭಿಕ ಚಿತ್ರ)

ಭಾರತದ ಹೆಣ್ಣು ಮಕ್ಕಳಿಗೆ ಅರಬ್‌ನಲ್ಲಿ ಬೇಡಿಕೆ:

ಭಾರತದ ಹೆಣ್ಣು ಮಕ್ಕಳಿಗೆ ಅರಬ್‌ ರಾಷ್ಟ್ರಗಳಲ್ಲಿ ಬೇಡಿಕೆ ಹೆಚ್ಚು ಎನ್ನಲಾಗುತ್ತದೆ. ಭಾರತದ ವಿವಿಧ ಹಳ್ಳಿಗಳಿಂದ ಖರೀದಿ ಮಾಡಲಾದ ಅಥವಾ ಅಪಹರಣಕ್ಕೆ ಒಳಗಾಗುವ ಹೆಣ್ಣು ಮಕ್ಕಳನ್ನು ನಕಲಿ ಪಾಸ್‌ಪೋರ್ಟ್ ತಯಾರಿಸಿ ನೇಪಾಳದ ಮೂಲಕ ಅರಬ್ ರಾಷ್ಟ್ರಗಳಿಗೆ ಕಳ್ಳ ಸಾಗಾಣೆ ಮಾಡಲಾಗುತ್ತದೆ. ಹೀಗೆ ಅರಬ್‌ಗೆ ಕಳ್ಳ ಸಾಗಾಣೆ ಮಾಡಿದ ಹೆಣ್ಣು ಮಕ್ಕಳಿಗೆ ಅಲ್ಲಿ ಚಿನ್ನದ ಬೆಲೆ ಕೊಡಲಾಗುತ್ತೆ ಎನ್ನುತ್ತಿವೆ ‘ಅಂತಾರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಸಂಸ್ಥೆ’ಯ ಸಮೀಕ್ಷೆಗಳು. ಹೆಣ್ಣು ಮಕ್ಕಳನ್ನು ಅರಬ್‌ನ ಲೈಂಗಿಕ ಜಾಲಕ್ಕೆ ಸಿಲುಕಿಸಿದರೆ, ಗಂಡು ಮಕ್ಕಳನ್ನು ಅಲ್ಲಿ ಜೀತದಂತೆ ಕೆಲಸಕ್ಕೆ ದುಡಿಸಿಕೊಳ್ಳಲಾಗುತ್ತಿದೆ.

ಭಾರತದಲ್ಲೇ ಮುಂಬೈ, ಕೋಲ್ಕತಾದಂತಹ ಮಹಾನಗರಗಳಲ್ಲಿ ‘ಸೋನಾಗಾಚಿ’ ಎಂಬ ರೆಡ್‌ಲೈಟ್ ಏರಿಯಾಗಳಲ್ಲಿ (ಕಾಮಾಟಿಪುರಗಳು) ಹೆಣ್ಣುಮಕ್ಕಳನ್ನು ಮಾರಾಟ ಮಾಡುವ ದೊಡ್ಡ ದಂಧೆಯೇ ಭಾರತದಲ್ಲಿ ನಡೆಯುತ್ತಿದೆ. ಮುಂಬೈನ ಕಾಮಾಟಿಪುರಗಳಲ್ಲಿ ಪ್ರತಿವರ್ಷ 400 ಮಿಲಿಯನ್ ಡಾಲರ್‌ನಷ್ಟು ಹಣದ ವಹಿವಾಟು ನಡೆಯುವ ಅಂದಾಜಿದೆ. ಮಹಾರಾಷ್ಟ್ರದ ಬಜೆಟ್‌ಗಿಂತ ಕಾಮಾಟಿಪುರಗಳಲ್ಲಿ ನಡೆಯುವ ವ್ಯವಹಾರವೇ ಅಧಿಕ ಎಂದೂ ಹೇಳಲಾಗುತ್ತದೆ.

