ಮಹಾಮೈತ್ರಿಯಿಂದ ಕಾಂಗ್ರೆಸ್‌ ಹೊರಗಿಟ್ಟ ಎಸ್‌ಪಿ-ಬಿಎಸ್‌ಪಿ; ತಲಾ 38 ಕ್ಷೇತ್ರಗಳಲ್ಲಿ ಸ್ಪರ್ಧೆ
COVER STORY

ಮಹಾಮೈತ್ರಿಯಿಂದ ಕಾಂಗ್ರೆಸ್‌ ಹೊರಗಿಟ್ಟ ಎಸ್‌ಪಿ-ಬಿಎಸ್‌ಪಿ; ತಲಾ 38 ಕ್ಷೇತ್ರಗಳಲ್ಲಿ ಸ್ಪರ್ಧೆ

ಕಾಂಗ್ರೆಸ್ ಅನ್ನು ಮೈತ್ರಿಯಿಂದ ಹೊರಗಿಡುವ ಮೂಲಕ ಮುಂದಿನ ಸರಕಾರ ರಚನೆ ಸಂದರ್ಭದಲ್ಲಿ ಪ್ರಾದೇಶಿಕ ಪಕ್ಷಗಳು ನಿರ್ಣಾಯಕವಾಗಲಿವೆ ಎಂಬ ಸಂದೇಶವನ್ನು ಎಸ್‌ಪಿ- ಬಿಎಸ್‌ಪಿ ರವಾನಿಸಿವೆ.

ಉತ್ತರ ಪ್ರದೇಶದಲ್ಲಿ ಎಸ್‌ಪಿ- ಬಿಎಸ್‌ಪಿ ಮೈತ್ರಿ ಅಧಿಕೃತ ಘೋಷಣೆಯಾಗಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಸಮಾಜವಾದಿ ಪಕ್ಷಗಳು ಒಂದಾಗಿವೆ. ಹಳೆಯ ವೈರತ್ವ ಮರೆತು ಶನಿವಾರ ಒಟ್ಟಿಗೆ ಕುಳಿತು ಮೈತ್ರಿ ಘೋಷಣೆ ಮಾಡಿರುವ ಅಖಿಲೇಶ್‌ ಯಾದವ್‌ ಮತ್ತು ಮಾಯಾವತಿ 50:50 ಅನುಪಾತದಲ್ಲಿ ಸೀಟು ಹಂಚಿಕೊಳ್ಳುವುದಾಗಿ ಹೇಳಿದ್ದಾರೆ.

80 ಲೋಕಸಭಾ ಕ್ಷೇತ್ರಗಳಿರುವ ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ- ಎಸ್‌ಪಿ ತಲಾ 38 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ. ರಾಷ್ಟ್ರೀಯ ಲೋಕ ದಳ (ಆರ್‌ಜೆಡಿ) ಮತ್ತು ನಿಶಾದ್‌ ಪಕ್ಷಕ್ಕೆ ತಲಾ ಒಂದೊಂದು ಕ್ಷೇತ್ರ ಬಿಟ್ಟುಕೊಟ್ಟಿರುವ ಎಸ್‌ಪಿ- ಬಿಎಸ್‌ಪಿ, ಕಾಂಗ್ರೆಸ್‌ ಸ್ಪರ್ಧಿಸುವ ಎರಡು ಕ್ಷೇತ್ರಗಳಲ್ಲಿ ಮೈತ್ರಿಕೂಟ ಚುನಾವಣೆಗೆ ಸ್ಪರ್ಧಿಸದಿರಲು ನಿರ್ಧರಿಸಿವೆ.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸ್ಪರ್ಧಿಸುವ ಕ್ಷೇತ್ರ ಅಮೇಠಿ ಮತ್ತು ಸೋನಿಯಾ ಗಾಂಧಿ ಸ್ಪರ್ಧಿಸುವ ರಾಯ್‌ಬರೇಲಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೆ ಕಾಂಗ್ರೆಸ್‌ ಓಟುಗಳು ಒಡೆದು ಅದು ಬಿಜೆಪಿಗೆ ಲಾಭವಾಗುವ ಸಾಧ್ಯತೆ ಇದೆ. ಹೀಗಾಗಿ ಬಿಜೆಪಿಗೆ ಅನುಕೂಲವಾಗದಿರಲು ಈ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಾಯಾವತಿ ಹೇಳಿದ್ದಾರೆ.

Also read: 2019ರವರೆಗೂ ಉರಿಯಲಿದೆಯೇ ಅಡ್ಡಗೋಡೆ ಮೇಲಿನ ಬಿಎಸ್‌ಪಿ- ಎಸ್‌ಪಿ ಬುಡ್ಡಿ ದೀಪ?

“ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಜತೆಗೆ ಮೈತ್ರಿ ಮಾಡಿಕೊಳ್ಳುವುದರಿಂದ ನಮಗೇನೂ ಲಾಭವಿಲ್ಲ. ಉತ್ತರ ಪ್ರದೇಶದ ಜನತೆ ಸಮಾಜವಾದಿ ಪಕ್ಷಗಳ ಮೇಲಿಟ್ಟಿರುವ ನಂಬಿಕೆ ದೊಡ್ಡದು. ಕಾಂಗ್ರೆಸ್‌ ಜತೆಗೆ ಮೈತ್ರಿ ಮಾಡಿಕೊಂಡರೆ ಸಮಾಜವಾದಿ ಪಕ್ಷಗಳ ಸಾಂಪ್ರದಾಯಿಕ ಮತಗಳ ಮೇಲೆ ಹೊಡೆತ ಬೀಳಲಿದೆ. ಹೀಗಾಗಿ ಉತ್ತರ ಪ್ರದೇಶದ ಮಹಾಮೈತ್ರಿಯಿಂದ ಮೈತ್ರಿಯಿಂದ ಕಾಂಗ್ರೆಸ್‌ ಅನ್ನು ಹೊರಗಿಟ್ಟಿದ್ದೇವೆ” ಎಂದಿದ್ದಾರೆ ಮಾಯಾವತಿ.