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೀಡುವ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಸುಮಾರು 3 ಮಿಲಿಯನ್‌ ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಯಲ್ಲಿದ್ದಾರೆ. ಇದರಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳ ಸಂಖ್ಯೆ ಶೇ. 60. ಇದಲ್ಲದೆ ನೇಪಾಳ, ಬಾಂಗ್ಲಾದೇಶದಿಂದಲೂ ಭಾರತಕ್ಕೆ ಕರೆತಂದು ವೇಶ್ಯಾವಾಟಿಕೆಗೆ ದೂಡಲ್ಪಟ್ಟ ಹೆಣ್ಣುಮಕ್ಕಳ ಸಂಖ್ಯೆ ಸುಮಾರು 1.5 ಲಕ್ಷ. ಸಣ್ಣ ವಯಸ್ಸಿಗೆ ವೇಶ್ಯಾವೃತ್ತಿಗೆ ಇಳಿಯುವುದರಿಂದ ಮಕ್ಕಳು ಅನೇಕ ಗುಪ್ತ ಖಾಯಿಲೆಗಳು, ಬೇಡದ ಗರ್ಭಧಾರಣೆ ಸೇರಿದಂತೆ ನಾನಾ ಸಮಸ್ಯೆಗಳಿಗೆ ಒಳಗಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎನ್ನುತ್ತಿದೆ ಸರಕಾರಿ ಸಮೀಕ್ಷೆ.

ಬಾಲ ಕಾರ್ಮಿಕರು (ಸಾಂದರ್ಭಿಕ ಚಿತ್ರ)
ಬಾಲ ಕಾರ್ಮಿಕರು (ಸಾಂದರ್ಭಿಕ ಚಿತ್ರ)

ಅಂಗಾಂಗ ಕಳ್ಳತನ ಜಾಲ:

ಇಂದು ವಿಶ್ವದಾದ್ಯಂತ ಮಾನವ ಅಂಗಾಗ ಕಳ್ಳತನದ ಜಾಲವೂ ದೊಡ್ಡದಾಗಿದೆ. ಮಾನವನ ದೇಹದ ಪ್ರತಿಯೊಂದು ಭಾಗಕ್ಕೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದೊಡ್ಡ ಬೆಲೆ ಇದೆ. ಭಾರತದಲ್ಲಿ ಮಾನವ ಕಳ್ಳ ಸಾಗಾಣೆಗೆ ಒಳಗಾಗುವ ಮಕ್ಕಳನ್ನು ಈ ಕಾರಣಕ್ಕೂ ಬಳಸಲಾಗುತ್ತಿದೆ ಎನ್ನುತ್ತಿವೆ ಸಮೀಕ್ಷೆಗಳು.

ನಿರ್ಗತಿಕರು, ಬಡವರ ಮಕ್ಕಳನ್ನೇ ಟಾರ್ಗೆಟ್ ಮಾಡಿ ಅಪಹರಿಸುವ ಜಾಲಗಳು ಅಂತಹ ಮಕ್ಕಳ ಅಂಗಾಂಗ ಕದ್ದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿವೆ. 2005ರಲ್ಲಿ ಕೆಲವು ಎನ್‌ಜಿಓಗಳ ಜೊತೆಗೂಡಿ ಸಮೀಕ್ಷೆ ನಡೆಸಿದ ‘ಭಾರತೀಯ ಮಾನಹಕ್ಕು ಆಯೋಗ’ ಇದನ್ನು ದೃಢಪಡಿಸಿದೆ. ಆದರೆ ಅಂತಹ ಜಾಲವನ್ನುಬೇಧಿಸಿ ಮಕ್ಕಳನ್ನು ರಕ್ಷಿಸುವ, ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಕೆಲಸ ಮಾತ್ರ ಈವರೆಗೆ ನಡೆದಿಲ್ಲ ಎಂಬುದೇ ದುರಂತ.

ಮಕ್ಕಳಿಂದ ಕಾನೂನು ಬಾಹೀರ ಚಟುವಟಿಕೆ:

ಭಾರತದಲ್ಲಿ ಕಳ್ಳ ಸಾಗಾಣೆಗೆ ಒಳಗಾದ ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆ ವೃತ್ತಿಯಲ್ಲಿ ತೊಡಗಿಸಿದರೆ, ಗಂಡು ಮಕ್ಕಳನ್ನು ಭಿಕ್ಷಾಟಣೆ ಸೇರೆದಂತೆ ನಾನಾ ಕಾನೂನು ಬಾಹಿರ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಯುನಿಸೆಫ್ ನೀಡುವ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಸುಮಾರು 3 ಮಿಲಿಯನ್ ಮಕ್ಕಳನ್ನು ಭಿಕ್ಷಾಟಣೆಗೆ ಇಳಿಸಲಾಗಿದೆ. ಇದರ ಹಿಂದೆಯೂ ದೊಡ್ಡ ಜಾಲವೇ ಕೆಲಸ ಮಾಡುತ್ತಿದೆ. ಇದಲ್ಲದೆ ಮಕ್ಕಳನ್ನು ಕಳ್ಳತನ, ಚೈಲ್ಡ್‌ ಪೋರ್ನೋಗ್ರಫಿಗೂ ಬಳಸಿಕೊಳ್ಳಲಾಗುತ್ತಿದೆ.