“ಸ್ವಾತಂತ್ರ್ಯಾನಂತರ ಕೇಂದ್ರದಲ್ಲಿ ಹಾಗೂ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್‌ ಅಧಿಕಾರ ಅನುಭವಿಸಿದೆ. ಈಗ ಪ್ರಾದೇಶಿಕ ಪಕ್ಷಗಳೂ ಮುನ್ನೆಲೆಗೆ ಬರಬೇಕಾದ ಅನಿವಾರ್ಯವಿದೆ. ಕಾಂಗ್ರೆಸ್‌ ಕಾಲದಲ್ಲಿ ಘೋಷಿತ ತುರ್ತು ಪರಿಸ್ಥಿತಿ ಇತ್ತು. ಬಿಜೆಪಿ ಸರಕಾರದ ಈ ಕಾಲದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಬಡವರು, ರೈತರು, ಕೂಲಿ ಕಾರ್ಮಿಕರು ನೆಮ್ಮದಿಯಿಂದ ಬದುಕಲು ಸಾಧ್ಯವಾಗದಂಥ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ” ಎಂದು ಮಾಯಾವತಿ ಹೇಳಿದ್ದಾರೆ.

ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಖ್‌ ಮಾತನಾಡಿ, “ದೇಶದಲ್ಲಿ ಧರ್ಮ ಹಾಗೂ ಜಾತಿಯ ಆಧಾರದಲ್ಲಿ ಸಮಾಜವನ್ನು ಒಡೆಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ದೇವರುಗಳನ್ನೇ ಜಾತಿಯ ಆಧಾರದಲ್ಲಿ ಬೇರೆ ಬೇರೆ ಮಾಡಲಾಗುತ್ತಿದೆ. ದೇಶದಲ್ಲಿ ಅರಾಜಕತೆ ಹೆಚ್ಚಾಗಿದೆ. ಬಿಜೆಪಿಯ ಈ ದುರಾಡಳಿತವನ್ನು ಕೊನೆಗಾಣಿಸಲು ಎಸ್‌ಪಿ- ಬಿಎಸ್‌ಪಿ ಒಂದಾಗಿವೆ. ನಮ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಕಾರ್ಯಕರ್ತರೂ ಚುನಾವಣೆಗೆ ಒಟ್ಟಾಗಿ ಕೆಲಸ ಮಾಡಬೇಕು” ಎಂದಿದ್ದಾರೆ.

Also read: ಎಸ್‌ಪಿ- ಬಿಎಸ್‌ಪಿ ಜಂಟಿ ಹೋರಾಟ; ಮಹಾಮೈತ್ರಿಯಿಂದ ಕಾಂಗ್ರೆಸ್‌ ಬಹುತೇಕ ಹೊರಗೆ

ಎಸ್‌ಪಿ- ಬಿಎಸ್‌ಪಿ ಮೈತ್ರಿಕೂಟದಿಂದ ಕಾಂಗ್ರೆಸ್‌ ಅನ್ನು ಹೊರಗಿಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ವಕ್ತಾರ ಅಭಿಷೇಕ್‌ ಮನು ಸಿಂಘ್ವಿ, “ಇದು ಅಪಾಯಕಾರಿ ತಪ್ಪು ನಿರ್ಧಾರ” ಎಂದಿದ್ದಾರೆ. “ಚುನಾವಣಾ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಒಂದು ದೊಡ್ಡ ಪಕ್ಷವಾಗಿ ಬೆಳೆದಿದೆ. ಇಂಥ ಹೊತ್ತಲ್ಲಿ ಮೈತ್ರಿಕೂಟ ಕಾಂಗ್ರೆಸ್‌ ಪಕ್ಷವನ್ನು ನಿರ್ಲಕ್ಷಿಸಿರುವುದು ಅಪಾಯಕಾರಿ ನಿರ್ಧಾರ” ಎಂದು ಹೇಳಿದ್ದಾರೆ.

ಲೋಕಸಭಾ ಚುನಾವಣೆಯ ಹಣೆಬರಹ ನಿರ್ಧಾರ ಮಾಡುವ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಅನ್ನು ಮೈತ್ರಿಯಿಂದ ಹೊರಗಿಡುವ ಮೂಲಕ ಮುಂದಿನ ಸರಕಾರ ರಚನೆ ಸಂದರ್ಭದಲ್ಲಿ ಪ್ರಾದೇಶಿಕ ಪಕ್ಷಗಳು ನಿರ್ಣಾಯಕವಾಗಲಿವೆ ಎಂಬ ಸಂದೇಶವನ್ನು ಎಸ್‌ಪಿ- ಬಿಎಸ್‌ಪಿ ರವಾನಿಸಿವೆ. ಉತ್ತರ ಪ್ರದೇಶದಲ್ಲಿ ಈಗ ಕಾಂಗ್ರೆಸ್‌ ಸ್ವಂತ ಬಲದ ಮೇಲೆ ಚುನಾವಣೆ ಎದುರಿಸುವುದು ಈಗ ಅನಿವಾರ್ಯವಾಗಿದೆ.