 ಕಾಯ್ದೆಯಾಗದ ‘ಮಕ್ಕಳ ಹಕ್ಕುಗಳ ಮಸೂದೆ’; ಇನ್ನೂ ಜೀವಂತವಾಗಿದೆ ಮಕ್ಕಳ ಕಳ್ಳಸಾಗಣೆ ದಂದೆ

ಭಾರತದ ಅಂಕಿಅಂಶ ಹೀಗಿದೆ:

* ಶಾಲೆಗೆ ಹೋಗಬೇಕಾದ ವಯಸ್ಸಿನಲ್ಲಿ ಭಾರತದಲ್ಲಿ 4ರಲ್ಲಿ 1 ಮಗು ಶಾಲೆಯಿಂದ ಹೊರಗುಳಿಯುತ್ತಿದೆ. 2011 ಜನಗಣತಿ ಪ್ರಕಾರ ದೇಶದಲ್ಲಿ ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಸಂಖ್ಯೆ 66 ಮಿಲಿಯನ್.

* ಭಾರತದಲ್ಲಿ 5 ರಿಂದ 14 ವರ್ಷದೊಳಗಿನ ಶೇಕಡ 10.13ರಷ್ಟು ಮಕ್ಕಳು ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ.

* 2016ರ ಎನ್‌ಸಿಆರ್‌ಬಿ ವರದಿ ಪ್ರಕಾರ ದೇಶದಲ್ಲಿ ನಿತ್ಯ 150 ಮಕ್ಕಳು ಅಪಹರಣಕ್ಕೆ ಒಳಗಾಗುತ್ತಾರೆ . ಪ್ರಸ್ತುತ ದೇಶದ ಅತ್ಯಂತ ದೊಡ್ಡ ಅಪರಾಧ ಇದಾಗಿದೆ.

* ಕಳೆದ 10 ವರ್ಷದಲ್ಲಿ ಮಕ್ಕಳ ಮೇಲಿನ ಅಪರಾಧ ಪ್ರಕರಣಗಳ ಸಂಖ್ಯೆ 5 ಪಟ್ಟು ಹೆಚ್ಚಾಗಿವೆ. (ರಾಷ್ಟ್ರೀಯ ಅಪರಾಧ ದಾಖಲೆ ಇಲಾಖೆಯ ಮಾಹಿತಿ)

* ಭಾರತದಲ್ಲಿ 16.8 ಮಿಲಿಯನ್ ಮಕ್ಕಳು ಅಪೌಷ್ಠಿಕತೆಯಿಂದ ನರಳುತ್ತಿವೆ.

* ಶೇ.36 ರಷ್ಟು 5 ವರ್ಷದೊಳಗಿನ ಮಕ್ಕಳ ಬೆಳವಣಿಗೆ ಕುಂಠಿತವಾಗಿದೆ.

* ದೇಶದಲ್ಲಿ ಶೇ.50 ರಷ್ಟು ಗರ್ಭಿಣಿ ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ.

* ಭಾರತದಲ್ಲಿ 3 ರಲ್ಲಿ 1 ಮಗುವಿಗೆ ಬಾಲ್ಯ ವಿವಾಹ ಮಾಡಲಾಗುತ್ತಿದೆ.

* ಭಾರತದಲ್ಲಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲೇ ತಾಯಿಯಾಗಿರುವ ಮಕ್ಕಳ ಸಂಖ್ಯೆ 45 ಲಕ್ಷ.

ಭಾರತದಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಕಾಯ್ದೆ:

ಭಾರತ ಸರಕಾರವು ಮಕ್ಕಳ ಕಳ್ಳ ಸಾಗಾಣೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ 1956ರಲ್ಲಿ ‘ಮಹಿಳಾ ಮತ್ತು ಮಕ್ಕಳ ಕಳ್ಳ ಸಾಗಾಣೆ ಕಾಯ್ದೆ-1956’ನ್ನು ಜಾರಿಗೆ ತಂದಿದೆ. ಈ ಕಾಯ್ದೆಯ ಪ್ರಕಾರ ಮಕ್ಕಳ ಕಳ್ಳ ಸಾಗಾಣೆ ಮಾಡುವುದು ಹಾಗೂ 18 ವರ್ಷಕ್ಕಿಂತ ಕೆಳಗಿನ ಮಕ್ಕಳನ್ನು ದುಡಿಸಿಕೊಳ್ಳುವುದನ್ನು ಕಾನೂನು ಬಾಹಿರ ಎಂದು ಘೋಷಿಸಲಾಗಿದೆ. ಮಕ್ಕಳ ಕಳ್ಳ ಸಾಗಾಣಿಕೆಯಲ್ಲಿ ತೊಡಗುವ ವ್ಯಕ್ತಿಗಳಿಗೆ ಕನಿಷ್ಠ 7 ವರ್ಷ ಸಜೆ ನೀಡುವ ಅವಕಾಶವನ್ನು ಈ ಕಾನೂನಿನಲ್ಲಿ ಕಲ್ಪಿಸಲಾಗಿದೆ.

ಆದರೂ, ಈ ಕಾನೂನನ್ನು ಸಮರ್ಪಕವಾಗಿ ಜಾರಿಗೆ ತರದ ಪರಿಣಾಮ ನಮ್ಮ ದೇಶದಲ್ಲಿ ಮಕ್ಕಳ ಕಳ್ಳ ಸಾಗಾಣಿಕೆ ಎಂಬುದು ತಡೆಯಿಲ್ಲದೆ ನಡೆಯುತ್ತಲೇ ಇದೆ. 2015 ರಲ್ಲಿ ಭಾರತದಲ್ಲಿ 4,203 ಮಾನವ ಕಳ್ಳ ಸಾಗಣೆ ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣದ ಕುರಿತು ಎಲ್ಲೆಡೆ ತನಿಖೆಯೂ ಆರಂಭವಾಗಿತ್ತು. ಆದರೆ ಈ ಪ್ರಕರಣಗಳಲ್ಲಿ ಶಿಕ್ಷೆಯಾದದ್ದು ಕೇವಲ ಶೇ12ರಷ್ಟು ಜನರಿಗೆ ಮಾತ್ರ. ಉಳಿದವರೆಲ್ಲ ಈಗಲೂ ಇದೇ ದಂಧೆಯಲ್ಲಿ ತೊಡಗಿದ್ದಾರೆ ಎನ್ನುತ್ತದೆ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ದುಡಿಯುತ್ತಿರುವ ಸರ್ಕಾರೇತರ ಸ್ವಯಂ ಸಂಸ್ಥೆಯೊಂದು.

ಕಾನೂನುಗಳನ್ನು ಕಠಿಣಗೊಳಿಸದೆ ಯಾವುದೇ ಅಪರಾಧಗಳನ್ನು ನಿಯಂತ್ರಣಕ್ಕೆ ತರುವುದು ಸಾಧ್ಯವಿಲ್ಲ. ಇದೇ ಕಾರಣಕ್ಕೆ ‘ಮಕ್ಕಳ ಕಳ್ಳ ಸಾಗಾಣೆ ತಡೆ ಕಾಯ್ದೆ’ಯನ್ನು ಕೇಂದ್ರ ಸರಕಾರ ಜಾರಿಗೆ ತರಲು ಹೊರಟಿತ್ತು. ಆದರೆ, 2018ರಲ್ಲಿ ಮಂಡನೆಯಾದ ಮಸೂದೆಯನ್ನು ರಾಜ್ಯಸಭೆ ಒಂದು ವರ್ಷವಾದರೂ ಚರ್ಚೆಗೆ ತೆಗೆದುಕೊಂಡಿಲ್ಲ ಎಂಬುದೇ ದೊಡ್ಡ ದುರಂತ. ಒಟ್ಟಲ್ಲಿ ಶಾಸನ ರೂಪಿಸಬೇಕಾದವರ ಬೇಜವಾಬ್ದಾರಿಗೆ ಅರಳಬೇಕಿರುವ ಮಕ್ಕಳ ಬಾಲ್ಯ ಕಮರುತ್ತಿರುವುದು ಮಾತ್ರ ವಿಪರ್ಯಾಸ.